ಸರೋಜಿನಿ ಪಡಸಲಗಿ
ಖಾಲಿ ಶೂನ್ಯಬಯಲಲಿ
ಬಿರುಗಾಳಿಯದೇ ಆವಾಂತರ
ಮೌನ ಮನದ ನೆರಳಿನಲಿ
ಯೋಚನೆಗಳ ದರ್ಬಾರ
ಮೊಗ್ಗು ಹೂವು ತುಂಬಿ ನಿಂದ
ಬಳ್ಳಿ ತುಂಬ ಚಿಟ್ಟೆಗಳ ಸಂಚಾರ
ಅತ್ತಿತ್ತ ತೊನೆಯದೆ ಅಲುಗದ
ಅದರ ಗಮನ ಬಲು ಗಂಭೀರ
ಖಾಲಿ ಖಾಲಿ ಬೇಲಿ ಬಳ್ಳಿಯ
ಹಾರಾಟ ಏರಾಟ ಬಲು ಸದರ
ಎದ್ದೆದ್ದು ಬಿದ್ದು ಬಡಿಯುವ
ಅರ್ಥವಿಲ್ಲದ ಗೊಂದಲದ ಸರಭರ

ಫಲದುಂಬಿದ ಕೊಂಬೆ ಜಗ್ಗಿ ಬಾಗಿ
ಅದರ ಸಂದಿಲಿ ಹಕ್ಕಿಗಳ ಸಂಸಾರ
ಮೆಲ್ಲ ಮೆಲ್ಲ ತೂಗಾಡಿ ಓಲಾಡೋ
ಅದರ ಚಲನ ಬಲು ಖಂಬೀರ
ಖಾಲಿ ತೂಗೋ ಟೊಂಗೆಯ
ಎಗ್ಗಿಲ್ಲದ ತೂರಾಟ ಜೋರುದಾರ
ಧಡಪಡ ಗಡಬಡ ಗದ್ದಲದ
ಅರ್ಥವಿಲ್ಲದ ವ್ಯರ್ಥ ಕಾರುಭಾರ
ಅರ್ಥ ರಹಿತ ವ್ಯರ್ಥ ಬಗ್ಗಡವ ಸರಿಸಿ
ಚಿಮ್ಮಲಿ ತಿಳಿ ಅಂತರ್ಜಲ ನಿರಂತರ
ಹೂವು ಅರಳಿ ಫಲದುಂಬಿ ಸುರಿದು
ಭೋರ್ಗರೆಯಲಿ ಮಧುರ ರಸ ಸಾಗರ
ಖಾಲಿ ಬಯಲ ಗಾಳಿಯಲಿ ಥಟ್ಟನೇ
ತೇಲಿ ಹೋಗಲಿ ಕವಿದ ತಿಮಿರ
ಮನದ ಮೌನ ನೆರಳು ಸರಿದು
ಬರ್ಖಾಸ್ತು ಯೋಚನೆಗಳ ದರ್ಬಾರ






0 Comments