ಜಾತ್ರೆ ಮುಗಿಯಿತು.. ಮೆರವಣಿಗೆ ನಿಂತಿಲ್ಲ…

ಡಾ ಲಕ್ಷ್ಮೀಶಂಕರ ಜೋಶಿ

ಬೆಳಗಿನ ಆರೂವರೆಗೆ ಫೋನು. “ಏನೇನಾತು?” ಕುತೂಹಲದ ಪ್ರಶ್ನೆ ಬಾಲ್ಯ ಸ್ನೇಹಿತೆ ಗೆಳತಿ ವಿಜಯಾಳಿಂದ. ಧಾರವಾಡದಿಂದ ಅವಳಿಗೆ ಜಾತ್ರೆಗೆ ಬರಲಾಗಲಿಲ್ಲ. ನಾ ಹೋಗಿದ್ದೆ. ಮಾತು ಮುಗಿಯಲು ತಾಸಾಯಿತು. ಮಳೆ ನಿಂತರೂ ಮಳೆ ಹನಿ ಬಿಡದು ಎನ್ನುವ ಹಾಗೆ… ಜಾತ್ರೆ ಮುಗಿದು ಮನೆಗೆ ಮರಳಿದರೂ ಏಕಾಂತದಲ್ಲಿ ಅದೇ ಹರವಿದ ಚಿತ್ರಗಳು.

ಹೌದು ಗರಡಿ ಮನೆಯ ಕಟ್ಟೆಯ ಮೇಲಿನ ರಾಮನಗೌಡ ಕೂತಿದ್ದ. ಹರೆಯಕ್ಕೆ ಬಂದ ಒಂದೇ ಒಂದು ಮಗನನ್ನು ಕಳೆದುಕೊಂಡ ದುಃಖ. ಅವನಿಗಷ್ಟೇ ಅಲ್ಲ. ಇಡೀ ಊರವರು ಅವನ ದುಃಖದಲ್ಲಿ ಪಾಲುದಾರರು. ಒಂದಾನೊಂದು ಕಾಲದ ಹಳೆಯ ಹುಲಿಯನ್ನು ಈ ರೀತಿ ನೋಡಲು ಮನ ಒದ್ದಾಡಿ ಬಿಡ್ತದೆ. ಹೇಗಿದ್ದವ ಹೇಗಾದ?ಮಾತನಾಡಿಸಿದರೂ ಅವನಿಗೆ ಗುರುತು ಸಿಗಲಿಲ್ಲ. ಬರೀ ಕಣ್ಣೀರು. ನನ್ನ ಮಾತಿಗೆ ಸುತ್ತ ಕೂತವರ ಕಣ್ಣಲ್ಲೂ ನೀರ ಪಸೆ.ನಮ್ಮ ಮನೆಯ ಹಿಂದಿನ ಮನೆ ಅವರದು.. ಮಾಳಿಗೆ ಒಂದೇ. ಎಷ್ಟು ಓಡಾಟ, ಗದ್ದಲ ನಂದು.

ನಾನು ಸಣ್ಣವಳಿದ್ದಾಗ ಅವರ ಮನೆಯ ಕನ್ನಡಿ ಹಚ್ಚಿದ ಮಲಗುವ ಮಂಚದ ಮೇಲೆ ಕೂತು ಅಜ್ಜನ ಜತೆ ಹಾಲು ಕುಡಿದ ನೆನಪು.ತಂದೆಯವರು, ಅವರ ಖಾಸಾ ಗೆಳೆಯಂದಿರು ಕೂಡಿ ಜಾತ್ರೆಗೆ ಹೋಗುತ್ತಿದ್ದರು. ರಾಮನಗೌಡನ ತಂದೆ ಹಣಮಂತಗೌಡರು ನಮ್ಮ ತಂದೆ ಕೂಡಿಯೇ ಜಾತ್ರೆಗೆ ಹೋಗುವವರು. “ತಪ್ಪಿಸಿಗೊಂಡಾಳು. ಆಕಿ ಕೈ ಬಿಡಬ್ಯಾಡ ರಾಮನಗೌಡ” ಅಂತ ನಮ್ಮ ತಂದೆ ಹೇಳುತ್ತಿದ್ದರು. ನಾನು ನಮ್ಮಣ್ಣ ಅವನ ಕೈ ಹಿಡಿದು ಬನಶಂಕರಿ ಜಾತ್ರೆ ಸುತ್ತಿದ ನೆನಪು. “ನೋಡ ನಮ್ಮ ಪದರ ಚಪಾತಿ ತಿನ್ನಬೇ. ಅವ್ವಾರಿಗೆ ಹೇಳೂದಿಲ್ಲ ತೊಗೋ ಅನ್ನುವ ಅವನ ಮಾತು ನೆನಪಾಗಿ ಗಂಟಲ ಸೆರೆ ಉಬ್ಬಿತ್ತು ನನಗೆ.

ಆತ ಸುತ್ತಿ ಕೊಟ್ಟ ಸಕ್ಕರಿ ತುಪ್ಪ ಚಪಾತಿ ಎಂದೋ ಕರಗಿರಬಹುದು. ಆದರೆ ಅವರ ಮನೆಯವರೆಲ್ಲರ ಪ್ರೀತಿ ಇಂದಿಗೂ ಹಸಿರು. ವಯಸ್ಸಾಗಿದೆ ಅವನಿಗೆ. ಯಾರೋ ಅವನ ಬೆನ್ನ ಮೇಲೆ ಕೈಯಾಡಿಸ್ತಿದಾರೆ. ಇನ್ನೊಬ್ಬ ಭುಜ ನೀವತಾ ಇದಾನೆ. ಯಾರೋ ಅವನ ಮಾತನ್ನು ಆಲಿಸುವಂತಿದೆ. ಈಶ್ವರ ಗುಡಿಗೆ ಬಿಟ್ಟ ಬಸವಿ ಆಕಳಿಗೆ ಯಾರದೋ ಮನೆ ಆಕಳು ನೆಕ್ಕುತ್ತಿದೆ. ಅವೆರಡೂ ಅನ್ಯೋನ್ಯವಾಗಿ ಒಂದಕ್ಕೊಂದು ಪ್ರೀತಿ ಮಾಡುತ್ತಿವೆ. ಯಾರಿಗೆ ಯಾರೋ ಪುರಂದರ ವಿಠಲ ಇಲ್ಲ ಇಲ್ಲಿ. ಎಲ್ಲರೂ ಎಲ್ಲರಿಗಾಗಿ ಎನ್ನುವ ಆಪ್ತಭಾವ. ಅದೇ ನಮ್ಮೂರಿನ ಘನತೆ.

ಇಂಥ ಸ್ಥಿರ ಚಿತ್ರಗಳು ಊರಿಗೆ ಹೋದಾಗ ಮಾತ್ರ ಸಿಗುತ್ತವೆ. ವರ್ಷದುದ್ದಕ್ಕೂ ಅದರದೇ ಹಳ ಹಳಿಕೆ.. ಹಳೇ ನೆನಪುಗಳು. ಎತ್ತು ಆಕಳುಗಳ ಚದುರಿದ ಚಿತ್ರಗಳ ನೆನಪುಗಳು. ಕಣ್ಣ ತುಂಬೆಲ್ಲ ಚಿತ್ರಗಳೋ ಚಿತ್ರಗಳು. ಶಾಂತ ಮನೆ, ಕಟಿಗೆ ಒಲೆ, ಕರೆದ ಹಾಲು, ಹಣ್ಣು ಹಣ್ಣು ಮೆಣಸಿನಕಾಯಿ, ಬೃಹತ್ ಗಾತ್ರದ ಕುಂಬಳಕಾಯಿಗಳು, ಕಬ್ಬಿನ ಗಳ, ಚೊಳಚಗುಡ್ಡದ ಅಂಬಾಡಿ ಎಲೆ,ಬನಶಂಕರಿಯ ಎಳೆಗಾಯಿಯ ನೀರು. ಭೇಟಿಯಾಗಲು ಬರುವ ವಿನಾಕಾರಣ ಅನನ್ಯ ಪ್ರೀತಿ ಸೂಸುವ ಅಮಾಯಕ ಬಂಧುಗಳು,ಆತ್ಮೀಯರು.

ಒಂದೇ ಎರಡೇ ಎಷ್ಟಂತ ಧೇನಿಸಲಿ? ಹರವಿದ ಚಿತ್ರಗಳನ್ನೆಲ್ಲ ಗಬ ಗಬಾಂತ ತುಂಬಿಕೊಂಡು ಊರ ಹಾದಿಗೂಂಟ ಮೆಲುಕಾಡಿಸುತ್ತ ಬರುವ ನಾನು ನಮ್ಮ ಮನೆಯ ಎತ್ತನ್ನು ಕಲ್ಪಿಸಿಕೊಂಡೆ. ಹೌದು ನಾವು ಸಣ್ಣವರಿದ್ದಾಗ ಎತ್ತುಗಳು ಇಡೀ ರಾತ್ರಿ ಮೆಲುಕಾಡಿಸುತ್ತಿದ್ದವು. ಋಷಿಗಳಂತೆ ಧ್ಯಾನಸ್ಥ ಸ್ಥಿತಿಯಲ್ಲಿ ಗಂಭೀರ ಸ್ಥಿತಿಯಲ್ಲಿದ್ದಂತೆ ತೋರುತ್ತಿತ್ತು. ತಂದೆ ಹೇಳುತ್ತಿದ್ದರು ಅವು ಸಿಕ್ಕಿದ್ದನ್ನೆಲ್ಲ ಗಬ ಗಬ ತಿಂದು ನಂತರ ನುರಿಸುತ್ತವೆ. ನೀವೂ ಸಿಕ್ಕಿದ್ದನ್ನೆಲ್ಲ ಓದಬೇಕು. ನಂತರ ಬೇಕಾದದ್ದು ಮೆಲುಕಾಡಿಸಿ ನುರಿಸಬೇಕು ಅಂತ. ಹಾಗಾಗಿಯೇ ಓದುಗನಿಗೆ ಓದು ದಕ್ಕಿದ್ದು ಎನಿಸುತ್ತದೆ. ಇರಲಿ.

ನಾನೀಗ ಹೇಳ ಹೊರಟಿರುವುದು ನಮ್ಮ ತವರೂರು ಜಾತ್ರೆಯ ಸುದ್ದಿ. ಹೊಳೆ ಮಣ್ಣೂರಿನ ದುರ್ಗಾದೇವಿಯ ಜಾತ್ರೆ ಸುತ್ತೆಲ್ಲ ಹಳ್ಳಿಗಳಿಗೆ ಪ್ರಸಿದ್ಧಿ. “ನೀನುಹೋಗಲೇಬೇಕೇನು? ನೀ ಹೋದರೇನೇ ತೇರಿನ ಗಾಲಿ ಉರುಳತದೇನು? ಎಂದು ನಗುತ್ತಲೇ ಬೀಳ್ಕೊಟ್ಟ ಗಂಡ ಮಕ್ಕಳಿಗೊಂದು ದೊಡ್ಡ ಧನ್ಯವಾದ ಅರ್ಪಿಸಿ ಕಾರು ಏರಿದ್ದೆ. ಜತೇಲಿ ಮಾಮಾ ಮಾಮಿ ಇದ್ದರು. ‘ಗಂಡನ ಕರಕೊಂಡು ಜಾತ್ರಿ ಗೆ ಹೋಗಬಾರದಂತ’ ಎನ್ನುವ ಮಾತನ್ನು ಪುಷ್ಟೀಕರಿಸಿ ಮನದುಂಬಿದ ಹಾರೈಕೆ ಸಲ್ಲಿಸಿ ಕುಣಿಯುತ್ತಲೇ ಊರಿಗೆ ಹೋದೆನೆನ್ನಿ.

ವರ್ಷಕ್ಕೊಮ್ಮೆ ನಡೆಯುವ ಜಾತ್ರೆಗೆ ನಾವೆಲ್ಲಾ ಸೇರಲೇ ಬೇಕು.ಇದು ಅಲಿಖಿತ ಒಪ್ಪಂದ ಕೂಡ. ಜಾತ್ರೆಯ ನೆವದಿಂದ ಬಳಗದವರೆಲ್ಲರ ಭೇಟಿ. ಆಪ್ತರ ಭೇಟಿ. ಮನೇಲಿ ಮಾಡಲೇಬೇಕೆಂಬ ಯಾವ ಕೆಲಸಗಳಿಲ್ಲದೇ ನಿವಾಂತವಾಗಿ ಉಳಿಯುವ ಸಮಯ ವರ್ಷದುದ್ದಕ್ಕೂ ನೆನಪಿರುತ್ತದೆ. ಇರುವ ಎರಡ್ಮೂರು ದಿನಗಳಲ್ಲೇ ಅವರ ಸುಖ ದುಃಖ ಗಳಲ್ಲಿ ಪಾಲ್ಗೊಂಡು ಬರುವ ಅಮ್ರತ ಗಳಿಗೆಗಳನ್ನು ನಾನೆಂದೂ ಕಳೆದುಕೊಳ್ಳುವುದಿಲ್ಲ.

ಈ ಬಾರಿ ನಮ್ಮ ಊರ ವಿದ್ಯಾರ್ಥಿ ಸಂಘದವರು ನನ್ನನ್ನು ಅಲ್ಲಿಯ ಕಾರ್ಯಕ್ರಮಕ್ಕೆ ಅತಿಥಿಯಾಗಿ ಆಹ್ವಾನಿಸಿದ್ದರು. ಅನಿವಾರ್ಯ ಕಾರಣಗಳಿಂದ ತಪ್ಪಿಸಿಕೊಂಡೆ. ಮುಂದಿನ ವರ್ಷ ಖಂಡಿತ ಬರುವುದಾಗಿ ಹೇಳಿಕೊಂಡೆ. ಕುವೆಂಪು ಅವರು ಹೇಳುತ್ತಿದ್ದರಂತೆ ಹರಿಯುವ ನೀರಿನ ಜೊತೆ ಮಾತಾಡಬೇಕು ಅಂತ. ನನಗೂ ವಿದ್ಯಾರ್ಥಿಗಳು ತುಂಬಾ ಇಷ್ಟ. ವಿದ್ಯಾರ್ಥಿ ಸಂಘದವರು ಹಮ್ಮಿಕೊಂಡ ಎಲ್ಲ ವಿವರಗಳನ್ನು ಕೇಳಿ ಬಹಳ ಖುಷಿಯಾಯಿತು.

ರಾಜ್ಯ ಮಟ್ಟದ ಶಿಬಿರಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಳ್ಳುವ ನಾವುಗಳು ನಮಗೆ ಬರುವ ವಿದ್ಯೆಯನ್ನು ಊರ ಮಕ್ಕಳಿಗೆ ಹಂಚಬಾರದೇಕೆ?ಎನಿಸಿತು. ವಿದ್ಯಾರ್ಥಿ ಸಂಘದ ಯುವ ಉತ್ಸಾಹಿ ಸದಸ್ಯ ಶ್ರೀ.ಶಿವು. ನಡಕಟ್ಟಿ ನಮ್ಮೂರ ವಿದ್ಯಾರ್ಥಿ ಸಂಘದವರು ಏರ್ಪಡಿಸುವ ನಡೆಸಿಕೊಡುವ ರಸಪ್ರಶ್ನೆ ಕಾರ್ಯಕ್ರಮಕ್ಕೆ ರಾಜ್ಯದಾದ್ಯಂತ ತಂಡಗಳು ಬರುತ್ತವೆ. ಮುಂದೆ ಮಕ್ಕಳಿಗೆ ಅನುಕೂಲವಾಗಲೆಂದು I.A.S ಮತ್ತು K.A.S ಪಾಸು ಮಾಡಿಕೊಂಡ ವ್ಯಕ್ತಿಗಳನ್ನೂ ಕೂಡ ಆಹ್ವಾನಿಸುತ್ತೇವೆ ಎಂದು ಕೂಡ ಹೇಳಿದರು. ಅವರೂ ಕೂಡ ಕರ್ನಾಟಕ ವಿದ್ಯುಚ್ಛಕ್ತಿ ಮಂಡಳದ ನೌಕರ.

ಈ ಸಲ ನಮ್ಮೂರ ಹೆಮ್ಮೆಯ ಪುತ್ರ, ನಮ್ಮ ಗುರುಗಳ ಮಗ ಡಿ, ವೈ ಎಸ್ ಪಿ ಶ್ರೀ.ರಾಮನಗೌಡ.ಹಟ್ಟಿ. ಭಾಗವಹಿಸಿದ್ದರೆಂದು ಹೇಳಿದರು. ಬಹಳ ಖುಷಿಯಾಯಿತು. ನಿರಂತರ ಅವರ ಚಟುವಟಿಕೆಗಳು ಸಾಗಲಿ. ನಮ್ಮ ಊರು ರಾಜ್ಯದ ಗಮನ ಸೆಳೆಯಲಿ. ಅದೊಂದು ಸ್ಪರ್ಧಾತ್ಮಕ ಪರೀಕ್ಷೆಗಳ ಶೃದ್ಧಾಕೇಂದ್ರವಾಗಿ ಗುರುತಿಸಿಕೊಳ್ಳಲಿ ಎಂದು ಮನದುಂಬಿ ಹಾರೈಸುವೆ. ಹಾಂ ನಮ್ಮೂರ ಹುಡುಗಿ ಲಾಲಬಿ. ನದಾಫ್ ಹತ್ತನೆಯ ತರಗತಿಗೆ ರಾಜ್ಯಕ್ಕೆ ಎರಡನೇ ರ್ಯಾಂಕ್ ಪಡೆದವಳು. ಅವಳ ಅಜ್ಜನೂ ಮಾಸ್ತರರೇ. ಅವರ ಗಣಿತ ಅಗಣಿತವೇ ಇತ್ತು. ಅಂಥವರ ಮೊಮ್ಮಗಳು ಅವಳು.

ಊರು ಎಂದರೆ ಹಾಗೆಯೇ. ಇತಿಹಾಸ ಸೇರಿ ಹೋದ ಕನ್ನಡ ಚಿತ್ರರಂಗದ ಖ್ಯಾತ ಹಾಡು ನಟಿ ಅಮೀರ್ ಬಾಯಿ ಕರ್ನಾಟಕಿ ಪ್ರತಿ ವರ್ಷ ಮೊಹರಂ ಗೆ ಬೀಳಗಿ ಗೆ ಬರುತ್ತಿದ್ದರಂತೆ. ಹುಸೇನ್ ಪೀರಾ ಮಸೂತಿಗೆ ಹೋಗಿ ಮರ್ಸಿಯಾ ಹಾಡುತ್ತಿದ್ದರಂತೆ. ಬಿಜಾಪುರ ಸೀಮೆಯಲ್ಲಿ ಬೀಳಗಿ ಮೊಹರಂ ಪ್ರಸಿದ್ಧಿಯಾಗಿದೆ. ಅಲ್ಲಿನ ಹೆಣ್ಣುಮಕ್ಕಳು ಧರ್ಮ ಪ್ರವಾದಿ ಹುಸೇನರ ತಾಯಿ ಬೀಬಿ ಫಾತಿಮಾರ ಹೆಸರಿನಲ್ಲಿ ಜುಲೂಸ್ (ಮೆರವಣಿಗೆ) ತೆಗೆಯುತ್ತಾರೆ. ಮರ್ಸಿಯಾ (ದುಃಖ ಗೀತೆ) ಹಾಡುತ್ತಾರೆ. ಆ ಕಾರ್ಯಕ್ರಮಕ್ಕೆ ತಪ್ಪದೇ ಅಮೀರ್ ಬಾಯಿ ಕರ್ನಾಟಕಿ ಬರುತ್ತಿದ್ದರಂತೆ. ಅವರ ಸೋದರತ್ತೆ ಗೋಹರಜಾನ್ ಕೂಡ ಜತೆಯಾಗುತ್ತಿದ್ದರೆಂದು ಅವರ ಮೊಮ್ಮಗಳು ಮಾಲಾ. ಬೀಳಗಿ ಹೇಳಿರುವುದಾಗಿ ಓದಿದ್ದೆ.ಊರು ಎಂದರೆ ಹಾಗೆ ಅದೊಂದು ಮೋಹ. ದೂರದೂರಲ್ಲಿ ಇದ್ದವರಿಗೆ ಹುಟ್ಟೂರ ಕನವರಿಕೆ ಜಾಸ್ತಿಯೇ ಇರುತ್ತದೇನೋ.. ಅಂತೆಯೇ ಅಮೀರ್ ಬಾಯಿ. ಕರ್ನಾಟಕಿ ಅವರ ಕಳೇಬರ ಬಿಜಾಪುರಕ್ಕೆ ಮರಳಿ ಬಂದಿತು.

ಬಿಜಾಪುರದಲ್ಲಿ ಅವರೇ ಕಟ್ಟಿಸಿದ ಅಮೀರ್ ಟಾಕೀಜಿನಲ್ಲಿ ಅವರ ದೇಹವನ್ನು ಅಂತಿಮ ದರ್ಶನಕ್ಕೆ ಇಡಲಾಗಿತ್ತು. ಅವರ ತಮ್ಮ ದಸ್ತಗೀರ. ಬೀಳಗಿ ಬದುಕು ಚಂದವಾಗಬೇಕೆಂದು ಬಹಳ ಕಾಳಜಿ ಮಾಡುತ್ತಿದ್ದರು. ತಮ್ಮನಿಗಾಗಿ ಆ ಟಾಕೀಸ್ ಬಿಟ್ಟುಕೊಟ್ಟರು. ಇಡೀ ಜೀವಿತದ ಅವಧಿಯನ್ನು ಮುಂಬೈಯಲ್ಲಿ ಐಷಾರಾಮದಲ್ಲೇ ಕಳೆದ ಅಮೀರಬಾಯಿಯವರು ಸಾಯುವಾಗ ತನ್ನ ಗೋರಿಯನ್ನು ಬಿಜಾಪುರದ ‘ಇಬ್ರಾಹಿಂ ರೋಜಾ’ದ ಬಳಿಯಲ್ಲಿ ನಿರ್ಮಿಸಬೇಕೆಂಬ ಕೊನೆಯಾಸೆಯನ್ನು ವ್ಯಕ್ತಪಡಿಸಿದ್ದರು. ಅಂತೆಯೇ ಅವರು ಬಿಜಾಪುರದ ಮಣ್ಣಲ್ಲಿ ಲೀನವಾದರು.

ಬಾಳಿನ ತುಂಬಾ ದೇಶಾಟನೆ ಮಾಡುವ ಕಲಾವಿದರಿಗೆ, ದೇಶ ಸೇವೆ ಮಾಡುವ ಯೋಧರಿಗೆ ಕೊನೆಯಲ್ಲಿ ತಮ್ಮೂರ ಮಣ್ಣಿನಲ್ಲಿ ಮಲಗಗಬೇಕೆಂಬ ಬಯಕೆ ಯಾಕೆ ಕಾಡುತ್ತದೆಯೋ ಅರ್ಥವಾಗುವದಿಲ್ಲ. ಮೊಗಲ್ ಚಕ್ರವರ್ತಿ ಕವಿಯೂ ಆಗಿದ್ದ ಬಹದ್ದೂರ್ ಷಾ ಜಾಫರ್ ತನ್ನ ಕೊನೆ ಆಸೆಯಾಗಿ ಬ್ರಿಟಿಷರಲ್ಲಿ ಮೊರೆಯಿಟ್ಟದ್ದು ತನ್ನ ದೇಹವನ್ನು ದೆಹಲಿಯ ಮಣ್ಣಲ್ಲಿ ದಫನ್ ಮಾಡಿ ಎಂದು. ಮುಂಬೈನಲ್ಲಿ ಬದುಕು ಸವೆಸಿದ ಲೇಖಕ ವ್ಯಾಸರಾಯ.

ಬಲ್ಲಾಳರು ಕೊನೆಯ ದಿನಗಳಲ್ಲಿ ಹುಟ್ಟೂರಿಗೆ ಬಂದು ಜೀವ ಬಿಟ್ಟರು. ರತ್ನಾಗಿರಿಯಿಂದ ಎಂದೋ ವಲಸೆ ಬಂದಿದ್ದ ಕುಟುಂಬದಲ್ಲಿ ಹುಟ್ಟಿದ್ದ ಧಾರವಾಡದ ಬೇಂದ್ರೆ ಮುಂಬಯಿಯಲ್ಲಿ ದೇಹಬಿಟ್ಟರು. ಅವರ ಸಂಸ್ಕಾರವೂ ಅಲ್ಲೇ ಆಯಿತು. ಮೊನ್ನೆ ಮೊನ್ನೆ ತೀರಿ ಹೋದ ಬಾಗಲಕೋಟೆಯ ಡಾ.ಸೊನ್ನದ ಎನ್ನುವ ಡಾಕ್ಟರೊಬ್ಬರು ಇಡೀ ಜೀವಿತದ ಅವಧಿಯನ್ನು ಅಮೇರಿಕಾದಲ್ಲೇ ಕಳೆದರೂ ಕೊನೆಗಾಲದಲ್ಲಿ ಅವರು ಊರಿಗೆ ಬಂದು ಜನ ಸೇವೆ ಮಾಡಿ ಊರ ಮಣ್ಣಿನಲ್ಲೇ ಮಣ್ಣಾದರು. ಅವರ ಹೆಂಡತಿ ಮಕ್ಕಳು ಅಮೇರಿಕಾ ಬಿಟ್ಟು ಬರಲಿಲ್ಲ.

ನಮ್ಮ ಬಳಗದ ಹೆಣ್ಣುಮಗಳೊಬ್ಬಳು ವಿಚಿತ್ರ ಆಸೆಯನ್ನು ವ್ಯಕ್ತಪಡಿಸಿದ್ದರು. ಅದನ್ನು ಆ ಮನೆಯವರು ಅತ್ಯಂತ ಪ್ರಾಮಾಣಿಕತೆಯಿಂದ ಪ್ರೀತಿಯಿಂದ ನೆರವೇರಿಸಿದರೂ ಕೂಡ. ಅದೇನೆಂದರೆ ತಾನು ಸತ್ತ ನಂತರ ತನ್ನ ಅಸ್ತಿ ವಿಸರ್ಜನೆಯನ್ನು ಅವಳೂರಿನ ಹೊಳೆಯಲ್ಲಿ ಮಾಡಲು ಹೇಳಿದ್ದಳಂತೆ.

ಯಾಕೋ ಊರ ಮೋಹ ಹೋಗುವುದಿಲ್ಲ. ಜೀವ ತಂತು ಎಳೀತದೆ ಅಲ್ಲಿ. ಹೇಗಾದರೂ ಮಾಡಿ ಊರಿಗೆ ಹೋಗಿರುತ್ತೇವೆ. ದುರ್ಗಾದೇವಿಯ ಪೂಜೆ ಮಾಡುವ ಮನೆತನದ ನಾಗಪ್ಪ ಮಿಲಿಟರಿಯಲ್ಲಿ ದೊಡ್ಡ ಹುದ್ದೆಯಲ್ಲಿದ್ದು ನಿವೃತ್ತಿಯಾಗಿ ಧಾರವಾಡದಲ್ಲಿ ನೆಲೆ ನಿಂತ. ಆತ ಧಾರವಾಡದ ಮನೆಯಲ್ಲೆ ರಗ್ಗು ಎಳೆದುಕೊಂಡು ಮಲಗಬಹುದಿತ್ತು.

ಜಾತ್ರೆಗೆ ಕಟ ಕಟ ನಡುಗುವ ಚಳಿಯಲ್ಲಿ ಬಂದು ದೇವಿಯ ಪೂಜೆಗಾಗಿ ಬೆಳಗಿನ ನಾಲ್ಕಕ್ಕೆ ಎದ್ದು ಶೃದ್ಧೆಯಿಂದ ಪೂಜೆ ಮಾಡಿ, ರಾತ್ರಿ ಹನ್ನೆರಡಕ್ಕೆ ನಮ್ಮ ಮನೆಗೆ ಬಂದು ದೇವಿಗೆ ಹಾಕಿದ ಸಾಮಾನುಗಳನ್ನು ತೆಗೆದು ಅಣ್ಣನಿಗೆ ಲೆಕ್ಕ ಒಪ್ಪಿಸುವ ಜರೂರತ್ತು ಏನಿತ್ತು? ಊರ ಮೋಹ ಬಿಡುವುದಿಲ್ಲ. ತನ್ನ ಎಂಟ್ಹತ್ತು ರಜೆಗಳನ್ನು ಜಾತ್ರೆಗಾಗಿಯೇ ವ್ಯಯಿಸುವ ನಮ್ಮ ಅಣ್ಣ ಸರ್ಕಾರಿ ನೌಕರಿಯಲ್ಲಿದ್ದರೂ ಊರಿಗೆ ಬಂದರೆ ಊರ ಮಗನೇ ಆಗುತ್ತಾನೆ.

ಊರು ಉಪಕಾರ ಅರಿಯದು ಎನ್ನುವ ಗಾದೆ ಅವನಿಗೆ ಅಪ್ಲೈ ಆಗುವುದಿಲ್ಲ. ಇಂಥ ಊರ ಮೋಹಿತರ ಸಂತತಿ ಸಾವಿರವಾಗಲಿ. ಹಳ್ಳಿಗಳ ಬೀಡಾದ ನಮ್ಮ ದೇಶ ಗ್ರಾಮೀಣ ಅಭಿವೃದ್ಧಿಯತ್ತ ದಾಪುಗಾಲು ಹಾಕಲಿ. ಊರ ಹಳೇ ಮಕ್ಕಳಿಂದ ವಿಶೇಷ ಕ್ಲಾಸುಗಳನ್ನು ನಡೆಸಿ ಈಗಿರುವ ಮಕ್ಕಳಲ್ಲಿ ಸ್ಫೂರ್ತಿಯ ಚಿಲುಮೆ ಚಿಮ್ಮುವಂತೆ ಮಾಡುವುದು ಊರ ಯುವಕರ ಕರ್ತವ್ಯವಾಗಬೇಕು. ಅಂದಾಗ ಮಾತ್ರ ಭಾವ ಭಾವಗಳು ಬೆಳೆಯುತ್ತವೆ. ಬೆಸೆಯುತ್ತವೆ.

ಜಾತ್ರೆ ನೆಪಕ್ಕಿರಲಿ. ಆದರೆ ಅದೊಂದು ಬೌದ್ಧಿಕ ಜಾತ್ರೆಯಾಗಬೇಕು. ಜ್ಞಾನಸತ್ರವಾಗಬೇಕು. ವಿದ್ಯೆಗಳ ವಿಲೇವಾರಿ ನಡೆಯಬೇಕು. ಯಾರಿಗೆ ಯಾವ ವಿದ್ಯೆ ಬರುತ್ತದೆಯೋ ಅದನ್ನು ಊರ ಮಕ್ಕಳಿಗಾಗಿ ಮನಸಾ ಪೂರ್ವಕ ಧಾರೆ ಎರೆಯಬೇಕು. ಅದಕ್ಕಾಗಿ ನಾವು ಅಲ್ಲಿಯ ಶಾಲೆಗಳತ್ತ ನಡೆದು ಹೋಗಬೇಕು. ಅಲ್ಲಿಯ ಶಿಕ್ಷಕ ವ್ರಂದದವರನ್ನು ವಿಶ್ವಾಸದತ್ತ ತೆಗೆದುಕೊಳ್ಳಬೇಕು. ಊರಿಗಾಗಿ ತುಡಿಯುವವರು ಅವರೇ ಅಲ್ಲವೇ? ಏನೇ ಸುಧಾರಣೆ ಆಗಬೇಕೆಂದರೂ ಅದು ವಿದ್ಯಾರ್ಥಿಗಳ ಮೂಲಕವೇ ನಡೆಯಬೇಕು. ಈ ಕೆಲಸವನ್ನು ಊರ ವಿದ್ಯಾರ್ಥಿ ಸಂಘಟನೆಗಳು ಮಾಡಬೇಕು ಎನ್ನುವುದೇ ನನ್ನ ಕಳಕಳಿ…

‍ಲೇಖಕರು Admin

January 8, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: