ಬುದ್ಧ, ಅಂಬೇಡ್ಕರ್ ಮತ್ತು ಅಶೋಕ್…!

ಶಂಕರ ಎನ್ ಸೊಂಡೂರ

ಹಿರಿಯ ಮಿತ್ರ ಅಶೋಕ್- ಕನ್ನಡ ಚಿತ್ರರಂಗದಲ್ಲಿ ದೊಡ್ಡ ಹೆಸರು. ಸುದೀರ್ಘ ಕಾಲ ಹೆಸರಾಂತ ನಟರಾಗಿ, ಹೆಚ್ಚು ಕಮ್ಮಿ ಅಷ್ಟೇ ದೀರ್ಘ ಕಾಲ ಚಲನಚಿತ್ರ ಕಾರ್ಮಿಕರ ಒಕ್ಕೂಟದ ಅಧ್ಯಕ್ಷರಾಗಿ ಅವರು ಕನ್ನಡಿಗರಿಗೆ ಸುಪರಿಚಿತರು. ಅವರೀಗ ಬರಹಗಾರರಾಗಿಯೂ ಓದುಗರ ಮುಂದೆ ಬರುತ್ತಿರುವುದು ನನಗಂತೂ ಅಚ್ಚರಿ ಮತ್ತು ಸಂತಸದ ಸಂಗತಿ! ಮೊದಲು ಅವರು ತಮ್ಮ ಕೃತಿಯನ್ನು ಕೈಗಿತ್ತಾಗ, ಇದೊಂದು ಕಾದಂಬರಿಯೋ ನಾಟಕವೋ ಇರಬೇಕೆಂದು ತೆರೆದು ನೋಡಿದರೆ ಎರಡೂ ಅಲ್ಲ, ಇದು ಚಿತ್ರಕಥೆ; ಅದರಲ್ಲೂ ಹಲವಾರು ಕಂತುಗಳಲ್ಲಿ ಸಾಗುವ ಧಾರಾವಾಹಿಯ ಚಿತ್ರಕಥೆ!

ಈ ಚಿತ್ರಕತೆಯ ತಿರುಳು ಕೂಡ ಮಹಾತ್ವಾಕಾಂಕ್ಷೆಯದು. ಇವರ ನಿರೂಪಣೆಯಲ್ಲಿ ಮೂರು ಕಥನಧಾರೆಗಳಿವೆ. ಸ್ವತಃ ಡಾ. ಬಿ.ಆರ್. ಅಂಬೇಡ್ಕರ್ ಇಲ್ಲಿ ಒಬ್ಬ ಪಾತ್ರಧಾರಿ. ಅಂಬೇಡ್ಕರ್ ತಮ್ಮ ಮಹತ್ವಾಕಾಂಕ್ಷೆಯ ‘ಬುದ್ಧ ಅಂಡ್ ಹಿಸ್ ಧಮ್ಮ’ ಕೃತಿ ರಚನೆಯಲ್ಲಿ ತೊಡಗಿರುವ ಸನ್ನಿವೇಶಗಳಿವೆ. ಇದು ಮೊದಲನೆಯ ಧಾರೆ. ಇನ್ನು ಅಂಬೇಡ್ಕರ್ ಬರೆದ ಚಿತ್ರಣ ಆಧರಿಸಿ ಬುದ್ಧನ ಜೀವನಗಾಥೆ ಸಂಕ್ಷಿಪ್ತವಾಗಿ ಬರುತ್ತದೆ. ಅದು ಎರಡನೆಯದು. ಇನ್ನು ಮೂರನೆಯದು- ಬುದ್ಧನ ಜೀವನ ಚಿತ್ರಣವನ್ನು ಧಾರಾವಾಹಿಯಾಗಿ ಚಿತ್ರಿಸಿ ಪ್ರಸಾರ ಮಾಡುವ ಅಶೋಕ್ ಎಂಬ ನಿರ್ದೇಶಕ ಹಾಗೂ ಆತನ ತಂಡದ ಸಾಹಸದ ಧಾರೆ.

ಈ ತಂಡ ತಮ್ಮ ಧಾರಾವಾಹಿಯಿಂದ ಉಂಟಾದ ‘ವಿಪ್ಲವಕಾರಿ ಸಾಮಾಜಿಕ ಪರಿಣಾಮದಿಂದ ಸ್ಫೂರ್ತಿಗೊಂಡು’ ಚುನಾವಣಾ ರಾಜಕಾರಣವನ್ನು ಪ್ರವೇಶಿಸಲು ಸನ್ನದ್ಧವಾಗುವಲ್ಲಿಗೆ ಈ ಚಿತ್ರಕಥೆ ಮುಗಿಯುತ್ತದೆ. ಆದರೆ ‘ಸಿದ್ಧತಾ ಪರ್ವ ಮುಗಿದಿದೆ. ಇನ್ನು ಮುಂದೆ ಚುನಾವಣಾ ಪರ್ವ ಆರಂಭ’ ಎನ್ನುವ ಮೂಲಕ ಈ ಧಾರಾವಾಹಿಯ ‘ಎರಡನೇ ಸೀಸನ್’ ಬರಲಿದೆ ಎಂಬ ಸೂಚನೆಯನ್ನೂ ನೀಡಲಾಗಿದೆ! ಈ ಚಿತ್ರಕಥೆಯಲ್ಲಿ ಕಥಾನಾಯಕ ನಿರ್ಮಿಸುತ್ತಿರುವ ಧಾರಾವಾಹಿಯ ನಿಖರ ರೂಪು ರೇಷೆ ಸ್ಪಷ್ಟವಾಗುವುದಿಲ್ಲವಾದರೂ- ಆ ತಂಡ ‘ಮೂರು ಟೈಮ್ ಜೋನ್’ಗಳ ಪ್ರಸ್ತಾಪ ಮಾಡುವುದರಿಂದ ಮತ್ತು ‘ನಮ್ ಸೀರಿಯಲ್ ಉದ್ದೇಶ, ಪ್ರಾಮಾಣಿಕ, ಸಜ್ಜನ, ವಿದ್ಯಾವಂತ, ನಿಸ್ವಾರ್ಥ ಕಾರ್ಯಕರ್ತರನ್ನು ಸಿದ್ಧಪಡಿಸೋದು’ ಎಂದು ಕಥಾನಾಯಕ ಘೋಷಿಸುವುದರಿಂದ- ಈ ಒಟ್ಟಾರೆ ಚಿತ್ರಕಥೆಯ ಆಕೃತಿಯೇ, ಇದರೊಳಗಿನ ಧಾರಾವಾಹಿಯ ತಿರುಳೂ ಹೌದೆಂದು ಊಹಿಸಬಹುದು.

ಅಶೋಕರ ಈ ಚಿತ್ರಕಥೆ ಅವರ ವೃತ್ತಿಗತ ಕೌಶಲ ತೋರುವ ಹಾಗೆಯೇ ಅವರ ಸಾಹಸ ಮನೋವೃತ್ತಿಯ ದ್ಯೋತಕವೂ ಹೌದು. ಯಾಕೆಂದರೆ ಇಂದಿನ ದೈನಿಕ ಧಾರಾವಾಹಿಗಳೆಂಬ ‘ಫ್ಯಾಕ್ಟರಿ ಪ್ರಾಡಕ್ಟುಗಳ’ ಬಜಾರಿನಲ್ಲಿ ಇಂಥದೊಂದು ಅರ್ಥಪೂರ್ಣ ಮನರಂಜನೆಯ ಪ್ರಯತ್ನವೇ ವಿರಳ. ಜೊತೆಗೆ ಇಲ್ಲಿ ಕಾಣುವ ಅಂಬೇಡ್ಕರ್ ಬದುಕಿನ ತುಣುಕುಗಳಾಗಲೀ, ಬುದ್ಧನ ಜೀವನದ ವಿವರಗಳಾಗಲೀ- ಇವೆಲ್ಲವೂ ಗಂಭೀರ ಅಧ್ಯಯನದ ಫಲ. ಇಂಥ ಗಾಂಭೀರ್ಯವಂತೂ ಧಾರಾವಾಹಿಗಳ ಲೋಕದಲ್ಲಿ ಅಪ್ಪಿತಪ್ಪಿಯೂ ಕಾಣಸಿಗದ ಸರಕುಗಳು. ಅದಕ್ಕಾಗಿ ಅಶೋಕ್ ರನ್ನು ಅಭಿನಂದಿಸಲೇಬೇಕು. ತಮ್ಮ ಮೊದಲ ಪ್ರಯತ್ನದಲ್ಲೇ ಅವರು ಪ್ರದರ್ಶಿಸಿರುವ ‘ಉದ್ದೇಶದ ಘನತೆ’ ನಮ್ಮಲ್ಲಿ ಮೆಚ್ಚುಗೆ ಹುಟ್ಟಿಸುತ್ತದೆ.

ಇಷ್ಟಿದ್ದೂ, ಈ ಚಿತ್ರಕಥೆಯ ಕೆಲವು ವಿವರಗಳ ಕುರಿತು ನನಗಿರುವ ತಕರಾರುಗಳನ್ನು ಹೇಳಲೇಬೇಕು! ಮುನ್ನುಡಿ ಎಂಬುದು ವಿಮರ್ಶೆಯ ವೇಷ ಧರಿಸಬಾರದು ಎಂಬ ಅರಿವಿದ್ದೂ, ಈ ಮಾತುಗಳನ್ನು ಬರೆಯದಿದ್ದರೆ ಕರ್ತವ್ಯಚ್ಯುತಿಯಾದೀತೆಂಬ ಎಚ್ಚರದಿಂದ ಹೆಜ್ಜೆಯಿಡುತ್ತಿದ್ದೇನೆ. ಮೊದಲನೆಯದಾಗಿ- ಇಡೀ ಚಿತ್ರಕಥೆಯಲ್ಲಿ (ಬುದ್ಧನ ಭಾಗಗಳನ್ನುಳಿದು) ಮಾತಿಗೇ ಪ್ರಾಮುಖ್ಯ. ಅಂದರೆ ‘ಕೃತಿ’ (ಅಂದರೆ ಆ್ಯಕ್ಷನ್) ಕಮ್ಮಿ. ಇದು ಬಹುತೇಕ ಇಂದಿನ ದೈನಿಕ ಧಾರಾವಾಹಿಗಳ ಮಿತಿಯೂ ಹೌದು.

ಜೊತೆಗೆ ಚಿತ್ರಕಥೆಯಲ್ಲಿ ಬುದ್ಧನ ಭಾಗಗಳು ಬಂದಾಗ ಅಶೋಕ್ ಉಳಿದ ಕಡೆ ಅನುಸರಿಸುವ ದೃಶ್ಯ ನಿರ್ಮಿತಿಯ ವ್ಯಾಕರಣವನ್ನು ಬಿಟ್ಟುಕೊಟ್ಟು, ಅಂಥ ಕಡೆ ಕೇವಲ ಸಾರಾಂಶ ನೀಡಿ ಕೈ ತೊಳೆದುಕೊಂಡಿದ್ದಾರೆ. ಚಿತ್ರಕಥೆಯ ಸ್ವರೂಪ ಗೊತ್ತಿಲ್ಲದವರಿಗೆ ನನ್ನ ಈ ಆಕ್ಷೇಪ ಸ್ಪಷ್ಟವಾಗಲಾರದು. (ಅಷ್ಟಾಗಿಯೂ ಇದನ್ನು ನಾಳೆ ನಿಜಕ್ಕೂ ಯಾವುದೋ ಚಾನಲ್ ಗೆ ಧಾರಾವಾಹಿಯಾಗಿ ಚಿತ್ರಿಸಹೊರಡುವವರಿಗೆ ಈ ಸಂಗತಿ ತೊಡಕಾಗಿ ಕಾಣಬಹುದೇ ಹೊರತು, ಓದುಗರಿಗೆ ಅಂಥ ದೊಡ್ಡ ಕೊರತೆಯೇನಲ್ಲ ಎಂಬುದನ್ನೂ ಇಲ್ಲೇ ಹೇಳಬೇಕು.) ಅಂಬೇಡ್ಕರ್ ಒಂದು ಕಡೆ ತಮ್ಮ ಪತ್ನಿಯೊಂದಿಗೆ ಮಾತನಾಡುವಾಗ ‘ಪಶ್ಚಿಮ ದೇಶಗಳ ಅನುಕರಣೆಯಲ್ಲಿ ಕೈಗಾರಿಕಾ ಕ್ರಾಂತಿಯ ಭ್ರಾಂತಿಯಲ್ಲಿ ದೊಡ್ಡ ಕಾರ್ಖಾನೆಗಳು, ಅಣೆಕಟ್ಟುಗಳ ಕನಸಿನಲ್ಲಿ ಗ್ರಾಮೀಣರ ಬದುಕು ಅಲಕ್ಷ್ಯಕ್ಕೆ ಒಳಗಾಗುತ್ತಿದೆ’ ಎಂದು ಉದ್ಗರಿಸುತ್ತಾರೆ…. ಆದರೆ ನಿಜಕ್ಕೂ ಅಂಬೇಡ್ಕರ್ ದೃಷ್ಟಿ ಹೀಗಿತ್ತೇ? ಚರಿತ್ರೆ ಹೇಳುವುದೇನು? ಇದು ಗಾಂಧೀಜಿ ನಿಲುವೇ ಹೊರತು ಅಂಬೇಡ್ಕರರದಲ್ಲ! ಯಾಕೆಂದರೆ ಅಂಬೇಡ್ಕರ್ ಎಂದೂ ಕೈಗಾರಿಕೆಗಳ ವಿರುದ್ಧ ಇದ್ದವರಲ್ಲ. ಹಾಗೆ ನೋಡಿದರೆ ಹಳ್ಳಿಗಾಡಿನ ಸಣ್ಣ ಹಿಡುವಳಿಗಳ ಸಮಸ್ಯೆಗೆ ಅವರು ಪರಿಹಾರವಾಗಿ ಸೂಚಿಸಿದ್ದು ಕೈಗಾರಿಕೀಕರಣವನ್ನೇ.

ಜೊತೆಗೆ ಸ್ವತಂತ್ರ ಭಾರತದಲ್ಲಿ ನದಿಗಳ ಬಹು ಉದ್ದೇಶದ ಬಳಕೆಯ ಪಿತಾಮಹರೇ ಅಂಬೇಡ್ಕರ್. ದಾಮೋದರ್ ಕಣಿವೆ, ಭಾಕ್ರಾ ನಂಗಲ್ ಅಣೆಕಟ್ಟು ಯೋಜನೆ, ಸೋನೆ ನದಿ ಯೋಜನೆ ಮತ್ತು ಹಿರಾಕುಡ್ ಅಣೆಕಟ್ಟೆ- ಈ ಎಲ್ಲ ಯೋಜನೆಗಳಿಗೂ ಅಂಬೇಡ್ಕರ್ ಮಾರ್ಗದರ್ಶನವಿತ್ತು… ಆದರೆ ಇದಕ್ಕಿಂತಲೂ ಗಹನವಾದ ಪ್ರಶ್ನಾರ್ಥಕ ಚಿಹ್ನೆ ಏಳುವುದು ಅಂಬೇಡ್ಕರ್- ಗಾಂಧಿ ನಂಟಿನ ಅತಿ ಜಟಿಲ ಬಿಕ್ಕಟ್ಟು ಎನ್ನಬಹುದಾದ ಪೂನಾ ಒಪ್ಪಂದದ ಬಗ್ಗೆ.

ಇಲ್ಲಿನ ಒಂದು ದೃಶ್ಯದಲ್ಲಿ ಧಾರಾವಾಹಿಯ ಪಾತ್ರವಾದ ಅಶೋಕ್ ಹೇಳುವುದು ಹೀಗೆ: ‘…ದೇಶಕ್ಕೆ ಸ್ವಾತಂತ್ರ್ಯ ದೊರೆಯುವ ಸಂದರ್ಭದಲ್ಲಿ ಬಾಬಾಸಾಹೇಬರಿಗೆ, ಈ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕರೂ ನನ್ನ ಜನಗಳಿಗೆ ದಾಸ್ಯ ತಪ್ಪುವುದಿಲ್ಲ ಎಂಬ ಅರಿವಾಗಿ ಎರಡು ಮತಗಳ ಬೇಡಿಕೆ ಮುಂದಿಟ್ಟರು. ಇದರಿಂದ ಗಾಂಧಿ ಒಪ್ಪಿದ್ದ ತತ್ವಗಳಿಗೆ ಹೊಡೆತ ಬೀಳುತ್ತಿತ್ತು. ಶತಾಯಗತಾಯ ಇದನ್ನು ತಪ್ಪಿಸಬೇಕೆಂದು ಪ್ರಸಿದ್ಧ ಉಪವಾಸ ಮಾಡಿ, ಪೂನಾ ಒಪ್ಪಂದಕ್ಕೆ ಅಂಬೇಡ್ಕರ್ ಸಹಿ ಮಾಡುವ ಹಾಗೆ ಮಾಡಿಬಿಟ್ಟರು. ಸ್ವಾತಂತ್ರ್ಯ ಬಂದು ಎಪ್ಪತ್ತು ವರ್ಷಗಳಾದರೂ ಈ ಅಸಮಾನತೆ ತಪ್ಪಲಿಲ್ಲ….’ ಲೇಖಕರು ಇಲ್ಲಿ ನೇರಾನೇರ ಗಾಂಧೀಜಿಯನ್ನು ವಿಲನ್ ಎಂದು ಕರೆದಿಲ್ಲ, ನಿಜ. ‘ಗಾಂಧೀಜಿ ಒಪ್ಪಿದ್ದ ತತ್ವಗಳಿಗೆ ಹೊಡೆತ ಬೀಳುತ್ತಿತ್ತು’ ಎಂಬ ಸಹಾನುಭೂತಿಪರ- ರಿಯಾಯ್ತಿಯ ಮಾತಾಡಿದರೂ, ‘ಅಂಬೇಡ್ಕರ್ ಸಹಿ ಮಾಡುವ ಹಾಗೆ ಮಾಡಿಬಿಟ್ಟರು… ಸ್ವಾತಂತ್ರ್ಯ ಬಂದು ಎಪ್ಪತ್ತು ವರ್ಷಗಳಾದರೂ ಈ ಅಸಮಾನತೆ ತಪ್ಪಲಿಲ್ಲ’ ಎನ್ನುವ ಮೂಲಕ ಆ ಒಪ್ಪಂದವೇ ಅನ್ಯಾಯದ್ದು- ಗಾಂಧೀಜಿಯವರ ಉಪವಾಸವೆಂಬ ಬ್ಲಾಕ್ ಮೇಲ್ ನ ಪರಿಣಾಮ ಎಂಬ ಇಂಗಿತವನ್ನೇ ಹೊರಡಿಸುತ್ತಾರೆ. ಅಂದರೆ ಅಂಬೇಡ್ಕರ್ ಮತ್ತು ಗಾಂಧೀಜಿ ವಾಗ್ವಾದ ಕುರಿತು ಹೆಚ್ಚಾಗಿ ಚಾಲ್ತಿಯಲ್ಲಿರುವ ಒಮ್ಮುಖ ವ್ಯಾಖ್ಯಾನವೇ ಇಲ್ಲಿನ ಉದ್ಗಾರದ ಬೆನ್ನಿಗಿರುವುದು ಸ್ಪಷ್ಟವಾಗಿದೆ. ಮತ್ತು ಈ ‘ಒಮ್ಮುಖ ವ್ಯಾಖ್ಯಾನ’- ಗಾಂಧೀಜಿಯನ್ನು ಇತಿಹಾಸದ ಖಳನಾಯಕನನ್ನಾಗಿ ಬಿಂಬಿಸಿದೆ; ‘ಮನುವಾದಿ, ದಲಿತ ವಿರೋಧಿ’ ಅನ್ನುವ ಹಣೆಪಟ್ಟಿ ಹಚ್ಚಿ ಕೂರಿಸಿದೆ!ಆದರೆ ವಾಸ್ತವವೇನು? ಪೂನಾ ಒಪ್ಪಂದದ ನಿಜ ತಿರುಳೇನು? ಈ ಪ್ರಶ್ನೆಯನ್ನು ಈಗಲಾದರೂ ಸತ್ಯನಿಷ್ಠೆಯಿಂದ ಎದುರುಗೊಳ್ಳದಿದ್ದರೆ ಈ ಎರಡೂ ಮಹಾನ್ ಚೇತನಗಳಿಗೆ ಹಾಗೂ ಇತಿಹಾಸಕ್ಕೆ ಘೋರ ಅಪಚಾರ ಮಾಡಿದಂತಾಗುವುದು. ಅಷ್ಟೇ ಅಲ್ಲ, ಗೊಂದಲವನ್ನೇ ಜ್ಞಾನ ಎಂದುಕೊಂಡಿರುವ ಈ ಪೀಳಿಗೆಯ ಅನಾಹುತಕಾರಿ ಪೂರ್ವಗ್ರಹವನ್ನೇ ಪುಷ್ಟೀಕರಿಸಿದಂತಾಗುವುದು.

ಈ ಹಿನ್ನೆಲೆಯಲ್ಲಿ ಇಲ್ಲಿ ತುಸು ವಿವರವಾದ ವಿಶ್ಲೇಷಣೆಗೆ ಕೈ ಹಾಕಿದ್ದೇನೆ. ಮುನ್ನುಡಿಯ ನೆಪದಲ್ಲಿ ಈ ವಿಶ್ಲೇಷಣೆಯ ಭಾರವನ್ನು ಈ ಕೃತಿಯ ಮೇಲೆ ಹೇರುತ್ತಿರುವುದಕ್ಕಾಗಿ ಮಿತ್ರ ಅಶೋಕ್ ನನ್ನನ್ನು ಮನ್ನಿಸಲಿ…! ಪೂನಾ ಒಪ್ಪಂದ ಸಂದರ್ಭದ ಹಿನ್ನೆಲೆ ಹೀಗಿದೆ:ಲಂಡನ್ನಿನಲ್ಲಿ ಭಾರತಕ್ಕೆ ಸ್ವಾಯತ್ತ ಸ್ಥಾನಮಾನ ನೀಡುವ ಸಾಧ್ಯತೆಯನ್ನು ಚರ್ಚಿಸಲೆಂದು 1932ರಲ್ಲಿ ನಡೆದ ಎರಡನೇ ದುಂಡು ಮೇಜಿನ ಸಂದರ್ಭದಲ್ಲಿ ತಮಗೆ ಪ್ರತ್ಯೇಕ ಮತಕ್ಷೇತ್ರ ಬೇಕೆಂಬ ಬೇಡಿಕೆ ಇರಿಸಿದ ಸಿಕ್ಖರು ಮತ್ತು ಮುಸ್ಲಿಮರ ಜೊತೆಗೇ ದಲಿತರ ಪ್ರತಿನಿಧಿಯಾಗಿ ಹೋಗಿದ್ದ ಅಂಬೇಡ್ಕರ್ ತಮ್ಮದೇ ಬೇಡಿಕೆ ಮಂಡಿಸಿದರು. ಅವರು ಕೇಳಿದ್ದು: ದಲಿತ ಪ್ರತಿನಿಧಿಯನ್ನು ಶಾಸನಸಭೆಗಳಿಗೆ ಆರಿಸುವ ಹಕ್ಕು ದಲಿತರಿಗೇ ಇರಬೇಕು (ಅಂದರೆ ದಲಿತರಿಗಾಗಿ ಪ್ರತ್ಯೇಕ ಮತಕ್ಷೇತ್ರ). ಇದರ ಜೊತೆಗೆ ಸಾಮಾನ್ಯ ಕ್ಷೇತ್ರಗಳಲ್ಲೂ ದಲಿತರಿಗೆ ಮತ್ತೊಂದು ಮತ ಚಲಾಯಿಸುವ ಹಕ್ಕು ಇರಬೇಕು. ಅಂದರೆ ದಲಿತರಿಗೆ ತಲಾ ಎರಡು ಮತಗಳಿರಬೇಕು.

ಗಾಂಧೀಜಿ ಈ ಪ್ರಸ್ತಾವವನ್ನು ವಿರೋಧಿಸಿದರು. ಭಾರತೀಯರೆಲ್ಲರೂ ಒಂದಾಗಿ ನಡೆಸಬೇಕಾದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಈ ನಡೆ ಒಡಕು ತರುವುದು ಎಂಬುದು ಒಂದು ಕಾರಣವಾದರೆ (ಬ್ರಿಟಿಷರ ಉದ್ದೇಶ ನಿಸ್ಸಂಶಯವಾಗಿ ಅದೇ ಆಗಿತ್ತು), ಈ ತೀರ್ಮಾನ ಹಳ್ಳಿ ಹಳ್ಳಿಗಳನ್ನು ಛಿದ್ರಗೊಳಿಸಿ ಭಾರತದ ಅಂದಿನ ಪರಿಸ್ಥಿತಿಯಲ್ಲಿ ದಲಿತರ ಮೇಲೆ ಎಣೆಯಿಲ್ಲದ ದೌರ್ಜನ್ಯಕ್ಕೆ ಕಾರಣವಾಗುವುದೆಂಬ ಭೀತಿ ಗಾಂಧೀಜಿಗಿತ್ತು. ‘ಪ್ರತ್ಯೇಕ ಮತಕ್ಷೇತ್ರ- ಸಮಸ್ಯೆಯನ್ನು ಬಗೆಹರಿಸುವ ಬದಲು ಮತ್ತಷ್ಟು ಉಲ್ಬಣಗೊಳಿಸುವುದು; ಹಳ್ಳಿ ಹಳ್ಳಿಯೂ ನಿರಂತರ ಘರ್ಷಣೆಯ ಕಣವಾಗಿ ಪರಿಣಮಿಸುವುದು’- ಎಂಬುದು ಅವರ ಆತಂಕ.

ಬ್ರಿಟಿಷ್ ಪ್ರಧಾನಿ ರಾಮ್ಸೆ ಮೆಕ್ಡೊನಾಲ್ಡರೇನಾದರೂ ಈ ಪ್ರಸ್ತಾವಕ್ಕೆ ಕಾನೂನಿನ ರೂಪ ಕೊಟ್ಟರೆ ತಾವು ಅದರ ವಿರುದ್ಧ ಆಮರಣಾಂತ ಉಪವಾಸ ಹೂಡುವುದಾಗಿ ಗಾಂಧಿ ಎಚ್ಚರಿಸಿದರು.ಆದರೆ ಮೆಕ್ಡೊನಾಲ್ಡ್ ತಮ್ಮ ನಿರ್ಧಾರದಿಂದ ಹಿಂದಗೆಯಲಿಲ್ಲ, ಪರಿಣಾಮ- ಪುಣೆಯ ಯರವಾಡ ಜೈಲಿನಲ್ಲಿದ್ದ ಗಾಂಧೀಜಿ ಅಲ್ಲಿಯೇ ಉಪವಾಸ ಆರಂಭಿಸಿದರು. 1932ರ ಸೆಪ್ಟೆಂಬರಿನ ಕಡೆ ವಾರ ಸತತ ರಾಜಿ ಸಂಧಾನಗಳ ನಂತರ ಗಾಂಧಿ ಮತ್ತು ಅಂಬೇಡ್ಕರ್ ನಡುವೆ ಒಪ್ಪಂದ ಮೂಡಿ ಗಾಂಧೀಜಿ ಉಪವಾಸ ನಿಲ್ಲಿಸಿದರು. ದಲಿತರ ಪ್ರತ್ಯೇಕ ಮತಕ್ಷೇತ್ರದ ಒತ್ತಾಯ ಬಿಟ್ಟು ಕೊಟ್ಟು, ದಲಿತರಿಗಾಗಿ ರಾಜಕೀಯ ಮೀಸಲಾತಿ ಕಲ್ಪಿಸುವ ಕರಾರುಗಳಿಗೆ ಇಬ್ಬರೂ ಸಹಿ ಹಾಕಿದರು. ಅದೇ ಪೂನಾ ಒಪ್ಪಂದವೆಂದು ಖ್ಯಾತವಾದ- ಇಂದಿಗೂ ಸುಡು ಸುಡು ವಾದ ವಿವಾದಗಳನ್ನು ಹುಟ್ಟು ಹಾಕುತ್ತಲೇ ಇರುವ ಚಾರಿತ್ರಿಕ ಬೆಳವಣಿಗೆ. ಆಯಿತು.

ಗಾಂಧೀಜಿ ಹೂಡಿದ ಈ ಉಪವಾಸವನ್ನು ಮುಂದಕ್ಕೆ ಅಂಬೇಡ್ಕರ್ ‘ರಾಜಕೀಯ ಸ್ಟಂಟ್’ ಎಂದು ಕರೆದರು. ಯಾವಾಗ ಹಾಗೆ ಕರೆದರು, ಯಾಕೆ ಕರೆದರು, ಅದನ್ನು ಆಮೇಲೆ ನೋಡೋಣ. ಆದರೆ ಗಾಂಧೀಜಿ ಉಪವಾಸ ಸತ್ಯಾಗ್ರಹದ ಪರಿಣಾಮವೇನಾಯಿತು?ನಿರಶನದ ಸುದ್ದಿ ಹೊರಬಿದ್ದ ಸೆಪ್ಟೆಂಬರ್ 13ರಂದೇ ದಲಿತ ನೇತಾರ ರಾವ್ ಬಹಾದೂರ್ ಎಂ.ಸಿ. ರಾಜಾ ಪ್ರತ್ಯೇಕ ಮತಕ್ಷೇತ್ರಗಳ ‘ರಾಜಕೀಯ ಪ್ರತ್ಯೇಕೀಕರಣದ’ ವಿರುದ್ಧ ಹೇಳಿಕೆ ಬಿಡುಗಡೆ ಮಾಡಿದರು. ಬಾಬು ರಾಜೇಂದ್ರ ಪ್ರಸಾದ್- ನಿಮ್ನ ವರ್ಗಗಳಿಗೆ ದೇವಾಲಯ ಪ್ರವೇಶ, ಸಾರ್ವಜನಿಕ ಬಾವಿಗಳ ಬಳಕೆ, ಶಾಲೆಗಳಲ್ಲಿ ಶಿಕ್ಷಣ ಮತ್ತು ಸಾರ್ವಜನಿಕ ರಸ್ತೆ/ ಸ್ಥಳಗಳ ಬಳಕೆಗೆ ಅವಕಾಶ ಕಲ್ಪಿಸುವ ಮೂಲಕ ಹಿಂದೂಗಳು ಗಾಂಧೀಜಿಯವರ ಮಹಾತ್ಯಾಗವನ್ನು ಸಾರ್ಥಕಗೊಳಿಸಬೇಕೆಂದು ಕರೆ ಕೊಟ್ಟರು.

ಉಪವಾಸ ಆರಂಭವಾಗುವ ಹಿಂದಿನ ದಿನ (ಸೆಪ್ಟೆಂಬರ್ 19) ಅಲಹಾಬಾದಿನ ಹನ್ನೆರಡು ದೇವಾಲಯಗಳು ಮೊಟ್ಟಮೊದಲ ಬಾರಿ ಹರಿಜನರಿಗಾಗಿ ಬಾಗಿಲು ತೆರೆದವು. ಉಪವಾಸ ಕೈಗೊಂಡ 20ರಂದು ದೇಶಾದ್ಯಂತ ಲಕ್ಷಾಂತರ ಭಾರತೀಯರು ‘ಉಪವಾಸ ಹಾಗೂ ಪ್ರಾರ್ಥನೆ’ಗಳ ಮೂಲಕ ಗಾಂಧಿ ನಡೆಗೆ ಒತ್ತಾಸೆಯಾದರು. ಜವಾಹರಲಾಲ್ ನೆಹರೂರ ಸಂಪ್ರದಾಯಶರಣ ತಾಯಿ ಸ್ವರೂಪರಾಣಿ ನೆಹರೂ, ತಾವು ಅಸ್ಪೃಶ್ಯನ ಕೈಯಿಂದ ಆಹಾರ ಸ್ವೀಕರಿಸಿದ್ದಾಗಿ ಪ್ರಕಟಿಸಿದರು.

ಶಾಂತಿನಿಕೇತನದಲ್ಲಿ ರವೀಂದ್ರನಾಥ ಟಾಗೂರರೂ ಸೇರಿದಂತೆ ವಿಶ್ವಭಾರತಿಯ ಸಕಲ ಸಮಸ್ತರೂ ಉಪವಾಸ ಕೂತರು. ಅಲ್ಲಿ ಕವಿ ರವೀಂದ್ರರು ಗಾಂಧೀಜಿ ನಿರಶನವನ್ನು ‘ಸನಾತನ ಸಾಮಾಜಿಕ ಅಪರಾಧವನ್ನು ಕೊನೆಗಾಣಿಸಲು ಗಾಂಧೀಜಿ ರಾಷ್ಟ್ರದ ಮುಂದೆ ಒಡ್ಡಿದ ಸವಾಲಿದು’ ಎಂದು ಬಣ್ಣಿಸಿದರು. ರವೀಂದ್ರರ ಮಾರ್ಗದರ್ಶನದಲ್ಲಿ ವಿಶ್ವಭಾರತಿ ಸುತ್ತಮುತ್ತಲ ಪರಿಸರದಲ್ಲಿ ತಳಜಾತಿಗಳ ಹಿತಾಸಕ್ತಿಗಾಗಿ ದುಡಿಯಲೆಂದು ವಿಶ್ವವಿದ್ಯಾಲಯದ ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ಒಂದು ಪಡೆಯೇ ಸಜ್ಜಾಯಿತು. ದೇಶದ ಮೂಲೆ ಮೂಲೆಗಳಿಂದ ದೇವಸ್ಥಾನಗಳು, ಬಾವಿಗಳು ಮತ್ತು ಸಾರ್ವಜನಿಕ ಸ್ಥಳಗಳನ್ನು ಅಸ್ಪೃಶ್ಯರಿಗೆ ಮುಕ್ತಗೊಳಿಸುವ ಸುದ್ದಿಗಳು ಒಂದೇ ಸಮ ಹರಿದು ಬರತೊಡಗಿದವು.

ಆರಂಭದಲ್ಲೇ ದೆಹಲಿಯ ದೇವಸ್ಥಾನಗಳು, ಕಲ್ಕತ್ತೆಯ ಕಾಳೀಘಾಟ್ ದೇವಾಲಯ ಮತ್ತು ಬನಾರಸ್ಸಿನ ರಾಮಮಂದಿರಗಳನ್ನು ದಲಿತರ ಪ್ರವೇಶಕ್ಕೆ ಮುಕ್ತಗೊಳಿಸಲಾಯಿತು. ಮುಂಬಯಿಯಲ್ಲಿ ಗಾಂಧಿ ಸೇವಾ ಸೇನೆಯೆಂಬ ರಾಷ್ಟ್ರೀಯ ಮಹಿಳಾ ಸಂಘಟನೆ ನಗರದ ಏಳು ಪ್ರಮುಖ ದೇವಾಲಯಗಳ ಮುಂದೆ ಜನಮತಗಣನೆ ನಡೆಸಿದಾಗ ‘ಅಸ್ಪೃಶ್ಯರಿಗೆ ದೇವಾಲಯ ಪ್ರವೇಶ’ದ ಪರವಾಗಿ 24,797 ಮತಗಳು, ವಿರುದ್ಧವಾಗಿ 445 ಮಂದಿ ಅಭಿಪ್ರಾಯ ವ್ಯಕ್ತಪಡಿಸಿದರು. ಅದನ್ನು ಅನುಸರಿಸಿ ಅಸ್ಪೃಶ್ಯರಿಗೆ ಮುಂಬಯಿಯ ಎಲ್ಲ ಪ್ರಮುಖ ದೇವಾಲಯಗಳ ದ್ವಾರ ತೆರೆಯಲಾಯಿತು.

ಹಾಗೆ 20ರಿಂದ 26ರವರೆಗೆ ನಡೆದ ಉಪವಾಸದುದ್ದಕ್ಕೂ ದೇಶಾದ್ಯಂತ ಸಾವಿರಾರು ದೇವಸ್ಥಾನಗಳನ್ನು ದಲಿತರ ಪ್ರವೇಶಕ್ಕೆ ಮುಕ್ತಗೊಳಿಸುವ ಸ್ವಯಂಪ್ರೇರಿತ ಆಂದೋಲನವೇ ನಡೆದುಹೋಯಿತು. ಅಷ್ಟೂ ಕಾಲ ಬಹುತೇಕ ಸವರ್ಣೀಯರು ಸಿನಿಮಾ, ಹಾಡು, ಹೋಟೆಲ್ ಮುಂತಾದ ಮನರಂಜನಾ ತಾಣಗಳಿಂದ ದೂರ ಉಳಿದರು. ಮದುವೆಗಳನ್ನು ಮುಂದೂಡಲಾಯಿತು. ಒಟ್ಟಾರೆಯಾಗಿ ಮಹಾತ್ಮನ ಜೀವ ಉಳಿಸಲು ದೇಶವೇ ಉಸಿರು ಬಿಗಿ ಹಿಡಿದು ಮಿಡಿಯುತ್ತಿತ್ತು. ಎಲ್ಲೆಲ್ಲೂ ಪಶ್ಚಾತ್ತಾಪ, ಸುಧಾರಣೆ, ಆತ್ಮ ಶುದ್ಧೀಕರಣದ ಅಲೆಗಳು ಎದ್ದಿದ್ದವು. ಉಪವಾಸ ಅಂತ್ಯಗೊಂಡ ಕೂಡಲೇ ಸೆಪ್ಟೆಂಬರ್ 27ರಿಂದ ಅಕ್ಟೋಬರ್ 2ರವರೆಗೆ ಇಡೀ ದೇಶ ‘ಅಸ್ಪೃಶ್ಯತಾ ವಿರೋಧಿ ಸಪ್ತಾಹ’ವನ್ನಾಗಿ ಆಚರಿಸಿತು.

ಗುರುದೇವ ರವೀಂದ್ರನಾಥ ಟಾಗೂರ್ 27ರಂದು ಶಾಂತಿನಿಕೇತನದಲ್ಲಿ ನಡೆದ ಭಾರೀ ಸಭೆಯಲ್ಲಿ ಆಡಿದ ಮಾತುಗಳು: ‘ಜನ್ಮದ ಆಕಸ್ಮಿಕ ಒಂದರಿಂದಲೇ (ಅಸ್ಪೃಶ್ಯರೆಂಬ) ಕಳಂಕ ಅಂಟಿಸಿಕೊಂಡವರ ಬಾಗಿದ ಬೆನ್ನೇರಿದ ಅವಮಾನದ ಹೊರೆಯನ್ನು ನೀಗಿಸುವ ಮಹಾತ್ಮರ ಉದಾತ್ತ ಕೈಂಕರ್ಯದಲ್ಲಿ ನಾವೆಲ್ಲರೂ ಕೈ ಜೋಡಿಸೋಣ; (ಆ ಮೂಲಕ) ನೈತಿಕ ಗುಲಾಮಗಿರಿಯ ಸಂಕೋಲೆಗಳಿಂದ ಭಾರತವನ್ನು ಬಿಡುಗಡೆಗೊಳಿಸುವುದಷ್ಟೇ ಅಲ್ಲ, ಮನುಕುಲಕ್ಕೇ ಹೊಸ ಹಾದಿ ತೋರೋಣ’… ಆಗ ಟಾಗೂರರಿಂದ ಹಿಡಿದು ನಿಮ್ನ ವರ್ಗಗಳ ನೇತಾರ ರಾವ್ ಬಹಾದೂರ್ ಎಂ.ಸಿ. ರಾಜಾರವರೆಗೆ ದೇಶದ ಎಲ್ಲ ಮುಖಂಡರೂ, ‘ಗಾಂಧೀಜಿ ಉಪವಾಸ ಅಸ್ಪೃಶ್ಯತೆಯ ಅಡಿಪಾಯವನ್ನೇ ಅಲ್ಲಾಡಿಸಿದೆ’ ಎಂದೇ ಬಿಂಬಿಸಿದರು….

ಈ ವಿವರಗಳನ್ನು ಹೇಗೆ ಅಲ್ಲಗಳೆಯುವುದು? ಅಂದರೆ ಗಾಂಧೀಜಿ ಉಪವಾಸ ಕೈಗೊಂಡಿದ್ದು ‘ಅಸ್ಪೃಶ್ಯತೆ ನಿವಾರಣೆಗಾಗಿ’ ಎಂದೇ ಇಡೀ ದೇಶ ನಂಬಿತ್ತು! ‘ಗಾಂಧೀಜಿ ಉಪವಾಸ ಅಸ್ಪೃಶ್ಯತೆಯನ್ನೇನೂ ತೊಡೆಯಲಿಲ್ಲ ನಿಜ. ಆದರೆ ಅದುವರೆಗೆ ಅಸ್ಪೃಶ್ಯತೆಗಿದ್ದ ಸಾರ್ವತ್ರಿಕ ಮನ್ನಣೆ ಕಳೆದುಹೋಯಿತು. ಅದೊಂದು ಧಾರ್ಮಿಕ ಕಟ್ಟಳೆ ಎಂಬ ಶ್ರದ್ಧೆ ಛಿದ್ರವಾಯಿತು. ಅಸ್ಪೃಶ್ಯತೆ ಅನೈತಿಕ ಎಂಬ ಪ್ರಜ್ಞೆ ಮೂಡಲು ಸಾಧ್ಯವಾಯಿತು’ ಎಂದು ಗಾಂಧೀಜಿ ಜೀವನಚರಿತ್ರಕಾರ ಲೂಯಿ ಫಿಷರ್ ಬರೆಯುತ್ತಾರೆ.

ಅಷ್ಟಾದರೂ ಈ ನಿರಶನ ಸತ್ಯಾಗ್ರಹದ ವಿರುದ್ಧ ಅಂಬೇಡ್ಕರ್ ಯಾಕೆ ಕಠೋರ ದಾಳಿ ನಡೆಸಿದರು? ಅಂಬೇಡ್ಕರ್ 1945ರಲ್ಲಿ- ಅಂದರೆ ಒಪ್ಪಂದವಾದ ಹದಿಮೂರು ವರ್ಷಗಳ ನಂತರ ‘ಅಸ್ಪೃಶ್ಯರಿಗೆ ಕಾಂಗ್ರೆಸ್ ಮತ್ತು ಗಾಂಧಿ ಮಾಡಿದ್ದೇನು?’ ಎಂಬ ಭಾವಾವಿಷ್ಟ ಹೊತ್ತಗೆ ಬರೆದರು. ಆ ಬಗ್ಗೆ ಗಾಂಧಿ ಮೊಮ್ಮಗ ಹಾಗೂ ವಿದ್ವಾಂಸ ರಾಜಮೋಹನ ಗಾಂಧಿಯವರ ಟಿಪ್ಪಣಿಯನ್ನು ಗಮನಿಸಬೇಕು:…. ತಮ್ಮ ಈ ಉಗ್ರ ಪಠ್ಯದಲ್ಲಿ ಅಂಬೇಡ್ಕರ್ ಗಾಂಧಿಯ ಉಪವಾಸ ಮತ್ತು ಪುಣೆ ಒಪ್ಪಂದವನ್ನು ಸಾಧಿಸಿದ ವಿಧಾನದ ಮೇಲೇನೋ ವಾಗ್ದಾಳಿ ನಡೆಸುತ್ತಾರೆ; ಆದರೆ ನಮಗೆ ಸ್ಪಷ್ಟವಿರಬೇಕು, ಈ ದಾಳಿ- ಆ ಒಪ್ಪಂದದ ಕರಾರುಗಳ ವಿರುದ್ಧ ಅಲ್ಲ. ಹಾಗೆ ನೋಡಿದರೆ ತಮ್ಮ 1945ರ ಪಠ್ಯದಲ್ಲಿ, ಅಂಬೇಡ್ಕರ್, ಪುಣೆ ಒಪ್ಪಂದ ತಮಗೆ ಸಂದ ವಿಜಯವೆಂದೇ ಅಲ್ಲಲ್ಲಿ ಹೇಳಿಕೊಳ್ಳುತ್ತಾರೆ. ಅದಕ್ಕೇ ಅವರು ಬರೆಯುವುದು, ‘ಉಪವಾಸ ವಿಫಲವಾಗಿ, ಗಾಂಧಿ ಅಸ್ಪೃಶ್ಯರ ರಾಜಕೀಯ ಹಕ್ಕೊತ್ತಾಯಗಳನ್ನು ಮನ್ನಿಸಿದ- ಪುಣೆ ಒಪ್ಪಂದ ಎಂದು ಕರೆಯಲಾಗುವ- ಈ ಒಪ್ಪಂದಕ್ಕೆ ಸಹಿ ಹಾಕಲೇಬೇಕಾದ ಸಂದರ್ಭ ಬಂದಾಗ, ಅಸ್ಪೃಶ್ಯರ ಹಕ್ಕುಗಳು ಯಾವ ಉಪಯೋಗಕ್ಕೂ ಬರದ ರೀತಿಯಲ್ಲಿ ಚುನಾವಣೆಗಳಲ್ಲಿ ಅಕ್ರಮಗಳನ್ನು ಎಸಗಲು ಕಾಂಗ್ರೆಸ್ಸನ್ನು ಉತ್ತೇಜಿಸುವ ಮೂಲಕ, ಗಾಂಧಿ ತಮ್ಮ ಸೇಡು ತೀರಿಸಿಕೊಂಡರು’. (ಅಂಬೇಡ್ಕರ್ 1945, 259). ಆದರೂ, ಅಂಬೇಡ್ಕರ್ ತಮ್ಮ 1945ರ ಈ ಪ್ರಕ್ಷುಬ್ಧ ಪಠ್ಯದಲ್ಲಿ ಎಲ್ಲಿಯೂ ಒಪ್ಪಂದದ ಕರಾರುಗಳನ್ನು ಟೀಕಿಸುವುದಿಲ್ಲ. ಅಷ್ಟೇ ಅಲ್ಲ, ಆ ಸಂದರ್ಭದಲ್ಲಿ ಅಥವಾ ನಂತರ ಯಾವಾಗಲಾದರೂ- ನನಗೆ ತಿಳಿದ ಮಟ್ಟಿಗೆ- ಆ ಒಪ್ಪಂದವನ್ನು ರದ್ದುಗೊಳಿಸಲು ಅಥವಾ ಬದಲಾಯಿಸಲು ಯತ್ನಿಸಲೂ ಇಲ್ಲ. ಈ ಒಪ್ಪಂದವನ್ನು ‘ವೈಫಲ್ಯ’ ಎಂದುಕೊಳ್ಳುವ ಬದಲು ಅವರು ಅದನ್ನು, ದಲಿತರೂ ಸೇರಿದಂತೆ ಎಲ್ಲರಿಗೂ ಲಾಭದಾಯಕವಾದ ಹೊಂದಾಣಿಕೆಯಾಗಿಯೇ ಕಂಡರು ಎನಿಸುತ್ತದೆ.

1945ರ ಈ ಪಠ್ಯವನ್ನು ಬರೆದ ಎರಡೇ ವರ್ಷಗಳ ನಂತರ, ಅವರು ಇದೇ ಒಪ್ಪಂದವನ್ನು ಅಳವಡಿಸಿಕೊಂಡ ಸಂವಿಧಾನಕ್ಕೆ ಕಾನೂನು ರೂಪ ಕೊಡುವ ಪ್ರಕ್ರಿಯೆಗೆ ಚಾಲನೆ ನೀಡಿದರು. ಇಂದು ನೋಡಿದರೆ ಆ ಒಪ್ಪಂದ ಮಹಾ ಮುತ್ಸದ್ದಿತನದ ತೀರ್ಮಾನವಾಗಿಯೇ ಎದ್ದು ಕಾಣುತ್ತದೆ.ತಾವು ತೋರಿದ ರಿಯಾಯ್ತಿಗಳಿಂದಾಗಿ ‘ಅಸ್ಪೃಶ್ಯರು ದುಃಖಿತರಾದರು’ ಎಂದು ಅಂಬೇಡ್ಕರ್ ಬರೆದರೂ ಅವರು ಹೇಳುವುದು: ಸವರ್ಣೀಯ ಹಿಂದೂಗಳಿಗೆ (ಒಪ್ಪಂದವನ್ನು) ವಿರೋಧಿಸುವ ಧೈರ್ಯ ಇರಲಿಲ್ಲವಾದರೂ, ಅದನ್ನು ಅವರು ಖಡಾಖಂಡಿತವಾಗಿ ದ್ವೇಷಿಸಿದ್ದಂತೂ ನಿಜ (ಅಂಬೇಡ್ಕರ್ 1945, 90- 91).

ಈ ಒಪ್ಪಂದ ಹಾಗೂ ಉಪವಾಸಕ್ಕೆ ಕಂದಾಚಾರಿಗಳ ಪ್ರತಿರೋಧದ ಫಲವಾಗಿ 1934ರಲ್ಲಿ ಗಾಂಧಿ ಹತ್ಯೆಯ ಎರಡು ಪ್ರಯತ್ನಗಳು ನಡೆದವು- ಒಂದು ಬಿಹಾರದ ಜಸಿಧಿಯಲ್ಲಿ, ಮತ್ತೊಂದು ಪುಣೆಯಲ್ಲಿ… ಇದು ರಾಜಮೋಹನ ಗಾಂಧಿಯವರ ವಿಶ್ಲೇಷಣೆ. ಆದರೂ ನಾವೇಕೆ ಇನ್ನೂ ಗಾಂಧಿ ಮತ್ತು ಅಂಬೇಡ್ಕರರನ್ನು ಶತ್ರು ಪಾಳಯಗಳಲ್ಲಿ ಕದನಕ್ಕೆ ಸಜ್ಜುಗೊಳಿಸಿ ನಿಲ್ಲಿಸಿದ್ದೇವೆ? ಇದರಿಂದ ಲಾಭ ಯಾರಿಗೆ, ನಷ್ಟ ಯಾರಿಗೆ? ಇರಲಿ, ಸ್ವತಃ ಅಂಬೇಡ್ಕರ್ 1945ರ ವ್ಯಗ್ರ ಪಠ್ಯವನ್ನು ಬರೆದಿದ್ದೇಕೆ? ಅದಕ್ಕೂ ರಾಜಮೋಹನ ಗಾಂಧಿ ಉತ್ತರ ಅರಸುತ್ತಾರೆ: ಅಂಬೇಡ್ಕರ್, ದೆಹಲಿ ಪೃಥ್ವಿರಾಜ್ ರಸ್ತೆಯ ತಮ್ಮ ಅಧಿಕೃತ ನಿವಾಸದಲ್ಲಿ ಬರೆದ 1945ರ ಪಠ್ಯದ ಉಗ್ರ ಭಾಷೆಗೆ ಹಿನ್ನೆಲೆ ಏನಿತ್ತು? ಈ ಸಮಯದಲ್ಲಿ ಅವರು ವೈಸರಾಯರ ನಿರ್ವಾಹಕ ಮಂಡಳಿಯ ಸದಸ್ಯರಾಗಿದ್ದರು. ಯುದ್ಧ ಇನ್ನೇನು ಮುಕ್ತಾಯದ ಹಂತಕ್ಕೆ ಬಂದಿತ್ತು.

ಭಾರತವನ್ನು ಸಾಕಷ್ಟು ಅಲ್ಲಾಡಿಸಿದ್ದ ಚಲೇಜಾವ್ ಚಳವಳಿಯ ಅಂಗವಾಗಿ ಮೂರು ವರ್ಷ ಕಾಲ ಸೆರೆಯಲ್ಲಿದ್ದ ಕಾಂಗ್ರೆಸ್ ನಾಯಕರು ಇನ್ನೇನು ಬಿಡುಗಡೆ ಹೊಂದಲಿದ್ದರು. ಬ್ರಿಟಿಷರು ಭಾರತಕ್ಕೆ ಹೊಸದೊಂದು ರಾಜಕೀಯ ಕಾರ್ಯಕ್ರಮದ ಪ್ರಸ್ತಾವ ಮುಂದಿಡಲು ಸಜ್ಜಾಗಿದ್ದರು ಮತ್ತು ದೇಶದ ಉದ್ದಗಲ ಹೊಸ ಚುನಾವಣೆಗಳು ನಡೆಯಲಿದ್ದವು. 1945ರ ಈ ಪಠ್ಯ ಬರೆಯುತ್ತಿದ್ದ ಉಜ್ವಲ ಚಿಂತಕ ಮತ್ತು ಸದಸ್ಯನಿಗೆ (ಅಂದರೆ ಮಂತ್ರಿ), ಬ್ರಿಟಿಷರ ಯಾವುದೇ ಹೊಸ ಯೋಜನೆಯ ಮೇಲೂ ಪ್ರಭಾವ ಬೀರುವ ಆಶಯವಿತ್ತು. ಇದರ ಜೊತೆಗೆ ಈ ರಾಜಕೀಯ ಮುಖಂಡನಿಗೆ 1937ರ ಚುನಾವಣಾ ಫಲಿತಾಂಶವನ್ನು ಮರೆಯಲಾಗಿರಲಿಲ್ಲ.

ಯುದ್ಧದ ಕಾರಣದಿಂದಾಗಿ ಅದೇ ಕಡೆಯ ಚುನಾವಣೆಯಾಗಿತ್ತು ಬೇರೆ. ಈಗ 1945- 46ರಲ್ಲಿ ತಮ್ಮ ಸಾಧನೆಯನ್ನು ಸುಧಾರಿಸಿಕೊಳ್ಳುವುದು ಅವರ ಉದ್ದೇಶವಾಗಿತ್ತು. 1937ರ ಫಲಿತಾಂಶಗಳಿಂದಾಗಿ ರೇಗಿಹೋಗಿದ್ದ ಅಂಬೇಡ್ಕರ್, 1945ರ ಈ ಪ್ರಬಂಧದ ಮುಖಾಂತರ ಬ್ರಿಟಿಷ್ ನಾಯಕರು ಹಾಗೂ ಭಾರತೀಯ ಮತದಾರರಿಬ್ಬರ ಮುಂದೆಯೂ ಒಟ್ಟಿಗೇ ತಮ್ಮ ವಾದವನ್ನು ಮಂಡಿಸಿದರು… ಅಂದರೆ ಅಂಬೇಡ್ಕರರರ ಆ ಪಠ್ಯ ಒಂದು ರಾಜಕೀಯ ಪ್ರಣಾಳಿಯಾಗಿತ್ತೇ ಹೊರತು ತಾತ್ವಿಕ ಜಿಜ್ಞಾಸೆಯಲ್ಲ. ಅಷ್ಟಾದರೂ ತಮ್ಮನ್ನು ತಾವು ನಿರ್ಲಜ್ಜವಾಗಿ ಅಂಬೇಡ್ಕರ್ ವಾದಿಗಳೆಂದು ಕರೆದುಕೊಳ್ಳುವ ಇಂದಿನ ಕೆಲವು ಬುದ್ಧಿಜೀವಿಗಳು ‘ದಲಿತರಿಗೆ ಎರಡು ವೋಟುಗಳಿದ್ದಿದ್ದರೆ ಅವರ ಭವಿಷ್ಯವೇ ಬೇರೆಯಾಗುತ್ತಿತ್ತು’ ಎಂದು ನಿಜ ಸಹಾನುಭೂತಿಯಿಂದಲೋ, ಅಥವಾ ಕಪಟ ಸೋಗಿನಲ್ಲೋ ಹಲುಬುವುದನ್ನು ಇನ್ನೂ ನಿಲ್ಲಿಸಿಲ್ಲ. ಆದರೆ ಅವರು ಸ್ವತಃ ಅಂಬೇಡ್ಕರರ ಆಶಯ ಏನಿತ್ತೆಂದು ಮರೆಯುತ್ತಿದ್ದಾರೆ.

ಇಲ್ಲಿ, ಅಂಬೇಡ್ಕರ್ ಸಂವಿಧಾನವನ್ನು ದೇಶಕ್ಕೆ ಅರ್ಪಿಸುವ ಸಂದರ್ಭದಲ್ಲಿ ಆಡಿದ ಸುಪ್ರಸಿದ್ಧ ಮಾತುಗಳ ಕಡೆ ಅವರೆ ಗಮನ ಸೆಳೆಯಬಯಸುತ್ತೇನೆ: 1950ರ ಜನವರಿ 26ರಂದು ನಾವು ವಿರೋಧಾಭಾಸಗಳ ಯುಗವೊಂದನ್ನು ಪ್ರವೇಶಿಸಲಿದ್ದೇವೆ. ಈಗ ರಾಜಕೀಯದಲ್ಲಿ ಸಮಾನತೆಯಿದ್ದರೂ ಸಾಮಾಜಿಕ- ಆರ್ಥಿಕ ಬದುಕಿನಲ್ಲಿ ಅಸಮಾನತೆ ನೋಡಲಿದ್ದೇವೆ. ರಾಜಕೀಯದಲ್ಲಿ ನಾವು ‘ಒಬ್ಬ ವ್ಯಕ್ತಿ ಒಂದು ವೋಟು, ಒಂದು ವೋಟು ಒಂದು ಮೌಲ್ಯದ’ ತತ್ವವನ್ನು ಸ್ವೀಕರಿಸಲಿದ್ದೇವೆ. ಆದರೆ ನಮ್ಮ ಸಾಮಾಜಿಕ- ಆರ್ಥಿಕ ಬದುಕಿನಲ್ಲಿ, ‘ಒಬ್ಬ ವ್ಯಕ್ತಿ ಒಂದು ಮೌಲ್ಯ’ ಎಂಬ ತತ್ವವನ್ನು ನಿರಾಕರಿಸಲಿದ್ದೇವೆ…. ಒಬ್ಬ ವ್ಯಕ್ತಿ ಒಂದು ವೋಟು, ಒಂದು ವೋಟು ಒಂದು ಮೌಲ್ಯ. ಇದು ನಮ್ಮ ಸಂವಿಧಾನ ಶಿಲ್ಪಿ ಅಂಬೇಡ್ಕರರ ಪರಮೋಚ್ಚ ಧ್ಯೇಯ. ಎಷ್ಟೆಂದರೂ ಅವರು ಭಾರತದಂಥ ಜಾತಿಗ್ರಸ್ತ ನರಕದಲ್ಲಿ ಸಮಾನತೆಯ ಕನಸು ಅರಳಿಸಿದ ದ್ರಷ್ಟಾರ.

ಹಾಗಾದರೆ ಇಂದಿಗೂ ಎರಡು ವೋಟುಗಳ ರಾಜಕೀಯ ಸವಲತ್ತಿಗಾಗಿ ಹಂಬಲಿಸುತ್ತಿರುವವರ ಹಂಬಲದ ಹಿನ್ನೆಲೆಯೇನು?…. ಮಿತ್ರ ಅಶೋಕರ ಕೃತಿಯ ನೆಪದಲ್ಲಿ ಇಷ್ಟು ದೀರ್ಘ ಪ್ರವಚನಕ್ಕೆ ಇಳಿದಿದ್ದಕ್ಕೆ ಅವರ ಕ್ಷಮೆ ಕೋರುತ್ತೇನೆ. ಆದರೆ ಅವರ ‘ಬುದ್ಧ, ಬಾಬಾಸಾಹೇಬ್ ಮತ್ತು ನಾನು’ ಇಂಥ ಪ್ರಶ್ನೆಗಳ ದೀರ್ಘ ಅವಲೋಕನವನ್ನೂ ಪ್ರಚೋದಿಸಿತು ಎಂದು ನಾನು ವಾದ ಹೂಡಿದರೆ ಅವರು ತಪ್ಪು ತಿಳಿಯಬಾರದು!ಅವರ ಕೃತಿ ತನ್ನಷ್ಟಕ್ಕೇ ವಿಶಿಷ್ಟವಾಗಿದೆ. ಒಂದು ಧಾರಾವಾಹಿಯ ಚೌಕಟ್ಟಿನಲ್ಲಿ ಗಹನವಾದ ಸಂಗತಿಗಳನ್ನು ಮುಟ್ಟಲು ಯತ್ನಿಸಿದೆ. ಇದು ತೀರಾ ಅಪರೂಪದ ಪ್ರಯತ್ನ. ಅದಕ್ಕಾಗಿ ಅವರನ್ನು ಮನಸಾ ಅಭಿನಂದಿಸುತ್ತೇನೆ.

‍ಲೇಖಕರು Admin

August 27, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. ವಾಸುದೇವ ಶರ್ಮಾ

    ಸೊಗಸಾದ ಮತ್ತು ಸರಳವಾಗದ ವಿವರಣೆ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: