ಬಿದಲೋಟಿ ರಂಗನಾಥ್ ಓದಿದ ‘ಅರ್ಗಂಜಿಯ ಕೊರಳು’

ಬಿದಲೋಟಿ ರಂಗನಾಥ್

**

ಮನುಷ್ಯ ಪ್ರೀತಿಯ ಕಾಪಿಡುವ ಕವಿತೆಗಳು

ಕಾಂತರಾಜು ಗುಪ್ಪಟ್ನ ನನಗೆ ಕೆಲವೇ ವರುಷಗಳ ಪರಿಚಯವಾದರೂ ಒಂದು ಆಪ್ತತೆಯ ಭಾವ ಸದಾ ಕಾಡುವಂತಹದ್ದು.ಅವರು ಮೊದಲ ಲೇಖನಗಳ ಕಟ್ಟು ಜಗಜಾಲಾರ ಐತಿಹ್ಯಗಳ ನೋಟ ಕುರಿತ ಪುಸ್ತಕದ ಮೂಲಕ ಸಾಹಿತ್ಯ ಲೋಕ ಪ್ರವೇಶಿಸಿದವರು. ಅರಸುಕುರಂಗರಾಯ ಕೃತಿ ಬಿಡುಗಡೆಯಲ್ಲಿ ಪರಿಚಯವಾದ ಮುಖ. ಕುರಂಗನರಾಯನ ಚಾರಿತ್ರಿಕ ಅಂಶವಿಡಿದು ಖಂಡಕಾವ್ಯ ಬರೆಯುತ್ತಿರುವೆ ಅಲ್ಲಿನ ಸ್ಥಳಗಳನ್ನು ನೋಡಬೇಕೆಂದಾಗ, ಇಷ್ಟಪಟ್ಟು ಕರೆದುಕೊಂಡು ಹೋಗಿ ತೋರಿಸಿ ಹತ್ತಿರವಾದವರು ಕಾಂತರಾಜು. “ಅರ್ಗಂಜಿಯ ಕೊರಳು” ಇತ್ತೀಚಿಗೆ ಕುರಂಗರಾಯನ ಬೆಟ್ಟದ ನೆತ್ತಿ ಮೇಲೆ ಬಿಡುಗಡೆಯಾದ ಅವರ ಮೊದಲ ಕವನ ಸಂಕಲನ.

ಕಾವ್ಯ ಬರೆಯಬೇಕೆಂದು ಬರೆಯುವುದು ಬೇರೆ. ಬರೆಸಿಕೊಳ್ಳುವುದೆ ಬೇರೆ.ಕಾವ್ಯ ತಾನಾಗೆ ಒಲಿದು ಬರಬೇಕು. ಅನುಭವಿಸಿ ಬರೆಯಬೇಕು.ಕಾಂತರಾಜು ಅವರಿಗೆ ಕಾವ್ಯದ ವಸ್ತುವಿಗೇನು ಬರವಿಲ್ಲ.ಆಲೋಚನೆಯ ಹಾದಿಗೂ ಕೊರತೆಯಿಲ್ಲ. ಈ ಸಂಕಲನದ ಕವಿತೆಗಳು ಇಷ್ಟವಾಗುವುದೇ ಇದಕ್ಕಾಗಿ.ಲೇಖನಗಳಂತೆ ಕವಿತೆಗಳಲ್ಲು ದೇಸಿನುಡಿಗಳು ಅಟ್ಟಹಾಸದಿಂದ ಮೆರದಿವೆ ಸಂಕಲನದ ಮೆರಗನ್ನೂ ಹೆಚ್ಚಿಸಿವೆ.ವೈಚಾರಿಕತೆ ಪ್ರಜ್ಞೆಯ ಅರಿವಿನ ಬೆಳಕು ಕಾಂತುವಿನ ಮೈ ಮನದೊಳಗೆ ಒಕ್ಕಿರುವುದರಿಂದಲೇ ಈ ಸಂಕಲನದ ಇಷ್ಟದ ಕವಿತೆ “ತಿಪ್ಪೇ ಲಕುಮಿ”ಹುಟ್ಟಿದೆ ಅನ್ನಿಸುತ್ತದೆ.

ನೆಲದ ನಿಜ ದೇವರುಗಳಾದ
ಮಾರಿ ಮಸಣಿ ಮುನ್ಯಪ್ಪ ಜುಂಜಪ್ಪ
ಒಬ್ಬೊಬ್ಬರನ್ನೆ ಬಲಿ ಪಡೆಯುತಿಹ ಲಕುಮಿಯೇ
ನೀ ತಿಪ್ಪೆ ಮ್ಯಾಗಳ ಲಕುಮಿಯಾಗಿದ್ದರೆ ಚೆಂದಿತ್ತು ವರಲಕ್ಷ್ಮಿ ಯಾಕಾದಮ್ಮ?

ಎಂದು ಪ್ರಶ್ನೆ ಮಾಡುವ ಕವಿಯ ಎದೆಗಾರಿಕೆ ನಿಜಕ್ಕೂ ಮೆಚ್ಚುವಂತಹದ್ದು.ನಾನು ಕಂಡ ಹಾಗೆ ವರ ಲಕ್ಮೀ ಹಬ್ಬವೆಂಬುದು ಕೇವಲ ಶೆಟ್ಟರು ಮಾಡುವ ಹಬ್ಬವಾಗಿತ್ತು.ಕಾಲಕ್ರಮೇಣ ಸಾಲಮಾಡಿ ಯಾದರೂ ತುಪ್ಪ ತಿನ್ನಿ ಎನ್ನುವಂತೆ ಕಡುಬಡವರ ಮನೆಗೂ ಕಾಸಿಲ್ಲದೆ ಲಕ್ಷೀ ಲಗ್ಗೆ ಇಡುವಂತಾದಳು.ಆದರೆ ಇವರ ಐಶ್ಯರಾಮಿ ನಡಿಗೆ ಬಡವರ ಬದುಕನ್ನ ಹೈರಾಣಾಗಿಸಿದ್ದು ಸುಳ್ಳಲ್ಲ .ನಮಗೆ ಕೈಗೆ ತಾಕುವ ಶಕ್ತಿ ದೇವತೆಗಳಾದ ಮಾರಮ್ಮ,ಆಕೆಯ ಹಲವು ರೂಪವೆತ್ತ ದೇವರುಗಳು ಲಕ್ಷೀಯ ಕಾಲುತುಳಿತಕ್ಕೆ ತತ್ತರಿಸಿ ಹೋದವು.ಮನಸುಗಳನ್ನು ಪಲ್ಲಟಗೊಳಿಸುವಲ್ಲಿ ಲಕ್ಷೀ ಯಶಸ್ವಿಯಾದಳು.ಬಾಡುಬಳ್ಳೆಯ ನೈವೇಧ್ಯ ಅನ್ನಪಾಯಿಸಿ ಹೋಳಿಗೆಗೆ ಬಂದು ನಿಂತಿದ್ದು ನೋವಿನ ಸಂಗತಿ.ಆಚಾರ ವಿಚಾರ ರೂಢಿ ಸಂಪ್ರದಾಯ,ಚರಿತ್ರೆಯ ವ್ಯಾಪ್ತಿ ಎಲ್ಲವನ್ನು ತಿಳಿಯಲು ಕೇರಿ ದೇವರುಗಳ ಸ್ಥಾನ ಅತ್ಯಮೂಲ್ಯವಾಗಿತ್ತು.ಆದರೇ ವರಲಕ್ಷೀಯನ್ನು ಪೂಜಿಸುವುದರಿಂದ ಕೇರಿಗಳ ಮನೆಯ ಆರ್ಥಿಕ ವ್ಯವಸ್ಥೆ ಬದಲಾಯಿತೇ ? ಇಲ್ಲ.ಇಂತಹ ದೇವರು ಯಾಕೆ ಬೇಕು ಎಂದು ಪ್ರಶ್ನಿಸುವ ಕವಿಯ ದಿಟ್ಟ ನಿರ್ಧಾರ ಮೌಢ್ಯತೆಯಿಂದ ಅರಿವಿನೆಡೆ ನೂಕುವಲ್ಲಿ ಯಶಸ್ವಿಯಾಗಿದೆ.ನಾವು ದುಡಿದು ಪೂಜೆಗಿಟ್ಟಾಗ ಮಾತ್ರ ಲಕ್ಷೀ ರಾರಾಜಿಸಲು ಸಾಧ್ಯ.ಅಂದ ಮೇಲೆ ನಮ್ಮ ಮೌಢ್ಯತೆ ಎಲ್ಲಿಗೆ ಬಂದು ನಿಂತಿದೆ ಎಂಬುದನ್ನ ಪ್ರಶ್ನೆ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಇದೆ.ಈ ಕವಿತೆ ಚಿಂತನೆಯ ಒಳಹನ್ನು ವಿಸ್ತರಿಸುವಲ್ಲಿ ಯಶಸ್ವಿಯಾಗಿದೆ.

“ಮುಟ್ಟು ಮುಟ್ಟೆಂದೇಕೆ
ಅಟ್ಟುವಿರಿ
ಮುಟ್ಟಿನೊಲೆಯಲ್ಲಿ
ಪುಟ್ಟಿಲ್ಲವೆ? ನೀವು ಮುಟ್ಟಲ್ಲವೆ?”(ಮುಟ್ಟಲ್ಲವೇ)

ಮುಟ್ಟು ಇಲ್ಲದೆ ಹೋಗಿದ್ದರೆ ಹುಟ್ಟು ಹೇಗೆ ಸಾಧ್ಯ ಎಂಬ ಕವಿಯ ವೈಚಾರಿಕ ನಿಲುವು ಒಂದಷ್ಟು ಆಚರ ವಿಚಾರವುಳ್ಳ ಸಮುದಾಯದ ಕಣ್ಣು ತೆರೆಸುವಲ್ಲಿ ,ಮುಟ್ಟಿ ನೋಡಿಕೊಳ್ಳುವಂತೆ ಮಾಡುತ್ತದೆ.ಇವತ್ತಿಗೂ ಮುಟ್ಟು ಎಂದರೆ ಮೂಗುಮುರಿಯುವ ಮಂದಿಯನ್ನ ಕಾಣಬಹುದು.ಮುಟ್ಟಾಗುವ ಹೆಣ್ಣು ಶಬರಿ ಮಲೆ ಅಯ್ಯಪ್ಪನಿಗೆ ಹೋಗಕೂಡದೆಂಬ ಮಾತಿನಿಂದ ಹೈಕೋರ್ಟ್ ಮೆಟ್ಟಿಲೇರಿ ಹೆಣ್ಣಿನಪರ ನ್ಯಾಯದೊರಕ್ಕಿದ್ದು ಇತಿಹಾಸ .ಈಗಲೂ ಕೂಡ ಕಾಡುಗೊಲ್ಲ ಸಮುದಾಯದಲ್ಲಿ ಹೆಣ್ಣು ಮಗಳು ಮೈನೆರೆದರೆ ಮೂರು ದಿನ ಒಳಗೆ ಸೇರಿಸುತ್ತಿಲ್ಲ.ಇದು ಹಿಂದೆ ಎಲ್ಲಾ ಸಮುದಾಯದ ಮಹಿಳೆಯರು ಅನುಭವಿಸಿದ ಯಾತನೆಯಾಗಿದೆ.ಹೆರಿಗೆ ಆದ ಗೊಲ್ಲರ ಸಮುದಾಯದ ಹೆಣ್ಣು ಮಗಳು ಮತ್ತು ಮಗುವಿಗೆ ಹೊಲದ ಹತ್ತಿರ ಗುಡಿಸಿಲು ಹಾಕಿ ಅದರೊಳಗೆ ಇರಿಸುತ್ತಾರೆ. ಸುಮಾರು ತಿಂಗಳು ಹಟ್ಟಿಗೆ ಸೇರಿಸುವುದಿಲ್ಲ.ಎಂತಹ ಮೌಢ್ಯ ಸಮಾಜದ ಎದುರು ನಾವು ಜೀವಿಸುತ್ತಿದ್ದಿವಿ ಎಂಬುದು ಅರ್ಥವಾಗುತ್ತದೆ.ಈಗೆ ಕವಿಯಾದವನು ಎಚ್ಚರದ ಕಣ್ಣಿಂದ ಎಲ್ಲವನ್ನು ನೋಡುವ ತುರ್ತು ಇದೆ.

ಈ ಸಂಕಲನದ ಇನ್ನೊಂದು ಕವಿತೆ “ನವಭಾರತ ನಾರಿ” ನೈಜತೆಯನ್ನು ಅನಾವರಣ ಮಾಡುತ್ತ ಜನ ಸಾಗುವ ಆದಿಯನ್ನ ಪ್ರಸ್ತುತಪಡಿಸುತ್ತದೆ.

ನವಭಾರತ ನಾರಿ ಬೇಬಿಕೇರ್ ಸೆಂಟ್ರಾಗ್ ಬಿಟ್ಟು ಕರುಳಾ ಕುಡಿಯನ್ನಾ ಬೆಳೆಸ್ಯಾಳಾ/ಮಾಡ್ರೆನ್ ಮಹಿಳೆ ಯಾರ ಹಂಗಿಲ್ಲಾದೆ ಸಾಕ್ಯಾಳಾ//

ಕುಂಟೆಬಿಲ್ಲೆ ಆಡ್ಲಿಲ್ಲಾ ಗಿನ್ನಿದಾಂಡು ಗೊತ್ತಿಲ್ಲ ಅಜ್ಜಿತಾತ ಯಾರಂತ ತಿಳಿಲಿಲ್ಲ/ಮಕ್ಕೀಗೆ ಆಚಾರ ವಿಚಾರ ಬರಲಿಲ್ಲ//
ಸರಿಇಟ್ಟು ತಿನ್ದಿಲ್ಲ ಹಸಿನ್ ತುಪ್ಪ ನೋಡ್ಲಿಲ್ಲ ಬ್ರೆಡ್ಡು ಬಿಸ್ಕತ್ತು ಹಾರ್ಲಿಕ್ಸೆ/ಪೋಸ್ಟಿಕಾಂಸ ಅರವತ್ತು ವಯಸ ದಾಟಲ್ಲ//
ಜನ್ಮ ಕೊಟ್ಟಮ್ಮಂಗೆ ಎಲ್ಲ ಭಾಗ್ಯವು ಬರಲಿ ಕಾರಿನೊಳಗೆ ಮಗಬರಲಿ/ ಆ ಮನೆಗೆ ಮೊಬೈಲಿಲ್ಲಾದ ಸೊಸೆ ಬರಲಿ//

ಟಿ.ವಿ ಮೊಬೈಲ್ ಇಲ್ಲದ ಕಾಲ .ದನಬಿಟ್ಟು ಕಸಬಳಿದು ಶಾಲೆಗೆ ಓಡುತ್ತಿದ್ದ ದಿನಗಳಳು ಭಾನುವಾರ ಬಂತೆಂದರೆ ಕುಂಟೆ ಬಿಲ್ಲೆ ಚಿಣ್ಣಿದಾಂಡು ಮರಕೋತಿ ಆಟ ಕಣ್ಣೆಮುಚ್ಚೆಗಾಡೆಗುಡೆ,ಗೋಲಿ ಆಟ,ರಾಜರಾಣಿ ಆಟ,ಲಗೋರಿ ಆಟ ಇನ್ನು ಮುಂತಾದ ಆಟಗಳು ಕಣ್ಮರೆಯಾಗುತ್ತ ಬಂದಿವೆ.ಈ ಮೇಲಿನ ಆಟಗಳು ಇತ್ತೀಚಿನ ಮಕ್ಕಳಿಗೆ ಗೊತ್ತಿಲ್ಲದೆ ಬೆಳದಿವೆ.

ಆದರೆ ಇವತ್ತಿನ ಹುಡುಗರು ಮೊಬೈಲಲ್ಲಿದೆ ಊಟ ಮಾಡದ ಪರಿಸ್ಥಿತಿಗೆ ಬಂದು ನಿಂತಿವೆ.ಹೆಂಡತಿ ಗಂಡ ಮಗ್ಗುಲಲ್ಲಿದ್ದರೋ ಇಲ್ಲವೋ ನೋಡುವುದಿಲ್ಲ ಮೊಬೈಲ್ ತಲೆದೆಸೆಯಲ್ಲಿರಬೇಕು.ಒಂದು ಕ್ಷಣ ಮೊಬೈಲ್ ಕಾಣದೇ ಹೋದರೆ ಏನೋ ಚಡಪಡಿಕೆ ತಳಮಳ.ಕವಿ ಪ್ರಸ್ತುತ ಸಂಕಟವನ್ನು ಜಾನಪದ ನುಡಿಯಲ್ಲಿ ಚನ್ನಾಗಿ ಚಿತ್ತಿಸಿದ್ದಾರೆ.ಹಾಗೇ ಇಂದು ಕೆಲಸದ ಒತ್ತಡದ ನಡುವೆ ಹೆತ್ತ ತಂದೆ ತಾಯಿಗಳ ಮಕ್ಕಳನ್ನು ಯವ ರೀತಿ ಬೇಬಿ ಕೇರ್ ಗೆ ಸೇರಿಸುವ ಮೂಲಕ; ತಾಯಿ ತಂದೆಯಿಂದ ಸಿಗಬೇಕಿದ್ದ ಪ್ರಿತಿ ವಾತ್ಸಲ್ಯದಿಂದ ವಂಚಿತರಾಗುತ್ತಿವೆ.ವಾಚ್ಯವಾಗಿಯೇ ಬರೆಯುತ್ತಾರೆ.ಕವಿತೆ ಹೀಗೆ ಸಮಾಜ ಮುಖಿಯಾಗಿ ನಿಂತು ಪ್ರಶ್ನಿಸುವಲ್ಲಿ ಯಶಸ್ವಿಯಾಗಿದೆ.

“ನಮ್ಮಜ್ಜ ಹುಟ್ಟಿದ್ದು
ನೋವುಗಳಗಿಷ್ಟಿಕೆಯಲ್ಲಿ
ಅಸ್ಪೃಶ್ಯತೆಯ ಕೆಂಡಗಳ ನಡುವೆ ಬೆಂದವನು
ಅಪಮಾನದ ಸುತ್ತಿಗೆಯಲ್ಲಿ ಬಡಿಸಿಕೊಂಡು
ನಿಂದನೆಯ ನೀರಿನಲ್ಲಿ ಮಿಂದವನು
ಕೊನೆಗೆ ಉಕ್ಕಿನ ಲೇಖನಿಯಾದ”(ಅಗ್ಗಿಷ್ಠಿಕೆಯ ಕಿರಣ)

ತುಳಿತಕ್ಕೊಳಗಾದವರ,ಅಲಕ್ಷಿತ ಸಮುದಾಯ ಆಶಾಕಿರಣ ಡಾ.ಬಿ ಆರೂ ಅಂಬೇಡ್ಕರ್. ಉಸಿರುಗಟ್ಟುವ ವಾತವರಣವನ್ನು ಸಂವಿಧಾನ ಬರೆಯೀವ ಮೂಲಕ ತಿಳಿಗೊಳಿಸಾದರು ಆ ನೋವು ಅನುಭವಿಸಿದವರಿಗೆ ಮಾತ್ರ ಗೊತ್ತು.ಮನುಷ್ಯ ಸಂಬಂಧಗಳು ಮೃಗೀಯ ನಡವಳಿಕೆಗಳ ಮೂಲಕ ಕುಗ್ಗಿಹೋಗಿದ್ದ ಶೋಷಿತರು ತಲೆ ಎತ್ತಿ ನಡೆಯುವಂತಾಯಿತು. ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡು ಉಸಿರಾಡುವ ಮನುಷ್ಯನಿಗೆ ಯಾವ ಕಾನೂನು ಬೇಕಿಲ್ಲ.ತಲತಲಾಂತರದಿಂದ ಬಂದ ಅಸ್ಪುಶ್ಯ ಆಚರಣೆ ಮೈಗಂಟಿದ ಚರ್ಮ ವಾಗಿದೆ.ಕೇರಿಗೊಂದು ದೇವರುಗಳನ್ನು ಸೃಷ್ಠಿಸಿಕೊಂಡ ಮನುಷ್ಯ .ಮನುಷ್ಯನನ್ನು ಮನುಷ್ಯನಂತೆ ಕಂಡಿದ್ದರೆ ಜಾತಿ ಬೇದ ಕುಲ ಧರ್ಮ ಅಂತ ಯಾರೂ ನಿಲ್ಲುವ ಅಗತ್ಯವಿಲ್ಲ.ಹುಟ್ಟುವಾಗ ಯಾರೂ ಜಾತಿಯನ್ನ ಧರೂಮವನ್ನ ಅಂಟಿಸಿಕೊಂಡು ಬರುವುದಿಲ್ಲ ಎಂಜ ನಿಜಾಂಶವನ್ನ ಅರಿಯಬೇಕಿದೆ.ಈ ಕವನದಲ್ಲಿ ಅಂಬೇಡ್ಕರ್ ಅನುಭವಿಸಿದ ನೋವನ್ನ ಬಹಳ ಚನ್ನಾಗಿ ಬರೆದಿದ್ದಾರೆ

ಬಡವರ ಬದುಕು ಜಂತೆ ಮನೆಯಲ್ಲೇ ಬೆಳಕು ಕಾಣದೆ ಸರಿದು ಹೋಗುವ ಸಂದರ್ಭ ನಿಜಕ್ಕೂ ತಮ್ಮ ಬಾಲ್ಯಕ್ಕೆ ಕರೆದೊಯ್ಯುತ್ತದೆ. ಅನುಭವಿಸಿದ ನೋವು ನಲಿವುಗಳು ಕವಿಯೊಬ್ಬನವು ಮಾತ್ರವಲ್ಲ ಪ್ರತಿಯೊಬ್ಬ ಬಡತನ ಬೆವರು ಶೋಷಿತ ಅನುಭವಗಳಿಗೆ ಹೆಗಲಾದವರ ಬದುಕು.ಇಲ್ಲಿ ಮೊರಹಿಡಿದು ಎಗ್ಗಲಿಸುವ ಹೆಣ್ಣು ಭೂತಕ್ಕೆ ಸರಿದು ಹೋಗಿ ಮಾಡ್ರನ್ ಮಹಿಳೆಯ ಸುಲಭ ಬದುಕಿನ ಅನಾವರಣ ಕಾಣಿಸಿದರೆ,ವಯಸ್ಸಾದ ಹೆತ್ತವರನ್ನು ಊರಿನಲ್ಲಿ ಬಿಟ್ಟು ಎಲ್ಲೊ ಕೆಲಸದ ನಿಮಿತ್ತ ಜೀವಿಸುವ ಮನುಷ್ಯರೂ ಬಂದು ಹೋಗುತ್ತಾರೆ. ತಂದೆ ತಾಯಿ ಸತ್ತಾಗ ನೀರು ಬಿಡಲೂ ಬರದ ಸ್ಥಿತಿಗೆ ಮನುಷ್ಯನ ಬದುಕಿಗೆ ಬಿಡುವಿಲ್ಲ.ಗ್ಯಾಸು ಕೊಟ್ಟರು ದುಡ್ಡಿದ್ದರು ಕೈಲಾಗದ ಹಿನಧೀನ ಸ್ಥಿತಿ ಹಿರಿಜೀವಗಳದ್ದು.

ಜಂತೇ ಮನೆಯಿಂದ ಒಂದು ವ್ಯವಸ್ಥೆಯನ್ನೇ ಪ್ರಶ್ನೆ ಮಾಡುವ ಈ ಕವನ ನಿಜಕ್ಕೂ ಓದುಗನಿಗೆ ಇಷ್ಟವಾಗುತ್ತದೆ.ಹಳ್ಳಿ ಜನರಿಗೆ ಗೊತ್ತಿಲ್ಲದ ಬಯೋಮೆಟ್ರಿಕ್ ಗೆ ವಿರೋಧಿಸುವ ಈ ದೇಸಿಕವಿಯ ಆಸಕ್ತಿ ಮೆಚ್ಚಬೇಕಾದದ್ದೆ.ಆಗಂತ ಬದಲಾವಣೆ ಬೇಕಿಲ್ಲವೆ? ಬೇಕು.ಅರ್ಥವಾಗುವ ಅಕ್ಷರಸ್ಥರಿಗೆ.ಈ ಕವನ ನೋಡಿದಾಗ ಕವಿಗೆ ಬಡವರ ಬಗ್ಗೆ ಇರುವ ಕಾಳಜಿ .ನೋವುಂಡವರಿಗೆ ಮಾತ್ರ ನೋವಿನ ಆಳ ಅಗಲ ತಿಳಿಯುತ್ತದೆ.ನೋವಿಲ್ಲದ ಅನುಭವವಿಲ್ಲದ ಕಾವ್ಯ ಬರಹ ಪೊಳ್ಳು ಮಾತ್ರ.ಇಲ್ಲಿ ಕವಿಗೆ ಸಾಕಷ್ಟು ಬದುಕಿನ ಅನುಭವವಿರುವುದರಿಂದಲೇ ಕಾವ್ಯದ ವಸ್ತು ನೈಜಬೆಳಕಿನ ಹಾದಿಯ ಮೇಲೆ ಚಲಿಸಿರುವುದು.

ಗಂಜಿ ಕೇಂದ್ರವೆಂಬ
ಕುರಿ ದೊಡ್ಡಿಯೊಂದರಲ್ಲಿ
ಹಣ್ಣಣ್ಣು ಅಜ್ಜಿಯೊಂದು
ದೇವರೇ ದಿಕ್ಕೆಂದಾಗ
ದೇವಾಲಯದೊಳಗಿನ ದೇವರಿಗೆ ದಿಕ್ಕಿಲ್ದಂಗಾಗಿತ್ತು.(ದೇವರಿಗೆ ದಿಕ್ಕಿಲ್ದಂಗಾಗಿತ್ತು.)

ಎಂದು ಬರೆಯುವ ಕವಿಗೆ ವೈಚಾರಿಕತೆಯ ನಿಜ ಪ್ರಜ್ಞೆಯ ಅರಿವಿದೆ.ಪ್ರಕೃತಿಯ ವಿಕೋಪದಿಂದ ನೆರೆಬಂದು ಕೊಚ್ಚಿ ಹೋಗುವಾಗ ದೇವರೆಲ್ಲಿ ಕಾಪಾಡುವನು ?ಪ್ರಕೃತಿಯ ಮುಂದೆ ದೇವರು ನಗಣ್ಯ.ಪ್ರಕೃತಿಯೇ ಇಲ್ಲಿ ಮೇಲುಗ್ಯೆ .ದೇವರೆನ್ನುವ ಆಕಾರವನ್ನು ಸೃಷ್ಠಿಸಿಕೊಂಡು ಎಲ್ಲಕ್ಕೂ ದೇವರೇ ಎಂದರೆ ಹೇಗೆ?ತನಾನನ್ನೇ ತಾನು ಕಾಪಾಡಿಕೊಳ್ಳಲಾರದ ಸ್ಥಿತಿಯಲ್ಲಿ ಆ ನೆರೆ ಅಥವ ಪ್ರವಾಹ ಬಂದ ಸ್ಥಳದಲ್ಲಿ ದೇವರ ಗುಡಿ ಏನಾದರೂ ಇದ್ದರೆ ಎಂಬ ಆಲೋಚನ ಕ್ರಮವೇ ವಿಶಿಷ್ಟವಾದದ್ದು.ಮೌಢ್ಯದ ಕಣ್ಣು ತೆರೆಸುವ ಸಾಲುಗಳನ್ನು ಕೊಟ್ಟ ಕವಿಯ ಆಲೋಚನೆ ವಿಭಿನ್ನ ಅನ್ನಿಸಿತು.

ಆಷಾಢ ಮಾಸವನ್ನೇ ಶುಭವೆಂದು ತಿಳಿಸುವ “ಹೊನ್ನ ಬಿತ್ತುವ ಕಾಲ”ಒಳ್ಳೆ ಚಿಂತನಾರ್ಹ ಕವಿತೆ.
ಕೆನ್ನಾಗರಗಳು,ದೊರೆಸಾನಿ,ಏಕಲವ್ಯ, ನುಡಿತೇರು,ಲಿಂಕು,ಅಣಬೆ,ಕವಿತೆಗಳು ಸರಳವಾಗಿ ತನ್ನ ಒಳಗಿನ ಆಶಯಗಳನ್ನು ಶಕ್ತವಾಗಿ ಅನಾವರಣಗೊಳಿಸುತ್ತವೆ.

ಕವಿ ಯಾವಾಗಲೂ ವಿಭಿನ್ನ ಆಲೋಚನೆಯಲ್ಲಿ ಚಿಂತಿಸಬೇಕು.ಕಾವ್ಯವೆಂದರೆ ಕಾವುಕೊಟ್ಟ ಮೊಟ್ಟೆಯಿಂದ ಮರಿ ಒಡೆದು ಬರುವಂತಿರಬೇಕು.ಪದಗಳನ್ನ ಎಳೆದು ತಂದು ಜೋಡಿಸುವುದಲ್ಲ.ಯು. ಆರ್ .ಅನಂತಮೂರ್ತಿ ಯವರು ಹೆಳುವಂತೆ ,ಕಾವ್ಯ ಹಕ್ಕಿ ಹಾರುವ ಹೆಜ್ಜೆಗುರುತು.ಪದ್ಯ ಯವಾಗಲೂ ಅದರ ಅರ್ಥವನ್ನ ಸಾಲುಗಳ ನಡುವಿನ ಖಾಲಿ ಜಾಗದಲ್ಲಿ ಹುದುಗಿಸಿಕೊಂಡಿರುತ್ತದೆ.ಕಾಣುವುದಿಲ್ಲ ಓದಿಗೆ ಸಿಗುತ್ತದೆ.ಕಾವ್ಯಕ್ಕೆ ವಸ್ತು ಎಷ್ಟು ಮುಖ್ಯವೋ ಲಯ ಶಿಲ್ಪ ರೂಪಕವೂ ಮುಖ್ಯವಾಗುತ್ತದೆ.ಈ ಸಂಕಲನದ ಕವಿ ಕಾಂತರಾಜು ಗುಪ್ಪಟ್ಣ ವಸ್ತುವಿನಂತೆ ಧ್ಯಾನಿಸಿ ಬರೆಯುವ ಕ್ರಮತೆ ಒಗ್ಗಲಿ ಮುಂದಿನ ಸಂಕಲನದಲ್ಲಿಇವೆಲ್ಲಾ ನಿರೀಕ್ಷೆಯ ಆಶಯದೊಂದಿಗೆ ಕಾಯೋಣ.

‍ಲೇಖಕರು avadhi

December 25, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: