ಬಿ ಕೆ ಮೀನಾಕ್ಷಿ
ಮಳೆಯಾಗುವುದೆಂದರೆ
ಜೀವಕ್ಕೆ ಕಸುವು ಪುಟವಿಟ್ಟಂತೆ
ತೇವದ ಭಾವದಲಿ ತಲ್ಲೀನವಾದಂತೆ
ಮೊರೆಮೊರೆವ ತರತರದ ಬಣ್ಣಗಳು
ಮುಗಿಬಿದ್ದಂತೆ
ಇಳೆಯ ಚೆಲುವಿನ ಸೆಳೆತ ಇಮ್ಮಡಿಯಾದಂತೆ
ಮಳೆಯಾಗುವುದೆಂದರೆ
ಹೃದಯದ ಖುಷಿಗೆ ಹಸಿ ಬೆರೆತಂತೆ
ಒಲುಮೆಯ ಟಿಸಿಲು ಕವಲೊಡೆದಂತೆ
ನಿತ್ಯ ಹರಿದ್ವರ್ಣ ನಿಸೂರಾದಂತೆ
ಯುಗಾದಿಯಲಿ ಮೋಡ ಕಟ್ಟಿ
ಸಂಪ್ರೀತಿಯಲಡಗಿದಂತೆ
ಇಡೀ ಜಗವೇ ಸುಖದಲಿ ನರಳಿದಂತೆ
ರಸಿಕತೆಗೆ ಕಚಗುಳಿಯಿಟ್ಟಂತೆ

ಮಳೆಯಾಗುವುದೆಂದರೆ
ನೀರಿನ ಮೊಗ್ಗು ಭೂಮಿಯ ಮುದ್ದಿಸಿದಂತೆ
ಸಿರಿವಂತ ಹೂವುಗಳು ತೊನೆತೊನೆದು
ನೆಲವ ತಬ್ಬಿ ರಮಿಸಿದಂತೆ
ತರಗೆಲ್ಲ ಐಸಿರಿಯಲಿ ಬೇರಿಗೆ ಬಲವಿತ್ತಂತೆ
ಬೀಸುವ ತಂಗಾಳಿ ಮೆಲ್ಲ ಸೆರಗ ಹಾಯಿಸಿ
ಹಿಂತಿರುಗಿ ನಕ್ಕು ಮೈಸವರಿ ಹೋದಂತೆ
ಮಳೆಯಾಗುವುದೆಂದರೆ
ವೇದನೆಗಳ ಖುಲಾಸೆಯಾದಂತೆ
ಕೈ ನೀಡಿದವರಿಗೆಲ್ಲ ಸಂತಸವನು
ಮೊಗೆಮೊಗೆದು ಹಂಚಿದಂತೆ
ಜಗವೆಲ್ಲ ನಗಲೆಂದು
ಧಾರೆಧಾರೆಯಲಿ ಬಾಚಿತಬ್ಬಿದಂತೆ
ಒದ್ದೆ ಮನಸುಗಳೆಲ್ಲ ಪೈರಾಗಿ ಬೀಗಿ
ಬೀಜ ಕಚ್ಚಿದಂತೆ
ಮಳೆಯಾಗುವುದೆಂದರೆ
ಮನಸು ಮಡಿಯಾದಂತೆ
ಬದುಕು ಸುಖವಾಗಿ ಹದವಾಗಿ
ಮುದವೆಲ್ಲ ನಾದೀ ನಾದೀ ನಾದವಾಗಿ
ಎದೆಯ ಭಾವಗಳೆಲ್ಲ ಸಂಗೀತವಾದಂತೆ
ಮಳೆ ಬರಲಿ ಮಳೆ ಬರಲಿ ಮುಚ್ಚಿದ ಕದಗಳು
ಕೊಚ್ಚಿಹೋಗುವಂತೆ






0 Comments