ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

‘ಬಲಿಪಾದ’ ಪ್ರವೇಶಿಸಿದ ಬಗೆ ಹೀಗೆ…

ಶ್ರೀಧರ ಬಳಗಾರ ಅವರ ಕಾದಂಬರಿ ‘ಬಲಿಪಾದ’

‘ಅಂಕಿತ ಪುಸ್ತಕ’ ಈ ಕೃತಿಯನ್ನು ಪ್ರಕಟಿಸಿದೆ.

ಈ ಕೃತಿಯ ಲೇಖಕರ ಒಂದು ಬರಹ ಇಲ್ಲಿದೆ.

-ಶ್ರೀಧರ ಬಳಗಾರ

ಸ್ಥಳೀಯ ಸಮುದಾಯವೊಂದರ ದುರಂತ ಮತ್ತು ಪುನುರುತ್ಥಾನದ ಜೀವಕತೆಯನ್ನು ‘ಬಲಿಪಾದ’ ಕಾದಂಬರಿ ನಿರೂಪಿಸುತ್ತದೆ. ಛತ್ರಪತಿ ಶಿವಾಜಿ ಮಹಾರಾಜನ ವಂಶಸ್ಥರು ಎಂದು ತಮ್ಮನ್ನು ಗುರುತಿಸಿಕೊಳ್ಳುವ ಇವರು ಕುಣಬಿ ಬುಡಕಟ್ಟಿನವರು. ಪೋರ್ಚುಗೀಸರ ದಬ್ಬಾಳಿಕೆಯ ಕಾಲದಲ್ಲಿ ಗೋವಾದಿಂದ ಪಲಾಯನ ಮಾಡಿ, ಜೊಯಡಾ ಎಂಬ ಅರಣ್ಯದಲ್ಲಿ ಅಡಗಿ, ಭೂ ಬೇಸಾಯ ಮಾಡಿ ಬದುಕುತ್ತಿರುವವರು. ನದಿಗಳು ನಾಗರಿಕತೆಗಳ ತೊಟ್ಟಿಲುಗಳು ಎಂದು ಇತಿಹಾಸದಲ್ಲಿ ಓದಿದ್ದು ಎಲ್ಲ ಕಾಲ ದೇಶಗಳಲ್ಲಿ ಸತ್ಯವಲ್ಲ ಎಂಬ೦ತೆ ಕುಣುಬಿಯರ ಪೂರ್ವಜರು ವಾಸಿಸಿದ್ದ ಕಾಳಿ ನದಿಯ ಉಗಮ ಸ್ಥಳ ಕುಶಾವಳಿಯಲ್ಲಿ ಅನೇಕ ವರ್ಷಗಳವರೆಗೆ ಮಳೆಯ ಕೊರತೆಯಾಗಿ ನಾಗರಕತೆಯೊಂದರ ನಿರ್ಗಮನವೊ ನಾಮಾವಶೇಷವೊ ನಡೆದು ಹೋಯಿತು. ಚರಿತ್ರೆಯುದ್ದಕ್ಕೂ ರಾಜಕೀಯ ಆಕ್ರಮಣದ ಭಯದಲ್ಲಿ ಓಟಕಿತ್ತದ್ದು ಮತ್ತು ಒಕ್ಕಲೆಬ್ಬಿಸುವಿಕೆಗೆ ಬಲಿಯಾದದ್ದು ಈ ಸಮುದಾಯದ ಪಾಡು ಒಂದಡೆಯಾದರೆ ಪ್ರಾಕೃತಿಕ ವಿಕೋಪ ಮತ್ತು ಆಧುನಿಕ ವಿಪ್ಲವಗಳನ್ನು ತಮ್ಮ ಸ್ಥಳೀಯ ಸ್ವಾಯತ್ತ ಸತ್ವದಿಂದ ಪ್ರತಿರೋಧಿಸಿದ ಕತೆ ಇನ್ನೊಂದೆಡೆಯಿದೆ. ಕಾದಂಬರಿ ಮುಖಾಮುಖಿಯಾಗುವ ವಿಷಯ ಸ್ಥಳೀಯ ಸಮುದಾಯದ ಬಿಕ್ಕಟ್ಟಿಗೆ ಸೀಮಿತವಾಗಿರದೆ ಆಧುನಿಕ ಜಾಗತಿಕ ನಾಗರಿಕ ಜಗತ್ತು ಎದುರಿಸಲೇ ಬೇಕಾದ ಸವಾಲುಗಳಿಗೆ ರೂಪಕವಾಗಿದೆ.

ನನ್ನ ಶಾಲಾ ದಿನಗಳಲ್ಲೆ ಕುಣುಬಿಯವರನ್ನು ಸನಿಹದಿಂದ ನೋಡುವ ಅವಕಾಶ ಒದಗಿತ್ತು. ಚಳಿಗಾಲ ಮುಗಿಯುತ್ತಿದ್ದಂತೆ ಗೋವಾದಿಂದ ಟ್ರಂಕ್ ಹಿಡಿದು ತಲೆಯ ಮೇಲೆ ಮಡಕೆ ಹೊತ್ತು ಬರುತ್ತಿದ್ದ ತಂಡ ನಮ್ಮ ಮನೆಯ ಕೊಯ್ಲಾದ ಗದ್ದೆಯಲ್ಲಿ ಚಪ್ಪರದ ಬಿಡಾರ ಕಟ್ಟಿ ಮರ ಏರಿ ಸೊಪ್ಪು ಕಡಿಯುವ ಕೆಲಸಕ್ಕೆ ತೊಡಗುತ್ತಿದ್ದರು. ನಸುಕಿಗೇ ತುಂಬು ಗಡಿಗೆಯ ಗಂಜಿ ಉಂಡು ಟಕಟಕ ಸದ್ದು ಮಾಡುತ್ತಿದ್ದ ಕತ್ತಿ ಸಿಕ್ಕಿಸುವ ಉಡುಕೊಕ್ಕೆ ಸೊಂಟಕ್ಕೆ ಕಟ್ಟಿ ಬರಿ ಲಂಗೋಟಿ ತೊಟ್ಟು ಬೆಳಗಿನ ಬಿಸಿಲು ಚಾಚುವ ಎತ್ತರದ ಮರಗಳ ಸೊಪ್ಪಿನ ಚಂಡನ್ನು ಕಡಿಯುತ್ತಿದ್ದರು. ಮರದ ತುದಿಯ ನಸುಹಳದಿ ಬಿಸಿಲಿಗೆ ಅವರ ದೇಹ ತಾಮ್ರದ ಲೋಹದಂತೆ ಕಾಣುತ್ತಿತ್ತು. ಮರವೇರುವುದರಲ್ಲಿ ಅವರು ಅತ್ಯಂತ ಸಾಹಿಸಿಗರು ಮತ್ತು ನಿಪುಣರು. ಗದ್ದೆಗೆ ಬೇಕಿದ್ದ ಸಗಣಿ ಗೊಬ್ಬರಕ್ಕೆ ಗುಂಡಿಯಲ್ಲಿ ಕಡಿದ ಸೊಪ್ಪನ್ನು ಚೆಲ್ಲುತ್ತಿದ್ದರು. ಭತ್ತದ ವ್ಯವಸಾಯದಲ್ಲಿ ಆಸಕ್ತಿ ಹೊರಟುಹೋದ ನಂತರ ಬಹುತೇಕ ಗದೆಗಳು ಪಾಳು ಬಿದ್ದವು ಮತ್ತು ಕೆಲವು ಅಡಿಕೆ ಬೆಳೆಗೆ ಪರಿವರ್ತನೆ ಹೊಂದಿದವು. ಕುಣಬಿ ತಂಡ ಊರಿಗೆ ಬರುವುದು ನಿಂತಿತು. ಅದೊಂದು ದಿನ ನಕಾಶೆ ಓದಿಸುತ್ತಿದ್ದ ಮಾಸ್ತರು ಕಾಳಿ ನದಿಗೆ ಆಣೆಕಟ್ಟು ನಿರ್ಮಿಸುವುದರಿಂದ ಜಿಲ್ಲೆಯ ಪಟದಲ್ಲಿ ಇನ್ನು ಮುಂದೆ ಸುಪಾ ತಾಲ್ಲೂಕು ಉಳಿಯಲಾರದು ಎಂದೂ ಸುಪಾ ಮುಳುಗಿದ ಬಳಿಕ ತಾಲ್ಲೂಕಿನ ಕೇಂದ್ರ ಜೊಯಡಾಕ್ಕೆ ಸ್ಥಳಾಂತರವಾಗುವುದೆAದೂ ಹೇಳಿದರು. ಪ್ರತಿ ವರ್ಷ ಸುಪಾದಿಂದ ಪೈಕ ಎಂಬ ಕುಣಬಿ ನಮ್ಮೂರಲ್ಲಿದ್ದ ಅವನ ನೆಂಟರಿಗೆ ಜೇನುತುಪ್ಪ ಕೊಡಲು ಬರುತ್ತಿದ್ದ. ನಮ್ಮ ಮನೆಗೂ ಉತ್ತುಂಗ ಮರಗಳಿಂದ ಇಳಿಸಿದ್ದ ಜೇನನ್ನು ಮಣ್ಣಿನ ಕುಡಿಕೆಯಲ್ಲಿ ತುಂಬಿ ಕೊಡುತ್ತಿದ್ದ. ನಮ್ಮೂರಿನ ಉತ್ತರಕ್ಕೆ ಹಬ್ಬಿದ ಹಸಿರು ಬೆಟ್ಟ ಶ್ರೇಣಿಗಳ ಕಣಿವೆಗಳಲ್ಲಿ ವಾಸವಾಗಿದ್ದ ಪೈಕ ಸುಪಾದಿಂದ ಮತ್ತೆ ಬರಲಿಲ್ಲ. ಕಣ್ಮರೆಯಾದ ಪೈಕನನ್ನು ಹುಡುಕಲೆಂಬ೦ತೆ ನಲವತ್ತು ವರ್ಷಗಳ ನಂತರ ನಾನು ವಿಷಾದ ಪಡುತ್ತ ಜೊಯಡಾದ ದಂಡಕಾರಣ್ಯದ ಕುಣಬಿ ಕೊಪ್ಪಗಳಲ್ಲಿ ಅಲೆಯತೊಡಗಿದೆ.

ಕುಣಬಿ ಸಮುದಾಯ ವಾಸಿಸುವ ಕಾಡು ಪರಿಸರ, ಧಾರ್ಮಿಕ ಆಚರಣೆ, ಸಮ್ಮಿಶ್ರ ಭಾಷೆ, ಕೊಪ್ಪದ ಹೆಸರುಗಳು, ಸಮುದಾಯದ ಶ್ರೇಣೀಕೃತ ಸಂಬ೦ಧಗಳು, ಜನರ ಹೆಸರು ಮತ್ತು ಅವರ ಕೌಟುಂಬಿಕ, ಸಾಮಾಜಿಕ ಸಂಬAಧಗಳು ಅಪರಿಚಿತವೆನಿಸಿದರೂ ಪರಕೀಯವೆನಿಸಲಿಲ್ಲ. ಭೂಮಿಯನ್ನು ಅನ್ನಕ್ಕೆ ಮಾತ್ರ ಸಾಮೂಹಿಕವಾಗಿ ಉಳುಮೆ ಮಾಡುವುದು, ಭೂ ಮಾರಾಟ ಮತ್ತು ಹಣ ತರುವ ವಾಣಿಜ್ಯ ಬೆಳೆಗಳನ್ನು ನಿಷೇಧಿಸುವುದು, ಭೂ ಒಡೆತನ ಹಂಚುಣ್ಣುವ ಸಮುದಾಯದವರಿಗೆ ಸಾಮೂಹಿಕವಾಗಿ ಸೇರಿರುವುದು, ಹೊರಗೆ ಹೋಗಿ ಶಿಕ್ಷಣ ಪಡೆಯುವವರು ಸಂಪಾದಿಸುವ ಜ್ಞಾನವನ್ನು ಊರಿಗೇ ಮರಳಿ ವಿನಿಯೋಗಿಸುವುದು, ತಮ್ಮ ಅಸ್ಮಿತೆಯನ್ನು ಉಳಿಸಿಕೊಳ್ಳುವ ಉಪಾಯವಾಗಿ ಹೊಸ ಭಾಷೆಯನ್ನ ಕಲಿಯದಿರುವುದು, ಹಣ, ಬಂಗಾರಕ್ಕಿ೦ತ ಮಣ್ಣು-ಮಡಕೆಗಳೇ ಹೆಚ್ಚು ಮೌಲಿಕವೆಂದು ನಂಬಿರುವುದು, ಪಂಚಭೂತಗಳನ್ನು ಆರಾಧಿಸುವುದು, ಒಂದೇ ದೈವಕ್ಕೆ ಸೇರಿದ ಕುಲದೊಳಗೆ ವಿವಾಹ ನಿಷೇಧಿಸುವುದು ಪರಂಪರೆಯ ಕಟ್ಟುಪಾಡುಗಳು. ದೇಶದ ಸ್ವಾತಂತ್ರ್ಯ ಚಳುವಳಿ, ಗಾಂಧಿಯ ನೇತ್ರತ್ವ ಇತ್ಯಾದಿ ಅವರಿಗೆ ತಿಳಿದೇ ಇಲ್ಲ. ಇತಿಹಾಸದಿಂದ ಹೊರಗೇ ಇದ್ದವರು.

ಆಧುನಿಕ ಕಾಲ ಪರಿಕಲ್ಪನೆಯನ್ನು ಅವರು ಅನುಸರಿಸುತ್ತಿರಲಿಲ್ಲ. ಲಿಪಿಯಿರದ ಕೊಂಕಣಿ ಮತ್ತು ಮರಾಠಿ ಮಿಶ್ರಿತ ಸಂಕರ ಭಾಷೆಯನ್ನು ಆಡುವವರು. ಇವೆಲ್ಲವುಗಳನ್ನು ಅವರ ವಿಶಿಷ್ಟ ಜೀವನ ಕ್ರಮವನ್ನು ನಿರಂತರ ಸಹವಾಸದಲ್ಲಿ ನನ್ನ ಅನುಭವವನ್ನಾಗಿ ಭಾಷಾಂತರಿಸಿಕೊಳ್ಳಬೇಕಾದ ಅನಿವಾರ್ಯತೆ ಉಂಟಾಯಿತು. ಭಾಷಾಂತರ ಶಾಬ್ದಿಕ ಪ್ರಕ್ರಿಯೆ ಮಾತ್ರವಾಗಿರಲಿಲ್ಲ. ಅವರ ಅನನ್ಯ ದೈನಿಕವನ್ನು ಕುತೂಹಲ, ದಿಗಿಲು, ಬೆರಗು, ಅಚ್ಚರಿ, ವಿಸ್ಮಯ, ತನ್ಮಯತೆ ಎಂಬ ಭಾಷೆಯಿಂದ ಗಮನಿಸುತ್ತ ಹೊಸದಾಗಿ ಕಲಿಯುವ ಮಗುವಿನಂತೆ ನಾನು ಮುಗ್ಧನಾದೆ.

ನಾನು ಗಮನಿಸಿದ ಕುಣಬಿ ಸಮುದಾಯದ ಮೂರು ತಲೆಮಾರುಗಳು ಎದುರಿಸಿದ ಬಿಕ್ಕಟ್ಟುಗಳು, ವೈರುಧ್ಯಗಳು ಭಿನ್ನ ಬಗೆಯದಾಗಿದ್ದವು. ಮೊದಲ ತಲೆಮಾರಿನ ಗಣಬ ಅನಾವೃಷ್ಟಿ, ಅತಿವೃಷ್ಟಿ ಮತ್ತು ಪ್ಲೇಗ್ ರೋಗದಂತ ಪ್ರಾಕೃತಿಕ ವಿಕೋಪದಿಂದ ಜನರನ್ನು ಕಾಪಾಡಲು ಹೋರಾಡಿದನು. ಎರಡನೇ ತಲೆಮಾರಿನ ಉಪಾಸೊ ಕೌಟುಂಬಿಕ ಬಿಕ್ಕಟ್ಟು, ಗಣಿಗಾರಿಕೆ ಮತ್ತು ಆಣೆಕಟ್ಟಿನಿಂದ ಉದ್ಭವಿಸಿದ್ದ ಸಂತ್ರಸ್ತರ ಸ್ಥಳಾಂತರ ಸಮಸ್ಯೆಗಳನ್ನು ನಿರ್ವಹಿಸಿದನು. ಮೂರನೇ ತಲೆಮಾರಿನ ಲವ ಸಮುದಾಯದ ಐಡೆಂಟಿಟಿ ರಕ್ಷಿಸುವ ನಿಟ್ಟಿನಲ್ಲಿ ಸ್ಥಳೀಯ ಸಂತ್ರಸûರಿಗೆ ಊರಲ್ಲೇ ಉದ್ಯೋಗ ಸೃಷ್ಟಿಸುವ ಯೋಜನೆ ರೂಪಿಸಿದನು. ಸ್ಥಳೀಯರ ಮೂಲ ಸತ್ವ ವಿರೂಪಗೊಳ್ಳದಂತೆ ಬದುಕನ್ನು ರೂಪಾಂತರಿಸುವ ಪ್ರಯೋಗಕ್ಕೆ ತೊಡಗುತ್ತಾನೆ. ಭೂಮಿ, ಕಾಡು, ಪಶು-ಪಕ್ಷಿಗಳ ಕುರಿತಾದ ಪವಿತ್ರ ದೈವ ನಂಬಿಕೆ, ಸ್ಥಳೀಯರನ್ನು ಒಕ್ಕಲೆಬ್ಬಿಸುವ ಯಂತ್ರ ವಿರೋಧ, ಭಾಷಾ ಬದ್ಧತೆ ಸಮುದಾಯದ ಒಕ್ಕೂಟವನ್ನು ಕಾಪಾಡಿದಷ್ಟೇ ಅಲ್ಲದೆ ರಾಜಕೀಯ ಮತ್ತು ಧಾರ್ಮಿಕ ವಿಕಾರಗಳನ್ನು ಪ್ರತಿರೋಧಿಸುವ ಅಸ್ತ್ರಗಳಾಗಿವೆ.

ದೀಪಾವಳಿ ಸಮುದಾಯದ ದೊಡ್ಡ ಹಬ್ಬ. ಬಲಿ ಚಕ್ರವರ್ತಿಯ ಕಥಾ ನಿರೂಪಣೆ ಮತ್ತು ಆಚರಣೆ ಅತ್ಯಂತ ಮಹತ್ವದ ಸಂಗತಿ. ಪ್ರಜೆಗಳನ್ನು ಪ್ರೀತಿಸುತ್ತಿದ್ದ ಚಕ್ರವರ್ತಿ ಬಲಿಯನ್ನು ಮೋಸದ ಉಪಾಯದಿಂದ ವಾಮನ ವೇಷದ ವಿಷ್ಣು ಪಾತಳಕ್ಕೆ ತಳ್ಳುವ ಪೌರಾಣಿಕ ಹಿನ್ನಲೆ ಕಾದಂಬರಿಯ ಧ್ವನಿಪೂರ್ಣ ಕೇಂದ್ರ ರೂಪಕಗಳಲ್ಲಿ ಒಂದಾಗಿದೆ. ಬರಗಾಲದಲ್ಲಿ ಸಾಲ ನೀಡಿ ಬಡವರಿಂದ ಜಮೀನು ಕಿತ್ತುಕೊಳ್ಳುವುದು, ಒಡೆತನದ ಭೂಮಿಗೆ ಅಧಿಕೃತ ದಾಖಲೆಗಳಿಲ್ಲದೆ ಮುಳುಗಡೆ ಸಂತ್ರಸ್ತರಿಗೆ ಪರಿಹಾರದಲ್ಲಿ ಮೋಸವಾಗುವುದು, ಪರಿಸ್ಥಿತಿಯ ಲಾಭ ಪಡೆದು ಮತಾಂತರಕ್ಕೆ ಯತ್ನಿಸುವುದು, ಪುನರ್ವಸತಿಗೆ ನೀಡಿದ ಬಯಲು ಪ್ರದೇಶದಲ್ಲಿ ಬದುಕು ಸಾಧ್ಯವಾಗದೆ ಹಿನ್ನೀರಿನ ಪ್ರದೇಶಕ್ಕೆ ಮರಳಿ ಅಲ್ಲಿ ಮುಳುಗಿದ್ದ ಊರು ಪ್ರತ್ಯಕ್ಷವಾಗುವುದು, ಹುಲಿ ಸಂರಕ್ಷಿತ ಅಭಯಾರಣ್ಯದಿಂದ ಮೂಲವಾಸಿಗಳನ್ನು ಹೊರದಬ್ಬುವ ಯೋಜನೆಗಳ ಅನುಷ್ಟಾನ, ಬದಲಾದ ಕಾಲಗತಿಯಲ್ಲಿ ಬದುಕನ್ನು ಹೊಸ ವಿನ್ಯಾಸದಲ್ಲಿ ಕಟ್ಟಿಕೊಳ್ಳುವ ಯತ್ನದಲ್ಲಿರುವ ಹೊಸ ತಲೆಮಾರಿನ ಯುವಕರ ಕನಸು…ಹೀಗೆ ಬದುಕಿನಲ್ಲಿ ಪ್ರಕೃತಿಯ ಸುಂದರ ಮತ್ತು ಕ್ರೂರ ಮುಖ ಇಣುಕುವುದನ್ನು ನಿಭಾಯಿಸುವ ಎಚ್ಚರದ ಹೆಜ್ಜೆಯೂ ಕಾಣಿಸುತ್ತದೆ. ಆಧುನಿಕ ಅಭಿವೃದ್ಧಿಯ ಅಂಧಕ ಯೋಜನೆಗಳು ಸ್ಥಳೀಯರನ್ನು ಪಾತಳಕ್ಕೆ ತಳ್ಳುವ ವಾಮನನ ಮಾಯಾ ಪಾದಗಳಾಗಿ ಚಿತ್ರಿತವಾಗಿದೆ. ಕುಣಿಬಿ ಸಮುದಾಯ ಅವರ ಸಂಸ್ಸೃತಿಯನ್ನು ಪಾತಾಳಕ್ಕೆ ತಳ್ಳುವುದಕ್ಕೆ ಬಲಿ ಚಕ್ರವರ್ತಿ ಕತೆ ರೂಪಕವಾಗಿದೆ. ಕೊನೆಯಲ್ಲಿ ಲವ ಬಲಿಪಾಡ್ಯದ ದಿನ ಬರೆದಿದ್ದ ವಾಮನನ ಪಾದವನ್ನು ಅಳಿಸಿ ಹಾಕುವುದು ಪ್ರತಿರೋಧದ ಸಂಕೇತವಾಗಿದೆ.

ಗಾ೦ಧೀಜಿಯ ಹಿಂದ್ ಸ್ವರಾಜ ಪಠ್ಯದ ಕಲ್ಪಿತ ಗ್ರಾಮದ ಕನಸು ಸ್ಥಳೀಯತೆಯನ್ನು ನೆಚ್ಚಿಕೊಂಡ ಕುಣಬಿಯರ ಸಮುದಾಯ ಜೀವನ ಕ್ರಮದಲ್ಲಿ ವಾಸ್ತವ ಅನುಭವವಾಗಿ ಅಂತರ್ಗತವಾಗಿರುವುದು ಅಚ್ಚರಿಯ ಸತ್ಯ. ಗಾಂಧಿಯ ತತ್ವಗಳನ್ನು ಓದಿದವರಲ್ಲ. ಸ್ವಾತಂತ್ರ್ಯ ಚಳುವಳಿಯಲ್ಲಿ ಬಾಗವಹಿಸಿದವರೂ ಅಲ್ಲ. ಪರಸ್ಪರ ಅವಲಂಬಿತ, ಸೌಹಾರ್ದತೆಯಿಂದ ಕೂಡಿದ, ಸರಳವೂ ಸಹಜವೂ ಸಂಯಮವೂ ಆಗಿರುವ, ಕಾಯಾಧಾರಿತ ಕಾಯಕವನ್ನು ಅನುಸರಿಸುವ, ಯಂತ್ರಗಳಿ೦ದ ದೂರವಿರುವ, ಸಣ್ಣದನ್ನು ಸುಂದರವೆ೦ದು ತಿಳಿದ, ಜನಿಸಿದ ಜಾಗದಲ್ಲಿ ತಮ್ಮ ದೈವವನ್ನು ಜಾಗ್ರತಗೊಳಿಸಿಕೊಂಡ ಮಾದರಿಯೊಂದು ನಮ್ಮ ಕಾಲದಲ್ಲಿ ಜೀವಂತವಾಗಿರುವುದು ಆಶಾದಾಯಕ ವಿಸ್ಮಯವೇ ಸರಿ.

‍ಲೇಖಕರು Admin

18 June, 2026

0 Comments

Submit a Comment

Your email address will not be published. Required fields are marked *

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading