ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬಿ ಎಂ ಹನೀಫ್ ಕವಿತೆ- ಪಾದ ಪ್ರಜ್ಞೆ…

ಬಿ ಎಂ ಹನೀಫ್

ಪಾದರಕ್ಷೆಗಳನ್ನು ನಂಬಿ ಓಡಬೇಡ
ಪಾದಗಳ ಮೇಲೆ ನಂಬಿಕೆಯಿಡು

ಕೆಸರು ತುಳಿದರೆ ಪಾದ ತೊಳೆಯುವ ಪ್ರಶ್ನೆಯಿಲ್ಲ
ಕೆಸರೇ ಇಲ್ಲದ ಹಸಿರು ಹುಲ್ಲಿನ ಹಾಸದು

ಓಡುತ್ತಿರುವ ಮೈದಾನದಲ್ಲಿ ಪಾದ ದಾಳಿಗೆ ಸಿಕ್ಕ
ಹಸಿರು ಹುಲ್ಲಿಗೆ ಎಷ್ಟು ನೋವಾಯಿತೆಂದು
ನಿಂತು ಯೋಚಿಸಲು ಇಲ್ಲಿ ಸಮಯವಿಲ್ಲ

ನಿನ್ನ ಪಾದದ ಬೆರಳುಗಳಿಗೆ ನಂಜು ಹತ್ತಿದಾಗ ಅಮ್ಮ
ಕಾಗದ ಸುಟ್ಟು ಅದರ ಕರಿ ಹಚ್ಚಿದ ನೆನಪಿದೆಯೆ?
ಯಾವ ವೈದ್ಯಶಾಸ್ತ್ರದಲ್ಲಿತ್ತು ಅವಳ ಆ ಚಿಕಿತ್ಸೆ?

ಹೌದು, ಚೆಂಡು ಒದೆಯುವಾಗ ಗಮನಿಸುವುದು
ನಿನ್ನದನ್ನಲ್ಲ, ಎದುರಾಳಿಯ ಪಾದಗಳನ್ನು

ನೀ ಬಲವನ್ನೆಲ್ಲ ಪಾದಕ್ಕೂರಿ ಫಳಾರೆಂದು
ಒದ್ದ ಚೆಂಡು ಗೋಲ್ ಕೀಪರನ ಕಣ್ಣು ತಪ್ಪಿಸಿ
ಗುರಿ ತಲುಪಿದಾಗ ಕ್ರೀಡಾಂಗಣದಲ್ಲಿ
ಲಕ್ಷ ಕೊರಳುಗಳ ದೀರ್ಘ ಹರ್ಷೋದ್ಘಾರ

ನೀನು ಮಂಡಿಯ ಮೇಲೆ ಹಸಿರು ಹುಲ್ಲಿನಲಿ
ಜಾರುತ್ತಾ ಬಾಲ್ಕನಿಯಲ್ಲಿ ಕುಳಿತ ನಿನ್ನ
ಪ್ರೇಯಸಿಯೆಡೆಗೆ ಎರಡೂ ಕರಗಳಿಂದ
ತುಟಿಯೊತ್ತಿ ಮುತ್ತು ಹಾರಿಸಿದ ಹೊತ್ತು

ಅಲ್ಲಿ ದೂರ ದೇಶದ ಮನೆಯಲ್ಲಿ ಟಿವಿಯ ಮುಂದೆ
ಪಂದ್ಯ ನೋಡುತ್ತಿದ್ದ ನಿನ್ನ ಅಮ್ಮ
ಬಾಲ್ಯದಲ್ಲಿ ತೊಟ್ಟಿಲಲ್ಲಿ ಮಲಗಿದ್ದ ನಿನ್ನ ಅದೇ
ನಸುಕೆಂಪು ಪಾದಗಳನ್ನು ಮೂಗಿಗೆ ಒತ್ತಿ ಒರೆಸಿ
ಮುತ್ತಿಡುತ್ತಿದ್ದುದನ್ನು ನೆನೆದು ಕಣ್ಣೀರಾದ ದೃಶ್ಯ
ಯಾವ ಟೀವಿಯೂ ತೋರಿಸಲಿಲ್ಲವಲ್ಲ!

‍ಲೇಖಕರು Admin

19 December, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading