ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

'ಬರುವುದಿಲ್ಲ ತಾವರೆಎಲೆ ಮೇಲಿನ ಹನಿ ಬಿಂದುವಾಗಲು..' ರೇಣುಕಾ ನಿಡಗುಂದಿ

ರೇಣುಕಾ ನಿಡಗುಂದಿ

ನನಗೆ ಬರುವುದಿಲ್ಲ
ತಾವರೆಯ ಎಲೆ ಮೇಲಿನ ಹನಿಯಂತೆ
ಬದುಕಲು
ಯಾವತ್ತೂ ಕಲಿಯಲಿಲ್ಲ ನಾನು
ತಾವರೆಯಿಂದ ಬಿಂದುವನ್ನು ಬೇರ್ಪಡಿಸಿ ನೋಡಲು
ಯಾವ ಆಧ್ಯಾತ್ಮದ ಮಾತುಗಳೂ
ಬೇರು ಮೊಲೆಯೂಡಿಸುವ ಎಲೆಯಾಗಿಸಲಿಲ್ಲ
ಕಂದನ ಬಾಯಂಚಿನ ಹನಿಯಾಗಲೂ ಬಿಡಲಿಲ್ಲ
ಅರ್ಥವಾಗಲಿಲ್ಲ ಎಂದೂ
ಹಾಗೆ ಇದ್ದೂ ಇಲ್ಲದಂತಿರುವ ಲಾಜಿಕ್ಕು !

ನನ್ನ ಬದುಕಾಗಿ ಬಿಡುತ್ತಿತ್ತು
ಒಂದೇ ಒಂದು ತಾವರೆ ಎಲೆ ಮೇಲಿನ ಬಿಂದು
ನಿನ್ನ ಬೊಗಸೆ ಸೇರಿದ್ದರೆ
ಜಲಾಶಯವಾಗಿಬಿಡುತ್ತಿತ್ತು ಬರಬಿದ್ದ ಜಗತ್ತು
ಉದಕ ಶಂಖದಲ್ಲಿದ್ದರೇನು ಕಡಲಲ್ಲಿದ್ದರೇನು
ಫಳಪಳ ಹೊಳೆಯುವ ಮೀನುಗಳನ್ನು ಕಾಣುತ್ತಿದ್ದೆವು
ಒಂದೇ ಒಂದು ಹನಿ ಬಿಂದುವಿಗೆ
ಒಂದೇ ಒಂದು ಬಿಸಿಲಿನ ಮುತ್ತು ಬೆರೆತಿದ್ದರೆ ..
ಪ್ರಳಯವೇನೂ ಆಗುತ್ತಿರಲಿಲ್ಲ !
ಜನ್ಮ ಮರುಕಳಿಸದು ಎಲೆ ಎಲೆಯ ಮೇಲಿನ ಹನಿಯೇ
ನೀನುರುಳಿದರೂ ಅಷ್ಟೇ ಬಿಟ್ಟರೂ ಅಷ್ಟೇ ಹಿಡಿಯಷ್ಟು ಬದುಕು
ನಮ್ಮಿಬ್ಬರ ಮಧ್ಯೆ ಒಂದಿರುಳ ಯೋಜನ ದೂರ
ಅದೇ ಕ್ಯಾಬು..ಅದೇ ಟ್ಯಾಕ್ಸಿ .ಅದೇ ಹಾದಿ …ಅದೇ ನಾನು ಅದೇ ನೀನು
ಅದೇ ಮೊಹಲ್ಲಾದ ಗಾಳಿ ಮಣ್ಣಿನ ಹಾಡು
ಇದೇ ಧೂಳುತುಂಬಿದ ಊರು ಮತ್ತದೇ ಶಿಶಿರದ ಕನಸು
ಮಂಜುಮುಸಿಕಿನಲ್ಲಿ ಕಳೆದುಹೋದ ದಾರಿಯೂ
ಇಬ್ಬನಿಯಲ್ಲೇ ಮರೆತುಹೋದ ಆಕಾಶವೂ
ಎಲೆಗಳೇ ಇಲ್ಲದ ಮರದತುಂಬ ಹಿಮದ ಹೂಗಳು
ಬೊಗಸೆಯಲ್ಲಿ ಒಂದೇ ಒಂದು ಎಲೆ ಮೇಲಿನ ಬಿಂದು !
ಯಾವತ್ತೂ ಬರುವುದಿಲ್ಲ ನನಗೆ
ತಾವರೆಯ ಎಲೆ ಮೇಲಿನ ಒಂದು ಹನಿ
ಬಿಂದುವಾಗಲು !
 

‍ಲೇಖಕರು G

11 June, 2015

3 Comments

  1. ವೀರಣ್ಣ ಮಂಠಾಳಕರ್

    ಬದುಕಿನ ಬಗ್ಗೆ ಕವನದಲ್ಲಿ ಉತ್ತಮವಾದ ಭಾವನೆಗಳು ಮೇಳೈಸಿಕೊಂಡು ಓದುಗರನ್ನು ಪ್ರತಿಯೊಂದು ಸಾಲುಗಳು ಹಿಡಿದಿಟ್ಟುಕೊಳ್ಳುತ್ತವೆ. ಉತ್ತಮವಾದ ಕವನ. ಅಭಿನಂದನೆಗಳು.

  2. mmshaik

    very..very..nice.

  3. Vinod Kumar Bangalore

    ಚೆನ್ನಾಗಿದೆ ಮೇಡಂ !

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading