ಬೆಕ್ಕನ್ನು ನೆನೆಯುತ್ತಾ ಸುಮ್ಮನೆ ಮಾತಿಲ್ಲದೆ ಕುಳಿತರು…

HSV9ನಮ್ಮ ಪ್ರೀತಿಯ ಕವಿ ಎಚ್ ಎಸ್ ವೆಂಕಟೇಶ ಮೂರ್ತಿ ಅವರು ಬ್ಲಾಗ್ ಲೋಕಕ್ಕೆ ಕಾಲಿಟ್ಟಿದ್ದಾರೆ. ಸುಶ್ರುತ ದೊಡ್ಡೇರಿ ಹಾಗೂ ಶ್ರೀನಿಧಿ ಡಿ ಎಸ್ ಪ್ರಭಾವ ಇದು.

ಎಷ್ಟೋ ಬರಹಗಾರರು ಕಾಲದ ಮಹಿಮೆಗೆ ಹೆದರಿ ಅಥವಾ ಮಣಿಯದೆ ದೂರವೇ ನಿಂತಿರುವಾಗ ಎಚ್ ಎಸ್ ವಿ ಹುಡುಗರಂತೆ ಲಗುಬಗೆಯಿಂದ ಎಲ್ಲಾ ಹೊಸತಿಗೂ ಒಡ್ಡಿಕೊಳ್ಳುತ್ತಾರೆ. ಮನಸ್ಸನ್ನು ಸದಾ ಯಂಗ್ ಆಗಿ ಇಟ್ಟುಕೊಂಡಿರುವ ಎಚ್ ಎಸ್ ವಿ ಬ್ಲಾಗ್ ಲೋಕಕ್ಕೂ ನಡೆದು ಬಂದದ್ದು ಆಶ್ಚರ್ಯವೇನಲ್ಲ.

ಕಾಮರೂಪಿ ಅಂತಹ ಬರಹಗಾರರಿಂದ ಸಮೃದ್ಧವಾಗಿರುವ ಬ್ಲಾಗ್ ಲೋಕ ಎಚ್ ಎಸ್ ವಿ ಅವರಿಂದ ಇನ್ನಷ್ಟು ಉತ್ಸಾಹ ಪಡೆದಿದೆ. ‘ಪರಸ್ಪರ’ಕ್ಕೆ ಭೇಟಿ ಕೊಡಿ.


ಅಡಿಗರ ನೆನಪು..

-ಎಚ್ ಎಸ್ ವೆಂಕಟೇಶ ಮೂರ್ತಿ

ಅಡಿಗರು ಜಯನಗರದಲ್ಲಿ ಒಂದು ಬಾಡಿಗೆ ಮನೆಯಲ್ಲಿ ಇದ್ದರು. ನಾನು ಆಗಾಗ ಅವರನ್ನು ಕಾಣಲು ಆ ಮನೆಗೆ ಹೋಗುತ್ತಿದ್ದೆ. ಆಗ ಅವರ ಮನೆಯಲ್ಲಿ ತುಂಬ ಬೆಕ್ಕುಗಳು ಇದ್ದವು. ಅಡಿಗರು ಅವಕ್ಕೆಲ್ಲಾ ನಾಮಕರಣ ಮಾಡಿದ್ದರು. ನಾನು ಅವರೊಂದಿಗೆ ಮಾತಾಡಲು ಕುಳಿತಾಗ ಅವರಿಗೆ ಪ್ರಿಯವಾದ ಬೆಕ್ಕೊಂದು ಕೋಣೆಗೆ ನುಸುಳಿ, ಮಿಯಾವ್ ಮಿಯಾವ್ ಎಂದು ಸ್ವಲ್ಪ ಕಾಲ, ಕಾಲ ಬಳಿ ಸುತ್ತಾಡಿ ಆಮೇಲೆ ಚಂಗನೆ ಹಾರಿ ಅವರ ತೊಡೆಯ ಮೇಲೆ ಕುಳಿತುಕೊಳ್ಳುತ್ತಿತ್ತು. ಅಡಿಗರು ಬೆಕ್ಕನ್ನು ಮುದ್ದು ಮಾಡುತ್ತ ಅದರ ಸಾಹಸಗಳನ್ನು ಜಾಣ್ಮೆಯನ್ನು ಎಷ್ಟೋ ಹೊತ್ತು ವಿವರಿಸುತ್ತಾ, ಆ ಮಾತಿನಲ್ಲೇ ತನ್ಮಯರಾಗುತ್ತಿದ್ದರು. ರಾತ್ರಿ ಒಂದು ಕಿಟಕಿಯ ಬಾಗಿಲು ಈ ಬೆಕ್ಕಿಗಾಗಿ ತೆರೆದಿಡುತ್ತೇವೆ. ಇವನು ರಾತ್ರಿ ಅಲೆದಾಡಿಕೊಂಡು ಯಾವ ಮಾಯದಲ್ಲೋ ಮತ್ತೆ ಮನೆಯೊಳಗೆ ಬಂದು ಮಲಗಿರುತ್ತಾನೆ. ಮನೆಯೊಳಗೆ ಕೊಳೆ ಮಾಡುವುದಿಲ್ಲ. ಬಹಳ ನೀಟಾದ ಶೋಕೀವಾಲ…ಇತ್ಯಾದಿ ಹೇಳುತ್ತಾ ಇದ್ದರು. ಅವರ ಮಾತಿನಲ್ಲಿ ಬೆಕ್ಕು ಬೆಕ್ಕಾಗಿರಲಿಲ್ಲ. ಮನೆಯ ಒಬ್ಬ ಸದಸ್ಯನಾಗಿತ್ತು. ಹಾಗೇ ಅಡಿಗರಿಗೆ ಅವರ ನಾಯಿಯ ಬಗ್ಗೆಯೂ ಅಪಾರ ಪ್ರೇಮ. ಪುಟ್ಟ ಎಂದು ಆ ನಾಯಿಯ ಹೆಸರು. ಅವನ ಚೇಷ್ಟೆಯನ್ನು ಖುಷಿಯಾಗಿ ವಿವರಿಸುತ್ತಿದ್ದರು. ಅವನಿಗೆ ಚಿಂದಿ ಉಟ್ಟ ಯಾರಾದರು ಕಂಡರೆ ಆಗುವುದಿಲ್ಲ. ಅವರು ರಸ್ತೆ ದಾಟುವವರೆಗೂ ಬಗುಳುತ್ತಾ ಇರುತ್ತಾನೆ. ನೀಟಾಗಿ ಉಡುಪು ಹಾಕಿಕೊಂಡವರು ಬಂದರೆ ಬಾಲ ಕುಣಿಸುತ್ತಾ ಹರ್ಷ ವ್ಯಕ್ತಪಡಿಸುತ್ತಾನೆ-ಹೀಗೆಲ್ಲಾ ತಮ್ಮ ಪ್ರೀತಿಯ ನಾಯಿಯ ಬಗ್ಗೆ ವಿವರ ಕೊಡುತ್ತಾ ಎಷ್ಟೋ ಹೊತ್ತು ಮಾತಾಡುತ್ತಿದ್ದರು.

******

Prathima loka

ಅಡಿಗರು ಜಯನಗರದ ಮನೆಯಿಂದ ಬನಶಂಕರಿಗೆ ತಮ್ಮ ಸ್ವಂತ ಮನೆಗೆ ಬಂದಮೇಲೆ ಒಮ್ಮೆ ಅವರ ಮನೆಗೆ ಹೋಗಿದ್ದಾಗ ಬಹಳ ಹೊತ್ತು ಅವರೊಂದಿಗೆ ಮಾತಾಡುತ್ತಾ ಕುಳಿತಿದ್ದರೂ ಅವರ ಪ್ರೀತಿಯ ಬೆಕ್ಕು ಕಾಣಿಸಲೇ ಇಲ್ಲ. ಸಾರ್…ನಿಮ್ಮ ಬೆಕ್ಕು ಕಾಣ್ತಾ ಇಲ್ಲವಲ್ಲಾ..? ಎಂದೆ. ಅಡಿಗರ ಮುಖ ಸ್ವಲ್ಪ ಸಪ್ಪಗಾಯಿತು. ಆ ಮನೆಯಿಂದ ಬರುವಾಗ ಅವನು ಎಲ್ಲೋ ಹೊರಗೆ ಹೋಗಿದ್ದ. ಎಷ್ಟು ಕಾದರೂ ಬರಲಿಲ್ಲ. ಇಲ್ಲಿಗೆ ಬಂದ ಮೇಲೆ ಅವನನ್ನು ಹುಡುಕಿಕೊಂಡು ಎಷ್ಟೋ ಬಾರಿ ಆ ಮನೆಯ ಹತ್ತಿರ ಹೋಗಿದ್ದೇವೆ. ಕೆಲವೊಮ್ಮೆ ಕಾಣುತ್ತಾನೆ. ಆದರೆ ಆ ಮನೆಯನ್ನು ಬಿಟ್ಟು ಬರಲು ಅವನಿಗೆ ಇಷ್ಟವಿಲ್ಲ. ಬೆಕ್ಕುಗಳಿಗೆ ಸಾಕಿದ ವ್ಯಕ್ತಿಗಳಿಗಿಂತ , ತಾನು ಬೆಳೆದ ಸ್ಥಳ ಮುಖ್ಯ ಎನ್ನುತ್ತಾರೆ. ನಮ್ಮನ್ನು ಬಿಟ್ಟಿರಲು ಅವನಿಗೂ ತುಂಬ ದುಃಖವಾಗಿರಬೇಕು. ಆದರೆ ಆ ಮನೆಯನ್ನು ಬಿಟ್ಟು ಬರುವುದು ಇನ್ನೂ ಹೆಚ್ಚುದುಃಖಕರ ಅನ್ನಿಸಿರಬೇಕು ಅವನಿಗೆ…!ಎಂದು ಸ್ವಲ್ಪ ಕಾಲ ಆ ಬೆಕ್ಕನ್ನು ನೆನೆಯುತ್ತಾ ಸುಮ್ಮನೆ ಮಾತಿಲ್ಲದೆ ಕುಳಿತರು.

*****

ಅಡಿಗರ ಪ್ರೀತಿಪಾತ್ರ ನಾಯಿಯೇನೋ ಅವರನ್ನು ಹೊಸಮನೆಗೆ ಹಿಂಬಾಲಿಸಿತ್ತು. ನಾನು ಯಾವಾಗ ಹೋದರೂ ಅದರ ಬಗುಳು, ಮತ್ತು ಸಂತೋಷಾಧಿಕ್ಯದಿಂದಲೋ, ಬೇಸರದಿಂದಲೋ ಗಿರಿಗಿಟ್ಟಲೆಸುತ್ತುವ ಸ್ವಾಗತ ನನಗೆ ದೊರಕುತ್ತಾ ಇತ್ತು. ಮನೆಯನ್ನು ಪ್ರವೇಶಿಸಿದ ಕೂಡಲೇ ಒಂದು ವರಾಂಡ. ಅದಕ್ಕೆ ಹೊಂದಿಕೊಂಡಂತೆ ಅಡಿಗರ ಬರೆಯುವ ಕೋಣೆ ಇತ್ತು. ಅವರ ಟೇಬಲ್ಲಿನ ಮೇಲೆ ಕಿಟ್ಟೆಲ್ಲಿಂದ ಹಿಡಿದು ಎಲ್ಲ ಡಿಕ್ಷ್ಣರಿಗಳೂ ಇರುತ್ತಿದ್ದವು. ಮಾತಾಡುವಾಗ ಯಾವುದೇ ಶಬ್ದದ ಬಗ್ಗೆ ಅನುಮಾನ ಉಂಟಾದರೂ ತಕ್ಷಣ ಡಿಕ್ಷ್ಣರಿ ತೆರೆದು ಆ ಪದವನ್ನು ಹುಡುಕಿ ಅನುಮಾನ ಬಗೆಹರಿಸಿಕೊಳ್ಳುವವರೆಗೂ ಅವರಿಗೆ ಸಮಾಧಾನವಾಗುತ್ತಿರಲಿಲ್ಲ. ಆಗ ದೂರದರ್ಶನದಲ್ಲಿ ಇದೀಗ ದೆಹಲಿಗೆ ಎಂಬ ಪ್ರಕಟಣೆ ಪದೇ ಪದೇ ಬರುತ್ತಾ ಇತ್ತು. ಅಡಿಗರು ಆ ಪ್ರಕಟಣೆ ಬಂದಾಗ -ಇದೇನಯ್ಯಾ…? ಇದೀಗ ದೆಹಲಿಗೆ…! ಇದೀಗ ಎನ್ನುವುದು ತಪ್ಪು ಪ್ರಯೋಗ..ಈ ಬಗ್ಗೆ ದೂರದರ್ಶನದವರಿಗೆ ಬರೆದೆ ಕೂಡಾ. ಅವರೇನೂ ತಿದ್ದಿಕೊಳ್ಳಲಿಲ್ಲ…ಎಂದು ಬೇಸರ ವ್ಯಕ್ತಪಡಿಸಿದರು.

*******

ಹೆಚ್ಚುಕಮ್ಮಿ ಅದೇ ದಿನಗಳಲ್ಲಿ ನನ್ನ ಸಿಂದಬಾದನ ಆತ್ಮಕಥೆ ಎನ್ನುವ ಕವನಸಂಗ್ರಹ ಪ್ರಕಟವಾಯಿತು. ಆ ಪುಸ್ತಕವನ್ನು ಪ್ರಕಟಿಸಿದ ನರಹಳ್ಳಿಯವರು ಅದರ ಬಿಡುಗಡೆಯ ಕಾರ್ಯಕ್ರಮವನ್ನು ಶೇಷಾದ್ರಿಪುರಮ್ ಕಾಲೇಜಿನಲ್ಲಿ ಇಟ್ಟುಕೊಂಡಿದ್ದರು. ಅಡಿಗರು ಪುಸ್ತಕವನ್ನು ಬಿಡುಗಡೆ ಮಾಡಿದರು. ಸಿಂದಬಾದನ ಆತ್ಮಕಥೆ ಎಂದಿದ್ದರೆ ಸಾಕಾಗಿತ್ತು. ಸಿಂದಾಬಾದನ ಎಂದು ದೀರ್ಘ ಎಳೆಯುವ ಅಗತ್ಯವಿರಲಿಲ್ಲ ಎಂದು ನಗುತ್ತಾ ಹೇಳಿದರು.

********

ನಾನು ಎಂ.ಎ. ಓದುತ್ತಿರುವಾಗ(೧೯೭೨-೭೩) ಕರ್ನಾಟಕಸಂಘಕ್ಕೆ ಅಧ್ಯಕ್ಷನಾಗಿದ್ದೆ. ಅಡಿಗರನ್ನು ಒಮ್ಮೆ ವಿಶೇಷ ಉಪನ್ಯಾಸಕ್ಕೆ ಕರೆದಿದ್ದೆವು. ನನಗೆ ಆಗ ಸಭೆಯಲ್ಲಿ ಮಾತಾಡುವ ಅಭ್ಯಾಸವಿರಲಿಲ್ಲ. ಗಾಭರಿಯಲ್ಲಿ ಅಡಿಗರು ಉಪನ್ಯಾಸ ಮಾಡುತ್ತಾರೆ ಎನ್ನುವ ಬದಲು ಪ್ರವಚನ ಮಾಡುತ್ತಾರೆ ಎಂದುಬಿಟ್ಟೆ! ಅಡಿಗರು ತಾವು ಮಾತಾಡುವಾಗ -ನಾನು ಉಪನ್ಯಾಸ ನೀಡಲಿಕ್ಕೆ ಬಂದಿದ್ದೇನೆ; ಪ್ರವಚನ ಕೊಡಲಿಕ್ಕಲ್ಲ…! ಎಂದರು. ಇಂಥದೇ ಇನ್ನೊಂದು ಪ್ರಸಂಗ: ನನ್ನ ವಿಮುಕ್ತಿ ಕವಿತೆಯನ್ನು ಅವರಿಗೆ ಓದಲಿಕ್ಕೆ ಕೊಟ್ಟಿದ್ದೆ. ಓದಿ ಹಿಂದಿರುಗಿಸುವಾಗ ಕಾರ್ಮುಖ ಎನ್ನುವ ಪ್ರಯೋಗ ಸರಿಯೇ ಯೋಚನೆ ಮಾಡಿ ಎಂದರು. ಆ ರಾತ್ರಿ ಮತ್ತೆ ಅಡಿಗರಿಂದ ದೂರವಾಣಿ. ಕಾರ್ಮುಖ ಇಟ್ಟುಕೊಳ್ಳಿ..ಪರವಾಗಿಲ್ಲ…ಕಾವ್ಯದಲ್ಲಿ ಬರುವ ಅವನ ವ್ಯಕ್ತಿತ್ವಕ್ಕೆ ಈ ಅಪಪ್ರಯೋಗ ಧ್ವನಿಪೂರ್ಣವಾಗಿ ಹೊಂದಿಕೊಳ್ಳುತ್ತದೆ ಎಂದರು.

**********

ಅಡಿಗರಿಗೆ ಹೊಸದಾಗಿ ಏನಾದರೂ ಬರೆದಾಗ ಓದಲಿಕ್ಕೆ ಕೊಡುತ್ತಿದ್ದೆ. ಅವರು ಓದುವಾಗ ಕಾತರದಿಂದ ಅವರು ಏನನ್ನುವರೋ ಎಂದು ಕಾಯುತ್ತಾ ಕುಳಿತುಕೊಳ್ಳುತ್ತಿದ್ದೆ. ಪದ್ಯವಾದರೆ ಒಂದು ಸಲ ಮೇಲಿಂದ ಕೆಳಗೆ ಉದ್ದಕ್ಕೂ ಕಣ್ಣಾಡಿಸಿ…ಚೆನ್ನಾಗಿದೆ-ಎನ್ನುತ್ತಿದ್ದರು. ಅವರಿಗೆ ಇಷ್ಟವಾಗದಿದ್ದರೆ-ಏನೂ ಹೇಳದೆ ಸುಮ್ಮನೆ ತಲೆಕೊಡವುತ್ತಿದ್ದರು. ನನಗೆ ಪದ್ಯ ಅವರಿಗೆ ಹಿಡಿಸಲಿಲ್ಲ ಎಂಬುದು ಖಾತ್ರಿಯಾಗುತ್ತಿತ್ತು. ಅಡಿಗರೂ ತಾವು ಬರೆದದ್ದನ್ನು ಕಿರಿಯರಿಗೆ ತೋರಿಸಲಿಕ್ಕೆ ಸಂಕೋಚಪಡುತ್ತಿತಲಿಲ್ಲ. ಅವರ ಅನೇಕ ಪದ್ಯಗಳನ್ನು ಹಸ್ತಪ್ರತಿಯಲ್ಲೇ ಓದಿದ್ದೇನೆ. ನಮಗೆ ಅನ್ನಿಸಿದ್ದು ಏನೋ ಹೇಳಿದರೆ ತಾಳ್ಮೆಯಿಂದ ಕೇಳಿಸಿಕೊಳ್ಳುತ್ತಿದ್ದರು.

***********

ಆಗ ಅಡಿಗರು ಏನು ಬರೆದರೂ ರೋಮಾಂಚಿತರಾಗುವ ಓದುಗವರ್ಗವಿತ್ತು. ಒಮ್ಮೆ ನನ್ನ ಗೆಳೆಯರೊಬ್ಬರು ಬಂದು ಅಡಿಗರು ಹೊಸ ಪದ್ಯ ಬರೆದಿದ್ದಾರೆ. ಅದರಲ್ಲಿ ಗಂಗಾನದಿಯನ್ನು ಗಂಗಜ್ಜಿ ಎಂದು ಕರೆದಿದ್ದಾರೆ! ಎಂಥ ಅದ್ಭುತ ಪ್ರಯೋಗ ಅಲ್ವಾ?-ಎಂದು ಕಣ್ಣು ಬಾಯಿ ಅರಳಿಸಿದರು. ಅಡಿಗರ ಕೆಲವು ಪ್ರತಿಮೆಗಳು ನನ್ನನ್ನು ಸಹಜವಾಗಿಯೇ ಬೆರಗುಪಡಿಸುತ್ತಿದ್ದವು. ಒಮ್ಮೆ ಮುಗ್ಧವಾಗಿ ಇಂಥಾ ಪ್ರತಿಮೆಗಳು ನಿಮಗೆ ಹೇಗೆ ಹೊಳೆಯುತ್ತವೆ? ಎಂದು ಕೇಳಿದೆ. ಅವು ಧೊಪ್ಪನೆ ಆಕಾಶದಿಂದ ನನ್ನ ಮುಂದೆ ಬಂದು ಬೀಳುತ್ತವೆ! ಎಂದು ನಗುತ್ತಾ ಹೇಳಿದ್ದರು. ನನ್ನ ಸೌಗಂಧಿಕಾ ಕವಿತೆಯನ್ನು ಅಡಿಗರಿಂದ ಓದಿಸಿ ಅಭಿಪ್ರಾಯ ತಿಳಿಯಬೇಕು ಎಂದು ತುಸು ಅಧೈರ್ಯದಿಂದಲೇ ಅವರ ಮನೆಗೆ ಹೋಗಿದ್ದೆ. ಅಧೈರ್ಯ ಯಾಕೆ ಎಂದರೆ ಸೌಗಂಧಿಕಾ ಪದ್ಯವನ್ನು ನಾನು ಭಾಮಿನಿ ಷಟ್ಪದಿಯಲ್ಲಿ ಬರೆದಿದ್ದೆ. ಆ ಸಮಯದಲ್ಲಿ(೧೯೭೭) ಫ್ರೀವರ್ಸ್ ತುಂಬಾ ಚಲಾವಣೆಯಲ್ಲಿತ್ತು. ಅಡಿಗರು ಫ್ರೀವರ್ಸ್, ಮತ್ತು ಸಾಲಿನ ಕೊನೆಯಲ್ಲಿ ಮುಕ್ತಾಯವಾಗದೆ ಮುಂದಿನ ಸಾಲಿಗೆ ಪ್ರವಹಿಸುವ ರೀತಿಯ ಲಯಬದ್ಧ ಲಲಿತರಗಳೆಯ ಓಟದ ಚೌಪದಿಗಳನ್ನು ಬರೆಯುತ್ತಿದ್ದರು. ಷಟ್ಪದಿಯಲ್ಲಿ ಪದ್ಯ ಬರೆದಿದ್ದು ಹಿನ್ನೆಡೆಯಾಯಿತೇನೋ ಎನ್ನುವ ಆತಂಕ ನನಗಿತ್ತು. ಆದರೆ ಅಡಿಗರು ಪದ್ಯ ಓದಿ , ಗಂಭೀರವಾಗಿ ತಲೆದೂಗಿ -ಕೊಡಿ..ಇದನ್ನು ಸಾಕ್ಷಿಯಲ್ಲಿ ಹಾಕೋಣ ಎಂದರು. ಇದು ಸಸ್ಪೆನ್ಸಾಗಿ ಇರಲಿ ಸಾರ್…ನಾನು ಸಾಕ್ಷಿಗೆ ನೀವು ಓದಿ ಒಪ್ಪಿರುವ, ಸಿಂದಾಬಾದನ ಆತ್ಮಕಥೆ ಕೊಡುತ್ತೇನೆ -ಎಂದೆ.

********

ಕಡೆ ಕಡೆಯ ದಿನಗಳಲ್ಲಿ ಅಡಿಗರು ನನ್ನನ್ನು ತುಂಬಾ ಹಚ್ಚಿಕೊಂಡಿದ್ದರು. ಒಮ್ಮೆ ಅವರ ಮನೆಗೆ ಹೋಗಿದ್ದಾಗ ತಮ್ಮ ಕಥಾಸಂಗ್ರಹಕ್ಕೆ ಮುನ್ನುಡಿ ಬರೆಯಲು ಕೇಳಿದರು. ನಿಮಗೆ ಏನು ಅನ್ನಿಸುತ್ತೋ ಅದನ್ನು ಬರೆಯಿರಿ. ಸಂಕೋಚ ಬೇಡ..ಎಂದರು. ಅಡಿಗರು ನನಗೆ ಮುನ್ನುಡಿ ಬರೆಯಲು ಹೇಳಿದ್ದು ನನ್ನ ಮೇಲೆ ಅವರಿಗಿದ್ದ ಪ್ರೀತಿಯನ್ನು ತೋರಿಸುವುದಕ್ಕೆ ಅವರು ಕಂಡುಕೊಂಡ ದಾರಿ ಎಂಬುದು ನನ್ನ ತಿಳುವಳಿಕೆ. ಇಂಥಾ ಪ್ರೀತಿಯನ್ನು ಅನೇಕ ಸಾಹಿತ್ಯದಿಗ್ಗಜಗಳಿಂದ ನಾನು ಪಡೆದಿದ್ದೇನೆ. ಇದು ನನ್ನ ಭಾಗ್ಯ ಎನ್ನುವುದು ನನ್ನ ಭಾವನೆ.

*********

ಅಡಿಗರ ಆರೋಗ್ಯ ದಿನೇ ದಿನೇ ಹಸಗೆಡುತ್ತಿತ್ತು. ಅವರನ್ನು ಆ ಸ್ಥಿತಿಯಲ್ಲಿ ನೋಡುವಾಗ ಸಂಕಟವಾಗುತ್ತಿತ್ತು. ಯಾರಾದರೂ ಆಪ್ತರು ಹೋದಾಗ ಅವರ ಕಣ್ಣಿಂದ ನೀರು ಬರುತ್ತಿತ್ತು. ಅವರಿಗೆ ಸಮಾಧಾನ ಹೇಳುವಷ್ಟು ನಾವು ದೊಡ್ಡವರಾಗಿರಲಿಲ್ಲ. ದೂರವಾಣಿ ಮೂಲಕ ಕರೆ ಮಾಡಿ-ಬಂದು ಹೋಗಯ್ಯ ಎನ್ನುತ್ತಿದ್ದರು. ಒಮ್ಮೆ ಹೋದಾಗ ಉಪನಿಷತ್ತಿನ ಬಗ್ಗೆ ಇರುವ ಒಂದು ಪುಸ್ತಕವನ್ನು ಸಹಿಮಾಡಿ ನನಗೆ ಆಶೀರ್ವಾದ ರೂಪವಾಗಿ ಕೊಟ್ಟು, ಇದನ್ನ ಗಂಭೀರವಾಗಿ ಅಭ್ಯಾಸ ಮಾಡು ಎಂದರು. ಅಡಿಗರ ಆಶಿರ್ವಾದದ ಕುರುಹಾಗಿ ಆ ಪುಸ್ತಕವನ್ನು ಈಗಲೂ ಜತನವಾಗಿ ಇಟ್ಟುಕೊಂಡಿದ್ದೇನೆ.

‍ಲೇಖಕರು avadhi

September 6, 2009

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

4 ಪ್ರತಿಕ್ರಿಯೆಗಳು

  1. suptadeepti

    ಹೊಸತನಕ್ಕೆ ತೆರೆದುಕೊಂಡ ಬಹಳ ಸಜ್ಜನ ಕವಿ ಎಚ್ಚೆಸ್ವಿಯವರು. ಅವರ ಬ್ಲಾಗ್ ಬರಹಗಳು ನನ್ನ ಮನದಂಗಳವನ್ನು ಬೆಳಗಿಸುವುದಕ್ಕೆ ಅನುವಾದ ಅವಧಿಗೆ ವಂದನೆಗಳು.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: