ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬಾಳಸಂಗಾತಿಯ ನೆನಪಿನಂಗಳದಲ್ಲಿ..

‘ಜಯಲಕ್ಷ್ಮೀ ಜೋಕಟ್ಟೆಯವರ ಕವಿತೆಗಳು’

ಸಂಪಾದಕರಾದ ಶ್ರೀನಿವಾಸ ಜೋಕಟ್ಟೆ ಅವರ ಮಾತು ಇಲ್ಲಿದೆ.

-ಶ್ರೀನಿವಾಸ ಜೋಕಟ್ಟೆ

ಮದುವೆಯೇ ಬೇಡ, ಒಂಟಿಯಾಗಿರೋಣ ಎಂದೊಮ್ಮೆ ಹುಚ್ಚುಮಾತುಗಳನ್ನು ಆಡುತ್ತಿದ್ದ ನಾನು 2005 ರ ಡಿಸೆಂಬರ್ 9 ರಂದು ಬೆಂಗಳೂರಿನ‌ ಜಯನಗರದ ಬಲಮುರಿ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ಬ್ರಹ್ಮಾವರದ ಜಯಲಕ್ಷ್ಮೀ ಆಚಾರ್ಯರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದೆ. ವಿಪರ್ಯಾಸ ಅಂದರೆ ಎರಡು ದಶಕಗಳ ನಮ್ಮ ದಾಂಪತ್ಯ ಬದುಕಿನ‌ ನಂತರ ನಾನೀಗ ಮತ್ತೆ ಒಂಟಿಯಾಗಿದ್ದೇನೆ. 2025 ರ ನವಂಬರ್ 24 ರಂದು ಸೋಮವಾರ ಮಹಾಚೌತಿಯ ದಿನದಂದೇ ಜಯಲಕ್ಷ್ಮೀ ನನ್ನನ್ನು ಏಕಾಂಗಿಯಾಗಿಸಿ ದೈಹಿಕವಾಗಿ ಬಿಟ್ಟುಹೋದರು. ಅಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಆ ಸಮಯದಲ್ಲಿ “ಮುಂಬಯಿಯಲ್ಲಿ ನಿಮಗೆ ಸ್ವಂತ ಮನೆ ಇದೆಯಾ? ನಿಮಗೆ ಸಂಬಳ ಎಷ್ಟು ಬರುತ್ತದೆ….?” ಇತ್ಯಾದಿ ನನ್ನ ಬಗ್ಗೆ ಯಾವುದನ್ನೂ ವಿಚಾರಿಸದೆ (ಸ್ವಂತ ಮನೆಯೂ ಇರಲಿಲ್ಲ ಆವಾಗ. ಸಂಬಳ ಹೇಳಿದ್ದರೆ ನನ್ನ ಮರ್ಯಾದೆ ಹೋಗುತ್ತಿತ್ತೋ ಅಥವಾ ನಾನಿದ್ದ ಪತ್ರಿಕೆಯ ಮರ್ಯಾದೆ ಹೋಗುತ್ತಿತ್ತೋ ಅದು ಯಕ್ಷಪ್ರಶ್ನೆ,) ‘ಒಬ್ಬ ಬರಹಗಾರ ಆಗಿದ್ದಾರೆ’ ಎಂಬ ಅಪ್ಪಟ ಅಭಿಮಾನದಲ್ಲೇ ನನ್ನನ್ನು ವಿವಾಹವಾಗಲು ಒಪ್ಪಿ ಮುಂಬಯಿಗೆ ಕಾಲಿಟ್ಟವರು ಜಯಲಕ್ಷ್ಮೀ.

2007 ರಿಂದ ಮುಂಬಯಿಗೆ ದೂರದ ವಸಾಯಿ ಎಂಬಲ್ಲಿ ನಮ್ಮ ಸ್ವಂತ ಮನೆಯಲ್ಲಿ ವಾಸ್ತವ್ಯ. ಮುಂಬಯಿಯಲ್ಲೇ ಅತಿ ಕಷ್ಟಕರವಾದ ವಿರಾರ್- ಚರ್ಚ್ ಗೇಟ್ ಟ್ರೇನ್ ಹಿಡಿದು ದೂರದ ಮುಂಬಯಿಗೆ ಉದ್ಯೋಗ ನಿಮಿತ್ತ ಓಡಾಡಲು ಬಹಳ ಕಷ್ಟವಾದರೂ( ಆಫೀಸ್ ಗೆ ಹೋಗಲು ಎರಡೂವರೆ ಗಂಟೆ, ವಾಪಸ್ ಮನೆಗೆ ಬರಲು ಎರಡೂವರೆ ಗಂಟೆ…ದಿನದಲ್ಲಿ ಐದು ಗಂಟೆ ಪ್ರಯಾಣದಲ್ಲಿ ಕಳೆಯುತ್ತಿತ್ತು) ಬದುಕು ಮುಂದೆ ಸಾಗಲು ಈ ಓಡಾಟ ಅನಿವಾರ್ಯವಾಗಿತ್ತು. ಅಂದಿನಿಂದ ನನ್ನ ಬರಹಗಳ ಸಂಗ್ರಹದ ಜವಾಬ್ದಾರಿ ತಾನೇ ಹೊತ್ತವರು ಜಯಲಕ್ಷ್ಮೀ. ನನ್ನೆಲ್ಲ ಚೆಲ್ಲಾಪಿಲ್ಲಿ ಪುಸ್ತಕಗಳ ರಾಶಿಯನ್ನು ಜೀವನ‌ಪರ್ಯಂತ ಸಹಿಸಿಕೊಂಡವರು. “ಇತರರ ಮನೆ ಎಷ್ಟು ಸ್ವಚ್ಛವಾಗಿದೆ ನೋಡಿ……. ನಮ್ಮ‌ಮನೆಯಲ್ಲಿ ರಾಶಿ‌ಬಿದ್ದಿವೆ ಪುಸ್ತಕಗಳು…. ಬೇಡದ ಪುಸ್ತಕಗಳನ್ನು ಯಾಕೆ ಸಂಗ್ರಹಿಸಿಡುತ್ತೀರಿ……?” ಎಂದು ಒಮ್ಮೊಮ್ಮೆ ನೆಂಟರು ಬಂದಾಗ ಸ್ವಚ್ಛತೆಗೆ ಆದ್ಯತೆ ನೀಡಿ ಅವರೇ ಅದರ ಮೇಲೆ ನನಗೆ ಆಗಾಗ ಸಿಗುತ್ತಿದ್ದ ಸನ್ಮಾನದ ಶಾಲುಗಳನ್ನು ಹಾಸಿ ಬಿಡುವುದೂ ಇರುತ್ತಿತ್ತು.

2006 ರಿಂದ 2022 ರ ತನಕ ನನ್ನ ಪ್ರತೀ ಶೈಕ್ಷಣಿಕ ಪ್ರವಾಸದಲ್ಲೂ ಜಯಲಕ್ಷ್ಮೀ ಜೊತೆಗಿದ್ದವರು. ನನಗೆ ಬೇಕಾದಂತೆ ಛಾಯಾಚಿತ್ರಗಳನ್ನೂ ಕ್ಲಿಕ್ಕಿಸಲು ಸಹಕರಿಸುತ್ತಿದ್ದರು. ಅವರು 2009 ರಲ್ಲಿ ಭೂತಾನ್ ಪ್ರವಾಸಕ್ಕೆ ಮಾತ್ರ ಇರಲಿಲ್ಲ. ಆ ಸಮಯ ಅವರ ತಾಯಿಗೆ(ನನ್ನ ಅತ್ತೆಗೆ) ಅಸೌಖ್ಯದ ಕಾರಣ ಅವರು ಪ್ರವಾಸಕ್ಕಿಂತ ತಾಯಿಯ ಸೇವೆ ಮಾಡಲು ಇಷ್ಟಪಟ್ಟಿದ್ದರು.

ಯುಗಾದಿ ಸಮಯ, ದೀಪಾವಳಿ ಸಮಯ , ದಸರಾ ಸಮಯ ಅವರು ವಿಶೇಷ ರಂಗೋಲಿ ಮನೆಯೆದುರು ಹಾಕುತ್ತಿದ್ದರು. ಮಧ್ಯಾಹ್ನ‌ಊಟದ ನಂತರ ಬಾಗಿಲ ಹೊರಗಡೆ ಕೂತರೆ ಸಂಜೆಗೆ ಏಳುತ್ತಿದ್ದರು. ಹಬ್ಬ ಹರಿದಿನಗಳ ಆಚರಣೆಗಳಲ್ಲಿ ವಿಶೇಷ ಆಸ್ಥೆ ಅವರಿಗಿತ್ತು.

2013ರಲ್ಲಿ ಲ್ಯಾಪ್ಟಾಪ್ ಮನೆಗೆ ಬಂತು. ಆ ತನಕ ನಾನು ಬರೆದ ಕತೆ ಕವಿತೆ ಲೇಖನಗಳನ್ನು ಅಂಚೆಯಲ್ಲೊ ಕೊರಿಯರ್ ನಲ್ಲೋ ಪತ್ರಿಕೆಗಳಿಗೆ ಕಳುಹಿಸುತ್ತಿದ್ದ ದಿನಗಳಾಗಿದ್ದವು. 2013 ರಲ್ಲಿ ಹೊಸ ಲ್ಯಾಪ್ಟಾಪ್ ಮನೆಗೆ ಬಂದ ನಂತರ ಅಂದಿನಿಂದ ಜಯಲಕ್ಷ್ಮೀ ತುಂಬ ಸಕ್ರಿಯರಾದರು.ಮದುವೆಗೆ ಮೊದಲು ಮಣಿಪಾಲ ಗ್ರೂಪ್ ನಲ್ಲಿ ಜಾಬ್ ಮಾಡಿರುವುದರಿಂದ ಅವರಿಗೆ ಕಂಪ್ಯೂಟರ್ ಗೊತ್ತಿತ್ತು. ಈಗ ಲ್ಯಾಪ್ಟಾಪ್ ಬಂದನಂತರ ಮನೆಕೆಲಸ ಮುಗಿಸಿ ಮಧ್ಯಾಹ್ನ ನಂತರ ಅದರಲ್ಲಿ ಸಕ್ರಿಯರಾಗತೊಡಗಿದರು. ನಾನು ಬರೆದುಕೊಟ್ಟ ಲೇಖನ ಅಥವಾ ಕತೆಯನ್ನು ರಾತ್ರಿ ಮನೆಗೆ ಬರುವಾಗ ಟೈಪ್ ಮಾಡಿ ರೆಡಿ ಮಾಡಿ ಇಡುತ್ತಿದ್ದರು. (ಕೆಲವೊಮ್ಮೆ ಕತಾನಾಯಕನ‌ ಹೆಸರು ಹಳೆಕಾಲದ್ದಿದ್ದರೆ ಅದನ್ನು ಬದಲಾಯಿಸಿ ಬೇರೆ ಹೆಸರೂ ಇರಿಸಿದ್ದಿದೆ) ನಂತರ ನಾನೊಮ್ಮೆ ಓದಿ,ಅದರಲ್ಲಿ ತಪ್ಪು ಇಲ್ಲ ಎಂದಾದರೆ ಪತ್ರಿಕೆಗೆ ಇಮೇಲ್ ಮಾಡುತ್ತಿದ್ದೆ. ಅವರು ಟೈಪ್ ಮಾಡಿದ ಮೊದಲ ಲೇಖನ‌ ಅಂದರೆ ಮಂಗಳ ವಾರಪತ್ರಿಕೆಯ ಮುಖಪುಟ ಲೇಖನ 2013 ರಲ್ಲಿ ಉತ್ತರಾಖಂಡ ರಾಜ್ಯದ ಕೇದಾರನಾಥದ ಮಹಾಪ್ರವಾಹ ದುರಂತ ಘಟನೆ ……. ಆರು ಸಾವಿರಕ್ಕೂ ಹೆಚ್ಚು ಜನ ಸಾವಿಗೀಡಾದ ಘಟನೆ….ಯ ಆ ಲೇಖನ.ಅಂದಿನಿಂದ ನಾನು ಹಸ್ತಪ್ರತಿಯ ಬರಹಗಳನ್ನು ಪತ್ರಿಕೆಗಳಿಗೆ ಕಳುಹಿಸುವುದು ನಿಲ್ಲಿಸಿದೆ ಹಾಗೂ ಮುಂದಿನ ಬರಹಗಳನ್ನೆಲ್ಲ ಇಮೇಲ್ ನಲ್ಲಿ ಕಳುಹಿಸತೊಡಗಿದೆ. ಜಯಲಕ್ಷ್ಮೀ ನಾನು ಕೊಟ್ಟ ಬರಹಗಳನ್ನು ಟೈಪ್ ಮಾಡಿ ರೆಡಿ ಮಾಡಿಡುತ್ತಿದ್ದರು. ರಾತ್ರಿ ಮನೆಗೆ ಬಂದ ನಂತರ ಅದನ್ನು ಓದಿ ಸರಿಮಾಡುತ್ತಿದ್ದೆ. 2014 ರಿಂದ 2018 ರ ತನಕ ನಾಲ್ಕು ವರ್ಷಗಳ ಕಾಲ ವಾರ್ತಾಭಾರತಿ ದೈನಿಕದ ನನ್ನ ‘ಮುಂಬಯಿ‌ ಮಾತು’ ಅಂಕಣ ಬರಹಗಳನ್ನು ಟೈಪ್ ಮಾಡುತ್ತಿದ್ದುದು ಜಯಲಕ್ಷ್ಮೀ ಅವರೇ.

ನಾನು ಮುಂಬಯಿಯಲ್ಲಿ ಒಂದು ಮಾಸಿಕದ ಸಂಪಾದಕ, ಒಂದು ದೈನಿಕದಲ್ಲಿ ಉಪಸಂಪಾದಕ ಆಗಿರುವ ಕಾರಣ ಅವುಗಳ ಜವಾಬ್ದಾರಿಯೇ ತುಂಬಾ ಇತ್ತು. ಹಾಗಾಗಿ ನಾನು ಬಿಡುವಾದಾಗ ಮಾತ್ರವೇ ಕೆಲವು ಲೇಖನಗಳನ್ನು ಬರೆದು ಒಳ‌ನಾಡಿನ ಪತ್ರಿಕೆಗಳಿಗೆ ಕಳುಹಿಸುತ್ತಿದ್ದೆ. ಈ ಕಾರಣ ಜಯಲಕ್ಷ್ಮೀ ಅವರು ತನ್ನ ಬಿಡುವಿನ‌ ಸಮಯವನ್ನು ಸದುಪಯೋಗ ಮಾಡಿಕೊಂಡು ಆ ಸಮಯದಲ್ಲಿ ತನ್ನದೇ ಸ್ವರಚಿತ ಕವಿತೆಗಳನ್ನು ಲ್ಯಾಪ್ಟಾಪ್ ನಲ್ಲಿ ಟೈಪ್ ಮಾಡುತ್ತಾ ಬಂದರು.

ಒಂದು ದಿನ “ನಾನು ಕೆಲವು ಕವನಗಳ ಬರೆದಿದ್ದೇನೆ” ಎಂದು ತೋರಿಸಿದರು.
ಓದಿದೆ. ಅರೆ…! ಆಶ್ಚರ್ಯ ಪಟ್ಟೆ. ಕುತೂಹಲಗೊಂಡೆ. (ಯಾಕೆಂದರೆ ಅವರು ಕಾಲೇಜ್ ದಿನಗಳಲ್ಲಿ ಕವಿತೆ ಬರೆಯುತ್ತಿದ್ದ ಸಂಗತಿ ನನಗೆ ಹೇಳಿರಲಿಲ್ಲ. ಅವರ ನಿಧನದ ನಂತರ ತಿಳಿದೆ.) ಕವಿತೆಗಳನ್ನು ನನಗೆ ಪರಿಚಿತರಿದ್ದ ಸುನಂದಾ ಪ್ರಕಾಶ ಕಡಮೆ ದಂಪತಿಗೆ ಕಳುಹಿಸಲು ಹೇಳಿದೆ.
ಸುನಂದಾ ಅವರಂತೂ ಪ್ರತೀ ಕವನಗಳಿಗೆ ತಮ್ಮದೇ ಆದ ಪ್ರತಿಕ್ರಿಯೆಗಳನ್ನು ತಿಳಿಸುತ್ತಾ ಸಲಹೆ ಸೂಚನೆಗಳನ್ನೂ ನೀಡುತ್ತಿದ್ದರು. ಇದು ಏಳೆಂಟು ವರ್ಷದ ಹಿಂದಿನ‌ಮಾತು. ಅಷ್ಟೇ ಅಲ್ಲ ,ಅದನ್ನು ಡಿಲಿಟ್ ಮಾಡದೆ ಇಂದಿಗೂ ಹಾಗೆಯೇ ಇಮೇಲ್ ನಲ್ಲಿ ಇರಿಸಿದ್ದ ಮಹಾತಾಯಿ ಅವರು.2018 ಇರಬಹುದು.ನಾವು ಊರಿಗೆ ಹೋದವರು ಹುಬ್ಬಳ್ಳಿಯ ಅವರ ಮನೆಗೂ ಹೋದಾಗ ಪ್ರಕಾಶ್ ಕಡಮೆ ಅವರು ಜಯಲಕ್ಷ್ಮೀ ಅವರಿಗೆ ಮೊದಲಿಗೆ ಕೇಳಿದ್ದು “ಕವನ ಸಂಕಲನ ಯಾವಾಗ ತರುವುದು?ಎಂದು. “ಈಗ ಬೇಡ” ಅಂತಲೇ ಉತ್ತರಿಸಿದ್ದರು.

2014 ರನಂತರ ಹತ್ತೋ ಹದಿನೈದೋ ದಿನಕ್ಕೊಂದು ಜಯಲಕ್ಷ್ಮೀಯವರ ಕವನವು ರೆಡಿಯಾಗಿರುತ್ತಿತ್ತು. ಬರೆದ ತಕ್ಷಣ ಸುನಂದಾ ಅವರಿಗೆ ಇಮೇಲ್ ಹೋಗುತ್ತಿತ್ತು. ಈ ನಡುವೆ ಮುಂಬಯಿ ಆಕಾಶವಾಣಿಯಲ್ಲಿ ಜಯಲಕ್ಷ್ಮೀ ಅವರಿಗೆ ಹಲವು ಅವಕಾಶಗಳು ಸಿಕ್ಕಿತು. ಮಾತುಕತೆ, ಸಂದರ್ಶನಗಳು… ಎಂದೆಲ್ಲ ಆಕಾಶವಾಣಿಗೆ ಹೋಗಿ ಬರುತ್ತಿದ್ದರೂ ಕವಿತೆಯ ಬಗ್ಗೆ ಚಕಾರ ಎತ್ತುತ್ತಿರಲಿಲ್ಲ. ಎಂದೂ ಅವರು ತಾನು ಕವನಗಳನ್ನು ಬರೆದಿರುವುದನ್ನು ಹೊರಗಡೆ ಹೇಳುತ್ತಿರಲಿಲ್ಲ.

ಆದರೆ ಸುನಂದಾ ಅವರು ಕವನಗಳ ಮೆಚ್ಚಿ ಪತ್ರಿಕೆಗಳಿಗೆ ಕಳುಹಿಸಲು ಸೂಚಿಸಿದ್ದರು. ಅವರ ಒತ್ತಾಯದಿಂದ ಮಯೂರಕ್ಕೆ, ಕರ್ಮವೀರಕ್ಕೆ …ಹೀಗೆ ಕೆಲವೆಡೆ ಕವನಗಳನ್ನು ಇಮೇಲ್ ಮಾಡಿದ್ದರು. ಆರೇಳು ವರ್ಷ ಯುಗಪುರುಷ ದಸರಾ ದೀಪಾವಳಿ ವಿಶೇಷಾಂಕ ಗಳಿಗೆ ಅವರು ಕವನ‌ಗಳನ್ನು ಕಳುಹಿಸುತ್ತಿದ್ದು ಅವೆಲ್ಲವೂ‌ ಪ್ರಕಟವಾಗಿತ್ತು .

ಈ ನಡುವೆ ಒಂದು ದಿನ ನೂಪುರ ಡಾಟ್ ಕಾಮ್ ಕಾವ್ಯ ಸ್ಪರ್ಧೆಯ ಸುದ್ದಿ ತಿಳಿದಾಗ ಜಯಲಕ್ಷ್ಮೀ ತಾನೂ ಸ್ಪರ್ಧೆಯಲ್ಲಿ ಭಾಗವಹಿಸಿ ನೋಡೋಣ ಅಂದರು. ಅದಕ್ಕೆ ದ್ವಿತೀಯ ಬಹುಮಾನವು ಬಂದಿತ್ತು. ಮುಂಬಯಿ ಪತ್ರಿಕೆಗಳಲ್ಲಿ ಈ ಬಗ್ಗೆ ಸುದ್ದಿ ಬಂದಾಗ ಡಾ.ಸುನೀತಾ ಶೆಟ್ಟಿ ಅವರು ಜಯಲಕ್ಷ್ಮೀ ಅವರಿಗೆ ಅಭಿನಂದನೆ ತಿಳಿಸುತ್ತಾ “ಜಯಲಕ್ಷ್ಮೀ ಅವರೂ ಮುಂಬಯಿಯ ಸೃಜನಾ ಬಳಗದ ಸದಸ್ಯರಾಗಬೇಕು” ಎಂದದ್ದೂ ಇದೆ.ಆದರೆ ತಾನು ದೂರದ ವಸಾಯಿಯಲ್ಲಿ ಇದ್ದುದರಿಂದ ಆಗಾಗ ಪ್ರಯಾಣ ಕಷ್ಟ ಎಂದೂ ಮತ್ತು ಪ್ರಚಾರಗಳಿಂದ ದೂರವೇ ಉಳಿಯಲು ಜಯಲಕ್ಷ್ಮೀ ಇಚ್ಚಿಸಿದ್ದರು.
ಎಚ್ ಬಿ ಎಲ್ ರಾವ್ ಪ್ರಧಾನ ಸಂಪಾದಕತ್ವದ 2015 ರಲ್ಲಿ ಬಂದಿದ್ದ 108 ಪ್ರಾತಿನಿಧಿಕ ಕವನ ಸಂಕಲನ ‘ವಿಂಶತಿ ವಾಹಿನಿ’ಯಲ್ಲಿ ಜಯಲಕ್ಷ್ಮಿಯವರ ಕವಿತೆಯನ್ನೂ ಪ್ರಕಟಿಸಿ ದಾಖಲಿಸಿದ್ದರು.

ಮುಂದೆ ಪ್ರಕಾಶ್ ಕಡಮೆ ಅವರ ಸಮಷ್ಟಿ ಕಾವ್ಯ ಬ್ಲಾಗ್ನಲ್ಲಿ ಐದು ಕವಿತೆಗಳನ್ನು ಪ್ರಕಟಿಸಿದರು . 2021ರಲ್ಲಿ ಮುಂಬಯಿ ವಿವಿ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ಜಿ ಎನ್ ಉಪಾಧ್ಯ ಅವರು ನಸುಕು ಡಾಟ್ ಕಾಮ್ ಮುಂಬೈ ವಿಶೇಷ ಸಂಚಿಕೆಯನ್ನು ತಂದಾಗ. ಅದರಲ್ಲಿ ಮೊದಲ ಸಂಚಿಕೆಯಲ್ಲೇ ಜಯಲಕ್ಷ್ಮೀ ಅವರ ನಾಲ್ಕು ಕವಿತೆಗಳನ್ನು ಪ್ರಕಟಿಸಿದ್ದರು.

ಕೊರೋನ ಕಾಲಾವಧಿಯ ತನಕ ಕವಿತಾ ರಚನೆಯಲ್ಲಿ ಆಸಕ್ತರಾಗಿದ್ದ ಜಯಲಕ್ಷ್ಮೀ ಅವರು ನಂತರ ತಟಸ್ಥರಾಗುತ್ತಾ ಬಂದರು. ಆದರೆ ಆತನಕ‌ ಬರೆದಿದ್ದ ಕವಿತೆಗಳನ್ನೆಲ್ಲ ಹುಬ್ಬಳ್ಳಿಯ ಲೇಖಕ ದಂಪತಿ ಸುನಂದಾ ಪ್ರಕಾಶ ಕಡಮೆ ಅವರಿಗೆ ಕಳುಹಿಸುತ್ತಿದ್ದುದೇ ಇಂದು ಈ‌ ಸಂಕಲನ ಪ್ರಕಟವಾಗಲು ಸಾಧ್ಯವಾಗಿದೆ.

ಕೊರೋನ ಕಾಲಾವಧಿಯ ನಂತರ ಲ್ಯಾಪ್ಟಾಪ್ ನೋಡುವುದೇ ಕಡಿಮೆಯಾಯಿತು. ಅದಕ್ಕೆ ಇನ್ನೊಂದು ಕಾರಣ ನಾನೂ ಅನಂತರ ನನ್ನೆಲ್ಲ ಲೇಖನಗಳನ್ನು ಮೊಬೈಲ್ ನಲ್ಲೇ ಟೈಪ್ ಮಾಡಲು ಶುರು ಮಾಡಿದ್ದು.ಹಾಗಾಗಿ‌ ಜಯಲಕ್ಷ್ಮೀ ಅವರಿಗೆ ನನ್ನ ಬರಹಗಳನ್ನು ಟೈಪ್ ಮಾಡುವ ಕೆಲಸವೂ ನಿಂತು ಹೋಯಿತು.ಅತ್ತ ಅವರೂ ಬರಹಗಳ ಮೋಹವನ್ನು ತ್ಯಜಿಸುತ್ತಾ ಬಂದಿದ್ದರು. ‘ನೀವು‌ ಬರೆದರೆ ಸಾಕು’ ಎನ್ನತೊಡಗಿದರು ನನಗೆ. ಕ್ರಮೇಣ ಲ್ಯಾಪ್ಟಾಪ್ ನೋಡುವುದೇ ನಿಂತು ಹೋಯ್ತು.ಹಾಗಾಗಿ ಅದೂ ಕಳೆದ ಎರಡು ವರ್ಷದಿಂದ ಹಾಳಾಗಿ ಬಿಟ್ಟಿದೆ.

ಜಯಲಕ್ಷ್ಮೀ ಅವರ ನಿಧನಾನಂತರ
ಇತ್ತೀಚೆಗೆ ನನಗೆ ಅವರ ಇಪ್ಪತ್ತರಷ್ಟು ಕವಿತೆಗಳು (ಪ್ರಕಟವಾದುದು) ಫೈಲಲ್ಲಿ ಸಿಕ್ಕಿತು. ಉಳಿದ ಕವನಗಳು ಲ್ಯಾಪ್ ಟಾಪ್ ಒಳಗಿವೆ.ಅದನ್ನು ರಿಪೇರಿಗೆ ಕೊಡಬೇಕಿದೆ. ಈ ನಡುವೆ ಸುನಂದಾ ಕಡಮೆ ನೆನಪಾದರು. ಅವರಿಗೆ ಈ ಬಗ್ಗೆ ತಿಳಿಸಿದಾಗ “ನೋಡುವೆ, ನನ್ನಲ್ಲಿ ಇರಲೂ ಬಹುದು. ಜಯಲಕ್ಷ್ಮೀಯವರ ಕವನಗಳನ್ನು…. ಪತ್ರಗಳನ್ನು ಬಹುಷ ಡಿಲಿಟ್ ಮಾಡಿಲ್ಲ” ಅಂದರು.

ನಾನಂದು ಗೋಕರ್ಣದಲ್ಲಿ‌ ಜಯಲಕ್ಷ್ಮಿಯವರ ವೈಕುಂಠ ಸಮಾರಾಧನೆ ನಿಮಿತ್ತ ಇದ್ದೆ. ಅಂದು ರಾತ್ರಿಯೇ ಸುನಂದಾ ಕಡಮೆ ಅವರು ಒಟ್ಟು 30 ಕವನಗಳನ್ನು ಸಂಗ್ರಹಿಸಿ ಫೋಲ್ಡರ್ ಮಾಡಿ ನನಗೆ ಕಳುಹಿಸಿದ್ದಷ್ಟೇ ಅಲ್ಲ, ಅರ್ಥಪೂರ್ಣ ಮುನ್ನುಡಿಯನ್ನೂ ಮರುದಿನ ಬರೆದು ಕಳುಹಿಸಿದರು.ಹಾಗಾಗಿ ಈ ಕವಿತಾ ಸಂಕಲನ ಇದೀಗ ನಿಮ್ಮ ಮುಂದಿದೆ.

2018 ರಲ್ಲಿ ನನಗೊಮ್ಮೆ ಬೈಕ್ ಅಪಘಾತವಾಗಿ ಮೂರ್ಛೆ ಹೋಗಿದ್ದೆ.ಆ ಸ್ಥಿತಿಯಲ್ಲಿ ನನ್ನನ್ನು ಹತ್ತಿರದ ಡಾಕ್ಟರ್ ಕ್ಲಿನಿಕ್ ಗೆ ಸೇರಿಸಲಾಗಿತ್ತು. ಅರ್ಧ ಮುಕ್ಕಾಲು ಗಂಟೆಯ ನಂತರ ನನಗೆ ಎಚ್ಚರವಾಗಿತ್ತು. ನರ್ಸ್ ಮೊಬಯಿಲ್ ಹಿಡಿದು ಲಾಕ್ ತೆಗೆಯಲು ಹೇಳಿದ್ದಳು. ಮೊಬಯಿಲ್ ಲಾಕ್ ತೆಗೆದ ನಂತರ ನಿಮ್ಮ ಪತ್ನಿಯ ನಂಬರ್ ಯಾವುದು….? ಕೇಳಿದ್ದರು. ಆ ರಾತ್ರಿಗೆ ಎದುರಿನ ಆನಂದ ಪೂಜಾರಿಯವರ ಸ್ಕೂಟರ್ ನಲ್ಲಿ ಅಳುತ್ತಾ ಬಂದಿದ್ದ ಜಯಲಕ್ಷ್ಮೀ ಎಷ್ಟು ಗಾಬರಿಯಾಗಿದ್ದರೆಂದರೆ ನಾನು ಕೊಡುತ್ತಿದ್ದ ಖರ್ಚಿನ‌ ಹಣದಲ್ಲಿ ಉಳಿತಾಯದ ಹಣವನ್ನೆಲ್ಲ ತಂದಿದ್ದರು. ಆಗಲೇ ನನಗೆ ಉಳಿತಾಯದ ಮಹತ್ವ ಜಯಲಕ್ಷ್ಮೀ ಅರ್ಥ ಮಾಡಿಸಿದ್ದರು.

2025 ರ ನವಂಬರ್ 29 ರಂದು ಮುಂಬಯಿ ವಿವಿ ಕನ್ನಡ ವಿಭಾಗ ಮತ್ತು ಗೋರೆಗಾಂವ್ ಕರ್ನಾಟಕ ಸಂಘದ ಆಶ್ರಯದಲ್ಲಿ ನನ್ನ ಮೂರು ಪುಸ್ತಕಗಳ ಬಿಡುಗಡೆ ಸಮಾರಂಭ ಹಮ್ಮಿಕೊಂಡಿದ್ದೆ. ವಿ.ವಿ.ಕನ್ನಡ ವಿಭಾಗದ ಆಶ್ರಯದಲ್ಲೇ ಕೃತಿಗಳ ಬಿಡುಗಡೆ ಆಗಬೇಕು ಎಂದು ಜಯಲಕ್ಷ್ಮೀ ಬಯಸಿದ್ದರು.ಜೊತೆಯಲ್ಲಿ ಅನಿತಾ ಪಿ. ತಾಕೊಡೆ ಅವರ ಪ್ರಶಸ್ತಿ ಪುರಸ್ಕೃತ ಕವಿತಾ ಸಂಕಲನದ ಬಿಡುಗಡೆಯೂ ಇತ್ತು. ಇಂತಹ ಖುಷಿಯ ಸಮಯದಲ್ಲಿ ಜಯಲಕ್ಷ್ಮೀ ನವಂಬರ್ 24 ರಂದು ನಮ್ಮಿಂದ ದೈಹಿಕವಾಗಿ ದೂರಹೋಗಿಬಿಟ್ಟರು. ಬೆಳಗ್ಗೆ 5.30 ರ ಸುಮಾರಿಗೆ ಎದ್ದು‌ ಕೂತವರು ನಾನು‌ ಕೈಹಿಡಿದಂತೆ ನನ್ನ ಮೇಲೆಯೇ ಶಾಶ್ವತ ಎಂಬಂತೆ ಒರಗಿ ಚಿರನಿದ್ರೆಗೆ ಒಳಗಾದರು. ನವಂಬರ್ ,29 ಕ್ಕೆಕನ್ನಡ ವಿಭಾಗದಲ್ಲಿ ನನ್ನ ಮೂರು ಪುಸ್ತಕಗಳ ಬಿಡುಗಡೆಯ ಕನಸು ಜಯಲಕ್ಷ್ಮೀ ಅವರದ್ದಿತ್ತು.ಆ ದಿನ ನಾನು ಯಾವ ಅಂಗಿ‌ಯನ್ನು ಹಾಕಿಕೊಳ್ಳಬೇಕು ಅಂತಲೂ ಹೇಳಿದ್ದರು. “ಈ ಸಲ ಪುಸ್ತಕ ಬಿಡುಗಡೆ ಸಮಯ ನನ್ನನ್ನು ವೇದಿಕೆಗೆ ಕರೆಯಬೇಡಿ.ನಾನು ಬರುವುದಿಲ್ಲ” ಎಂದೂ ಹೇಳಿದ್ದರು.ಹಾಗೆಯೇ ನಡೆದಿರುವುದು ಎಂತಹ ವಿಪರ್ಯಾಸ.! ಪುಸ್ತಕ ಬಿಡುಗಡೆ ರದ್ದು ಮಾಡಲು ನನ್ನ ಮನಸ್ಸು ಕೇಳಲಿಲ್ಲ.ಅದು ಜಯಲಕ್ಷ್ಮೀಯವರ ಕನಸ್ಸಾಗಿತ್ತು. ( ಅನಿತಾ ತಾಕೊಡೆ ಅವರೇ ನಂತರ ಹೆಚ್ಚಿನ ಜವಾಬ್ದಾರಿ ವಹಿಸಿದ್ದರು). ಕೊನೆಗೂ ಖುಷಿಯ ಪುಸ್ತಕ ಬಿಡುಗಡೆ ಕಾರ್ಯಕ್ರಮವು ಜಯಲಕ್ಷ್ಮೀ ಅವರಿಗೆ ಶ್ರದ್ಧಾಂಜಲಿ ರೂಪದಲ್ಲಿ ಬಿಡುಗಡೆ ಕಾರ್ಯಕ್ರಮವಾಗಿ ಹಮ್ಮಿಕೊಳ್ಳುವ ಅನಿವಾರ್ಯ ಸ್ಥಿತಿ ಒದಗಿ ಬಂದಿತು.

ಜಯಲಕ್ಷ್ಮೀ ಅವರು ಇತ್ತೀಚಿನ ದಿನಗಳಲ್ಲಿ ಬರಹದ ಭ್ರಮೆಯಿಂದ ಹೊರಬಂದಿದ್ದರು.ನನ್ನ‌ ಲೇಖನ ಬೆಂಗಳೂರಿನ‌ ಯಾವುದಾದರೂ ಪತ್ರಿಕೆಯಲ್ಲಿ ಬಂತು ಅಂದರೂ ಪುಳಕಗೊಳ್ಳುತ್ತಿರಲಿಲ್ಲ. ಪುಟ್ಟ ಮನೆಯಲ್ಲಿನ‌ ನಾಲ್ಕೂ ಕಡೆ ಪುಸ್ತಕಗಳ ರಾಶಿ ಕಂಡು “ನಿಮಗೆ ಅಗತ್ಯ ಇಲ್ಲದ ಪತ್ರಿಕೆಗಳ ರಾಶಿ- ಪುಸ್ತಕಗಳ ರಾಶಿಯನ್ನು ಕಡಿಮೆಮಾಡಿ, ಜಿರಳೆಗಳು‌ ಕಾಣಿಸಲು ಶುರುವಾಗಿವೆ ….. ” ಅನ್ನುತ್ತಿದ್ದರು.
ಆ ದಿನವೂ ಇದೀಗ ಬಂದೇ ಬಿಟ್ಟಿದೆ.

ತುಷಾರದಲ್ಲಿ 2024 ರಲ್ಲಿ ನಾನೊಂದು ಕತೆ ಬರೆದಿದ್ದೆ.’ಗೋಳದ ಸುತ್ತ ಉಲ್ಕೆಗಳು’ ಅಂತ.ಅದು ತೆಲುಗು ಭಾಷೆಗೂ ಅನುವಾದ ಗೊಂಡಿದೆ. ಸಾಹಿತ್ಯ ಸಮ್ಮೇಳನಗಳಿಗೆ ಹೋಗುತ್ತಿದ್ದ ಪುಸ್ತಕಪ್ರೇಮಿಯೊಬ್ಬರು ಪ್ರತೀ ಸಲ ಒಂದಷ್ಟು ಪುಸ್ತಕಗಳ ಹೊತ್ತು ಮುಂಬಯಿಗೆ ತರುತ್ತಿದ್ದರು.ಮುಂದೆ ಅವರ ನಿಧನಾ ನಂತರ ಕನ್ನಡ ಗೊತ್ತಿಲ್ಲದ ಅವರ ಮಕ್ಕಳಿಗೆ ಈ‌ರಾಶಿ ಬಹಳ ಕಿರಿಕಿರಿ ತಂದು ಕೊನೆಗೆ ರದ್ದಿ ಅಂಗಡಿಯವನಿಗೆ ಕೊಡುವ ಕತೆ. ಈ‌ ಕತೆ ಈವಾಗ ಮತ್ತೆ ನೆನಪಿಗೆ ಬಂದಿದೆ. ಏನೇ ಇರಲಿ, ಜಯಲಕ್ಷ್ಮೀ ಸದಾ ನನ್ನ ಜೊತೆಗಿದ್ದಾರೆ ಎಂಬ ನಂಬಿಕೆಯೆ ನನ್ನ ಬದುಕನ್ನು ಮುಂದೆ ಸಾಗಿಸಬಲ್ಲುದು. ಮತ್ತೆ ಬರವಣಿಗೆ ಮುಂದುವರಿಯುವುದೋ ಇಲ್ಲವೋ ಕಾಲವೇ ಹೇಳಬೇಕು.

‍ಲೇಖಕರು Admin

27 January, 2026

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading