ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬಸವನಗೌಡ ಹೆಬ್ಬಳಗೆರೆ ಕವಿತೆ- ಮೂಕರೋದನೆ…

ಬಸವನಗೌಡ ಹೆಬ್ಬಳಗೆರೆ

ಸುಕ್ಕುಗಟ್ಟಿದ ಚರ್ಮ
ನೆರೆತ ಕೂದಲು, ಬೊಚ್ಚು ಬಾಯಿ
ಸಣ್ಣಗೆ ನಡುಗುವ ಕೈ
ಬಾಗಿದ ಬೆನ್ನಿನ
ಕೈಮೇಲೆ ಹಚ್ಚೆ
ಬಣ್ಣ ಮಾಸಿದ, ಹಳೇ ಸೀರೆ ಉಟ್ಟ
ಎಪ್ಪತ್ತರ ಹರೆಯದ ಅಜ್ಜಿಯದು..
ರಸ್ತೆ ಬದಿಯ ಗೂಡಂಗಡಿಯಲಿ
ವ್ಯಾಪಾರ!

ತಗಡಿನ ತಟಿಗೆ
ಮೇಲೊಂದಿಷ್ಟು ಹೆಂಚು
ಜೋರು ಎಳೆದರೆ ಕಿತ್ತು ಬರುವ ಬಾಗಿಲು
ತನ್ನ ಖಾತೆಯಲ್ಲಿಲ್ಲದ ಜಾಗದ
ರಸ್ತೆ ಬದಿಯಲಿ
ಹರಕು‌ ಮುರುಕು
ಅಂಗಡಿಯ ವ್ಯಾಪಾರ ಮಾಡುತ್ತಿದ್ದಾಳೆ ;
ಅಜ್ಜಿ…ಸ್ವಾಭಿಮಾನಿ ನಿಧಿ!

ನಿಂಬೆಹುಳಿ, ಶುಂಠಿ ಪೆಪ್ಪರಮೆಂಟು
ಹುರಿದ ಶೇಂಗಾ, ಬಟಾಣಿ, ಮಿಠಾಯಿ
ಮೈಸೂರು ಪಾಕ, ಚಿಕ್ಕಿ
ತಿನಿಸುಗಳ ಸಾಮ್ರಾಜ್ಯ
ಅಜ್ಜಿಯ ಅಂಗಡಿಯಲಿ!

ಸಿಕ್ಕ ಚೂರುಪಾರು ಲಾಭ
ತುತ್ತಿನ ಭಾರ
ತುಸು ಗಂಜಿಯಷ್ಟೆ…!

ಒಬ್ಬಂಟಿ ಅಜ್ಜಿ…ಜೀವ
ನಿರಾಶವಾದಿಯೇ ಅಲ್ಲ
ಏನು ಜೀವನೋತ್ಸಾಹ?
ಏನು ಬದುಕು? ಬಾಳುತ್ತಿದ್ದಳು
ಪರರ ಮಕ್ಕಳ ಖುಷಿಯ ನೋಡುತ..

ಈಗೀಗ ಮಾಲ್ ಗಳ ಆರ್ಭಟ
ಕೇಕ್, ಫಿಜ್ಜಾ, ಬರ್ಗರ್, ಬನ್ನು
ಜಂಕು ಪುಡ್ಡುಗಳ ಜಾತ್ರೆಯಲಿ
ಅಜ್ಜಿಯ ಗೂಡಂಗಡಿ ಅನಾಥ
ಆದರೂ
ನಾಳಿನ ಕನಸಿಗೆ ಅಜ್ಜಿಯ ಕಣ್ಣು ನೋಟ!

ಈಗ
ರಸ್ತೆಯ ಅಗಲೀಕರಣ
ಗೂಡಂಗಡಿ ಕೀಳುವ
ಸುದ್ದಿ ಕೇಳಿದಾಗಿನಿಂದ
ಅವಳಿಲ್ಲ ಎಂದಿನಂತೆ!

ಬೇಡಿಕೊಂಡರೂ
ವೋಟರ್ ಕಾರ್ಡ್ ಇಲ್ಲದ ಅಜ್ಜಿಯ
ನೋವು ಕೇಳುವ ನಾಯಕರಿಲ್ಲ!
ಅವಳ ಮೂಕರೋದನೆಗೆ
ಸಿಕ್ಕಿದ್ದು ಬೇರೆ ಜಾಗ ಕೊಡಿಸುವ
ಭರವಸೆಯಷ್ಟೇ!

ಗೂಡಂಗಡಿ ತೆರವಿನ ದಿನ
ಮಡುಗಟ್ಟಿದ ದುಃಖ
ನೋಡಲಾಗುತ್ತಿಲ್ಲ ಮುಖ!
ಜೆಸಿಬಿ ಕೆಡವಿದ್ದು
ಅಂಗಡಿಯನ್ನಷ್ಟೇ ಅಲ್ಲ;
ಅವಳ ಸಿಹಿ ನೆನಪುಗಳನ್ನು!

ಪ್ರಾರ್ಥನಾ ಮಂದಿರಗಳನು
ಕೆಡವುವಾಗ ಹೋರಾಟ ಮಾಡಿದ
ಮಂದಿಯೀಗ ಮಗುಮ್ಮಾಗಿದ್ದಾರೆ…!

ಅಜ್ಜಿ ಮಾತ್ರ
ಬಿದ್ದ ಮಿಠಾಯಿಗಳನು
ಆಯ್ದುಕೊಳ್ಳುತ್ತಿದ್ದಾಳೆ!!

‍ಲೇಖಕರು Admin

9 February, 2023

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading