ಮುಖೇಡಿಗಳ ಮುಖಗವುಸು ಕಳಚುವ ಕಾಲ ಬಂದಿದೆ..

ಈ ವಾಟ್ಸಾಪ್, ಫೇಸ್ ಬುಕ್, ಪ್ರಜ್ಞಾಹೀನ ಸುದ್ದಿವಾಹಿನಿಗಳ ಪ್ರಭಾವದಿಂದ ಸುಳ್ಳು. ಅಸತ್ಯಗಳ ಸುಳಿಗೆ ಬೀಳುವುದಕ್ಕಿಂತ ಮೊದಲು ಈ ದೇಶದ ಚುನಾವಣೆಯಲ್ಲಿ ಅಸಲಿಗೆ ಜನರ ಅಭಿಪ್ರಾಯ, ಆಂತರ್ಯದಲ್ಲಿ ಏನಿದೆ ಎಂಬುದನ್ನು ಅರಿಯಲು ಉರಿ ಬಿಸಿಲಿನಲ್ಲಿ ಹೊರಬಿದ್ದು ಹಳ್ಳಿಗಳ ಕಡೆ ಹೊರಟೆ.

ಹೋಬಳಿ ಕೇಂದ್ರವೊಂದರಲ್ಲಿ ಹದಿಹರೆಯದ ಹುಡುಗರ ಗುಂಪೊಂದು ಮೈಮೇಲೆ ದೆವ್ವಹೊಕ್ಕಂತೆ ಮೋದಿ..ಮೋದಿ..ಮೋದಿ..ಮೋದಿ……. ಎಂದು ಕೂಗುತ್ತಾ ಕುಣಿದಾಡುತ್ತಿದ್ದರು. ಸುತ್ತ ನೆರೆದವರ ಪರಿವೆ ಇಲ್ಲದಂತೆಯೂ, ನೆರದವರೆಲ್ಲರೂ ಉತ್ತೇಜಕರು ಎಂಬಂತೆಯೂ ಈ ಗುಂಪು ಕೇಕೆ ಹಾಕುತ್ತಿತ್ತು. ನೆರೆದವರು ಮೂಕರಂತೆಯೂ , ಅಥವಾ ಈ ಶಬ್ದ ಮಾಲಿನ್ಯಕ್ಕೆ ಪೀಡಿತ ರೋಗಿಗಳಂತೆಯೂ ನಿಂತು ನೋಡುತ್ತಿದ್ದರು. ನೆರೆದ ಗುಂಪಿನ ಅನತಿ ದೂರಲ್ಲಿ ನಿಂತಿದ್ದ ಹಣ್ಣು ಹಣ್ಣಾದ ಮುದುಕರೊಬ್ಬರು “ಥೂ….. ಇವ್ರ ಅಬ್ಬರ ಅಡ್ಗ, ಯಾಕಿಂಗ್ ಕುಣೀತೀರೋ.., ಏನ್ ಈ ದೇಸುಕ್ಕೆ ಬರಬಾರದ್ ಬಂದೊಗೈತೆ ಹಿಂಗ್ ಕುಣೀತಿರ? .. ” ಎಂದು ಸಿಡಿಮಿಡಿಗೊಳ್ಳುತ್ತಿದ್ದರು. ಅದ್ಯಾವುದನ್ನೂ ಲೆಕ್ಕಿಸದೆ ಆ ಗುಂಪು ಮದೋನ್ಮತ್ತಗೊಂಡು ಕುಣಿಯುತ್ತಲೆ ಇತ್ತು.

ಅಕ್ಷರದ ಗಂಧಗಾಳಿ ಗೊತ್ತಿಲ್ಲದ ಸುಮಾರು 80 ವಯಸ್ಸು ದಾಟಿದ್ದರೂ ಇನ್ನೂ ಕಣ್ಣು,ಕಿವಿ, ಹೃದಯ, ಮೆದುಳು! ನ್ನು ಎಚ್ಚರಪ್ರಜ್ಞೆಯಿಂದಲೆ ಕಾಯ್ದುಕೊಂಡಿರುವ ತಾತನನ್ನು ನಾನು ಗಮನಿಸುತ್ತಲೆ ಹೋದೆ. ಇದನ್ನು ಕಂಡ ತಾತ ನಾನೇನೋ ಅವರ ಮಾತಿಗೆ ಕಾದಿರುವನಂತೆ ಕಂಡೆನೋ ಏನೋ, ನನ್ನೊಂದಿಗೆ ಮಾತಿಗಿಳಿದರು. “ನೋಡ್ರಪ್ಪ, ಈ ಜನುಕ್ಕೆ ಏನ್ ಬಂದಿದೆ ರೋಗ..ಎಂತೆಂತಳೋ ಹೋಗ್ ಬುಟ್ರು, ಅಂತಹ ಇಂದ್ರಾಗಾಂಧಿನೇ ಸೋತು ಸುಣ್ವಾಗಿ ಹೋದ್ಲು. ಈ ಮೋದಿ ಯಾವ್ ಲೆಕ್ಕ? , ಈ ಹುಡ್ರುಗೆ ಏನ್ ಗೊತ್ತು , ಕುಡ್ದು ಕುಣೀತಾವೆ. ಕೆರೆ ಕಟ್ಟ್ಯಾಗೆ ನೀರಿಲ್ಲ, ನೆಲ ಒಣಗಿ ಬೆಳೆ ಇಲ್ಲ, ಕೆಲ್ಸ ಕಾರ್ಯಕ್ಕೆ ಕರೆಯೋರಿಲ್ಲ, ವಿಷಕುಡ್ದು ಸಾಯೋಣ ಅಂದ್ರೆ ವಿಷ ತಗೋಳೊಕು ದುಡ್ಡಿಲ್ಲ, ಹಂಗಾಗೆದೆ ನಮ್ ಪರಿಸ್ಥಿತಿ, ದೇಸಕ್ಕೋಸ್ಕರ ಹೋರಾಡಿದ ಪುಣ್ಯಾತಮ್ರು ಕಣ್ಮುಚ್ಕೋಂಡೊದ್ರು, ಈಗಿನ ಹುಡುಗ್ರಿಗೆ ತಲೀಗೆ ವಿಷ ತುಂಬವ್ರೆ.. ಏನ್ ಬಂತಪ್ಪಾ ಕಾಲ… ಸರಿಯಾಗಿ ಬುದ್ದಿ ಕಲ್ಸ್‌ಬೇಕು ..” ತಾತ ತನ್ನ ಪಾಡಿಗೆ ತಾನು ಮಾತನಾಡುತ್ತಾ ಹೋದರು. ನಾನು ಮೌನದಿಂದಲೆ ತಲೆಯಾಡಿಸುತ್ತಾ ನಿಂತಿದ್ದೆ.

ಉನ್ಮತ್ತರಾಗಿ ಕುಣಿಯುತ್ತಿದ್ದ ಹರೆಯದ ಹುಡುಗರು ಒಂದೆಡೆ, ಜೀವನದ ಕೊನೆಯ ಕಾಲದ ಅಂಚಿನಲ್ಲಿ ನಿಂತಿದ್ದ ಈ ತಾತ ಇನ್ನೊಂದು ಕಡೆ. ಈ ಎರಡು ರೂಪಗಳನ್ನು ಕಂಡಾಗ ಅಧಿಕಾರ ರಾಜಕಾರಣ ಎಂಬುದು ಜನರ ತಲೆಮಾರುಗಳ ನಡುವೆ ಅದೆಷ್ಟು ಅಂತರದ ಕಂದಕವನ್ನು ಅಗೆದು ಹಾಕಿದೆಯಲ್ಲಾ ಎಂದು ಮನಸ್ಸು ಯೋಚಿಸುತ್ತಿರುವಾಗ ಜರ್ಮನಿಯ ಸಾಮಾಜಿಕ ಚಿಂತಕ , ಕವಿ ಥಾಮಸ್‌ಮನ್ ಹೇಳಿದ “IN out time the destiny of man presents its meaning in political terms” . ಈ ಮಾತು ನೆನಪಾಯಿತು. “ನಮ್ಮ ಕಾಲದಲ್ಲಿ ಮಾನವನ ಅದೃಷ್ಟ ತನ್ನ ಅರ್ಥವನ್ನು ರಾಜಕೀಯವಾಗಿ ವ್ಯಕ್ತಪಡಿಸುತ್ತದೆ”. ಎಂದು ಹೇಳುವ ಈ ಚಿಂತಕನ ಈ ವ್ಯಾಖ್ಯಾನ ಅದೆಷ್ಟು ಅರ್ಥವನ್ನು ಕಟ್ಟಿಕೊಡಬಲ್ಲದು. ಇದು ಈ ಚಿಂತಕನ ಕಾಲಘಟ್ಟದ ಮಾತಿದ್ದರೂ ಅದನ್ನು ಈಗಿನ ಭಾರತದ ಕಾಲಘಟ್ಟಕ್ಕೂ ಅನ್ವಯಿಸಿ ನೋಡಿದಾಗ ಭಾರತದ ಜನರ ಅದೃಷ್ಟದ ಅರ್ಥವನ್ನು ರಾಜಕೀಯವಾಗಿ ವ್ಯಕ್ತಪಡಿಸುವುದು ಎಂದರೆ ವ್ಯಕ್ತಿಯೋರ‍್ವನನ್ನು ಅಂಧಭಕ್ತಿಯಿಂದ ಆರಾಧಿಸುವುದೇ ಎಂದರ್ಥವಾ? ಎಂದು ಒಮ್ಮೆ ದಿಗಿಲುಗೊಂಡೆ. ಆಗಿರಲಾರದು; ಸಣ್ಣ ಜನರ ಗುಂಪೊಂದು ದೊಡ್ಡ ದನಿಯಲ್ಲಿ ಅಬ್ಬರಿಸುತ್ತಿದೆ. ಬಹುಜನರ ಗುಂಪಿನ ಮಾತುಗಳು ಈ ಸದ್ದಿನಲ್ಲಿ ಯಾರಿಗೂ ಕೇಳುತ್ತಿಲ್ಲ.

ಹಿಂದೊಮ್ಮೆ ನಾನು ತಾಜ್‌ಮಹಲ್ ನೋಡಿಕೊಂಡು ವಾಪಾಸ್ ದೆಹಲಿ ತಲುಪಲು ಆಗ್ರಾ ದ ರೈಲ್ವೆ ನಿಲ್ದಾಣಕ್ಕೆ ಬಂದು ಟಿಕೆಟ್‌ಗಾಗಿ ಉದ್ದನೆಯ ಸಾಲಿನಲ್ಲಿ ನಿಂತಿದ್ದೆ. ಸುಮಾರು ಹದಿನೇಳು ವರ್ಷದ ಹುಡುಗನೊಬ್ಬ ಏಕಾಏಕಿ ಟಿಕೆಟ್‌ಕೌಂಟರ್ ನ ಮುಂಭಾಗಕ್ಕೆ ನುಗ್ಗಿ ಟಿಕೆಟ್‌ಗೆ ಕೈ ಚಾಚಿದ. ಸಾಲಿನಲ್ಲಿ ನಿಂತಿದ್ದವರು ಇದನ್ನು ಖಂಡಿಸಿ ಸರದಿ ಸಾಲಿನಲ್ಲಿ ಬರುವಂತೆ ಅವನಿಗೆ ತಾಕೀತು ಮಾಡಿದರು. ತಕ್ಷಣ ಆ ಹುಡುಗ ತನ್ನ ಸೊಂಟದಿಂದ ಸಣ್ಣದೊಂದು ಚಾಕು ತೆಗೆದು ದೊಡ್ಡದನಿಯಲ್ಲಿ ಕೂಗುತ್ತಾ ಸಾಲಿಗರ ಮೇಲೆ ಮುನ್ನುಗ್ಗಿದ. ನಾನು ನನ್ನ ಗೆಳೆಯರು ಸೇರಿದಂತೆ ಸುಮಾರು 80-90 ಜನರಿದ್ದ ಸರದಿ ಸಾಲು ದಿಕ್ಕಾಪಾಲಾಗಿ ಹೋಗಿತ್ತು. ಆತ ಸಲೀಸಾಗಿ ಟಿಕೆಟ್ ಪಡೆದುಕೊಂಡು ಕಾಣೆಯಾದ. ಈ ಜನರ ದೌರ್ಬಲ್ಯವನ್ನು ಆ ಹುಡುಗ ಚನ್ನಾಗಿಬಲ್ಲವನೇ ಆಗಿದ್ದ. ಅದಕ್ಕೆ ತಕ್ಕಂತೆ ಆತ ಸಲೀಸಾಗಿ ಭಯವನ್ನು, ದೊಡ್ಡ ಸದ್ದನ್ನು ಹುಟ್ಟುಹಾಕಿ ತನ್ನ ಕಾರ್ಯಸಾಧನೆಯನ್ನು ಮಾಡಿಕೊಂಡಿದ್ದ. ನಾನು ಮತ್ತೆ ಸಾಲಿನಲ್ಲಿ ನಿಂತು ಟಿಕೆಟ್ ಪಡೆದು ರೈಲು ಹತ್ತಲು ಹೊರಟಾಗ ಅದೇ ಹುಡುಗ ಸ್ಟೇಷನ್ನಿನ ಹೆಬ್ಬಾಗಿಲಲ್ಲಿ ಹತ್ತಾರು ಟಿಕೆಟ್‌ಗಳನ್ನು ಬ್ಲಾಕ್‌ನಲ್ಲಿ ಮಾರುತ್ತಿದ್ದ. ಸಾಲು ಬಿಟ್ಟು ಓಡಿ ಹೋದವರಲ್ಲಿ ಕೆಲವರು ಅವನ ಬಳಿಯೇ ಹೋಗಿ ದುಪ್ಪಟ್ಟು ದುಡ್ಡು ಕೊಟ್ಟು ಟಿಕೆಟ್ ಖರೀದಿಸಿ ರೈಲು ಹತ್ತುತ್ತಿದ್ದರು.

ಇವತ್ತು ಇದೇ ಮಾದರಿ ಘಟನೆಯೂ ದೇಶದ ಪ್ರಭುತ್ವ ನಿರ್ಧಾರದಲ್ಲಿ ನಡೆಯುತ್ತಿದೆಯಾ ಎಂಬ ಅನುಮಾನ ನನ್ನನು ಬಲವಾಗಿ ಕಾಡುತ್ತಿದೆ. ಪ್ರಜಾಪ್ರಭುತ್ವದಲ್ಲಿ ನಿಯಮಗಳ ಸಾಲು ಉಲ್ಲಂಘಿಸಿ ಅಧಿಕಾರ ಪಡೆದುಕೊಳ್ಳುವ , ಭಯ ಮತ್ತು ಸದ್ದನ್ನು ಸೃಷ್ಟಿಸಿ ಗುರಿ ತಲುಪುವ ಯೋಜಿತ ಸಂಚೊಂದು ನಡೆಯುತ್ತಿದೆ. ಸಂವಿಧಾನದ ಸಾಲಿನಲ್ಲಿ ನಿಂತು ಆಕ್ಷೇಪ ಮಾಡಿದವರನ್ನು ದೇಶಭಕ್ತಿಎಂಬ ಚಾಕುಚೂರಿಗಳಿಂದ ಹೆದರಿಸಿ ಓಡಿಸುವ ಕೆಲಸವೇ ನಡೆದಿದೆ ಎಂದರೆ ತಪ್ಪೇನು ಆಗಲಾರದೇನೊ..!

ಪ್ರಜಾಪ್ರಭುತ್ವದ ದೊಡ್ಡ ರಾಷ್ಟ್ರವೊಂದರ ಜನಾಡಳಿತ ನಿರ್ಧರಿಸುವಾಗ ದೇಶದ ಜನರ ಆಶೋತ್ತರಗಳ ಚರ್ಚೆ ಆಗಬೇಕು . ಜನಾಭಿಪ್ರಾಯಗಳನ್ನು ಪರಿಗಣಿಸಿ ಉತ್ತರಿಸುವ ಉತ್ತರದಾಯಿತ್ವವನ್ನು ಪ್ರದರ್ಶಿಸಬೇಕು, ಅದಾಗುತ್ತಿಲ್ಲ. ಐದು ವರ್ಷ ಆಡಳಿತ ನಡೆಸಿದ ಪಕ್ಷವೊಂದು ತನ್ನ ಸಾಧನೆಯನ್ನು , ಕೊಟ್ಟಭರವಸೆಗಳ ಬಗ್ಗೆ ಸೊಲ್ಲೆತ್ತುತ್ತಿಲ್ಲ. ರಾಮನಿಂದ ಆರಂಭಗೊಂಡ ಅಧಿಕಾರ ಬೇಟೆ ಪುಲ್ವಾಮದೊಂದಿಗೆ ಮತ್ತೊಂದು ಸುತ್ತಿಗೆ ಹೊರಟು ನಿಂತಿದೆ. ಇಲ್ಲಿ ಜನರು ಪ್ರಶ್ನಿಸುವಂತಿಲ್ಲ. ಕೇವಲ ಅವರ ಮಾತುಗಳನ್ನು ಕೇಳಬೇಕಷ್ಟೆ. ಹಾಗೊಮ್ಮೆ ಪ್ರಶ್ನೆಗಳಿದ್ದರೂ ಗದ್ದಲದಲ್ಲಿ ಯಾರಿಗೂ ಕೇಳದಂತೆ ನೋಡಿಕೊಳ್ಳಲಾಗುತ್ತಿದೆ. ರಾಜಕೀಯ ಅಭಿಪ್ರಾಯವೂ ಇಂದು ದೇಶದ್ರೋಹದ ಸರಪಳಿಯಲ್ಲಿ ಬಂಧಿಯಾಗಿ ನರಳುವ ಕಾಲವೊಂದು ಜನರನ್ನು ಬಾಧಿಸುತ್ತಿದೆ. ಅಶಾಂತಿಯನ್ನೆ ಸೃಷ್ಟಿಸಿ ರಾಜಕೀಯ ಕಾರ್ಯಸಾಧನೆ ಮಾಡಿಕೊಳ್ಳಲು ಹೊರಡುವವರ ನಡುವೆ ಅದೇ ರಾಜಕೀಯವಾಗಿ ಅತ್ಯುತ್ತಮವಾದದ್ದನ್ನು ಸಾಧಿಸುವ ಪ್ರಯತ್ನಗಳನ್ನು ಜೀವಂತವಾಗಿರಿಸಿಕೊಳ್ಳವು ಕಾಲವೂ ನಮ್ಮ ನಡುವೆ ಇದೆ ಎಂಬುದನ್ನು ನಾವು ಕಂಡುಕೊಳ್ಳಬೇಕಿದೆ. ಈ ಹೊತ್ತಿನಲ್ಲಿ ಈ ದೇಶದ ಜನರ ಅದೃಷ್ಟದ ಅರ್ಥವನ್ನು ರಾಜಕೀಯವಾಗಿ ಅಭಿವ್ಯಕ್ತಿಸುವುದು ಎಂದರೆ ವ್ಯಕ್ತಿ ಪೂಜೆ, ಪೊಳ್ಳು ದೇಶಪ್ರೇಮ, ಸುಳ್ಳು ಗಳ ವಿರುದ್ದ ಮತಚಲಾಯಿಸುವ ಮೂಲಕ ಸಣ್ಣ ಗುಂಪಿನ ಸದ್ದನ್ನು ಅಡಗಿಸುವುದೇ ಆಗಿದೆ.

ಮಾತು ಮುಗಿಸುವ ಮುಂಚೆ ಉಳಿದು ಹೋದ ನೋವು ಇದು.

ಎಲ್ಲರೂ ಲೋಕಸಭಾ ಚುನಾವಣೆಯ ಅಬ್ಬರ, ಗುಂಗಿನಲ್ಲಿ ಮುಳುಗಿ ಹೋಗಿರುವಾಗ ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ನಾಲ್ವರು ರೈತರನ್ನು ಅರಣ್ಯ ಭೂಮಿ ಒತ್ತುವರಿ ಆರೋಪದ ಮೇಲೆ ಅಪರಾಧಿಗಳೆಂದು ಘೋಷಿಸಿ ಭೂಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯ ಒಂದು ವರ್ಷ ಜೈಲು, 10 ಸಾವಿರ ರೂ. ದಂಡ ವಿಧಿಸಿ ಶಿಕ್ಷೆ ಘೋಷಿಸಿತು. ಇದು ಯಾವ ಪತ್ರಿಕೆಗಳಲ್ಲೂ ಮುಖ್ಯವಾಗಿ ಸುದ್ದಿಯಾದದ್ದನ್ನು ನಾನು ನೋಡಲಿಲ್ಲ. ಯಾವ ಸುದ್ದಿವಾಹಿನಿಗಳು ರೈತರು ಜೈಲು ಪಾಲಾದದ್ದನ್ನು ತೋರಿಸಲಿಲ್ಲ. ಡಿಸ್ಕಷನ್ ನಡೆಸಲಿಲ್ಲ.ಷೋ ಕಾಲ್ಡ್ ರೈತ ನಾಯಕರು, ಜನಪ್ರತಿನಿಧಿಗಳು, ತಜ್ಞರು ಕುಳಿತು ಚರ್ಚೆ ನಡೆಸಲಿಲ್ಲ. ಜನಪ್ರತಿನಿಧಿಗಳ ನ್ಯಾಯಾಲಯ ಕೆಲವು ಜನಪ್ರತಿನಿಧಿಗಳನ್ನು ದೋಷಮುಕ್ತಗೊಳಿಸಿದ್ದು ಪ್ರಾಮುಖ್ಯತೆ ಪಡೆದುಕೊಂಡಷ್ಟು ಬಡರೈತರು ಜೈಲು ಪಾಲಾದ ಪ್ರಭುತ್ವಪ್ರೇರಿತ ದೋಷವೊಂದು ಯಾವ ಮಾಧ್ಯಮಗಳಿಗೂ ಮಹತ್ವದ್ದು ಎನಿಸಲೇ ಇಲ್ಲ. ಯಡಿಯೂರಪ್ಪ ಅವರ ಅಡಳಿತಾವಧಿಯಲ್ಲಿ ಭೂಕಂದಾಯ ಕಾಯ್ದೆ 1964ಕ್ಕೆ ತಿದ್ದುಪಡಿ ತಂದು 192 ಎ ಎಂಬ ಕರಾಳ ಶಾಸನವನ್ನು ರೂಪಿಸಿದ ಪರಿಣಾಮ ಬದುಕಿಗಾಗಿ ಅತಿಸಣ್ಣ ರೈತರು ಅರಣ್ಯಭೂಮಿ ಸಾಗುವಳಿ ಮಾಡಿಕೊಂಡಿದ್ದು ಇದೀಗ ಅಪರಾಧವಾಗಿ ಜೈಲು ಸೇರುವಂತಾಗಿದೆ. ಇದೇ ಕಾಲಕ್ಕೆ ಸುಪ್ರೀಂ ಕೋರ್ಟು ದೇಶದ 11.72.931 ಅರಣ್ಯವಾಸಿಗಳನ್ನು ಒಕ್ಕೆಲೆಬ್ಬಿಸಬೇಕಂದು ಫರ್ಮಾನು ಹೊರಡಿಸಿರುವುದು(ಸದ್ಯಕ್ಕೆ ತಡೆಹಿಡಿಯಲಾಗಿದೆ) ಈ ಚುನಾವಣೆಯ ಚರ್ಚಿತ ವಿಷಯವಾಗಬೇಕಿತ್ತು. ಇದರ ಬಗ್ಗೆ ಯಾವ ರಾಜಕೀಯಪಕ್ಷಗಳು ಸೊಲ್ಲೆತ್ತುತ್ತಿಲ್ಲ. . ಮತ ಬೇಟೆಯಲ್ಲಿ ಧರ್ಮ, ದೇಶಪ್ರೇಮವೆ ಮುಖ್ಯವಾಗಿರುವಾಗ ಬಡರೈತರ ಬದುಕಿನಹಕ್ಕು ಯಾರಿಗೆ ತಾನೆ ಮುಖ್ಯವಾಗುವುದು ಹೇಳಿ?

ರೆಸಾರ್ಟ್, ಹೋಂ ಸ್ಟೇ, ಪ್ರವಾಸೋದ್ಯಮ ಅಭಿವೃದ್ದಿ ಹೆಸರಿನಲ್ಲಿ ಸಾವಿರಾರು ಅರಣ್ಯ ಭೂಮಿ ಕಬಳಿಕೆಯಾಗಿರುವುದು ಮತ್ತು ಆಗುತ್ತಿರುವುದು ಅಂಗೈ ಹುಣ್ಣಿನಂತೆ ಕಾಣುತ್ತಿರುವಾಗ ತುತ್ತು ಅನ್ನಕಾಗಿ ತುಂಡು ಅರಣ್ಯ ಭೂಮಿ ಸಾಗುವಳಿ ಮಾಡಿದ ರೈತರು ಇಂದು ಜೈಲು ಪಾಲಾಗಿರುವುದು ಪಶ್ಚಿಮಘಟ್ಟದ ರೈತಾಪಿ ಬದುಕಿನ ಸರ್ವನಾಶಕ್ಕೆ ಬರೆದ ಮುನ್ನುಡಿಯಂತಿದೆ. ಮಲೆನಾಡಿನ ಕಣ್ಣೀರ ಮನೆಯಲ್ಲಿ ನಿಂತು ಮತ ಕೇಳುತ್ತಿರುವವರಲ್ಲಿ ಲವಲೇಷವೂ ಪಶ್ಚಾತಾಪ ಕಂಡು ಬರುತ್ತಿಲ್ಲ. ಮುಖೇಡಿಗಳಾಗಿ ಚೌಕಿದಾರನೆಂಬ ಸುಳ್ಳನ ಮುಖವಾಡ ಹೊತ್ತು ತಿರುಗುತ್ತಿದ್ದಾರೆ.

‍ಲೇಖಕರು avadhi

April 19, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

೧ ಪ್ರತಿಕ್ರಿಯೆ

  1. Padmanabha Agumbe

    ಮುಖೇಡಿಗಳ ಮುಖವಾಡದ ಬಗ್ಗೆ ಬರೆಯುವಾಗ ಕಿಂಚಿತ್ತಾದರೂ ನಮ್ಮಲ್ಲಿ ಪರ್ಯಾಯ ವ್ಯವಸ್ಥೆಇದೆಯೇ ಎಂಬುದರ ಬಗ್ಗೆ ಯೋಚನೆ ಮಾಡಬೇಕಿತ್ತಲ್ಲವೇ?

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: