ಪಿ ಚಂದ್ರಿಕಾ ಕಾದಂಬರಿ ’ಚಿಟ್ಟಿ’ : ರಾಜ ಬಂದ ಹೆಂಡತಿಯೊಡನೆ…


ಕೃಷ್ಣಪ್ಪನ ಕಳ್ಳಂಗಡಿಯಿಂದ ಹೊರಗೆ ಬರುತ್ತಿದ್ದ ಕಲ್ಲವ್ವ ತಟ್ಟಾಡುತ್ತಿದ್ದಳು. ಈಚೆಗೆ ಅವಳು ಹಗಲುಹೊತ್ತೇ ಕುಡಿಯಲಿಕ್ಕೆ ಶುರುಮಾಡಿಕೊಂಡಿದ್ದಳು. ಊರಲ್ಲಿ ‘ಏನು ಕಲ್ಲವ್ವ?’ ಅಂತ ಕೇಳಿದರೆ ‘ಏನು ಮಾಡಲಿ ಮೈಲೇಲೆ ಇರೋ ಮುನೇಶ್ವರ ನನಗೆ ಸುಮ್ಮನೆ ಹಿಂಸೆ ಕೊಡ್ತಾನೆ ಅದನ್ನ ತಡಕೊಳ್ಳಲಾಗದೆ ಕುಡೀತೀನಿ’ ಎಂದು ಮಾತನ್ನು ಹಾರಿಸುತ್ತಿದ್ದಳಾದರೂ ಊರಲ್ಲಿ ಬೇರೆ ಮಾತೇ ಸರಿದಾಡುತ್ತಿತ್ತು.
ಚಿಟ್ಟಿ ಮತ್ತು ಭಾರತಿ ಸ್ಕೂಲಿಗೆ ಹೊರಡುವುದಕ್ಕೂ ಕಲ್ಲವ್ವ ಕಳ್ಳಂಗಡಿಯಿಂದ ಹೊರಗೆ ಬರುವುದಕ್ಕೂ ಸರಿಯಾಯಿತು. ಅವರಿಬ್ಬರನ್ನೂ ನೋಡಿದ ಕಲ್ಲವ್ವನಿಗೆ ಕೋಪ ಅದೆಲ್ಲಿತ್ತೋ ಗೊತ್ತಿಲ್ಲ  ‘ಆ ಹರಾಮಿ ಬಂದ್ರೆ ನಿಮ್ಮವ್ವ ಹುಡುಕ್ತಾ ಇದಾಳೆ ಅಂತ ಹೇಳಿ ಕಳುಸ್ರೇ. . . ಇನ್ನು ಆ ಭೈರ ಇದಾನಲ್ಲ ಇದೆಲ್ಲಾ ಅವಂದೆ ಕುತಂತ್ರ. ಇವತ್ತು ಇಬ್ಬರನ್ನೂ ಇಲ್ಲ ಅನ್ನಿಸದೇ ಇದ್ರೆ ನನ್ನ ಹೆಸ್ರು ಕಲ್ಲವ್ವನೇ ಅಲ್ಲ’. ಎಂದಿದ್ದಳು. ಅವಳ ಬಾಯಿಂದ ಕಳ್ಳಿನವಾಸನೆ ಗಪ್ಪೆಂದು ಬಡಿದು ಮೂಗು ಮುಚ್ಚಿಕೊಳ್ಳುವ ಹಾಗಾಯಿತು. ಕಲ್ಲವ್ವ ತನಗೆ ಯಾರ್ಯಾರು ಆಗಲ್ಲವೋ ಎಲ್ಲರನ್ನೂ ಬೈದುಕೊಂಡು ಹೋಗುತ್ತಿದ್ದುದನ್ನು ನೋಡುತ್ತಾ ನಿಂತರು ಭಾರತಿ ಚಿಟ್ಟಿ.
‘ಅಲ್ಲಕಣೇ ಈ ಕಲ್ಲವ್ವ ಯಾಕೆ ಹೀಗೇ? ಆರೋಗ್ಯನ ಮೇಲೆ ಉರಿದುಬೀಳ್ತಾಳೆ. ಇವಳೇನು ನಿಜವಾದ ತಾಯೀನೋ ಇಲ್ಲಾ ಮಲತಾಯೀನೋ’ ಎಂದಳು ಚಿಟ್ಟಿ. ಅದಕ್ಕೆ ಭಾರತಿ ‘ನಿಂಗೆ ಗೊತ್ತಾ ಈ ಕಲ್ಲವ್ವನಿಗೆ ಕುಡೀಲಿಕ್ಕೆ ಎಲ್ಲಿಂದ ದುಡ್ಡು ಬರ್ತಿದೆ?’ ಮೆಲ್ಲಗೆ ಅಂದಳು ಭಾರತಿ. ಚಿಟ್ಟಿ ಅಚ್ಚರಿಯಿಂದ ಕಣ್ಣರಳಿಸಿದಳು. ಕುಡಿಯುವುದಕ್ಕೂ ಆರೋಗ್ಯಾಳ ಮೇಲೆ ಉರಿದು ಬೀಳುವುದಕ್ಕೂ ಏನು ಸಂಬಂಧ? ‘ಅಮ್ಮ ಅಪ್ಪನಿಗೆ ಬೆಳಗ್ಗೆ ಇದೇ ವಿಷ್ಯ ಹೇಳ್ತಿದ್ದರು. ಈ ಕಲ್ಲವ್ವನಿಗೆ ಒಬ್ಬ ತಮ್ಮ ಇದ್ದಾನಂತೆ. ಅಂದ್ರೆ ಚಿಕ್ಕಪ್ಪನ ಮಗ. ಬಾಂಬೆನಲ್ಲೋ ಡೆಲ್ಲಿನಲ್ಲೋ. ಅವನು ಆರೋಗ್ಯಾಳನ್ನ ಮದುವೆ ಮಾಡಿಕೊಳ್ತೀನಿ ಅಂತಿದಾನಂತೆ. ಇದಕ್ಕೆ ಆರೋಗ್ಯಾ ಅವರ ಅಪ್ಪನಿಗೆ ಇಷ್ಟವಿಲ್ಲವಂತೆ’
‘ಯಾಕೆ? ‘
‘ಅವನು ತುಂಬಾ ಕೆಟ್ಟವನಂತೆ‘
ಜೋರಾಗಿ ನಕ್ಕಳು ಚಿಟ್ಟಿ. ಅವಳನ್ನೇ ನೋಡುತ್ತಿದ್ದ ಭಾರತಿಗೆ ಕೋಪ ಬಂತು. ‘ಯಾಕೆ ನಗ್ತಿದಿಯ’ ಕೇಳಿದಳು. ‘ಮತ್ತಿನ್ನೇನೇ ಇದಕ್ಕೆ ಯಾರಾದ್ರೂ ಹೀಗೆ ಕುಡೀತಾರಾ?’ ಎಂದಳು. ಭಾರತಿಗೆ ಅವಮಾನವಾಯಿತೋ ಅಥವಾ ನಿಜವನ್ನು ಹೇಳಬೇಕು ಎನ್ನುವ ತುಡಿತ ಶುರುವಾಯಿತೋ ಗೊತ್ತಿಲ್ಲ. ‘ನಿಜ ಕಣೆ ಅವನು ಈ ಕಲ್ಲವ್ವನಿಗೆ ಕೈತುಂಬಾ ಹಣ ಕೊಡ್ತಿದಾನಂತೆ. ಯಾವತ್ತೂ ದುಡ್ಡುನೋಡದ ಕಲ್ಲವ್ವನಿಗೆ ಈಗ ಕೈತುಂಬಾ ದುಡ್ಡಿದೆ. ಒಳ್ಳೆ ಬಟ್ಟೆ ಊಟ ನಿದ್ದೆ ಯಾವುದನ್ನೂ ಬಯಸದ ಅವಳು ಕೊನೆಗೂ ಮೊರೆ ಹೋಗಿದ್ದು ಮಾತ್ರ ಕಳ್ಳಿಗೆ. ಕೃಷ್ಣಪ್ಪನ ಅದೃಷ್ಟ ಚೆನ್ನಾಗಿದೆ ಅನ್ನಿಸುತ್ತೆ. ದುಡ್ಡನ್ನ ಅವನ ಕೈಗೆ ಕೊಟ್ಟೂ ತಿಂಗಳಿಗೆ ತಾನು ಎಷ್ಟು ಬೇಕಾದರೂ ಕುಡಿಯಬಹುದು ಎನ್ನುವ ಷರತ್ತನ್ನು ಹಾಕಿದಳಂತೆ. ಅಂದರೆ ಬಡ್ಡಿಯಾಗಿ ಕಳ್ಳು ಕುಡೀಬಹುದು. ಅವಳು ಯಾವಾಗ ಕೇಳಿದರೂ ಹಣ ವಾಪಾಸುಕೊಡಬೇಕು ಅಂತ ಒಪ್ಪಿಸಿದ್ದಾಳಂತೆ. ಪರಿಣಾಮ ಹಗಲೂ ಮೂರು ಹೊತ್ತು ಪರಮಾತ್ಮ ಅವಳ ಹೊಟ್ಟೆಯಲ್ಲಿ ಆಡುತ್ತಾ ಒಮ್ಮೊಮ್ಮೆ ಜಾಸ್ತಿಯಾಗಿ ಹೊರಗೆ ಕಕ್ಕುತ್ತಾ ಇಳಿದ ಅಮಲಿಗೆ ಪಶ್ಚಾತ್ತಾಪ ಪಡುತ್ತಾ ಕಳ್ಳಂಗಡಿಯಲ್ಲಿ ಹೆಚ್ಚುಹೊತ್ತು ಕಳೀತಿದಾಳೆ’.
ಭಾರತಿಯ ಜ್ಞಾನ ಅಗಾಧವಾದ್ದು ಎಂದು ಚಿಟ್ಟಿಗೆ ಅನ್ನಿಸಿದ್ದು ಆಗಲೇ. ‘ಅಲ್ಲ ಕಣೇ ಇಷ್ಟೆಲ್ಲಾ ನಿಂಗೆ ಹೇಗೆ ಗೊತ್ತಾಯ್ತು?’ ಕೇಳಿದಳು ಅಚ್ಚರಿಯಿಂದ. ‘ಕಣ್ಣುಬಿಟ್ಟು ನೋಡು ನಿಂಗೂ ಅರ್ಥಾ ಆಗುತ್ತೆ’ ಎಂದಳು ಭಾರತಿ. ಹಾಗಾದರೆ ತಾನು ಕಣ್ಣುಮುಚ್ಚಿಕೂತಿದ್ದೀನಾ? ಎಂಥಾ ಮಾತಾಡಿದಳು ಭಾರತಿ ಎಂದುಕೊಂಡಳು ಮನಸ್ಸಿನಲ್ಲಿ. ಭಾರತಿಯ ಕಥೆ ಇನ್ನೂ ಉದ್ದವಿತ್ತು. ಆ ಕಲ್ಲವ್ವನ ತಮ್ಮನಿಗೆ ಇರಬಾರದ ಎಲ್ಲಾ ಚಟಗಳೂ ಇವೆಯಂತೆ. ಸ್ನಾನಕ್ಕೆ ಇಳಿದಾಗ ಅವನ ಚಿಚ್ಚಿದ್ದ ಮೈ ನೋಡಿ ಇಂಥವನಿಗೆ ನನ್ನ ಮಗಳನ್ನ ಕೊಡಲ್ಲ ಅಂತ ಭೈರ ನಿರ್ಧಾರ ಮಾಡಿದ್ದನಂತೆ. ಇದಕ್ಕಾಗಿ ಮನೆಯಲ್ಲಿ ಜಗಳ ಆಗಿತ್ತಂತೆ.
ಈಗ ಆರೋಗ್ಯಾ ಆ ಎಡವಟ್ಟನ್ನ ಮದುವೆ ಆಗ್ತಾಳಾ? ಅವಳ ಮನಸ್ಸಿನ ಪ್ರಶ್ನೆಗೆ ಉತ್ತರ ಎಂಬಂತೆ ಭಾರತಿ ಮಾತಾಡುತ್ತಲೇ ಇದ್ದಳು. ಬರೀ ಕುಡಿತಕ್ಕೋಸ್ಕರ ಮಗಳನ್ನು ಕೊಡೋಕ್ಕೆ ಒಪ್ಪಿರುವ ಕಲ್ಲವ್ವನ ಬಗ್ಗೆ ಚಿಟ್ಟಿಗೆ ಬೇಸರವಾಯಿತು. ಅಷ್ಟಕ್ಕೂ ಆರೋಗ್ಯನಿಗೆ ಇಷ್ಟು ಬೇಗ ಮದುವೆ ಯಾಕೆ? ಅವಳು ಓದಬೇಡವಾ? ಚಿಟ್ಟಿಯ ಪ್ರಶ್ನೆಗಳಿಗೆ ಉತ್ತರ ಹೇಳಬೇಕಿರುವ ಆರೋಗ್ಯ, ಅಪ್ಪನ ಸಮೇತ ಮಾಯವಾಗಿದ್ದಳು. ಎಲ್ಲಿಹೋದಳು? ಏನು ಮಾಡಿದಳು ಎನ್ನುವುದು ಗೊತ್ತಾಗಲಿಲ್ಲ. ಕಲ್ಲವ್ವ ಮಾತ್ರಾ ಊರವರ ಎದುರು ‘ನನ್ನ ಮಗಳನ್ನು ಎಲ್ಲಿ ಮಾರೋಕ್ಕೆ ತಗೊಂಡು ಹೋದನೋ ಹಾಳಾದೋನು’ ಎಂದು ಕೋಪ, ಆವೇಶಭರಿತ ಮಾತುಗಳಿಂದ ಗಂಡನನ್ನು ಬೈಯ್ಯತೊಡಗಿದ್ದಳು. ‘ಅಲ್ಲಮ್ಮ ಮಗಳು ಇಬ್ಬರಿಗೂ ಸೇರಿದವಳುತಾನೇ? ಇಬ್ಬರೂ ಕೂತು ಬಗೆಹರಿಸಿಕೊಳ್ಳಬಹುದಿತ್ತಲ್ಲ?’ ಎಂದು ಜನ ಸಮಾಧಾನ ಮಾಡಲಿಕ್ಕೆ ನೋಡಿದರೆ ಕಲ್ಲವ್ವ ರೇಗುತ್ತಿದ್ದಳು. ‘ಇಬ್ಬರಿಗೂ ಹೇಗೆ ಸೇರ್ತಾಳೆ ಹೆತ್ತು, ಹೊತ್ತವಳು ನಾನು. ನಿರ್ಧಾರ ನನ್ನದು ಅಲ್ವಾ’ ಎನ್ನುತ್ತಿದ್ದಳು.
ಪರೀಕ್ಷೆ ಹತ್ತಿರ ಬರುತ್ತಿದ್ದ ಹಾಗೇ ‘ಓದಿಕೋ ಮಿಕ್ಕೆಲ್ಲಾ ಯೋಚನೆಗಳನ್ನೂ ಪಕ್ಕಕ್ಕಿಡು’ ಎಂದು ಅಮ್ಮ ಹೇಳುತ್ತಿದ್ದಳು. ಈಚೆಗೆ ಸೀನು ತುಂಬಾ ಕಾಟಕೊಡಲಿಕ್ಕೆ ಶುರು ಮಾಡಿದ್ದ. ‘ನಾನೂ ನಿನ್ನಪುಸ್ತಕ ಓದ್ತೀನಿ’ ಎನ್ನುತ್ತಾ ಬಂದವನೇ ಪುಸ್ತಕವನ್ನು ಹರಿದುಬಿಡುತ್ತಿದ್ದ. ಹಾಗೇ ಹರಿದದ್ದನ್ನು ಹೇಳದೆ ಉಂಡೆಗಟ್ಟಿ ಬ್ಯಾಗಲ್ಲಿ ಹಾಗೇ ತುರುಕಿಟ್ಟುಬಿಡುತ್ತಿದ್ದ. ಮೇಷ್ಟ್ರು ನೋಟ್ಸನ್ನು ಕೇಳಿದಾಗ ತೆಗೆದು ನೋಡಿದರೆ ಉಂಡೆಗಟ್ಟಿದ್ದ ಹಾಳೆಗಳು ಅವಳ ಕಣ್ಣಲ್ಲಿ ನೀರನ್ನು ತರಿಸುತ್ತಿದ್ದವು. ಅಮ್ಮನ ಹತ್ತಿರ ಹೀಗೆ ಮಾಡ್ತಿದಾನೆ ಅಂತ ಹೇಳಿದರೆ ‘ಅವನು ಮಗು ಸರಿಯಾಗಿಟ್ಟುಕೊಳ್ಳಬೇಕಾದ್ದು ನಿನ್ನ ಜವಾಬ್ದಾರಿತಾನೇ?’ ಎಂದು ಚಿಟ್ಟಿಗೇ ಬುದ್ದಿ ಹೇಳುತ್ತಿದ್ದಳು. ‘ಇನ್ನೊಂದು ಸಲ ನನ್ನ ನೋಟ್ಸನ್ನು ಮುಟ್ಟಿದ್ರೆ ನಿನ್ನನ್ನು ಸುಮ್ಮನೆ ಬಿಡಲ್ಲ’ ಅಂತ ಹೆದರಿಸಿದರೆ; ಅವಳ ಜುಟ್ಟನ್ನು ಹಿಡಿದು ಬಗ್ಗಿಸಿ ಹೊಡೆದುಬಿಡುತ್ತಿದ್ದ. ‘ಅವನು ಹೊಡೆದರೆ ನೋವಾಗುತ್ತಾ? ಸುಮ್ಮನೆ ಇಲ್ಲದಿದ್ದನ್ನೆಲ್ಲಾ ಹೇಳಬೇಡ’ ಎಂದು ಅಮ್ಮ ಅಜ್ಜಿ ರೇಗುತ್ತಿದ್ದರು. ವಿಚಿತ್ರವೆಂದರೆ ಅವನು ಪುಟ್ಟಿಯ ತಂಟೆಗೆ ಹೋಗುತ್ತಿರಲಿಲ್ಲ. ‘ಅದೇನು ಜಾದೂ ಮಾಡಿದ್ದೀಯಾ?’ ಅಂತ ಕೇಳಿದ್ರೆ ‘ಅದೆಲ್ಲಾ ಹೇಳಲ್ಲ . . .’ ಎಂದು ನಕ್ಕು ಬಿಡುತ್ತಿದ್ದಳು ಪುಟ್ಟಿ.
ರಾತ್ರಿ ಮಾತ್ರ ಚಿಟ್ಟಿಗೆ ತುಂಬಾ ಹಿಂಸೆ ಅನ್ನಿಸುತ್ತಿತ್ತು. ಎಲ್ಲಾ ಮಲಗಿದ ಮೇಲೆ ಅವಳು ಓದುವ ಮೂಡಿಗೆ ಬರುತ್ತಿದ್ದಳು. ಅಷ್ಟರಲ್ಲಿ ಸೀನು ‘ನನಗೆ ಲೈಟಿದ್ದರೆ ನಿದ್ದೆ ಬರಲ್ಲ’ ಅಂತ ಹಟ ಹಿಡಿಯುತ್ತಿದ್ದ. ಬೆಳಗಿನ ಜಾವಕ್ಕೆ ಎದ್ದು ಓದುವಂತೆ ಅಮ್ಮ ಸಲಹೆ ನೀಡುತ್ತಿದ್ದಳು. ಅಪ್ಪ ಬೆಳಗಿನ ಜಾವಕ್ಕೆ ಓದಿದರೆ ತಲೆಗೆ ಹಿಡಿಯುತ್ತೆ ಅಂತ ಹೇಳುತ್ತಿದ್ದ. ಆದರೆ ಚಿಟ್ಟಿಯ ಸಮಸ್ಯೆ ಬೆಳಗ್ಗೆ ಏಳಲಿಕ್ಕಾಗದೇ ಇರುವುದು. ಕನಸನ್ನು ಕಾಣುತ್ತಾ ಜಗವನ್ನೇ ಮರೆತು ಸಿಹಿನಿದ್ರೆಯಲ್ಲಿ ಮುಳುಗುವುದನ್ನು ಅವಳು ಯಾವಾಗಲೂ ಇಷ್ಟಪಡುತ್ತಿದ್ದಳು ಬೆಳಗಿನ ಜಾವಕ್ಕೆ ಎದ್ದರೆ ಕಣ್ಣಿನ ನಿದ್ದೆ ಆರದೆ ತೂಕಡಿಕೆ ಅವಳನ್ನು ಆವರಿಸುತ್ತಿತ್ತು. ಕಣ್ಣಿಗೆ ನೀರನ್ನು ಹಾಕಿಕೊಂಡು ಅಮ್ಮ ಕೊಟ್ಟ ಕಾಫಿಯನ್ನು ಹೀರುವಾಗಲೇ ಅಜ್ಜಿ ಸ್ನಾನ ಮಾಡುತ್ತಾ ಯಥಾಪ್ರಕಾರ ತನ್ನ ಬೈಗುಳದ ಮಧ್ಯೆ ಮಂತ್ರಗಳನ್ನು ಸೇರಿಸುತ್ತಿರುತ್ತಿದ್ದಳು. ‘ಅಕ್ಬರನ ಮಗ ಔರಂಗಾಜೇಬ. . .’ ಎಂದು ಓದುವಾಗಲೇ ಅಜ್ಜಿಯ ಶ್ಲೋಕಗಳು ಕಿವಿಗೆ ಬೀಳುತ್ತಾ ಆಕಡೆಗೆ ಗಮನ ಹೋಗಿ ತಾನು ಓದಿದ್ದು ಅಕ್ಬರನ ಮಗ ಔರಂಗಾಜೇಬನಾ ಔರಂಗಾಜೇಬನ ಮಗ ಅಕ್ಬರನಾ ಎನ್ನುವ ಗೊಂದಲಕ್ಕೆ ಬೀಳುತ್ತಿದ್ದಳು.‘ಅಮ್ಮ ಇದು ನನ್ನ ಕೈಲಾಗಲ್ಲ. ಬೆಳಗ್ಗೆ ಏಳೋದು ಕಷ್ಟ, ರಾತ್ರೀನೇ ಓದ್ಕೋತೀನಿ ಕಣೇ’ ಅಂತ ಗೋಳಾಡಿದ್ರೆ ‘ಬೆಳ್ಯೋ ಹುಡ್ಗ ನಿದ್ದೆ ಇಲ್ಲಾಂದ್ರೆ ಹೇಗೆ? ಅವನ್ನೂ ನೋಡಬೇಕಲ್ವಾ’ ಎನ್ನುತ್ತಿದ್ದಳು. ಸೀನಿ ಮೇಲೆ ವಿಪರೀತ ಕೋಪಬಂದು ‘ಇವನೂ ಹುಡುಗಿ ಆಗ್ಬೇಕಿತ್ತು’ ಅಂತ ಅಂದುಕೊಳ್ಳುತ್ತಿದ್ದಳು.
ಪರೀಕ್ಷೆಯ ಭಯ ಚಿಟ್ಟಿಯ ಎದೆಯಲ್ಲಿ ತುಂಬಿತ್ತು. ಓದುಬೇರೆ ಸಾಗುತ್ತಿಲ್ಲ. ಯಾರೂ ತನ್ನನ್ನು ಅರ್ಥ ಮಾಡಿಕೊಳ್ತಾ ಇಲ್ವ ಎನ್ನುವ ಕೊರಗು ಅವಳನ್ನು ಆವರಿಸುತ್ತಿತ್ತು. ಅದೇ ಹೊತ್ತಿಗೆ  ಅವಳ ಅತ್ತೆಯ ಮಗ ರಾಜು ತನ್ನ ಹೆಂಡತಿಯ ಜೊತೆ ಬಂದ. ಅವನ ಮದುವೆಗೂ ಯಾರೂ ಹೋಗಿರಲಿಲ್ಲ. ಅತ್ತೆಯ ಸಾವಿನ ಜೊತೆಗೆ  ಆ ಮನೆಯ ಸಂಬಂಧ ಕಡಿದುಹೋಗಿತ್ತು. ಅಜ್ಜಿಗೆ ಹುಷಾರಿಲ್ಲ ಒಂದೇ ಸಮನೆ ಕೊರುಗ್ತಿದಾಳೆ ಅನ್ನೋ ಕಾರಣಕ್ಕೆ ಅಪ್ಪನೇ ಕಾಗದ ಬರೆದು ಕರೆಸಿದ್ದ. ಅವನ ಹೆಂಡತಿ ಸಂಧ್ಯ ಬೆಳ್ಳಗಿದ್ದರೂ ಕಳೆಯಾದ ಹೆಂಗಸಲ್ಲ. ಸದಾ ನಗುಮೊಗದ ಹುಡುಗಿಯಾದ್ದರಿಂದ ಎಲ್ಲರೂ ಆಕೆಯ ಕಡೆಗೆ ತಿರುಗಿ ನೋಡುವ ಹಾಗಾಗುತ್ತಿತ್ತು.
ಮದುವೆಯಾಯ್ತಲ್ಲ ಬಿಡು ಇನ್ನು ನನ್ನ ತಂಟೆಗೆ ಇವನು ಬರೊಲ್ಲ ಅಂತ ಭಾವಿಸಿ ಚಿಟ್ಟಿ ನಿರಾಳವಾಗಿ ಉಳಿದಳು. ಆದರೆ ರಾಜ ಮಾತ್ರ ತನ್ನ ಹೆಂಡತಿಯ ಜೊತೆ ‘ಅಮ್ಮ ಇದ್ದಾಗ ಇವಳನ್ನ ಮದುವೆ  ಮಾಡಿಕೋ ಅಂತ ಹಿಂಸೆ ಮಾಡುತ್ತಿದ್ದಳು’ ಎಂದುಬಿಟ್ಟಿದ್ದ. ಸಂಧ್ಯ ಚಿಟ್ಟಿಯ ಕಡೆಗೆ ನೋಡುತ್ತಾ ‘ಪಾಪ ಸಣ್ಣ ಹುಡುಗಿ’ ಎಂದು ಅನುಕಂಪ ವ್ಯಕ್ತಪಡಿಸಿದ್ದಳು. ಚಿಟ್ಟಿಗೆ ರಾಜನ ಮಾತಿನಿಂದ ಕೆರಳಿದ್ದ ಕೋಪ ಸಂಧ್ಯಾಳ ಮಾತಿನಿಂದ ತಣ್ಣಗಾಯಿತು. ರಾಜ ಯಾವುದಕ್ಕ್ಕೂ ಸಂಬಂಧವೇ ಇಲ್ಲ ಎನ್ನುವ ಹಾಗೇ ಉಳಿದುಬಿಟ್ಟಿದ್ದ. ‘ಚಿಟ್ಟೀ ನೀರು ತಗೊಂಡ್ ಬಾ’, ‘ಚಿಟ್ಟಿ ಕಾಲು ತುಳೀತೀಯಾ. . . ‘ಹೀಗೆ ಯಾವ ಯಾವ ಕಾರಣಕ್ಕೋ ಅವಳನ್ನು ಕರೆಯುತ್ತಿದ್ದ. ಅಮ್ಮನ ಮನಸ್ಸಿನಲ್ಲಿ ಯಾವ ಆತಂಕವೂ ಇಲ್ಲದಿದ್ದರೂ ಓದು ಹೀಗೆ ಹಾಳಾಗುತ್ತಲ್ಲ ಎನ್ನುವ ಕಾರಣಕ್ಕೆ ಅವಳನ್ನು ‘ನೀನು ಭಾರತಿಯ ಮನೆಗೆ ಹೋಗಿ ಓದಿಕೋ’ ಎಂದು ಕಳಿಸಿದ್ದಳು.
ರಾಜ ಈಗ ಮುಂಚಿನ ಹಾಗಿರಲಿಲ್ಲ ತಮಾಷಿ, ನಗು, ಚೇಷ್ಟೇ ಹಾಡುಗಳಿಂದ ಮನೆಯನ್ನು ತುಂಬಿದ್ದ. ಅಪ್ಪನಿಗೆ ಅವನನ್ನು ಹಾಗೇ ನೋಡಿ ಮನದಲ್ಲಿ ಮುಳ್ಳಾಡಿದ ಹಾಗಾಯಿತು. ಇವನನ್ನು ಮದುವೆಯಾಗಿದ್ದರೆ ಚಿಟ್ಟಿ ಚೆನ್ನಾಗಿರುತ್ತಿದ್ದಳೇನೋ ಎಂದುಕೊಂಡ. ಲಫಂಗನ ಹಾಗೆ ತಿರುಗಿಕೊಂಡಿದ್ದ ರಾಜ ಈಗ ಕೆಲಸಕ್ಕೆ ಸೇರಿ ಕೈತುಂಬಾ ದುಡಿಯುತಿದ್ದ. ಕೆಲಸದಲ್ಲಿನ ಅವನ ಶ್ರದ್ಧೆಯನ್ನು ನೋಡಿ ಅವನ ಬಾಸ್ ಮ್ಯಾನೇಜರ್ ಪೋಸ್ಟ್ ಕೊಟ್ಟಿದ್ದಾಗಿ ಹೇಳಿಕೊಂಡಿದ್ದ. ಅತ್ತೆ ಸಾಯುವ ಹೊತ್ತಲ್ಲಿ ‘ನಿನ್ನ ಮಗಳನ್ನು ನನ್ನ ಮಗನಿಗೆ ಕೊಡು’ ಅಂತ ಕೇಳಿದ್ದು ನೆನಪಾಗಿ ಕಣ್ಣನ್ನು ಹಸಿಯಾಗಿಸಿಕೊಂಡ. ಇಷ್ಟೆಲ್ಲಾ ಆದರೂ ಅಮ್ಮ ಮಾತ್ರ ಈ ವಿಷಯಕ್ಕೆ ಅಪ್ಪನ ಜೊತೆ ಸಹಮತ ವ್ಯಕ್ತಪಡಿಸಲಿಲ್ಲ.
ಆರೋಗ್ಯ ಇಲ್ಲದಿರೋದು ಎಲ್ಲರಿಗೂ ಒಂದು ಥರಾ ಅನ್ನಿಸಿದರೂ, ಪರೀಕ್ಷೆಯ ತಲ್ಲಣದ ನಡುವೆ ಯಾವುದೂ ಮುಖ್ಯವಾಗಲಿಲ್ಲ. ಓದು ಬರೀ ಇವೇ ಜಗತ್ತು ಎನ್ನುವ ಹಾಗಾಯಿತು. ‘ಇನ್ನು ಒಂದು ತಿಂಗಳೂ ಇಲ್ಲ ನಿಮಗೆ ಸೀರಿಯಸ್‌ನೆಸ್ಸೇ ಇಲ್ಲವಲ್ಲ’ ಅನ್ನೋ ಮಾತು ಕೇಳಿದ್ರೆ ಇನ್ನಷ್ಟು ಭಯ ಆವರಿಸುತ್ತಿತ್ತು. ಇಷ್ಟು ವರ್ಷ ಯಾವತ್ತೂ ಪರೀಕ್ಷೆ ಬರೆಯಲೇ ಇಲ್ಲವಾ ಯಾಕೇ ಇವತ್ತು ಈ ಭಯ? ಆದರೂ ಮನಸ್ಸು ಕೇಳಲಿಲ್ಲ. ಆದರೆ ಓದಿದ್ದು ಅರ್ಧಂಬಂರ್ಧ ನೆನಪಿನಲ್ಲಿ ಉಳಿದಾಗ ಮಾತ್ರಾ ಚಿಟ್ಟಿಗೆ ಅಳು ಬರುತ್ತಿತ್ತು. ಈ ಪರೀಕ್ಷೆಯನ್ನು ಮಾಡಿದವರ್ಯಾರು? ವಿಶ್ವೇಶ್ವರಯ್ಯ ಅಂಬೇಡ್ಕರ್ ಮೊದಲಾದವರೆಲ್ಲಾ ಮನೆಯಲ್ಲಿ ದೀಪಗಳಿಲ್ಲದೆ ಬೀದಿಯ ಲೈಟುಕಂಬದ ಬೆಳಕಲ್ಲಿ ಓದಿದರಲ್ಲವೇ? ಅ ಕಷ್ಟ ನನಗಿಲ್ಲವಲ್ಲ ಅಂತ ಸಮಾಧಾನ ಹೇಳಿಕೊಳ್ಳತೊಡಗಿದಳು. ಆದರೂ ಅವಳ ಆತಂಕ ಸ್ವಲ್ಪವೂ ಕಡಿಮೆಯಾಗಲಿಲ್ಲ. ಆ ಆತಂಕದಲ್ಲಿ ಅವಳಿಗೆ ಪರೀಕ್ಷೆ ಬರೆಯುವ ಹೊತ್ತಿಗೆ ತನ್ನ ಕೈ ಮುರಿದು ಹೋಗಬೇಕು ಅನ್ನಿಸತೊಡಗಿತು. ಆದರೆ ಅದು ಹೇಗೆ? ತಿಳಿಯದೆ ಮಂಕಾದಳು. ಓದಿದ್ದು ಮರೆಯುತ್ತಾ ಮರೆತಿದ್ದನ್ನು ಮತ್ತೆ ನೆನಪಿಸಿಕೊಳ್ಳುತ್ತಾ ಚಿಟ್ಟಿ ಹರಸಾಹಸಪಡತೊಡಗಿದಳು. ರಾತ್ರಿಯೆಲ್ಲಾ ಜೋರಾಗಿ ಓದಿಕೊಳ್ಳತೊಡಗಿದಳು. ‘ಅಯ್ಯೋ ಅದೇನ್ ಅಷ್ಟು ಜೋರಾಗಿ ಓದ್ತೀಯಾ? ಮನಸಲ್ಲೇ ಓದಿಕೊಂಡ್ರೆ ಚೆನ್ನಾಗಿ ತಲೆ ಹತ್ತುತ್ತೆ’ ಅಂತ ರಾಜ ಹೇಳಿದ. ‘ಅಯ್ಯೋ ಅದನ್ನ ನೀವ್ ಹೇಗೆ ಹೇಳ್ತೀರಾ? ಅದು ಅವರವರಿಗೆ ಸಂಬಂಧಿಸಿದ್ದು’ ಎಂದು ಸಂಧ್ಯಾ ‘ಚಿಟ್ಟಿ ನಿಂಗೆ ಅರ್ಥವಾಗದಿದ್ದರೆ ನನ್ನನ್ನು ಕೇಳು ನಾನು ಹೇಳಿಕೊಡ್ತೀನಿ’ ಎಂದಳು. ಎಲ್ಲರಿಗಿಂತ ಅವಳೇ ಜಗತ್ತಿನಲ್ಲಿ ಒಳ್ಳೆಯವಳೇನೋ ಅನ್ನಿಸಿ ಚಿಟ್ಟಿ ಅವಳನ್ನು ‘ಅಕ್ಕಾ’ ಅಂತ ಕರೆದಳು.
ಈ ನಡುವೆ ಟಾಮಿ ಕಳ್ಳ ಬೆಕ್ಕಿನ ಹಾಗೆ ಓಡಾಡಲಿಕ್ಕೆ ಶುರು ಮಾಡಿತ್ತು. ಕಯ್ಯ ಕುಯ್ಯ ಅನ್ನದೆ ಮೂಲೆಯಲ್ಲಿ ಗಂಭೀರವಾಗಿ ಏನನ್ನೋ ಯೋಚಿಸುತ್ತಾ ಕುಳಿತುಬಿಟ್ಟಿತ್ತು. ಅದರ ದಷ್ಟ ಪುಷ್ಟ ದೇಹ ವಾಲಿದ ಹಾಗಿತ್ತು. ಚಿಟ್ಟಿಗೆ ಗಾಬರಿಯಾಗಿ ಅದರ ಹತ್ತಿರ ಸಾಗಿದಳು. ಅವಳು ಹತ್ತಿರ ಬಂದರೆ ಸಂಭ್ರಮಿಸುತ್ತಿದ್ದ ಟಾಮಿ ಅವಳನ್ನು ನೋಡಿ ತನ್ನ ಹತ್ತಿರ ಬರಬೇಡ ಎನ್ನುವಂತೆ ‘ಗುರ್’ ಎಂದಿತು. ಅವಳಿಗೆ ಅಚ್ಚರಿ ಎನ್ನಿಸಿದ್ದು ಬೆಳಗ್ಗೆ ಕಲ್ಲವ್ವ ಅವಳ ಹತ್ತಿರ ಮಾತಾಡುವಾಗ ಅವಳ ಬಾಯಿಂದ ವಾಸನೆ ಬರುತ್ತಿತ್ತಲ್ಲ ಅದೇ ವಾಸನೆ ಟಾಮಿಯ ಬಾಯಿಂದಕೂಡಾ ಬರುತಿತ್ತು. ‘ಅರೆ ಇದೇನು?’ ಎಂದು ಅಚ್ಚರಿ, ಗಾಬರಿಯಿಂದ ಅಮ್ಮನನ್ನು ಕೂಗಿದಳು. ಅಮ್ಮ ಹತ್ತಿರ ಬಂದವಳೇ ಮೂಗು ಮುಚ್ಚಿಕೊಂಡು ‘ಛೇ ಮನುಷ್ಯರ ಹಾಗೇ ಇದೂ ಕೂಡಾ ಕೆಟ್ಟು ಹೋಯಿತಾ?’ ಎಂದು ರೇಗಿಕೊಂಡಳು. ‘ಇದು ಕುಡಿದು ಬಂದಿದೆ’ ಎಂದು ಅರ್ಥವಾಗುವ ಹೊತ್ತಿಗೆ ಚಿಟ್ಟಿಗೆ ಅಯೋಮಯವಾಗಿತ್ತು. ‘ಮನುಷ್ಯನ ಹಾಗೇ ಸುಖಕ್ಕೆ ಬೀಳೋದು ಪ್ರಾಣಿಗಳಿಗೂ ಅಭ್ಯಾಸ ಆಗಿಹೋಯ್ತು’ ಎಂದು ಅಮ್ಮ ಗೊಣಗುತ್ತಾ ‘ಏಯ್ ನಡಿಯಾಚೆ’ ಎಂದು ಟಾಮಿಯನ್ನು ಬಲವಂತದಿಂದ ಓಡಿಸಿದಳು. ಅದು ವಾಲಾಡುತ್ತಾ ಹೊರಟಿತು.
ಹಾಗೇ ಹೋಗುವಾಗ ಚಿಟ್ಟಿ ಮತ್ತು ಅಮ್ಮನನ್ನು ಒಮ್ಮೆ ದಿಟ್ಟಿಸಿತು. ಅದರ ಕಣ್ಣುಗಳಲ್ಲಿ ಒಂದು ಬಗೆಯ ನಿರ್ಧಾರವಿದ್ದಹಾಗಿತ್ತು. ಹಾಗೇ ರಾತ್ರಿ ಹೊರಟ ಟಾಮಿ ದಿನ ಕಳೆದರೂ ಪತ್ತೆಯಿಲ್ಲದೆ ಹೋಯಿತು. ‘ಚಿಟ್ಟಿ ಅದು ಬರುತ್ತೆ ಸುಮ್ಮನೆ ಅದಕ್ಕೋಸ್ಕರ ನೀನು ಟೈಂ ವೇಸ್ಟ್ ಮಾಡಿಕೊಳ್ಳಬೇಡ ಪರೀಕ್ಷೆ ಹತ್ತಿರದಲ್ಲಿದೆ. . .’ ಅಮ್ಮ ಹೇಳಿದ್ದರೂ ಅವಳಿಗೆ ಟಾಮಿ ಬರದೆ ಊಟ ಕೂಡಾ ಸೇರಲು ಸಾಧ್ಯವಿರಲಿಲ್ಲ. ಇನ್ನು ಓದೆಲ್ಲಿಯದು. ಹಗಲೂ ರಾತ್ರಿ ನಿದ್ದೆ ಕೆಡಿಸಿಕೊಂಡು, ಕಾಲುನೋವು ಬರೆಸಿಕೊಂಡು ಟಾಮಿಯನ್ನು ಹುಡುಕಿದ್ದೆ ಹುಡುಕಿದ್ದು. ಅದರ ಸುಳಿವು ಕೂಡಾ ಯಾರಿಗೂ ಸಿಗಲಿಲ್ಲ. ರಸ್ತೆ ದಾಟುವಾಗ ಆಕ್ಸಿಡೆಂಟ್ ಆಗಿ ಹೋಗಿರಬಹುದೇ? ಎಂದು ಭಯವಾಗಿ ತನಗೆ ಸಾಧ್ಯವಿದ್ದಷ್ಟು ದೂರ ಹೋಗಿ ಬಂದಳು. ಮನೆಯಲ್ಲಿ ಒಂದು ಥರದ ಶೂನ್ಯ ತುಂಬಿ ಹೋಯಿತು. ಆಗಲೇ ಎಲ್ಲರಿಗೂ ಟಾಮಿ ಮನೆಯಲ್ಲಿ ಎಂಥಾ ಸ್ಥಾನ ಗಳಿಸಿಕೊಂಡಿತ್ತು ಎಂದು ಅರಿವಿಗೆ ಬಂದಿದ್ದು. ಅಡುಗೆಮನೆಯಿಂದ ವಾಸನೆ ಬಂದರೆ ಸಾಕು ಎಲ್ಲೂ ಕದಲದೆ ಕಾಲ ಮೇಲೆ ಕಾಲನ್ನು ಹಾಕಿಕೊಂಡು ಕಾಯುತ್ತಾ ಕೂರುತ್ತಿತ್ತು. ಇಷ್ಟಾಗಿ ಕೂಡಾ ಅದಕ್ಕೆ ಏನನ್ನೂ ಹಾಕದೆ ತಮ್ಮ ಪಾಡಿಗೆ ತಾವಿದ್ದರೆ ತನ್ನ ಬೇಸರವನ್ನು ವಿಚಿತ್ರ ಧ್ವನಿ ಮಾಡುವುದರ ಮೂಲಕ ವ್ಯಕ್ತಪಡಿಸುತ್ತಿತ್ತು. ಇನ್ನೂ ಮುಂದೆ ಹೋಗಿ ತನ್ನ ಇರುವನ್ನು ಸಾರುವಂತೆ ಮಾಮೂಲಿಯಾಗಿ ಇಲಿಗಳು ಓಡಾಡುತ್ತಿದ್ದರೂ ದಿವ್ಯ ನಿರ್ಲಕ್ಷ್ಯದಿಂದಿರುತ್ತಿದ್ದ ಅದು, ತಾನು ಈ ಮನೆಯಲ್ಲಿ ಎಷ್ಟು ಕೆಲಸ ಮಾಡುತ್ತಿದ್ದೇನೆ ಎಂದು ತೋರಿಸಿಕೊಳ್ಳುವವನಂತೆ ಅದನ್ನು ಹಿಡಿಯಲಿಕ್ಕೆ ತಲ ಬಾಗಿಲಿನಿಂದ ಹಿತ್ತಲ ಬಾಗಿಲತನಕ ಓಡುತ್ತಿತ್ತು. ಬಹುಶಃ ಅದಕ್ಕ್ಕೆ ಇಲಿ ಮಾಂಸ ಇಷ್ಟವಾಗುತ್ತಿರಲಿಲ್ಲ ಅನ್ನಿಸುತ್ತೆ. ಅದನ್ನು ಸಾಯಿಸಿದರೂ ತಿನ್ನುತ್ತಿರಲಿಲ್ಲ.
ಇಂಥಾ ಟಾಮಿ ಮನೆಯಲ್ಲಿಲ್ಲವೆಂದರೆ ಮನೆ ಬಿಕೋ ಅನ್ನಿಸಲೇಬೇಕಲ್ಲವೇ?
ಅಜ್ಜಿ ಕೂಡಾ ‘ಹಾಳು ಮುಂಡೇದು ಎಲ್ಲಿ ಹೋಯ್ತೋ?’ ಎಂದು ಗೊಣಗುತ್ತಲೇ ಇದ್ದಳು. ರಾಜ ‘ಅಯ್ಯೋ ನಾಯಿಗೆ ಹೀಗೆ ಒದ್ದಾಡಬೇಕಾ? ಬಿಡಿ’ ಎಂದು ಸಮಾಧಾನ ಹೇಳಿದ. ಆದರೂ ಮನೆಯಲ್ಲಿ ಸೂತಕದ ಛಾಯೆ ತುಂಬಿತ್ತು. ನಿರಂತರವಾದ ಶೋಧ ಕಾರ್ಯದಿಂದ ಟಾಮಿಯ ಇರುವು ಪತ್ತೆಯಾಗಿತ್ತು. ಅದು ಕಳ್ಳಂಗಡಿ ಕೃಷ್ಣಪ್ಪನ ಮನೆಯಲ್ಲಿತ್ತು.
ಕಳ್ಳಂಗಡಿ ಕೃಶ್ಣಪ್ಪನಿಗೆ ಟಾಮಿಯ ಮೇಲೆ ಕಣ್ಣು ಬಿದ್ದಿತ್ತು. ಅದರ ಚಾಕೋಲೇಟ್ ಬಣ್ಣ, ದಷ್ಟಪುಷ್ಟವಾದ ದೇಹ, ಗತ್ತು, ನಿಲುವು ಎಲ್ಲದರಿಂದಲೂ ಟಾಮಿ ಹತ್ತು ನಾಯಿಗಳಲ್ಲಿ ಗುರುತಿಸುವ ಹಾಗಿತ್ತು. ಅದಕ್ಕಾಗೇ ಕೃಷ್ಣಪ್ಪ ದಿನಾ ಸಾರಾಯಿಯನ್ನು ಅದಕ್ಕೆ ಕುಡಿಸಿ  ತನ್ನ ಪರವಾಗಿರುವ ಹಾಗೇ ನೋಡಿಕೊಂಡಿದ್ದ. ದಿನಾ ಸಾರಾಯಿ ಕುಡಿಸುತ್ತಿದ್ದನಲ್ಲಾ ಆ ಕೃತಜ್ಞತೆಗೆ ಬಿದ್ದು ಒಂದು ದಿನ ಅವನು ಕರೆದ ತಕ್ಷಣ ಹೊರಟುಬಿಟ್ಟಿದೆ. ಅವನು ಅವನ ಮನೆಯಲ್ಲಿ ಕಟ್ಟಿ ಹಾಕಿಬಿಟ್ಟಿದ್ದಾನೆ. ಮೊದಲು ಖುಷಿಯಿಂದಲೇ ಇದ್ದ ಟಾಮಿ ನಂತರ ಅಳಲಿಕ್ಕೆ ಶುರು ಮಾಡಿದೆ. ಊಟ ಮುಟ್ಟಿಲ್ಲ. ಅಕ್ಕಪಕ್ಕದವರು ಬಿಟ್ಟುಬಿಡುವಂತೆ ಹೇಳಿದರೂ ಕೃಷ್ಣಪ್ಪ ಕೇಳಿಲ್ಲ. ಟಾಮಿ ರಾತ್ರಿಯೆಲ್ಲಾ ಅಳುತ್ತಾ ಕಳೆದಿದೆ. ‘ನಿಮ್ಮ ನಾಯಿ ಅಲ್ಲಿದೆ ರಾತ್ರಿಯೆಲ್ಲಾ ಅದರ ರೋಧನೆ ಕೇಳೋಕ್ಕಾಗ್ತಾ ಇಲ್ಲ’ ಅಂತ ಯಾರೋ ಹೇಳಿದ ತಕ್ಷಣ ಅಪ್ಪ ಉಮೇಶನನ್ನು ಕಳಿಸಿ, ಯಾರಿಗೂ ಗೊತ್ತಾಗದ ಹಾಗೇ ಅದನ್ನು ಬಿಡಿಸಿಕೊಂಡು ಬಂದ. ಓಡಿ ಬಂದ ಟಾಮಿಯ ಕಣ್ಣ ಎರಡೂ ಕಡೆ ಕಣ್ಣೀರು ಕರೆ ಕಟ್ಟಿನಿಂತಿತ್ತು. ಅಮ್ಮ ಪಾಪಾ ಹಸಿದುಕೊಂಡಿದೆ ಅಂತ ಅನ್ನ ತಂದಿಟ್ಟರೆ, ಅದನ್ನು ಮುಟ್ಟದೆ ಅದರ ಕಡೆಗೆ ಒಂದು ಸಲ ಅಮ್ಮನ ಕಡೆಗೆ ಒಂದು ಸಲ ನೋಡಿ ಅಳಲಿಕ್ಕೆ ಶುರುಮಾಡಿತು. ಅವತ್ತೇ ಚಿಟ್ಟಿ ಪ್ರಾಣಿಗಳು ಮನುಷ್ಯರ ಹಾಗೆ ಅಳೋದನ್ನ ನೋಡಿದ್ದು. ‘ಮೂಕಪ್ರಾಣಿಗಳು ಅಂತೀವಿ ಅವಕ್ಕೂ ಮನುಷ್ಯನಿಗಿಂತ ಹೆಚ್ಚಿನ ಅಂತಃಕರಣ ಇರುತ್ತೆ ‘ಎಂದಳು ಅಮ್ಮ.  ಚಿಟ್ಟಿ ಅಚ್ಚರಿಯಿಂದ ಟಾಮಿಯನ್ನೆ ನೋಡದಳು. ಸ್ವಲ್ಪ ಹೊತ್ತು ತನ್ನ ದುಃಖವನ್ನೆಲ್ಲಾ ಹೀಗೆ ತೋಡಿಕೊಂಡ ಅದು ಅನ್ನವನ್ನು ಗಬಗಬ ತಿಂದುಬಿಟ್ಟೀತು. ಸೀನು ಚಪ್ಪಾಳೆ ತಟ್ಟಿ ನಕ್ಕ. ಎಲ್ಲರ ಮನಸ್ಸೂ ಹಗುರವಾಗಿತ್ತು.
ಅಮ್ಮ ಹರಕೆ ಕಟ್ಟಿಕೊಂಡಿದ್ದಳು ಟಾಮಿ ಬಂದರೆ ಜನಾರ್ಧನ ಸ್ವಾಮಿಗೆ ಪೂಜೆ ಮಾಡಿಸ್ತೀನಿ ಅಂತ. ‘ಚಿಟ್ಟಿ ನೀನು ಭಾರತಿ ಮನೆಯಲ್ಲಿ ಓದ್ತಾ ಇರು ನಾವೆಲ್ಲಾ ದೇವಸ್ಥಾನಕ್ಕೆ ಹೋಗಿಬರ್ತೀವಿ’ ಎಂದಳು. ಹಾಗೇ ಆಗಲಿ ಎಂದು ಚಿಟ್ಟಿ ಹೊರಟಳು. ಸ್ವಲ್ಪ ದೂರ ಹೋದಮೇಲೆ ಯಾವುದೋ ಪುಸ್ತಕ ಮರೆತಿರೋದು ಗಮನಕ್ಕೆ ಬಂತು ಮತ್ತೆ ಮನೆಯ ಕಡೆಗೆ ಹೊರಟಳು.
ಅಜ್ಜಿಯನ್ನು ಹೊರತುಪಡಿಸಿ ಎಲ್ಲರೂ ದೇವಸ್ಥಾನಕ್ಕೆ ಹೋಗಿಬಿಟ್ಟಿದ್ದರು. ಚಿಟ್ಟಿ ಪುಸ್ತಕಗಳನ್ನು ತಡಕತೊಡಗಿದಳು. ಆಗಲೇ ಅವಳನ್ನು ಒಂದು ಕೈ ತಡೆದಿತ್ತು ತಿರುಗಿನೋಡಿದರೆ ರಾಜ. ‘ಅರೆ ನೀನು ದೇವಸ್ಥಾನಕ್ಕೆ ಹೋಗಲಿಲ್ಲವಾ?’ ಗಾಬರಿಯಿಂದ ಕೇಳಿದಳು ಚಿಟ್ಟಿ. ತಲೆ ಆಡಿಸುತ್ತ ‘ಇಲ್ಲ’ ಅಂದ ರಾಜ. ಚಿಟ್ಟಿಗೆ ಏನು ಮಾತಾಡಬೇಕು ತೋಚಲಿಲ್ಲ. ರಾಜ ಹತ್ತಿರ ಬರುತ್ತಾ ಏನೇನೋ ಮಾತಾಡಲಿಕ್ಕೆ ಶುರುಮಾಡ್ದ. ‘ಚಿಟ್ಟಿ ನೀನು ನನ್ನ ಮದುವೆ ಆಗದಿದ್ದೆ ಒಳ್ಳೆಯದಾಯಿತು. ನನಗೆ ತುಂಬಾ ಸುಖಕೊಡುವ ಹೆಂಡತಿ ಸಿಕ್ಕಿದ್ದಾಳೆ. ನಾನು ಹೇಳಿದ ಹಾಗೇ ಕೇಳುತ್ತಾಳೆ. ನಿನ್ನಿಂದ ನನಗೆ ಸುಖ ಸಿಗುತ್ತಿರಲಿಲ್ಲ ಖಂಡಿತಾ’ ಎಂದ. ಚಿಟ್ಟಿಗೆ ಏನು ಹೇಳಬೇಕು ಗೊತ್ತಾಗಲಿಲ್ಲ. ‘ಪಾಪ ನಿಂಗೆ ಸುಖ ಅಂದ್ರೆ ಏನೂಂತಾನೇ ಗೊತ್ತಿಲ್ಲ ನಿನ್ನ ಹತ್ರ ಇದನ್ನೆಲ್ಲಾ ಹೇಳ್ತಾ  ಇದೀನಲ್ಲಾ? ಹೋಗು ಓದ್ಕೋ ಹೋಗು’ ಎಂದ. ಅವನು ಹಾಗೇ ಅಂದಿದ್ದೇ ತಡ ಎನ್ನುವಂತೆ ಚಿಟ್ಟಿ ಅಲ್ಲಿಂದ ಓಡಿದಳು. ‘ನಿನ್ನಿಂದ ನನಗೆ ಸುಖ ಸಿಗುತ್ತಿರಲಿಲ್ಲ ಖಂಡಿತಾ’ ಎನ್ನುವ ಅವನ ಮಾತು ಅವಳ ತಲೆಯಲ್ಲಿ ಮತ್ತೆ ಮತ್ತೆ ಸುತ್ತತೊಡಗಿತು. ತನ್ನ ಕೈಲಿ ಸುಖ ಕೊಡೋಕ್ಕೆ ಯಾಕಾಗಲ್ಲ? ಇಷ್ಟಕ್ಕೂ ಆ ಸುಖ ಅನ್ನೋದು ಹೇಗಿರುತ್ತೆ? ಚಿಟ್ಟಿ ಅವತ್ತು ಒಂದೇ ಒಂದು ಅಕ್ಷರವನ್ನೂ ಓದಲಿಲ್ಲ.
(ಮುಂದುವರಿಯುವುದು…)

‍ಲೇಖಕರು avadhi

January 28, 2014

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: