ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬಾಗಿಲು ಬಡಿದ ಸದ್ದು!

pravar

ಪ್ರವರ ಕೊಟ್ಟೂರು  

ಬಾಗಿಲು ಬಡಿದ ಸದ್ದು!
ರಾತ್ರಿಯ ನಡುವೆ‌ ಯಾರು ಬಂದಾರು?
ಯಾರು?
ನಾನು..
ನೀನು ಅಂದ್ರೆ?
ನಾನು ಅಂದ್ರೆ ನಾನು ಅಷ್ಟೆ.

door3ದನಿಯೊಳಗೆ
ಸಣ್ಣಗಿನ ಆತಂಕ,
ಗಡಿಯಾರದ ಟಿಕ್ ಟಿಕ್ ಸದ್ದಿನೊಂದಿಗೆ
ಉಸುರಿನ ನಡುಕ
ಸೇರಿಕೊಳ್ಳುತ್ತಿದೆ..

ನಿಂಗೆ ಏನಾದ್ರು ಹೆಸರು ಇದೆನಾ?
ಹೆಸರೂ…
ನಡುವೆ ಸೂಜಿ ಮೊನೆಯ ವಿರಾಮ,
“ಹೂಂ ಇತ್ತು, ಆದ್ರೆ ಈಗಿಲ್ಲ,
ನನ್ನ ಸುತ್ತ ಇದ್ದೋರು ಹೆಸರುಗಳನ್ನ
ಒಂದೊಂದಾಗೆ ಹೊತ್ಕೊಂಡ್ ಹೋದ್ರು
ನನ್ನ ಬಳಿ ಹೇಳಲಿಕ್ಕೊಂದೂ ಹೆಸರಿಲ್ಲ”

ಎಲ್ಲಿಂದ ಬಂದೆ?
ಎಲ್ಲಿಂದ ಅಂದ್ರೆ ಹೇಗೆ ಹೇಳೋದು!
ಆದ್ರೆ, ಸಾವಿರ ರಾತ್ರಿಯ
ಕನಸುಗಳನ್ನು ಜೋಪಾನವಾಗಿ
ದಾಟಿಕೊಂಡು ಬಂದ ನೆನಪು

ಬರುವ ದಾರಿಯಲ್ಲಿ….
ಫಲವತ್ತಾ ನೆಲ,
ಹೊಲದ ತುಂಬಾ ಹೂವು,
ಬುಡಕ್ಕೆ ಸಾಲು ಹೆಣಗಳು,
ಬಾಯೊಳಗೆ ನೊರೆ,
ವಿಷದ ಬಾಟಲಿ

ಆಗಷ್ಟೇ ಚರ್ಮ ಎರೆದು
ಬೆಳ್ಳಗೆ ಮಾಡಿಟ್ಟ ಜನ,
ಕತ್ತು ಮುರಿದ
ಆಟದ ಗೊಂಬೆ,
ಹಳದಿ ರಿಬ್ಬನ್ನು

ರಾತ್ರಿ ಕತ್ತಲ ಇಬ್ಬಾಗಿಸಿದ
ದನಿ ಮತ್ತು ಚಳಿ

ವ್ಯತ್ಯಾಸ ಅಷ್ಟಕ್ಕಷ್ಟೆ
ಅನ್ನಿಸಿತು

ಮತ್ತೆ ಬಾಗಿಲು ಬಡಿದ ಸದ್ದು,
ಎದೆಯೊಳಗಿನ ದುಗುಡ
ಮಗುವಿನಷ್ಟೇ ಹಠ
ನಿಜವಾಗಿಯೂ ಯಾರು?
ನೋಡಲಿಕ್ಕೆ ಹೇಗಿದ್ದೀತು?
ಮುಖ?

ಹೊರಗೆ ಮೈ ಕೊರೆವ ಚಳಿ,
ಕೋಣೆಯೊಳಗಿಷ್ಟು ಇರಲಿಕ್ಕೆ ಜಾಗ ಕೊಡಿ,
ಬಾಗಿಲು ತೆಗೆಯಿರಿ,
ಮತ್ತೆ ಮತ್ತೆ ಸಾವು…

door manನೀರವ ಮೌನದ ರಾತ್ರಿ
ಉಗುಳು ನುಗಿಕೊಂಡ
ಸದ್ದು

ನೀನು ಅಪರಿಚಿತ?
ಒಳಕ್ಕೆ ಹೇಗೆ ಬಿಟ್ಟುಕೊಳ್ಳಲಿ?
ಅಪರಿಚಿತ?
ಹೇಗೆ?
ಕತ್ತಲ ನಡುವೆ ದನಿಯ ಹಂಚಿಕೊಂಡಿದ್ದೇವೆ,
ನಿಟ್ಟುಸಿರ ನಡುವೆ ನೋವುಗಳ ಹಂಚಿಕೊಂಡಿದ್ದೇವೆ
ಹೊರ ಮತ್ತು ಒಳ ಅಂತರದ ನಡುವೆ
ಆತ್ಮಗಳ ಹಂಚಿಕೊಂಡಿದ್ದೇವೆ

ನನ್ನ ಮೈ ಕೊರೆಯುತ್ತಿರುವ
ಚಳಿ ನಿನಗೆ ತಿಳಿದಿದೆ,
ನಿನ್ನ ಎದೆ ಕೊರೆಯುತ್ತಿರುವ
ಭಯ ನನಗೆ ತಿಳಿದಿದೆ

ಕೋಣೆಯ ನಡುವೆ ನೀನು
ಮತ್ತು
ಕತ್ತಲ ನಡುವೆ ನಾನು
ಅದು ಹೇಗೆ ಅಪರಿಚಿತರಾಗಿರಲು ಸಾಧ್ಯ?

ಇಂಚಿಂಚೂ ನುಣುಪಾಗುತ್ತಾ
ಹೋಗುತ್ತಿದ್ದೇನೆ
ಕೊನೆಯ ಕ್ಷಣದಲ್ಲಾದರೂ
ಬಾಗಿಲು ತೆರೆದು
ನಿನ್ನ ಆತ್ಮಸಾಕ್ಷಿಯ ಉಳಿಸಿಕೊ…

ಬಾಗಿಲು ಬಡಿವ ಸದ್ದು
ಗೌಣವಾಗುತ್ತಾ ಹೋಗುತ್ತದೆ
ದೂರದಲ್ಲೆಲ್ಲೋ ಹೂವು ಜಾರುತ್ತಿರುವಂತೆ…

ಕೋಣೆ ತುಂಬಾ ಗಾಢ ಮೌನಗತ್ತಲು
ಇದ್ದಕ್ಕಿದ್ದಂತೆ
ಆತ್ಮವ ಯಾರೋ ದೋಚಿದಂತೆ

ಚಿಲಕ ಸರಿಸಿ
ಬಾಗಿಲು ತೆಗೆದರೆ,
ಕೊಣೆಯಂತೆ
ಹೊರಗೂ ಖಾಲಿ

‍ಲೇಖಕರು Admin

4 July, 2016

3 Comments

  1. ಬಿ. ಸುರೇಶ

    ಅದ್ಭುತ ಪದ್ಯ…
    “ಕೋಣೆಯೊಳಗೆ ನೀನು – ಕತ್ತಲೊಳಗೆ ನಾನು” ಎಂಬ ಪ್ರಯೋಗ ಮತ್ತು ಕಟ್ಟಕಡೆಯಲ್ಲಿ ಬಾಗಿಲು ತೆರೆದವನಿಗೆ ಎದಿರಾಗುವ ಬಯಲು ಅನೇಕ ದ್ವನಿ ಸಾಧ್ಯತೆ ಹೊರಡಿಸುತ್ತದೆ.
    ಡಬಲ್ ಸಲಾಂ @ಪ್ರವರ ಕೊಟ್ಟೂರು

  2. nagraj harapanahalli

    ಕತ್ತಲ ನಡುವೆ ದನಿಯ ಹಂಚಿಕೊಂಡಿದ್ದೇವೆ,
    ನಿಟ್ಟುಸಿರ ನಡುವೆ ನೋವುಗಳ ಹಂಚಿಕೊಂಡಿದ್ದೇವೆ
    ಹೊರ ಮತ್ತು ಒಳ ಅಂತರದ ನಡುವೆ
    ಆತ್ಮಗಳ ಹಂಚಿಕೊಂಡಿದ್ದೇವೆ…ಈ ಸಾಲುಗಳು ಇಷ್ಟವಾದವು. ಮೇಲ್ನೋಟಕ್ಕೆ ಕವಿತೆ ಸರಳ ಎನ್ನಿಸಿದರೂ, ಕಥನ ಸ್ವರೂಪದಲ್ಲಿ ಬಿಚ್ಚಿಕೊಳ್ಳುವ ಕವಿತೆ ಭಾಷಾ ಮತ್ತು ಅರ್ಥಸಾಧ್ಯತೆಗಳನ್ನು ದುಡಿಸಿಕೊಳ್ಳುತ್ತಾ ಅರಳಿದೆ.

  3. Vihi wadawadagi

    Neenu aparichita nantarada saalugalu adbhuta nimage matra sadya anisuvantide… Nimage enu helidaru kadimeye…vandanegalu

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading