ಬಿ ಕೆ ಮೀನಾಕ್ಷಿ ಓದಿದ ‘ಕೆಂಡದ ರೊಟ್ಟಿ’

ಬಿ ಕೆ ಮೀನಾಕ್ಷಿ

ಕೆಂಡದ ರೊಟ್ಟಿ ಇದೀಗ ತಾನೆ ಅಂಕಿತದಿಂದ ಹೊರಬಂದಿರುವ ಶ್ರೀಮತಿ ಉಷಾ ನರಸಿಂಹನ್ ರವರ ಐದನೆಯ ಕಾದಂಬರಿ. ಸಾಹಿತ್ಯದ ಎಲ್ಲ ಕ್ಷೇತ್ರಗಳಲ್ಲೂ ಕಯ್ಯಾಡಿಸಿರುವ ಲೇಖಕಿ ಕೆಂಡದ ರೊಟ್ಟಿಯನ್ನು ಕೂಡ ಹದಗೆಡದಂತೆ ಪರಿಮಳಭರಿತವಾಗಿಸಿ ಓದುಗರಿಗೆ ನೀಡಿದ್ದಾರೆ.
ಹೊರದೇಶದಿಂದ ಹುಟ್ಟೂರಿಗೆ ಆಗಮಿಸುವ ರಮ್ಯಳ ಸುತ್ತ ಹೆಣೆದುಕೊಳ್ಳುವ ಘಟನೆಗಳು ಕೆಲಕ್ಷಣಗಳಲ್ಲೇ ರಮ್ಯಳನ್ನು ಕೇಂದ್ರೀಕರಿಸದೆ, ಅವಳು ಅನಾವರಣಗೊಳಿಸುವ ಪಾತ್ರಗಳು ಕತೆ ಹೆಣೆಯತೊಡಗುತ್ತವೆ.

ವ್ಯವಸ್ಥಿತವಾದ ಸಾಂಸಾರಿಕ ಜೀವನದಲ್ಲಿ ಅದರ ಹೊರತಾಗಿ ಒಂದು ಹೆಜ್ಜೆಯ ಹೊರಹಾಕುವಿಕೆ ನೂರು ನೋಟಗಳಿಗೆ, ನೂರು ಪ್ರಶ್ನೆಗಳಿಗೆ ಉತ್ತರವೀಯಬೇಕಾಗುವ ಕತೆಯ ಸುತ್ತ ಹೆಣೆದುಕೊಂಡ ಕೆಂಡದ ರೊಟ್ಟಿ ಬಿಗಿಯಾದ ಚೌಕಟ್ಟಿನಲ್ಲೇ ಹದಗೊಳ್ಳತೊಡಗುವುದೇ ಕಥಾವಸ್ತು. ಮಮತೆಯ ಅಪ್ಪುಗೆಗಾಗಿ ಹಪಹಪಿಸುವ ರಮ್ಯ ತಾಯಿಯ ಗೈರಿನಿಂದ ಹತಾಶಳಾಗಿ ತನ್ನೊಳಗೇ ಹಬ್ಬಿಕೊಂಡ ಪ್ರಶ್ನೆಗಳ ಹುತ್ತದೊಳಗೆ ಏಕಾಕಿತನವನ್ನನುಭವಿಸುವುದೂ ಅಲ್ಲದೆ, ತನ್ನ ಬದುಕಿನ ಅತಂತ್ರತೆಯನ್ನೂ ಬಿಚ್ಚಿಕೊಳ್ಳುತ್ತಾ ಹೋಗುತ್ತಾಳೆ.

ತನ್ನ ತಾಯಿಯನ್ನು ಅಪಾರವಾಗಿ ಪ್ರೀತಿಸುವ ರಮ್ಯ, ತಾಯಿಯ ಸರಿದುಹೋದ ಕಾಲಘಟ್ಟವನ್ನು ಕೆದಕಬೇಕಾದ ಸಂದರ್ಭ ಒದಗಿಬರುವುದು ಮಗಳ ದುರದೃಷ್ಟವೇ ಸರಿ. ಕತೆ ಕುತೂಹಲಕಾರಿಯಾಗಿ ಓದುಗನ ಮುಂದೆ ತೆರೆದುಕೊಳ್ಳುತ್ತಾ ಹೋದಂತೆ, ವ್ಯಕ್ತಿತ್ವಗಳ ಋಣಾತ್ಮಕತೆಯೂ ತುಲನೆಗೆ ಒಳಪಡುತ್ತದೆ. ಹಿರಿತನವನ್ನು ಹೊತ್ತು ಮನೆಯನ್ನು ನಿಭಾಯಿಸದ ವೇಣಮ್ಮ ದೊಡ್ಡಮ್ಮ, ತಾಯಿ ಸತ್ಯಳ ಬೆಂಗಾವಲಾಗಿ, ಪ್ರೀತಿಯ ವೃಕ್ಷವಾಗಿ ಆಸರೆ ನೀಡುವ ದೊಡ್ಡಪ್ಪ, ಎಲ್ಲವನ್ನು ಅರಿತೂ ವಾರೆಗಿತ್ತಿಯ ಮಗಳನ್ನೇ ತನ್ನ ಮಡಿಲಿಗೆ ಹಾಕಿಕೊಂಡು ಪ್ರೀತಿಯಿಂದ ಪೋಷಿಸುವ ವೇಣಮ್ಮ ದೊಡ್ಡಮ್ಮ, ಅಣ್ಣ ಬಾಲು, ಹಾಗೇ ಎಲ್ಲ ಪಾತ್ರಗಳೂ ಕತೆಯನ್ನು ಆಯಾಚಿತವಾಗಿ ರಮ್ಯಳೆದುರು ಬರೆಯುತ್ತಾ ಹೋಗುತ್ತಾರೆ.

ಇದೊಂದು ಸಾಂಸಾರಿಕ ಕಾದಂಬರಿಯಾದರೂ ಸಮಾಜಿಕ ಅನಿಷ್ಠಗಳನ್ನು, ಮನುಷ್ಯನ ಮನೋಭಾವಗಳನ್ನು, ಕಂಡೂ ಕಾಣದ ನವಿರು ಸಂವೇದನೆಗಳನ್ನು ಆಯಾ ಪರಿಸ್ಥಿತಿಗೆ ತಕ್ಕಂತೆ ಅಕ್ಷರವಾಗಿಸುತ್ತಾ ಹೋಗುವ ಜಾಣ್ಮೆ ಲೇಖಕಿಯದು. ಎಲ್ಲಿಂದಲೋ ಪ್ರಾರಂಭವಾಗಿ, ಓದುಗ ನಿರೀಕ್ಷಿಸಿದ ಹಂತಕ್ಕೆ ತಲುಪಿಸಿದರೂ, ಒಂದೊಮ್ಮೆ ಕತೆಯ ಸೆಳವು ತಾನೇ ಹರಿದತ್ತ ಸಾಗಿ ಸಹಜ ಮುಕ್ತಾಯವನ್ನು ಹಾಡಿದೆ.

ಕತೆಯ ಚೌಕಟ್ಟು ಕೇವಲ ನೂರಾಇಪ್ಪತ್ತಮೂರು ಪುಟಗಳ ಕಾದಂಬರಿ, ಹೆಣ್ಣಿನ ಅಸ್ಮಿತೆಗೆ ಸವಾಲೊಡ್ಡುತ್ತಲೇ ಹೋಗುತ್ತದೆ. ಆದರೆ ಸ್ವಾಭಿಮಾನಿ ಹೆಣ್ಣು ಎಲ್ಲವನ್ನೂ ಎದುರಿಸಿ ತನ್ನ ಜೀವನದ ಮುಖ್ಯ ಭಾಗವಾಗಬೇಕಾಗಿದ್ದವರನ್ನು ಕಡೆಗೂ ಇಬ್ಬರ ಇಂಗಿತಗಳೂ ಸಮೀಕರಣಗೊಂಡು ಒಟ್ಟಾಗಿ, ಗುಟ್ಟಾಗಿ ಸಾಗುವ ಬಗೆ ಸಮಾಜಕ್ಕೆ ಹೊಸದೇನೂ ಅಲ್ಲವಾದರೂ, ಘಟನೆಗಳ ನಿರೂಪಣೆ, ಬದುಕಿಗೆ ಒದಗಿಬಂದ ಅನಿವಾರ್ಯತೆ, ಸಂಸ್ಕಾರವಂತರ ಗಂಭೀರ ನಡವಳಿಕೆಯಲ್ಲಿ ವ್ಯಕ್ತಿಗತ ಭಾವಗಳು ಹೊಸತಾಗಿದೆ. ಕಾದಂಬರಿ ರಚನೆಯಲ್ಲಿ ಪಳಗಿರುವ ಉಷಾ ನರಸಿಂಹನ್ ಒಂದು ಹಂದರದೊಳಗೆ ಎಲ್ಲ ವಿಷಯಗಳನ್ನು ಕ್ರಮಬದ್ಧವಾಗಿ, ಸುಂದರವಾಗಿ, ಅರ್ಥವತ್ತಾಗಿ ಜೋಡಿಸಿದ್ದಾರೆ.

ಗಂಡಸಿನ ನೀರಸ ಸ್ವಭಾವದ ಮತ್ತವನ ಕ್ರೌರ್ಯದ ನಡುವೆ ಒಬ್ಬ ಆತ್ಮಸಂಗಾತಿಯ ಸಾಂತ್ವನದಪ್ಪುಗೆಗಾಗಿ ಮನದಲ್ಲೇ ಹಂಬಲಿಸಿ ನರಳುವ ಜೀವಕ್ಕೆ ಜೊತೆಯಾಗುವ ಇನ್ನೊಂದು ಜೀವ, ಬೇಕಾದ ಸಕಲವನ್ನೂ ನೀಡಿ ಸಂತೈಸುವುದರಲ್ಲಿ ಎರಡೂ ಜೀವಗಳ ಆಪ್ತತೆ ಗಟ್ಟಿಯಾಗುತ್ತದೆ. ಸದಾ ಅಚ್ಚುಕಟ್ಟು, ಆಡಂಬರದ ನಡುವೆ ಮುಳುಗಿಹೋಗಿ ತವರು ಸೇರಿದ ಹೆಂಡತಿಯ ಒಲುಮೆಯೂ ಸಿಗದಾದಾಗ ಇದೊಂದು ಅನಿವಾರ್ಯಮಾರ್ಗ ಕಂಡುಕೊಂಡ ಜೀವಗಳು ಅನ್ಯೋನ್ಯವಾಗಿ ಬೆರೆತುಹೋಗಿ ನಾಲ್ಕು ಬಾಯಿಗಳ ಗುಸುಗುಸುವಿಕೆಗೆ ಆಹಾರವಾಗುತ್ತವೆ.

ಇದನ್ನೇನೂ ತಪ್ಪಿಸಲು ಸಾಧ್ಯವಿರದಿದ್ದರೂ ಈ ಅನುಪಮ ಹೊಂದಾಣಿಕೆಯಲ್ಲಿ ಮೈಮರೆತವರು ಅಗಲಿಹೋಗಿ ಪಡುವ ಬವಣೆ, ಅದರ ಚಿತ್ರಣದ ಅನಾವರಣ, ಒಂದು ಸಾವಿನ ಸುತ್ತ ಹೆಣೆದುಕೊಂಡು ಸಮಸ್ಯೆಗಳ ರ‍್ಯಾವಸಾನಕ್ಕೆ ತೆರೆ ಎಳೆಯುತ್ತಲೇ ತನ್ನ ಜೀವನಕ್ಕೂ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳುವ ಮೂಲಕ ರೊಟ್ಟಿ ಕೆಂಡದ ಮೇಲೆ ಹದವಾಗತೊಡಗಿ ಅದರ ಸುವಾಸನೆ ಕಾದಂಬರಿಯುದ್ದಕ್ಕೂ ಪಸರಿಸಿದೆ.

ಹೋನ್ನೇಸರ ಗ್ರಾಮ, ಮಲೆನಾಡಿನ ಚಿತ್ರಣ, ಕಾಫಿ ವರ್ಣನೆ, ವಿದೇಶದಿಂದ ಬಂದವಳಿಗೆ ಸುತ್ತಲೂ ಮುತ್ತಿಕೊಳ್ಳುವ ಬಂಧುಬಾಂಧವರ ಆಪ್ತತೆ, ತನಗೂ ತನ್ನ ತಾಯಿಗೂ ಆಗದವರನ್ನೂ ಭೇಟಿ ಮಾಡಿ ಎಲ್ಲರ ಅಂತರಾಳವನ್ನರಿಯುವ ರಮ್ಯ, ಬದಲಾದ ಬಾಲು, ತಾಯಿಯು ತೋಡಿಕೊಳ್ಳುವ ಅಳಲು, ಎಲ್ಲದರ ವರ್ಣನೆ ಕಣ್ಮುಂದೆ ಒಂದು ಚಿತ್ರವನ್ನು ಸೃಷ್ಟಿಸಿ ಬೆರಗಾಗುವಂತೆ ಮಾಡುವಲ್ಲಿ ಕಾದಂಬರಿ ಸಫಲವಾಗಿದೆ. ಕಾದಂಬರಿಯನ್ನು ಎಲ್ಲರೂ ಕೊಂಡು ಓದಿದಾಗ ಅದರ ರಸಜ್ಞತೆಯೇ ಮನಸ್ಸನ್ನು ತುಂಬುವುದು ಸುಳ್ಳಲ್ಲ.

‍ಲೇಖಕರು Admin

February 20, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: