ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬಿದಲೋಟಿ ರಂಗನಾಥ್ ಹೊಸ ಕವಿತೆ- ಗೋಲು ಗುಮ್ಮಟ ಮತ್ತು ಗಿಳಿ ಮುನಿಸು

ಬಿದಲೋಟಿ ರಂಗನಾಥ್

ನಡೆದವನ ಕಣ್ಣಲ್ಲಿ

ಗೋಲು ಗುಮ್ಮಟದೊಳಗಿನ ಹಾಡು

ಗಿಣಿಗಳ ಸರಸ-ವಿರಸ

ಕ್ಯಾಮರದ ಕಣ್ಣಿಗೆ ಹಾರು ರೆಕ್ಕೆಯ ತುದಿ ಚಿತ್ರ

ಯಾರೋ ಕಟ್ಟಿದ ನೂರಾರು ಕವಿತೆಗಳ ಜಾಡು

ಮುಗಿಯದ ಸೂರ್ಯನ ಬೆಳಕು

ಮೌನದಲಿ ಕುಂತ ಗುಮ್ಮಟಕೆ

ತಾಕಿ ತಾಕಿ ಬಿದ್ದು ಗಾಳಿ ಜೊತೆ ಸೇರುವ ಪ್ರತಿಧ್ವನಿ

ಕೋಗಿಲು ಕೂಗಿದ್ದು

ಹಸಿರು ನಕ್ಕಿದ್ದು

ತಾಕುವ ಅಂಗಾಲಿಗೆ ನಕ್ಷತ್ರಗಳ ಹೊಳಪು

ಬಾಚಿ ತುಂಬಿದ ಭಾವೋತ್ಸಾಹ

ಮುನಿಸಿ ಕೂತ ಗಿಣಿಯ ಮೌನ ಮಾತು

ನನ್ನೊಳಗನ್ನು ಗುಡಿಸಿದ ನೋವು

ಬುತ್ತಿ ಬಿಚ್ಚಿದ ನಗುವ ಹೊನಲು

ಮುಖ ತೊಳೆದ

ಆಗ ತಾನೆ ಹುಟ್ಟಿದ ಬೆಳಕು

ಗಿಣಿಕಾಲುಗಳ ಮೃದು ಸ್ಪರ್ಶ ಗೊಮ್ಮಟದ ಮೈಗೆ

ನಿಂತೆ

ಮೌನದುಂಬಿದ ಎಲೆಯಂತೆ

ಬರೆದ ಕವಿತೆ ನಿಲ್ಲದೆ ಚಲಿಸಿತು

ಅಲ್ಲಿ… ಇಲ್ಲಿ…

ಕುಂತಲ್ಲಿ ಕೂರಲಾರದೆ

ನೋಡುವುದು ಎಷ್ಟಂತ

ಹಾಡುವುದು ಕೂಗುವುದು ಎಷ್ಟಂತ

ಚಾಟಿ ಸುತ್ತಿದ ಬುಗುರಿ ತಿರುಗುವಂತೆ

ಕವಿತೆ ಹಾಡಿತು ನನ್ನೊಳಗೆ

ಕಡಲ ಕಿನಾರೆಯ ಅಲೆಗಳು ಅಪ್ಪಳಿಸಿ.

ಒಮ್ಮೆ ಯಾರೋ ನಕ್ಕಂತಾಯಿತು

ತಿರುಗಿಸಿದೆ ಕತ್ತನ್ನು

ಆಗ ಮುನಿಸಿ ಕೂತ ಗಿಣಿಗಳು

ಕೊಕ್ಕಿಗೆ ಕೊಕ್ಕು ಸೇರಿಸಿದ್ದವು

ಗೊಮ್ಮಟದ ಚಂದ್ರ ನಗುತ್ತಿದ್ದ!

‍ಲೇಖಕರು avadhi

2 August, 2023

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading