ಜಿ ಎನ್ ನಾಗರಾಜ್ ಅಂಕಣ- ಭಾರತೀಯ ಲೋಹ ತಂತ್ರಜ್ಞಾನದ ಉನ್ನತ ಸ್ಥಾನ…

ನಮ್ಮ ನಡುವಿನ ಮಹತ್ವದ ವಿಚಾರವಾದಿ ಜಿ ಎನ್ ನಾಗರಾಜ್. ಅಪಾರ ಓದಿನ ಜೊತೆಗೆ ಅದನ್ನು ಸರಿಯಾಗಿ ವಿಮರ್ಶಿಸುವ ತಾಖತ್ತು ಇವರನ್ನು ಎತ್ತರಕ್ಕೆ ಒಯ್ದಿದೆ.

ಇವರ ಮೂರು ಮಹತ್ವದ ಕೃತಿಗಳು- ನಿಜ ರಾಮಾಯಣದ ಅನ್ವೇಷಣೆ, ಜಾತಿ ಬಂತು ಹೇಗೆ? ಹಾಗೂ ಏನಿದು ಲಿಂಗಾಯತ ಸ್ವತಂತ್ರ ಧರ್ಮ? ಕನ್ನಡದ ಚಿಂತನೆಗೆ ಹೊಸ ಆಯಾಮವನ್ನು ನೀಡಿದೆ. ಇವರ ರಾಮಾಯಣ ಕುರಿತ ಕೃತಿ ತಮಿಳಿಗೂ ಅನುವಾದಗೊಂಡಿದೆ.

ಜಿ ಎನ್ ನಾಗರಾಜ್ ಕೃಷಿ ಇಲಾಖೆಯ ಅತ್ಯುನ್ನತ ಹುದ್ದೆಯಲ್ಲಿದ್ದು, ನರಗುಂದ ನವಲಗುಂದ ರೈತ ಹೋರಾಟದ ಸಮಯದಲ್ಲಿ ರೈತರ ಪರ ನಿಂತವರು. ಆ ಕಾರಣಕ್ಕಾಗಿಯೇ ತಮ್ಮ ಹುದ್ದೆಗೆ ರಾಜೀನಾಮೆ ನೀಡಿ ಚಳವಳಿಯ ಅಂಗಳಕ್ಕೆ ತಮ್ಮನ್ನು ಶಾಶ್ವತವಾಗಿ ಸಮರ್ಪಿಸಿಕೊಂಡವರು.

ಸಾಮಾಜಿಕ ಜಾಲ ತಾಣಗಳಲ್ಲಿ ಇವರು ಎತ್ತುವ ಪ್ರಶ್ನೆಗಳು ವಿಚಾರ ಮಥನಕ್ಕೆ ನೀಡುವ ಆಹ್ವಾನವೇ ಸರಿ. ಆ ವಿಚಾರ ಮಥನವನ್ನು ಇನ್ನಷ್ಟು ದೊಡ್ಡ ಕ್ಯಾನವಾಸ್ ನಲ್ಲಿ ಇಡುವ ಪ್ರಯತ್ನವೇ ಈ ಅಂಕಣ.

ಕರ್ನಾಟಕದ ಯಾವುದೇ ಚಳವಳಿಗೆ ಇವರ ಕಣ್ಣೋಟ ಅತ್ಯಮೂಲ್ಯವಾದದ್ದು. ಇವರ ಅಪಾರ ವಿದ್ವತ್ತನ್ನು ‘ಅವಧಿ’ಯ ಅಂಗಳದಲ್ಲಿ ತಂದಿರಿಸುತ್ತಿದ್ದೇವೆ.

55

ಸಿಂಧೂ ನಾಗರಿಕತೆಯ ಮಹಿಳೆಯ ನಾಟ್ಯ ಭಂಗಿಯ ವಿಗ್ರಹ ಮತ್ತು ದೆಹಲಿಯ ಕುತುಬ್ ಮೀನಾರದ ಬಳಿಯ ಕಬ್ಬಿಣದ ಸ್ಥಂಭ ನೆನಪಿದೆಯೇ ? ಭಾರತದ ಲೋಹ ತಂತ್ರಜ್ಞಾನದ ಸಾಧನೆಗಳಲ್ಲಿ ಶಿಕ್ಷಣ ಪಡೆದ ಬಹಳ ಜನರ ಕಣ್ಣಿಗೆ ಬಿದ್ದ ಪುರಾವೆಗಳಿವು. ಆದರೆ ಇನ್ನೂ ಹಲವಾರು ಸಾಮಾನ್ಯವಾಗಿ ನಮಗೆ ತಿಳಿಯದ ಸಂಗತಿಗಳಿವೆ. ಭಾರತದ ಕತ್ತಿಗಳು ಕ್ರಿಪೂರ್ವದಿಂದ ಹಿಡಿದು ಟಿಪ್ಪು ಸುಲ್ತಾನನ ಪ್ರಸಿದ್ಧ ಕತ್ತಿಯವರೆಗೆ ಬಹಳ ಪ್ರಸಿದ್ಧಿ ಪಡೆದಿವೆ. ಕ್ರಿಪೂದ ಐದನೆಯ ಶತಮಾನದಲ್ಲಿಯೇ ಗ್ರೀಕ್ ಸೇನಾಧಿಕಾರಿಯೊಬ್ಬನಿಗೆ ಪರ್ಷಿಯದ ರಾಜ ಮತ್ತು ರಾಜಮಾತೆ ಎರಡು ಭಾರತೀಯ ಕತ್ತಿಗಳನ್ನು ಕೊಡುಗೆಯಾಗಿ ನೀಡುವಷ್ಟು ಅವನು ಅದನ್ನು ಕೃತಜ್ಞತೆಯಿಂದ ಸ್ಮರಿಸಿ ದಾಖಲಿವಷ್ಟು ಪ್ರಾಮುಖ್ಯತೆಯನ್ನು ಪಡೆದಿದ್ದವು. ಅಲೆಕ್ಸಾಂಡರನು ಭಾರತಕ್ಕೆ ದಂಡೆತ್ತಿ ಬಂದಾಗ ಅವನಿಗೆ ಇಲ್ಲಿಯ ರಾಜರು ಗಣನೀಯ ಪ್ರಮಾಣದ ಕಬ್ಬಿಣವನ್ನು ಕೊಡುಗೆಯನ್ನಾಗಿ ಕೊಡಲಾಯಿತೆಂದು ದಾಖಲಿಸಲಾಗಿದೆ. ಆಗಿನಿಂದಲೂ ಪರ್ಷಿಯದಿಂದ ಪಶ್ಚಿಮದ ದೇಶಗಳಲ್ಲಿ ಭಾರತದ ಕಬ್ಬಿಣ ಮತ್ತು ಉಕ್ಕಿಗೆ ‌ದೊಡ್ಡ ಬೇಡಿಕೆಯಿತ್ತು. ಈ ಉಕ್ಕು ಆ ಮಾರುಕಟ್ಟೆಗಳಲ್ಲಿ ಡೆಕ್ಕನಿ ಉಕ್ಕು ಹೆಸರಾಗಿತ್ತು.

ಮುಂದಿನ ಶತಮಾನಗಳಲ್ಲಿ ಯುರೋಪಿನ ಕ್ರಿಶ್ಚಿಯನ್ ಕ್ರುಸೇಡರುಗಳು ಮತ್ತು ಇಸ್ಲಾಮಿನ ಧಾರ್ಮಿಕ ವೀರರಿಗೆ ನಡೆದ ಮಹಾ ಯುದ್ಧಗಳಲ್ಲಿ ಭಾರತದ ಕತ್ತಿಗಳ ಹರಿತ ಮತ್ತಯ ದೃಢತೆ ಇಸ್ಲಾಮಿ ವೀರರಿಗೆ ಬಹಳ ಸಹಾಯಕವಾಗಿದ್ದವು.

ಇನ್ನು ದೆಹಲಿಯ ಕಬ್ಬಿಣದ ಸ್ತಂಭದ ವಿಷಯಕ್ಕೆ ಬಂದರೆ ಅದು 24 ಅಡಿ ಎತ್ತರದ ಆರು ಟನ್ ತೂಕದ ಸ್ತಂಭ. ಕ್ರಿಶ ನಾಲ್ಕನೇ ಮತ್ತು ಐದನೇ ಶತಮಾನದ ಈ ತುಕ್ಕು ಹಿಡಿಯದ ಅಚ್ಚರಿ (rustless wonder) ವಿಶ್ವದ ಲೋಹ ತಂತ್ರಜ್ಞರನ್ನು ಎರಡು ಶತಮಾನಗಳಿಂದ ಸೆಳೆದಿದೆ. 1,600 ವರ್ಷಗಳ ದೀರ್ಘ ಕಾಲ ಅದು ಹೇಗೆ ಈ ಕಬ್ಬಿಣದ ಕಂಭ ತುಕ್ಕು ಹಿಡಿಯದೆ ಉಳಿದಿದೆ ಎಂಬ ಬಗ್ಗೆ ಹಲ ಹಲವು ಪ್ರಯೋಗಗಳು ನಡೆದಿವೆ.

ಆದರೆ ಇದೊಂದೇ ಸ್ತಂಭವಲ್ಲ, ಮಾಳವದ ಭೋಜರಾಜನ ರಾಜಧಾನಿ ಧಾರಾನಗರದಲ್ಲಿದ್ದ ಹನ್ನೊಂದನೆಯ ಶತಮಾನದ ಕಬ್ಬಿಣದ ಸ್ಥಂಭ. ಅದು ದೆಹಲಿಯ ಸ್ತಂಭಕ್ಕಿಂತ ಎರಡರಷ್ಟು ದೊಡ್ಡದು. 46 ಅಡಿಯ ಉದ್ದ ಏಳೂವರೆ ಟನ್ ಭಾರದ ಸ್ತಂಭ. ಅದೀಗ ಮೂರು ತುಂಡುಗಳಾಗಿ ಆರ್ಕಿಯಾಲಜಿಕಲ್ ಸರ್ವೆ ಆಫ್ ಇಂಡಿಯಾದ ವಶದಲ್ಲಿ ನೆಲದಲ್ಲಿ ಜೋಡಿಸಲಾಗಿದೆ. ವಿಶೇಷವೆಂದರೆ ಭೋಜರಾಜ ಲೋಹ ಶಾಸ್ತ್ರದ ಬಹಳ ಆಸಕ್ತಿ ಹೊಂದಿದ್ದನೆಂದೂ, ಅವನು ಲೋಹಶಾಸ್ತ್ರದ ಬಗ್ಗೆ ಗ್ರಂಥವೊಂದನ್ನು ಬರೆದಿದ್ದನೆಂದೂ ಅದರಲ್ಲಿ ಇನ್ನೂ ನಾಲ್ಕು ಗ್ರಂಥಗಳ ಉಲ್ಲೇಖವಿತ್ತೆಂದು ಹೇಳಲಾಗಿದೆ.

ಹಾಗೆಯೇ ಕರ್ನಾಟಕದ ಕೊಡಚಾದ್ರಿಯಲ್ಲಿ ಕೊಲ್ಲೂರಿನ ಮೂಕಾಂಬಿಕೆಯ ಆಯುಧವೆಂದು ಪುರಾಣೀಕರಿಸಲ್ಪಟ್ಟ ಕಬ್ಬಿಣದ ಸ್ತಂಭವೊಂದಿದೆ. ಇದು ಹತ್ತು ಮೀ. ಎತ್ತರವಾಗಿದೆ. ನಿರ್ಮಾಣದ ಕಾಲದ ಬಗ್ಗೆ ಖಚಿತತೆಯಿಲ್ಲ. ಆದರೂ ಸಾವಿರಾರು ವರ್ಷ ಹಳೆಯದು ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಕೊಡಚಾದ್ರಿ ಇರುವ ಪ್ರದೇಶ ಯಥೇಚ್ಛ ಕಬ್ಬಿಣದ ಅದಿರಿನ ಆಗರವೆಂಬುದನ್ನು ಗಮನಿಸಬೇಕು.

ಇಂದಿನಂತೆ ಕೈಗಾರಿಕೋದ್ಯಮ ಪ್ರಮಾಣದ ಉತ್ಪಾದನೆ ಇಲ್ಲದ ಆ ಕಾಲದಲ್ಲಿ ಈ ಸ್ತಂಭಗಳಿಗೆ ಅಗತ್ಯವಾದಷ್ಟು ಟನ್ ಕಬ್ಬಿಣವನ್ನು ಹೇಗೆ ತಯಾರಿಸಿದರು ಎಂಬ ಬಗ್ಗೆ, ಇಷ್ಟು ಎತ್ತರದ ಸ್ತಂಭವನ್ನು ತಯಾರಿಸಿದ ವಿಧಾನದ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದ್ದಾರೆ ವಿಶ್ವದ ಲೋಹ ತಂತ್ರಜ್ಞರು. ಈ‌ ಸ್ತಂಭಗಳಷ್ಟೇ ದೊಡ್ಡ ಕಬ್ಬಿಣದ ತೊಲೆಗಳನ್ನು ಕೂಡಾ ಆಗ ತಯಾರಿಸಲಾಗಿತ್ತು. ಕೊನಾರಕ್ ದೇವಾಲಯ ಮತ್ತು ಪುರಿಯ ಜಗನ್ನಾಥ ದೇವಾಲಯಗಳ ತೊಲೆ ಕಂಬಗಳು ಒಂದೊಂದೂ ಟನ್‌ಗಟ್ಟಲೆ ಭಾರ ಇವೆ. 13 ನೇ ಶತಮಾನದ ಜಗನ್ನಾಥ ದೇವಾಲಯ ಸಂಕೀರ್ಣದ ಗುಂಡುಚಿಬಾರಿ ಉದ್ಯಾನ ದೇವಾಲಯ ಒಂದರಲ್ಲಿಯೇ 239 ತೊಲೆಕಂಬಗಳಿವೆ. ಒಂದೊಂದೂ ಐದು ಮೀ‌ ಉದ್ದ 15×10 ಸೆಂಮೀ ಅಗಲ,ಎತ್ತರದ ತೊಲೆಗಳು. 9 ನೆಯ ಶತಮಾನದ ಕೋನಾರಕ್‌ನ‌ ತೊಲೆಕಂಬಗಳು ಇವುಗಳಿಗಿಂತ ದೊಡ್ಡವು. ಅದರಲ್ಲೊಂದು 11 ಮೀ ಉದ್ದ, 18 ಸೆಂಮೀ ಚೌಕಾಕಾರದ ಎರಡೂವರೆ ಟನ್ ತೂಕದ ತೊಲೆ.

ಇಷ್ಟೊಂದು ದೊಡ್ಡ ಪ್ರಮಾಣದ ಕಬ್ಬಿಣವನ್ನು ತಯಾರಿಸುವ ಸಾಮರ್ಥ್ಯವನ್ನು ಭಾರತ ಅಂದು ಹೊಂದಿತ್ತು. ವುಟ್ಜ್ ಉಕ್ಕು ಎಂಬ ಮೂಸೆ ಉಕ್ಕು:  ಭಾರತದ ಕಬ್ಬಿಣ ತಂತ್ರಜ್ಞಾನದಲ್ಲಿ ಇದೊಂದು ಕ್ರಾಂತಿಕಾರಿ ಬೆಳವಣಿಗೆ. ಮೇಲೆ ಉಲ್ಲೇಖಿಸಲಾದ ಭಾರತದ ಕತ್ತಿಗಳ ಗುಣಮಟ್ಟದ ಮೂಲ ಇದು. ಆದ್ದರಿಂದ  ವಿಶ್ವಾದ್ಯಂತ ಆಧುನಿಕ ಲೋಹ‌ ಶಾಸ್ತ್ರಜ್ಞರು ಈ ವಿಧದ ಉಕ್ಕನ್ನು ತಯಾರಿಸಲು ಪ್ರಯತ್ನಿಸಿ ವಿಫಲರಾಗಿದ್ದಾರೆ. ಇತ್ತೀಚೆಗೆ ಮಾತ್ರ ಅಮೆರಿಕದ ಒಂದು ವಿಶ್ವವಿದ್ಯಾಲಯದ ಲೋಹಶಾಸ್ತ್ರ ವಿಭಾಗ ಈ ಉಕ್ಕನ್ನು ತಯಾರಿಸಲು ಒಂದಿಷ್ಟು ಯಶಸ್ಸು ಪಡೆದು ಅದನ್ನು ಪೇಟೆಂಟ್ ಕೂಡಾ ಮಾಡಿಸಿಕೊಂಡಿದ್ದಾರೆ.

ಈ ಉಕ್ಕಿನಿಂದಾಗಿ 19 ನೇ ಶತಮಾನದ ಮಧ್ಯ‌ಭಾಗದವರೆಗೂ ಉತ್ತಮ ದರ್ಜೆಯ ‌ಉಕ್ಕನ್ನು ತಯಾರಿಸುವ ಏಕಸ್ವಾಮ್ಯ ಭಾರತದ್ದಾಗಿತ್ತು.

ಬ್ರಿಟಿಷರು ಭಾರತವನ್ನು ಆಕ್ರಮಿಸಿಕೊಂಡ ನಂತರವೂ ಬ್ರಿಟನ್‌ನಲ್ಲಿ ತಯಾರಾಗುತ್ತಿದ್ದ ಉಕ್ಕಿಗಿಂತ ಭಾರತದ ಉಕ್ಕೇ ಉತ್ತಮ ಎಂದು ಪರಿಗಣಿಸಿದ್ದರು. ಅಲ್ಲಿಯ ಬಹಳ ಮುಖ್ಯ ಸೇತುವೆಗಳಿಗೆ ಭಾರತದ ಉಕ್ಕನ್ನು ಆಮದು ಮಾಡಿಕೊಳ್ಳಲಾಗಿತ್ತು. ಪ್ರಸಿದ್ಧ ಲಂಡನ್ ಬ್ರಿಡ್ಜ್ ನಿರ್ಮಾಣಕ್ಕೆ 50 ಟನ್ ಕಬ್ಬಿಣವನ್ನು ಆಮದು ಮಾಡಿಕೊಳ್ಳಲಾಗಿತ್ತಂತೆ.

ಬ್ರಿಟಿಷ್ ಪೂರ್ವಕಾಲದವರೆಗೆ ಭಾರತದಲ್ಲಿ ಕಬ್ಬಿಣದ ತಯಾರಿಕೆ ಗಣನೀಯ ಪ್ರಮಾಣದಲ್ಲಿತ್ತು. ಆರಂಭದಲ್ಲಿ ಪೋರ್ಚುಗೀಸರು, ಡಚ್ಚರು, ಬ್ರಿಟಿಷರು ಭಾರತದ ಕಬ್ಬಿಣ ಮತ್ತು ಉಕ್ಕನ್ನು ಆಮದು ಮಾಡಿಕೊಳ್ಳುತ್ತಿದ್ದರು. 19 ನೆಯ ಶತಮಾನದ ಮಧ್ಯಭಾಗದ ಇಲ್ಲಿನ ಕಬ್ಬಿಣ ಉಕ್ಕು ತಯಾರಿಕೆಯ ಬಗೆಗೆ ಬುಖಾನನ್ ಸೇರಿದಂತೆ ಹಲವು ಬ್ರಿಟಿಷರು ಸಮೀಕ್ಷೆಗಳನ್ನು, ವರದಿಗಳನ್ನು ಮಾಡಿದ್ದಾರೆ. ಈಸ್ಟ್ ಇಂಡಿಯಾ ಕಂಪನಿಯೇ ನಿರ್ದೇಶನ ನೀಡಿ ಇಂತಹ ಕೆಲವು ಅಧ್ಯಯನಗಳನ್ನು ಆಗು ಮಾಡಿಸಿದೆ.

ಕಬ್ಬಿಣ ಮತ್ತು ಉಕ್ಕಿನ ತಂತ್ರಜ್ಞಾನದ ಔನ್ನತ್ಯದ ಜೊತೆಗೆ ಜೊತೆಗೆ ಭಾರತದ ಮತ್ತೊಂದು ಕೊಡುಗೆ ಸತುವಿನ ತಯಾರಿಕೆಯ ತಂತ್ರಜ್ಞಾನ. ಶುದ್ಧ ಸತುವಿನ ತಯಾರಿಕೆ ಯುರೋಪಿನಲ್ಲಿ 19 ನೆಯ ಶತಮಾನದವರೆಗೆ ಸಾಧ್ಯವಾಗಿರಲಿಲ್ಲ. ಆದರೆ ಭಾರತದಲ್ಲಿ ಶುದ್ಧ ಸತುವಿನ ತಯಾರಿಕೆ ಕ್ರಿಪೂ ಮೂರನೇ ಶತಮಾನದಲ್ಲಿಯೇ ಸಾಧ್ಯವಾಗಿತ್ತು. 12-13 ನೇ ಶತಮಾನದ ವೇಳೆಗೆ ದೊಡ್ಡ ಪ್ರಮಾಣದಲ್ಲಿಯೇ ಇಲ್ಲಿ ಸತುವನ್ನು ತಯಾರಿಸಲಾಗುತ್ತಿತ್ತು.ರಾಜಾಸ್ಥಾನದ ಝವಾರ್ ಪ್ರದೇಶದಲ್ಲಿನ ಸತು ತಯಾರಿಕೆಯ ಅವಶೇಷಗಳು ಇದಕ್ಕೆ ಪುರಾವೆಯಾಗಿವೆ.
ಆದರೆ …
ವೈದಿಕ ಚಿಂತನೆ ಮತ್ತು ಜಾತಿ ವ್ಯವಸ್ಥೆ ಹೇರಿದ ಮಿತಿಗಳು : 
ಜಗತ್ತಿನಲ್ಲಿ ಭಾರತೀಯ ವಿಜ್ಞಾನದ ಸಾಧನೆಗಳೆಂದು ಬಹಳ ಹೆಸರು ಮಾಡಿದವುಗಳಲ್ಲಿ ಖಗೋಳ, ಗಣಿತ, ಆಯುರ್ವೇದದ ಸಾಧನೆಗಳ ಬಗ್ಗೆ, ವಾಸ್ತು ಶಿಲ್ಪದ ಬಗ್ಗೆ ಬಹಳ ಕೇಳಿದ್ದೇವೆ. ಆದರೆ ಲೋಹ ತಂತ್ರಜ್ಞಾನದ ಸಾಧನೆಗಳ ಬಗ್ಗೆ ಅಲ್ಲೊಮ್ಮೆ ಇಲ್ಲೊಮ್ಮೆ ಕೆಲವರ ಕಣ್ಣಿಗೆ ಮಾತ್ರ ಬಿದ್ದಿರಬಹುದು. ಅನೇಕ ಸುಳ್ಳು ಪೊಳ್ಳು ಸಾಧನೆಗಳ ಬಗ್ಗೆ ಹೆಬ್ಬುಬ್ಬೆಯ ಕೊಚ್ಚಿಕೊಳ್ಳುವ ಮಾತುಗಳು ಕೇಳಿ ಬರುತ್ತಿರುವ ಇಂದಿನ ಕಾಲದಲ್ಲೂ ಕೂಡಾ ಲೋಹ ತಂತ್ರಜ್ಞಾನದ ಸಾಧನೆಗಳ ಬಗ್ಗೆ ದೇಶದ ಒಳಗಾಗಲೀ, ಹೊರಗಾಗಲೀ ಕೇಳುತ್ತಿಲ್ಲ.

ಈ ವಿಜ್ಞಾನಗಳ ಬಗೆಗೆ ಹಲವು ಗ್ರಂಥಗಳು ಬರೆಯಲ್ಪಟ್ಟಿವೆ. ಈ‌ ರಂಗಗಳ ಆರ್ಯಭಟ, ಬ್ರಹ್ಮಗುಪ್ತ, ಭಾಸ್ಕಾರಾಚಾರ್ಯ, ಚರಕ, ಶುಶ್ರುತ, ಭರದ್ವಾಜ, ಆತ್ರೇಯ, ವಾಗ್ಭಟ, ದೃಢಬಾಲ ನಾಗಾರ್ಜುನ ಎಂಬ ಹಲವು ಸಂಶೋಧಕರ ಹೆಸರುಗಳನ್ನು ಕೇಳುತ್ತೇವೆ. ಭಾರತದ ಲೋಹ ತಂತ್ರಜ್ಞಾನ ಇಷ್ಟೊಂದು ಉನ್ನತ ಸ್ಥಾನ‌ಗಳಿಸಿದ್ದರೂ ಒಂದೇ ಒಂದು ಗ್ರಂಥವಾಗಲೀ , ಒಬ್ಬರ ಹೆಸರಾಗಲೀ ಕಾಣುತ್ತಿಲ್ಲ. ಕೆಲ ವೈದಿಕ, ಬೌದ್ಧ ಗ್ರಂಥಗಳಲ್ಲಿ, ಸಾಹಿತ್ಯಿಕ ಗ್ರಂಥಗಳಲ್ಲಿ ಕಾಣುವ ಅಲ್ಲೊಂದು ಇಲ್ಲೊಂದು ಪ್ರಸ್ತಾಪ ಬಿಟ್ಟರೆ ಈ ಉತ್ಪಾದನೆಯ ವಿಧಾನ, ಪ್ರಮಾಣ ಹಾಗೂ ತಂತ್ರಜ್ಞಾನದ ಬಗ್ಗೆ ಯಾವುದೇ ವಿವರ ಕಾಣುತ್ತಿಲ್ಲ. ಭೋಜರಾಜ ಬರೆದಿರಬಹುದೆನ್ನಲಾದ ಒಂದು ಗ್ರಂಥದ ಪ್ರಸ್ತಾಪ ಮಾತ್ರ ಇದೆ. ಉತ್ಖನನಗಳು, ಪ್ರಾಕ್ತನ (ಆರ್ಕಿಯಲಾಜಿಕಲ್) ಸಂಶೋಧನೆಗಳ ಪುರಾವೆಗಳೇ ಈ ತಂತ್ರಜ್ಞಾನದ ಬಗೆಗಿನ ಮುಖ್ಯ ಆಧಾರಗಳಾಗಿವೆ. ಮೇಲೆ ಉಲ್ಲೇಖಿಸಲಾದ  ಬ್ರಿಟಿಷರ ಸಮೀಕ್ಷೆಗಳೇ ಹಲವು ಸಾವಿರ ವರ್ಷಗಳ ನಂತರ ಲಭ್ಯವಿರುವ ಮುಖ್ಯ ಆಕರಗಳಾಗಿವೆ. ಇದಕ್ಕೆ ಮುಖ್ಯ ಕಾರಣ ಈ ಲೋಹ ತಯಾರಿಕೆ ಆರಂಭ ಕಾಲದಿಂದ ಬಹುತೇಕ ಬುಡಕಟ್ಟು  ಜನರ ಕಸುಬಾಗಿದ್ದುದು. ಭಾರತಕ್ಕೆ ಕಬ್ಬಿಣದ ಹಾಗೂ ಉಕ್ಕಿನ ತಂತ್ರಜ್ಞಾನ ಹೇಗೆ ಪ್ರವೇಶಿಸಿತು ಅಥವಾ ಇಲ್ಲಿಯೇ ರೂಪಿಸಲಾಯಿತೇ ಎಂಬ ಬಗ್ಗೆ ಇನ್ನೂ ಚರ್ಚೆಗಳು ನಡೆಯುತ್ತಿವೆ. ಆ ಬಗ್ಗೆ ನಿಖರ‌ ಆಧಾರಗಳು ದೊರಕಿಲ್ಲ.

ವಿಶ್ವದಲ್ಲಿ ಲೋಹಗಳ ತಯಾರಿಕೆ ನಾಗರೀಕತೆಗಳ ಪೂರ್ವ ಕಾಲದ್ದು. ಭಾರತದಲ್ಲಿಯೂ ಅಷ್ಟೇ. ನಾಗರೀಕತೆ ಎಂದು ಪರಿಗಣಿಸುವ ಸಮಾಜದ ಸ್ಥಿತಿಗೆ ಲೋಹಗಳ ತಯಾರಿಕೆ ಮುಖ್ಯ ಆಧಾರವಾಗಿದ್ದವು. ಆದ್ದರಿಂದ ಲೋಹಗಳ ತಯಾರಿಕೆ ಹರಡುವುದರ ಜೊತೆಗೆ ನಾಗರೀಕತೆಗಳ ವಿಕಾಸವಾಯಿತು. ಅಂದರೆ ಮಾನವರು ಇನ್ನೂ ಬುಡಕಟ್ಟು ಸ್ಥಿತಿಯಲ್ಲಿದ್ದಾಗಲೇ ಲೋಹಗಳ ಉಪಯುಕ್ತತೆ, ತಯಾರಿಕೆಯನ್ನು ಕಂಡುಕೊಂಡರು. ಕಬ್ಬಿಣವಂತೂ ತಾಮ್ರ, ಕಂಚುಯುಗಗಳ ನಂತರವೇ ತಯಾರಿಕೆ ಸಾಧ್ಯವಾಗುವಂತಹುದು. ಏಕೆಂದರೆ ಕಬ್ಬಿಣದ ಕರಗುವ ಬಿಂದು ಬೇರೆ ಲೋಹಗಳಿಗಿಂತ ಬಹಳ ಹೆಚ್ಚು. 1535° ಸೆಂಟಿಗ್ರೇಡ್‌ಗಳಷ್ಟು. ಆ ಉಷ್ಣತೆಯ ಮಟ್ಟಕ್ಕೆ ಶಾಖವನ್ನು ಏರಿಸುವ ಸಾಧ್ಯತೆ ಮಾನವರಿಗೆ ಬಂದಾಗ ಮಾತ್ರ ಕಬ್ಬಿಣ ಅವರಿಗೆ ನಿಲುಕಿದ್ದು. ಅದು ತಾಮ್ರ ಮತ್ತಿತರ ಲೋಹಗಳ ತಯಾರಿಕೆಯ ಸಮಯದಲ್ಲಿ ದೊರಕಿದ ಉಪ ಉತ್ಪನ್ನವಾಗಿಯೇ ಮೊದಲು ಕಾಣಸಿಕ್ಕಿದ್ದು. ಕಬ್ಬಿಣವನ್ನು ಪಡೆದುಕೊಳ್ಳಲು ಯಾವಾಗ ಮಾನವರಿಗೆ ಸಾಧ್ಯವಾಯಿತೋ ಆಗ ನಾಗರೀಕತೆ ದಿಢೀರನೆ ಮೇಲೇರಿತು.
ಭಾರತದ ಹೊರ ಅಂಚಿನಲ್ಲಿ ಕಬ್ಬಿಣವನ್ನು ಪಡೆದುಕೊಂಡದ್ದು ಕ್ರಿಪೂ 1100ರಲ್ಲಿ. ಗಂಗಾ ನದೀ ಬಯಲಿಗೆ ಹರಡಿದ್ದು ಕ್ರಿಪೂ 750 ರ ವೇಳೆಗೆ. ದಕ್ಷಿಣ ಭಾರತದಲ್ಲಿ ಅದು ಮೊದಲು ದೊರಕಿದ್ದು ಕರ್ನಾಟಕದಲ್ಲಿಯೇ, ಉತ್ತರ ಭಾರತಕ್ಕಿಂತ ಎರಡು ಮೂರು ಶತಮಾನಗಳ ಮೊದಲೇ.ಕ್ರಿಪೂ 1000 ಆಸುಪಾಸಿನಲ್ಲಿ ಅಥವಾ ಸ್ವಲ್ಪ ಮೊದಕು ಕರ್ನಾಟಕದ ಹರಿಹರದ ಬಳಿಯ ಕುಮಾರನಹಳ್ಳಿಯ ಬೃಹತ್ ಶಿಲಾಯುಗದ ಸಮಾಧಿಗಳಲ್ಲಿ ದೊರಕಿದ ಕಬ್ಬಿಣದ ವಸ್ತುಗಳ ಅವಧಿಯನ್ನು ಕ್ರಿಪೂ 1440 ರಿಂದ 930 ಎಂದು ಗುರುತಿಸಲಾಗಿದೆ. ನೆರೆಯ ಹಿರೇಕೆರೂರಿನ ಹಲ್ಲೂರು ಗ್ರಾಮದ ಬಳಿಯಲ್ಲಿ ಸಿಕ್ಕ ವಸ್ತುಗಳು ಕ್ರಿಪೂ 1385-825 ಎಂದು ಗುರುತಿಸಲಾಗಿದೆ. ಇದರಿಂದಾಗಿ ಕ್ರಿಪೂ 1000 ಕ್ಕೆ ಮೊದಲು ಎಂದು ಪರಿಗಣಿಸುವುದು ಸರಿಯಾದ ಅಂದಾಜು.

ಬೃಹತ್ ಶಿಲಾಯುಗ ಎಂದರೇ ದೊಡ್ಡ ದೊಡ್ಡ ಚಪ್ಪಡಿಗಳನ್ನು ಎಬ್ಬಿಸಿ ಅವುಗಳಿಂದ ಸಮಾಧಿಯನ್ನು ಕಟ್ಟುವುದು ಎಂದು. ಈ‌ ಸಮಾಧಿಗಳಲ್ಲಿ ಸತ್ತ ವ್ಯಕ್ತಿಗಳು ಉಪಯೋಗಿಸುತ್ತಿದ್ದ ವಸ್ತುಗಳನ್ನು, ಅವರಿಗೆ ಆಹಾರವನ್ನೂ ಸತ್ತ ನಂತರದ ಜೀವನಕ್ಕೆಂದು  ಇಡುತ್ತಿದ್ದ ನಂಬಿಕೆಗಳ ಪದ್ಧತಿ. ಅವುಗಳಲ್ಲಿ ಹಲವು ಸಮಾಧಿಗಳ ಕಲ್ಲು ಚಪ್ಪಡಿಗಳು 8×4 ಅಡಿಯಷ್ಟು ದೊಡ್ಡ ಗಾತ್ರದವು ಎಂಬುದನ್ನು ಹಿರೇಬೆಣಕಲ್ ಗುಡ್ಡದ ಮೇಲೆ ಕಣ್ಣಾರೆ ಕಂಡಿದ್ದೇನೆ. ಈ ಪ್ರಮಾಣದ ಕಲ್ಲು ಚಪ್ಪಡಿಗಳನ್ನು ಎಬ್ಬಿಸಬೇಕಾದರೆ ಕಬ್ಬಿಣದ ಉಪಕರಣಗಳಿಲ್ಲದೆ ಕಷ್ಟಕರ. ಈ ಸಮಯದಲ್ಲಿಯೇ ಕಬ್ಬಿಣದ ಉಪಕರಣಗಳ ಬಳಕೆಯ ವ್ಯಾಪಕತೆಯಿಂದ ಕರ್ನಾಟಕದ ಹಲವು ಪ್ರದೇಶಗಳನ್ನು ಕೃಷಿಗೆ ಒಳಪಡಿಸಲು‌ ಸಾಧ್ಯವಾಯಿತು. ಅಲ್ಲಿಯವರೆಗೆ ಕಾಣದಿದ್ದ ಪ್ರಮಾಣದಲ್ಲಿ ಮಾನವ ವಸತಿಗಳು ಕರ್ನಾಟಕದ ಕಾಣತೊಡಗಿದವು. ಬೃಹತ್ ಶಿಲಾಯುಗಕ್ಕೆ ಸೇರಿದ ಸುಮಾರು 700 ಸಮುಚ್ಚಯಗಳನ್ನು ಶೋಧಿಸಲಾಗಿದೆ. ಅದರಲ್ಲಿ 413 ದಕ್ಷಿಣ ಕರ್ನಾಟಕದ ಮೈದಾನ ಪ್ರದೇಶದಲ್ಲಿ, 268 ಉತ್ತರ ಕರ್ನಾಟಕದ ಬಯಲು ಪ್ರದೇಶದಲ್ಲಿ, 17 ಮಲೆನಾಡಿನಲ್ಲಿ,12 ರಷ್ಟು ಕರಾವಳಿಯಲ್ಲಿ.

ಕರ್ನಾಟಕದಲ್ಲಿ ಮೊದಲ ರಾಜ ಪ್ರಭುತ್ವದ ಕುರುಹುಗಳಿಗೆ 15 ಶತಮಾನ ಮೊದಲಿನ ಈ ಕಾಲಘಟ್ಟದಲ್ಲಿ ಕಬ್ಬಿಣದ ತಯಾರಿಕೆ, ಉಪಯೋಗವನ್ನು ಕಂಡುಕೊಂಡವರು ಅಂದಿನ ಬುಡಕಟ್ಟುಗಳು. ಭಾರತದ ಬೇರೆ ಬೇರೆ ಭಾಗಗಳಲ್ಲಿಯೂ ಇದೇ ಪ್ರಕ್ರಿಯೆ. ಈ ಬುಡಕಟ್ಟುಗಳಲ್ಲಿ ಮುಂದೆ ಕಬ್ಬಿಣ ಮತ್ತಿತರ ಲೋಹದ ಕೆಲಸಗಳಲ್ಲಿ ತೊಡಗಿರುವವರಲ್ಲಿ ಹೆಚ್ಚು ಪರಿಣತಿಯ ಅಗತ್ಯ ಅವರಲ್ಲಿ ವಿಶೇಷತೆಗಳ‌ನ್ನು ಉಂಟುಮಾಡಿತು. ಕಬ್ಬಿಣದ ಕೆಲಸ ಮಾಡುವವರಲ್ಲಿಯೂ ಕಬ್ಬಿಣದ ಅದಿರಿನಿಂದ ಕಬ್ಬಿಣವನ್ನು, ಉಕ್ಕನ್ನು  ತಯಾರುಮಾಡಯವವರು ಮತ್ತು ತಯಾರಿಸಿದ ಕಬ್ಬಿಣದಿಂದ ಉಪಕರಣಗಳನ್ನು ತಯಾರಿಸುವವರು ಎಂಬ ವಿಶೇಷತೆ ಉಂಟಾಯಿತು. ಕಬ್ಬಿಣವನ್ನು ತಯಾರುಮಾಡುವವರು ಅದಿರುಗಳು ಹಾಗೂ  ಇದ್ದಿಲು ಸಿಗುವ ಬೆಟ್ಟ ಗುಡ್ಡಗಳು, ಕಾಡುಗಳ ಪ್ರದೇಶಗಳಲ್ಲಿಯೇ ಉಳಿದುಕೊಂಡರು ಅಥವಾ ಅಲ್ಲಿಗೆ ವಲಸೆ ಹೋದರು. ಉಪಕರಣಗಳನ್ನು ತಯಾರುಮಾಡುವವವರು ಕೃಷಿ ಗ್ರಾಮಗಳಲ್ಲಿ ಉಳಿದುಕೊಂಡರು.‌

ಮುಂದೆ ಭಾರತದಲ್ಲಿ ವರ್ಣ- ಜಾತಿ ವ್ಯವಸ್ಥೆ ಮತ್ತು ರಾಜಪ್ರಭುತ್ವಗಳ ಸ್ಥಾಪನೆಯಾದ ನಂತರ ಇವರ ಸಾಮಾಜಿಕ ಸ್ಥಾನ ಏನಾಗಿರಬಹುದು ? ಜಾತಿ ವ್ಯವಸ್ಥೆಯ ಬಗ್ಗೆ ಅನುಭವ ಇರುವ ಯಾರಾದರೂ ಊಹಿಸಿಕೊಳ್ಳಬಹುದಾದ ಸಂಗತಿ. ಕಬ್ಬಿಣ ತಯಾರಿಕೆ ಕೀಳು ಕೆಲಸಗಳಲ್ಲಿ ಒಂದು ಎಂದು ಧರ್ಮಶಾಸ್ತ್ರಗಳ ಪರಿಗಣನೆ. ಆದ್ದರಿಂದ ಉಪಕರಣಗಳ ತಯಾರಕರು, ಯಾರು ಗ್ರಾಮಗಳ ಭಾಗವಾಗಿದ್ದರೋ ಅವರು ಶೂದ್ರರಲ್ಲಿಯೂ ಶೂದ್ರ ಭೂಮಾಲಕರ‌ ಮೇಲೆ ಅವಲಂಬಿಸಿದ ಆಯಕಾರರಾದ ಕಮ್ಮಾರರೆಂಬ ಹಿಂದುಳಿದ ಜಾತಿಗೆ, ಹಿಂದುಳಿದ ಜಾತಿಗಳಲ್ಲಿಯೂ ಕೆಳ ಸ್ಥಾನಕ್ಕೆ ತಳ್ಳಲ್ಪಟ್ಟರು.

ಇನ್ನು ಗುಡ್ಡಗಾಡು,ಕಾಡುಗಳಲ್ಲಿದ್ದ  ಕಬ್ಬಿಣ ತಯಾರಕರು ಬುಡಕಟ್ಟುಗಳಾಗಿಯೇ ಉಳಿದುಕೊಂಡಿರುವ ಸಾಧ್ಯತೆ ಹೆಚ್ಚು. ಆದರೆ ಉಕ್ಕು ತಯಾರಕರು ಕತ್ತಿಗಳು ಗುರಾಣಿಗಳು ಇತರ ಶಸ್ತ್ರಗಳ ತಯಾರಿಕೆಗೆ ಬಹಳ ಅಗತ್ಯವಾದ್ದರಿಂದ ಸಾಮ್ರಾಟರು, ಬಾದ್‌ಶಾಗಳ ನೇರ ಉಸ್ತುವಾರಿಯ ಕಾರ್ಯಾಗಾರ, ಕಾರಖಾನೆಗಳಿಗೆ , ನಗರಗಳಿಗೆ ತರಲ್ಪಟ್ಟಿರುವ ಸಾಧ್ಯತೆ ಹೆಚ್ಚು.

ಕಬ್ಬಿಣ ತಯಾರಿಕೆ ಮತ್ತು ಉಪಕರಣಗಳ ತಯಾರಿಕೆ ಮೇಲೆ ಈ ಸಾಮಾಜಿಕ ಪರಿಸ್ಥಿತಿ ಜಾತಿ ವಿಭಜನೆ ಎಂತಹ ಪರಿಣಾಮ ಬೀರಿರಬಹುದು ?
ಕಬ್ಬಿಣ ತಯಾರಕರು ತಮ್ಮದೇ ಅನುಭವ, ಟ್ರಯಲ್ ಅಂಡ್ ಎರರ್ ಮಾರ್ಗದಲ್ಲಿ  ಕೌಶಲ್ಯಗಳನ್ನು ಒಂದು ಹಂತದವರೆಗೆ ಉತ್ತಮ ಪಡಿಸಿಕೊಂಡಿರುವುದು ಕಾಣುತ್ತದೆ. ಶಸ್ತ್ರಾಸ್ತ್ರಗಳ ತಯಾರಿಕೆಯ ಅಗತ್ಯದಿಂದಾಗಿ ಚಕ್ರವರ್ತಿ, ಸುಲ್ತಾನರುಗಳ ಆಶ್ರಯದಲ್ಲಿ ನಗರಗಳ ಸಮಾಜದ ಭಾಗವಾಗಿ ಪಡೆದ exposure ನ ಪರಿಣವಾಗಿ ಉಕ್ಕಿನ ತಯಾರಿಕೆ  ಉತ್ತಮಗೊಂಡಿರುವ ಸಾಧ್ಯತೆ ಇದೆ. ಆದರೆ ಕೃಷಿ ಉಪಕರಣಗಳ ತಯಾರಕರು ಗ್ರಾಮಗಳಲ್ಲಿ ಅಂಚಿಗೆ ತಳ್ಳಲ್ಪಟ್ಟು ಓಬಿರಾಯನ ಕಾಲದ ತಯಾರಿಕಾ ವಿಧಾನಗಳಲ್ಲಿಯೇ ಉಳಿದುಹೋದರೆಂಬುದನ್ನು ಕಾಣುತ್ತೇವೆ.

ಇದು ಭಾರತ ಆರಂಭದ ಕಾಲಘಟ್ಟದಲ್ಲಿ ಲೋಹ ತಂತ್ರಜ್ಞಾನದಲ್ಲಿ ಪಡೆದುಕೊಂಡ ಉನ್ನತ ಸ್ಥಾನವನ್ನು ಕೆಲ ಕಾಲ ಮಾತ್ರ ಉಳಿಸಿಕೊಳ್ಳುವುದು ಸಾಧ್ಯವಾಯಿತು. ಆದರೆ ಈ ಸಮುದಾಯಗಳಿಗೆ ಇತರ ವೈಜ್ಞಾನಿಕ ಬೆಳವಣಿಗೆ, ಜ್ಞಾನದ ಬೆಳವಣಿಗೆಯ ವರ್ಗಾವಣೆ ಇಲ್ಲದೆ ಮತ್ತಷ್ಟು ಬೆಳವಣಿಗೆ ಸಾಧ್ಯವಿರಲಿಲ್ಲ. ಬೇರೆ ತಾಂತ್ರಿಕ ರಂಗಗಳಲ್ಲಿಯೂ ಈ ಕೊರತೆ ಬಾಧಿಸಿದೆ. ಅದು ಕಬ್ಬಿಣದ ತಯಾರಿಕೆಯನ್ನೂ ಬಾಧಿಸಿದೆ. ಉದಾಹರಣೆಗೆ ಹೆಚ್ಚು ದೊಡ್ಡ ಕಬ್ಬಿಣ, ಉಕ್ಕಿನ ಅಗತ್ಯಗಳನ್ನು ಪೂರೈಸಲು ಕುಲುಮೆಗಳ ಗಾತ್ರ ದೊಡ್ಡದಾಗಲು ಬಹು ದೊಡ್ಡ ಪ್ರಮಾಣದಲ್ಲಿ ಗಾಳಿ ಊದುವ ತಿದಿಗಳು ಅಗತ್ಯ. ಆದರೆ ಕಮ್ಮಾರರ ಮಾನವ ಶ್ರಮದ ಮೇಲೆ ಮಾತ್ರ ಸೀಮಿತವಾದ  ಸಣ್ಣ ತಿದಿಗಳಿಂದ ಸಾಧ್ಯವಾಗುವಂತಿರಲಿಲ್ಲ. ಬೇರೆ ದೇಶಗಳಲ್ಲಿ ಕುದುರೆಗಳು, ಜಲಶಕ್ತಿಯನ್ನು ‌ಬಳಸಿ ಮುನ್ನಡೆದವು. ಭಾರತ ಹಿಂದುಳಿಯಿತು ಎಂಬುದು ವಿಷಾದಕರ.

ಇನ್ನು ಮುಂದಿನ ವಾರಕ್ಕೆ |

‍ಲೇಖಕರು avadhi

May 13, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: