‘ಬಿಡು ಬಿಡು ನಿನ್ನಯ ಪಾಯ್ಸ ಪದಾರ್ಥವ…..’

ಈ ಉತ್ತರ ಕರ್ನಾಟಕದ ಭಾಷೆಗೆ ಗಂಡು ಮೆಟ್ಟಿನ ನಾಡು, ನಾಡಿನ ಭಾಷೆ ಅಂತ ಅನ್ನುತ್ತಾರಲ್ಲ ಹಾಗೆ ಈ ಉತ್ತರ ಕನ್ನಡಕ್ಕೆ ಸಮುದ್ರ ಮೆಟ್ಟಿದ ನೆಲ, ಭಾಷೆ ಅಂತನ್ನಬಹುದೇನೊ. ಅಲ್ಲಿನವರು ಮಾತನಾಡುವುದೂ ಹಾಗೆ ತೆರೆ ಅಲೆಅಲೆಯಾಗಿ..

ರೇಣುಕಾ ರಮಾನಂದ ಅವರು ಕೂಡ ಇದಕ್ಕೆ ಹೊರತಲ್ಲ.ಇಂಥ ಸಮುದ್ರದಂಚಿನ ಊರಲ್ಲಿರುವ ರೇಣುಕಾ ರಮಾನಂದ ಇಷ್ಟು ದಿನ ನಮಗೆ ‘ಮೀನುಪೇಟೆಯ ತಿರುವಿನಲ್ಲಿ’ ಸಿಗುತ್ತಿದ್ದರು. ಇನ್ನು ಮುಂದೆ ಪ್ರತಿ ಶುಕ್ರವಾರ ‘ಅವಧಿ’ಯ ‘ನನ್ನ ಶಾಲ್ಮಲೆ’ ಅಂಕಣದಲ್ಲಿ ಸಿಗಲಿದ್ದಾರೆ.

ಕಳೆದ ಸಂಚಿಕೆಯಿಂದ |

‘ಈ ಕೊರೋನಾ ಕಾಲದಲ್ಲಿ ಹೋದ್ವರ್ಷಂತೂ ಬಂಡಿ ಹಬ್ಬ ಆಗ್ಲಿಲ್ಲ.. ಏಪಟಾದ್ರೂ ಮಾಡೂರೋ…’ ಎಂಬಅನುಮಾನದ ಮಾತಿನ ವಿನಿಮಯದ ಕಾಲ ಮುಗಿದು ‘ನಮ್ಮೂರ ಹಬ್ಬ ಮೇ ಹತ್ತಕ್ಕೆ… ಮಕ್ಕಳ ಕರ್ಕೊಂಡು ಊರಿಗೆ ಬರ್ರೀ ಹಾಂ.. ನಿಮ್ಮೂರ್ ಹಬ್ಬ ಯಾವಗೆ?’ ಎಂಬ ಸುದ್ದಿ ಕಳೆದ ಸುಮಾರು ದಿನದಿಂದ ಅಂಕೋಲೆ ಫೋನ್‌ಗಳಲ್ಲಿ, ವ್ಯಾಟ್ಸಪ್ ಗ್ರೂಪುಗಳಲ್ಲಿ ಹರಿದಾಡುತ್ತಿದೆ..

ಅಂಕೋಲಿಗರಿಗೆ ತಾವು ಮನೆಯವರೇ ಮಾಡಿಕೊಳ್ಳುವ ಸಂಕ್ರಾಂತಿ, ಯುಗಾದಿ, ದೀಪಾವಳಿಗಿಂತ ಹತ್ತೂರ ನೂರಾರು ನೆಂಟರ ಕರೆದು ಹೊಟ್ಟೆತುಂಬ ‘ಕೋಳಿಯಾಶೆ’ ಮಾಡಿ ಹಾಕುವ ಬಂಡಿಹಬ್ಬವೆಂದರೆ ಅದೇನೋ ಬಹಳ ಕಕ್ಕುಲಾತಿ.. ‘ಬಿಡು ಬಿಡು ನಿನ್ನಯ ಪಾಯ್ಸ ಪದಾರ್ಥವ.. ಮೀನ್ ಪಳದಿ ರುಚಿ ಬರುದೇ..?’ ಎಂಬ ಇಲ್ಲಿನ ರೂಢಿಗತ ಮಾತಿನಂತೆ ಈ ಮೀನು ಪದಾರ್ಥ ಮತ್ತು ಕೋಳಿಯಾಶೆ ಬಿಟ್ಟು ಬೇರೆ ಯಾವ ಓಗರದ ಮಾತಾದರೂ ಮೂಗು ತಿರುವಿ ‘ಊಹೂಂ’ ಅನ್ನುವ ಜನವೇ ನಿಮಗೆ ಇಲ್ಲಿ ಮನೆಮನೆಗೂ ಸಿಗುವುದು.

ಎಪ್ಪತ್ತೆಂಬತ್ತು ವರ್ಷಗಳ ಹಿಂದಿನವರೆಗೂ ಕಲ್ಲು, ಹುತ್ತ, ಬಂಡೆ, ಕಟ್ಟಿಗೆ, ಗುತ್ತು ಮುಂತಾದ ಸಾಂಕೇತಿಕ ರೂಪದಲ್ಲೇ ಪೂಜಿಸುತ್ತಿದ್ದ ಊರುಕೇರಿಯ ಜನಪದ ದೈವಗಳೆಲ್ಲ ಇತ್ತೀಚೆಗೆ ಮೂರ್ತ ರೂಪ ಪಡೆದುಕೊಂಡಿವೆ. ಕಲ್ಲುಬಂಡೆ ರೂಪದಲ್ಲಿ ಪೂಜೆಗೊಳ್ಳುತ್ತಿದ್ದ ಕೃಷಿ ದೈವ ಬೊಮ್ಮಯ್ಯ ಈಗ ಅಶ್ವಾರೂಢ ಅಥವಾ ಗಜಾರೂಢನಾಗಿ ಧನುರ್ಧಾರಿ ವೀರಗಲ್ಲಿನ ರೂಪ ತಾಳಿದ್ದಾನೆ.

ಕಳಸ ರೂಪದ ಭೂಮಿತಾಯಿ ಕೂಡ ಮೂರ್ತಿ ರೂಪವನ್ನು ಪಡೆದು ಬಹುಕಾಲವಾಗಿದೆ. ಗಂಗಾವಳಿ ಹೊಳೆಯ ಚಿಪ್ಪು ಮೀನಿನ ಚಿಪ್ಪಿ ಸುಟ್ಟು ಮಾಡಿದ ಸುಣ್ಣ, ಜೋನಿಬೆಲ್ಲದ ಕಾಕಂಬಿ, ಮರಳು ಸೇರಿಸಿ ತಿಂಗಳುಗಳ ಕಾಲ ಕೊಳೆಸಿ ಮಿದ್ದು ಗಿಲಾಯಿ ಮಾಡಿಸಿಕೊಂಡ ಹಳೆಯ ದೇವಳದ ಗೋಡೆಗಳು, ಕೆಂಪು ಕಲ್ಲು ಗುಜ್ಜು ಅರೆದು ತಯಾರಿಸಿದ ‘ಕಾವು’ ಬಣ್ಣದಿಂದ ಬರೆದ ಸೂಕ್ಷ್ಮ ಕುಸುರಿಯ ಕಾವಿ ಕಲೆಯ ಚಿತ್ರಗಳು ಈಗ ಜೀರ್ಣೋದ್ಧಾರ, ಅಭಿವೃದ್ಧಿ ಹೆಸರಿನಲ್ಲಿ ತಮ್ಮ ಮೂಲಸ್ವರೂಪಲ್ಲಿದ್ದ ಸಹಜತೆ ಕಳೆದುಕೊಂಡು ಥಳಕ್ಕು ಬಳುಕ್ಕಿನ ಶೋಪೀಸುಗಳಾಗಿವೆ.

ಹಳೆಯ ಸೊಗಡಿನ ಆಪ್ತತೆ, ಶಾಂತತೆ, ನಿರುಮ್ಮಳತೆ ಮರೆಯಾಗಿ ದ್ಯಾವರ ಮನೆಗಳೀಗ ದೇವಸ್ಥಾನಗಳಾಗಿ ಅಬ್ಬರದ ಲೈಟಿಂಗು.. ಕಣ್ಣಿಗೆ ಎದ್ದು ಹೊಡೆಯುವ ಪೈಂಟಿಂಗು ಮೆತ್ತಿಕೊಂಡು ಅಂಗಳದ ನಾಲ್ಕೂ ದಿಕ್ಕಿಗೂ ಬಣ್ಣದ ಹಾಸುಗಲ್ಲುಗಳನ್ನು ಹಾಸಿಕೊಂಡಿವೆ.. ಊರ ಜನರ ಶ್ರೇಯೋಭಿವೃದ್ಧಿಯಾದಂತೆ ದೇವಸ್ಥಾನಕ್ಕೆ ‘ಹೇಳಿಕೊಳ್ಳುವವರ’ ಸಂಖ್ಯೆ ಹೆಚ್ಚಾಗತೊಡಗಿ ಐದ್ಹತ್ತು ವರ್ಷಗಳಿಗೊಮ್ಮೆ ಕಟ್ಟಡಗಳು ನವೀಕರಣಗೊಳ್ಳುತ್ತ ವರ್ಷ ಪೂರ್ತಿಯ ಹೂ-ಗಂಧ, ಹಣ್ಣ್- ಕಾಯಿಯ ಭಾವಭಕ್ತಿ ಮರೆಯಾಗಿ ಅಬ್ಬರದ ಒಂದೆರಡೇ ದಿನದ ಆಚರಣೆಯ ಆಡುಂಬೊಲವಾಗುತ್ತಿವೆ.

ಯಾವ ಊರುಗಳಲ್ಲಿ ಅಮ್ಮನ ದೇವಸ್ಥಾನ ಇದೆಯೋ ಅಲ್ಲಿ ಮಾತ್ರ ‘ಕಳಸ ಏಳುವ’ ಬಂಡಿ ಹಬ್ಬ ನಡೆಯುತ್ತದೆ. ಇನ್ನಿತರ ಊರುಗಳಲ್ಲಿ ಜಟಗ ಎಂಬ ಊರ ಗಡಿಗುತ್ತುಗಳಿಗೆ ಪೂಜೆ ಮಾಡಿ ಕೋಳಿ ಕುರಿ ಬಲಿಕೊಟ್ಟು ಊರಕಾಯುವ ದೈವ ಭೂತಗಳಿಗೆ ನಡೆದುಕೊಳ್ಳುವ ಕಳಸವೇಳದ ‘ಗೆಡಿಹಬ್ಬ’ವನ್ನು ಮಾಡುತ್ತಾರೆ. ಎಲ್ಲಕ್ಕೂ ಮೊದಲು ಅಂಕೋಲೆ ಬಂಡಿಹಬ್ಬ ನಡೆದರೆ ನಂತರದ ದಿನಗಳಲ್ಲಿ ಕಾರವಾರ, ಗೋಕರ್ಣ, ಚಂದಾವರ ಸೀಮೆಯ ಬಂಡಿಹಬ್ಬ ನಡೆಯುತ್ತದೆ.

ದೇವರ ಕರೆಯುವುದು

ಬಂಡಿಹಬ್ಬದ ಎರಡುದಿನ ಮೊದಲು ಹಬ್ಬಕ್ಕೆ ‘ದೇವರ ಕರೆಯಲು’ ( ಪರಿವಾರ ದೈವಗಳನ್ನು ಆಹ್ವಾನಿಸಲು ) ಅಮ್ಮನ ಕಳಸ ಸುತ್ತಮುತ್ತಲಿನ ಊರುಗಳಿಗೆ ಹೋಗುತ್ತದೆ. ಅನಾದಿಕಾಲದಿಂದ ಹೋಗುವ ಅದರದ್ದೇ ಹಾದಿಯಲ್ಲಿ ಇರುವ ತೋಟ, ಮನೆ, ಗದ್ದೆ, ಬೇಣ, ಹಕ್ಕಲ ಮುಂತಾದವುಗಳಿಗೆ ಕಂಪೌಂಡ್ ಇದ್ದರೂ ಕೂಡ ಈ ಸಮಯದಲ್ಲಿ ಆ ಜಮೀನಿನ ಮಾಲಿಕರು ಅದನ್ನು ತೆರವು ಮಾಡಿ ಇಡಬೇಕು.. ಇಲ್ಲದೇ ಇದ್ರೆ ‘ದೇವರು ಹೋಗು ಹಾದಿಯನ್ನು ಕಟ್ಟಿ ದೇವರು ಅದನ್ನು ಒಡೆದುಕೊಂಡು ಹೋಯ್ತಂತೆ’ ಎಂಬ ಸುದ್ದಿ ಮರುದಿನ ಹತ್ತೂರಲ್ಲಿ ಗುಲ್ಲಾಗಿ ‘ಶ್ಯೆ.. ಶ್ಯೆ… ಎಂಥಾ ಮನ್ಶಾ ಅಂವಾ.. ದೇವ್ರ ಹಾದಿ ಕಟ್ಟದಂವಾ’ ಎಂದು ಮನೆಮನೆಯಲ್ಲಿ ಮಾತುಕತೆಯಾಗುತ್ತದೆ.

ಹೀಗೆ ಗದ್ದೆ, ಬೇಣ ಬಿದ್ದು ಓಡುವ ದೇವರ ಕಲಶ ಹೊತ್ತ ಗುನಗನಿಗೆ ಬಲುಭಾರ ಬಂದು ಮಂಡಿಗಾಲಲ್ಲೇ ಕೆಲವಷ್ಟು ದೂರ ಹೋಗುವುದೂ ಇದೆ..  ‘ದೇವರ ಮಂಡಿಗಾಲನ್ನು ನೋಡಲು’ ಕಲಶದ ಬೆನ್ನಿಗೆ ಜನವೂ ಓಡುತ್ತದೆ.

ನನ್ನ ತವರೂರಿನ ಹೆಂಗಳೆಯರೆಲ್ಲ ಆರತಿ ತಟ್ಟೆ, ಎರಡು ಊದಿನಕಡ್ಡಿ, ದಾಸಾಳ ಹೂ, ಕಾಯಿ- ಕರ್ಪೂರ ಹಿಡಿದು  ವಂದಿಗೆ ಮತ್ತು ಬೋಳೆ ಎಂಬ ಊರುಗಳ ನಡುಮಧ್ಯ ಗಡಿಯ ಗದ್ದೆಯಲ್ಲಿರುವ ‘ಸುಂಗಾಳಿ’ ಮರದ ಕಟ್ಟೆಯ ಮೇಲೆ ದೇವರ ಕರೆಯಲು ಬಂದು ಕುಳಿತುಕೊಳ್ಳುವ ದೇವಿ ಕಳಸವನ್ನು ನೋಡಲು, ಅದಕ್ಕೊಂದು ಕೈ ಮುಗಿದು ಬರಲು ಕೊಪ್ಪದ ಕಡೆಗಿಂದ ತಂಡೋಪ ತಂಡವಾಗಿ ಹತ್ತಾರು ಗದ್ದೆ ಹಾಳಿ ಹಾರುತ್ತ ಕಟ್ಟೆಯ ಕಡೆಗೆ ಓಡುವ ದೃಶ್ಯ ಈಗಲೂ ಕಣ್ಣಿಗೆ ಕಟ್ಟಿದಂತೆ ನನಗೆ ಹಬ್ಬದ ಸಮಯದ ಲ್ಲಿ ಮತ್ತೆ ಮತ್ತೆ ನೆನಪಾಗುತ್ತದೆ.. ಎದೆ ತುಂಬಿ ಬರುತ್ತದೆ.. ಜೀವ ಆ ಕಡೆಗೆ ಎಳೆಯುತ್ತದೆ. ಅಮ್ಮನನ್ನು ಕಟ್ಟೆಯ ಮೇಲೆ ಕುಳ್ಳಿಸಿ ಕಟ್ಟಿಗೆದಾರರು ಸುತ್ತಲಿನ ದೈವಗಳನ್ನು ‘ಹಬ್ಬಕ್ಕೆ ಬನ್ನಿ ನಾಡಿದ್ದು’ ಎಂದು ಕರೆಕೊಟ್ಟು ಬರಲು ಹೋಗುತ್ತಾರೆ.

ಕೊಗ್ರೆ ಊರ್‌ಹಬ್ಬ

ಸಿಂಗನಮಕ್ಕಿ, ಸೂರ್ವೆ, ಬಾಸಗೋಡ, ಶೆಟಗೇರಿ, ಕೊಗ್ರೆ ಎಂಬ ಐದೂರುಗಳಲ್ಲಿ ನನ್ನೂರೂ ಒಂದು. ಇಲ್ಲಿನ ಪ್ರಮುಖ ದೈವ ಕೂಡ ಎಲ್ಲ ಊರಿನ ಹಾಗೆ ಗುಡ್ಡದ ಮೇಲಿನ ಬೊಮ್ಮಯ್ಯ. ಅವನ ಅಕ್ಕಪಕ್ಕ ಇರುವವರು ತಮ್ಮಂದಿರು ಮಾಣಿಬೀರ ಮತ್ತು ಘಟಬೀರ.. ಕೊಗ್ರೆ ಗುಡ್ಡದ ಕೆಳಗಿಳಿದು ಕಿಲೋಮೀಟರ್ ದೂರದವರೆಗೆ ಹೋದರೆ ಸೂರ್ವೆ ಊರಲ್ಲಿ ಸಿಗುವವರು ಮತ್ತೊಂದು ತಮ್ಮ ಉಲಿಬೀರ.. ತಂಗಿ ದೇವತಿ ಅಮ್ಮ.. ನನ್ನೂರ ದೇವರುಗಳ ಬಂಡಿಹಬ್ಬದ ನಾಲ್ಕು ಕಳಸ ನೋಡಲು ಹತ್ತು ಹಳ್ಳಿಯ ಜನ ಜಾತಿಧರ್ಮದ ಭೇದಭಾವವಿಲ್ಲದೆ ನೆರೆಯುತ್ತಾರೆ. ಇಲ್ಲಿ ಜೆಟಗಿ ಹಾಕಿ ಹೊಸ ಪತ್ತಲ ಉಟ್ಟ ಹಾಲಕ್ಕಿ ಹೆಂಗಸರನ್ನು ನೋಡುವುದೇ ಹಬ್ಬದಲ್ಲೊಂದು ಹಬ್ಬ. ಬೊಮ್ಮಯ್ಯ, ಮಾಣಿಬೀರ, ಅಮ್ಮನ ಕಳಸವನ್ನು ಹಾಲಕ್ಕಿ ಒಕ್ಕಲಿಗ ಸಮುದಾಯದವರು ಹೊತ್ತರೆ ಉಲಿಬೀರನ ಕಳಸವನ್ನು ಕುಂಬಾರಗುನಗ ಹೊರುತ್ತಾನೆ

ಬೊಮ್ಮಯ್ಯನ ನೋಡಲು ಹೋದಾಗೆಲ್ಲ ಅಜ್ಜಿ ಪಕ್ಕದ ಘಟಬೀರ ( ಮಡಿಕೆ ರೂಪದ ದೈವ ) ನ ಮುಂದೆ ನಿಂತು ‘ನಿಂಗೆ ಕಳಸ ಇಲ್ಲ ಅಂತ ನೀ ಬೆಜಾರ್ ಮಾಡಬೇಡ… ಏನ್ ಮಾಡುದು..? ದುರಂತ ಆಗೋಯ್ತು.. ಸಮಾಧಾನ ಮಾಡ್ಕ.. ನಿಂಗೆ ಕಳಸಿಲ್ದಿದ್ರೂ.. ಕೊಡೂ ಮರ್ಯಾದಿ ಕೊಟ್ಟೇ ಕೊಡ್ತಿದ್ದೇವೋ ಇಲ್ವೋ ಹೇಳು ನಾವೆಲ್ಲ..’ ಎಂದು ಮಕ್ಕಳನ್ನು ಅನುನಯಿಸುವ ಧ್ವನಿಯಲ್ಲಿ ಹೇಳ್ತಿದ್ದಳು.. ಆಗೆಲ್ಲ ಘಟಬೀರ ಅಜ್ಜಿಯ ಮಾತಿಗೆ ಹೂಂ ಹಾಕಿ ಒಪ್ಪಿಕೊಂಡು ಸಮಾಧಾನ ಮಾಡ್ಕಂಡು ಕುಳಿತ ಹಾಗೆ ನನಗೆ  ಕಾಣಿಸುತ್ತಿತ್ತು.

‘ಯಾಕೆ ಪಾಪ ಇವನಿಗೊಬ್ಬನಿಗೆ ಕಳಸ ಇಲ್ಲ ಅಜ್ಜೀ’ ಅಂತ ನಾನು ಕೇಳಿದರೆಎಂದೋ ಒಮ್ಮೆ ಇದ್ದ ಐದು ಕಳಸಗಳಲ್ಲಿ ಘಟಬೀರನ ಕಳಸ ಹೊತ್ತ ಗುನಗ ಕೆಳಗೆ ಬಿದ್ದು ಕಳಸ ಭೂಸ್ಪರ್ಶವಾಯಿತೆಂದೂ ಆಗ್ಗಿಂದಾಗ್ಗೆ ಸೊಂಟದ ಕಿರುಕತ್ತಿಯನ್ನೆಳೆದುಕೊಂಡು ಸಾಯಲು ಬಯಸಿದ ಅವನನ್ನು ಜನ ತಡೆದು ದೇವರಿಂದಲೇ ಮಾಫಿ ಮಾಡಿಸಿ ಊರುಬಿಟ್ಟು ಹೋಗುವ ಸಾದಾ ಅಪ್ಪಣೆ ಕೊಡಿಸಿದರೆಂದೂ.. ತದನಂತರ ಆ ಗುನಗ ಊರು ಬಿಟ್ಟು ಎಲ್ಲಿ ಹೋದನೆಂದು ಯಾರಿಗೂ ಗೊತ್ತಾಗಿಲ್ಲವೆಂದೂ ಕಥೆ ಹೇಳುತ್ತಿದ್ದಳು.. ಅಜ್ಜಿ ಇಲ್ಲ ಈಗ.. ಅವಳ‌ ಕಥೆಗೂ ಈಗ ಮೂವತ್ತು ವರ್ಷ ದಾಟಿದೆ..

ಈಗಲೂ ಬಂಡಿಹಬ್ಬದಲ್ಲಿ ನಾಲ್ಕೇ ಕಳಸಗಳು ಉಲಿಚಪ್ರವನ್ನು ಹತ್ತುವಾಗ ಸುತ್ತ ಸೇರಿದ ಅಬ್ಬಲಿಗೆ ಮುಡಿದ ಹೆಂಗಸರೆಲ್ಲ ಮತ್ತದೇ ಕಥೆಯನ್ನು ಹೊಸದೆಂಬಂತೆ ಚೋದ್ಯದ ಮುಖಭಾವದಲ್ಲಿ ಹೇಳುತ್ತಾರೆ.. ನಾನೂ ಹೊಸದಾದ ಏನನ್ನೋ ಕೇಳುತ್ತಿರುವಂತೆ ಕೇಳಿಸಿಕೊಳ್ಳುತ್ತೇನೆ.

ಉಲಿಚಪ್ರ

ಬಂಡಿಹಬ್ಬದ ದಿನ ಸಂಜೆ ಕಳಸಗಳು ಮೆರವಣಿಗೆಯೊಂದಿಗೆ ಉಲಿಚಪ್ರಕ್ಕೆ ಬರುತ್ತವೆ. ಉಲಿ ಚಪ್ಪರ (ಉಯ್ಯಾಲೆಯಚಪ್ಪರ) ವೆಂಬುದು ಲಂಬವಾಗಿ ನಿಲ್ಲಿಸಿದ್ದ ಎರಡು ಬೃಹತ್ ಕಂಬಗಳಿಗೆ ಮಧ್ಯದಲ್ಲಿ ಕೊರೆದ ತೂತುಗಳಲ್ಲಿ ಅಡ್ಡವಾಗಿ ಹೊಗಿಸಿದ ಅಚ್ಚಿನಲ್ಲಿ ಕೆಳಗಿಂದ ಮೇಲೆ ಸುತ್ತುವ ಕಟ್ಟಿಗೆಯ ಚೌಕಟ್ಟಿನ ಹಂದರ. ಈ ಚೌಕಟ್ಟಿನಲ್ಲಿ ನಾಲ್ಕು ತೂಗು ಮಣೆಗಳನ್ನು ಜೋಡಿಸಲಾಗಿರುತ್ತದೆ.

ತೂಗು ಮಣೆಯ ಮೇಲೆ ಗುನಗನು ಕಲಶ ದೇವರನ್ನು ತೊಡೆಯ ಮೇಲಿಟ್ಟುಕೊಂಡು ಕುಳಿತ ಮೇಲೆ (ಚಿತ್ರ ನೋಡಿ) ಒಂದು ಸುತ್ತು ತಿರುಗಿಸುತ್ತಾರೆ. ಎಷ್ಟು ಕಳಸಗಳಿವೆಯೋ ಅಷ್ಟೂ ತೂಗಿಳಿದ ಮೇಲೆ ಇನ್ನುಳಿದ ಕಟ್ಟಿಗೆದಾರರು, ಸಾಮಿ ಮಕ್ಕಳೂ ಉಲಿಚಪ್ಪರ ಏರುತ್ತಾರೆ. ಸಾಮಿ ಮಕ್ಕಳು ಅಂದರೆ ದೇವರ ಮಕ್ಕಳು. ಇವರು ಮದುವೆಯಾಗದಿರುವ ಬಾಲಕರು.

ಬಂಡಿಹಬ್ಬದಲ್ಲಿ ಈ ಉಲಿಚಪ್ರ ಏರುವುದು ಯಾವುದರ ಸಂಕೇತ ಎಂಬುದು ಯಾರಿಗೂ ಗೊತ್ತಿಲ್ಲದಿದ್ದರೂ ಜೂನ್ ತಿಂಗಳ ಆರಂಭದಲ್ಲಿ ಮಳೆಗೂ ಮೊದಲು ಗದ್ದೆಯಲ್ಲಿ ಬೀಜ ಬಿತ್ತುವ ಪ್ರಕ್ರಿಯೆಯನ್ನು ಉಲಿಗೆ ಬಿತ್ತುವುದು ಎಂದು ಅಂಕೋಲೆಯಲ್ಲಿ ಕರೆಯಲಾಗುತ್ತದೆ.. ಈ ಸಮಯದಲ್ಲೇ ಈ ಕೃಷಿ ದೈವಗಳ ಈ ಉಲಿಚಪ್ರ ಏರುವ ಆಚರಣೆ ಕೂಡ ಇರುವ ಕಾರಣಕ್ಕೆ, ಮತ್ತು ಬಹುತೇಕ ಉಲಿಚಪ್ರಗಳು ಗದ್ದೆಯಲ್ಲೇ ಇದ್ದು.. ದೇವರು ಉಲಿಚಪ್ರ ಏರಿದ ನಂತರ ಉಲಿಗೆ ಬಿತ್ತುವ ಕಾರ್ಯ ಆರಂಭವಾಗುವ ಕಾರಣಕ್ಕೆ ಇವೆರಡಕ್ಕೂ ಒಂದಕ್ಕೊಂದು ಸಂಬಂಧವಿರಬಹುದು ಅನ್ನಿಸುತ್ತದೆ ನನಗೆ.

ಬಂಡಿಹಬ್ಬದ ದೇವರ ಕೆಲಸ ಮುಗಿದ ಮರುದಿನ ಕಿರ್‌ಬಂಡಿಹಬ್ಬ ಅಥವಾ ಕೋಳ್‌ಕುರಿ.. ಊರ ದೇವರಿಗೆ ಕುರಿ ಕೋಳಿ ಬಲಿ ಕೊಟ್ಟು ಮನೆಯಲ್ಲಿ ಮಾಂಸದೂಟ ಮಾಡಿ  ಅಕ್ಕಿರೊಟ್ಟಿಯೊಂದಿಗೆ  ಹತ್ತಾರು ಊರಿನ ನೆಂಟರನ್ನು ಕರೆದು ಬಡಿಸುತ್ತಾರೆ. 

ಇಲ್ಲಿಗೆ ಬಂಡಿಹಬ್ಬ ಸಂಪನ್ನ. ಆದರೆ ಬಂಡಿಹಬ್ಬವೆಂದರೆ ಬರೀ ಕೋಳಿ ಸಾರು ಎಂಬುದಷ್ಟೇ ಗೊತ್ತು ಈಗಿನ ತಲೆಮಾರಿಗೆ.. ಅದರ ಹಿಂದಿನ ಹನ್ನೆರಡು ದಿನಗಳವರೆಗಿನ ಆಚರಣೆಗಳು, ಉದ್ದೇಶ, ಯಾವ ಜನಪದ ದೈವ ಯಾವುದಕ್ಕೆ ಸಂಬಂಧಿಸಿದವು ಎಂಬುದು ಗೊತ್ತಿಲ್ಲ.. ಒಂದೊಂದೇ ಆಚರಣೆಗಳು ಮರೆಯಾಗುತ್ತಿರುವ ಕಾಲಘಟ್ಟದಲ್ಲಿ ನಾವಿದ್ದೇವೆ.. ಆದರೂ ನಮ್ಮದೆಂಬುದು ಆಪ್ತವಾಗಿ ಏನಾದರೊಂದು ಬೇಕಲ್ಲ…

March 26, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. ಕೈದಾಳ್ ಕೃಷ್ಣಮೂರ್ತಿ

    ಬದಲಾಗುತ್ತಿರುವ ಗ್ರಾಮೀಣ ದೈವಗಳ ಚಿತ್ರ ಚೆನ್ನಾಗಿಯೇ ಮೂಡಿ ಬಂದಿದೆ.

    ಪ್ರತಿಕ್ರಿಯೆ
    • ವಾಸುದೇವ ಶರ್ಮಾ

      “ಮರೆತುಹೋಗುತ್ತಿರುವ ಸುಖ ಸಂತೋಷದ ಸಂಪ್ರದಾಯಗಳ ಚರಿತ್ರೆ ದಾಖಲು”. ನಮ್ಮ ಬಾಲ್ಯದಲ್ಲೂ ಇಂತಹ ಹಲವಾರು ಹಬ್ಬಗಳ ಅನುಭವವಾಗಿತ್ತು. ಆದರೆ ನೆನಪಿನಲ್ಲಿ ಊರಿಕೊಳ್ಳಲೇಯಿಲ್ಲ.‌ ಕಣ್ಣಿಗೆ ಕಟ್ಟುವಂತೆ ಅವುಗಳ ವಿವರಕೊಡುವ ನಿಮ್ಮ‌ ಸೊಗಸಾದ ನಿರೂಪಣೆ ಅಲ್ಲೆಲ್ಲಾ ಓಡಾಡಿದಂತಾಗುತ್ತದೆ.

      ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: