ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬಿ ಎಂ ಬಷೀರ್ ಕವಿತೆ: ಹೆಣ್ಣು ಮಲಗೋದು…!

ಬಿ ಎಂ ಬಷೀರ್

ಗುಜರಿ ಅಂಗಡಿ

 
ಮಲಗೋದು ಎನ್ನೋ ಶಬ್ದ
ಹೆಣ್ಣಿನ ಪಾಲಿಗೆ ಅನೈತಿಕ…
ಯಾರ ಜೊತೆಗೆ ಎಂಬ
ಜೋಡಿ ಪದ
ತಕ್ಷಣ
ಪ್ರಶ್ನೆಯಾಗಿ ಎರಗುತ್ತದೆ…
 
ಅವಳು ಗಂಡನ ಜೊತೆ ಮಲಗಬೇಕು..
ಅಥವಾ ಮಗುವಿನ ಜೊತೆಗೆ…
ಒಬ್ಬಂಟಿ ಮಲಗುವ ಹೆಣ್ಣಿನ ಸುತ್ತ
ಸಾವಿರ ಕಣ್ಣುಗಳು….

ಅದಕ್ಕಾಗಿಯೆ ಹೆಣ್ಣು
ಗಂಡನ ಕನಸು ಕಾಣುತ್ತಾಳೆ..
ಅದು ನಿಜಕ್ಕೂ
ನೆಮ್ಮದಿಯಿಂದ ಮಲಗುವ ಕನಸು…
 
ಆದರೆ ಅವಳಿಗೆ ಬೇಗ
ಅರಿವಾಗಿ ಬಿಡೂದು
ನನ್ನ ನಿದ್ದೆ ನನ್ನದಲ್ಲ ಎನ್ನೋದು
ಅವನ ಮಲಗಿಸೋದಕ್ಕಾಗಿ
ಅವನ ಜೊತೆ ಮಲಗಬೇಕೆ
ಹೊರತು ತಾನು ಮಲಗೂದಕ್ಕಲ್ಲ…
 
ಪ್ರತಿ ಬಾರಿ ಗಂಡ
ಮಲಗಿದ ಬಳಿಕವಷ್ಟೇ
ಅವಳು ಮಲಗಬೇಕು…
ಆತನಿಗೆ ನಿದ್ದೆಯಿಲ್ಲ ಎಂದರೆ
ಇವಳಿಗೂ ನಿದ್ದೆ ಇಲ್ಲ….
 
ಪ್ರತಿ ಬಾರಿ ಯೋಚಿಸುತ್ತಾಳೆ
ನನಗಾಗಿ ಮಲಗಿದ್ದೆ ಇಲ್ಲ…
ಒಮ್ಮೆ ಕಣ್ತುಂಬಾ ನಾನು
ನನ್ನ ಜೊತೆಯೇ ಮಲಗಬೇಕು…
ನನಗಾಗಿ ಮಲಗಬೇಕು
 
ಇತ್ತೀಚೆಗೆ….
ಗೋರಿಯೊಳಗೆ
ಗಂಡನ ಹಂಗಿಲ್ಲದೆ
ಒಬ್ಬಂಟಿಯಾಗಿ… ಸುಖವಾಗಿ…
ನಿದ್ದೆ ಹೋದ ಹೆಣ್ಣು ಜೀವಗಳು
ಅವಳ ಕನಸಲ್ಲಿ ಆಗಾಗ
ಕಾಣಿಸಿ ಕೊಳ್ಳುತ್ತಾರೆ…!
 

‍ಲೇಖಕರು G

25 March, 2013

2 Comments

  1. mmshaik

    maarmikavada kavana..sir

  2. Arpitha

    ನಮಗೆ ಯಾವ ಗೋರಿಯ ಕನಸೂ ಬೇಡ
    ನಮ್ಮ ತನವನ್ನೆಲ್ಲಾ ತರಿದು ಹುಗಿದು ಗೋರಿಕಟ್ಟಿ ಮೆರೆಯುತ್ತಿರುವವರ
    ಪೌರುಷದ ಗೋಣು ಮುರಿದು ಮಣ್ಣು ಮಾಡುವವರೆಗೂ
    ಮತ್ತು ನಮ್ಮ ಬದುಕು ನನಗೆ ಸಿಗುವವರೆಗೂ
    ಯಾವ ಗೋರಿಯಲ್ಲೂ ನಾವು ನೆಮ್ಮದಿಯಿಂದ ಮಲಗಲಾರೆವು.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading