ನರೇಂದ್ರ ಶಿವನಗೆರೆ
ಬರ್ಮಾದ ಹಕಾದಲ್ಲಿ
ಈಗ ಮಳೆಗಾಲದ ಆರಂಭ.
ಗುಡ್ಡ, ಕಾಡು,
ಇವಳ ಊರಿನ ಪಕ್ಕಕ್ಕೇ
ಭಾರತ ದೇಶದ ಸರಹದ್ದು!
ಬರ್ಮಾದಲ್ಲೀಗ ಬಂದೂಕಿನ ಭರಾಟೆ!
ಸ್ವಾತಂತ್ರ್ಯವೆಂಬುದು
ಬರಿ,
ಸುಳಿಗಾಳಿಯಲ್ಲಿನ ಪಿಸುಮಾತು.
ಮಧ್ಯ ರಾತ್ರಿ ಎದ್ದು ನಡೆದ
ಗೌತಮನ
ಪತ್ನಿ ಈ, ಚಪ್ಪಟ್ಟೆ ಮೂಗಿನ ಸುಂದರಿಯ
ಬಗಲಲ್ಲಿ ಚಂದಿರನಂತ ಮುದ್ದು ಮಗು.

ಗಂಡನ ಹುಡುಕುತ್ತ
ಕಾಲ ದೇಶಗಳ
ದೇಶಾಂತರಿಸಿದ ಈ ಸುಂದರಿ
ನಿಂತಿದ್ದು
ದೂರದೇಶದ ಸಾಗರ ತೀರದಲ್ಲಿ!
ಹಗಲೆಲ್ಲ ಮೈಮುರಿದ ದುಡಿತ
ರಾತ್ರಿ ಸ್ವಪ್ನಗಳಲ್ಲಿ,
ಊರಿನ ಪಚ್ಚೆ ಹೊಲ
ತಿಳಿನೀರ ಕೆರೆ ಮಧ್ಯೆ
ಅರಳುತ್ತಿರುವ ಕಮಲ!
ಬರ್ಮಾ ಹುಡುಗಿಯರ
ಹಸಿರು, ಹಳದಿ, ಕೆಂಪು
ಪಟ್ಟೆ, ಪಟ್ಟೆ ಲಂಗ ಧರಿಸಿ
ಬುದ್ಧನ ಮುಂದೆ ಮಂಡಿಯೂರಿದವಳಿಗೆ
ಇಂದು, ಇಲ್ಲಿ, ಬುದ್ಧ ಪೂರ್ಣಿಮೆ
ಅವಳ ಮನಸೆಲ್ಲ
ಬಿಟ್ಟು ಬಂದ ಹಸಿ ಕಂದಮ್ಮನ
ನೆನಪು!






0 Comments