ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬಿದಿಗೆ ಚಂದಿರನ ಕರೆಯುವಾಗ..

ಮಗುವಾಗುತ್ತೇನೆ

ಪ್ರೊ. ಚಂದ್ರಶೇಖರ ಹೆಗಡೆ

ನಾನು ಮಗುವಾಗುತ್ತೇನೆ
ನಿನ್ನ ಹೊಂಬೆಳಕಿನ ರಂಗವಲ್ಲಿಯ
ಕಣ್ಣರಳಿಸಿ ಎದೆತುಂಬಿಕೊಂಡು
ಆನಂದಿಸುವಾಗ….
ಹೊಳೆಯಾಗಿ ಹರಿವ
ನಿನ್ನೊಲವ ಮಳೆಹನಿಗಳು ಇಳೆಯ ತಬ್ಬಿ ಸಂಭ್ರಮಿಸುವಾಗ

ನಾನು ಮಗುವಾಗುತ್ತೇನೆ
ಮುಗಿಲ ಮಾರಿಯ ತುಂಬ
ಬಣ್ಣಗಳ ಬೆಡಗು ಚೆಲ್ಲಿ
ಮಳೆಬಿಲ್ಲು ಕೆನ್ನೆಯರಳಿಸಿ ನಗುತಿರುವಾಗ…
ಹುಲುಸು ಗಿಡಮರಗಳ
ಗಿಳಿ ಹಸಿರ ನವಿರಿಗೆ
ಕಡುಗಪ್ಪು ಬಣ್ಣವಿಟ್ಟು
ದೃಷ್ಟಿ ತೆಗೆದು ಮುತ್ತಿಡುವಾಗ

ನಾನು ಮಗುವಾಗುತ್ತೇನೆ
ತರುಲತೆಗಳ ಟೊಂಗೆಜಾಲ
ನವಿಲಿನಂತೆ ಗರಿ ಹರಡಿ
ಹೆಜ್ಜೆ ಹಾಕಿ ಕುಣಿಯುವಾಗ
ಹಸಿರ ಮಡಿಲ ತೊಟ್ಟಿಲಲಿ
ಗಾಳಿ ಜೋಗುಳ ಹಾಡಿ
ಬಿದಿಗೆ ಚಂದಿರನ ಕರೆಯುವಾಗ

ನಾನು ಮಗುವಾಗುತ್ತೇನೆ
ವಾತ್ಸಲ್ಯದ ಗೂಡಿನಲ್ಲಿ
ತಾಯಿ ಹಕ್ಕಿ ಹಾರಿ ಬಂದು
ಚೈತನ್ಯದ ಗುಟುಕು ನೀಡುವಾಗ
ಪರಿಮಳದ ಹೂಗಳರಸಿ
ಚಿತ್ತಾರದ ರೆಕ್ಕೆಯರಳಿಸಿ
ಚಿಟ್ಟೆ ಕುಣಿದು ಮಧು ಹೀರುವಾಗ

ನಾನು ಮಗುವಾಗುತ್ತೇನೆ
ಬೀಜ ನೆಲದ ಹೃದಯದೊಳಗೆ
ಹೊಂಗನಸಿನ ಒಲವಿನಿಂದ
ಚಿಗುರಿ ಹೊರಗೆ ಇಣುಕುವಾಗ..
ಆಗಸದಿ ತಾರೆಗಳು ಏರಿ
ನಿಲುಕದ ದಾರಿಯ ಸಾಗಿ
ದೂರದಿಂದ  ಮಂದಹಾಸ ಬೀರುವಾಗ

‍ಲೇಖಕರು avadhi

25 July, 2019

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading