ಕಾರವಾರದ ಹರಪನಹಳ್ಳಿ ನಾಗರಾಜ ಅವರ ಕವನ ಸಂಗ್ರಹ ’ಬಿಸಿಲ ಬಯಲ ಕಡಲು’ ಸಧ್ಯದಲ್ಲೇ ಬಿಡುಗಡೆ ಆಗಲಿದೆ.
ಪುಸ್ತಕದ ಮುಖಪುಟ ಇಲ್ಲಿದೆ.

ಕವನ ಸಂಕಲನದ ಮೂರು ಕವಿತೆಗಳು ಅವಧಿ ಓದುಗರಿಗಾಗಿ :
ಮಾಯೆ
ಮನದ ಮುಂದಣ ಹೆಜ್ಜೆ
ಅನಂತ ಕನಸುಗಳ ಮಾಯೆ
ಮನದ ಹಿಂದಣ ಹೆಜ್ಜೆ
ನನಸಾಗದ ನೆನಪುಗಳ ಮಾಯೆ
ಮನದ ಮುಂದಣ ಬದುಕು
ಸಾವಿರ ಸಾವಿರದ ಕನಸ ಬೀಜ
ಬಂದೀತು ಮಳೆ ಅರಳೀತು ನೆಲ
ಕತ್ತಲ ಮಣ್ಣ ಸೀಳಿ ಹುಟ್ಟೀತು ಮೊಳಕೆ
ಮನದ ಹಿಂದಣ ಭೂತ
ಸಿಹಿಕಹಿಯ ಗರ್ಭ
ದೀಪಸಾಲು ಹಚ್ಚಿ ಕತ್ತಲ ಗೆದ್ದ
ಅಂಹಕಾರ; ಮೀಸೆ ತಿರುವಿ ತೆಗೆಸಿದ
ಪೋಟೋ ಧೂಳು ತಿನ್ನುತ್ತಿರಲು
ಮಾಯೆ ನಕ್ಕಳು ; ಅಲ್ಲಮ ಗೆಲ್ಲಲಿಲ್ಲ
ಮಾಯೆ ಸೋಲಲಿಲ್ಲ
೨. ಬೆತ್ತಲಾಗುವುದೆಂದರೆ…..

ಬಾಗಿಲು ಹಾಕಿಕೊಂಡು ಬಾತ್ ರೂಂನಲ್ಲಿ
ಬೆತ್ತಲಾಗುವುದೆಂದರೆ
ಬಯಲಾಗುವುದು ಮೈ
ಮನದ ಸುಳಿಗಳನ್ನು ಬಿಚ್ಚಿಡುವುದು
ಬೆತ್ತಲಾಗುವುದೆಂದರೆ ನೂರು
ಭಾವನೆಗಳ ಲಹರಿಯ ಹರಿಬಿಡುವುದು
ಹರಿವ ಭಾವ ಲಹರಿಗೆ
ಜಳಕ ಮಾಡಿಸುವುದು
ಬೆತ್ತಲಾಗುವುದೆಂದರೆ ನೂರು
ಭಾವಕೊಶಗಳನ್ನು ಬಿಚ್ಚಿಟ್ಟು
ಮುಚ್ಚಿಟ್ಟದ್ದೆಕ್ಕೆಲ್ಲ ಬಾಯಿಕೊಟ್ಟು
ನಮಗೆ ನಾವೇ ಕನ್ನಡಿಯಾಗುವುದು
ಬೆತ್ತಲಾಗುವುದೆಂದರೆ ನೂರು
ಮುಖ ನೂರಾರು ರಾಗದ್ವೇಷಗಳ
ಬಿಸಾಕಿ ಬುದ್ಧನಾಗುವುದು
ಅಂಗವೇ ಲಿಂಗವಾಗಿ ಅಕ್ಕನಾಗುವುದು
ಬೆತ್ತಲಾಗುವುದೆಂದರೆ
ಅಂತರಂಗದ ಜಾಲಗಳನ್ನೆಲ್ಲಾ
ಹರಿದು ಖಾಲಿಯಾಗುವುದು
ಮಾಯೆಗೆದ್ದ ಅಲ್ಲಮನಾಗುವುದು
ಬರೆಯಬೇಡ ಕವಿತೆ
ಕುಳಿತ ಕಚೇರಿಯ
ಒಡೆದ ಕಿಟಕಿಯ ಗಾಜು
ಬದುಕ ಅಣಕಿಸಿರಲು
ಬರೆಯಬೇಡ ಕವಿತೆ
ನಡೆವ ದಾರಿಯ ತುಂಬ
ಹೊಂಡ ಗುಂಡಿಗಳ ಸಾಲು
ನಡೆದಾಡುವ ಜನರ ಕೆಣಕಿರಲು
ಬರೆಯಬೇಡ ಕವಿತೆ
ಅಕ್ಷರ ಲೋಕದ ಹಾದರ
ಬೆಳಕ ನೀಡದ ಬದುಕು
ಕತ್ತಲ ಕೂಪದಲಿ ನರಳಿರಲು
ಸರ್ಕಾರ ಕಾರ್ಮಿಕರಿಗೆ
ತಿಂಗಳ ಭಿಕ್ಷೆ ನೀಡಿ
ಬೀಗ ಜಡಿದಿರಲು ಮೆದುಳಿಗೆ
ಬರೆಯಬೇಡ ಕವಿತೆ
ಭಾವನೆ ಕೆರಳಿಸಿದ ಆರೋಪ
ಹೊರಿಸಿ ಸೆರೆಮನೆಗೆ ತಳ್ಳೀತು
ಪ್ರಭುತ್ವ ; ಗೆಳೆಯ ಕಣ್ಣು
ಕಿವಿ ಮುಚ್ಚಿ ಮೌನಿಯಾಗು
ಬರೆಯಬೇಡ ಕವಿತೆ








Chennagive best of luck
olleya salugalu.abhinandanegalu sir.
nice..