ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ದೀಕ್ಷಿತ್ ನಾಯರ್ ಹೊಸ ಕವಿತೆ- ಎಲ್ಲವೂ ಈ ಮೊದಲಿನಂತೆಯೇ ಇದೆ

ದೀಕ್ಷಿತ್ ನಾಯರ್

**

Brain bilston ಎಂಬ ಕವಿಯ ಒಂದು ಕವಿತೆಯ ಕೆಲವು  ಸಾಲುಗಳಿಂದ

ಸ್ಫೂರ್ತಿಗೊಂಡು ಬರೆದಿರುವ ಕವಿತೆ.

ಎಲ್ಲವೂ ಈ ಮೊದಲಿನಂತೆಯೇ ಇದೆ

**

ನಾಲ್ಕೈದು ಸಿಗರೇಟಿನ ತುಂಡುಗಳಿರುವ ಅವನ ಆಷ್ ಟ್ರೇ

ಕುಡಿದ ಅಮಲಿನಲ್ಲಿ ಉಚ್ಚೆ ಉಯ್ದು ಗಬ್ಬುಗೊಳಿಸಿರುವ ಅವನದ್ದೇ ಹಾಸಿಗೆಯ ಕವರ್; ಮಗಳು ಅರ್ಧಕ್ಕೆ ತಿಂದು ಇಟ್ಟಿರುವ ಬ್ರೆಡ್ಡು ಜಾಮೂ

ದಶಕಗಳ ಹಿಂದೆ ತೆಗೆಸಿದ್ದ ನಾನು ಕೊನೆಯ ಬಾರಿಗೆ ನಕ್ಕಿದ್ದ ಫೋಟೋ

ಎಲ್ಲವೂ ಈ ಮೊದಲಿನಂತೆಯೇ ಇದೆ! 

ಹೊಸ ವರ್ಷ ಚರ್ಚಿನ ರಸ್ತೆಯವರೆಗೂ ಬಂದು ಕಾಲು ಮುರಕೊಂಡು ಅಲ್ಲೇ ಕುಳಿತಿದೆ

ನಮ್ಮ ಮನೆಯ ಬಾಗಿಲಿನವರೆಗೂ ಬರಲೇ ಇಲ್ಲ

ನೆಲ ಮಹಡಿಯಲ್ಲಿರುವ ಗೆಳತಿ ಮಾತುಬಿಟ್ಟಿದ್ದಾಳೆ

ಮನೆಯ ಮಾಲೀಕ ಬಾಡಿಗೆಯ ಹಣಕ್ಕಾಗಿ ಬಂದಾಗೆಲ್ಲ ಕೈ ಸವರಿ ಮಜಾ ತೆಗೆದುಕೊಳ್ಳುತ್ತಾನೆ;

ಕೋಣೆಯಲ್ಲಿ ಮಲಗಿರುವ ನನ್ನ ಪ್ರಾಯದ ಮಗಳನ್ನೂ ಕತ್ತು ನಿಗುರಿಸಿ ಲಂಪಟತನದಿಂದ ನೋಡುತ್ತಾನೆ

ಹತ್ತಾರು ಕಾಯಿಲೆಗಳಿಂದ ನರಳುತ್ತಿರುವ ಅತ್ತೆ ಯಾವಾಗ ಬೇಕಾದರೂ ಸಾಯುತ್ತಾಳೆ

ಎಲ್ಲವೂ ಈ ಮೊದಲಿನಂತೆಯೇ ಇದೆ!

ಹೊಸ ವರ್ಷ ಈ ವರ್ಷವೂ ನಮ್ಮ ಮನೆಯ ವಿಳಾಸವನ್ನು ಮರೆತಿದೆ

ಕನ್ನಡಕದ ಗಾಜು ಮುರಿದು ಬಿದ್ದಿದೆ

ಅಂಗಳದ ಗಿಡಗಳು ಪೂರಾ ಒಣಗಿ ಹೋಗಿವೆ;

ನನ್ನ ಇಷ್ಟದ ಬೂದು ಬಣ್ಣದ ಕುಪ್ಪಸ ಸಡಿಲವಾಗಿದೆ

ನನ್ನ ಕೂದಲುಗಳು ನೆರೆಯಾಗುತ್ತಿವೆ

‘ಇವರು’ ಇತ್ತೀಚಿಗೆ ಯಾರೋ ಒಬ್ಬಳನ್ನು ಕರೆ ತರುತ್ತಿದ್ದಾರೆ 

ಎಲ್ಲವೂ ಈ ಮೊದಲಿನಂತೆಯೇ ಇದೆ!

ಯೇಸುವಿನ ತುಟಿಯ ತುದಿಯವರೆಗೂ ಬಂದ ಹೊಸ ವರ್ಷ

ನಮ್ಮ ಮನೆಯ ಬಾಗಿಲವರೆಗೂ ಬರಲೇ ಇಲ್ಲ 

‍ಲೇಖಕರು avadhi

25 December, 2023

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading