ಬಿಡುಗಡೆಯಾಗುತ್ತಿದೆ 'ಮರುಭೂಮಿಯ ಹೂ'

ಜಗದೀಶ್ ಕೊಪ್ಪ ಅವರ ಹೊಸ ಪುಸ್ತಕ ’ಮರುಭೂಮಿಯ ಹೂ’

ಶುಕ್ರವಾರ ಅಂದರೆ ೩೧ ನೆಯ ತಾರೀಖು ಬಿಡುಗಡೆ ಆಗುತ್ತಿದೆ

ಜಗದೀಶ್ ಕೊಪ್ಪ

ಸಮಾರಂಭದ ಆಹ್ವಾನ ಪತ್ರಿಕೆ, ಪುಸ್ತಕದ ಮುಖ ಪುಟ ಇಲ್ಲಿದೆ

ಜೊತೆ ಪುಸ್ತಕದ ಒಂದು ಮನಮಿಡಿಯುವ ಅಧ್ಯಾಯ ಸಹ

 

ಪುಸ್ತಕದ ಮುಖಪುಟ

ಮರುಭೂಮಿಯ ಹೂ

ಅಧ್ಯಾಯ-4-

ಯಾಂಗ ಹೇಳಲಿ? ಹೆಂಗಸಾಗುವ ಪರಿಯ?

ನನ್ನ ಕುಟುಂಬದಲ್ಲಿ ನಾವೆಲ್ಲಾ ಕುತೂಹಲದಿಂದ  ಆತಂಕ ಮತ್ತು ತಲ್ಲಣಗಳಿಂದ ಕಾಯುತ್ತಿದ್ದ ಆ ದಿನ ಕೊನೆಗೂ ಬಂದೇ ಬಿಟ್ಟಿತು. ಇದು ಸೋಮಾಲಿಯಾ ಮಾತ್ರವಲ್ಲ, ಆಫ್ರಿಕಾದ ರಾಷ್ಟ್ರಗಳ ಬಹುತೇಕ ಮುಸ್ಲಿಂ ಬುಡಕಟ್ಟು ಕುಟುಂಬಗಳಲ್ಲಿ ತಲತಲಾಂತರಗಳಿಂದ ಆಚರಣೆಯಲ್ಲಿರುವ ಒಂದು ಅನಿಷ್ಟ ಅಮಾನುಷವಾದ ಆಚರಣೆ. ಮುಸ್ಲಿಂ ಜನಾಂಗದ ಗಂಡು ಮಕ್ಕಳಿಗೆ ಮಾಡುವ ಸುನ್ನತಿ ಅಥವಾ ಮುಂಜಿ( ಶಿಶ್ನದ ಮುಂದಿನ ಚರ್ಮವನ್ನು ಕತ್ತರಿಸಿ ಹಾಕುವುದು) ಮಾಡುವ ರೀತಿಯಲ್ಲಿ ಹೆಣ್ಣು ಮಕ್ಕಳಿಗೆ ಋತುಮತಿಯಾಗುವ ಮುನ್ನ ಆಕೆಯ ಯೋನಿಯ ಹೊರಭಾಗದ ಕೆಲವು ಭಾಗ ಮತ್ತು ಗರ್ಭಾಶಯದ ಕೊರಳಿನ ತುದಿಯಲ್ಲಿರುವ ಅವರೆ ಕಾಳಿನ ಗಾತ್ರದ ಲೈಂಗಿಕ ಸ್ಪರ್ಶ ಮತ್ತು ಸಂವೇದನೆಯ ಬಹು ಮುಖ್ಯಭಾಗವಾಗಿರುವ ಭಾಗವನ್ನು ತೆಗೆದು ಹಾಕಿ ಯೋನಿಯನ್ನು ಹೊಲಿಯುವ ಕ್ರಿಯೆ ಇದನ್ನು ಇಂಗ್ಲೀಷ್ ಭಾಷೆಯಲ್ಲಿ circumcise ಎಂದು ಕರೆಯುತ್ತಾರೆ. ಸದಾ ಮರುಭೂಮಿಯಲ್ಲಿ ಪ್ರಾಣಿಗಳೊಂದಿಗೆ ಸುತ್ತುವ ನಮ್ಮ ಕುಟುಂಬದಲ್ಲಿ ಅಕ್ಕಂದಿರಾದ ಅಮನ್ ಮತ್ತು ಹಲೆಮೊ ಇವರಿಗೆ ಈ ಕ್ರಿಯೆಯನ್ನು ನೆರವೇರಿಸಲು ಸಾಧ್ಯವಾಗಿರಲಿಲ್ಲ. ಸೋಮಾಲಿಯಾದಲ್ಲಿ ಇದೊಂದು ಕಡ್ಡಾಯ ಧಾರ್ಮಿಕ ಕ್ರಿಯೆಯಾಗಿದ್ದು  ಪ್ರತಿಯೊಬ್ಬ ಹೆಣ್ಣುಮಗಳು ಈ ಅನಿಷ್ಟ ಕ್ರಿಯೆಗೆ ಒಳಗಾಗಲೇಬೇಕು. ಹೆಣ್ಣು ಹುಟ್ಟುವಾಗ ತನ್ನೊಂದಿಗೆ ಕೆಲವು ಅಪವಿತ್ರ ಭಾಗಗಳನ್ನು ಇಟ್ಟುಕೊಂಡು ಜನಿಸುವುದರಿಂದ ಅವಳು ಪವಿತ್ರಳಾಗಿ, ಮುಂದಿನ ದಿನಗಳಲ್ಲಿ ವಿವಾಹಕ್ಕೆ ಮತ್ತು ತಾಯಿಯಾಗಲು ಅರ್ಹತೆ ಗಳಿಸಬೇಕಾದರೆ, ಯೋನಿ ವಿಚ್ಛೇದನ ಕ್ರಿಯೆಗೆ ಒಳಗಾಗುವುದು ಕಡ್ಡಾಯ.

ಇದು ಸೋಮಾಲಿಯದಲ್ಲಿರುವ  ನಂಬಿಕೆ. ಈ ಕ್ರಿಯೆಗೆ ಒಳಗಾಗದ ಹೆಣ್ಣು ಮಕ್ಕಳನ್ನು ವಿವಾಹವಾಗಲು ಪುರುಷ ಸಮಾಜ ನಿರಾಕರಿಸುವುದು ಇವೊತ್ತಿಗೂ ನಡೆದು ಬರುತ್ತಿರುವ ಆಚರಣೆಯಾಗಿದೆ. ಹಾಗಾಗಿ ಬಹುತೇಕ ಮಂದಿ ತಮ್ಮ ಹೆಣ್ಣು ಮಕ್ಕಳಿಗೆ ಚಿಕ್ಕ ವಯಸ್ಸಿನಲ್ಲಿ ಈ ಕ್ರಿಯೆಯನ್ನು ಮಾಡಿ ಮುಗಿಸುತ್ತಾರೆ. ಇಂತಹ ಕ್ರಿಯೆ ನೆರೆವೇರಿಸಲು ಪ್ರತಿಯೊಂದು ಬುಡಕಟ್ಟು ಜನಾಂಗಗಳಲ್ಲಿ ಕೆಲವು ಮಹಿಳೆಯರಿದ್ದು ಊರಿಂದ ಊರಿಗೆ ಅಲೆಯುತ್ತಾ ಇದನ್ನೇ ವೃತ್ತಿಯನ್ನಾಗಿ ಮಾಡಿಕೊಂಡಿದ್ದಾರೆ. ನನ್ನ ಜನಾಂಗಕ್ಕೂ ಒಬ್ಬ ಮಹಿಳೆಯಿದ್ದು ಆಕೆಗಾಗಿ ಅಪ್ಪ ಬಹಳ ದಿನಗಳಿಂದ ಹುಡುಕಾಟ ನಡೆಸಿದ್ದ. ಏಕೆಂದರೆ, ಅಕ್ಕಂದಿರಿಬ್ಬರೂ 12 ವರ್ಷ ದಾಟಿದ್ದರಿಂದ ಅಪ್ಪನಿಗೆ ಈ ವಿಷಯದಲ್ಲಿ ಆತಂಕ ಶುರುವಾಗಿತ್ತು. ಒಂದು ದಿನ ನಾವಿದ್ದ ಹಳ್ಳಿಗೆ ಆ ಹೆಂಗಸು ಬಂದಿದ್ದರಿಂದ ಅಪ್ಪ ಆಕೆಯನ್ನು ಮನೆಗೆ ಕರೆತಂದಿದ್ದ.  ಇಬ್ಬರು ಅಕ್ಕಂದಿರಿಗೂ ವಿಚ್ಛೇದನ ಕ್ರಿಯೆ ನೆರವೇರಿಸುವುದು ಅಪ್ಪನ ಆಲೋಚನೆಯಾಗಿತ್ತು ಆದರೆ, ಆ ದಿನ ಅಕ್ಕ ಅಮಾನ್ ನೀರು ಅರಸಿ ಹೊರ ಹೋಗಿದ್ದರಿಂದ ಇನ್ನೊಬ್ಬ ಅಕ್ಕ ಹೆಲೆಮೊ ಗೆ ಮಾತ್ರ ಮಾಡಲು ಸಾಧ್ಯವಾಯಿತು.      ಕೆಲವು ದಿನಗಳ ನಂತರ ಅಕ್ಕ ಅಮನ್ಳಿಗೆ ವಿಚ್ಛೇದನ ಕ್ರಿಯೆ ನೆರವೇರಿಸಲು ಆ ಮುದುಕಿ ಮತ್ತೇ ಮನೆಗೆ ಬಂದಾಗ ನಾನು ಅಮ್ಮನ ಬಳಿ ಹೋಗಿ ಅಮ್ಮಾ ಅಕ್ಕನ ಜೊತೆ ನಾನೂ ಮಾಡಿಸಿಕೊಳ್ತೀನಿ ಎನ್ನುತ್ತಾ ಆಕೆಯ ಹೆಗಲಿಗೆ ಜೋತು ಬಿದ್ದೆ. ಸಿಟ್ಟಿನಿಂದ ನನ್ನನ್ನು ದೂರ ತಳ್ಳಿದ ಅಮ್ಮ ನೀನಿನ್ನು ಚಿಕ್ಕವಳು ಮಂಗನಂತೆ ಆಡಬೇಡ ಎಂದು ಬೈದಳು. ಮರು ದಿನ ಬೆಳಿಗ್ಗೆ ನಸುಕಿನಲ್ಲಿ ಅಮ್ಮ ನೆರೆಮನೆಯ ಇಬ್ಬರು ಹೆಂಗಸರೊಂದಿಗೆ ಅಕ್ಕನನ್ನು  ಊರಾಚೆಗಿನ ಬಯಲಿನಲ್ಲಿ ಇದ್ದ ಮರದ ಬಳಿಗೆ ಕರೆದೊಯ್ದಳು.

ಕುತೂಹಲದ ಕೆಟ್ಟಚಾಳಿ ಬಿಡದ ನಾನೂ ಸಹ ಅವರನ್ನು ಹಿಂಬಾಲಿಸಿ ಹೋಗಿ ಪೊದೆಯೊಂದರಲ್ಲಿ ಕುಳಿತು ಅಕ್ಕನಿಗೆ ನಡೆಸಿದ ಕ್ರಿಯೆಯನ್ನು ಗಮನಿಸಿದೆ.ಅಕ್ಕನನ್ನು ಕರೆದೊಯ್ದಿದ್ದ ಸ್ಥಳಕ್ಕೆ ತನ್ನ ಕೈ ಚೀಲದೊಂದಿಗೆ ಮಾಟಗಾತಿಯಂತಿದ್ದ ಆ ಮುದುಕಿ ಬಂದಳು ಆಕೆ ನಮ್ಮ ಬುಡಕಟ್ಟು ಜನಾಂಗದ ಮುಖ್ಯ ಮಹಿಳೆಯಾಗಿದ್ದಳು. ಜೊತೆಗೆ ಇಂತಹ ಅನಿಷ್ಟಕಾರಿ ಯೋನಿ ವಿಚ್ಛೇದನ ಕ್ರಿಯೆಯಿಂದ ಸಾಕಷ್ಟು ಹಣ ಸಂಪಾದಿಸುತ್ತಿದ್ದಳು. ಅವಳನ್ನು ನಮ್ಮ ಜನಾಂಗದ ಜನತೆಯೆಲ್ಲಾ ನಾಯಕಿ ಎಂದು ಕರೆಯುತಿದ್ದರೆ, ನಾನು ಮಾತ್ರ ಆಕೆಯನ್ನು ಕೊಲೆಗಾತಿ ಎಂದು ಕರೆಯುತ್ತಿದ್ದೆ. ಏಕೆಂದರೆ ಅವಳ ಇಂತಹ ಅನಿಷ್ಟ ಕ್ರಿಯೆಯಿಂದ ಹಲವಾರು ಹುಡುಗಿಯರು ಸೋಂಕು ತಗುಲಿ ಸಾವನ್ನಪ್ಪಿದ್ದರು. ನಾನು ಕುತುಹಲದಿಂದ ಅಲ್ಲಿ ನಡೆಯುತ್ತಿದ್ದ ಘಟನೆಯನ್ನು ವೀಕ್ಷಿಸುತ್ತಿದ್ದೆ. ಅಮ್ಮ ಮತ್ತು ಅವಳ ಕೆಲವು ಗೆಳತಿಯರು ಅಕ್ಕನನ್ನು ನೆಲದಲ್ಲಿ ಕೂರಿಸಿ ಬಿಗಿಯಾಗಿ ಆಕೆಯ ಭುಜವನ್ನು ಅಮುಕಿ ಹಿಡಿದುಕೊಂಡರು. ಅಮ್ಮ ಅಕ್ಕನ ಮುಖವನ್ನು ಬೇರೆಡೆಗೆ ತಿರುಗಿಸಿ ಆಕೆಯ ಮುಖವನ್ನು ವಸ್ತ್ರದಿಂದ ಮುಚ್ಚಿದಳು. ಮುದುಕಿ ಕೆಳಗೆ ಕೂತು ಅಕ್ಕನ ಕಾಲುಗಳನ್ನು ಅಗಲಿಸಿ ತನ್ನ ಕೆಲಸದಲ್ಲಿ ತಲ್ಲೀನಳಾದಳು. ಅಕ್ಕ ಅಮನ್ ನೋವಿನಿಂದ ತಲೆ ಅಲುಗಾಡಿಸುವುದು ಕಂಡು ಬಂದಿತು. ಕ್ಷಣಾರ್ಧದಲ್ಲಿ ಚೀರಿಕೊಂಡ ಅಕ್ಕ ಜೋರಾಗಿ ಕಾಲಿನಿಂದ ಮುದುಕಿಯ ಎದೆಗೆ ಒದ್ದು ಓಡತೊಡಗಿದಳು. ಅವಳ ಕಾಲುಗಳಿಂದ ರಕ್ತ ಧಾರಾಕಾರವಾಗಿ ಹರಿಯುತ್ತಿರುವುದು ಕಂಡು ನನಗೆ ಭಯವಾಯಿತು. ಓಡುತ್ತಿದ್ದ ಅಕ್ಕ ನಿತ್ರಾಣಗೊಂಡು ನೆಲಕ್ಕೆ ಕುಸಿದು ಬಿದ್ದಳು. ಅವಳು ಕುಸಿದು ಕುಳಿತ ಜಾಗದಲ್ಲಿ ಆಕೆಯನ್ನು ಕೆಡವಿಕೊಂಡು ಉಳಿದ ಕಾರ್ಯವನ್ನು ಪೂರ್ಣಗೊಳಿಸಲಾಯಿತು.

ಅಕ್ಕನ ಚೀರಾಟ ಗೋಳಾಟ ನೋಡಿ ಭಯಗೊಂಡ ನಾನು ಓಡಿ ಬಂದು ಮನೆ ಸೇರಿಕೊಂಡೆ.ಅಲ್ಲಿ ಏನೇನು ನಡೆಯಿತು ಎಂಬುದು ನನಗೆ ವಿವರವಾಗಿ ಗೊತ್ತಾಗದಿದ್ದರೂ ಅದೊಂದು ಭಯಾನಕ ದೃಶ್ಯವಾಗಿತ್ತು. ಈ ಕುರಿತಂತೆ ಅಮ್ಮನನ್ನು ಪ್ರಶ್ನಿಸಲಾರದ ವಯಸ್ಸು ನನ್ನದಾಗಿತ್ತು. ಎರಡು ದಿನಗಳ ಕಾಲ ಪ್ರತ್ಯೇಕವಾಗಿ ಇಡಲಾಗಿದ್ದ ಅಕ್ಕನಿಗೆ ಮೂರನೇ ದಿನ ಕುಡಿಯಲು ನೀರು ಕೊಡಲಾಯಿತು.  ಮೂತ್ರ ವಿಸರ್ಜಜಿಸಬಾರದು ಎಂಬ ಕಾರಣಕ್ಕಾಗಿ ಕುಡಿಯಲು ನೀರನ್ನು ಕೊಟ್ಟಿರಲಿಲ್ಲ. ಒಮ್ಮೆ ಕುತೂಲದಿಂದ ಅಕ್ಕನನ್ನು  ಹೇಗಿತ್ತು? ಎಂದು ಕೇಳಿದೆ. ಅಕ್ಕ ಅಮಾನ್, ‘ಓ ಅದೊಂದು ನರಕ ಎಂದು ಉದ್ಗರಿಸಿದಳು. ಅವಳಲ್ಲಿ ಎಲ್ಲವನ್ನು ಹೇಳಿಕೊಳ್ಳಬೇಕೆಂಬ ತುಡಿತವಿತ್ತು. ಅದು ಅವಳ ಮುಖದಲ್ಲಿ ವ್ಯಕ್ತವಾಗುತಿತ್ತು. ಇದ್ದಕ್ಕಿದ್ದಂತೆ ಮಾತು ಬದಲಿಸಿ, ನೀನೂ ಒಳಗಾಗುತ್ತಿಯಲ್ಲ ಬಿಡು ಎಂದು ತೇಲಿಸಿ ಬಿಡುತ್ತಿದ್ದಳು. ಅಕ್ಕನ  ಈ ಭಯಾನಕ ಕೃತ್ಯಕ್ಕೆ ಸಾಕ್ಷಿಯಾಗಿದ್ದ ನಾನು ಹಲವಾರು ದಿನಗಳ ಕಾಲ ಭಯಭೀತಳಾಗಿದ್ದೆ.  ಕಡೆಗೊಂದು ದಿನ ನಾನು ಹೆಂಗಸಾಗಲೇಬೇಕೆಂಬ ಮೋಹ ಮತ್ತು ಮೂರ್ಖತನದಿಂದ ಇಂತಹ ಅನಿಷ್ಟ ಕ್ರಿಯೆಗೆ ಒಳಗಾಗಿ ಅಕ್ಕಂದಿರ ಗುಂಪಿಗೆ ಸೇರಿಕೊಂಡೆ.ನನ್ನ ಅಪ್ಪನಿಗೆ ಒಬ್ಬ ಗೆಳೆಯನಿದ್ದ. ಆತನ ಕುಟುಂಬವೂ ಸಹ ಸದಾ ನಮ್ಮೊಂದಿಗೆ ಸಾಕುಪ್ರಾಣಿಗಳನ್ನು ಸಲಹುತ್ತಾ ಅಲೆಮಾರಿ ಜೀವನ ನಡೆಸುತ್ತಿತ್ತು. ಅಪ್ಪನಿಗಿಂತ ಹೆಚ್ಚು ವಯಸ್ಸಾಗಿದ್ದ ಆತ ಸ್ವಲ್ಪ ಸಿಡುಕಿನ ಸ್ವಭಾವದವನಾಗಿದ್ದ.

ಕುರಿ, ಮೇಕೆ, ಒಂಟೆಗಳನ್ನು ಮೇಯುಸುತ್ತಿದ್ದ ಸಂದರ್ಭದಲ್ಲಿ ನಾನು ಮತ್ತ ನನ್ನ ತಂಗಿಯರು ಆಟವಾಡುತ್ತಾ, ಇಲ್ಲವೇ ಚಿಟ್ಟೆ ಹಿಡಿಯುತ್ತಾ ಅವನ ಬಳಿ ಹೋದರೆ  ರೇಗುತ್ತಿದ್ದ. ಕೊಳಕು ಹುಡಗಿಯರು ಎಂದು ನಿಂದಿಸುತ್ತಿದ್ದ. ನಾವಿನ್ನೂ ಯೋನಿ ವಿಚ್ಛೇದನ ಕ್ರಿಯೆಗೆ ಒಳಗಾಗದಿರುವುದು ಅವನ ಅಸಹನೆಗೆ ಕಾರಣವಾಗಿತ್ತು. ಅವನು ನನ್ನನ್ನು ಬೈದಾಗಲೆಲ್ಲಾ ನಾನೂ ಈ ಕ್ರಿಯೆಗೆ ಒಳಗಾಗಿ ಈ ಮೂರ್ಖನ ಬಾಯಿ ಮುಚ್ಚಿಸಬೇಕು ಎಂದು ಅನಿಸುತ್ತಿತ್ತು.ಆತನಿಗೆ ಜಮಲ್ ಎಂಬ ಮಗನಿದ್ದ. ಆತ ಕೂಡ ನಮ್ಮ ಜೊತೆ ಬೆಳೆದ ಹಿರಿಯ ಹುಡುಗನಾದರೂ ಆತ ನನಗಿಂತ ಹೆಚ್ಚಾಗಿ  ಅಕ್ಕ ಅಮನ್ಳ ಮೇಲೆ  ಆಸಕ್ತಿ ತೋರುತ್ತಿದ್ದ. ನಾನಿನ್ನು ಅನಿಷ್ಟ ಪದ್ಧತಿಗೆ ಒಳಗಾಗದೆ ಇರುವುದರಿಂದ ಅವನ ಅಪ್ಪನಂತೆ ಆತನ ದೃಷ್ಟಿಯಲ್ಲೂ ನಾನು ಬಹಿಷ್ಕೃತಳಾಗಿದ್ದೆ. ಇಂತಹ ಸಂದರ್ಭದಲ್ಲಿ ನನಗೆ ಈ ಕ್ರಿಯೆಗೆ ಒಳಗಾಗಬೇಕೆಂದು ಅನಿಸುತ್ತಿತ್ತು. ನನಗಾಗ ಐದು ವರ್ಷವಾಗಿತ್ತು ಒಮ್ಮೆ ಅಮ್ಮನೊಂದಿಗೆ ಮಾತನಾಡುತ್ತಾ ಆ ಮುದುಕಿಯನ್ನು ಕರೆಸಿ ನನಗೂ ಮಾಡಿಸುವಂತೆ ಒತ್ತಾಯಿಸಿದ್ದೆ. ಒಂದು ದಿನ ಅಪ್ಪ ಆ ಮುದುಕಿಯನ್ನು ಕರೆದುಕೊಂಡು  ಮನೆಗೆ ಬಂದ. ಆ ರಾತ್ರಿ ಅಮ್ಮ ನನಗೆ ಹೆಚ್ಚು ನೀರು ಅಥವಾ ಹಾಲು ಕುಡಿಯದಂತೆ ಎಚ್ಚರಿಸಿದಳು. ಆ ಸಂದರ್ಭದಲ್ಲಿ ಅಮ್ಮ ಈ ಮಾತನ್ನು ಯಾಕೆ ಹೇಳುತ್ತಿದ್ದಾಳೆ ಎಂದು ನನಗೆ ಅರ್ಥವಾಗಲಿಲ್ಲ. ಈ ಕುರಿತು  ಆಕೆಯನ್ನು ನಾನು ಪ್ರಶ್ನಿಸಲಿಲ್ಲ.ಆ ರಾತ್ರಿ ನನಗೆ ವಿಶೇಷ ಭೋಜನವನ್ನು ಮಾಡಿ ಹೊಟ್ಟೆ ತುಂಬಾ ಬಡಿಸಲಾಯಿತು. ರಾತ್ರಿ ಮಲಗುವಾಗ ನಸುಕಿನ ಜಾವ ಎಬ್ಬಿಸುತ್ತೇನೆ ಬೇಗ ಮಲಗು ಎಂದು ಅಮ್ಮ ಹೇಳಿದಾಗ ಅತಂಕದೊಂದಿಗೆ ನಿದ್ರೆಗೆ ಶರಣಾದೆ. ಬೆಳಿಗ್ಗೆ ಕಾಲುಗಳ ಬಳಿ ಶಬ್ಧವಾದಂತೆ ಭಾಸವಾಗಿ ಎಚ್ಚರವಾದಾಗ ಅಮ್ಮ ಎದುರಿಗೆ ನಿಂತಿದ್ದಳು. ತಕ್ಷಣ ನನಗೆ ಆ ಕ್ಷಣ ಸಮೀಸುತ್ತಿದೆ ಎಂದು ಮನವರಿಕೆಯಾಯಿತು.

ಸಾಮಾನ್ಯವಾಗಿ ಹೆಣ್ಣು ಮಕ್ಕಳಿಗೆ ಈ ಕ್ರಿಯೆಯನ್ನು ಬೆಳಗಿನ ಜಾವ ಮಾಡಿ ಮುಗಿಸುವುದು ಸಂಪ್ರದಾಯ. ಏಕೆಂದೆರೆ ಗುಪ್ತಾಂಗದ ವಿಚ್ಛೇದನ ಕ್ರಿಯೆ ನಡೆಯುವಾಗ ಚೀರಾಟ ಅಳು ಇತರರಿಗೆ ಕೇಳಬಾರದು ಎಂದು ಎಲ್ಲರೂ ನಿದ್ರೆಗೆ ಜಾರಿರುವಾಗ ಇದನ್ನು ಮಾಡಿ ಮುಗಿಸುತ್ತಿದ್ದರು. ಅಮ್ಮ ನನ್ನನ್ನು ಕೈ ಹಿಡಿದು ಕರೆದುಕೊಂಡು ಹೊರಾಟಗ ಇನ್ನೂ ಕತ್ತಲು ಆವರಿಸಿತ್ತು. ನಿದ್ದೆಗಣ್ಣಿನಲ್ಲಿ ಕಂಬಳಿ ಹೊದ್ದು ಅಮ್ಮನ ಜೊತೆ ಸಾಗಿದ್ದೆ. ಮನೆಯಿಂದ ಅನತಿ ದೂರದ ಬಯಲಿನಲ್ಲಿ ತಣ್ಣನೆಯ ನೆಲದ ಮೇಲೆ ಅಮ್ಮ ನನ್ನನ್ನು ಕೂರಿಸಿದಾಗ ಎದುರಿಗೆ ಯಾರೂ ಕಾಣುತ್ತಿರಲಿಲ್ಲ. ಆದರೆ, ನನ್ನ ಬಲಭಾಗದಲ್ಲಿ ಆ ಮಾಟಗಾತಿ ಮುದುಕಿ ಆಗಲೇ ಬಂದು ನಿಂತ್ತಿದ್ದಳು. ಬಾ ಇಲ್ಲಿ ಕುಳಿತುಕೊ ಎಂದು ಆದೇಶಿಸಿದಳು. ಹತ್ತಿರ ಬಂದು ಹೇಗಿದ್ದೀಯಾ? ಎಂದು ಪ್ರಶ್ನಿಸಿ ನನ್ನ ಉತ್ತರಕ್ಕೆ ಕಾಯದೆ, ಈಗ ನಡೆಯವ ಕಾರ್ಯದಲ್ಲಿ ಸ್ವಲ್ಪ ನೋವಾಗುತ್ತದೆ. ತಡೆದುಕೊಳ್ಳಬೇಕು, ನೀನು ಧೈರ್ಯವಂತ ಹುಡುಗಿ ಅಲ್ಲವೆ? ಎಂದು ಪುಸಲಾಯಿಸಿದಳು.ಅಮ್ಮ ಯಾವುದೊ ಒಂದು ಗಿಡದ  ಬೇರಿನ ತುಂಡೊಂದನ್ನು ತಂದು ನನ್ನ ಬಾಯಿಗಿರಿಸಿ ಹಲ್ಲಿನಿಂದ ಕಚ್ಚಿ ಹಿಡಿಯುವಂತೆ ಹೇಳಿದಳು. ನನ್ನ ಬೆನ್ನ ಹಿಂದೆ ಕುಳಿತು ನನ್ನ ತಲೆಯನ್ನು ಹಿಂದಕ್ಕೆ ಬಾಗಿಸಿ ತನ್ನ ಎದೆಗೆ ಒತ್ತಿ ಹಿಡಿದುಕೊಂಡಳು. ಅವಳ ಎರಡು ತೊಡೆಗಳು ನನ್ನ ಶರೀರವನ್ನು ಮಿಸುಕಾಡದಂತೆ ಬಂಧಿಸಿದ್ದವು.ಆ ಕ್ಷಣಕ್ಕೆ ಅಕ್ಕ ಅಮನ್ ಅನುಭವಿಸಿದ್ದ ಆ ದಿನದ ಹಿಂಸೆ ಮತ್ತು ಯಾತನೆಯ ಮುಖ ನೆನಪಾಯಿತು. ಇದು ನನ್ನ ದೇಹಕ್ಕೆ ಘಾಸಿ ಮಾಡುವಂತಹ ಕ್ರಿಯೆ ಎಂದು ಊಹಿಸಿಕೊಳ್ಳತ್ತಾ ನೋವು ನುಂಗವ ದಿಶೆಯಲ್ಲಿ ಬಾಯಲ್ಲಿದ್ದ ಬೇರಿನ ತುಂಡನ್ನು ಹಲ್ಲಿನಲ್ಲಿ ಬಲವಾಗಿ ಕಚ್ಚಿ ಹಿಡಿದುಕೊಂಡೆ.

ನನ್ನನ್ನು  ಹಿಡಿದು ಕೊಂಡಿದ್ದ ಅಮ್ಮ ತನ್ನ ತೊಡೆಗಳನ್ನು ಸಡಿಲಿಸಿ ಮಗು ನೀನು ಜಾಣೆಯಲ್ಲವ?, ನಾನು ನಿನ್ನ ಪಕ್ಕದಲ್ಲಿ ಇರುತ್ತೇನೆ ದೈರ್ಯದಿಂದ ಮಾಡಿಸಿಕೊ ಎಂದು ಆತ್ಮ ವಿಶ್ವಾಸ ತುಂಬ ತೊಡಗಿದಳುನಾನು ನನ್ನ ಕಾಲುಗಳನ್ನು ಅಗಲಿಸಿ ಸಿದ್ಧವಾಗುತ್ತಿದ್ದಂತೆ ಮುಂದೆ ಬಂದು ಕುಳಿತ  ಮುದುಕಿ ತನ್ನ ಕೆಲಸಕ್ಕೆ ಸಿದ್ದವಾಗತೊಡಗಿದಳು. ಸಾಧಾರಣ ಸೋಮಾಲಿಯ ಹೆಂಗಸಿನಂತೆ ಕಾಣುತ್ತಿದ್ದ ಆಕೆ ಬಿಳಿಯ ಬಣ್ಣದ ಸೀರೆ ತೊಟ್ಟು , ಹಲವು ಬಣ್ಣಗಳಿಂದ ಕೂಡಿದ್ದ ವಸ್ತ್ರವೊಂದನ್ನು ತನ್ನ ತಲೆಗೆ ಸುತ್ತಿಕೊಂಡಿದ್ದಳು. ಮುಖದಲ್ಲಿ ಯಾವ ಭಾವನೆಯೂ ವ್ಯಕ್ತವಾಗದ ಅವಳ ಕಣ್ಣುಗಳನ್ನು ಒಮ್ಮೆ ದಿಟ್ಟಿಸಿ ನೋಡಿದೆ. ಏಕೆಂದರೇ ಅವಳು ನನ್ನ ಗುಪ್ತಾಂಗದ ಯಾವ ಯಾವ ಭಾಗಗಳನ್ನು  ಕತ್ತರಿಸುತ್ತಾಳೊ ಎಂಬ ಅಳುಕಿತ್ತು ಹಾಗಾಗಿ ಅವಳು ತನ್ನ ಕೈ ಚೀಲದಿಂದ ತೆಗೆಯುತಿದ್ದ ಒಂದೊಂದೇ ವಸ್ತುಗಳನ್ನು ಕುತೂಹಲದಿಂದ ಗಮನಿಸುತ್ತಿದ್ದೆ. ದೊಡ್ಡದಾದ ಚಾಕುವಿನಿಂದ ನನ್ನ ಗುಪ್ತಾಂಗ ಕತ್ತರಿಸುತ್ತಾಳೆ ಎಂದು ನಾನು ಊಹಿಸಿಕೊಂಡಿದ್ದೆ. ಆದರೆ ಅವಳು ಕೈ ಚೀಲದೊಳಕ್ಕೆ ತನ್ನ ಉದ್ದನೆಯ ಬೆರಳುಗಳನ್ನು ತೂರಿಸಿ ಒಂದು ಹಳೆಯದಾದ ಬ್ಲೇಡ್ ಹೊರತೆಗೆದಳು. ಆಗ ತಾನೆ ಉದಯಿಸುತ್ತಿದ್ದ ಸೂರ್ಯನ ಹೊಂಬೆಳಕಿನಲ್ಲಿ ಅದರ ಎರಡು ಅಲಗುಗಳನ್ನು ಪರೀಕ್ಷಿಸತೊಡಗಿದಳು. ಒಣಗಿದ ರಕ್ತದ ಕಲೆ ಅಂಟುಕೊಂಡಿದ್ದ ಆ ಬ್ಲೇಡನ್ನು ಆಕೆ ತನ್ನ ಬಟ್ಟೆಗೆ ಒರೆಸಿಕೊಳ್ಳುತ್ತಾ ಸಿದ್ಧವಾಗತೊಡಗಿದಳು ಅಷ್ಟರಲ್ಲಿ ನನ್ನ ಕಣ್ಣಿಗೆ ಕತ್ತಲು ಕವಿದಂತಾಯಿತು.  ಅಮ್ಮ ತನ್ನ ಕರವಸ್ತ್ರದಿಂದ ನನ್ನ ಮುಖ ಮುಚ್ಚಿದ್ದಳು.ಯೋನಿ ವಿಚ್ಛೇಧನ ಕ್ರಿಯೆಗೆ ಶರೀರವನ್ನು ಒಡ್ಡಿ ಮಾನಸಿಕವಾಗಿ ಸಿದ್ಧಳಾಗಿ ಕುಳಿತಿದ್ದ ನನಗೆ ಆ ಮುದುಕಿ ನನ್ನ ಗುಪ್ತಾಂಗದ ಕೆಲವು ಭಾಗಗಳನ್ನು ಕತ್ತರಿಸಿ ಹಾಕುತ್ತಿರುವುದು ಅನುಭವವಾಗುತಿತ್ತು.

ಇಡೀ ದೇಹದ ಒಂದೊಂದು ಅಂಗವನ್ನು ನನ್ನಿಂದ ಬೇರ್ಪಡಿಸಲಾಗುತ್ತಿದೆ ಎಂದು ಭಾಸವಾಗುತ್ತಿತ್ತು. ನೋವು ನುಂಗಲು ಬೇರಿನ ತುಂಡನ್ನು ಹಲ್ಲಿನಲ್ಲಿ ಇನ್ನಷ್ಟು ಬಲವಾಗಿ ಕಚ್ಚಿ ಹಿಡಿದೆ. ಅಮ್ಮನಿಗೆ ನಾನು ಹೆಮ್ಮೆಯ ಮಗಳು ಎಂದು ತೋರಿಸಿಕೊಳ್ಳಲು ನೋವಿನ ಚೀತ್ಕಾರ ಬಾಯಿಂದ ಹೊರ ಬರದಂತೆ ತಡೆ ಹಿಡಿದುಕೊಂಡಿದ್ದೆ. ಓ ದೇವರೆ ಇದು ಬೇಗ ಮುಗಿದು ಹೋಗಲಿ ಎಂದು ನೋವು ಕಣ್ಣೀರಿನ ನಡುವೆ ದೇವರನ್ನು ಪ್ರಾರ್ಥಿಸತೊಡಗಿದೆ. ಮುದುಕಿ ತನ್ನ ಕೆಲಸ ಮುಗಿಸಿ ಕರವಸ್ರದಿಂದ ಕೈ ಒರೆಸಿಕೊಳ್ಳುತ್ತಿರುವುದನ್ನು ನೋಡಿ ಅಗ್ನಿ ಪರೀಕ್ಷೆ ಮುಗಿಯಿತೆಂದು ನಿಟ್ಟುಸಿರು ಬಿಟ್ಟಿದ್ದೆ. ಆದರೆ, ಇದಕ್ಕಿಂತ ಇನ್ನೊಂದು ಭಯಾನಕ ಕೆಲಸ ನನಗೆ ಮುಂದೆ ಕಾದಿತ್ತು. ಅಮ್ಮ ಮುಖದ ಮೇಲಿನ ಕರವಸ್ತ್ರ ತೆಗೆದಾಗ ಕಣ್ಣು ಬಿಟ್ಟು ಮುದುಕಿಯತ್ತ ನೋಡಿದೆ. ಆಕೆ ತನ್ನ ಹಳೆಯದೊಂದು ಸೂಜಿಯನ್ನು ತೆಗೆದುಕೊಂಡು ಅದಕ್ಕೆ ದಾರ ಪೋಣಿಸಿಕೊಳ್ಳುತ್ತಿದ್ದಳು. ಅ ವೇಳೆಗಾಗಲೆ ನನ್ನ ತೊಡೆಗಳೆರೆಡೂ ನೋವಿಂದ ಮರಗಟ್ಟಿದಂತಾಗಿ ಕಂಪಿಸುತ್ತಿದ್ದವು. ಅಮ್ಮ ನನ್ನನ್ನು ಬಲವಾಗಿ ಹಿಡಿದುಕೊಳ್ಳುತ್ತಿದ್ದಂತೆ ಮುದುಕಿ ತಾನು ಕತ್ತರಿಸಿದ್ದ ಜಾಗದಲ್ಲಿ ಹೊಲಿಗೆ ಹಾಕತೊಡಗಿದಳು. ಯೋನಿಯ ಎರಡು ಭಾಗಗಳನ್ನು ಸೇರಿಸಿ, ಮೂತ್ರ ವಿಸರ್ಜಿಸಲು  ರಂಧ್ರದಷ್ಟು ಜಾಗ ಬಿಟ್ಟು ಹೊಲಿಗೆ ಹಾಕತೊಡಗಿದಳು. ನಾನು ಆ ನೋವನ್ನು ತಾಳಲಾರದೆ ಪ್ರಜ್ಞೆ ಕಳೆದುಕೊಂಡೆ.ನನಗೆ ಎಚ್ಚರವಾದಾಗ ನನ್ನ ತೊಡೆಗಳ ನಡುವೆ ಬಿಗಿಯಾಗಿ ಒಂದಿಷ್ಟು ಹಳೆಯ ಬಟ್ಟೆಯನ್ನು ತೂರಿಸಿ, ನಾನು ಕಾಲುಗಳನ್ನು ಅಗಲಿಸದಂತೆ ಕಾಲುಗಳಿಗೆ ಹಗ್ಗ ಬಿಗಿಯಲಾಗಿತ್ತು. ಆ ಬಯಲಿನಲ್ಲಿ ಅನಾಥ ಶವದಂತೆ ಬಿದ್ದಿದ್ದ ನಾನು ಕಣ್ಣು ಬಿಟ್ಟು ಸುತ್ತಲೂ ನೋಡಿದೆ.

ಸೂರ್ಯನ ಬಿಸಿಲು ನನ್ನ ಮುಖದ ಮೇಲೆ ರಾಚುತಿತ್ತು.  ನಾನು ಆ ಅನಿಷ್ಟ ಕ್ರಿಯೆಗೆ ಒಳಗಾದ ಸಂದರ್ಭದಲ್ಲಿ ಕುಳಿತ್ತಿದ್ದ ಕಲ್ಲು ರಕ್ತದಿಂದ ತೋಯ್ದು ಹೋಗಿತ್ತು. ಯಾವುದೋ ಪ್ರಾಣಿಯನ್ನು ಆಗ ತಾನೇ ಬಲಿ ಕೊಟ್ಟ ಸ್ಥಳದಂತೆ ಗೋಚರಿಸುತ್ತಿತ್ತು. ನನ್ನ ಗುಪ್ತಾಂಗದಿಂದ ಬೇರ್ಪಡಿಸಿದ್ದ ಮಾಂಸದ ತುಂಡುಗಳು ಅದೇ ಕಲ್ಲಿನ ಮೇಲೆ ಅನಾಥವಾಗಿ ಬಿದ್ದಿದ್ದವು. ಬೆಳಿಗ್ಗೆಯಿಂದ ಸಂಜೆಯವರೆಗೆ ಅರೆಪ್ರಜ್ಞಾವಸ್ಥೆಯಲ್ಲಿ ಮರದ ಕೊರಡಿನಂತೆ ಬಿದ್ದಿದ್ದ ನನ್ನನ್ನು ಮನೆಯಿಂದ ಬಂದ ಅಮ್ಮ ಮತ್ತು ಅಕ್ಕ ಅಮನ್ ಇಬ್ಬರೂ ಸೇರಿ ನಾನು ಮಲಗಿದ್ದ ಸ್ಥಳದಲ್ಲಿ ಗುಡಿಸಲನ್ನು ನಿರ್ಮಿಸಿ ಅದರೊಳಕ್ಕೆ ನನ್ನನ್ನು ಎಳೆದೊಯ್ದು ಮಲಗಿಸಿ ಹೋದರು. ನನಗೆ ಅ ನಿರ್ಜನ ಬಯಲಿನ ರಾತ್ರಿಯಲ್ಲಿ ಯಾವುದೇ ಕಾಡು ಪ್ರಾಣಿಯ ಭಯವಾಗಲಿ, ಅಥವಾ ಹಾವುಗಳ ಭಯವಾಗಲಿ ಕಾಡಲಿಲ್ಲ. ಏಕೆಂದರೆ, ಅವೆಲ್ಲವೆನ್ನು ಮೀರಿಸುವ ದೇಹದ ಗಾಯ ಮತ್ತು ಒಡಲಾಳದ ನೋವು ನನ್ನನ್ನು ಕಾಡುತ್ತಿತ್ತು.ಎರಡು ದಿನಗಳ ನಂತರ ನನ್ನನ್ನು ಮನೆಗೆ ಕರೆದೊಯ್ಯಲಾಯಿತು. ನಡೆದಾಡುವ ಸ್ಥಿತಿಯಲ್ಲಿ ಇರದ ನನಗೆ ಗುಪ್ತಾಂಗದ ಗಾಯ ಮಾಯುವುದರ ಬದಲಾಗಿ ಸೊಂಕಿನಿಂದಾಗಿ ಬಾತುಕೊಂಡಿತ್ತು. ಇದರ ಪರಿಣಾಮ ತೀವ್ರ ಜ್ವರದಿಂದ ಬಳಲುವಂತಾಯಿತು.   ಹಸಿವು, ನೀರಡಿಕೆ ನೋವು ಏಕ ಕಾಲಕ್ಕೆ ನನ್ನನ್ನು ಇರಿಯತೊಡಗಿದವು.

ಒಂದು ತಿಂಗಳ ನಂತರ ಗಾಯಗಳು ಮಾಯತೊಡಗಿದ ಮೇಲೆ ನಾನು ಚೇತರಿಸಿಕೊಂಡೆ ಆದರೆ ಮೊದಲಿನ ಹಾಗೆ ಮುಕ್ತವಾಗಿ ನಡೆದಾಡಲು ಸಾಧ್ಯವಾಗುತ್ತಿರಲಿಲ್ಲ. ಜಿಂಕೆ ಮರಿಯಂತೆ  ಕುಣಿದು ಕುಪ್ಪಳಿಸಿ, ಗಂಡು ಮಕ್ಕಳ ಹಾಗೆ ಬಂಡೆಗಳನ್ನು ಹತ್ತುವುದು, ಮರಗಳನ್ನು ಹತ್ತಿ ಇಳಿಯುವುದನ್ನು ನಾನು ಮಾಡುವಂತಿರಲಿಲ್ಲ. ಪ್ರತಿ ವಾರ ಅಮ್ಮ ನನ್ನ ಗುಪ್ತಾಂಗವನ್ನು ಪರೀಕ್ಷಿಸುತ್ತಿದ್ದಳು. ಈ ಅನಿಷ್ಟ ಪದ್ಧತಿಯ ಕ್ರಿಯೆಗೆ ಒಳಗಾಗಿ ನಾನು ನೋವು ಅನುಭಸಿದಕ್ಕಿಂತ ಹೆಚ್ಚಿನ ನೋವನ್ನು ನಂತರ ದಿನಗಳಲ್ಲಿ  ಅನುಭವಿಸಬೇಕಾಯಿತು. ಮೂತ್ರ ವಿಸರ್ಜನೆಯ ಸಮಯದಲ್ಲಿ ಯಾರೋ ನನ್ನ ಗುಪ್ತಾಂಗದ ಒಳ ಭಾಗಕ್ಕೆ ಆಸಿಡ್ ಸುರಿದು ಬಿಟ್ಟರೆನೋ ಎಂಬಂತೆ ಉರಿಯನ್ನು ಅನುಭವಿಸಬೇಕಾಗಿ ಬಂತು. ತಡೆದಿದ್ದ ಮೂತ್ರವನ್ನು ಹನಿ ಹನಿಯಾಗಿ ವಿಸರ್ಜಿಸಬೇಕಾಗಿತ್ತು. ಪ್ರತಿ ತಿಂಗಳ ಋತುಸ್ರಾವದ ವೇಳೆಯಲ್ಲೂ ಇಂತಹದ್ದೇ ನೋವಿನ ನರಕದಲ್ಲಿ ನಾನು ನರಳಬೇಕಾಯಿತು. ಇದು ಈ ಜಗತ್ತಿನಲ್ಲಿ ನಾನೊಬ್ಬಳು ಅನುಭವಿಸಿದ ನರಕಯಾತನೆಯ ಮಾತ್ರವೇನಲ್ಲ. ಆಫ್ರಿಕಾದ ಪುರುಷ ಜಗತ್ತು ಮಹಿಳಾ ಸಮುದಾಯಕ್ಕೆ ವಿಧಿಸಿದ ಅಮಾನುಷ ಕಟ್ಟುಪಾಡಿಗೆ ಒಳಗಾದ ಎಲ್ಲಾ ಮಹಿಳೆಯರೂ ಈ ನರಕದ ಬಾಗಿಲನ್ನು ಒಮ್ಮೆ ತಮ್ಮ ಬದುಕಿನಲ್ಲಿ  ದಾಟಿ ಬರುವುದು ಅನಿವಾರ್ಯವಾಗಿದೆ. ಇದರ ಹಿಂದೆ ಆಫ್ರಿಕಾದ ಮುಸ್ಲಿಂ ಬುಡಕಟ್ಟು ಜನಾಂಗದಲ್ಲಿ ಮಹಿಳೆಯರು ವಿವಾಹಕ್ಕೆ ಮುನ್ನ ಪರ ಪುರುಷರೊಂದಿಗೆ ಮಿಲನಗೊಳ್ಳದೆ ಪರಿಶುದ್ದರಾಗಿ ಇರಬೇಕೆಂಬ ವೈಯಕ್ತಿಕ ಸ್ವಾರ್ಥ ಕೂಡ ಅಡಗಿದೆ. ಯೋನಿ ವಿಚ್ಛೇಧನ ಕ್ರಿಯೆಗೆ ಒಳಗಾಗದೆ ಇದ್ದರೆ, ಅಥವಾ  ಗುಪ್ತಾಂಗಕ್ಕೆ ಹಾಕಿದ್ದ ಹೊಲಿಗೆ ಬಿಚ್ಚಿ ಹೋದರೆ, ಅಂತಹ ಹೆಣ್ಣು ಮಕ್ಕಳು ಸಮಾಜದ ದೃಷ್ಟಿಯಲ್ಲಿ ಅಪವಿತ್ರರು ಮತ್ತು ವ್ಯಭಿಚಾರಿಗಳು.ಈ ಕಾರಣಕ್ಕಾಗಿ ಆಫ್ರಿಕಾದಂತಹ ರಾಷ್ಟ್ರಗಳಲ್ಲಿ ಹೊರ ಜಗತ್ತಿಗೆ ಅನಾವರಣಗೊಳ್ಳದ ಇಂತಹ ಅಮಾನುಷ ಕೃತ್ಯದಿಂದಾಗಿ ಪ್ರತಿ ವರ್ಷ ಸಾವಿರಾರು ಬಾಲಕಿಯರು ಸಾವಿಗೆ ಬಲಿಯಾಗುತ್ತಿದ್ದಾರೆ.

ಈ ಅಮಾನುಷ ಕ್ರಿಯೆಗೆ ಬಳಸಲಾಗುವ ಹಳೆಯದಾದ ಬ್ಲೇಡು, ಮತ್ತು ತುಕ್ಕು ಹಿಡಿದ ಚಾಕು, ಕತ್ತರಿ ಇವುಗಳ ಬಳಕೆಯಿಂದಾಗಿ ಸೋಂಕು ತಗಲಿ, ಟೆಟಾನಸ್ ಕಾಯಿಲೆ ಇಲ್ಲವೆ, ತೀವ್ರವಾದ ರಕ್ತಸ್ರಾವದಿಂದ ಸಾವನ್ನಪ್ಪುತ್ತಿದ್ದಾರೆ. ಈ ರೀತಿ ಸಾವಿಗೀಡಾಗುವ ಹೆಣ್ಣು ಮಕ್ಕಳ ಶವಗಳನ್ನು ಯಾವ ಕುರುಹೂ ಸಿಗದಂತೆ ಮರಳುಗಾಡಿನ ನಿರ್ಜನ ಪ್ರದೇಶದಲ್ಲಿ ಹೂತು ಹಾಕಲಾಗುತ್ತದೆ. ಒಮ್ಮೊಮ್ಮೆ  ಊರಿಂದ ಊರಿಗೆ ಅಲೆಯುವ ಸಂದರ್ಭದಲ್ಲಿ  ನನ್ನ ಜೊತೆ ಆಡಿ ನಲಿದ ಹೆಣ್ಣು ಮಕ್ಕಳು ಮುಂದಿನ ವರ್ಷ ಅದೇ ಊರಿಗೆ ಹೋದಾಗ ಕಾಣುತ್ತಿರಲಿಲ್ಲ. ಇದಕ್ಕೆ ಕಾರಣವನ್ನು ಯಾರೂ ವಿವರಿಸುತ್ತಿರಲಿಲ್ಲ. ಒಂದು ದಿನ ಪರಿಚಿತ ವ್ಯಕ್ತಿಯೊಬ್ಬ ಮನೆಗೆ ಬಂದು ಅಮ್ಮನ ಜೊತೆ ಮಾತನಾಡುತ್ತಾ, ತನ್ನ ತಂಗಿ ಊತ ಮತ್ತು ರಕ್ತ ಸ್ರಾವದಿಂದ  ನರಳಿ ಮೃತ ಪಟ್ಟಳು ಎಂದು ವಿವರಿಸುತ್ತಿದ್ದಾಗ ನನಗೆ ಅರ್ಥವಾಗಿರಲಿಲ್ಲ. ನಾನೇ ಈ ಕುರುಡು ವ್ಯವಸ್ಥೆಗೆ ಬಲಿಪಶುವಾದ ನಂತರ ಎಲ್ಲವೂ ಅರ್ಥವಾಗತೊಡಗಿತು.  ಇಂತಹ ನರಕದ ನೋವಿನ ನದಿಯೊಂದರಲ್ಲಿ ಮಿಂದು ಜೀವಂತ ಎದ್ದು ಬಂದ ನಾನು ಅದೃಷ್ಟವಂತಳು ಎಂದು ಹಲವಾರು ಬಾರಿ ಸಮಾಧಾನ ಪಟ್ಟುಕೊಂಡಿದ್ದೇನೆ.ಆಫ್ರಿಕಾ ರಾಷ್ಟ್ರಗಳ ಮದುವೆ ಎಂಬ ಮಾರುಕಟ್ಟೆಯಲ್ಲಿ ವಧು ದಕ್ಷಿಣೆ ಜಾರಿಯಲ್ಲಿರುವುದರಿಂದ ಇಂತಹ ಅನಿಷ್ಟ ಕ್ರಿಯೆಗೆ ಒಳಪಟ್ಟ ಹೆಣ್ಣು ಮಕ್ಕಳಿಗೆ ಅತ್ಯಂತ ಹೆಚ್ಚು ಬೇಡಿಕೆ ಇದೆ. ಹಾಗಾಗಿ ಅಲ್ಲಿನ ಎಲ್ಲಾ ಹೆಣ್ಣು ಮಕ್ಕಳು ಅಪ್ಪಂದಿರ ಕಣ್ಣಿಗೆ ಕರುಳಿನ ಕುಡಿಗಳಂತೆ ಕಾಣುವ ಬದಲು  ಮಾರಾಟದ ಸರಕುಗಳಂತೆ ಕಾಣುತ್ತಾರೆ.

‍ಲೇಖಕರು avadhi

January 28, 2014

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

8 ಪ್ರತಿಕ್ರಿಯೆಗಳು

  1. Anonymous

    ಕನ್ನಡಿಗರಾದಂತಹ ನಾವು ಇಂತಹ ಪುಸ್ತಕಗಳನ್ನು ಓದಲೇಬೇಕು. ಪುಸ್ತಕ ಕೂಡ ಬಿಡುಗಡೆಯಾಗುತ್ತಿದೆ ದಯವಿಟ್ಟು ಕೊಂಡು ಓದಿ ಎಲ್ಲರೂ ಸಹ ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ ಬನ್ನಿ

    ಪ್ರತಿಕ್ರಿಯೆ
  2. Renuka Nidagundi

    ತುಂಬಾ ಹಿಂದೆ ಆಫ್ರಿಕಾದ ರೂಪದರ್ಶಿಯೊಬ್ಬಳ ಈ ಕತೆಯನ್ನು ಓದಿದ ನೆನಪಾಯಿತು. ಇದೀಗ ಜಗದೀಶ್ ಕೊಪ್ಪ ಅವರು ಮರುಭೂಮಿಯ ಹೂವನ್ನು ಕನ್ನಡಕ್ಕೆ ಕರೆತಂದಿರುವುದು ಹಾಗೂ ಇಂಥ ಅನಿಷ್ಟ ಪದ್ಧತಿಯನ್ನು ಪ್ರಜ್ಞಾವಂತ ಜಗತ್ತಿನಲ್ಲಿ ಊಹಿಸಿವುದೂ ಕಷ್ಟ. ಮೆಚ್ಚಿನ ಕೊಪ್ಪ ಸರ್ ಅವರಿಗೆ ಅಭಿನಂದನೆಗಳು. ಕಾರ್ಯಕ್ರಮ ಯಶಸ್ವಿಯಾಗಲಿ ..
    ವಂದನೆಗಳು
    ರೇಣುಕಾ ನಿಡಗುಂದಿ

    ಪ್ರತಿಕ್ರಿಯೆ
  3. mahantesh navalkal

    sir
    modale odidde , matte odode tlesuttidantaytu. anuvaada hege madidri sir, kannadakkondu aparoopada kruti a swamy I swamy mohana swamy gala havaliyalli ondu upkruta kruti

    ಪ್ರತಿಕ್ರಿಯೆ
  4. bharathi b v

    ಎದೆ ನಡುಗುತ್ತಿದೆ ಓದಿ ಮುಗಿಸಿದ ನಂತರವೂ … ಪುಸ್ತಕ ಬಿಡುಗಡೆಯ ದಿನ ಅದನ್ನು ಓದಲು ಶುರು ಮಾಡಬೇಕು

    ಪ್ರತಿಕ್ರಿಯೆ
  5. suma

    dear sir,
    i have read the original. it is extremely torturous even to read.. Your translation is so precise..and as simple as the original. Best wishes for the programme .
    regards, suma

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: