ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

'ಬಿಸಿಯೂಟ ನಮ್ಮ ಸಂಸ್ಕಾರ ಅಲ್ಲ……!

ಸುರೇಶ್ ಕಂಜರ್ಪಣೆ

ಬಿಸಿಯೂಟ ನಮ್ಮ ಸಂಸ್ಕಾರ ಅಲ್ಲ ಎಂದು ವಿದ್ವನ್ಮಣಿ ಉಮಾಕಾಂತ್ ಭಟ್ಟರು ಅಪ್ಪಣೆ ಕೊಡಿಸಿದ್ದಾರೆ. ಇದು ಆಕಸ್ಮಿಕ ಪ್ರತಿಕ್ರಿಯೆ ಅಲ್ಲ. ಕೃಷಿ ಮೂಲ ಜೀವನೋಪಾಯದ ಹವ್ಯಕರು ನಿತ್ಯ ಬದುಕಿಗೆ ಗುದ್ದಾಡುತ್ತಾ ಬದುಕುತ್ತಿದ್ದ ಕಾಲವೊಂದಿತ್ತು.
ಕೆವಿ ಅಕ್ಷರ ಒಮ್ಮೆ ಹವ್ಯಕ ಅಂದರೆ “ಹಕಾರ ಹಳ್ಳಿವಾಸಾಯ, ವ್ಯಕಾರ ವ್ಯವಸಾಯಚ, ಕಕಾರ ಕತ್ತಿ ಕಂಬ್ಳಾಚ” ಎಂದು ಊರಿನಲ್ಲಿದ್ದ ನುಡಿಗಟ್ಟನ್ನು ನೆನಪಿಸಿದ್ದರು. ಕಾರಂತರ ಬೆಟ್ಟದ ಜೀವ ಇಂಥಾ ಹವ್ಯಕರ ಚಿತ್ರ. ಭೂಮಿ ಕಾಣಿಯಲ್ಲಿ ಏಗುತ್ತಾ ನಿತ್ಯದಲ್ಲಿ ಅಷ್ಟಿಷ್ಟು ಮುಟ್ಟು ಚಟ್ಟು ಮಡಿ ಪಾಲಿಸಿದರೂ ಗೈಮೆಯಲ್ಲಿ ಶೂದ್ರರ ಜೊತೆ ಗೇಯುತ್ತಿದ್ದ ಕಾಲವಿತ್ತು.
ಅಷ್ಟೇಕೆ ಊರು ಕಟ್ಟಿದ ನೂರಾರು ಹವ್ಯಕ ಹಿರಿಯರಿದ್ದಾರೆ. ಅವರು ಯಾರೂ ಶಿಕ್ಷಣದ ವಿಷಯದಲ್ಲಿ ಬಡವರ ಬಗ್ಗೆ ವ್ಯಂಗ್ಯವಾಡಿರಲಿಲ್ಲ. ಸ್ವತಃ ನೂರಾರು ಹವ್ಯಕರು ಹೊರ ಊರುಗಳಲ್ಲಿ ಉಚಿತ ಹಾಸ್ಟೆಲುಗಳಲ್ಲಿ ಉಂಡು ವಿದ್ಯೆ ಪಡೆದಿದ್ದಾರೆ.
ಆದರೆ ಕಳೆದ ಎರಡು ದಶಕಗಳಲ್ಲಿ ಹವ್ಯಕರ ಬದುಕಿನಲ್ಲಿ ಅತ್ಯಂತಿಕ ಬದಲಾವಣೆ ಬಂದಿದೆ. ವ್ಯಾಪಾರಿ ಬೆಳೆಗಳ ಕಾರಣಕ್ಕೆ ಕಾಸು ಸೇರಿದ್ದು ಒಂದಾದರೆ; ಮಕ್ಕಳೆಲ್ಲಾ ಐಟಿ ಇತ್ಯಾದಿ ಕೆಲಸ ಪಡೆದಿದ್ದು ಇನ್ನೊಂದು.
ಈ ಹಂತದಲ್ಲಿ ಆಳವಾಗಿ ಬೇರೂರಿದ ಸಂಗತಿ ಎಂದರೆ ಜಾತಿ ದೃಢೀಕರಣ ಮತ್ತು ಮೀಸಲಾತಿಯಿಂದ ಹಿಡಿದು ಎಲ್ಲಾ ಕಲ್ಯಾಣ ಕಾರ್ಯಕ್ರಮಗಳ ಬಗ್ಗೆ ತಾತ್ಸಾರ. ಇದರೊಂದಿಗೇ ಸಾಹಿತ್ಯದ ಓದೂ ಮರೆಯಾಯಿತು. ಸಾಹಿತ್ಯದ ಓದು ಅಂದರೆ ಅದು ಕೊಡುವ ನೈತಿಕ ಸಮತೋಲನ.Moral Equilibrium.
ನೀವಿಂದು ಸಾಮಾಜಿಕ ಜಾಲತಾಣಗಳಿಂದ ಹಿಡಿದು ಪತ್ರಿಕೆಗಳಲ್ಲಿ ಕ್ರಿಯಾಶೀಲವಾಗಿರುವ ಹವ್ಯಕ ಹುಡುಗರನ್ನು ಪ್ರೌಢರ ನಿಲುಮೆ ಕಂಡರೆ ಇದು ಗೊತ್ತಾಗುತ್ತದೆ. ಬಡತನದ ಬಗ್ಗೆ ದಲಿತರ ಬಗ್ಗೆ, ವಲಸೆ ಬಗ್ಗೆ, ಬರಗಾಲದ ಬಗ್ಗೆ ಇರುವ ಅವಜ್ಞೆ ಎದ್ದು ಕಾಣುತ್ತದೆ. ಇದರೊಂದಿಗೇ ರಾಘವೇಶ್ವರ ಭಾರತಿ ಎಂಬ ಸ್ವಾಮೀಜಿ ಕುದುರಿಸಿದ ಜಾತಿ ಪ್ರಜ್ಞೆ ಈ ಜನಾಂಗದ ನೈತಿಕ ಲೋಕದೃಷ್ಟಿಗೆ ಅತ್ಯಂತಿಕ ಘಾಸಿ ಉಂಟು ಮಾಡಿದೆ. “ಅವರು ಮಾಡಿಲ್ಲವಾ? ಇವರು ಮಾಡಿಲ್ಲವಾ” ಎಂಬ ವಾಟ್ ಅಬೌಟರಿ ವಡ್ಡ ವಾದ ಸ್ಥಾಯಿಯಾಗಿದೆ.
ಇದರ ರೋಗ ಲಕ್ಷಣಗಳಾಗಿ ಗಾಂಧಿ, ಅಂಬೇಡ್ಕರ್ ಬಗ್ಗೆ ಲೇವಡಿ, ಹಿಂದುತ್ವದ ಪರವಾದ ದಟ್ಟ ನಿಲುವು ಇವೆಲ್ಲಾ ಎದ್ದು ಕಾಣಿಸುತ್ತಿದೆ.
ಈತನಂತೇ ಇರುವ, ಇಷ್ಟು ಮಾತಾಡದ ಈತನನ್ನು ಅನುಮೋದಿಸುವ ಸಾವಿರಾರು ಹವ್ಯಕರಿದ್ದಾರೆ.
ಈ ದೇಶದಲ್ಲಿ ಹೊಟ್ಟೆಗಿಲ್ಲದೇ ಶಾಲೆ ತೊರೆಯುವ ಮಕ್ಕಳನ್ನು ಕೆಲಸಕ್ಕೆ ಹಚ್ಚುವ ದಲಿತ ಕುಟುಂಬಗಳಿವೆ ಎಂದು ಇವರಿಗೆ ಗೊತ್ತು. ಬಿಸಿ ಊಟದಿಂದಾಗಿ ಅವರ ಆರೋಗ್ಯ ಮತ್ತು ಓದುವ ಶಕ್ತಿ ಸುಧಾರಿಸಿದೆ ಎಂದು ಗೊತ್ತು. ಒಂದೆಡೆ ಮೀಸಲಾತಿಯನ್ನು ವಿರೋಧಿಸುವಾಗ “ಈ ದಲಿತರಿಗೆ ಫ್ರೀ ಎಜುಕೇಶನ್ ಕೊಡಿ ಮೀಸಲಾತಿ ಬೇಡ” ಎಂದು ನುಣ್ಣಗೆ ಮಾತಾಡುತ್ತಾರೆ. ಮೀಸಲಾತಿ ಬಗ್ಗೆ ಕೊಂಕು ಮಾತಾಡುವಾಗ ಪೇಮೆಂಟ್ ಸೀಟು ಪಡೆಯುವ ಮೇಲ್ಜಾತಿಯ ದಡ್ಡರ ಬಗ್ಗೆ ಚಕಾರವೆತ್ತುವುದಿಲ್ಲ. ಅಷ್ಟೇಕೆ ಮೀಸಲಾತಿ ಪಡೆಯುವ ಗೌಡ, ಲಿಂಗಾಯತ ಬಂಟ ಮುಂತಾದ ಜಾತಿಗಳ ಬಗ್ಗೆ ಟೀಕೆ ತೋರುವುದಿಲ್ಲ. ಅರ್ಥಾತ್ ಈ ಕರುಬುವಿಕೆ ಕೂಡಾ ಜಾಣತನದ್ದು.
 
ಇಡೀ ಸಮುದಾಯ ಕೃಷಿ ಸಾಹಸದ ಆತ್ಮಗೌರವ ಸ್ಥೈರ್ಯದ ಹೊಳಪು ಹೊಂದಿದ ಕಾಲವಿತ್ತು. ಇಂದು ಅದು ಕರುಬುವ ಮನಃಸ್ಥಿತಿಗೆ ಬಂದಿದೆ. ಈ ಸಮುದಾಯ ಮತ್ತು ಮಲೆನಾಡಿನ ಎಲ್ಲರ ಸ್ಥಿತಿ ಏನಾಗಿದೆ ಅಂದರೆ ನೂರು ಮೈಲಿ ಆಚೆಯ ಬಯಲು ಸೀಮೆಯ ಅಸಹಾಯ ಸ್ಥಿತಿಯ ಅರಿವೇ ಇಲ್ಲದಂತೆ ಆಗಿದೆ. ರಾಷ್ಟ್ರಭಕ್ತಿಗೆ ಕಾಶ್ಮೀರ, ಸಿಯಾಚೆನ್ ಇತ್ಯಾದಿ ಮಾತಾಡುವವರೂ ಈ ಜಿಲ್ಲೆಗಳಿಗೆ ವಲಸೆ ಬರುವ ಪರ ಊರವರ ಸಂಕಷ್ಟದ ಬಗ್ಗೆ ಅವಜ್ಞೆ ಹೊಂದಿದ್ದಾರೆ.
ಈ ಉಮಾಕಾಂತ ಭಟ್ಟರಂಥವರಿಗೆ ರಾಘವೇಶ್ವರನಂಥಾ ಮಠಾಧೀಶ ಇರುವ ವೇದಿಕೆಗೆ ಹೋಗುವುದು ಮುಜುಗರ ಅನ್ನಿಸಿಲ್ಲ, ಭರ್ತೃಹರಿಯಂಥವನಿಗೆ ರಾಜ ಆಸ್ಥಾನವೂ ಪುಟಗೊಸಿ ಅನ್ನಿಸಿತ್ತು. ಅದನ್ನು ಓದಿದ ಭಟ್ಟರಂಥಾ ಪಂಡಿತರಿಗೆ ಅದು ಇಳಿಯಲಿಲ್ಲ.
ಇಂಥವರು ನಮ್ಮ ಕಾಲದ ನೈತಿಕ ಕೇಡಿನ ಸನ್ನೆಗಳು. ಬಡತನ, ಜಾತಿಯ ಅವಮಾನ ಇವೆಲ್ಲಾ ಅನುಭವಿಸುತ್ತಿರುವ ಸಮುದಾಯಗಳ ಬಗ್ಗೆ ಕನಿಷ್ಠ ಅನುಕಂಪವಾದರೂ ಇರಬೇಕು. ಅದೂ ಬತ್ತಿದರೆ?
ನನ್ನಿಂದ ಒಂದೆರಡು ವರ್ಷ ಸೀನಿಯರ್ ಉಮಾಕಾಂತ. ಸಂಸ್ಕೃತದ ಪಾಂಡಿತ್ಯವನ್ನು ವರ್ತಮಾನದಲ್ಲಿ ವಿವರಿಸಬಲ್ಲ ಮೇಧಾವಿ. ಯಕ್ಷಗಾನದ ತಾಳಮದ್ದಳೆಯ ಉತ್ತಮ ಅರ್ಥಧಾರಿ.. ಇವ್ಯಾವುದೂ ಆಳ ಮಾನವೀಯ ನೆಲೆಯನ್ನು ಬೆಳೆಸಿಲ್ಲ ಎಂಬುದು ಬೇಸರದ ಸಂಗತಿ. ಅಂತಸ್ಸಾಕ್ಷಿ -ನೈತಿಕ ದಿಕ್ಸೂಚಿ ತರ ಕೆಲಸ ಮಾಡಬೇಕು. ಸಾಹಿತ್ಯ, ಸಂಸ್ಕೃತಿ- ಶಿಕ್ಷಣ ಮಾಡುವ ಕೆಲಸ ಅದು ಎಂದು ನಮ್ಮ ಪರಂಪರೆ ನಂಬಿದೆ. ಅದನ್ನು ಉಳಿಸುವುದು ದೊಡ್ಡ ಜವಾಬ್ದಾರಿ. ಭಟ್ಟರಂಥವರು ಅದು ಹುಸಿಯೆಂಬಂತೆ ನಡೆದುಕೊಂಡಿದ್ದಾರೆ.

‍ಲೇಖಕರು Avadhi

31 December, 2018

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading