ಹರೀಶ್ ಕೇರ ಮೆಚ್ಚಿದ ‘ಕಾವೇರಿ ತೀರದ ಕಥೆಗಳು’

ಕೊಳದ ಕಳವಳದ ಬಿಂಬಗಳು…

ಹರೀಶ್ ಕೇರ

ಕೊಡಗಿನ ನೆಲ ಇಂದು ಆಧುನಿಕತೆ ಹಾಗೂ ಪ್ರಾದೇಶಿಕ ಅನನ್ಯತೆಗಳ ನಡುವೆ ತಲೆದೋರಿರುವ ಹಲವು ಕಳವಳಗಳ ಮೊತ್ತ. ಅದೊಂದು ಕಲಕಿದ ಕೊಳ. ಹಾಗೆ ನೋಡಿದರೆ ಯಾವ ಭೂಪ್ರದೇಶ ತಾನೆ ಇಂಥ ಕಳವಳದಿಂದ ಮುಕ್ತವಾಗಿದೆ? ಆದರೆ ಕೊಡಗಿನ ಕಳವಳದಲ್ಲಿ ಇತಿಹಾಸ, ಅಸ್ಥಿರ ಭವಿಷ್ಯದ ಜಟಿಲತೆ, ಮುಂದುವರಿದ ವರ್ತಮಾನ, ಹಲವು ಸಂಸ್ಕೃತಿಗಳ ಸಮ್ಮಿಶ್ರಣದ ಕೋಲಾಹಲಗಳೆಲ್ಲ ಸೇರಿಕೊಂಡಿವೆ. ‘ಕೊಡವ’ ಎಂದು ಕರೆಯಬಹುದಾದ ಜೀವನಶೈಲಿ ಇಲ್ಲಿ ಇಂದು ಅನೇಕ ಬಗೆಯ ಆಂತರಿಕ- ಬಾಹ್ಯ ವಿಪ್ಲವಗಳಿಗೆ ತುತ್ತಾಗಿದೆ. ಹೋಂಸ್ಟೇಗಳು, ರೆಸಾರ್ಟ್‌ಗಳು ಕೊಡಗಿನ ಮೂಲೆ ಮೂಲೆಯಲ್ಲಿ ತುಂಬಿಕೊಂಡು, ಯಾವುದು ಮನೆ, ಯಾವುದು ಹೋಂಸ್ಟೇ ಎಂದು ಗೊತ್ತಾಗದ ಒಂದು ಸನ್ನಿವೇಶವನ್ನು ಸೃಷ್ಟಿಸಿವೆ.

ಸೈನ್ಯದ ಕೂರ್ಗ್ ರೆಜಿಮೆಂಟ್‌ನಿಂದ ಆಗಾಗ ಬರುವ ಸುದ್ದಿಗಳು ಇಲ್ಲಿಂದ ಹೋಗಿ ಸೈನ್ಯ ಸೇರಿಕೊಂಡವರ ಕುಟುಂಬಗಳನ್ನು ಇನ್ನಿಲ್ಲದಂತೆ ಕಲಕುತ್ತವೆ. ದೊಡ್ಡ ಎಸ್ಟೇಟುಗಳು ನೂರು ಚೂರುಗಳಾಗುತ್ತಿವೆ. ಎಲ್ಲಿಂದಲೋ ಬಂದವರು ನೆಲದ ನಿವಾಸಿಗಳನ್ನು ಮೂಲೆಗೊತ್ತಿ ತಮ್ಮ ದರಬಾರುಗಳನ್ನು ನಡೆಸುತ್ತಿದ್ದಾರೆ. ಮತಾಂತರದ ಅವಾಂತರವೂ ಹಿಂದುತ್ವದ ರೋಷಾವೇಷವೂ ಆಗಾಗ ಮುಖಾಮುಖಿಯಾಗಿ ಚಕಮಕಿ ಎಬ್ಬಿಸುತ್ತಿದೆ. ಕಲಿತ ಕೆಲವರು ಊರು ಬಿಡುತ್ತಾರೆ, ಕಲಿಯದವರು ಊರಿನಲ್ಲಿದ್ದುಕೊಂಡು ಕೊರಗುತ್ತಾರೆ. ಮೊದಲಿನಂತೆ ಇಲ್ಲಿನ ಪ್ರಕೃತಿ ಆನಂದದಾಯಕವಾದ ಸಂಗತಿಯಾಗಿಯಷ್ಟೇ ಉಳಿದಿಲ್ಲ.

‘ಮಡಿಕೇರಿಯ ಮಂಜು’ ಇಲ್ಲಿನ ಹಳೆಯ ಕತೆಗಾರರಿಗೆ ರೊಮ್ಯಾಂಟಿಕ್ ಅನುಭವಗಳ ಹಿನ್ನೆಲೆಯಾಗಿ ಬರುವ ಒಂದು ಸನ್ನಿವೇಶ. ಆದರೆ ಕುಶ್‌ವಂತ್ ಬರೆಯುವ ವೇಳೆಗಾಗಲೇ ಈ ಮಂಜು ತನ್ನ ರೊಮ್ಯಾಟಿಸಿಸಂ ಕಳೆದುಕೊಂಡು, ಇಲ್ಲಿನ ಜಟಿಲ ಬದುಕಿನ ಸತ್ಯಗಳಿಗೆ ಮಸುಕುಹಾಕುವ ಒಂದು ಪೊರೆಯಾಗಿದೆ. ಕುಶ್‌ವಂತ್ ಅವರ ಕತೆಗಳಲ್ಲಿ ಒಂದು ಬಾರಿಯೂ ಈ ಮಂಜಿನ ರಮ್ಯ ವರ್ಣನೆಯನ್ನು ನಾವು ನಿರೀಕ್ಷಿಸಲಾಗದು. ಅಷ್ಟರ ಮಟ್ಟಿಗೆ ಅವರ ಕತೆಗಳು ಆಧುನಿಕವಾಗಿವೆ. ಇವು ಕೊಡಗೆಂಬ ಕೊಳದಲ್ಲಿ ಪರಿವರ್ತನೆಗಳ ಕಲ್ಲು ಬಿದ್ದು ಎಬ್ಬಿಸುತ್ತಿರುವ ಕಳವಳದ ಬಿಂಬವನ್ನು ಹಿಡಿಯುವ ಸಾಹಸ.

ಕುಶ್‌ವಂತ್ ಅವರ ಮೊದಲ ಕತಾಸಂಕಲನ ‘ಕೂರ್ಗ್ ರೆಜಿಮೆಂಟ್’ನ ಕತೆಗಳು ಪುಟ್ಟದಾಗಿದ್ದವು. ಅವುಗಳಲ್ಲಿ ಹೆಚ್ಚಿನ ಕತೆಗಳು ಸೈನಿಕರ ಸಾಹಸ ಮತ್ತು ಅವರ ಪ್ರೇಮಗಳ ಸುತ್ತ ಹೆಣೆದುಕೊಂಡಿದ್ದವು. ಎರಡನೇ ಸಂಕಲನದ ಕತೆಗಳು ಹೆಚ್ಚು ದೀರ್ಘವಾಗಿವೆ ಮತ್ತು ತಾನು ಎತ್ತಿಕೊಂಡ ಪಾತ್ರಗಳ ವ್ಯಕ್ತಿತ್ವವನ್ನು ಇನ್ನಷ್ಟು ಆಳವಾಗಿ ನೋಡಲು ಯತ್ನಿಸುತ್ತವೆ. ಕಳಪೆ ಕತೆಗಾರರು ಮಾತ್ರವೇ ತಮ್ಮ ಪಾತ್ರಗಳಿಗೆ ಜೀವ ತುಂಬಲು ಕ್ರಿಯೆ ಹಾಗೂ ವಿವರಗಳಿಗಾಗಿ ಹೆಣಗಬೇಕಾದೀತು. ಆದರೆ ಸಹಜ ಕತೆಗಾರ ತನ್ನ ಪಾತ್ರಗಳ ವ್ಯಕ್ತಿತ್ವಕ್ಕೆ ನಿರಾಯಾಸವಾಗಿ ರಕ್ತ ಮಾಂಸಗಳನ್ನು ತುಂಬುತ್ತಾನೆ. ಕುಶ್‌ವಂತ್ ಅವರ ಹೊಸ ಕತೆಗಳ ಪಾತ್ರಗಳು ಹೀಗೆ ಜೀವಂತವಾಗಿ ನಮ್ಮ ಕಣ್ಣೆದುರಿಗೆ ನಿಲ್ಲುತ್ತವೆ. ಇಲ್ಲಿ ನೀವು ನೋಡುವ ಬೆಳ್ಳಿಯಪ್ಪ, ಕಾರಿಯಪ್ಪ, ಕಾವೇರಿ, ಶಾಂತ, ಬೋಜಮ್ಮ ಮುಂತಾದವರು ನಾವು ನೀವು ನೋಡಿದವರೇ ಇದ್ದೀತು.

ಮೇಲೆ ಹೇಳಿದ ‘ಬದಲಾವಣೆಯ ಪರ್ವ’ಕ್ಕೆ ‘ಬೀಟಿಕಾಡು ಎಸ್ಟೇಟ್’ ಕತೆ ಒಳ್ಳೆಯ ಉದಾಹರಣೆ. ಇಲ್ಲಿ ಬರುವ ಉತ್ತಯ್ಯ, ಒಂದು ಕಾಲದಲ್ಲಿ ಬೀಟಿಕಾಡು ಎಸ್ಟೇಟ್‌ನ ಓನರ್ ಆಗಿದ್ದ ರಾವ್ ಬಹದ್ದೂರ್ ಚೆಂಗಪ್ಪವರ ಮೊಮ್ಮಗ. ಆದರೆ ಚೆಂಗಪ್ಪನವರ ಕಾಲದ ವೈಭವನ್ನೆಲ್ಲ ಕುಟುಂಬ ಈಗ ಕಳೆದುಕೊಂಡಿದೆ. ಅವರ ಎಸ್ಟೇಟನ್ನು ರೋಡ್‌ವುಡ್ ಎಂಬ ಕಂಪನಿ ಕೊಂಡುಕೊಂಡು, ಅದನ್ನು ಕಾರ್ಪೊರೇಟ್ ಮಾದರಿಯಲ್ಲಿ ನಡೆಸುತ್ತಿದೆ. ಪಿಯುಸಿ ಫೇಲಾಗಿರುವ ಉತ್ತಯ್ಯ ಅದೇ ಕಂಪನಿಯಲ್ಲೇ ಫೀಲ್ಡ್ ಸೂಪರ್‌ವೈಸರ್ ಆಗಿದ್ದಾನೆ. ಇದು ನಮ್ಮ ವೈಟ್‌ಫೀಲ್ಡ್, ದೇವನಹಳ್ಳಿ ಮುಂತಾದೆಡೆ ಜಮೀನು ಮಾರಿ, ಅಲ್ಲೇ ಸೃಷ್ಟಿಯಾಗುವ ಭಾರಿ ಕಂಪನಿಗಳಲ್ಲಿ ಸೆಕ್ಯುರಿಟಿ ಕೆಲಸಕ್ಕೆ ಸೇರುವ ಜಮೀನ್ದಾರರ ಕತೆಯನ್ನು ನೆನಪಿಸುತ್ತದೆ. ಎಸ್ಟೇಟ್‌ ಸಂಪೂರ್ಣ ಕಂಪನಿಯ ಪಾಲಾಗಿದ್ದರೂ, ಅಲ್ಲಿನ ಒಂದು ಬೀಟಿ ಮರದಡಿಯಲ್ಲಿರುವ ಗುಳಿಗನ ಸ್ಥಾನಕ್ಕೆ ಸಲ್ಲಿಸುವ ವರ್ಷಾವಧಿ ಪ್ರಾರ್ಥನೆ ಬಿಟ್ಟುಕೊಡಲು ಉತ್ತಯ್ಯ ಸಿದ್ಧನಿಲ್ಲ.

ಕಂಪನಿಗೆ ಹೊಸದಾಗಿ ಬಂದ ಮ್ಯಾನೇಜರ್‌ ಆ ಮರವನ್ನು ಕಡಿದು ಮಾರಲು ಉತ್ಸುಕ. ಸಂಪ್ರದಾಯ ಮತ್ತು ಆಧುನಿಕತೆ, ಕಾರ್ಪೊರೇಟೀಕೃತ ಜಗತ್ತು ಮತ್ತು ಸ್ಥಳೀಯತೆಗಳ ನಡುವೆ ಸಂಘರ್ಷ ಉಂಟಾದರೆ ಯಾವುದು ಗೆಲ್ಲಬೇಕು ಎಂದು ನಾವು ನಿರೀಕ್ಷಿಸುತ್ತೇವೆ? ಆದರೆ ಹಾಗೆ ಕತೆ ಕೊನೆಗೊಳಿಸುವುದರಿಂದ ಕೊಡಗಿನ ಈಗಿನ ಸ್ಥಿತಿಯ ಬಗ್ಗೆಯಾಗಲೀ ಅಲ್ಲಿನ ಒಟ್ಟೂ ಸಮಾಜದ ತಳಮಳದ ಬಗೆಗಾಗಲೀ ಏನೂ ಹೇಳಿದಂತಾಗುವುದಿಲ್ಲ. ಆದ್ದರಿಂದ ಕತೆ ವಾಸ್ತವದ ಒಂದು ಅವಸ್ಥೆಯಲ್ಲಿ ಕೊನೆಗೊಳ್ಳುತ್ತದೆ.

ಪಹಾಡಿ ಪ್ರದೇಶಗಳಿಗೆ ನಾನು ಪ್ರವಾಸ ಮಾಡಿದಾಗ ಹೆಚ್ಚಾಗಿ ಕಾಣುವ ಸಂಗತಿಯೆಂದರೆ, ಅಲ್ಲಿನ ಹೆಣ್ಣುಮಕ್ಕಳು ಹೆಚ್ಚು ಶ್ರಮಜೀವಿಗಳಾಗಿರುತ್ತಾರೆ. ಹೊಲಗಳಲ್ಲೂ ಮನೆಗಳಲ್ಲೂ ದುಡಿಯುತ್ತಾರೆ. ಮಕ್ಕಳನ್ನು ಪೋಷಿಸುತ್ತಾರೆ. ಆದರೆ ಗಂಡು ಎಂಬ ಪ್ರಾಣಿ ಮಾತ್ರ ಹೆಚ್ಚಾಗಿ ಕುಡಿಯುತ್ತಲೋ, ಹರಟೆ ಹೊಡೆಯುತ್ತಲೋ ಊರ ಹೊರಗಿನ ಕಟ್ಟೆಗಳಲ್ಲಿ, ಮನೆ ಜಗುಲಿಯಲ್ಲಿ ಧ್ವಜ ಊರಿರುತ್ತಾನೆ. ಪಹಾಡಿ ಪ್ರದೇಶಗಳ ಬಹಳ ಗಂಡಸರು ಅಪ್ಪಟ ಸೋಮಾರಿಗಳು. ಇದನ್ನು ಕುಶ್‌ವಂತ್ ಚೆನ್ನಾಗಿ ಗ್ರಹಿಸಿದ್ದಾರೆ. ಅವರ ಕತೆಗಳೂ ಇದನ್ನು ಬಣ್ಣಿಸುತ್ತವೆ.

‘ಒದ್ದೆ ಹಾಸಿಗೆ’ ಕತೆಯ ಶಾಂತ ಸಿಸ್ಟರ್ ಮನೆಕೆಲಸ, ಆಸ್ಪತ್ರೆಕೆಲಸಗಳನ್ನು ಸರಿದೂಗಿಸಿಕೊಂಡು ಹೋಗುವಾಕೆ. ಆಕೆಯ ಗಂಡ ಬೆಳ್ಳಿಯಪ್ಪ ಮಾತ್ರ, ಹಾಸಿಗೆ ಒದ್ದೆ ಮಾಡುವ ಮಗುವನ್ನು ಕ್ರೌರ್ಯದಿಂದ ದಂಡಿಸುವವನು, ಮಗುವಿನ ಮಾನಸಿಕ ಸ್ವಾಸ್ಥ್ಯದ ಬಗ್ಗೆ ಯಾವುದೇ ಕಾಳಜಿಯಿಲ್ಲದವನು ಆಗಿರುವ ಜೊತೆಗೆ ಕುಡುಕನೂ, ಸೋಮಾರಿಯೂ, ಮಗುವಿನ ಮೂತ್ರಪಿಂಡ ವೈಫಲ್ಯಕ್ಕೆ ತಾನೇ ಕಾರಣನಾಗಿದ್ದರೂ ಅದನ್ನು ಒಪ್ಪಿಕೊಳ್ಳದವನೂ ಆಗಿದ್ದಾನೆ.

‘ದೇವರ ಗದ್ದೆ’ ಕತೆಯಲ್ಲಿ ಕುಟುಂಬದವರ ಜಮ್ಮಾ ನೆಲವನ್ನೆಲ್ಲ ರಿಯಲ್ ಎಸ್ಟೇಟ್ ಕುಳಗಳಿಗೆ ಮಾರುವ, ಮಾರಿಸುವ ಕೆಲಸವನ್ನು ಧನದಾಹದ ಲಿಂಗರಾಜು ಮಾಡುತ್ತಿದ್ದರೆ, ಅವನ ಸಹೋದರಿ ಬೋಜಮ್ಮ ಮಾತ್ರ (ಪೀಟಿಮಾಸ್ಟರ್ ಬೀಜಕ್ಕೆ ಒದ್ದು ನೀರು ಮಾಡಿ ಬೀಜಮ್ಮ ಎನಿಸಿಕೊಂಡವಳು!) ಜಮೀನನ್ನು ಉಳಿಸಲು ಯಾವುದೇ ಹೋರಾಟಕ್ಕೂ ಸಿದ್ಧಳಾಗಿದ್ದಾಳೆ. ‘ಎಮ್ಮ ಮನೆಯಂಗಳದಿ’ ಕತೆಯಲ್ಲಿ ಬರುವ ಗಾಯತ್ರಿ ಊರಿನ ಮದುವೆಗಳಿಗೆ ಹೋಗಿ ಸುಮಧುರವಾಗಿ ಹಾಡುಗಳನ್ನು ಹಾಡಿ ಸಂಪಾದನೆ ಮಾಡುವವಳಾಗಿದ್ದರೆ, ಆಕೆಯ ಗಂಡ ಬೆಳ್ಳಿಯಪ್ಪ ಇದ್ದ ಪೊಲೀಸ್‌ ಕೆಲಸವನ್ನೂ ಕಳೆದುಕೊಂಡು, ಮದುವೆಮನೆಯಲ್ಲೂ ಕುಡಿದು ಮಲಗುವ ಅಥವಾ ಕೋಲಾಹಲ ಎಬ್ಬಿಸಿ ಬರುವವನಾಗಿದ್ದಾನೆ.

ಯಾಕೆ ಕುಶ್‌ವಂತ್‌ ತಮ್ಮ ಕತೆಗಳಲ್ಲಿ ಇಂಥ ಜೀವ ತುಂಬಿ ತುಳುಕುವ ಚೈತನ್ಯದಾಯೀ ಹೆಣ್ಣು ಪಾತ್ರಗಳನ್ನೂ, ವೇಸ್ಟ್ ಫೆಲೋ ಅನ್ನಿಸುವ (ಆದರೆ ಓದುವಾಗ ಫುಲ್ ಮಜಾ ಕೊಡುವ) ಗಂಡಸರನ್ನೂ ಸೃಷ್ಟಿಸುತ್ತಾರೆ? ಅದು ಸೃಷ್ಟಿಸುವುದಲ್ಲ. ಬಹ್ವಂಶ ಜಗತ್ತು ಇರುವುದೇ ಹಾಗೆ. ಅದನ್ನು ಕಾಣುವ ಕತೆಗಾರನ ಕಣ್ಣು ಕುಶ್‌ವಂತ್‌ ಅವರಲ್ಲಿದೆ.

ಕುಶ್‌ವಂತ್ ಅವರ ಕತೆಗಳಲ್ಲಿ ಮತ್ತೆ ಮತ್ತೆ ಬರುವ ಕೆಲವು ಬಗೆಯ ವ್ಯಕ್ತಿಗಳಿದ್ದಾರೆ- ಕೊಡಗಿನಿಂದ ಹೋಗಿ ಸೇನೆ ಸೇರಿಕೊಂಡವರು, ವರ್ಷಕ್ಕೊಮ್ಮೆ ರಜೆಯಲ್ಲಿ ಬರುವ ಯೋಧರು, ಸಣ್ಣಪುಟ್ಟ ಕೆಲಸ ಮಾಡುತ್ತ ಸುತ್ತಮುತ್ತಲಿನ ಸಮಾಜದ ತರಲೆ ತಾಪತ್ರಯಗಳಲ್ಲಿ ಸಕ್ರಿಯವಾಗಿ ಭಾಗಿಯಾಗುವ ನಿವೃತ್ತ ಯೋಧರು, ಇವರನ್ನು ಮದುವೆಯಾಗುವ ಟೀಚರ್‌ಗಳು ಮತ್ತು ನರ್ಸ್‌ಗಳು, ಪ್ರೀತಿಯಲ್ಲಿ ಬೀಳಲು ಹವಣಿಸುವ ಯುವಕರು, ಕುಡಿದೇ ಹಾಳಾಗುವ ನಿವೃತ್ತ ಪೊಲೀಸರು ಅಥವಾ ಯೋಧರು, ಮದುವೆ ಮನೆಗಳಲ್ಲಿ ಹೊಡೆದಾಡುವವರು, ರೇಡಿಯೋದಲ್ಲಿ ತನ್ನ ಹೆಸರು ಬರಲಿ ಎಂದು ಹಂಬಲಿಸುವ ಮುಗ್ಧರು, ಮತ್ತು ಅಂಥವರನ್ನು ವಂಚಿಸುವ ಖದೀಮರು- ಹೀಗೆ. ಇವರೆಲ್ಲ ಸೇರಿ ಅಪೂರ್ವ ಮಾನವ ಸಂಬಂಧಗಳ ಜಾಲವೊಂದನ್ನು‌ ನಿರ್ಮಿಸುತ್ತಾರೆ. ಕಡೆಗೂ ಕತೆಯೆಂದರೆ ಸಂಬಂಧಗಳ ಪರೀಕ್ಷೆಯೇ ತಾನೆ.

ಇಲ್ಲಿನ ಯೋಧರು ವರ್ಷಕ್ಕೊಮ್ಮೆ ಬಂದು ಹೋಗುವುದರಿಂದ, ಸದಾ ಆಸ್ಪತ್ರೆಯಲ್ಲಿರುವ ಮತ್ತು ಗಂಡ ಮನೆಯಲ್ಲಿದ್ದಾಗಲೂ ರಾತ್ರಿ ಡ್ಯೂಟಿಗೂ ಹೋಗುವ ನರ್ಸ್‌ಗಳನ್ನು ಮದುವೆಯಾಗಲು ಇಷ್ಟಪಡುವುದಿಲ್ಲವಂತೆ. ಟೀಚರ್‌ಗಳಾದರೆ ವರ್ಷಕ್ಕೆರಡು ತಿಂಗಳು ರಜೆ ಸಿಗುತ್ತದೆ, ಸೈನಿಕರು ಊರಿಗೆ ಬಂದಾಗ ಅವರಿಗೆ ಜೊತೆಯಾಗಿರುತ್ತಾರೆ. ಹೀಗಾಗಿ ಸೈನಿಕರು ಟೀಚರ್‌ಗಳನ್ನೂ ನರ್ಸ್‌ಗಳು ಟ್ರಾನ್ಸ್‌ಫರ್‌ ಆದರೂ ಜಿಲ್ಲೆಯೊಳಗೇ ಬಿದ್ದಿರುವ ಪೊಲೀಸರನ್ನೂ ಹುಡುಕುತ್ತಾರಂತೆ. ಇಂಥ ವಿವರಗಳು, ಸೂಕ್ಷ್ಮಗಳು ಒಂದು ಸಮಾಜದ ಜೀವನಕ್ರಮವನ್ನು ಕತೆಗಾರ ಹೇಗೆ ಗ್ರಹಿಸಿದ್ದಾನೆ ಎಂಬುದನ್ನು ಥಟ್ಟನೆ ಮನವರಿಕೆ ಮಾಡಿಕೊಡುತ್ತವೆ.

ಕುಶ್‌ವಂತ್ ಅವರ ಹಾಸ್ಯಪ್ರಜ್ಞೆ ಅದ್ಭುತವಾಗಿದೆ. ಇದನ್ನು ಅವರ ‘ಮದುವೆ ಮಾಡಿ ನೋಡು’ ಕತೆಯಲ್ಲಿ ಬರುವ ಚಪ್ಪರ ಮದುವೆಯ ವರ್ಣನೆಯಲ್ಲಿ ನೋಡಬಹುದು. ವಿವಾಹದ ಹಿಂದಿನ ರಾತ್ರಿ ನಡೆಯುವ ಚಪ್ಪರ ಮದುವೆಗಳಲ್ಲಿ ನಶೆಯೇರಿ ಉಂಟಾಗುವ ಹೊಡೆದಾಟಗಳು, ಗದ್ದಲ ಜಾಸ್ತಿ. ಆಗ ಮದುವೆ ನಡೆಯುವ ಕುಟುಂಬದ ಹೆಣ್ಣುಮಕ್ಕಳು, ತಮ್ಮ ಮನೆಯ ಮರ್ಯಾದೆ ಹೋಗದಿರಲಿ ಎಂದು ವಾಲಗದವರಿಗೆ ಜೋರಾಗಿ ಊದುವಂತೆ ಬೇಡಿಕೊಳ್ಳುತ್ತಾರಂತೆ. ಈ ಸನ್ನಿವೇಶದ ಚಿತ್ರಣ ನಿಮಗೆ ‘ಕರ್ವಾಲೊ’ದ ಮಂದಣ್ಣನ ಮದುವೆಯ ಚಿತ್ರಣದಂತೆ ಕಾಣಿಸಿದರೆ ಆಶ್ಚರ್ಯವಿಲ್ಲ.

ಕುಶ್‌ವಂತ್ ಸೈನ್ಯದ ಹಿನ್ನೆಲೆಯವರು ಮತ್ತು ಡಾಕ್ಟರ್ ಕೂಡ ಅಗಿರುವುದರಿಂದ, ಅವರ ಕತೆಗಳಲ್ಲಿ ಮಿಲಿಟರಿ ಮತ್ತು ವೈದ್ಯಕೀಯದ ರೂಪಕಗಳು ಸಹಜವಾಗಿ ಸೇರಿಕೊಂಡುಬಿಡುತ್ತವೆ. ಉದಾಹರಣೆಗೆ-
“ಬೆಳ್ಳಿಯಪ್ಪನಿಗೆ ಪಿತ್ತ ನೆತ್ತಿಗೇರಿದರೆ ಅವನ ಬಾಯಿಯ ಬಂದೂಕು ಬೆಂಕಿಯ ಮಳೆ ಸುರಿಸುವುದನ್ನು ನಿಲ್ಲಿಸುವುದಿಲ್ಲ…” “..ಇವರಿಬ್ಬರಲ್ಲಿ ಭಿನ್ನಾಭಿಪ್ರಾಯ ಮೂಡಿದರೆ ಈ ಸೈನಿಕ- ಸಿಸ್ಟರ್ ಜೋಡಿಯು ತಮ್ಮ ಮನೆಯನ್ನು ರಣರಂಗದಂತೆ ಅಥವಾ ಕೋವಿಡ್‌ ಐಸಿಯುವಿನಂತೆ ಮಾಡಿಬಿಡುತ್ತವೆ.” “..ಆ ಮನೆಯ ಯಾವುದೇ ಮೂಲೆಯಿಂದ ಶಾಂತಿ ಮತ್ತು ನೆಮ್ಮದಿಯ ಸ್ವಾಬ್ ತೆಗೆದು ಲ್ಯಾಬ್‌ಗೆ ಕಳುಹಿಸಿದರೆ ವರದಿ ಯಾವಾಗಲೂ ನೆಗೆಟಿವ್ ಬರುವ ಬಗ್ಗೆ ಯಾರಿಗೂ ಅನುಮಾನಗಳಿರಲಿಲ್ಲ.” ಇಂಥ ಭಾಷೆಯ ಸೊಗಸು ಮತ್ತು ರಚನೆಯ ಹದ ಕೆಲವೇ ಹೊಸ ಕತೆಗಾರರಲ್ಲಿದೆ ಎಂಬುದನ್ನು ಗಮನಿಸಬಹುದು.

ಕುಶ್‌ವಂತ್ ಕತೆಗಳು ಕೊಡಗಿನ ಭೂಪ್ರದೇಶದ ಕತೆಗಳಾಗಿವೆ ಎಂಬ ಮಾತ್ರಕ್ಕೆ ಅವು ಅಲ್ಲಿಗೆ ಸೀಮಿತವಾಗಿವೆ ಎಂದಲ್ಲ. ಅವು ಈ ಸರಹದ್ದನ್ನು ದಾಟಿ ವಿಶಾಲವಾದ ಒಂದು ಮಾನವೀಯ ನೆಲೆಯಲ್ಲಿ ಮಿಡಿಯುತ್ತವೆ. ಪರಿವರ್ತನಶೀಲತೆಯ ಕ್ಷೋಭೆಗಳು ಬದುಕನ್ನು ಕಾಡುತ್ತವೆ ಎಂಬುದನ್ನು ನಂಬುವ ಎಲ್ಲರನ್ನು ಈ ಕತೆಗಳು ತಮ್ಮದೇ ರೀತಿಯಲ್ಲಿ ಸ್ಪರ್ಶಿಸುತ್ತವೆ.

ಕುಶ್‌ವಂತ್ ಕತೆಗಳನ್ನು ಬಿಡಿಬಿಡಿಯಾಗಿ ಓದಿದರೆ ನೀಡುವ ಅನುಭವವೇ ಬೇರೆ; ಇಡೀ ಕೃತಿಯನ್ನು ಓದಿದರೆ ಆಗುವ ಅನುಭವ ಅದಕ್ಕಿಂತ ಭಿನ್ನ- ಅದು ಕೊಡಗು ಎಂಬ ಭೂಪ್ರದೇಶದ ಒಂದು ಕಾಲಘಟ್ಟದ, ಕೆಲವು ತಲೆಮಾರುಗಳು ಅನುಭವಿಸುತ್ತಿರುವ ಕ್ಷೋಭೆಯ ರೂಪಕವಾಗಿ ನಿಲ್ಲುತ್ತದೆ. ಇಲ್ಲಿನ ಬಿಡಿ ಕತೆಗಳು ಒಟ್ಟಾರೆಯಾಗಿ ಒಂದು ಕಾದಂಬರಿಯಾಗಬಹುದಾದ ಜೀವದ್ರವ್ಯವೂ ಹೌದು. ಅವರೊಳಗೆ ಮಿಡಿಯುತ್ತಿರಬಹುದಾದ ಕಾದಂಬರಿಗೆ ಇವು ಮುನ್ನುಡಿಯಾಗಿವೆ. ಅವರಿಂದ ಇನ್ನಷ್ಟು ಕೃತಿಗಳ ನಿರೀಕ್ಷೆ ನನ್ನದು.

‍ಲೇಖಕರು Admin

April 20, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: