
ಭುವನಾ ಹಿರೇಮಠ
ಅವನು ಅದೆಂದೋ ಸತ್ತು ಹೋಗಿದ್ದಾನೆ,
ಇಂದು ಅವನ ಮೂಳೆಮಜ್ಜೆಯೊಳಗೆ
ಜೀವಕೋಶಗಳು ಸತ್ತುಹೋದವಂತೆ,
ಈ ಚರ್ಮದ ಬಣ್ಣದಲ್ಲಿ ಹುರುಳಿಲ್ಲ
ಗೋದಿಬಣ್ಣ ಸವಸಗರಿದು ಕರ್ರಗೆ ಬೆಳ್ಳಗೆ
ಮುದನೀಡದ ಮನಸಿನ ಬಣ್ಣ
ಎಂದೋ ಮಡಿದುಹೋಗಿರುವಾಗ
ಅವನ ಬಿಳಿ ಹೆಣದ ಮೇಲೆ
ಮಣ್ಣ ಗೋಪುರ ಅವನೊಳಗಿನ
ಕ್ರೌರ್ಯವನ್ನ ಕೊಂದೀತೆ?

ಅಂದು ಕಣ್ಣೆದುರಿಗೇ
ಕೊಡಲಿಯಿಲ್ಲದೆಯೆ
ರುಂಡಮುಂಡಗಳ ತುಂಡರಿಸದೆ
ಅವನು ಮಾಡಿದ
ಅಪೂರ್ಣ ಕೊಲೆಯ ಗಾಯಗಳ ಹಸಿ
ಆರುವುದೇಯಿಲ್ಲ,
ಜಡಕೋಶಗಳ ಚೈತನ್ಯ
ಮರುಕಳಿಸುವ ಸೋಗು
ಹಾಕಿ ತೆಗೆದು
ನಟಿಸಿ ನಟಿಸಿ ವಿಚಿತ್ರವಾಗಿ
ಕಣ್ಣು ಕಿಸಿಯುತ್ತದೆ,
ಭೂತಸದೃಶ ಕೊಳ್ಳಿ
ಆತ್ಮವನ್ನು ಸಾವಧಾನವಾಗಿ
ಸುಟ್ಟು
ಗೆಣಸ ಸುಲಿದಂತೆ ಸುಲಿದು
ವಿಕಾರ ಬೆತ್ತಲಿನಲ್ಲಿ
ಹುಣ್ಣುಗಳ ಅನಾವರಣ ಮಾಡುತ್ತದೆ,

ಆಕೆಯ ಕಣ್ಣುಗಳ
ನಾಡಿಯ ನಳಿಕೆಯಿಂದ ಚಿಮ್ಮುವ ಬೆಂಕಿಗೆ
ನೀರು ಚಿಮುಕಿಸುವ ಧೈರ್ಯ
ಆ ದೇವರು ಕೂಡ ಕಳೆದುಕೊಂಡಿರುವಾಗ,
ಎಂದೋ ಸತ್ತ
ಅವನ ಹೆಸರ ಪತಾಕೆ
ಯಾವ ಚಮತ್ಕಾರ ಮಾಡೀತು






ಅವನ ಹೆಸರ ಪತಾಕೆ ಯಾವ ಚಮತ್ಕಾರ ಮಾಡೀತು. kavite chandavide madam