‘ಬಾಳಂತಿ ಪುರಾಣ’ ಎಂಬ ಕಾಡುವ ಕೃತಿ

ಒಂದು ಎಳೆಯ ಜೀವ ಕಣ್ಣು ಮೂಗು ಅಂಟಿಸಿಕೊಂಡು ಹೊರಜಿಗಿಯುವ, ಬೆಳೆಯುವ ಕೌತುಕವನ್ನು ನಾವು ಇದುವರೆಗೆ ಗುಟ್ಟಾಗಿ ಇಟ್ಟುಬಿಟ್ಟಿದ್ದೆವಲ್ಲ ಎಂಬ ಹಳಹಳಿಕೆ ಈ ಪುಸ್ತಕ ಓದಿದ ನಂತರ ಕಾಡದೇ ಇರದು.

ರೇಣುಕಾ ರಮಾನಂದ

ಶ್ರೀಕಲಾರ ಸಾರ್ಥಕ ,ಸಂಪನ್ನರ ನಂತರದ ಕೂಸು “ಬಾಳಂತಿ ಪುರಾಣ” ಇತ್ತೀಚೆಗಷ್ಟೇ ಬಹುರೂಪಿಯ ಮನೆಯಲ್ಲಿ ಅಮ್ಮನ ಒಳಗಿಂದ ಹೊರಬಂದಿದೆ.

“ತಾನೀಗ ಹಳೇ ಬಾಣಂತಿ ಸಾರ್ “ಅನ್ನುವ ಅವರ ಮಾತು ಸುಳ್ಳೇ ಸುಳ್ಳು ಅನ್ನುವಷ್ಟರ ಮಟ್ಟಿಗೆ ತಾಜಾ ಶಿಶುವಿನ ಕಿರು ಮುಲುಗು ,ಕೆನ್ನೆಗಿಟ್ಟ ಕಪ್ಪು ಬೊಟ್ಟಿನ ಮೇಲಾಡುವ ಬೇಬಿ ಪೌಡರಿನ ಹಗುರ ಪದರು, ಅಂಗ್ವಸ್ತ್ರ ಪಂಜಿಯ ತೆಳು ಸ್ಪರ್ಶ, ಕಾಳು ಮೆಣಸಿನ ಸಾರಿನ ಘಮ-ಈಗಲೂ ಅಲ್ಲೂ ಇಲ್ಲೂ ಎಲ್ಲೆಲ್ಲೂ ಓಡಾಡಿಕೊಂಡಂಗಿದೆ.

ಈ ಆಪ್ತತೆಯ ಸಂಗಾತಕ್ಕೆ ಪುನಃ ಪುನಃ ಹಾತೊರೆಯುವುತ್ತಿರುವುದಕ್ಕೋ ಏನೋ ಪುಸ್ತಕ ಬಂದು ಐದಾರು ದಿನವಾಗಿ ನಾನೀಗಾಗಲೇ ಎರಡನೇ ಬಾರಿ ಅದನ್ನು ಹಿಡಿದಿರುವುದಾಗಿದೆ.

ಈ ನೆವದಲ್ಲಿ ನನ್ನ ನೆನಪನ್ನೊಂದಿಷ್ಟು ಹಾಳೆಗಳ ಮಧ್ಯ ಸಿಕ್ಕಿಸುವುದಾದರೆ…

ಅವ್ವನ ನಲತ್ಮೂರನೇ ವಯಸ್ಸಿಗೆ ಹುಟ್ಟಿದ ನಾನು ಮದುವೆಯಾಗುವಾಗ ಅವಳಿಗೆ ಅರವತ್ತೈದು ದಾಟಿ ಹೋಗಿತ್ತು.. ನನ್ನ ಅಣ್ಣ ಸತ್ತ ಮೇಲೆ ಅವಳು ಮಾನಸಿಕವಾಗಿ ಬಹಳ ಕುಗ್ಗಿ ಹೋಗಿದ್ದಳು.. ಮನೆ ಬಿಟ್ಟು ಒಂದ್ಹೆಜ್ಜೆ ಆಚೆ ಬರುತ್ತಿರಲಿಲ್ಲ. ಮೇಲಾಗಿ ನಾನು ಹೆರಿಗೆಯಾಗಲು ದಾಖಲಾಗಿದ್ದ ಆಸ್ಪತ್ರೆಯಲ್ಲೇ ಅಣ್ಣ ಕೊನೆಯುಸಿರು ಎಳೆದ ಕಾರಣಕ್ಕೆ ಅವಳು ಆ ಆಸ್ಪತ್ರೆಗೆ ಕಾಲೂ ಹಾಕದ ಕಾರಣವಿತ್ತು..

ಬಾಕಿಯಂತೆ ಅಜ್ಜಿಯರ ಸೌಭಾಗ್ಯವೂ ನನಗಿರಲಿಲ್ಲ.. ಹಾಗಾಗಿ ಆಸ್ಪತ್ರೆಯಲ್ಲಿರುವಷ್ಟು ದಿನ ಇನ್ನಿತರ ಕೆಲಸಕ್ಕೆ ಆಳುಹುಡುಗಿಯಿದ್ದರೂ ನನ್ನ ಮಗುವನ್ನು ನಾನೇ ಎತ್ತಿಕೊಳ್ಳಬೇಕಾದ, ಹಾಲು ಕುಡಿಸಲು ಕಲಿಯಬೇಕಾದ ರಾತ್ರಿಪೂರ ನಿದ್ದೆಗೆಟ್ಟು ಹೊಸ ಪರಿಸ್ಥಿತಿಗೆ ಹೊಂದಿಕೊಳ್ಳದ ದೇಹ ಮನಸ್ಸನ್ನು ಅಳುತ್ತಲೇ ಸಿದ್ಧಮಾಡಬೇಕಾದ ಅನಿವಾರ್ಯತೆ ಎದುರಾಯ್ತು..

ಹೆರಿಗೆ ಅಂದರೆ ದೇಹ ಈಗಷ್ಟೇ ಇನ್ನಿಲ್ಲದ ನೋವುಂಡಿರುತ್ತದೆ. ಶೌಚಕ್ಕೂ ಎದ್ದು ಹೊರಡೆ ಅನ್ನುವಂತಹ ಸುಸ್ತು .. ಹಾರ್ಮೋನು ಏರುಪೇರಿನಿಂದಾಗುವ ವಿವಿಧ ದೈಹಿಕ ಮಾನಸಿಕ ಬಳಲಿಕೆ.. ಯಾರಾದರೊಬ್ಬರ ಆಸರೆ ಬೇಡುವ ಹೊತ್ತು ಅದು. ಸದಾ ಹೆಮೋಗ್ಲೋಬಿನ್ ಕೊರತೆ ಎದುರಿಸುವ ನನ್ನಂತವಳಿಗೆ ಒಂದು ವಾರ ಎದ್ದು ಕುಳಿತುಕೊಳ್ಳಲೂ ಇನ್ನೊಬ್ಬರ ಸಹಾಯ ಬೇಕು.. ಅಂತಹುದರಲ್ಲಿ ಎದುರಾದ ಇಂಥ ಸಂದರ್ಭಕ್ಕೆ ನಾನು ಹೆರಿಗೆ ಬಾಣಂತಿ ಮಗು ಮುಂತಾದವುಗಳ ಕುರಿತಾಗಿ ಏನನ್ನೂ ಓದಿಕೊಳ್ಳದೇ ಇದ್ದು ಮಾನಸಿಕವಾಗಿ ತಯಾರಾಗದೇ ಇದ್ದುದೂ ಒಂದು ಕಾರಣವಾಗಿತ್ತು.

ವಾರದ ನಂತರ ಮನೆಗೆ ಬಂದ ಮೇಲೆ ಕುದಿ ನೀರು, ತಕ್ಕಮಟ್ಟಿಗಿನ ಬಾಣಂತನದ ಅಡುಗೆ ಸಿಕ್ಕರೂ ಹಗಲು ಮಲಗಿ ರಾತ್ರಿ ಪೂರ ಎತ್ತಿಕೊಂಡೇ ಇರಬೇಕಾದ ಮಗು ನನ್ನನ್ನು ಸಾಕಷ್ಟು ಹೈರಾಣು ಮಾಡಿ ಹಾಕಿತ್ತು.

ನನ್ನ ಗೆಳತಿಯರು ಅದರಲ್ಲೂ ವಿಶೇಷವಾಗಿ ಹವ್ಯಕ ಹುಡುಗಿಯರು ತಮ್ಮ ಬಾಣಂತನದ ವಿಶೇಷ ಆರೈಕೆಗಳನ್ನು ಹೇಳಿಕೊಳ್ಳುತ್ತಿರುವಾಗ ನಾನು ಇವೆಲ್ಲದರಿಂದ ವಂಚಿತಳಾದ ಕುರಿತು ಸಣ್ಣ ಬೇಸರ ಓಡಿಯಾಡುತ್ತಿತ್ತು..
ಇರಲಿ..

ಈಗ ಈ ಪುಸ್ತಕವನ್ನು ಮಡಿಲಲ್ಲಿಟ್ಟುಕೊಂಡು ಅವೆಲ್ಲವನ್ನೂ ನೆನಪುಮಾಡಿಕೊಳ್ಳುವಂತೆ ಮಾಡಿದ್ದು ಬಾಳಂತಿ ಹಾಗೂ ಶಿಶುವಿನ ಆರೈಕೆ ಕುರಿತಾದ ಅಷ್ಟೂ ಔಷಧ, ಆಹಾರಕ್ರಮ, ಶಾಸ್ತ್ರ, ಎದೆಹಾಲು, ಮೊಲೆಬಾವು, ಇಬ್ಬರು ಮಕ್ಕಳನ್ನು ಸಂಭಾಳಿಸುವುದು ಹೇಗೆ ಎಂಬ ಎಲ್ಲ ಅಂದರೆ ಎಲ್ಲವನ್ನೂ ಕೊಂಚ ತುಂಟತನ, ಜಾಸ್ತಿ ನಿರ್ಭಿಡೆ, ಅಪಾರ ಲವಲವಿಕೆಯಿಂದ ಶ್ರೀಕಲಾ ನಮ್ಮ ಮುಂದೆ ಇಟ್ಟಿರುವುದು.

ಒಂದು ಎಳೆಯ ಜೀವ ಕಣ್ಣು ಮೂಗು ಅಂಟಿಸಿಕೊಂಡು ಹೊರಜಿಗಿಯುವ, ಬೆಳೆಯುವ ಕೌತುಕವನ್ನು ನಾವು ಇದುವರೆಗೆ ಗುಟ್ಟಾಗಿ ಇಟ್ಟುಬಿಟ್ಟಿದ್ದೆವಲ್ಲ ಎಂಬ ಹಳಹಳಿಕೆ ಈ ಪುಸ್ತಕ ಓದಿದ ನಂತರ ಕಾಡದೇ ಇರದು.

ಇಲ್ಲಿ ಸಲಹೆ ಎಂಬುದಿಲ್ಲ.. ಎಲ್ಲವೂ ಸ್ವಂತ ಅನುಭವ. ಹಳಬರು ವೈಜ್ಞಾನಿಕ ತಳಹದಿಯ ಮೇಲೇ ಬಹಳಷ್ಟು ಸಂಪ್ರದಾಯ ಆಹಾರ ಕ್ರಮ ಔಷಧ ರೂಪಿಸಿದ್ದು ಯಾವುದೂ ಸತ್ವಹೀನವಲ್ಲ ಎಂಬುದಕ್ಕೆ ಕಾರಣಗಳೂ ಇಲ್ಲಿ ಸಿಕ್ಕುತ್ತ ಹೋಗುತ್ತವೆ.

ಬರಹದ ಓಘ ಶ್ರೀಕಲಾರಿಗೆ ಸಿದ್ದಿಸಿದೆ. ಎಲ್ಲಿಯೂ ಚೂರೂ ನಿಶ್ಕಾಳಜಿ ಇಲ್ಲ. ಅಪಾರ ಶ್ರದ್ದೆಯಿಂದ ಎಲ್ಲವನ್ನೂ ಅಚ್ಚುಕಟ್ಟಾಗಿ ಗಮನಿಸಿ ನೋಡಿ, ಅನುಭವಿಸಿ, ಕೇಳಿ ತಿಳಿದು ಬರೆದ ಬರಹಗಳಿವು. ಹೆರಿಗೆ ನೋವು ಗುರುತಿಸುವುದು.. ಅದು ಬರುವ ಬಗೆ.. ಬಂದು ಹೋಗುವ ನಡುಮಧ್ಯ “ಮುಕ್ಕಲು” ತಯಾರಾಗುವುದು ಹೇಗೆ, ಬಾಳಂತಿ ಲೇಹ್ಯ, ಬೀಸಿಕಾಸುವ ಗಿಡಮೂಲಿಕೆ ಔಷಧಗಳು, ಒಡಮೆಣಸು, ಕಂಬಳಿಯ ಗುಪ್ತೋಷ್ಣ, ಗಾಳಿಭೂತಕ್ಕೆ ಕೈಕತ್ತಿ, ಸೊಂಟದ “ಸೀರೆ ಕಟ್ಟು”, ಮೆಣಸೌಷಧ.. ಎಲ್ಲದರ ಕುರಿತಾಗಿಯೂ ಇಲ್ಲಿ ಸುಲಲಿತ, ಗಟ್ಟಿಯಾದ ಬರಹಗಳಿವೆ.

ಹೆಣ್ಣುಮಕ್ಕಳಿರುವ ನಮ್ಮೆಲ್ಲರಿಗೂ ಕೈ ದೀವಿಗೆಯಾದ ಈ ಪುಸ್ತಕದ ಹುಟ್ಟಿಗೆ ಕಾರಣವಾದ ಶ್ರೀಕಲಾರ ಬಾಣಂತನದ ರೂವಾರಿ- ಅತ್ತೆಯ ಅಮ್ಮ ಅರಲಗೋಡಿನ ಗೌರಮ್ಮ ಎನ್ ಭಟ್ ಅವರಿಗೆ ನನ್ನ ನಮಸ್ಕಾರ ಸಲ್ಲುತ್ತದೆ.

ಬಾಣಂತನದ ಕುರಿತಾಗಿ ಒಂದೆರಡು ವೈದ್ಯೆಯರು ಬರೆದ ಸಲಹಾ ರೂಪದ ಪುಸ್ತಕಗಳನ್ನು ಬಿಟ್ಟರೆ ಸ್ವತಃ ಬಾಳಂತಿಯೇ ಇಷ್ಟು ಅಚ್ಚುಕಟ್ಟಾಗಿ ಸ್ವಾನುಭವವನ್ನು ದಾಖಲಿಸಿರುವ ಅನುಭವ ನನಗೆಲ್ಲೂ ಕಂಡುಬಂದುದಿಲ್ಲ. ಅದರಲ್ಲೂ ಶ್ರೀಕಲಾ ಈಗಿನ ಹುಡುಗಿ.. ಐಟಿ, ಬಿಟಿಯ ಕಾಲದಲ್ಲೂ ಹೆಣ್ಣಿನ ಲೋಕ ಮಾತ್ರ ಅರಿವಿನ ಪರದೆಯ ಆಚೆಗಿದೆ ಇನ್ನೂ.. ಹಾಗಾಗಿ ಶ್ರೀಕಲಾರ ಈ ಹೆಜ್ಜೆಗೆ ಮಹತ್ವದ ತೂಕವಿದೆ..

ಒಟ್ಟಿನಲ್ಲಿ “ಬಾಳಂತಿ ಪುರಾಣ” ಓದಿ ಬದಿಗಿಟ್ಟುಬಿಡುವ ಪುಸ್ತಕವಲ್ಲ. ಎಲ್ಲ ಬಸುರಿ, ಬಾಣಂತಿಯರೂ, ಅವರ ಅಮ್ಮ ಅತ್ತೆಯರೂ ಕೈಗೆ ಸಿಗುವ ಹಾಗೆ ಬಾಣಂತಿ ಬಟ್ಟೆ, ಶಿಶುವಿನ ತೊಟ್ಟಿಲಿನ ಜೊತೆಗೇ ಇಟ್ಟುಕೊಳ್ಳಬೇಕಾದ ಪುಸ್ತಕ ಎಂಬುದರಲ್ಲಿ ಎರಡು ಮಾತಿಲ್ಲ.

ಈ ಕೃತಿ ಕೊಳ್ಳಲು-

https://avadhimag.in/?page_id=201769

‍ಲೇಖಕರು avadhi

April 19, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: