ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬಾವಲಿ, ನಾನು ಇಬ್ಬರೆ..

ಬಾವಲಿ ಮತ್ತು ನಾನು

ಮಹಾಂತೇಶ ದೊಡ್ಡಮನಿ 

ಯಾರೂ ಬಾಡಿಗೆಗೆ ಇರದ
ಈ ನಿರ್ಜನ ಮೂರಂತಸ್ತಿನ ಕಟ್ಟಡದ ಮೇಲೆ
ನಾನಿರುವ ರೂಮು
ಕಬ್ಬಿಣದ ಗೇಟು ಸರಿಸಿ ಹತ್ತಿ ಇಳಿಯುವಾಗೆಲ್ಲ
ಸರ‍್ರಂತ ಕಪ್ಪು ನೆರಳೊಂದು ಹಾದು ಹೋಗುವುದು

ನಾನು ಕನ್ನಡಕ ಸರಿ ಮಾಡಿ ಕಣ್ಣುಜ್ಜಿಕೊಂಡು
ರೆಪ್ಪೆ ಅಡ್ಡ ಬಂದಿದ್ದಕ್ಕೆ ಏನೋ ಹೋದಂತೆನಿಸಿ
ಸುಮ್ಮನೆ ಕೆಳಗಿಳಿಯುವೆ

ಮೆಟ್ಟಿಲ ಮೇಲೆ ಹಿಕ್ಕೆ ಬಿದ್ದು ಗಲೀಜಾದ ಜಾಗ
ಹುಶಾರಾಗಿ ದಾಟಿ, ಆವಾಗಾವಾಗ ಪರ‍್ರಂತ ಹಾರಿಹೋಗುವ
ಪಾರಿವಾಳಗಳನ್ನ ಬೈದುಕೊಳ್ಳುವೆ
ಹೀಗೆಯೇ ಒಂದು ರಾತ್ರಿ ಗೇಟು ತೆಗೆದು ಲೈಟು ಹಾಕಿ
ಮೋಬೈಲ್ ನೋಡುತ್ತಲೇ ನೋಟ ಮೇಲೆ ಹೋಯಿತು
ಮೇಲಿನ ಕಂಬಿಗೆ ಕರ್ಚಿಫು ಇಳಿಬಿಟ್ಟಂತೆ
ಜೋತುಬಿದ್ದಿದೆ ಒಂದು ಕಪ್ಪು ಜೀವಿ !

ಮೈಯಲ್ಲ ಜುಂ ಅಂದು ಇಷ್ಟು ದಿನ ಕಾಣಿಸದೆ,
ರೆಪ್ಪೆಯನ್ನು ಬೈದುಕೊಂಡ ಮೂರ್ಖತನವೆಲ್ಲ ನೆನಪಾಗಿ
ಅವಮಾನದಿಂದು ಕುದಿದು
ಅದನು ಹೊಡೆದೋಡಿಸಲು ಕೈಗೆ ಏನು ಸಿಗದೆ
ಗೇಟು ಸಪ್ಪಳ ಮಾಡಿದೆ
ಎಂದಿನ ವೇಗದಲ್ಲೆ ಹಾರಿಹೋಯಿತು

ಕತ್ತಲಾದಂತೆಲ್ಲ ಗೇಟಿನ ಬಳಿ ಹಣಕುವುದು
ಅದ ಇರುವದನ್ನು ನೋಡಿ ಸಪ್ಪಳ ಮಾಡುವುದು
ಅದು ಹಾರುವುದು
ಹೀಗೆ ಕೆಲದಿನಗಳ ನಂತರ ಓಡಿಸುವುದ ಬಿಟ್ಟೆ
ಸದ್ದಾಗದಂತೆ ಇಣುಕಿ ನೋಡುವದ ಬಿಡಲಿಲ್ಲ
ಯಾರೂ ಇರದ ಈ ಕಟ್ಟಡದಲ್ಲಿ ಬಾವಲಿ ನಾನು ಇಬ್ಬರೆ
ಅದನು ಜೊತೆಗರನೆಂದುಕೊಳ್ಳುತ್ತಲೇ ಅತ್ತ ನೋಡುವೆನು
ಜೋತ ಬಾವಲಿ ಜಾಗದಲ್ಲಿ ನಾನೇ ಜೋತುಬಿದ್ದಂತೆನಿಸಿ
ಅತ್ತ ಸುಳಿಯದೆ ಬಾಗಿಲು ಹಾಕಿ ಕತ್ತಲಿಗೆ ಅಪ್ಪಿಕೊಳ್ಳುವೆನು

‍ಲೇಖಕರು avadhi

9 April, 2020

2 Comments

  1. T S SHRAVANA KUMARI

    ಮಾರ್ಮಿಕವಾಗಿದೆ.

  2. ಸಚಿನ್‌ಕುಮಾರ ಬ.ಹಿರೇಮಠ

    ಚೆಂದವಾಗಿ ಬರೆದಿದ್ದೀರಿ ಮಹಾಂತೇಶ…

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading