ಬಿಡುಗಡೆ ಪುಸ್ತಕಗಳೇ ‘ಅದಲು ಬದಲು’

ಕನ್ನಡ ಮುದ್ರಣ ಲೋಕದಲ್ಲಿ ಸ್ವ್ಯಾನ್ ಕೃಷ್ಣಮೂರ್ತಿ ಅವರದ್ದು ಮಹತ್ವದ ಹೆಸರು.

ಸ್ವ್ಯಾನ್ ಪ್ರಿಂಟರ್ಸ್’ ಮೂಲಕ ಮುದ್ರಣ ವಿನ್ಯಾಸದಲ್ಲಿ ಬದಲಾವಣೆ ತಂದ ಕೃಷ್ಣಮೂರ್ತಿ ಅವರ ಹೆಜ್ಜೆ ಗುರುತುಗಳು ಇಲ್ಲಿವೆ.

ಪುಸ್ತಕ ಲೋಕಾರ್ಪಣೆ ವೇದಿಕೆ ಮೇಲೆ ಅತಿಥಿಗಳು `ಬಿಡುಗಡೆ ಪ್ಯಾಕ್’ನಿಂದ ಪುಸ್ತಕ ತೆಗೆದಾಗ ಅಲ್ಲಿ ಬೇರೆಯ ಪುಸ್ತಕ ಇದ್ದರೆ ಹೇಗಾಗಬಹುದು?!

ಒಮ್ಮೆ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ ಅವರ ಪುಸ್ತಕ ಬಿಡುಗಡೆ ದಿನ ನಿಗದಿಯಾಗಿತ್ತು. ಎಂದಿನಂತೆ ಕಾರ್ಯಕ್ರಮದ ಹಿಂದಿನ ದಿನ ಒತ್ತಡಗಳ ನಡುವೆ ಪುಸ್ತಕ ಮುದ್ರಣವಾಗಿ ಸಿದ್ಧವಾಗಿತ್ತು. ಮಲ್ಲೇಪುರಂ ಅವರು ರಾತ್ರಿಯೇ ಬಂದು ಪುಸ್ತಕಗಳನ್ನು ನೋಡಿ, ಒಂದೆರಡು ಮೆಚ್ಚುಗೆ ಮಾತುಗಳನ್ನು ಹೇಳಿ, “ನಾಳೆ ಬೆಳಗ್ಗೆ ಬೇಗನೆ ಬಿಡುಗಡೆಯ ಪ್ಯಾಕ್ ಜೊತೆ ಮಾರಾಟಕ್ಕೆ ಕೆಲವು ಪ್ರತಿಗಳನ್ನು ನಿಮ್ಮ ಮುದ್ರಣಾಲಯ ಸಮೀಪವೇ ಇರುವ ಕನ್ನಡ ಸಾಹಿತ್ಯ ಪರಿಷತ್ತಿಗೆ ಕಳುಹಿಸಿಕೊಡು” ಎಂದು ಹೇಳಿದ್ದರು.

ಕನ್ನಡ ಸಾಹಿತ್ಯ ಪರಿಷತ್ತಿನ ಆವರಣ ಶನಿವಾರ ಭಾನುವಾರಗಳಂದು ಸಾಹಿತ್ಯ ಕಾರ್ಯಕ್ರಮಗಳ ಜಾತ್ರೆಯಂತೆ ಜನಜಂಗುಳಿಯಿಂದ ಕೂಡಿರುತ್ತದೆ. ಆಗ ಸಾಹಿತ್ಯ ಪರಿಷತ್ತಿನ ಆವರಣದಲ್ಲಿ ಎರಡು ಸಭಾಂಗಣಗಳು ಇದ್ದವು (ಈಗ ಮೂರು ಸಭಾಂಗಣಗಳು ಇವೆ). ಅಂದು ಎರಡು ಸಭಾಂಗಣಗಳಲ್ಲಿಯೂ ನಮ್ಮ ಮುದ್ರಣದ ಪುಸ್ತಕಗಳ ಬಿಡುಗಡೆ ಕಾರ್ಯಕ್ರಮವಿತ್ತು. ಒಂದು ಮಲ್ಲೇಪುರಂ ಅವರದ್ದು. ಅವರು ಪುಸ್ತಕವನ್ನು ಬೆಳಗ್ಗೆ ಬೇಗನೇ ಕೃಷ್ಣರಾಜ ಪರಿಷನ್ಮಂದಿರಕ್ಕೆ ಕಳಿಸಲು ಹೇಳಿದ್ದರು. ಇನ್ನೊಬ್ಬರು “ಮುದ್ರಣಾಲಯಕ್ಕೆ ನಾವೇ ಬೆಳಗ್ಗೆ ಬೇಗ ಬಂದು ಪುಸ್ತಕವನ್ನು ತೆಗೆದುಕೊಂಡು ಹೋಗುತ್ತೇವೆ” ಎಂದಿದ್ದರು.

ನಾವು ರಾತ್ರಿಯೇ ಎರಡು ಪುಸ್ತಕಗಳನ್ನೂ ಸಿದ್ಧಪಡಿಸಿ, ಗುರುತಿಗೆ ಆಯಾ ಬಂಡಲ್‍ಗಳಿಗೆ ಲೇಬಲ್‍ಗಳನ್ನು ಅಂಟಿಸಿ, ಒಂದೊಂದು ಪುಸ್ತಕವನ್ನು ಸಂಬಂಧಿಸಿದ ಬಾಕ್ಸ್ ಮೇಲೆ ಸಿಕ್ಕಿಸಿ ಪ್ರತ್ಯೇಕವಾಗಿಟ್ಟಿದ್ದೆವು.

ಬೆಳಗ್ಗೆ ನಮ್ಮ ಆಟೋದವರು ಬಂದು ಮಲ್ಲೇಪುರಂ ಅವರ ಪುಸ್ತಕಗಳನ್ನು ಆಟೋಗೆ ಲೋಡ್ ಮಾಡಿಕೊಳ್ಳುವಾಗ, ಗಡಿಬಿಡಿಯಲ್ಲಿ ಬಂದ ಇನ್ನೊಂದು ಪುಸ್ತಕದ ಬಿಡುಗಡೆಯ ಕಡೆಯವರು “ನಮ್ಮ ಕಾರ್ಯಕ್ರಮ ಪರಿಷತ್ತಿನ ಆವರಣದ ಕುವೆಂಪು ಸಭಾಂಗಣದಲ್ಲಿಯೇ ಇರೋದು. ನಾವು ದ್ವಿಚಕ್ರವಾಹನದಲ್ಲಿ ಬಂದಿದ್ದೇವೆ, ನೀವು ಹೇಗೂ ಅಲ್ಲಿಗೇ ಹೋಗುತ್ತಿರುವುದರಿಂದ ದಯವಿಟ್ಟು ನಮ್ಮ ಬಾಕ್ಸ್ ಗಳನ್ನೂ ಹಾಕಿಕೊಂಡು ಬನ್ನಿ, ಅಲ್ಲಿ ತೊಗೋತೀವಿ” ಎಂದು ಮನವಿ ಮಾಡಿಕೊಂಡು, ಅವರ ಪುಸ್ತಕಗಳನ್ನೂ ಲೋಡ್ ಮಾಡಿ ಕಳಿಸಿದ್ದಾರೆ. ‌

ನಮ್ಮ ಆಟೋದವರು ಪರಿಷತ್ತಿಗೆ ಹೋಗಿ ಒಂದೊಂದು ಪ್ಯಾಕ್ ಒಂದೊಂದು ಕಡೆ ತಲುಪಿಸಿದ್ದಾರೆ. ನಾನು ಭಾನುವಾರವಾದ್ದರಿಂದ ಸ್ವಲ್ಪ ತಡವಾಗಿ, ಕಾರ್ಯಕ್ರಮ ಶುರುವಾಗುವ ಹೊತ್ತಿಗೆ ಅಲ್ಲಿಗೆ ಬಂದೆ. ಶ್ರೀಕೃಷ್ಣರಾಜ ಪರಿಷನ್ಮಂದಿರದಲ್ಲಿ ಆಗಲೇ ಕಾರ್ಯಕ್ರಮ ಪ್ರಾರಂಭವಾಗಿತ್ತು.

ಅಲ್ಲೇ ಬಾಗಿಲ ಬಳಿ ಕಾರ್ಯಕ್ರಮ ನೋಡುತ್ತ ನಿಂತೆ. ಸ್ವಾಗತ ಮುಗಿಯಿತು. “ಈಗ ನಿಮ್ಮೆಲ್ಲರ ಬಹು ನಿರೀಕ್ಷಿತ ಘಟ್ಟ, ಪುಸ್ತಕ ಬಿಡುಗಡೆ” ಎಂದು ನಿರೂಪಕರು ಹೇಳಿದ ಕೂಡಲೇ, ಟೇಬಲ್ ಮೇಲೆ ಇದ್ದ ಬಿಡುಗಡೆ ಪುಸ್ತಕಗಳ ಪ್ಯಾಕ್ ಮೇಲಿನ ಟೇಪನ್ನು ಎಳೆದು ಅತಿಥಿಗಳು ಪುಸ್ತಕ ಹೊರತೆಗೆದರು.

ಪುಸ್ತಕಗಳನ್ನು ನೋಡಿ ಮೊದಲು ಮಲ್ಲೇಪುರಂ ವಿಚಲಿತರಾದರು. ಬಾಗಿಲ ಬಳಿ ನಿಂತಿದ್ದ ನನ್ನ ಕಡೆಗೆ ಅನುಮಾನ ಮತ್ತು ಆತಂಕ ಬೆರೆತ ದೃಷ್ಟಿ ಬೀರಿದರು. ಸಿಟ್ಟಿನ ಭಾವದಲ್ಲಿ ಕಣ್ಸನ್ನೆಯಲ್ಲೇ ಏನೋ ಸೂಚಿಸತೊಡಗಿದರು. ಯಾಕೆ ಏನು ಎಂಬುದು ನನಗೆ ತಕ್ಷಣ ಅರಿವಾಗಲೇ ಇಲ್ಲ. ಏನೋ ಎಡವಟ್ಟು ಆಗಿರುವುದಂತೂ ಖಾತರಿ.

ಪುಸ್ತಕದ ಕಡೆ ಕಣ್ಣಿನ ಲೆನ್ಸ್ ಜೂಮ್ ಹಾಕಿ ನೋಡಿದರೆ ಪುಸ್ತಕದ ಬಣ್ಣ ಬೇರೆಯದೇ ಇದೆ…! ತಕ್ಷಣ ಹೊಳೆಯಿತು, ಪುಸ್ತಕ ಅದಲು ಬದಲು ಆಗಿದೆ ಎಂದು. ಕೈಕಾಲು ಅದುರತೊಡಗಿದವು, ಆ ಕ್ಷಣಕ್ಕೆ ಏನು ಮಾಡುವುದೆಂದು ತೋಚುತ್ತಿಲ್ಲ..! ಹಿಂದಕ್ಕೆ ತಿರುಗುತ್ತಿದ್ದಂತೆ ಮಾರಾಟಕ್ಕಿಟ್ಟಿದ್ದ ಪುಸ್ತಕಗಳು ಕಾಣಿಸಿದವು. ಅವುಗಳಲ್ಲಿ ಎಂಟತ್ತು ಪ್ರತಿಗಳನ್ನು ಎತ್ತಿಕೊಂಡು ಪಕ್ಕದ ಬಾಗಿಲಿನಿಂದ ವೇದಿಕೆಯೇರಿದೆ.

ಅತಿಥಿಗಳು ಪುಸ್ತಕ ಬಿಡುಗಡೆ ಮಾಡಿ ಅವುಗಳನ್ನು ಒಬ್ಬರಿಗೊಬ್ಬರು ವಿನಿಮಯ ಮಾಡಿಕೊಂಡು, ಫೋಟೋ ತೆಗೆಸಿ, ಕುಳಿತುಕೊಳ್ಳುವಷ್ಟರಲ್ಲಿ ಅವರ ಕೈನಲ್ಲಿದ್ದ ಪುಸ್ತಕಗಳನ್ನು ಕಸಿದುಕೊಂಡೆ. ಅಂದು ಬಿಡುಗಡೆಯಾಗ ಬೇಕಿದ್ದ ಮಲ್ಲೇಪುರಂ ಅವರ ಪುಸ್ತಕಗಳನ್ನು ಮಿಂಚಿನ ವೇಗದಲ್ಲಿ ಅತಿಥಿಗಳ ಕೈಗಿಟ್ಟು ಬಂದೆ.

ಅತಿಥಿಗಳಿಗೆ ಏನಾಗುತ್ತಿದೆ ಎಂದು ತಿಳಿಯಲಾಗದ ಗೊಂದಲ…! ಮಲ್ಲೇಪುರಂ ಅವರನ್ನು ಬಿಟ್ಟು ಬೇರೆ ಯಾರಿಗೂ ಅಲ್ಲಿ ಬಿಡುಗಡೆಯಾದ ಪುಸ್ತಕ ಬೇರೆಯದೇ ಆಗಿತ್ತು ಎಂದು ಗೊತ್ತಾಗಲಿಲ್ಲ ಅಥವಾ ಗೊತ್ತಾಗಿದ್ದರೂ ಆ ಕ್ಷಣದಲ್ಲಿ ಏನೂ ತೋಚದೆ ಸುಮ್ಮನಾಗಿರಬಹುದು! ನಮ್ಮ ಪುಣ್ಯಕ್ಕೆ ಇಬ್ಬರು ಪತ್ರಕರ್ತರು ತಡವಾಗಿ ಬಂದರು. ಆ ನೆಪವೊಡ್ಡಿ ಮತ್ತೆ ಎಲ್ಲರ ಕೈಯಲ್ಲೂ ಪುಸ್ತಕಗಳನ್ನು ಹಿಡಿಸಿ, ಬಿಡುಗಡೆ ಪುನರಾವರ್ತನೆ ಮಾಡಿಸಿ ಪ್ರತ್ಯೇಕ ಫೋಟೋ ತೆಗೆಸಿದೆವು.

ಅಷ್ಟರಲ್ಲಿ ಮೇಲಿನ ಕುವೆಂಪು ಸಭಾಂಗಣದಲ್ಲಿ ಸ್ವಲ್ಪ ತಡವಾಗಿ ಪ್ರಾರಂಭವಾಗಿದ್ದ ಇನ್ನೊಂದು ಕಾರ್ಯಕ್ರಮದತ್ತ ನಮ್ಮ ಹುಡುಗನನ್ನು ಓಡಿಸಿದೆ. ಅವನು ಆಯೋಜಕರಿಗೆ ವಿಷಯ ತಿಳಿಸಿ, ಪುಸ್ತಕ ಬದಲಾವಣೆ ಮಾಡಿಕೊಟ್ಟಿದ್ದರಿಂದ ಅಲ್ಲಿಯೂ ಮತ್ತೆ ಎಡವಟ್ಟು ಆಗುವುದು ತಪ್ಪಿತು. ಬೆಳಗ್ಗೆ ಮುದ್ರಣಾಲಯದಿಂದ ಆಟೋ ಹೊರಟಾಗ ಇನ್ನೊಬ್ಬರು ಅವರ ಪುಸ್ತಕದ ಬಾಕ್ಸ್ ಗಳನ್ನು ಹಾಕಿ, ಪರಿಷತ್ತಿನ ಆವರಣದಲ್ಲಿ ಇಳಿಸಿಕೊಳ್ಳುವಾಗ ಬಿಡುಗಡೆ ಪ್ಯಾಕ್‍ಗಳು ಅದಲು ಬದಲು ಆಗಿದ್ದರಿಂದ ಇಷ್ಟೆಲ್ಲ ಫಜೀತಿಯಾಯಿತು.

ಸಮಯಾವಧಾನದಿಂದ ಹೆಚ್ಚಿನ ಅನಾಹುತವೇನೂ ಆಗಲಿಲ್ಲ. ಮಲ್ಲೇಪುರಂ ಅವರಿಗೆ ತುಂಬಾ ಕೋಪ ಬಂದಿತ್ತಾದರೂ ಅಂದವಾಗಿ ಮುದ್ರಣವಾದ ಪುಸ್ತಕ, ಕಿಕ್ಕಿರಿದು ಸೇರಿದ್ದ ಅಭಿಮಾನಿ ಪ್ರೇಕ್ಷಕರು, ಅಚ್ಚುಕಟ್ಟಾಗಿ ನಡೆದ ಕಾರ್ಯಕ್ರಮ, ಜೊತೆಗೆ ನನ್ನ ಮೇಲಿನ ಅತಿಯಾದ ಪ್ರೀತಿ ಆ ಕೋಪವನ್ನು ಶಮನಗೊಳಿಸಿದವು. ನಾವು ಮೈಯಲ್ಲ ಕಣ್ಣಾಗಿಸಿಕೊಂಡು ಎಷ್ಟೇ ಎಚ್ಚರಿಕೆಯಿಂದ ಕೆಲಸ ಮಾಡುತ್ತಿದ್ದರೂ ನಮ್ಮ ಅರಿವಿಗೆ ಬಾರದ ಸಣ್ಣಪುಟ್ಟ ಆಕಸ್ಮಿಕಗಳಿಂದ ಎಂಥ ಎಡವಟ್ಟುಗಳು ಆಗಿ ಮುಜುಗರಕ್ಕೀಡು ಮಾಡಿಬಿಡುತ್ತವೆ ಎನ್ನುವುದಕ್ಕೆ ಈ ಪ್ರಸಂಗ ನಿದರ್ಶನ.

ಮುದ್ರಣ ಕ್ಷೇತ್ರದಲ್ಲಿ ಅಂಬೆಗಾಲಿಡುತ್ತಿರುವಾಗಲೇ ಪ್ರೊಫೆಸರ್ ಮಲ್ಲೇಪುರಂ ಅವರ ಶಿಷ್ಯಸ್ನೇಹದ ತೆಕ್ಕೆಗೆ ಬಿದ್ದ ನನಗೆ, ಅವರು ವ್ಯಾವಹಾರಿಕವಾಗಿ ಅಷ್ಟೇ ಅಲ್ಲದೆ ನನ್ನ ಜೀವನದ ಏರಿಳಿತಗಳಲ್ಲಿ ಬೆನ್ನೆಲುಬಾಗಿ ನಿಂತರು. ನನ್ನ ಮತ್ತು ಅವರ ಪ್ರತಿ ಭೇಟಿಯ ಕೊನೆಗೆ “ನಾನು ನಿವೃತ್ತಿಯಾಗುವುದರೊಳಗೆ ನೀನು ಮುದ್ರಣೋದ್ಯಮದಲ್ಲಿ ಸಶಕ್ತನಾಗಿ ನಿಂತಿರುವುದನ್ನು ನೋಡಬೇಕು” ಎಂಬ ಅಭಿಲಾಷೆಯನ್ನು ವ್ಯಕ್ತಪಡಿಸಿ, ತಂದೆಯು ಮಗನಿಗೆ ಜೀವನದ ಜವಾಬ್ಧಾರಿಯ ಬಗ್ಗೆ ಎಚ್ಚರಿಸುವಂತೆ, ನನ್ನನ್ನು ಸದಾ ಎಚ್ಚರಿಸುತ್ತಲೇ ಇದ್ದರು.

ಹೀಗೆ ನನ್ನ ಮನಸ್ಸಿನಲ್ಲಿ ಸ್ವಂತ ಮುದ್ರಣೋದ್ಯಮದ ಬೀಜವನ್ನು ಅವರು ಬಿತ್ತಿದಾಗ, ಮೊದಮೊದಲು ಅದನ್ನು ಗಂಭೀರವಾಗಿ ತೆಗೆದುಕೊಳ್ಳದೆ, ನನ್ನಲ್ಲಿ ಆ ಶಕ್ತಿ ಇಲ್ಲವೆಂದು ಹಿಂದೇಟು ಹಾಕಿದೆ. ಆಗ `ಪ್ರೀತಿಯ ರೆಕ್ಕೆಗಳಲ್ಲಿ ಬಲವಿದ್ದರೆ, ಸಹಕರಿಸುವ ಗಾಳಿ ಜೊತೆಗೆ ಇದ್ದರೆ ಮೇಲೆರುವುದು ಕಷ್ಟವೇನಿಲ್ಲʼ ಎಂಬುದನ್ನು ಅವರು ಬೆನ್ನು ತಡವುತ್ತಾ ಮನವರಿಕೆ ಮಾಡಿಕೊಟ್ಟರು. ನನ್ನ ಮುದ್ರಣ ಕ್ಷೇತ್ರದ ಕನಸಿನ ಬೀಜಕ್ಕೆ ನೀರೆರೆದು, ಮೊಳಕೆ ಒಡೆಸಿ ಸರಾಗವಾಗಿ ಬೆಳೆಯಲು ಅನುಕೂಲವಾಗುವಂತಹ ವಾತಾವರಣ ನಿರ್ಮಿಸಿದರು. ಇಂದಿಗೂ ಕಾಲಕಾಲಕ್ಕೆ ಉಚಿತ ಎನಿಸುವಂಥ ಗೊಬ್ಬರ ಹಾಕಿ ಪೋಷಿಸುತ್ತಲೇ ಇದ್ದಾರೆ.

ನಾನು ಒಬ್ಬ ಮುದ್ರಕನಾಗಿ ಅವರಲ್ಲಿ ಕಂಡ ಒಂದು ವಿಶೇಷ ಗುಣವೆಂದರೆ- ಪುಸ್ತಕೋದ್ಯಮದ ಅರಿವಿಲ್ಲದೆ ಅದರ ಗೋಜಿಗೆ ಹೋಗದ ಅನೇಕ ಹಿರಿಯ ಕಿರಿಯ ಲೇಖಕರ ಪ್ರತಿಭೆ-ಪಾಂಡಿತ್ಯವನ್ನು ಗುರುತಿಸುವುದು; ಬರೆಯಲು ಪ್ರೇರೇಪಿಸಿ, ಬರೆದದ್ದನ್ನು ತಿದ್ದಿ ತೀಡಿ ಒಪ್ಪಗೊಳಿಸುವ ಕೆಲಸವನ್ನು ಅತ್ಯಂತ ಪ್ರೀತಿಯಿಂದ ಮಾಡುವುದು; ಅನಂತರ ಮುದ್ರಣಾಲಯಕ್ಕೆ ಕರೆತಂದು ಒಳಪುಟ, ಮುಖಪುಟ ವಿನ್ಯಾಸ, ಮುದ್ರಣಕ್ಕೆ ಬಳಸಬಹುದಾದ ಕಾಗದ ಹೀಗೆ ಮುದ್ರಣ ಸಂಬಂಧಿ ವಿಚಾರಗಳ ಬಗ್ಗೆ ತಿಳಿಹೇಳುವುದು; ಅಂಥವರ ಬರಹಗಳ ಒಂದು ಸುಂದರ ಪುಸ್ತಕವನ್ನು ಸಾಹಿತ್ಯಲೋಕಕ್ಕೆ ಅರ್ಪಿಸಿ, ಲೇಖಕರು ಖುಷಿಪಡುವುದನ್ನು ಕಂಡು ಸಂಭ್ರಮಿಸುವುದು.

ಹೀಗೆ ಪುಸ್ತಕಲೋಕದ ಅರಿವು ಇಲ್ಲದೆ ಹಿಂಜರಿದು ಕುಳಿತ ಅನೇಕರನ್ನು ಹಾಯಿದೋಣಿಗಳಲ್ಲಿ ಕುಳ್ಳಿರಿಸಿಕೊಂಡು, ಅವರು ವಿಹರಿಸಿ ಬಂದಾಗಲೆಲ್ಲ ನನ್ನಿಂದ ಹತ್ತಾರು ಬಗೆಯ ವಿಶಿಷ್ಟವಾದ ಮುದ್ರಣ ಕೆಲಸಗಳನ್ನು ಮಾಡಿಸಿದ್ದಾರೆ; ಸ್ವ್ಯಾನ್ ಮುದ್ರಣದ ಕಂಪು ರಾಜ್ಯದಾದ್ಯಂತ ಹರಡುವಂತೆ ಮಾಡುತ್ತಲೇ ಇದ್ದಾರೆ.

ಮುದ್ರಣ ಕ್ಷೇತ್ರದ ಒಳಹೊರಗುಗಳನ್ನು ಚೆನ್ನಾಗಿ ತಿಳಿದ ಅವರು ಒಂದು ಮುದ್ರಣ ಕೆಲಸ ಕೊಟ್ಟು ಸುಮ್ಮನೆ ಕೂರುವುದಿಲ್ಲ, ನಮ್ಮನ್ನೂ ಕೂರಲು ಬಿಡುವುದಿಲ್ಲ. ನಮ್ಮನ್ನು ಸದಾ ಕ್ರಿಯಾಶೀಲವಾಗಿರುವಂತೆ ಮಾಡುವ ಚಾಲಕ ಶಕ್ತಿ ಅವರದು. ನಾನು ಬಲ್ಲಂತೆ ಮಲ್ಲೇಪುರಂ ಅವರ ವಿಶಾಲ ಹೃದಯದಲ್ಲಿ ಕೆಲವರಿಗೆ ಬಹುಬೇಗ ಜಾಗ ಸಿಕ್ಕಿಬಿಡುತ್ತದೆ. ಅದರಲ್ಲಿ ಅವರ ಮಾನಸ ಪುತ್ರನಾದ ನನಗೆ ಸ್ವಲ್ಪ ಹೆಚ್ಚಿನ ಜಾಗ ಸಿಕ್ಕಿದೆ!

November 2, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: