ಬಸವನಗೌಡ ಹೆಬ್ಬಳಗೆರೆ
ಬಾಳ ಪಯಣದಲಿ
ನಾ ನಕ್ಕರೆ ನಗುವ, ಅತ್ತರೆ ಅಳುವ
ನಿಜಮಿತ್ರ ನೀನು..
ಶತೃ ಬಿದ್ದರೆ ಖುಷಿಯಲಿ ನಗುವ
ಸ್ನೇಹಿತ ಗೆದ್ದರೆ ತೋರ್ಪಡೆಗೆ ನಗುವ
ಕಪಟಿ ನಾನು!!
ನಿನ್ನ ಹೆಸರಲೇ ‘ಕನ್ನ’ ವಿದ್ದರೂ
ಅದರ ಬಗ್ಗೆ ಅರಿಯದ ಮುಗ್ಧ ನೀನು..
ಪರರ ಹಣವ ಬಯಸಿ
ಕನ್ನ ಹಾಕುವ ಕಳ್ಳ ನಾನು!!
ಬಿದ್ದು ಚೂರಾದರೂ
‘ಕಾಯಕವೇ ಕೈಲಾಸ’ವೆಂದು ತಿಳಿದು
ಬಿದ್ದ ಚೂರಿನಲೇ ಕೆಲಸ ಮಾಡುವ
ಕಾಯಕಜೀವಿ ನೀನು..
ಚೂರು ಏಟಾದರೂ ಸಾಕು
ಅದನೇ ನೆಪ ಮಾಡಿ
ಕೆಲಸ ಬಿಟ್ಟು ಮಲಗುವ ಸೋಮಾರಿ ನಾನು!!

ಸಾವಿರಾರು ಚೆಲುವೆಯರ
ಮೊಗ ನೋಡಿದರೂ ಒಂದನೂ ಇಟ್ಟುಕೊಳ್ಳದ
ನಿಶ್ಚಲ ಮನ ನಿನ್ನದು…
ಸುಂದರಿಯರ ಕಂಡೊಡನೆ
ಮನದಲಿ ಅವರನು ಆರಾಧಿಸುವ
ಚಂಚಲ ಮನ ನನ್ನದು!!
ಪರರ ಚೆಲುವ ತೋರಿ ಖುಷಿಪಡಿಸಿ
ತಪ್ಪಿದ್ದರೆ ತಿದ್ದುವ ಸಹೃದಯಿ ನೀನು..
ಪರರ ಚೆಲುವಿನಲಿ ಹೊಟ್ಟೆಯುರಿಯುಂಟು
ಕುರೂಪತೆಯಲಿ ಅಸಹ್ಯ ನಗೆ ಬೀರುವ
ನಿಷ್ಕುರುಣಿ ನಾನು!!
ಬಹುಪಾಲು ಸುಂದರಿಯರ
ಬ್ಯಾಗಿನಲಿ ಪವಡಿಸಿ
ಜೊತೆಯಲಿ ಸಾಗುವ ಅದೃಷ್ಟ ನಿನ್ನದು..
ಸುಂದರಿಯರ ಹಿಂದೆ ಹೋದ್ರೂ
ಉಗಿಸಿಕೊಂಡು ಬರುವ ದುರಾದೃಷ್ಟ ನನ್ನದು!!
ಯಾರಲೂ ಭೇದವೆಣಿಸದೇ
ಸರ್ವರಿಗೂ ಸಮಾನ ನ್ಯಾಯ ತೋರುವ
ಸಮಾನತೆಯ ಹರಿಕಾರ ನೀನು..
ಜಾತಿ,ಧರ್ಮ,ವರ್ಗದ ಗೋಡೆ ಕಟ್ಟಿ
ಭೇದವೆಣಿಸುವ ಅಸಮಾನತೆಯ
ರಕ್ಕಸ ನಾನು!!!
ಬಹುತೇಕರಿಗೆ ನೀ ಅನಿವಾರ್ಯ
ಆದರೂ ನಿನ್ನಲಿ ಅಹಂ ಇಲ್ಲ..
ನಾ ಅನಿವಾರ್ಯವಲ್ಲ:
ಆದರೂ ಹೆಚ್ಚಿದೆ ಅಹಂ..
ನನಗೂ ಕಲಿಸು ನಿನ್ನಯ ಗುಣಗಳ
ಹೇ ಕನ್ನಡಿಯೇ!
ಗೆಲ್ಲುವಂತೆ ಮಾಡು ಪರರ ಮನಗಳ….






0 Comments