ಟಫ್‌ ಮಾಸ್ಟರ್‌ ಸಿದ್ದರಾಮಯ್ಯ ಅವರನ್ನು ಬಂಧಿಸಿದ್ದರು ಮಧು ದಂಡವತೆ

ಖ್ಯಾತ ಪತ್ರಕರ್ತ ಆರ್ ಟಿ ವಿಠ್ಠಲಮೂರ್ತಿ ರಾಜಕೀಯ ವಿಶ್ಲೇಷಣೆಗೆ ಹೆಸರುವಾಸಿ.

ಇದೊಂಥರಾ ಆತ್ಮಕಥೆ ಅವರ ಪ್ರಸಿದ್ಧ ಕೃತಿ.

ಅವತ್ತು ದೆಹಲಿಯ ಲೀ ಮೆರಿಡಿಯನ್‌ ಹೋಟೆಲಿನಲ್ಲಿ ಕುಳಿತು ಅವರು ನೀಡಿದ ಅಹ್ವಾನವನ್ನು ಒಪ್ಪಿದ್ದರೆ ಸಿದ್ದರಾಮಯ್ಯ ಕೇಂದ್ರ ಸಚಿವರಾಗುತ್ತಿದ್ದರು. ಆದರೆ ಅದನ್ನೊಪ್ಪದ ಕಾರಣಕ್ಕಾಗಿ ಮುಂದೆ ಮುಖ್ಯಮಂತ್ರಿ ಹುದ್ದೆಯವರೆಗೆ ನಡೆದುಕೊಂಡು ಬಂದರು.

ಹಾಗಂತ ಕಾಂಗ್ರೆಸ್‌ನ ಹಿರಿಯ ನಾಯಕ, ದೇಶದ ಮಹಾನ್‌ ಸಮಾಜವಾದಿ ನಾಯಕರ ಅತ್ಯಾಪ್ತ ಬಿ.ಆರ್.ಪಾಟೀಲ್‌ ಹೇಳುತ್ತಿದ್ದಂತೆಯೇ ನಾನು ಮೌನವಾಗಿ ಕುಳಿತು ಆಲಿಸತೊಡಗಿದೆ.

ವಿಠ್ಠಲಮೂರ್ತಿ, ಇದಾಗಿದ್ದು 2004 ರಲ್ಲಿ. ಅಂದ ಹಾಗೆ ಈ ಘಟನೆ ನಡೆಯುವ ಮುನ್ನ ಕರ್ನಾಟಕದ ವಿಧಾನಸಭೆ ಚುನಾವಣೆಯಲ್ಲಿ ಯಾವ ರಾಜಕೀಯ ಪಕ್ಷಗಳಿಗೂ ಬಹುಮತ ಬಂದಿರಲಿಲ್ಲ. ಹೀಗಾಗಿ ಅತಂತ್ರ ವಾತಾವರಣ ನಿರ್ಮಾಣವಾಗಿತ್ತು.

ಎಸ್.ಎಂ.ಕೃಷ್ಣ ನೇತೃತ್ವದ ಕಾಂಗ್ರೆಸ್‌ ಪಕ್ಷ ಅರವತ್ತೈದು ಸ್ಥಾನಗಳನ್ನು ಗಳಿಸಿದರೆ ದೇವೇಗೌಡ-ಸಿದ್ಧರಾಮಯ್ಯ ನೇತೃತ್ವದ ಜೆಡಿಎಸ್‌ ಐವತ್ತೆಂಟು ಸ್ಥಾನಗಳನ್ನು ಗಳಿಸಿತ್ತು. ಹಾಗೆ ನೋಡಿದರೆ ಅವತ್ತು ಅತ್ಯಂತ ದೊಡ್ಡ ಶಕ್ತಿಯಾಗಿ ಹೊರಹೊಮ್ಮಿದ್ದು ಬಿಜೆಪಿ.

ಅನಂತಕುಮಾರ್-ಯಡಿಯೂರಪ್ಪ ಅವರ ನೇತೃತ್ವದಲ್ಲಿ ಬಿಜೆಪಿ ಎಪ್ಪತ್ತೊಂಭತ್ತು ಸೀಟುಗಳನ್ನು ಗಳಿಸಿತ್ತು. ಹೀಗೆ ಬಹುದೊಡ್ಡ ಶಕ್ತಿಯಾಗಿ ತಲೆ ಎತ್ತಿದ ಬಿಜೆಪಿ ಸರ್ಕಾರ ರಚಿಸುವ ಯತ್ನವನ್ನೇನೋ ಮಾಡಿತು. ಆದರೆ ವಿಫಲವಾಯಿತು.

ಇದಕ್ಕೆ ಕಾರಣ ಬಿಜೆಪಿಯನ್ನು ಅಧಿಕಾರದಿಂದ ದೂರವಿಡಬೇಕು ಎಂಬ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ನಾಯಕರ ಲೆಕ್ಕಾಚಾರ. ಅದರ ಪ್ರಕಾರ ಉಭಯ ಶಕ್ತಿಗಳು ಕೈ ಜೋಡಿಸಿ ಸರ್ಕಾರ ರಚಿಸಲು ನಿರ್ಧರಿಸಲಾಗಿತ್ತು.

ಆ ಸಂದರ್ಭದಲ್ಲಿ ಕಾಂಗ್ರೆಸ್‌ ಕೇಂದ್ರದಲ್ಲಿ ಅಧಿಕಾರ ಹಿಡಿದಿತ್ತಾದ್ದರಿಂದ ಮತ್ತು ಮಿತ್ರ ಪಕ್ಷಗಳ ವಿಷಯದಲ್ಲಿ ಉದಾರವಾಗಿ ನಡೆದುಕೊಳ್ಳುವ ಮನಸ್ಸು ಅದಕ್ಕಿದ್ದುದರಿಂದ ರಾಜ್ಯದಲ್ಲಿ ಜೆಡಿಎಸ್‌ ಪಕ್ಷಕ್ಕೆ ಅದು ಸಿಎಂ ಹುದ್ದೆ ಬಿಟ್ಟುಕೊಡುವ ನಿರೀಕ್ಷೆ ಇತ್ತು.

ಜಮ್ಮು-ಕಾಶ್ಮೀರದಲ್ಲಿ ಆ ಹೊತ್ತಿಗೆ ಅಸ್ತಿತ್ವದಲ್ಲಿದ್ದುದು ಸಮ್ಮಿಶ್ರ ಸರ್ಕಾರವೇ ತಾನೇ? ಅಲ್ಲಿ ತನಗಿಂತ ಕಡಿಮೆ ಸೀಟುಗಳನ್ನು ಗೆದ್ದಿದ್ದ ಪಿಡಿಪಿಗೆ ಕಾಂಗ್ರೆಸ್‌ ಪಕ್ಷ ಸಿಎಂ ಹುದ್ದೆ ಬಿಟ್ಟುಕೊಟ್ಟಿತ್ತು. ಮತ್ತು ಅದರ ಈ ಧೋರಣೆಯ ಫಲವಾಗಿ ಪಿಡಿಪಿಯ ಮುಫ್ತಿ ಮಹಮದ್‌ ಸಯೀದ್‌ ಅವರು ಮುಖ್ಯಮಂತ್ರಿಯಾಗಿದ್ದರು.

ಜಮ್ಮು-ಕಾಶ್ಮೀರದ ಸೂತ್ರವೇ ಇಲ್ಲಿ ಇಂಪ್ಲಿಮೆಂಟ್‌ ಆಗಿದ್ದರೆ ಸಹಜವಾಗಿಯೇ ಜೆಡಿಎಸ್‌ ನಾಯಕ ಸಿದ್ಧರಾಮಯ್ಯ ಮುಖ್ಯಮಂತ್ರಿ ಆಗಿರುತ್ತಿದ್ದರು. ಅದೇ ರೀತಿ ಮಾಜಿ ಪ್ರಧಾನಿ ದೇವೇಗೌಡರೇನಾದರೂ ಎಐಸಿಸಿ ಅಧ್ಯಕ್ಷರೆದುರು ಪಟ್ಟು ಹಿಡಿದಿದ್ದರೆ ಅವರೂ ಅದನ್ನು ಒಪ್ಪುವ ಸ್ಥಿತಿಯಲ್ಲಿದ್ದರು.

ಆದರೆ ನಮ್ಮ ಪಕ್ಷಕ್ಕೆ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಡಿ ಎಂದು ಸೋನಿಯಾಗಾಂಧಿ ಎದುರು ದೇವೇಗೌಡರು ಪಟ್ಟು ಹಿಡಿಯಲಿಲ್ಲ. ಅವರು ಉದ್ದೇಶಪೂರ್ವಕವಾಗಿ ಸಿಎಂ ಹುದ್ದೆಗೆ ಪಟ್ಟುಹಿಡಿಯಲಿಲ್ಲ ಎಂಬ ಕಾರಣಕ್ಕಾಗಿ ಸಿದ್ಧರಾಮಯ್ಯ ನೊಂದರು.

ಅಷ್ಟೇ ಅಲ್ಲ, ಐದು ವರ್ಷಗಳ ಕಾಲ ನಾವು ಹೋರಾಡಿದ್ದು ಕಾಂಗ್ರೆಸ್‌ ವಿರುದ್ಧ. ಹೀಗೆ ಅವರ ವಿರುದ್ಧ ಹೋರಾಟ ನಡೆಸಿ, ಈಗ ಅವರ ನೇತೃತ್ವದಲ್ಲೇ ಸರ್ಕಾರ ರಚಿಸಬೇಕು ಎಂಬುದು ನೈತಿಕವಾಗಿ ನನಗೆ ಸರಿಕಾಣುವುದಿಲ್ಲ ಎಂದು ಹೇಳಿಬಿಟ್ಟರು.

ಅಷ್ಟೇ ಅಲ್ಲ, ಕಾಂಗ್ರೆಸ್‌ ಪಕ್ಷದ ಸಿಎಂ ಇರುವಾಗ ನಾನು ಡಿಸಿಎಂ ಆಗುವುದಿಲ್ಲ. ಬದಲಿಗೆ ಸಾಮಾನ್ಯ ಶಾಸಕನಾಗಿ ಉಳಿದುಬಿಡುತ್ತೇನೆ. ಹಾಗಂತ ನಾನೇನೂ ಪಕ್ಷ ಬಿಟ್ಟು ಹೋಗುವುದಿಲ್ಲ ಎಂದು ಅವರು ಪಟ್ಟು ಹಿಡಿದಾಗ ಆಟ ಶುರುವಾಯಿತು.

ಈ ಸಂದರ್ಭದಲ್ಲಿ ದೆಹಲಿಯ ಲೀ ಮೆರಿಡಿಯನ್‌ ಹೋಟೆಲ್ಲಿನಲ್ಲಿ ಸಿದ್ಧರಾಮಯ್ಯ, ಪಿ.ಕೋದಂಡರಾಮಯ್ಯ ಹಾಗೂ ನಾನು ಉಳಿದುಕೊಂಡಿದ್ದಾಗ ಕಾಂಗ್ರೆಸ್‌ ಹೈಕಮಾಂಡ್‌ ಪ್ರಮುಖರಾದ ಅಹ್ಮದ್‌ ಪಟೇಲ್‌ ಅವರ ಫೋನು ಬಂತು.

ಸಿದ್ರಾಮಯ್ಯಾಜೀ, ನಿಮ್ಮನ್ನು ನೋಡಲು ಬರುತ್ತಿದ್ದೇನೆ. ಮಾತನಾಡಬೇಕು ಅಂತ ಅವರು ಹೇಳಿದಾಗ ಸಿದ್ಧರಾಮಯ್ಯ ಕೂಡಾ ನಿರಾಕರಿಸಲಿಲ್ಲ. ಅವತ್ತು ಲೀ ಮೆರಿಡಿಯನ್‌ ಹೋಟೆಲ್ಲಿಗೆ ಬಂದ ಸೋನಿಯಾಗಾಂಧಿ ಅವರ ರಾಜಕೀಯ ಕಾರ್ಯದರ್ಶಿಗಳು ಒಂದು ಪ್ರಪೋಸಲ್ಲಿನೊಂದಿಗೆ ಬಂದಿದ್ದರು.

ಸಿದ್ರಾಮಯ್ಯಾಜೀ, ಮೈತ್ರಿಕೂಟ ಸರ್ಕಾರದಲ್ಲಿರುವುದು ನಿಮಗೆ ಮುಜುಗರವಾದರೆ ಯುಪಿಎ ಮೈತ್ರಿಕೂಟ ಸರ್ಕಾರದಲ್ಲಿ ಮಂತ್ರಿಯಾಗಿ, ನಿಮಗೆ ಪ್ರಭಾವಿ ಖಾತೆಯನ್ನೇ ಕೊಡುತ್ತೇವೆ ಎಂಬುದು ಅವರ ಪ್ರಪೋಸಲ್ಲು.

ಸಹಜವಾಗಿ ನಾನು: ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿಕೂಟ ಸರ್ಕಾರದಲ್ಲಿ ಉಪಮುಖ್ಯಮಂತ್ರಿಯಾಗುವುದಕ್ಕಿಂತ ಕೇಂದ್ರ ಸಚಿವ ಸಂಪುಟದಲ್ಲಿ ಮಂತ್ರಿಯಾಗುವುದೇ ಒಳ್ಳೆಯದು. ಹಾಗೆ ಮಂತ್ರಿಯಾದರೆ ಇಲ್ಲಿನ ಬೆಳವಣಿಗೆಯನ್ನು ಕಾದು ನೋಡಬಹುದು. ಸೂಕ್ತ ಸನ್ನಿವೇಶದಲ್ಲಿ ರಾಜ್ಯ ರಾಜಕೀಯಕ್ಕೆ ಮರಳಬಹುದು ಎಂದು ವಾದಿಸಿದೆ.

ಒಂದು ವೇಳೆ ಅವತ್ತಿನ ರಾಜಕೀಯ ಸನ್ನಿವೇಶ ಬದಲಾವಣೆ ಕಾಣದಿದ್ದರೆ ಸಿದ್ಧರಾಮಯ್ಯ ಅವರು ಪ್ರಧಾನಿ ಮನಮೋಹನ್‌ಸಿಂಗ್‌ ಅವರ ಸಚಿವ ಸಂಪುಟದಲ್ಲಿ ಮಂತ್ರಿಯಾಗಿ ಸೇರ್ಪಡೆ ಆಗುತ್ತಿದ್ದರೋ ಏನೋ?ಆದರೆ ಇದ್ದಕ್ಕಿದ್ದಂತೆ ಆಟ ಬದಲಾಗತೊಡಗಿತು.

ಇದಕ್ಕೆ ಕಾರಣ, ಮಾಜಿ ಪ್ರಧಾನಿ ದೇವೇಗೌಡರು. ಅಂದ ಹಾಗೆ ಉಪಮುಖ್ಯಮಂತ್ರಿ ಹುದ್ದೆ ನನಗೆ ಬೇಡ ಎಂದಿದ್ದ ಸಿದ್ಧರಾಮಯ್ಯ ಅವರು ಮೈತ್ರಿಕೂಟ ಸರ್ಕಾರದಿಂದ ಹೊರಗಿರುವುದು ಗೌಡರಿಗೆ ಇಷ್ಟವಿರಲಿಲ್ಲ.

ಎಲ್ಲಕ್ಕಿಂತ ಮುಖ್ಯವಾಗಿ ಹಳೆ ಮೈಸೂರು ಭಾಗದಲ್ಲಿ ಒಕ್ಕಲಿಗ ಪ್ಲಸ್‌ ಕುರುಬ ಮತಬ್ಯಾಂಕ್‌ ಸಾಲಿಡ್ಡಾಗಿ ಉಳಿಯಬೇಕೆಂದರೆ ಸಿದ್ದರಾಮಯ್ಯ ಅವರು ಸಮ್ಮಿಶ್ರ ಸರ್ಕಾರದಲ್ಲಿ ಪಾಲ್ಗೊಳ್ಳಲೇಬೇಕು. ಇಲ್ಲದಿದ್ದರೆ ಸರ್ಕಾರಕ್ಕೆ ಅಪಾಯ ಎನ್ನುವುದು ದೇವೇಗೌಡರ ಯೋಚನೆಯಾಗಿತ್ತು.

ಆದರೆ ಮುಖ್ಯಮಂತ್ರಿ ಹುದ್ದೆ ದಕ್ಕದ ಕಾರಣಕ್ಕೆ ಕೋಪಗೊಂಡಿದ್ದ ಸಿದ್ಧರಾಮಯ್ಯ ನಾನು ಹೇಳಿದ ಮಾತನ್ನು ಕೇಳದೆ ಇರಬಹುದು ಎಂಬ ಅನುಮಾನವೂ ಅವರಿಗಿತ್ತು. ಹೀಗಾಗಿ ಕಾಂಗ್ರೆಸ್‌-ಜೆಡಿಎಸ್‌ ಸಮ್ಮಿಶ್ರ ಸರ್ಕಾರದಲ್ಲಿ ಡಿಸಿಎಂ ಆಗುವಂತೆ ಸಿದ್ದರಾಮಯ್ಯ ಅವರ ಮನವೊಲಿಸಲು ಜನತಾ ಪರಿವಾರದ ಹಿರಿಯ ನಾಯಕರೊಬ್ಬರನ್ನು ಕೇಳಿಕೊಂಡರು.ಅವರ ಹೆಸರು-
ಮಧು ದಂಡವತೆ

ಯಾವಾಗ ಅವರು ಮಧುದಂಡವತೆಯವರನ್ನು ಕೇಳಿಕೊಂಡರೋ?ಇದಾದ ನಂತರ ಕೆಲವೇ ಗಂಟೆಗಳಲ್ಲಿ ದೆಹಲಿಯ ಕರ್ನಾಟಕ ಭವನದ ನಮ್ಮ ರೂಮಿಗೆ ಒಂದು ಕರೆ ಬಂತು. ಅವತ್ತು ಸಿದ್ಧರಾಮಯ್ಯ, ಕೋದಂಡರಾಮಯ್ಯ ಮತ್ತು ನಾನು ಅಲ್ಲೇ ಉಳಿದುಕೊಂಡಿದ್ದೆವು. ಫೋನು ಬಂದಾಗ ನಾನೇ ಅದನ್ನು ರಿಸೀವ್‌ ಮಾಡಿದೆ. ಅತ್ತಲಿಂದ ಮಾತನಾಡಿದವರು: ಬಿ.ಆರ್, ಅಲ್ಲಿ ನಿಮ್ಮ ಜತೆ ಸಿದ್ದರಾಮಯ್ಯ ಇದ್ದಾರಾ?ಎಂದರು.

ಹೌದು ಸಾರ್‌ ಎಂದೆ. ಹಾಗಿದ್ದರೆ ಸಿದ್ಧರಾಮಯ್ಯ ಅವರನ್ನು ಕರೆದುಕೊಂಡು ಮಧ್ಯಾಹ್ನ ನಮ್ಮ ಮನೆಗೆ ಊಟಕ್ಕೆ ಬಂದುಬಿಡಿ ಎಂದರು.
ಸರಿ, ಮಧುದಂಡವತೆ ಅವರೇ ಕರೆದಿದ್ದಾರೆ ಎಂದ ಮೇಲೆ ಇನ್ನೇನು? ಸಿದ್ಧರಾಮಯ್ಯ ಮತ್ತವರ ಜತೆ ನಾವು ಅವರ ಮನೆಗೆ ಹೋದೆವು. ಮಾವಿನಹಣ್ಣಿನ ಕಾಲ ಅದು, ಹೀಗಾಗಿ ಮಧುದಂಡವತೆ ಶೀಖರಣೆ ಮಾಡಿಸಿದ್ದರು.

ಶೀಖರಣೆ ತಿನ್ನುತ್ತಾ, ತಿನ್ನುತ್ತಾ ಮಧುದಂಡವತೆ ಅವರು:ಸಿದ್ರಾಮಯ್ಯಾಜೀ, ನಿಮಗೆ ಏನೇ ಅಸಹನೆ ಇರಲಿ,ಆದರೆ ರಚನೆಯಾಗುತ್ತಿರುವ ಸಮ್ಮಿಶ್ರ ಸರ್ಕಾರದಲ್ಲಿ ಭಾಗಿಯಾಗುವುದಿಲ್ಲ ಎಂದು ಪಟ್ಟುಹಿಡಿಯಬೇಡಿ ಎಂದರು.

ಸಿದ್ಧರಾಮಯ್ಯ ಅವರಿಗೆ ಆ ಪ್ರಪೋಸಲ್ಲು ಇಷ್ಟವಿರಲಿಲ್ಲ.ಆದರೆ ಮಧುದಂಡವತೆ ಪಟ್ಟು ಬಿಡಲಿಲ್ಲ. ನೀವು ಮೊದಲು ಉಪಮುಖ್ಯಮಂತ್ರಿಯಾಗಿ, ಮುಂದಿನ ದಿನಗಳಲ್ಲಿ ಏನೇನಾಗುತ್ತದೋ ನೋಡೋಣ. ಎಲ್ಲಕ್ಕಿಂತ ಮುಖ್ಯವಾಗಿ ಇವತ್ತು ಬಿಜೆಪಿ ಅಧಿಕಾರ ಹಿಡಿಯದಂತೆ ನೋಡಿಕೊಳ್ಳಬೇಕಿದೆ ಎಂದು ಸಿದ್ದರಾಮಯ್ಯ ಅವರನ್ನು ತಮ್ಮ ಮಾತಿನ ಹಗ್ಗದಲ್ಲಿ ಕಟ್ಟಿದರು.

ಮಧುದಂಡವತೆ ಅವರ ಮಾತಿಗೆ ಅಲ್ಲೇ ಇದ್ದ ಸುರೇಂದ್ರಮೋಹನ್‌ ಹಾಗೂ ಬಾಪೂ ಕಲ್ದಾತೆ ಅವರಂತಹ ನಾಯಕರು ಸಹಮತ ವ್ಯಕ್ತಪಡಿಸಿದಾಗ ಸಿದ್ಧರಾಮಯ್ಯ ಅವರಿಗೆ ಬೇರೆ ದಾರಿ ಕಾಣಲಿಲ್ಲ. ಹೀಗಾಗಿ ಅವರು ಧರ್ಮಸಿಂಗ್‌ ನೇತೃತ್ವದ ಸಮ್ಮಿಶ್ರ ಸರ್ಕಾರದಲ್ಲಿ ಡಿಸಿಎಂ ಆಗಲು ಒಪ್ಪಿಕೊಂಡರು.

ಒಂದು ವೇಳೆ ಮಧುದಂಡವತೆ ಅವರೇನಾದರೂ ಮಧ್ಯಸ್ಥಿಕೆ ವಹಿಸದಿದ್ದರೆ ಸಿದ್ಧರಾಮಯ್ಯ ಅವರು ಒಂದೋ, ಕೇಂದ್ರ ಸಚಿವರಾಗುತ್ತಿದ್ದರು. ಇಲ್ಲವೇ ಸಾಮಾನ್ಯ ಶಾಸಕರಾಗಿ ಉಳಿದುಬಿಡುತ್ತಿದ್ದರು.

ಆದರೆ ಕಾಲನ ಆಟ ಬೇರೆಯಾಗಿತ್ತು. ಅವರು ಮಧುದಂಡವತೆ ಅವರ ಮಾತು ಕೇಳಿ ಡಿಸಿಎಂ ಆದರು ,ಮುಂದೆ ಡಿಸಿಎಂ ಹುದ್ದೆ ನಿರ್ವಹಿಸಿದ ಸಂದರ್ಭದಲ್ಲಾದ ಅನುಭವಗಳಿಂದ ಶಕ್ತಿ ಪಡೆದು ಮುಖ್ಯಮಂತ್ರಿ ಹುದ್ದೆಯವರೆಗೂ ನಡೆದುಕೊಂಡು ಬಂದರು.
ಹಾಗಂತ ಹೇಳಿ ಬಿ.ಆರ್.ಪಾಟೀಲ್‌ ಮೌನಿಯಾದರು.

November 2, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. Madhusudan

    ಅತ್ಯದ್ಭುತ ವಿಶ್ಲೇಷಣೆ ಸರ್
    ವಂದನೆಗಳು

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: