ಕುಂಟಿನಿ ವಿವರಿಸುವ ಜಗತ್ತು ನಾವು ಕಾಣದ್ದು…

ಜೋಗಿ

ಒಂದು ವಾಕ್ಯ ಎಷ್ಟೆಲ್ಲವನ್ನು ಹೇಳಬಹುದು? ಸುಮ್ಮನೆ ನೋಡೋಣ: ಗೋಪಾಲಕೃಷ್ಣ ಸೋಮವಾರ ಬೆಳಗ್ಗೆ ಉಪ್ಪಿನಂಗಡಿಯಿಂದ ಪುತ್ತೂರಿಗೆ ಹೋದ. ಗೋಪಾಲಕೃಷ್ಣ ಯಾರು ಎನ್ನುವುದು ಗೊತ್ತಿದ್ದವರಿಗೆ ಈ ಸಾಲು ಒಂದು ರೀತಿ ಅರ್ಥವಾಗುತ್ತದೆ. ಅವನ ಉದ್ಯೋಗ, ಅವನು ಪುತ್ತೂರಿಗೆ ಯಾಕೆ ಹೋಗುತ್ತಾನೆ ಎಂಬುದು ತಿಳಿದಿದ್ದರೆ ಈ ಸಾಲಿನ ಅರ್ಥ ಮತ್ತಷ್ಟು ನಿಚ್ಚಳವಾಗುತ್ತದೆ.

ಗೋಪಾಲಕೃಷ್ಣ ಯಾರು ಅನ್ನುವುದು ಗೊತ್ತಿಲ್ಲದವರಿಗೆ ಈ ಸಾಲಿನಲ್ಲಿ ಯಾವ ಸ್ವಾರಸ್ಯವೂ ಇಲ್ಲ. ಈ ವಾಕ್ಯದಲ್ಲಿ ಆಸಕ್ತಿ ಹುಟ್ಟಬೇಕಿದ್ದರೆ ಅದು ಬೆಳೆಯಬೇಕು. ಗೋಪಾಲಕೃಷ್ಣ ಯಾಕೆ ಹೋದ, ಏನು ಮಾಡಿದ ಎಂಬಿತ್ಯಾದಿ ಪ್ರಶ್ನೆಗಳಿಗೆ ಅಲ್ಲಿ ಉತ್ತರ ಸಿಗಬೇಕು. ಆ ಉತ್ತರ ಸಾಮಾನ್ಯದ್ದಾಗಿರಬಾರದು.

ಈಗ ಈ ಕೆಳಗಿನ ವಾಕ್ಯ ನೋಡಿ:
ಒಂದು ಕತೆಗೆ ಎಷ್ಟು ಮಂದಿ ಪಾತ್ರಧಾರಿಗಳು ಬೇಕು ಎಂದು ನಾನು ಕತೆಗಾರನ ಮನೆಗೆ ಹೋದಾಗ ಮನೆಬಾಗಿಲು ಹಾಕಿತ್ತು. ಈ ವಾಕ್ಯದಲ್ಲಿ ಕತೆಗಾರ ಯಾರೆಂದು ಗೊತ್ತಿಲ್ಲ, ಕೇಳಲು ಹೋದವನು ಯಾರೆಂದು ಗೊತ್ತಿಲ್ಲ, ಯಾವ ಕತೆ ಎಂಬುದೂ ಗೊತ್ತಿಲ್ಲ. ಹಾಗಿದ್ದರೂ ಈ ಸಾಲು ಮತ್ತೇನನ್ನೋ ಹೇಳುತ್ತಿರುವಂತೆ ಅನ್ನಿಸುತ್ತದೆ.

ಥಟ್ಟನೆ ಮನಸ್ಸಿನಲ್ಲಿ ಒಂದು ಕತೆಗೆ ಎಷ್ಟು ಪಾತ್ರಧಾರಿಗಳು ಬೇಕು ಎಂಬ ಪ್ರಶ್ನೆ ಮೊಳೆಯುತ್ತದೆ. ಅಷ್ಟಾಗುತ್ತಿದ್ದಂತೆ ಓದುತ್ತಿರುವವನೂ ಒಬ್ಬ ಪಾತ್ರಧಾರಿಯಾಗುತ್ತಾನೆ. ಅವನೇ ಕತೆಗಾರನೂ ಆಗುತ್ತಾನೆ. ಆ ಪ್ರಶ್ನೆಯ ಬೆನ್ನುಹತ್ತುತ್ತಾ ಹೋಗುತ್ತಾನೆ. ಕೊನೆಯಲ್ಲಿ ಕತೆಗಾರ ಕೊಡುವ ಉತ್ತರವೂ ಕತೆಗಾರನಾಗಿ ಬದಲಾದ ಓದುಗನ ಮನಸ್ಸಲ್ಲಿರುವ ಉತ್ತರವೂ ಒಂದೇ ಆಗುತ್ತದೋ ಇಲ್ಲವೋ ಎಂಬ ಸಂದಿಗ್ಧವೇ ಕತೆಯನ್ನು ಬೆಳೆಸುತ್ತದೆ.

ಗೋಪಾಲಕೃಷ್ಣ ಕುಂಟಿನಿಯ ಪ್ರತಿಯೊಂದು ಕತೆಯೂ ಇಂಥ ಒಳಸೆಲೆಗಳನ್ನು ಹೊಂದಿದೆ. ಈ ಜಗತ್ತಿನ ಕತೆಯನ್ನು ಮತ್ತೊಂದು ಜಗತ್ತಿನ ಕತೆಯೆಂಬಂತೆ ಹೇಳುವ ಕಲೆ ಕುಂಟಿನಿಗೆ ಸಿದ್ಧಿಸಿದೆ. ಕುಂಟಿನಿ ವಿವರಿಸುವ ಜಗತ್ತು ನಾವು ಕಾಣದ್ದು. ಅಲ್ಲಿ ಮತ್ತೆ ಮತ್ತೆ ಎದುರಾಗುವ ರಾಜನಾಗಲೀ, ರಾಣಿಯಾಗಲೀ, ಸುಂದರಿಯಾಗಲೀ ಒಂದೊಂದು ಸಲ ಒಂದೊಂದು ಥರ ಕಾಣಿಸುತ್ತಾರೆ. ಅವರ ಹುಡುಕಾಟ ನಮ್ಮದೂ ಆಗುತ್ತದೆ. ಈ ಜಗದ ಶುಷ್ಕ ಜಂಜಡಗಳನ್ನೆಲ್ಲ ತೊರೆದು ನಡೆದ ಪಾತ್ರವೊಂದು ತನಗೆ ತಾನೇ ಕೇಳಿಕೊಳ್ಳುವ ಪ್ರಶ್ನೆಗಳಂತೆ ಅವರ ಕತೆ ಬೆಳೆಯುತ್ತಾ ಹೋಗುತ್ತದೆ.

ಮಾರಾಪು ಎಂಬ ಸಂಕಲನದ ಕೊನೆಯ ಕತೆಯಲ್ಲಿ ಕುಂಟಿನಿಯ ಕಥಾಜಗತ್ತಿನ ಕೀಲಿಕೈ ಇದೆಯೆಂದು ನನಗೆ ಅನ್ನಿಸಿತು. ಮಾರಾಪು ಅಂದರೆ ತಲೆಯಲ್ಲಿ ಹೊತ್ತ ಗಂಟು. ಪ್ರತಿಯೊಬ್ಬರು ಅಂಥದ್ದೊಂದು ಹೊರೆಯನ್ನು ಹೊತ್ತವರೇ. ಅದನ್ನು ಇಳಿಸಲಿಕ್ಕೆ ಆಗದು, ವರ್ಗಾಯಿಸಲಿಕ್ಕೂ ಆಗದು. ಒಮ್ಮೆ ಇಳಿಸಿದರೆ ಮತ್ತೆ ಯಾವಾಗ ಆ ಹೊರೆಯನ್ನು ತಲೆಗೇರಿಸಿಕೊಂಡೇವೋ ಎಂದು ಆತಂಕದಿಂದ ಕಾಯುವಂತೆ ಆಗುತ್ತದೆ.

ಮನುಷ್ಯ ಮೂಲತಃ ಹೊರಲು ಬಯಸುವವನು. ಮನಸ್ಸು ಮತ್ತು ತಲೆ ಖಾಲಿಯಿದ್ದರೆ ಭಯವಾಗುತ್ತದೆ. ಅದಕ್ಕೇ ಶೂನ್ಯ ಸಂಪಾದನೆಯೆಂಬುದು ಸುಲಭಕ್ಕೆ ಸಾಧ್ಯವಾಗದ ಸಿದ್ಧಿ. ಸೂರಿ ಬರೆದ ಶನಿಕಾಟದ ಅಂಗಡಿ ಕತೆಯಲ್ಲಿ ಒಬ್ಬರು ತಮ್ಮ ಕಷ್ಟಗಳನ್ನು ಮತ್ತೊಬ್ಬರಿಗೆ ಕೊಟ್ಟು, ಅವರ ಕಷ್ಟಗಳನ್ನು ಇವರು ತೆಗೆದುಕೊಳ್ಳುವ ಪ್ರಸಂಗವಿತ್ತು. ಮಾರಾಪು ಎಂಬುದು ನೆತ್ತಿಯ ಮೇಲಿನ ಚಕ್ರದಂತೆ. ತಿರುಗಿದರೆ ನೋವು, ತಿರುಗದೇ ಹೋದರೆ ಭಯ.

ಕುಂಟಿನಿ ದೈನಿಕವನ್ನು ಮೀರಿದ ಕತೆಗಾರ. ಗಂಡು-ಹೆಣ್ಣು-ಸಂಬಂಧ-ವಿರಹ-ಯಾತನೆ-ಪುನರ್ಮಿಲನದಂಥ ವಸ್ತುವಿನಲ್ಲಾಗಲೀ, ಪುನರಾವರ್ತನೆಯಾಗುವ ಘಟನಾವಳಿಗಳಲ್ಲಾಗಲೀ ಅವರಿಗೆ ಆಸಕ್ತಿಯಿಲ್ಲ. ಮಾಯಾವಾಸ್ತವ ಎಂದು ಕರೆಯಬಹುದಾದ, ಆದರೆ ಮಾಯಾ ವಾಸ್ತವ ಅಲ್ಲದ ಒಂದು ಲೀಲಾವಿನೋದ ಅವರ ಕತೆಗಳಲ್ಲಿ ಮತ್ತೆ ಮತ್ತೆ ಎದುರಾಗುತ್ತದೆ. ಕುಂಟಿನಿ ಕತೆ ಹೇಳುವುದು ಬುದ್ಧಿಯಿಂದಲೇ ಹೊರತು ಮನಸ್ಸಿನಿಂದ ಅಲ್ಲ ಅಂತ ಎಷ್ಟೋ ಸಲ ಅನ್ನಿಸುತ್ತದೆ. ಆದರೆ ಕತೆಗಳು ಕೇಳುವ ಪ್ರಶ್ನೆಗಳಿಗೆ ಬುದ್ಧಿಯಲ್ಲಿ ಉತ್ತರವಿಲ್ಲ, ಉತ್ತರಿಸಬೇಕಾದದ್ದು ಮನಸ್ಸು. ಹೀಗಾಗಿ ಈ ಕತೆಗಳು ಬುದ್ಧಿಯಿಂದ ಭಾವದೆಡೆಗೆ ಚಲಿಸುತ್ತಿರುವಂತೆ ಭಾಸವಾಗುತ್ತವೆ.

ಕೆ. ಪುರುಷ, ನಿಜಗುಣ, ರಾಜಶೇಖರ ರಾಜಾರಾಯ, ಶಂತನು- ಹೀಗೆ ಒಂದೊಂದು ಕತೆಯಲ್ಲಿ ಕುಂಟಿನಿ ಕಾಣಲು ಬಯಸುವ ಒಂದೊಂದು ಮುಖ ಅನಾವರಣಗೊಳ್ಳುತ್ತಾ ಹೋಗುತ್ತದೆ. ತನ್ನ ಕತೆಗಳನ್ನು ಅವರು ವಿಶಿಷ್ಟ ಕನ್ನಡದಲ್ಲಿ ಕಟ್ಟುತ್ತಾ ಹೋಗುತ್ತಾರೆ. ಉದಾಹರಣೆಗೆ ಕಿಬ್ಬೊಸರು, ಕಾಡಾಕಾಡ ತಂಪು, ವಿರಹಿತ- ಮುಂತಾದ ಪದಗಳನ್ನು ಸೃಷ್ಟಿಸುತ್ತಾ ಹೋಗುತ್ತಾರೆ. ಈ ಪದಗಳು ಕುಂಟಿನಿ ಕತೆಬರೆಯುವ ಪರಮವೇಗಕ್ಕೆ ಸೃಷ್ಟಿಯಾದ ಪದಗಳೆಂದೇ ನನ್ನ ಅನಿಸಿಕೆ. ಹೀಗೆ ವಾಕ್ಯಗಳೇ ಹೊಸ ಪದ ಸೃಷ್ಟಿಸುವುದು ಕೂಡ ಪ್ರತಿಭೆಯೇ.

ಇದುವರೆಗಿನ ಕಥನ ಪರಂಪರೆಯನ್ನು ಒತ್ತಟ್ಟಿಗಿಟ್ಟು ಹೊಸ ಹಾದಿಯಲ್ಲಿ ಸಾಗುವುದು ಕತೆಗಾರನಿಗೆ ಬಹುದೊಡ್ಡ ಸವಾಲು. ಹಾಗೆ ಮಾಡುವ ಕತೆಗಾರನಿಗೆ ಪೂರ್ವನಿದರ್ಶನಗಳಿರುವುದಿಲ್ಲ. ಅವನ ನಂತರ ಯಾರೂ ಅಂಥ ಕಠಿಣ ಹಾದಿಯಲ್ಲಿ ಹೆಜ್ಜೆ ಹಾಕುವುದಿಲ್ಲ. ಹೀಗಾಗಿ ಆತ ಏಕಾಂಗಿಯಾಗಿ ನಿಲ್ಲುತ್ತಾನೆ. ಮಾರಾಪು ಕತೆಯಲ್ಲಿ ಏಕಾಂಗಿಯಾಗುವ ಅವನ ಹಾಗೆ! ಆದರೆ ಏಕತಾನತೆಯಲ್ಲಿ ವಿಧಿಲೀಲೆ ಮಾತ್ರ ಮುರಿಯಬಲ್ಲದು.

ಕುಂಟಿನಿಯ ಕತೆಗಳು ವಿಧಿಲೀಲೆಯಂತೆ ನಮ್ಮನ್ನು ತಾಕುತ್ತವೆ. ಮುಖಪುಟದಲ್ಲಿ ಸುಧಾಕರ ದರ್ಬೆ ರಚಿಸಿರುವ ಚಿತ್ರದಲ್ಲಿ ಮಾರಾಪಿನ ಮೇಲೆ ಸೂರ್ಯನಿದ್ದಾನೆ. ಸೂರ್ಯನನ್ನು ಕಾಲವೆಂಬ ಹಕ್ಕಿ ಕುಕ್ಕುತ್ತಿದೆ. ಇಡೀ ಸಂಕಲನಕ್ಕೆ ಅದು ಬಹು ಸೊಗಸಾದ ರೂಪಕವೂ ಆಗಿದೆ.

‍ಲೇಖಕರು Admin

January 8, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: