ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬಸವನಗೌಡ ಹೆಬ್ಬಳಗೆರೆ ಕವಿತೆ- ಮೂಕ ಮನದ ಮಾತು…

ಬಸವನಗೌಡ ಹೆಬ್ಬಳಗೆರೆ

ಶತೃ ದೇಶದ ವಿರುದ್ಧ
ಕದನ ಗೆದ್ದು
ಸರ್ವರೂ ಪಟಾಕಿ ಹೊಡೆದು,
ಸಿಹಿ ಹಂಚಿ ಸಂಭ್ರಮಿಸುವಾಗ…
ವೀರಮರಣ ಹೊಂದಿದ ವ್ಯಕ್ತಿಯ
ಕುಟುಂಬದವರ ನೋವನು ನೆನೆದು
ದುಃಖ ಉಮ್ಮಳಿಸುತ್ತದೆ!!

ತಮ್ಮ ನೆಚ್ಚಿನ ವ್ಯಕ್ತಿಯ ಕಟೌಟ್ ಗಳಿಗೆ
ಕ್ಷೀರಾಭಿಷೇಕ ಮಾಡುವಾಗ …
ಕುಡಿಯಲು ಹಾಲಿಲ್ಲದೇ
ಹಸಿವಿನಿಂದ ಚೀರುವ ಮಕ್ಕಳ ನೆನೆದು
ಹೃದಯಕ್ಕೆ ಘಾಸಿಯಾಗುತ್ತದೆ!!!

ಸಾವಿರಾರು ಮರಿಪಕ್ಷಿಗಳ
ಆವಾಸ ಸ್ಥಾನವಾಗಿರುವ ಮರವನು
ತನ್ನ ಡೂಪ್ಲೆಕ್ಸ್ ಮನೆಯ ಕಟ್ಟಲು ಕಡಿಯುವಾಗ ….
ಮರದಿಂದ ಬಿದ್ದು ಸತ್ತ
ಗೂಡಿನ ಮರಿಪಕ್ಷಿಗಳನು ಕಂಡು
ಮನ ಬಿಕ್ಕುತ್ತದೆ!!!

ವಿಲಾಸಿ ಜೀವನಕ್ಕೆ ಮಾರು ಹೋಗಿ
ಶಾಪಿಂಗ್ ಮಾಲ್ ಗಳಲಿ
ಕೇಳಿದಷ್ಟು ಬಿಲ್ ಕೊಟ್ಟು ಕೊಡುವವನೇ..
ರಸ್ತೆ ಬದಿಯಲಿ ಜೀವನ ನಿರ್ವಹಣೆಗೆ
ಸೊಪ್ಪು ಮಾರುವ ಮುದಿ ಅಜ್ಜಿಯ ಬಳಿ
ಒಂದು ರೂಪಾಯಿಗೂ
ಚೌಕಾಸಿ ಮಾಡುವವರನು‌ ನೋಡಿ
ಮನದಲ್ಲಿ ದ್ವಂದ್ವ ಮೂಡಿ
ಬೇಸರವೆನಿಸುತ್ತದೆ!!!

ತಿದ್ದಿ ತೀಡಿ ವಿದ್ಯೆಯ ಕಲಿಸಿದ ಗುರುವಿಗೆ
‘ಗುರುವೇನು ಮಹಾ?’ ಎಂದು
ಉಡಾಫೆ ಮಾಡುವ ಕಾಲದಲ್ಲಿ….
ಹಿಂದೆ ಬಿಲ್ವಿದ್ಯೆಯನು
ಗುರುವಿನ ಮೂರ್ತಿಯನ್ನಿಟ್ಟುಕೊಂಡು
ಕಲಿತ ಏಕಲವ್ಯ ಗುರುದಕ್ಷಿಣೆಯಾಗಿ
ಬೆರಳನು ಕತ್ತರಿಸಿ ಕೊಡುವಾಗ
ಅವನ ಬೆರಳಿಂದ ಹರಿಯುವ
ನೆತ್ತರನು ನೆನೆಸಿಕೊಂಡು ಕಣ್ಣೀರು ಜಿನುಗುತ್ತದೆ!!!

ನಂಬದೆಯೂ ನಂಬುವಂತೆ
ನಟಿಸುವವರ ನೋಡಿ
ಕಣ್ಣಿದ್ದೂ ಕುರುಡರಂತೆ
ಬಾಳುವವರ ನಡುವೆ
ಕುರುಡು ಕಾಂಚಾಣಕೆ ಬೆಲೆ‌‌ಕೊಟ್ಟು
ಜೀವಿಸುವವರ ಮಧ್ಯೆ
ಬಾಳುವಾಗ ಕೋಪ ನೆತ್ತಿಗೇರುತ್ತದೆ…
ಆದರೆ ….
‘ಬಡವನ ಕೋಪ ದವಡೆಗೆ ಮೂಲ’
ಎಂಬ ಮಾತ ನೆನೆದು ಹೆದರಿ
ಪ್ರವಾಹದ ದಿಕ್ಕಿನಲ್ಲಿಯೇ
ಸಾಗಬೇಕೆನಿಸುತ್ತದೆ!!!

‍ಲೇಖಕರು avadhi

13 May, 2023

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading