ಜತೆಗಿರುವನು ಚಂದಿರ..

ದುರಂತ ಕಂಡ ವಾಯುವಿಹಾರ

ಒಂದು ತಿಳಿಯಾದ ಸಂಜೆಯಲ್ಲಿ ದಂಪತಿಗಳಿಬ್ಬರು ಖುಷಿಯಿಂದ, ಚೇತೋಹಾರಿಯಾಗಿ ವಿಹಾರಕ್ಕೆ ಹೊರಟರು. ಸಣ್ಣ ಸಣ್ಣ ರಸ್ತೆಗಳನ್ನು ದಾಟುತ್ತ, ಬ್ಯುಸಿ ಇರುವ ನಗರದ ರಸ್ತೆಗಳಲ್ಲಿ ನಡೆಯುತ್ತಾ ಹೋಗುತ್ತಿದ್ದವರ ನಡುವೆ ಹೀಗೊಂದು ಸಂಭಾಷಣೆ ನಡೆಯಿತು;

‘ನಾನು ಈ ಊರಿಗೆ ಬಂದ ಆರಂಭದ ದಿನಗಳಲ್ಲಿ‌ ಇದೇ ರಸ್ತೆಯಲ್ಲಿ ವಾಕಿಂಗ್ ಬರುತ್ತಿದ್ದೆ’ ಎಂದ ಗಂಡ.

‘ಹೌದಾ ? ಆ ದಿನಗಳೇ ಚೆನ್ನಾಗಿದ್ದವೇನೋ ಅಲ್ವೇ ? ನೀನೊಬ್ಬನೇ ಬರುತ್ತಿದ್ದೆಯೇನೋ ‘ ಎಂದಳು ಹೆಂಡತಿ.

‘ಹೌದು‌. ನನ್ನ ಜೊತೆ ಮುಂದೊಂದಿನ ಯಾರು ವಾಕಿಂಗ್ ಗೆ ಬರಬಹುದು ಎಂದು ಯೋಚಿಸುತ್ತಲೇ ಇರುತ್ತಿದ್ದೆ’

‘ಓಹೋ ! ಯಾರಾದರೂ ಬೇರೆ ಇದ್ದರೇನೋ ಮನಸ್ಸಲ್ಲಿ ಅಲ್ವಾ ?’ ಎಂದು ಕೊಂಕು ತಗೆದಳಾಕೆ.

ಅವನು ಏನೂ ಹೇಳಲಿಲ್ಲ. ಅವಳೇ ಮುಂದುವರಿಸಿದಳು. ‘ನಾನೂ ನಮ್ಮ ನಗರದ ರಸ್ತೆಗಳಲ್ಲಿ ವಾಕಿಂಗ್ ಹೋಗುತ್ತಿದ್ದೆ’

‘ಓಹೋ ! ಯಾರಾದರೂ ಬೇರೆ ಇದ್ದರೇನೋ ಮನಸ್ಸಲ್ಲಿ ಅಲ್ವಾ ?’ ಎಂದು ಆಕೆಯ ಮಾತನ್ನೇ ನಕಲು ಮಾಡಿದನಾತ

ಅವಳೂ ಏನೂ ಮಾತನಾಡಲಿಲ್ಲ. ಕೆಲ ಹೊತ್ತು ಹಾಗೇ ನಡೆದರು. ಸರ್ಕಲ್ ಬಳಿ ಬರುವಷ್ಟರಲ್ಲಿ ಅವನು ಮತ್ತೆ ಮೌನ ಮುರಿದ.

‘ಪಾನಿ ಪೂರಿ ತಿನ್ನೋಣವಾ ?’

‘ಇಲ್ಲ. ನನಗೆ ದೋಸೆ ತಿನ್ಬೇಕು ಅನ್ನಿಸ್ತಿದೆ’

‘ಸರಿ.‌ ಮುಂದೆ ಹೋಟೆಲ್ ಇದ್ಯಲ್ಲ ಮಸಾಲೆ ದೋಸೆ ತಿನ್ನೋಣ’

‘ಬೇಡ. ನಾನು ರವಾ ದೋಸೆ ತಿನ್ಬೇಕು. ನೀನ್ ಬೇಕಿದ್ರೆ ಮಸಾಲೆ‌ ದೋಸೆ ತಿನ್ಕೋ ‘ ಎಂದು ಕೋಪದಲ್ಲೇ ಹೇಳಿದಳಾಕೆ.

ಮತ್ತೆ ಮೌನದ ನಡಿಗೆ…

ಹೋಟೆಲ್ ಬಂತು. ಒಂದು ರವಾದೋಸೆ ಮತ್ತೊಂದು ಮಸಾಲೆ ದೋಸೆಯ ಬಗ್ಗೆ ಗಂಡ ಹೆಂಡತಿ ಎಷ್ಟು ತಾನೆ ಮಾತನಾಡಿಯಾರು ?

ಬಿಲ್ ಕೊಟ್ಟು ಹೊರ ಬಂದಮೇಲೆ ಆಕೆ ಅವನ ಕೈ ಹಿಡಿದು ಹೇಳಿದಳು, ‘ನೀನು ಪಾನಿ ಪೂರಿಯನ್ನೇ ತಿನ್ನೋಣ ಎಂದು ಏಕೆ ಹಠ ಹಿಡಿಯಲಿಲ್ಲ. ಅಷ್ಟು ಬೇಗ ನನಗಾಗಿ ನಿನ್ನ ಆಯ್ಕೆಯನ್ನು ಬದಲಿಸಿಕೊಂಡಿದ್ದೇಕೆ?’

ಅವನು ನಗುತ್ತ ಹೇಳಿದ, ‘ಮದುವೆಗೆ ಮುಂಚೆ ವಾಕಿಂಗ್ ಬಂದಾಗ ನಾನು ಪಾನಿಪೂರಿಯನ್ನೇ ತಿನ್ನುತ್ತಿದ್ದೆ. ಈಗ ನನಗೆ ..

ಅವಳು ನಕ್ಕಳು …

ವಾಪಾಸ್ಸಾಗುವ ಹಾದಿಯಲ್ಲಿ ಆಗಸದಲ್ಲಿ ಚಂದಿರ ಮೂಡಿದ್ದ. ಯಾವುದೋ ಸಿಟಿ ಬಸ್ ಸ್ಟಾಪ್ ನಲ್ಲಿ ಇಬ್ಬರೂ ಕೂತರು. ಆಗಸ ನೋಡಲು ಹಾತೊರೆದ ಅವಳಿಗೆ ಗಗನಚುಂಬಿ ಕಟ್ಟಡವೊಂದು ಅಡ್ಡ ಬಂತು.

ಹೌದು ಅದು ಅಡ್ಡ ಬಂದದ್ದು ನಿಜ.

‘ಅಲ್ಲಿ ನೋಡು. ಆ ಚಂದಿರ ಹೇಗೆ ನಗ್ತಿದಾನೆ.’ ಎಂದು ರೊಮ್ಯಾಂಟಿಕ್ ಆಗಿ ಹೇಳಿದಳಾಕೆ

‘ಅಲ್ಲಿಗೆ ಕರೆದೊಯ್ಯಲೇ ನಿನ್ನ ?’ ಎಂದು ಪ್ರಶ್ನೆಯಾದ ಆತ.

ಅದಕ್ಕವಳು, ‘ಚಂದಿರನಲ್ಲಿಗೆ ಬೇಡ. ಅದೇ ನೇರದಲ್ಲಿರೋ ಆ ಅಪಾರ್ಟ್ಮೆಂಟ್ ಬಳಿ ಒಂದು ಜಾಹೀರಾತು ಬೋರ್ಡ್ ಹಾಕಿದಾರಲ್ಲ. ಅಲ್ಲಿಗೆ ಕರ್ಕೊಂಡ್ ಹೋಗ್ತೀಯಾ ?’

ಅವನು ಆ ಬೋರ್ಡ್ ನ್ನು ದಿಟ್ಟಿಸಿದ.

‘Own a house in the top floor and be a neighbor to the Moon ‘
‘ಕೊನೆಯ ಮಹಡಿಯಲ್ಲಿ ಮನೆ ಖರೀದಿಸಿ, ಚಂದ್ರನೊಂದಿಗೆ ಸ್ನೇಹ ಸಂಪಾದಿಸಿ’

ಎರೆಡೆರಡು ಬಾರಿ ಜೋರಾಗಿ ಅದನ್ನೇ ಓದಿದವನಿಗೆ ಆಕೆ ಮತ್ತೆ ಕೇಳಿದಳು.
‘ಹೇಳು. ನನಗೆ ಅಲ್ಲಿರಬೇಕು, ಆ ಮನೆಯಲ್ಲಿರಬೇಕು ಚಂದ್ರನ ಸ್ನೇಹ ಸಂಪಾದಿಸಬೇಕೆಂಬ ಆಸೆ. ಕರ್ಕೋಂಡ್ ಹೋಗ್ತೀಯಾ ಅಲ್ಲಿಗೆ ?’

ಅವನು ತಕ್ಷಣ ರೊಮ್ಯಾಂಟಿಕ್ ಮೂಡ್ ನಿಂದ ಹೊರಬಂದು, ‘ ಕರ್ಕೋಂಡ್ ಹೋಗೋ‌ ಆಸೆ ಅಂತೂ ಇದೆ. ಆದರೆ ಸುಳ್ಳು ಭರವಸೆ ಕೊಡೋದ್ ಹೇಗೆ ಅಂತ ಯೋಚನೆ‌ ಮಾಡ್ತಿದ್ದೀನಿ ‘ ಅಂದ.

ಅವಳಿಗದು ಇಷ್ಟವಾಗಲಿಲ್ಲ.
‘ನಮ್ ಹಣೇಲಿ ಅದ್ ಬರ್ದಿಲ್ವೇನೋ. ನಂದೇ ತಪ್ಪು ಹಾಸಿಗೆ ಇದ್ದಷ್ಟು ಕಾಲು ಚಾಚ್ಬೇಕು ಅನ್ನೋದು ನನಗೆ ಗೊತ್ತಿರಬೇಕು’ ಎಂದು ಖಾರವಾಗಿ ನುಡಿದಳು.

ಅವನು ಮಾತಾಡಲಿಲ್ಲ…

‘ನಾನು ನಮ್ಮೂರಿನ ರಸ್ತೆಗಳಲ್ಲಿ ವಾಕಿಂಗ್ ಹೋಗುವಾಗ ಇಂತಹ ಕಟ್ಟಡಕ್ಕೆ ಕರೆದೊಯ್ಯುವವನೇ ಸಿಗುತ್ತಾನೆ ಎಂದುಕೊಂಡಿದ್ದೆ’ ಎಂದು ಮುಂದುವರೆಸಿದಳವಳು.

‘ಆಗಿನ್ನೂ ಈ ನಗರದಲ್ಲಿ ಇಂತಹ ಕಟ್ಟಡಗಳು ತಲೆಯೆತ್ತಿರಲಿಲ್ಲ. ನನ್ನ ಮನಸ್ಸಲ್ಲಿ ಕೂಡ’ ಎಂದು ಅವನು ಮೆಲುದನಿಯಲ್ಲಿ ಹೇಳಿದ.

‘ಅದು ಹಾಗೆಯೇ, ಎಲ್ಲರೂ ಓಡ್ತಿರುವಾಗ ನಾವು ಮಲಗಿದ್ದರೆ ಹಾಗೇ ಆಗೋದು’ ಎಂದು ಚುಚ್ಚಿದಳಾಕೆ.

ಅವನು ಮೌನವನ್ನು ಆಹ್ವಾನಿಸಿದ. ಅದರಲ್ಲೇ ಉಳಿದ.

‘ಜೊತೆಯಲ್ಲಿರುವವರನ್ನ ನೋಡಿಯಾದರೂ ಹಠ ಹುಟ್ಟಬೇಕು. ಅದೂ ಇಲ್ಲದ ಮನುಷ್ಯ ಅಂಜುಬುರುಕ ಅಲ್ಲದೆ ಇನ್ನೇನು?’ ಹೀಗೆ ಹೇಳಿ ಅವನಲ್ಲಿನ ಛಲವನ್ನು ಉದ್ದೀಪನಗೊಳಿಸುತ್ತಿದ್ದೇನೆಂದು ಅವಳು ಭಾವಿಸಿದಳು.

ಆದರೆ ಅವನು ಅವಮಾನದಿಂದ ಜರ್ಜರಿತನಾದ‌. ಅಡುಗೆ ಎಣ್ಣೆ ಖಾಲಿ ಆಗಿದೆ ಎಂದು ಅವಳು ಮನೆಯಿಂದ ಹೊರಡುವಾಗಲೇ ಹೇಳಿದ್ದರಿಂದ ಒಂದು ಅಂಗಡಿಯ ಬಳಿ ಅದನ್ನು ತರಲೆಂದು ಹೋದ. ಆಕೆ ಅವನಿಗಾಗಿ ಕಾಯಲಿಲ್ಲ. ಸರಸರನೆ ನಡೆದು ಮನೆ ಸೇರಿದ್ದಳು. ಅವನು ಭಾರವಾದ ಹೆಜ್ಜೆಗಳನ್ನಿಡುತ್ತಾ ಮನೆಗೆ ಬಂದ. ಮತ್ತೆ ಎಲ್ಲವೂ ಮಾಮೂಲಿನಂತೆಯೇ ನಡೆಯಿತು.

ಅವಳಿಗಾಗಿ ಪಾನಿಪೂರಿ ಬದಲು ದೋಸೆ ತಿಂದವನ ಮುಗ್ದತೆ ಮತ್ತು ತನಗಾಗಿ ತನ್ನ ಆಯ್ಕೆಯನ್ನೂ ಬದಲಿಸಿಕೊಂಡವನ ಬಗ್ಗೆ ಅವಳಲ್ಲಿ ಆ ಸಂಜೆಯಲ್ಲಿ ಹುಟ್ಟಿದ್ದ ಹೆಮ್ಮೆ ಇವೆರೆಡೂ ಅಷ್ಟಾಗಿ ಪ್ರಾಮುಖ್ಯತೆ ಪಡೆಯಲಿಲ್ಲ. ಕೆಲವೊಮ್ಮೆ ರಸ್ತೆಗಳು ಹೋಗುವಾಗ ಕೊಟ್ಟ ಆನಂದವನ್ನು ಹಿಂತಿರುಗುವಾಗ ನೀಡುವುದಿಲ್ಲ.

ರಾತ್ರಿ ಪಕ್ಕದಲ್ಲಿ ಮಲಗಿದವಳ ಮನಸ್ಸು ಕದಡಿರುವುದನ್ನು ಸ್ಪಷ್ಟವಾಗಿ ಗ್ರಹಿಸಿದ. ಚಂದ್ರನ ಸ್ನೇಹ ಬಯಸಿದ ಅವಳದ್ದಾದರೂ ಏನು ತಪ್ಪಿದೆ ಪಾಪ? ಎಂದು ಸ್ವಯಂ ಸಮಜಾಯಿಷಿ ಕೊಟ್ಟುಕೊಂಡ. ಅವಳಲ್ಲಿ ಏನೂ ಹೇಳಿಕೊಳ್ಳದೆ ಆ ನಿಟ್ಟಿನಲ್ಲಿ ಕಾರ್ಯಪ್ರವೃತ್ತನಾದ. ಅವಳ ಮಾತುಗಳಲ್ಲೇ ಹೇಳೋದಾದರೆ ಮಲಗಿದ್ದವ ಎದ್ದು ಓಡುತ್ತಿದ್ದವರ ಜೊತೆಯೇ ಓಡತೊಡಗಿದ. ಆಗ “ಆ ಚಂದ್ರ ” ನನ್ನು ಪಡೆಯುವುದು ಅವನಿಗೂ ಸಾಧ್ಯವಾಯಿತು. ಅವಳಿಗೋ ಖುಷಿಯೋ ಖುಷಿ. ಅವಳ ಖುಷಿಯಲ್ಲಿ ಅವನೂ ಖುಷಿಪಟ್ಟ.

ಆ ಖುಷಿಯನ್ನು ಗಳಿಸುವಷ್ಟರಲ್ಲಿ ಅವನು ವಿಪರೀತ ಆಯಾಸಗೊಂಡಿದ್ದ. ದುಡಿಮೆ, ಆನಂದದ ಜೊತೆ ಆಯಾಸವನ್ನೂ ಬಳುವಳಿಯಾಗಿಸಿತ್ತು. ಅವರು ಚಂದ್ರನ ನೆರೆಹೊರೆಯವರಾಗಿ ಆ ಕಟ್ಟಡದಲ್ಲಿ ವಾಸಿಸತೊಡಗಿದ ಬೆರಳೆಣಿಕೆಯ ದಿನಗಳಲ್ಲಿ, ಆಯಾಸಗೊಂಡಿದ್ದ ಅವನು ಅವಸಾನ ಹೊಂದಿಬಿಟ್ಟ. ಅವನ ಅಗಲಿಕೆ ಅವಳಲ್ಲಿಯೂ ಪಶ್ಚಾತ್ತಾಪ ತಂದಿತು.

* * * *

ಈಗ ಅವಳು ಪ್ರತಿದಿನ ಸಂಜೆ ಆ ಅಪಾರ್ಟ್ಮೆಂಟ್ ನ ಬಾಲ್ಕನಿಗೆ ಬಂದು ನೋಡುತ್ತಾಳೆ. ಸರ್ಕಲ್ ಬಳಿಯ ಪಾನಿಪೂರಿಯ ಗಾಡಿ ಮತ್ತು ದೋಸೆ ಹೋಟೆಲ್ ಎರಡನ್ನೂ ನೋಡಿದಾಗ ಅವಳಿಗೆ ‘ಅವನ’ ನೆನಪಾಗುತ್ತದೆ. ಮತ್ತೆ ಅವನು ನಕ್ಷತ್ರವಾಗಿ ಇದನ್ನೆಲ್ಲ ನೋಡುತ್ತಿದ್ದಾನೆ.

ಅವಳು ಚಂದ್ರಲೋಕದಲ್ಲೇ ಇದ್ದರೂ ಅವನು ಮಾತ್ರ ಕೈಗೆಟುಕದ ನಕ್ಷತ್ರವಾಗಿರೋದನ್ನು ನೋಡಿದಾಗ ಅದೊಂದು ಸಂಜೆ ಅವರಿಬ್ಬರೂ ವಾಯುವಿಹಾರಕ್ಕೆ ಹೋಗದಿದ್ದರೆ ಈ ದುರಂತ ನಡೆಯುತ್ತಿರಲಿಲ್ಲವೇನೋ ಎಂದು ನಾನು ಅಭಿಪ್ರಾಯಪಡುತ್ತೇನೆ

‍ಲೇಖಕರು avadhi

March 19, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

6 ಪ್ರತಿಕ್ರಿಯೆಗಳು

  1. Sudha Hegde

    ಎಷ್ಟು ಚೆಂದವಾಗಿ ಹೇಳಿದಿರಿ. ಮನಸ್ಸಿಗಿಳಿಯಿತು.

    ಪ್ರತಿಕ್ರಿಯೆ
  2. ಈಶ್ವರಗೌಡ ಪಾಟೀಲ

    ಆ ಸಂಜೆ ವಾಯುವಿಹಾರಕ್ಕೆಂದು ತೆರಳಿದ್ದು ನೆಪ ಮಾತ್ರವೇನೊ? ಕೆಲವು ಮನಸ್ಥಿತಿಗಳು ಯಾವತ್ತಿಗೂ ಹಾಗೆಯೇ ಇರುತ್ತವೆ. ಸದಾ ಕೊಂಕು, ಪೊಗರು, ಅಹಂಭರಿತ ಮಾತು, ಜೊತೆಗಿರುವವರ ಪ್ರಯತ್ನಗಳನ್ನು ಯಕಶ್ಚಿತವಾಗಿ ಕಾಣುವ, ಹೀಯಾಳಿಕೆ ಧಾಟಿಯ ವ್ಯಕ್ತಿತ್ವಗಳು ಇಂತಹ ಅವಸಾನವಷ್ಟೇ ಅಲ್ಲ ಕೆಲವೊಮ್ಮೆ ಅಧೋಪತನಕ್ಕೂ ಕಾರಣವಾಗುತ್ತವೆ. ಬದುಕಿನ ಒಂದು ಹಂತದಲ್ಲಿ ಎಲ್ಲೋ ಕೆಲವರು ಇನ್ನೂ ಮಲಗಿರುತ್ತಾರೇನೊ ನಿಜ, ಆದರೆ ಎಲ್ಲರೂ ಮಲಗಿರಲಾರರು. ಮಲಗಿ ಎದ್ದೇಳುವ ಮನ್ವಂತರ ಕಾಲದಲ್ಲಿ ಉತ್ತೇಜಿಸುತ್ತ, ಬೆಂಬಲಿಸುತ್ತ, ನಿಂಜೊತೆ ನಾನಿದೀನಿ ಕಣೋ ಅಂತಾ ಹೇಳೊ ಮನೋಸ್ಥಿತಿಯ ಸಾಂಗತ್ಯ ದೊರೆತರೆ ಮಲಗಿದ್ದವರೂ ಎದ್ದು ನಾಗಾಲೋಟದಲ್ಲಿ ಓಡತೊಡಗುತ್ತಾರೆ. ಬಹುಶಃ ಇತ್ತೀಚಿನ ದಿನಗಳಲ್ಲಿ ಪ್ರಪಂಚ ಇಂತಹ ಅನುಬಂಧಗಳನ್ನು ಕಳೆದುಕೊಳ್ಳುತ್ತಿದೆ.

    ಪ್ರತಿಕ್ರಿಯೆ
  3. ಎಸ್.ಕಲಾಲ್

    ತುಂಬಾ ಸುಂದರವಾಗಿದೆ ಮನ ಮುಟ್ಟಿತು

    ಪ್ರತಿಕ್ರಿಯೆ
  4. Keshava murthy

    Excellent transformation a evening walk and life’s sandhyakaala in between a life’s race.. Great read best wishes.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: