ಡಿ.ಎಸ್.ರಾಮಸ್ವಾಮಿ
ಸೆಖೆಯುಬ್ಬಿದ ರಾತ್ರಿಗಳಲ್ಲಿ
ನಿದ್ರೆ ದಿಕ್ಕಾಪಾಲಾಗುತ್ತದೆ;
ನೆನಪ ಗಣಿಯಲ್ಲಿಣುಕಿದರೆ
ಮಧುರ ಘಟನೆಗಳಿಗಿಂತ
ಯಾತನೆಯ ಯಾದಿಯೇ ಗೆಲ್ಲುತ್ತದೆ.
ಹೀಗೆ ಬಂದು ಹಾಗೆ ಹೋಗುವ ವಿದ್ಯುತ್ತು
ತಿರುಗುತ್ತಿದ್ದ ಫ್ಯಾನಿಗೆ ಬಿಡುವು ನೀಡಿದೆ,
ಗೊರಕೆಯಲ್ಲಿದ್ದ ಇವಳು ಮಗ್ಗುಲಾಗುತ್ತಾಳೆ.

ಬಾಗಿಲಿನ ಒಂದೊಂದೇ ಚಿಲಕ ಸರಿಸಿ
ಹೊರ ಬಂದು ಗಾಳಿಗೆ ಮೈಯೊಡ್ಡುತ್ತೇನೆ
ಬೆನ್ನು ಸವರಿದ ಗಾಳಿ, ಗಂಧವನ್ನೊಯ್ಯುತ್ತದೆ.
ಒಂದಲ್ಲ ಒಂದು ದಿನ ನಿಮಗೂ ಹೀಗೇ ಆಗಿರುತ್ತದೆ,
ಆದರದನ್ನು ನೀವು ಮರೆತಿದ್ದೀರಿ, ಈಗ ಹೋ ಅನ್ನುತ್ತ
ನಿಮ್ಮ ಅನುಭವವೇ ಇನ್ನೂ ಮಾಗಿತ್ತು ಅನ್ನುತ್ತಿದ್ದೀರಿ.
ಜೀವನ, ಪ್ರೀತಿ, ವಿಷಾದ, ರಗಳೆ, ಯುದ್ಧ, ಜಂಜಾಟ
ಎಲ್ಲರವೂ ಹೀಗೆ, ಎಲ್ಲೋ ಕೊಂಚ ಏರುಪೇರು.
ಅಪರೂಪಕ್ಕೆ ಎಲ್ಲೋ ಒಬ್ಬ ಎದ್ದು ಬುದ್ಧನಾಗುತ್ತಾನೆ.






ಕವಿತೆ ಖುಷಿ,ವಿಷಾದ ಮತ್ತು ಚಿಂತನೆಗೆ ಹಚ್ಚುವ ಪರಿ ಅನನ್ಯ