ಮಲೆಗಳಲ್ಲಿ ಮತೀಯ ರಾಜಕಾರಣದ ರಣಹದ್ದು..

ಎನ್.ರವಿಕುಮಾರ್

ಮಲೆಯಾಳಂನ ಮಲೆಗಳಲ್ಲಿ ಮತೀಯ ರಾಜಕಾರಣದ ರಣಹದ್ದುಗಳ ಹಾರಾಟ!

ಭಾರತದ ರಾಜನೀತಿಗೆ ಮತೀಯ ರಾಜಕಾರಣದ ಸೋಂಕು ತಗುಲಿ ಸರಿಸುಮಾರು ಮೂರು ದಶಕಗಳೇ ಉರುಳಿವೆ. ಅದು ಅಂತಿಂಥ ಸೋಂಕಲ್ಲ. ಸದ್ದಿಲ್ಲದೆ ಅಂಗಾಂಗಗಳನ್ನು ಆವರಿಸಿಕೊಂಡು ನಿರ್ದಯವಾಗಿ ಅಣು ಅಣುವನ್ನೂ ಕೊಲ್ಲುವ ಅರ್ಬುದ ರೋಗ. ಎಲ್ಲರನ್ನೂ , ಎಲ್ಲವನ್ನೂ ಒಳಗೊಂಡ ಬಹುತ್ವ ಭಾರತವನ್ನು ಜಾಣತನದಿಂದ ಕಟ್ಟುವ , ಉಳಿಸಿಕೊಳ್ಳಬಹುದಾದ ಜನಪರ ರಾಜಕಾರಣವನ್ನು ಭಾವೋನ್ಮಾದದ ಮತೀಯ ರಾಜಕಾರಣವೊಂದು ರಣಹದ್ದಾಗಿ ಕಂಡುಂಡ ಬಗೆಯೇ ಒಂದು ನಿರ್ಮಾನುಷ ಚರಿತ್ರೆ.

1990. ಬಹುತ್ವ ಭಾರತದ ರಾಜಕಾರಣಕ್ಕೆ ಹೊಸದಾದ ಮತೀಯ ವ್ಯಾಖ್ಯಾನ ಕೊಟ್ಟ ಕಾಲಘಟ್ಟ. ಧರ್ಮ ಮತ್ತು ರಾಜಕಾರಣವನ್ನು ಒಂದರೊಳಗೊಂದು ಕಲಸಿ ಧರ್ಮವೇ ‘ರಾಜಕಾರಣ’ ವೆಂದು ಧರ್ಮವನ್ನೆ ಪ್ರಧಾನ ಧಾರೆಯನ್ನಾಗಿಸಲಾಯಿತು. ಧರ್ಮದ ಧರೆಯೊಳಗೆ ಹೊರಟು ನಿಂತ ‘ರಾಮ ರಥಯಾತ್ರೆ’ ಇಷ್ಟಾರ್ಥ ಶಕ್ತಿಗಳನ್ನು ಅಧಿಕಾರದ ಗದ್ದುಗೆವರೆಗೂ ಕೈ ಹಿಡಿದು ತಂದು ಬಿಟ್ಟಿತು. ಅಧಿಕಾರ , ಅರಮನೆ ಪಟ್ಟ-ಪಲ್ಲಂಗಗಳಿಲ್ಲದೆ, ಹಟ್ಟಿ,ತಾಂಡ, ಮರದ ಬುಡ, ಕಾಡಡವಿಯ ಜಡಕಲ್ಲಿನಲಿ ರೂಪುರೇಖೆ, ಹಗೆ ಇಲ್ಲದ ,ಕೇಡಿಲ್ಲದ, ಒಳ-ಹೊರಗುಗಳ ಮಡಿ-ಮುಟ್ಟುಗಳಿಲ್ಲದ , ಮುಗಿಲೆತ್ತರದ ಗೋಪುರ-ಗರ್ಭಗುಡಿಯಿಲ್ಲದ ನಿಷ್ಕಲ್ಮಶ ಬಯಲ ರಾಮನನ್ನು ಅಯೋಧ್ಯೆಯ ಜನ್ಮ ಭೂಮಿಯಿಂದ ಬಗೆದು ಮರ್ಯಾದಾ ಪುರುಷೋತ್ತಮನನ್ನಾಗಿಸಿ ಮತೀಯ ‘ರಾಮರಾಜಕಾರಣ’ ದ ಬಲೆ ಹೆಣೆದವರ ದಾಹ ತೀರಿಲ್ಲ. ಈಗ ಯಾತ್ರೆಗೆ ಹೊರಡುವ ರಥದ ಗಾಲಿಗಳು ಮನುಷ್ಯರ ಮೂಳೆಗಳಿಂದ ನಿರ್ಮಿತಗೊಂಡಿವೆ. ಕೀಲುಗಳು ಸರಾಗಗೊಳ್ಳಲು ರಕ್ತ ಮೆತ್ತಿ , ರಥದ ನೆತ್ತಿಯಲಿ ನರಮನುಷ್ಯರ ಚರ್ಮವ ಹೊದಿಸಿ, ತಲೆಬುರುಡೆಗಳ ವಿಜಯಧ್ವಜದ ಲಾಂಛನವಾಗಿಸಲಾಗಿದೆ. ಗಡಚಿಕ್ಕುವ ಬಹುಪರಾಕುಗಳ ಸದ್ದಿನೊಳಗೆ ಮನುಷ್ಯರೆಂಬ ಮನುಷ್ಯರ ದುಃಖ ಪಾತಳದಲ್ಲೆ ಕುದ್ದು-ಉರಿದು ಕಪ್ಪುಗಟ್ಟಿದ ಇದ್ದಲಿನಂತಾಗಿದೆ.

ದಕ್ಷಿಣದಲ್ಲಿ ಬೇರೂರುವ ಬಿಜೆಪಿಯ ಮಹದಾಸೆಯ ಪೂರ್ಣವಾಗಿ ಕೈಗೂಡಿಲ್ಲ. ರಾಮ ರಥಯಾತ್ರೆಯ ಕಾಲದಲ್ಲೂ ದಕ್ಷಿಣದ ರಾಜ್ಯಗಳಲ್ಲಿ ಬಿಜೆಪಿಗೆ ನೆಲೆ ಸಿಗಲಿಲ್ಲ. ದ್ರಾವಿಡ ನೆಲಗಳು ಆರ್ಯರ ಎರವಲು ಭೂಮಿಯಿಂದ ಬಂದವರಿಗೆ ಪ್ರಭಾವಿತವಾಗಲಿಲ್ಲ. ಇದೀಗ ದಕ್ಷಿಣದಲ್ಲಿ ತನ್ನ ಸಾಧನೆಗಳ(?) ಮೂಲಕ ನೆಲೆಕಂಡುಕೊಳ್ಳುವ ಎಲ್ಲಾ ವಿಶ್ವಾಸ ಕಳೆದುಕೊಂಡಿರುವ ಭಾರತೀಯ ಜನತಾಪಕ್ಷಕ್ಕೆ ಈಗ ಕೇರಳದ ಶಬರಿಮಲೆ ತೀರ್ಪು ದೊಡ್ಡ ಅಸ್ತ್ರವಾಗಿ ಕಾಣುತ್ತಿದೆ. ಕೇರಳ, ಕರ್ನಾಟಕ, ತಮಿಳುನಾಡು ಮತ್ತು ಆಂಧ್ರದ ಆಸ್ತಿಕ ಜನಸಮುದಾಯದ ಧಾರ್ಮಿಕ ಕೇಂದ್ರವಾಗಿರುವ ಶಬರಿಮಲೆ ಅಯ್ಯಪ್ಪಸ್ವಾಮಿ ಸನ್ನಿಧಿಯ ಪವಿತ್ರ ವಿಳಕ್ಕಿ (ಬೆಳಕು)ಗೆ ಕೊಳೆತ ಕೇಡಿನ ತುಪ್ಪ ಸುರಿಯಲಾಗುತ್ತಿದೆ. 1957 ರಿಂದ 2016 ರವರೆಗೂ ಕೇರಳದಲ್ಲಿ ಬಿಜೆಪಿಗೆ ನೆಲವೂರಲು ಕೇರಳದ ಮತದಾರ ಜಾಗ ಕೊಟ್ಟಿಲ್ಲ. ಕಾಂಗ್ರೇಸ್-ಕಮ್ಯೂನಿಸ್ಟ್ ನ ಸಮ್ಮಿಶ್ರ ಪಕ್ಷಗಳ ನಡುವೆಯೇ ಕೇರಳದ ಪಾರುಪತ್ಯೆ ಹಂಚಿಕೆಯಾಗುತ್ತಾ ಬಂದಿದೆ. 90 ರ ದಶಕದಲ್ಲಿ ಉತ್ತರದ ರಾಜ್ಯಗಳಲ್ಲಿ ರಾಮ ಜನ್ಮಭೂಮಿ, ಹಿಂದೂತ್ವದ ಅಜೆಂಡಾಗಳು ಬಿಜೆಪಿಗೆ ಅಧಿಕಾರವನ್ನು ತಂದು ಕೊಡುತ್ತಿರುವಾಗಲೂ ಕೇರಳದಲ್ಲಿ ಮಾತ್ರ ಬಿಜೆಪಿಯನ್ನು ಒಳ ಬಿಟ್ಟುಕೊಳ್ಳದೆ ಕೇರಳಿಗರು ಎಚ್ಚರವಹಿಸಿದ್ದರು. 2016 ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಮೊಟ್ಟ ಮೊದಲ ಬಾರಿಗೆ ಒಂದು ಕ್ಷೇತ್ರವನ್ನು ಗೆಲ್ಲುವ ಮೂಲಕ ಖಾತೆಯನ್ನು ತೆರೆದಿದೆ. ಈ ಚುನಾವಣೆಯಲ್ಲಿ ಸಿಪಿಐ(ಎಂ) ನೇತೃತ್ವದ ಎಲ್‍ಡಿಎಫ್ ಅಧಿಕಾರಕ್ಕೆ ಬಂದಿದ್ದು, ಶೇ. 43.48 ರಷ್ಟು ಮತಗಳಿಸಿದ್ದರೆ, ಕಾಂಗ್ರೇಸ್ ನೇತೃತ್ವದ ಯುಡಿಎಫ್ ಶೇ. 38.81 ರಷ್ಟು ಮತಗಳನ್ನು ಗಳಿಸಿದೆ. ಬಿಜೆಪಿ ನೇತೃತ್ವದ ಎನ್.ಡಿಎ ಶೇ.15.10 ರಷ್ಟು ಮತಗಳಿಸಿದ್ದು ಕೇರಳದಲ್ಲಿ ಬಿಜೆಪಿ ನೆಲಕಂಡುಕೊಳ್ಳುವ ವಿಶ್ವಾಸ ಮೂಡಿಸಿದೆ.

ಕೇರಳದಲ್ಲಿ ನಿರಂತರವಾಗಿ ಕಮ್ಯೂನಿಷ್ಟ್ ಎಡಪಕ್ಷಗಳ ಆಡಳಿತವಿದ್ದಾಗ್ಯೂ ಬಹುಜನರ ಧಾರ್ಮಿಕ ನಂಬುಗೆಯ ಶಬರಿಮಲೆಗೆ ಯಾವುದೇ ದಕ್ಕೆ ಆಗಿರಲಿಲ್ಲ. ರಾಜಕೀಯ ಸಿದ್ದಾಂತಗಳು ಮತ್ತು ಧಾರ್ಮಿಕ ನಂಬಿಕೆಗಳು ಒಂದಕ್ಕೊಂದು ಸಂಧಿಸಿ ಸಂಘರ್ಷಗೊಳ್ಳದೆ ನಡೆದಿದ್ದವು. ಕೇರಳ ಬಹುಸಂಸ್ಕೃತಿಯ ನೆಲ. ವೈದ್ಧಿಕ ಶ್ರೇಷ್ಠತೆಯ ಶಂಕರಾಚಾರ್ಯರು ನೆಡೆದಾಡಿದ ನೆಲದಲ್ಲೆ ಬಹುಜನರ ಸಾಂಸ್ಕೃತಿಕ , ಧಾರ್ಮಿಕತೆಗೆ ಜೀವಪರವಾದ ಚಳವಳಿಯ ಹೊಸ ರೂಪುಕೊಟ್ಟ ನಾರಾಯಣಗುರುಗಳ ನೆರಳು ಅರಳಿದೆ. ಕ್ರೈಸ್ತ-ಮುಸ್ಲಿಂ ಸಮುದಾಯದ ಸಹಬಾಳ್ವೆಯ ಬಲಾಢ್ಯತೆಯಲ್ಲೂ ಸೌಹಾರ್ದ ಪರಂಪರೆ ಉಳಿದುಕೊಂಡೆ ಬಂದಿದೆ. ರಾಜಕೀಯ ಕಾರಣಕ್ಕಾಗಿ ಕಮ್ಯೂನಿಷ್ಟರು – ಸಂಘಪರಿವಾರದ ನಡುವಿನ ಕಾದಾಟದಲ್ಲಿ ಕೇರಳದ ನೆಲ ರಕ್ತದಿಂದ ನೆಂದಿದೆ ನಿಜ, ಇವೆಲ್ಲವೂ ಇರುವಾಗಲೇ ಶಬರಿಮಲೆ ಧರ್ಮಾತೀತ ಧಾರ್ಮಿಕ ಶ್ರದ್ಧಾಕೇಂದ್ರವಾಗಿ ಬೆಳಗುತ್ತಲೆ ಇತ್ತು. ಲಿಂಗ ತಾರತಮ್ಯ ನಿವಾರಣೆ ಮತ್ತು ಧಾರ್ಮಿಕ ಹಕ್ಕಿನ ಪ್ರಶ್ನೆಯಾಗಿ ಮಹಿಳೆಯರಿಗೂ ಶಬರಿಮಲೆ ಪ್ರವೇಶಕ್ಕೆ ಅವಕಾಶ ನೀಡಬೇಕೆಂಬ ನ್ಯಾಯಪೀಠದ ತೀರ್ಪು ಈಗ ಮತೀಯ ಶಕ್ತಿಗಳ ರಾಜಕೀಯ ಗಳಿಕೆಗೆ ಒಂದು ಹೆದ್ದಾರಿಯನ್ನಾಗಿಸಿ ಬಿಟ್ಟಿದೆ.

ದಕ್ಷಿಣದ ಆಸ್ತಿಕರ ಸಕಲರ ದೇವರ ದೇವ ಎಂದೇ ಕರೆಯಲ್ಟಡುವ ಅಯ್ಯಪ್ಪಸ್ವಾಮಿ ಯನ್ನು ದೈವೀಕರಿಸುವ ಮೂಲಕ ನೆಲಮೂಲದ ಚರಿತ್ರೆಯನ್ನು ಮತ್ತದೆ ಸುಳ್ಳು, ಪುರಾಣಗಳಿಂದ ಕಟ್ಟಲಾಗಿದೆ. ಅಯ್ಯಪ್ಪ ಹರಿ-ಹರನ (ಮೋಹಿನಿ ರೂಪಗೊಂಡ ವಿಷ್ಣು ಮತ್ತು ಶಿವನ ಸಮಾಗಮದಿಂದ ಹುಟ್ಟಿದ ಅಯ್ಯಪ್ಪ) ಪುತ್ರನಾಗಿದ್ದು, ಪಂದಳ ರಾಜನ ಸಾಕುಮಗನಾಗಿ ತನ್ನ ತಾಯಿಯ ತಲೆಸೂಲೆಗೆ ಹುಲಿಯ ಹಾಲು ತಂದು ರಾಜ್ಯ ತ್ಯೆಜಿಸಿ ದೇವರಾದ ಕಥೆಯೇ ಪುರಾಣ ಕಥೆ. ಆದರೆ ಅಯ್ಯಪ್ಪ ದೇವರಲ್ಲ. ಆತ ಪೊನ್ನಂಬಲ ಕಾಡಿನ ಆದಿವಾಸಿ ಸಮುದಾಯದ ಸಾಂಸ್ಕೃತಿಕ ನಾಯಕ. ತನ್ನ ಜನರ ಒಳಿತಿಗಾಗಿ ದುಡಿದ ಆತನನ್ನು ದೇವಸ್ವರೂಪಿಯಾಗಿ ಆದಿವಾಸಿ ಸಮುದಾಯ ಆರಾಧಿಸುತ್ತಾ ಬಂದಿದೆ. ಈಗಲೂ ಜ್ಯೋತಿ ದರ್ಶನ(ಮಕರವಿಳಕ್ಕು) ಎಂಬುದು ಅದು ಆದಿವಾಸಿಗಳು ತಮ್ಮ ಅಧಿನಾಯಕ ಅಯ್ಯಪ್ಪನಿಗೆ ಸಲ್ಲಿಸುವ ಅಗ್ರಪೂಜೆಯ ಮಂಗಳಾರತಿ ಎಂಬುದು ಸಾಬೀತಾಗಿದೆ. (ನ್ಯಾಯಾಲಯಕ್ಕೆ ತಿರುವಾಂಕೂರು ದೇವಸ್ವಂ ಮಂಡಳಿ ಕೊಟ್ಟ ಅಫಿಡೆವಿಟ್ಟುನಲ್ಲಿ ಒಪ್ಪಿಕೊಂಡಿದೆ.) ಇದು ಅಯ್ಯಪ್ಪ ಆದಿವಾಸಿಗಳ ಸಾಂಸ್ಕೃತಿಕ ನಾಯಕ ಎಂಬುದಕ್ಕೆ ಮುಖ್ಯ ಸಾಕ್ಷಿ. ಆತ ಓರ್ವ ಸಕ್ಯೂಲರ್ ಆಡಳಿತಗಾರನಾಗಿದ್ದ. ಶಬರಿಮಲೆಗೆ ತಲುಪುವ ಸಿಗುವ ಏರಿಮಲೆಯಲ್ಲಿ ದರ್ಗಾವೊಂದಕ್ಕೆ( ವಾವರಸ್ವಾಮಿ) ಧರ್ಮಾತೀತವಾಗಿ ಪೂಜೆ ಸಲ್ಲಿಸಿ ಬಿಲ್ಲು -ಬಾಣಗಳ ಗಳೊಂದಿಗೆ ಬಣ್ಣಗಳ ಎರಚಿ ಹೋಳಿ ಆಡುವ ಮೂಲಕ ಭಕ್ತರು ಶಬರಿಮಲೆಗೆ ಪಾದಯಾತ್ರೆ ಆರಂಭಿಸುತ್ತಾರೆ. ಮಾರ್ಗಮಧ್ಯದಲ್ಲಿ ಮಾಳಿಕಾಪುರಮ್ಮ ಎಂಬ ಹೆಣ್ಣು ದೇವತೆಯ ದೇವಸ್ಥಾನವೂ ಇದೆ. ಇಲ್ಲಿಯೂ ಪೂಜೆ ನಡೆಯತ್ತದೆ. ( ಮಾಳಿಕಾಪುರಮ್ಮ ಅಯ್ಯಪ್ಪನನ್ನು ಪ್ರೀತಿಸಿ ಮದುವೆಯಾಗಲು ಆಹ್ವಾನಿಸುತ್ತಾಳೆ ಆದರೆ ಅಯ್ಯಪ್ಪ ಅದನ್ನು ನಿರಾಕರಿಸಿ ಬ್ರಹ್ಮಚಾರಿ ಆಗುತ್ತಾನೆ. ಆದರೆ ಆಕೆ ಆತನ ಒಪ್ಪಿಗೆಗಾಗಿ ಕಾದು ಅಲ್ಲೆ ನೆಲೆಯೂರಿದ್ದಾಳೆ. ಎಂದೂ ಶಬರಿ ಮಲೆಗೆ ಮೊದಲ ಬಾರಿಮಾಲೆ ಧರಿಸಿ ಬರುವ( ಕನ್ಯೆ ಸ್ವಾಮಿ)ವರು ಇಲ್ಲವಾಗುತ್ತಾರೋ ಅಂದು ಮದುವೆಯಾಗುವುದಾಗಿ ಅಯ್ಯಪ್ಪ ವಾಗ್ದಾನ ಮಾಡಿದ್ದು. ಅದು ಇದುವರೆಗೂ ಸಾಧ್ಯವಾಗಿಲ್ಲ ಎಂಬ ಐತಿಹ್ಯವಿದೆ) ಶಬರಿಮಲೆ ಒಂದು ಧರ್ಮಾತೀತವಾದ ಧಾರ್ಮಿಕ ಶ್ರದ್ಧಾಕೆಂದ್ರ ಎಂಬುದಕ್ಕೆ ಕುರುಹುಗಳಿವೆ. ಪಂದಳ ರಾಜ್ಯದ ಸಂಪತ್ತನ್ನು ಸೂರೆಗೊಳ್ಳಲು ಶತ್ರುಗಳು ಮುತ್ತಿಗೆ ಹಾಕಿದಾಗ ಆದಿವಾಸಿ ಹಾಡಿಯ ಪರಮ ಯೋಧನಾಗಿದ್ದ ಅಯ್ಯಪ್ಪ ಪಂದಳ ರಾಜನಿಗೆ ನೆರವಾಗಿ ಶತ್ರುಗಳನ್ನು ಹಿಮ್ಮೆಟ್ಟಿಸಿದ ಚಾರಿತ್ರಿಕೆ ಮಾತುಗಳು ಕೇಳಿ ಬರುತ್ತವೆ. ದೇವರಾದ ಅಯ್ಯಪ್ಪನ ಶಬರಿಮಲೆಗೆ ಎಂದೆಂದಿಗೂ ಜಾತಿ,ಧರ್ಮ,ಲಿಂಗ ಭೇದದ ಹಂಗಿಲ್ಲದೆ ಹೋಗಬಹುದಿತ್ತು. ಇದು ಭಾರತದ ಬಹುದೊಡ್ಡ ಜಾತ್ಯಾತೀತ ಪರಿಕಲ್ಪನೆಯ ಸಾಂಸ್ಕೃತಿಕ ಅಸ್ಮಿತೆ. ಅಲ್ಲೀಗ ವಿಷದ ಗಾಳಿ ಸುಯ್ಯುತ್ತಿದೆ. ಈ ದೇಶದಲ್ಲಿ ಬಹುಜನಸಮುದಾಯಗಳ, ನೆಲಮೂಲದ ಮಕ್ಕಳ ಸಾಮಾಜಿಕ ಮತ್ತು ಸಾಂಸ್ಕೃತಿಕ ನಾಯಕರುಗಳನ್ನು ದೈವೀಕರಿಸುವ ಮೂಲಕ ಅವರನ್ನು ವೈದ್ಧಿಕ ಪರಂಪರೆಯ ಪರಿಚಾರಕರಂತೆ ಬಿಂಬಿಸುವ ಸಾಂಸ್ಕೃತಿಕ-ಧಾರ್ಮಿಕ ರೂಪಾಂತರದ ಸಂಚುಗಳು ನಡೆಯುತ್ತಲೆ ಬಂದಿವೆ. ಅಗತ್ಯ ಬಿದ್ದಾಗಲೆಲ್ಲಾ ನಿಜ ಚರಿತ್ರೆಗಳನ್ನು ಮರೆಮಾಚಲು ಅದೇ ಆದಿವಾಸಿಗಳನ್ನೆ ,ಬಹುಜನರನ್ನೆ ಗುರಾಣಿಯನ್ನಾಗಿಸಿಕೊಂಡು ಬಲಿಗಿಟ್ಟು ಕಾರ್ಯಸಾಧು ಮಾಡಿಕೊಳ್ಳಲಾಗುತ್ತಿದೆ.

ಹಿಂದುತ್ವದ ಝಂಡಾ,ಅಜೆಂಡಾಗಳನ್ನು ಈ ಕೆಂಪು ನೆಲದಲ್ಲಿ ಬಿತ್ತುವ ಯತ್ನಗಳು ಇಂದು, ನೆನ್ನೆಯದಲ್ಲ. ಉತ್ತರದ ರಾಮನನ್ನು ದಕ್ಷಿಣದ ಕೇರಳ ಅಷ್ಟು ಸುಲಭವಾಗಿ ಒಳಬಿಟ್ಟುಕೊಳ್ಳಲಿಲ್ಲ. ಕೇರಳದ ಜನಸಮುದಾಯದಲ್ಲಿನ ರಾಜಕೀಯ ಮತ್ತು ಸಾಮಾಜಿಕ ಪ್ರಜ್ಞೆ ಜಾಗೃತವಾಗಿರುವುದೇ ಇದಕ್ಕೆ ಕಾರಣ, ಹಿಂದೂತ್ವ, ಗೋ ಹತ್ಯೆಯ ವಿರೋಧಿ ಹೋರಾಟಕ್ಕೆ ಗೋ ಮಾಂಸವೇ ಪ್ರಮುಖ ಆಹಾರವಾಗಿರುವ ಕೇರಳದಲ್ಲಿ ಯಾರೂ ಸೊಪ್ಪು ಹಾಕಲಿಲ್ಲ. ಇಂತಹ ನಾಡಿನಲ್ಲಿ ನೆಲೆಯೂರಲು ಹವಣಿಸುತ್ತಿರುವ ಬಿಜೆಪಿಗೆ ಈಗ ಸುಪ್ರೀಂ ಕೋರ್ಟುನ ಶಬರಿಮಲೆ ತೀರ್ಪು ಕೇರಳದ ಬಾಗಿಲು ಮೀಟುವ ಸಲಿಕೆಯಂತೆ ಕಾಣತೊಡಗಿದೆ. ಪ್ರಜೆಗಳನ್ನು ಕಡೆಗಣಿಸುವ ಪ್ರಭುತ್ವವು ಹಿಂಸೆಯ ಮೇಲೆ ತನ್ನ ಅಸ್ತಿತ್ವವನ್ನು ಕಾಪಾಡಿಕೊಳ್ಳುವಂತೆ .ಪ್ರಭುತ್ವವನ್ನು ಗಳಿಸಲು ಪ್ರಜೆಗಳ ಮೇಲೆಯೇ ಹಿಂಸೆಯನ್ನು ಬಿತ್ತುವ ಹೊಸ ವ್ಯಾಖ್ಯಾನ ಮತ್ತು ಕ್ರಿಯೆ ಭಾರತದಂತ ಬಹುದೊಡ್ಡ ಪ್ರಜಾಪ್ರಭುತ್ವದಲ್ಲಿ ನಡೆಯುತ್ತಿರುವುದು ವಿಪರ್ಯಾಸ. ಎಂದು ನ್ಯಾಯಾಲಯದ ತೀರ್ಪು ಧಿಕ್ಕರಿಸಿ ಬಾಬ್ರಿಮಸೀದಿಯನ್ನು ಧ್ವಂಸಗೊಳಿಸಲಾಯಿತೋ ಅಂದಿನಿಂದಲೆ ಮತಾಂಧ ಶಕ್ತಿಗಳಿಗೆ ಪ್ರಜಾಪ್ರಭುತ್ವವ್ಯವಸ್ಥೆಯನ್ನು ಮುರಿದು ಕೆಡವುವುದು ಸುಲಭವೆನಿಸಿಬಿಟ್ಟಿತು. ಈಗ ಸಂವಿಧಾನವನ್ನು ಸುಡಲೂಬಹುದು, ಪರಮೋಚ್ಛ ನ್ಯಾಯಪೀಠಗಳ ತೀರ್ಪುಗಳನ್ನು ತ್ರಿಶೂಲಕ್ಕೇರಿಸಿಕೊಂಡು ಮೆರವಣಿಗೆ ಹೊರಡಲೂಬಹುದು. ಮಂಗಳೂರಿನಲ್ಲಿ ನಡೆದ ಆರ್ .ಎಸ್ ಎಸ್ ನ ದಕ್ಷಿಣ ಪ್ರಾಂತೀಯ ಮುಖಂಡರ ಸಭೆಯಲ್ಲಿ ನಡೆದದ್ದು ಹಿಂಸೆಯ ಮೇಲೆ ಪ್ರಭುತ್ವದ ಬೇಟೆಯ ತಂತ್ರಗಳ ಸ್ವರೂಪದ ನಿರೂಪಣೆ ಮತ್ತು ಅನುಷ್ಠಾನ ಕುರಿತಾದ್ದೇ ಆಗಿದೆ. ಕೇರಳದ ಕಾಂಗ್ರೆಸ್ ಕೂಡ ವೈಚಾರಿಕವಾಗಿ ನಿಲುವು ತಳೆಯುವುದಿರಲಿ, ಸಂವಿಧಾನಿಕ ಸಂಸ್ಥೆಯೊಂದು ನೀಡಿದ ತೀರ್ಪನ್ನು ಒಪ್ಪುವ ಮನೋಸ್ಥಿತಿಯಿಂದ ದೂರ ನಿಂತು ಮತಲೆಕ್ಕ ಹಾಕುತ್ತಿರುವುದು ಅದರ ಸೋಗಲಾಡಿತನ ಜಗಜ್ಜಾಹೀರುಗೊಂಡಿದೆ.

2019ರ ಲೋಕಸಭಾ ಚುನಾವಣೆ ಮತ್ತೆ ಧರ್ಮಪೀಡಿತ ಉನ್ಮಾದದ ಕಣವಾಗಲಿದೆ. ಈ ದೇಶವನ್ನು ಐದು ವರ್ಷಗಳ ಕಾಲ ದೈತ್ಯ ಬಲದೊಂದಿಗೆ ಆಳಿದ ಜನರ ಬತ್ತಳಿಕೆಯಲ್ಲಿ ಈಗ ರಾಮ – ಅಯ್ಯಪ್ಪ ಬಿಟ್ಟರೆ ಬೇರೆನೂ ಇಲ್ಲ. ವಾಜಪೇಯಿ ಅವರ ‘ಭಾರತ ಪ್ರಕಾಶಿಸುತ್ತಿದೆ’ ಮುಳುಗಿದ ಮೇಲೆ 2014 ರಲ್ಲಿ ದೈತ್ಯಬಲದಲ್ಲಿ ವಿಷ್ಣುವಿನ ಅವತಾರವೆಂಬಂತೆ ದೆಹಲಿಯ ಗದ್ದುಗೆ ಏರಿದವರಿಗೆ ರಾಮನ ನೆನಪೆ ಬರಲಿಲ್ಲ ಯಾಕೋ ಕಾಣೆ.! ಮತ್ತೆ ರಾಮನನ್ನು ಕರೆ ತರಲಾಗಿದೆ. ದೇಶದ ಸಂವಿಧಾನ, ಪರಮೋಚ್ಛ ನ್ಯಾಯಪೀಠಗಳ ತೀರ್ಪುಗಳನ್ನು ರಾಮಭಕ್ತಿಯ ದಾವಾಗ್ನಿಯ ಕುಂಡದ ಮುಂದೆ ಅವಿಸ್ಸಾಗಿ ಉರಿಸಲಾಗುತ್ತಿದೆ. ಭಾರತದ ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಕ್ಕಾಗಿ ತಂದ ಕ್ರಾಂತಿಕಾರಿ ಯೋಜನೆಗಳು ಒಂದೇ, ಎರಡೆ?, ವರ್ಷಕ್ಕೆ ಎರಡು ಸಾವಿರ ಕೋಟಿ ಉದ್ಯೋಗ , ವಿದೇಶದ ಬ್ಯಾಂಕ್‍ಗಳಲ್ಲಿ ಅಡಗಿಸಿಟ್ಟ ಕಪ್ಪು ಹಣ ತಂದು ಪ್ರತಿಯೊಬ್ಬರ ಖಾತೆಗೆ 15 ಲಕ್ಷ ಹಾಕುವುದು, ಭಯೋತ್ಪಾದಕರ, ನಕ್ಸಲರ ಹುಟ್ಟಡಗಿಸಲು ನೋಟು ಅಮಾನ್ಯಗೊಳಿಸಿದ್ದು, ಆರ್ಥಿಕ ಸುಧಾರಣೆ ಮತ್ತು ಸಂಪನ್ಮೂಲ ಕ್ರೂಢೀಕರಣದ ದಿಟ್ಟ ನಿರ್ಧಾರವಾಗಿ ಜಿಎಸ್‍ಟಿ ಪದ್ದತಿ ಜಾರಿ, ಗಾಂಧಿಯನ್ನು ಸ್ವಚ್ಛ ಗೊಳಿಸಿ ತಬ್ಬಿಕೊಂಡದ್ದು, ಅಂಬೇಡ್ಕರ್ ಅವರ ತ್ಯಾಗವನ್ನು ಕೊಂಡಾಡತೊಡಗಿದ್ದು, ದಲಿತರನ್ನು ಕೊಲ್ಲಬೇಡಿ ಬೇಕಿದ್ದರೆ ನನಗೆ ಗುಂಡಿಡಿ ಎಂದು ತಮ್ಮ 56 ಇಂಚು ಎದೆಯನ್ನು ಈ ದೇಶದ ದಲಿತರ ರಕ್ಷಣೆಗೆ ಅಡ್ಡ ಹಿಡಿದದ್ದು, ತನ್ನದೆ ನಿರ್ದೇಶಕ ಸೂತ್ರ ಸಂಸ್ಥೆ ಆರ್‍ಎಸ್‍ಎಸ್ ನ್ನು ನಿಷೇಧಿಸಬೇಕೆಂದು ಫರ್ಮಾನು ಹೊರಡಿಸಿದ್ದ ಸರ್ದಾರ್ ವಲ್ಲಭಬಾಯಿ ಪಟೇಲರ ನಭಚುಂಬಕ ಪ್ರತಿಮೆಯನ್ನು ನಿಲ್ಲಿಸಿ ನಿಷ್ಠೆ ತೋರಿದ್ದು ಇದ್ಯಾವುದು ಮತ ಭಿಕ್ಷೆಯ ಜೋಳಿಗೆಯನ್ನು ತುಂಬುವ ವಿಶ್ವಾಸವೇ ಕುಂದು ಹೋಯಿತಾ? ಹುಸಿ ದೇಶ ಪ್ರೇಮ -ಹಸಿ ಸುಳ್ಳುಗಳ ಅಸಲಿಯತ್ತು ಬಯಲಾಯಿತೆಂಬ ಭಯ ತಟ್ಟಿತಾ?. ಐದು ವರ್ಷ ಏಕಾಚಕ್ರಾಧಿಪತ್ಯದಂತೆ ದೇಶ ಆಳಿದ ಪಕ್ಷಕ್ಕೆ ಇಂದು ತನ್ನದೆ ಆಡಳಿತದ ಒಂದೇ ಒಂದು ಕೆಲಸ-ಕಾರ್ಯಗಳನ್ನು ಹೇಳಿಕೊಂಡು ಮತ ಕೇಳುವ ಧೈರ್ಯವಿಲ್ಲದೆ ಜನರ ಭಾವಾನಾತ್ಮಕ ಸಂಗತಿಗಳಾದ ದೇವರು, ಧರ್ಮವನ್ನು ಮುಂದಿಟ್ಟುಕೊಂಡು ಮತ ಕೇಳುವಂತಾಗಿದೆ ಎಂದರೆ ಆ ಪಕ್ಷ- ಪಾಳೆಯದ ರಾಜಕಿಯ ತಾತ್ವಿಕತೆ ಅದೆಷ್ಟರ ಮಟ್ಟಿಗೆ ದಿವಾಳಿ ಆಗಿದೆ ಎಂಬುದನ್ನು ಯಾರಾದರೂ ಯೋಚಿಸಲಾರರೆ?

‘ರಾಮ ತನ್ನ ಪ್ರಬುದ್ಧ ಜೀವಿತದಲ್ಲಿ ಅತ್ತಿದ್ದು ಪ್ರಾಯಶಃ ಎರಡು ಬಾರಿ ಅಥವಾ ಒಂದು ಸಲ ಮಾತ್ರ. ಆದರೆ ಸದಾ ಕಣ್ಣು ತುಂಬಿ ಯಾವ ಕಾಲದಲ್ಲೂ ಧಾರೆ ಹರಿದೀತು ಎಂಬಂತಿರುವ ಜನರೇ ರಾಮ-ಕೃಷ್ಣ ರ ನೆಲವನ್ನು ಮುತ್ತಿಕೊಂಡಿದ್ದಾರೆ. ಮತ್ತು ವಿವಂಚಿತರಾದ ಹಿಂಡು ,ಹಿಂಡು ಜನ ಅಂಥವರನ್ನು ತೀವ್ರ ಅನುಭಾವಿಗಳೆಂದು ತಿಳಿದು ಭ್ರಾಂತಿಗೊಳ್ಳುತ್ತಾರೆ.’ ಭಾರತವನ್ನು ಅರ್ಥೈಸಿಕೊಂಡ ರಾಮಮನೋಹರಲೋಹಿಯಾ ಅವರ ಬರೆದ ಈ ಮಾತುಗಳು ಈಗಲೂ ಎಷ್ಟು ನಿಜವೆನಿಸುತ್ತಿದೆ. ಜನರನ್ನು ಕುರುಡು ಆರಾಧಕರನ್ನಾಗಿಸಿದವರು ಐದು ವರ್ಷಗಳ ಕಾಲ ಅಜ್ಞಾತಕ್ಕೆ ಕಳುಹಿಸಿದ್ದ ಅಯೋಧ್ಯಾ ರಾಮನನ್ನು ಮತ್ತೀಗ ಪಟ್ಟಾಭಿಷೇಕಕ್ಕೆ ಮೆರವಣಿಗೆಯಲ್ಲಿ ಕರೆತರ ಹೊರಟಿದ್ದಾರೆ. ಉತ್ತರ-ದಕ್ಷಿಣವನ್ನು ಬೆಸೆಯುವ ರಾಜಕೀಯ ಹೆದ್ದಾರಿಗೆ ಈಗ ಶಬರಿಮಲೆಯ ವೈರಾಗಿ ಸಕಲರ ದೇವ ಆದಿಮ ಸಮುದಾಯ ನಾಯಕ ಅಯ್ಯಪ್ಪನಿಗೆ ರಥ ಕಟ್ಟತೊಡಗಿದ್ದಾರೆ. ಪಂಪ, ಕರಿಮಲೆ ,ಏರಿಮಲೆ, ನೀಲಿಮಲೆ, ಪೊನ್ನಂಬಲ ಮೇಡಿನ ಹಚ್ಚ ಹಸಿರಿನ ಬೆಟ್ಟ-ಕಣಿವೆಗಳು ಕೇಸರಿಮಯಗೊಂಡ ದುಃಸ್ವಪ್ನ ಶಕುನವೊಂದು ನುಡಿದಿದೆ. ನೀಲಿಮಲೆಯ ತುತ್ತತುದಿಯಲ್ಲಿ ಕಾಣುವ ‘ಮಕರವಿಳಕ್ಕಿಗೆ’ ಮುನ್ನ ಹಾರಿ ಬರಬೇಕಾದ ‘ದೇವಗರುಡ’ ದ ಜಾಗದಲ್ಲಿ ಈಗ ಉನ್ಮತ್ತ ಮತೀಯ ರಾಜಕಾರಣದ ರಣಹದ್ದುಗಳು ಹಾರಾಡುತ್ತಿವೆ.

‍ಲೇಖಕರು Avadhi

December 31, 2018

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: