ಬಿ ಎ ವಿವೇಕ ರೈ ಓದಿದ ‘ತುಳುನಾಡಿನ ಮೂರಿಗಳ ಆರಾಧನೆ’

ಪ್ರೊ ಬಿ ಎ ವಿವೇಕ ರೈ 

ಶ್ರೀಮತಿ ರಾಜಶ್ರೀ ಟಿ. ರೈ ಅವರು ತುಳು ಸಾಹಿತಿಯಾಗಿ ಒಳ್ಳೆಯ ಸಾಧನೆ ಮಾಡಿರುವ ಬರಹಕಾರ್ತಿ. ಅವರ ‘ಪನಿಯಾರ’, ‘ಬಜಿಲಜ್ಜೆ’, ‘ಚೌಕಿ’ ಮತ್ತು ‘ಕೊಂಬು’ ಎಂಬ ನಾಲ್ಕು ಕಾದಂಬರಿಗಳು ಪ್ರಕಟವಾಗಿವೆ. ಇವುಗಳಲ್ಲಿ ‘ಚೌಕಿ’ ಕಾದಂಬರಿಗೆ ಪಣಿಯಾಡಿ ಪ್ರಶಸ್ತಿಯೂ, ‘ಕೊಂಬು’ ಕಾದಂಬರಿಗೆ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಪುಸ್ತಕ ಬಹುಮಾನದ ಗೌರವವೂ ಸಂದಿದೆ. ರಾಜಶ್ರೀ ಅವರ ಪ್ರಕಟಿತ ತುಳು ಕಥಾಸಂಕಲನ ‘ಚವಳೊ’.

ತುಳು ನಾಟಕ ರಚನೆಯ ರಂಗದಲ್ಲೂ ಇವರು ವಿಶೇಷ ಸಾಧನೆ ಮಾಡಿದ್ದಾರೆ. ಇವರು ರಚಿಸಿದ ಮೂರು ನಾಟಕಗಳು ಪ್ರಕಟಣೆಗೆ ಮೊದಲೇ ಮನ್ನಣೆಗೆ ಪಾತ್ರವಾಗಿವೆ. ‘ಬದಿ ಏತ್ ಕೊರ್ಪರ್’ ನಾಟಕಕ್ಕೆ ಗಡಿನಾಡ ಕಲಾವಿದರು ಪ್ರಶಸ್ತಿಯೂ, ‘ಪುಂಚದ ಮಣ್ಣ್ ‘ ನಾಟಕಕ್ಕೆ ತುಳುಕೂಟ ಕುಡ್ಲ ಕೊಡಮಾಡುವ ರತ್ನವರ್ಮ ಹೆಗ್ಗಡೆ ನಾಟಕ ಪ್ರಶಸ್ತಿಯೂ ಪ್ರಾಪ್ತವಾಗಿದೆ. ಇವರ ಪೌರಾಣಿಕ ತುಳು ನಾಟಕ ‘ತತ್ರ್ ಮೋಸದ ಬಾಲೆ’ ಪ್ರಕಟಣೆಗೆ ಸಿದ್ಧವಾಗಿದೆ. ರಾಜಶ್ರೀ ಅವರ ತುಳು ಕವನಗಳ ಸಂಕಲನ ‘ಮಮಿನದೊ’ ಅಚ್ಚಿನಲ್ಲಿದೆ. ಬೇರೆ ಬೇರೆ ಪತ್ರಿಕೆಗಳಲ್ಲಿ ಇವರು ಕನ್ನಡದಲ್ಲಿ ಬರೆದ ಕಥೆಗಳು ಸಂಕಲನ ರೂಪದಲ್ಲಿ ಪ್ರಕಟವಾಗುತ್ತಿವೆ .

೨೦೨೦ರ ಉತ್ಥಾನ ವಾರ್ಷಿಕ ಕಥಾಸ್ಪರ್ಧೆಯಲ್ಲಿ ರಾಜಶ್ರೀ ಅವರ ಕನ್ನಡ ಕಥೆ ‘ಅಂಬಿಗಾ ನಾ ನಿನ್ನ ನಂಬಿದೆ’ ಎರಡನೆಯ ಬಹುಮಾನವನ್ನು ಪಡೆದಿದೆ. ಮಂಗಳೂರು ಆಕಾಶವಾಣಿಯಿಂದ ಅವರ ತುಳು ಕತೆ ಕವನ ಮಾತುಗಳು ಪ್ರಸಾರವಾಗಿವೆ. ಕಾಸರಗೋಡಿನ ಪೆರ್ಲ ಪರಿಸರದ ಹಳ್ಳಿಯಲ್ಲಿ ಕೃಷಿಕ ಕುಟುಂಬದಲ್ಲಿ ಕ್ರಿಯಾಶೀಲರಾಗಿರುವ ಶ್ರೀಮತಿ ರಾಜಶ್ರೀ ರೈ ಅವರು ತುಳು ಮತ್ತು ಕನ್ನಡ ಸಾಹಿತ್ಯದ ಕ್ಷೇತ್ರಗಳಲ್ಲಿ ತಮ್ಮನ್ನು ಪ್ರಾಮಾಣಿಕವಾಗಿ ತೊಡಗಿಸಿಕೊಂಡಿದ್ದಾರೆ. ತಾವು ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಂಡಿರುವುದು ಅಷ್ಟೇ ಅಲ್ಲದೆ, ತಮ್ಮ ಮಗಳು ಸನ್ನಿಧಿ ರೈ ಗೆ ಕನ್ನಡ ಮತ್ತು ತುಳು ಸಾಹಿತ್ಯ, ಯಕ್ಷಗಾನ, ನಾಟಕದಂತಹ ಸೃಜನಶೀಲ ರಂಗಗಳಲ್ಲಿ ಬಾಲ್ಯದಿಂದಲೇ ವಿಶಿಷ್ಟ ಸಾಧನೆಗಳನ್ನು ಮಾಡಲು ಪ್ರೋತ್ಸಾಹವನ್ನು ಕೊಡುತ್ತಿದ್ದಾರೆ.                            

ರಾಜಶ್ರೀ ಅವರು ಕನ್ನಡ ಸಂಶೋಧನೆಯ ಕ್ಷೇತ್ರಕ್ಕೆ ಪದಾರ್ಪಣೆ ಮಾಡಿರುವುದು ಒಂದು ಒಳ್ಳೆಯ ಬೆಳವಣಿಗೆ. ಅವರ ‘ತುಳುನಾಡಿನ ಮೂರಿಗಳ ಆರಾಧನೆ’ ಎನ್ನುವ ಅಧ್ಯಯನಶೀಲ ಕೃತಿಗೆ ಮುನ್ನುಡಿ ಬರೆಯಲು ನನ್ನನ್ನು ಕೇಳಿಕೊಂಡು ಹಸ್ತಪ್ರತಿಯನ್ನು ಕಳುಹಿಸಿದರು. ಅವರ ಈ ಸಂಶೋಧನೆಯ ಕೃತಿಯನ್ನು ಮೊದಲನೆಯ ಬಾರಿ ಓದಿದಾಗ ನನಗೆ ಆಶ್ಚರ್ಯ ಮತ್ತು ಆನಂದ ಎರಡೂ ಜೊತೆಗೆಯೇ ಆಯಿತು. ಆಶ್ಚರ್ಯವಾಗುವುದಕ್ಕೆ ಮುಖ್ಯ ಕಾರಣವೆಂದರೆ ನನ್ನ ಸುಮಾರು ಐವತ್ತು ವರ್ಷಗಳ ತುಳು ಜಾನಪದ ಅಧ್ಯಯನದ ಅನುಭವದಲ್ಲಿ ‘ಮೂರಿಗಳ ಆರಾಧನೆ’ಯ ಬಗ್ಗೆ ನನಗೆ ಈ ಯಾವುದೇ ಮಾಹಿತಿ ತಿಳಿದಿರಲಿಲ್ಲ.

ಇನ್ನೊಂದು ಕಾರಣವೆಂದರೆ, ತುಳು ಕನ್ನಡದಲ್ಲಿ ಕತೆ ಕವನ ನಾಟಕ ಕಾದಂಬರಿ ಬರೆಯುತ್ತಿರುವ ರಾಜಶ್ರೀ ಅವರು ಇಷ್ಟು ವ್ಯಾಪಕ ಕ್ಷೇತ್ರಕಾರ್ಯದ ಮೂಲಕ ಇಂತಹ ಕ್ಲಿಷ್ಟಕರ ಸಂಶೋಧನೆಯನ್ನು ಮಾಡುವ ಸಾಹಸವನ್ನು ಮಾಡಿದ್ದಾರೆ ಎಂಬುದು. ಆನಂದಕ್ಕೆ ಮುಖ್ಯ ಕಾರಣವೆಂದರೆ ರಾಜಶ್ರೀ ಅವರಂತಹ ಮಹಿಳೆಯರು ಇಂತಹ ಸಂಶೋಧನೆಯ ಕ್ಷೇತ್ರಕ್ಕೆ ಪ್ರವೇಶಮಾಡುವುದರ ಮೂಲಕ ಕರಾವಳಿಯ ಜಾನಪದ ಅಧ್ಯಯನಕ್ಕೆ ಹೊಸದಿಕ್ಕುಗಳು ಗೋಚರಿಸುತ್ತವೆ. ಇದರ ಜೊತೆಗೆಯೇ ಕಾಸರಗೋಡು ಪರಿಸರವು ಇಂತಹ ತಲಸ್ಪರ್ಶಿ ಅಧ್ಯಯನಗಳಿಗೆ ಹೆಚ್ಚು ಹೆಚ್ಚು ತೆರೆದುಕೊಳ್ಳುತ್ತದೆ.          

ತುಳುನಾಡಿನ ಮೂರಿಗಳ ಆರಾಧನೆಗೆ ಸಂಬಂಧಪಟ್ಟಂತೆ ರಾಜಶ್ರೀ ಅವರು ಮೂರಿ ಅಥವಾ ಮುರ್ಲಿ ದೈವಗಳು, ಆರಾಧನೆ ಕಂಡುಬರುವ ಪ್ರಾದೇಶಿಕ ವ್ಯಾಪ್ತಿ, ಪಾಡ್ದನದಲ್ಲಿ ಉಲ್ಲೇಖಿತವಾದ ಆರಾಧನೆಯ ಕೇಂದ್ರಗಳು , ಮೂರಿ ಆರಾಧನೆಯ ಉಗಮದ ಕಥನಗಳು, ಮೂರಿ ಪ್ರಸ್ತಾವದ ಪಾಡ್ದನಗಳು, ಮೂರಿಗಳ ಭೌತಿಕ ಸ್ವರೂಪ, ಆರಾಧನಾ ವಿಧಾನ ಮತ್ತು ವೈವಿಧ್ಯ – ಇವುಗಳನ್ನು ವಿವರವಾಗಿ ಪರಿಶೀಲಿಸಿದ ಬಳಿಕ ತಮ್ಮ ನಿರ್ದಿಷ್ಟ ಕ್ಷೇತ್ರಕಾರ್ಯದ ಫಲಿತಗಳಾಗಿ ಕುಂಭ್ಡಾಜೆ ಬೂಡಿನಲ್ಲಿ ನಡೆಯುವ ಮೂರಿಗಳ ಆರಾಧನಾ ವಿಧಿವಿಧಾನಗಳು, ಮೂರಿತಟ್ಟ್, ದೊಡ್ಡಡ್ಕ ಮುಗೇರುವಿನ ಮಾಹಿತಿ, ಪುತ್ರಕಲ ಬೀಡಿನ ಮೂರಿತಟ್ಟ್ ಗಳ ಬಗ್ಗೆ ವಿವರಣೆಗಳನ್ನು ಕೊಟ್ಟಿದ್ದಾರೆ. ಅದರ ಬಳಿಕ ತಮ್ಮ ಕ್ಷೇತ್ರಕಾರ್ಯದಲ್ಲಿ ಸಂದರ್ಶಿಸಿದ ಮೂರಿ ಆರಾಧನೆಯ ಸಂಬಂಧದ ಸ್ಥಳಗಳಾದ ಕೋಡಿಂಗಾರು ಚೌಕಾರು ಮಾಲ್ಯ, ಪುತ್ತಿಗೆ ಗುತ್ತು, ಪೆರ್ಲ ಬೀಡು, ಕಡಾರು, ಮುನಿಯೂರು, ಯಣ್ಮಕಜೆ, ಗ್ರಾಮಚಾವಡಿ ಕಿನ್ನಿಜಾಲು – ಇವುಗಳ ಸಾಂಸ್ಕೃತಿಕ ಅನನ್ಯತೆಗಳನ್ನು ವಿವರಿಸಿದ್ದಾರೆ. ಬಳಿಕ ಮೂರಿ ದೈವಗಳ ಜೊತೆಗೆ ಸೇರಿಕೊಂಡಿರುವ ಪಾರಂಪರಿಕ ಕಥನಗಳ ಟಿಪ್ಪಣಿ ಇದೆ.

ಕೊನೆಯಲ್ಲಿ ಮೂರಿ ಆರಾಧನೆಯ ಜೊತೆಗೆ ಸಾಮ್ಯತೆ ಹೊಂದಿರುವ ಇತರ ಆಚರಣೆಗಳ ಪ್ರಸ್ತಾವ ಇದೆ. ಮೂರಿ ಆರಾಧನೆಯ ಉಗಮದ ಕಥನಗಳ ವಿವೇಚನೆ ಮಾಡುವಾಗ ರಾಜಶ್ರೀ ಅವರು ತಾವು ಕ್ಷೇತ್ರಕಾರ್ಯದ ಮೂಲಕ ಸಂಗ್ರಹಿಸಿದ ತುಳು ಪಾಡ್ದನಗಳನ್ನು ಮೂಲ ಮತ್ತು ಕನ್ನಡ ಅನುವಾದಗಳ ಮೂಲಕ ಕೊಟ್ಟಿದ್ದಾರೆ. ಅವರು ಅನುಬಂಧದಲ್ಲಿ ಕೊಟ್ಟಿರುವ ಜಾನಪದ ಸಂಪನ್ಮೂಲ ವ್ಯಕ್ತಿಗಳ ಸಂದರ್ಶನಗಳು, ಮೋರಿ ಕುರಿತ ಸಂಶೋಧಕರ ಟಿಪ್ಪಣಿಗಳು ಮತ್ತು ಮೋರಿ ಆರಾಧನೆ ಕುರಿತ ಅಪೂರ್ವ ಭಾವಚಿತ್ರಗಳು ಈ ಸಂಶೋಧನಾಗ್ರಂಥದ ಮೌಲ್ಯವನ್ನು ಹೆಚ್ಚಿಸಿವೆ. 

ರಾಜಶ್ರೀ ಅವರು ಈ ಗ್ರಂಥದಲ್ಲಿ ಅಧ್ಯಯನಮಾಡಿರುವ ಮೂರಿಗಳನ್ನು ಕುರಿತ ಶೋಧವು ತುಳು ಜಾನಪದ ಸಂಶೋಧನೆಯ ದೃಷ್ಠಿಯಿಂದ ಬಹಳ ಮಹತ್ವಪೂರ್ಣವಾದುದು ಎಂದು ನಾನು ಭಾವಿಸುತ್ತೇನೆ. ಮಣ್ಣು ಮತ್ತು ಮಣ್ಣಿನಿಂದ ಮಾಡಿದ ಮಡಕೆಗಳು ತಮ್ಮ ವಿಶಿಷ್ಟಆಕೃತಿ ಮತ್ತು ಕಾರಣಗಳಿಂದ ದೈವಗಳಾಗಿ ಆರಾಧನೆಗೊಳ್ಳುವ ವಿದ್ಯಮಾನವನ್ನು ರಾಜಶ್ರೀ ಅವರು ವ್ಯಾಪಕ ಕ್ಷೇತ್ರಕಾರ್ಯ ಮತ್ತು ಸೂಕ್ಷ್ಮ ಪರಿಶೀಲನೆಯಿಂದ ಈ ಕೃತಿಯಲ್ಲಿ ಅನಾವರಣ ಮಾಡಿದ್ದಾರೆ.

ಮಣ್ಣಿನ ಮಡಕೆಗಳನ್ನು ಪವಿತ್ರ ಎಂದು ಆರಾಧಿಸುವ ಪದ್ಧತಿಯು ಬಹಳ ಪ್ರಾಚೀನವೆಂದು ಅನ್ನಿಸುತ್ತದೆ. ಬಸವಣ್ಣನವರ ಒಂದು ವಚನದಲ್ಲಿ ‘ಮಡಕೆ ದೈವ, ಮೊರ ದೈವ’ ಎಂಬ ಉಲ್ಲೇಖ ಬರುತ್ತದೆ. ‘ಕಲಶ ಪೂಜೆ’ ‘ಕುಂಭ ಪೂಜೆ’ ಇವು ಪರಂಪರೆಯಲ್ಲಿ ಬಳಕೆಯಲ್ಲಿವೆ. ರಾಜಶ್ರೀ ಅವರು ಬೇರೆ ಬೇರೆ ಸ್ಥಳಗಳಲ್ಲಿ ದೊರೆತ ಆಲಂಕಾರಿಕ ಮಡಕೆಗಳ ಚಿತ್ರಗಳನ್ನು ಕೊಟ್ಟಿದ್ದಾರೆ. ಮಡಕೆಗಳ ಮೇಲೆ ಚಿತ್ರಿತವಾದ ವಿನ್ಯಾಸಗಳು ಮತ್ತು ದೈವದ ಸಾಂಕೇತಿಕ ಚಿಹ್ನೆಗಳು ಕುತೂಹಲಕಾರಿ ಆಗಿವೆ. ಮಣ್ಣಿನ ಚಿಕ್ಕ ಪಾತ್ರೆಗಳನ್ನು ದೈವಗಳ ಆರಾಧನೆಗಳಲ್ಲಿ ಭಕ್ತಿಪೂರ್ವಕ ಅರ್ಪಿಸುವ ಪದ್ಧತಿ ಹಿಂದೆ ತುಳುನಾಡಿನಲ್ಲಿ ಪ್ರಚಲಿತವಾಗಿ ಇದ್ದುದಕ್ಕೆ ಕುರುಹುಗಳು ದೊರೆತಿವೆ. ‘ಮೂರಿ’ ಶಬ್ದಕ್ಕೆ ಕನ್ನಡದಲ್ಲಿ ‘ಕೋಣ’ ಎನ್ನುವ ಅರ್ಥ ಕೂಡಾ ಇದೆ.

ತುಳು ನಿಘಂಟುವಿನಲ್ಲಿ ‘ಮೂರಿ’ ಶಬ್ದಕ್ಕೆ ‘ಮಣ್ಣಿನ ಸಣ್ಣ ಪಾತ್ರೆ’ (ಮೂರಿ ಗಿಂಡಿಯೆ) ಎನ್ನುವ ಅರ್ಥವನ್ನೂ ಕೊಡಲಾಗಿದೆ. ಮಣ್ಣಿನ ಆರಾಧನೆಯು ಭಿನ್ನ ಸ್ವರೂಪಗಳಲ್ಲಿ ಕಾಣಿಸಿಕೊಂಡಿರಬಹುದಾದ ಸಾಧ್ಯತೆಗಳಲ್ಲಿ ‘ಮೂರಿಯ ಆರಾಧನೆ ‘ ಬಹಳ ವಿಶಿಷ್ಟವಾದುದು ಅನ್ನಿಸುತ್ತದೆ. ಮೂರಿ ಆರಾಧನೆಯ ಪ್ರಾದೇಶಿಕ ವ್ಯಾಪ್ತಿಯು ಬಹುಮಟ್ಟಿಗೆ ಕಾಸರಗೋಡು ಪ್ರದೇಶದ ಸ್ಥಳಗಳನ್ನು ಹೊಂದಿದೆ. ಈ ಕುರಿತು ರಾಜಶ್ರೀ ಅವರು ಕೆಲವು ಪ್ರಮೇಯಗಳನ್ನು ಮಂಡಿಸಿದ್ದಾರೆ.

ಮೂರಿ ಆರಾಧನೆಯ ಉಗಮವನ್ನು ಕುರಿತ ಕಥನಗಳು ಮತ್ತು ಸಂಗ್ರಹಿಸಿದ ಪಾಡ್ದನಗಳು ಈ ಸಂಶೋಧನಾ ಗ್ರಂಥದ ತಿರುಳಿನ ಭಾಗ ಎಂದು ನಾನು ಭಾವಿಸುತ್ತೇನೆ. ಬಹಳ ಅಪೂರ್ವ ಸಾಮಗ್ರಿಗಳನ್ನು ಇಲ್ಲಿ ಕಲೆಹಾಕಿದ್ದಾರೆ ಮತ್ತು ಪರಿಶೀಲಿಸಿದ್ದಾರೆ. ಇವನ್ನು ಇನ್ನಷ್ಟು ಶೋಧಿಸಲು ಅವಕಾಶ ಇದೆ. ತುಳು ಜಾನಪದ ಕ್ಷೇತ್ರಕಾರ್ಯದಲ್ಲಿ ಈ ಪಾಡ್ದನಗಳು ಬಹಳ ಉಪಯುಕ್ತವಾದುವು. ಕಾಸರಗೋಡು ಪರಿಸರದ ಬಹುತೇಕ ಎಲ್ಲಾ ಸ್ಥಳಗಳಲ್ಲಿ ಮೂರಿಗಳ ಆರಾಧನೆಗೆ ಸಂಬಂಧಿಸಿದಂತೆ ರಾಜಶ್ರೀ ಅವರು ಕ್ಷೇತ್ರಕಾರ್ಯ ನಡೆಸಿ ಸಂಗ್ರಹಿಸಿದ ವಿವರಗಳು ಅಮೂಲ್ಯ ಆಕರಸಾಮಗ್ರಿಗಳಾಗಿದ್ದು ಅವುಗಳ ವೈವಿಧ್ಯ ಬೆರಗನ್ನು ಉಂಟುಮಾಡುತ್ತದೆ. ಇವುಗಳನ್ನೇ ಮೂಲ ಆಕಾರಗಳನ್ನಾಗಿ ಇಟ್ಟುಕೊಂಡು ತೌಲನಿಕ ಅಧ್ಯಯನ ಮಾಡಲು ಸಾಕಷ್ಟು ಅವಕಾಶಗಳು ಇವೆ.        

ರಾಜಶ್ರೀ ರೈ ಅವರ ಈ ಅಧ್ಯಯನ ಗ್ರಂಥವು ತುಳು ಜಾನಪದ ಸಂಶೋಧನೆಗೆ ಹೊಸತೊಂದು ಆಯಾಮವನ್ನು ಕೊಡಲು ಶಕ್ತವಾಗಿದೆ. ಸೂಕ್ಷ್ಮವಾದ ಮತ್ತು ವ್ಯಾಪಕವಾದ ಕ್ಷೇತ್ರಕಾರ್ಯವು ಈ ಗ್ರಂಥದ ಒಂದು ಮುಖ್ಯವಾದ ಗಟ್ಟಿ ನೆಲೆಯಾಗಿದೆ. ಇವರು ನಡೆಸಿದ ವಿಶ್ಲೇಷಣೆ ಮತ್ತು ಮಂಡಿಸಿದ ಸಂಶೋಧನಾ ಪ್ರಮೇಯಗಳನ್ನು ಇನ್ನಷ್ಟು ವಿವೇಚಿಸಿ ಮುಂದುವರಿಸಲು ಉತ್ತಮ ಅವಕಾಶಗಳಿವೆ. ಇಲ್ಲಿನ ಮಾಹಿತಿಗಳನ್ನು ಬುನಾದಿಯಾಗಿ ಇರಿಸಿಕೊಂಡು ಮೂರಿ ಆರಾಧನೆಗೆ ಸಂಬಂಧಪಟ್ಟಂತೆ ಅದರ ಪ್ರಸರಣಾ ನಕ್ಷೆಯನ್ನು ರೂಪಿಸಲು ಸಾಧ್ಯವಿದೆ.

ಕಾಸರಗೋಡು ಪರಿಸರದ ಐತಿಹಾಸಿಕ ಭೌಗೋಳಿಕ ಸಾಂಸ್ಕೃತಿಕ ಆವರಣಗಳನ್ನು ಜೊತೆಯಾಗಿ ಇರಿಸಿಕೊಂಡು ಮೂರಿಯಂತಹ ಆರಾಧನೆಯ ಸಂರಚನೆಯನ್ನು ಪುನಾರಚಿಸಲು ಸಂಶೋಧನಾ ವಿನ್ಯಾಸವನ್ನು ರೂಪಿಸಬಹುದು. ರಾಜಶ್ರೀ ಅವರ ಈ ಶ್ರದ್ಧಾವಂತ ಮೌಲಿಕ ಪ್ರಯತ್ನಕ್ಕಾಗಿ ಅವರನ್ನು ಹಾರ್ದಿಕವಾಗಿ ಅಭಿನಂದಿಸುತ್ತೇನೆ. ಅವರು ತುಳು ಜಾನಪದದ ಇಂತಹ ಕ್ಷೇತ್ರಗಳಲ್ಲಿ ಇದೇ ರೀತಿ ತೊಡಗಿಸಿಕೊಂಡು ಸಂಶೋಧನೆಗೆ ಇನ್ನಷ್ಟು ಹೊಸ ಕೊಡುಗೆಗಳನ್ನು ಕೊಡಲಿ ಎಂದು ಹಾರೈಸುತ್ತೇನೆ.  

‍ಲೇಖಕರು Admin

February 13, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: