ನಂದಿನಿ ಹೆದ್ದುರ್ಗ
**
ಎಷ್ಟೊಂದು ತೀವ್ರವಾಗಿ ಅನಿಸುತ್ತಿತ್ತು
ಎಣ್ಣೆ ಹಚ್ಚಿ
ಮೈಯ ನೀವಿ
ನೆತ್ತಿ ತಟ್ಟಿ ಮೂಗು ತೀಡಿ
ಕಣ್ಣರೆಪ್ಪೆಗೆ ಮೆಲ್ಲಗೆ ಹಾಲು ಸವರಿ
ಹವಳ ಸವೆದು ತುಟಿಗೆ ಹಚ್ಚಿ
ಗಂಧ ತೇದು ಎದೆಗೆ ಮೆತ್ತಿ
ಹಾಲು ತುಳುಕುವ
ಮೊಲೆಯ ನಿನ್ನ ತುಟಿಗೆ ಒತ್ತಬೇಕು
ಮೆಲ್ಲಗೆ ಬೆನ್ನು ಬಳಸಿ ಲಾಲಿ ಹೇಳಿ
ಕವುಚಿ
ಬೆಚ್ಚನೆಯ ನೀರು ಹುಯ್ಯಬೇಕು
ಘಮ್ಮನೆ ಹಿಟ್ಟು ಉಜ್ಜಿ
ಆಚಿ ಕಳ್ಳ ಚೋಣು ಪುಟ್ಟಾ ಚಾಮಿ ಜಾಣ
ಅಂತೆಲ್ಲ ಮುದ್ದಾಡಿ ಲೋಭಾನದಲಾಡಿಸಿ
ನಿದ್ದೆ ಹೋದ
ನಿನ್ನ ಮೈಯ ತುಂಬ ನನ್ನ ಬೆರಳ ನಾದ
ಪ್ರೀತಿ ಹಿತವಾದ ಪ್ರಮಾದ
ಕರಗಿದ ನನ್ನ ಕಾಡಿಗೆಗೆ
ಕಿರಬೆರಳ ತಾಗಿಸಿ
ಹಣೆಗಿಟ್ಟು ನೆಟಿಕೆ ತೆಗೆದು
ದೇವರನು ನೆನೆದು
ಎದೆಗೊತ್ತಿ ಮಲಗಿಸಬೇಕು.
ನೀನು ನನ್ನ ಹಸು ಕಂದ.
ನಾನು ನಿನ್ನ ಆತ್ಮದ ಬಂಧ!!
ಎಂದೆಲ್ಲಾ ಹಗಲುಗನಸು ಕಂಡು
ಮುಗಿವ ಕಾಲಕ್ಕೆ
ಕಳೆದ ಸಂಜೆಯ
ಮಾತಿನಲ್ಲಿ ನೀನು
……
…..
….
…..
ಇದನ್ನು
ಹಾದರವೆಂದೆ!!
…
0 ಪ್ರತಿಕ್ರಿಯೆಗಳು