ಬನ್ನಿ ಈ ‘ಕಳ್ಳರ ಮಾರ್ಕೆಟ್’ಗೆ..

ನಮ್ಮಊರಿನ ವ್ಯಾಪಾರಗಳಲ್ಲಿ ಚೌಕಾಶಿ ಸಂಪ್ರದಾಯ ಇಲ್ಲ. ಏನೇ ಖರೀದಿಗೂ ಅಲ್ಲಿ ಹೇಳಿರುವಷ್ಟು ಮೊತ್ತ ಪಾವತಿಸಲೇಬೇಕು. ಅವುಗಳ ಗುಣಮಟ್ಟ ಏನಿದ್ದರೂ ಉಪಯೋಗಿಸಿದ ಬಳಿಕವೇ ನಿರ್ಧಾರ. ಆ ಮೂಲಕ ಪ್ರತಿ ಅಂಗಡಿಗಳ ಹಣೆಬರಹ ನಿರ್ಧರಿಸಲ್ಪಡುತ್ತದೆ. ಹಾಗೂ ಮುಂದಿನ ಶಾಪಿಂಗ್ ಎಲ್ಲಿ ನಡೆಯಬೇಕು ಎಂಬುದನ್ನು ತೀರ್ಮಾನಿಸಲಾಗುತ್ತದೆ.

ಇಂತಹ ವಾತಾವರಣದಲ್ಲಿ ಮೂಕ ಪ್ರೇಕ್ಷಕರಂತೆ ಭರ್ಜರಿ ವ್ಯಾಪಾರಮಾಡಿದ್ದೇ ಮಾಡಿದ್ದು. ಇದಾಗಿ ನೆಕ್ ಸ್ಟಾಪ್ ಇಳಿದಿದ್ದೇ ಮುತ್ತಿನ ನಗರಿ ಹೈದರಾಬಾದಿನಲ್ಲಿ. ಕೇಳಿದಷ್ಟು ದುಡ್ಡುಕೊಟ್ಟು ಮನೆಗೆ ಬೇಕಾದ ವಸ್ತುಗಳು ಬಂತೋ ಇಲ್ವೋ, ಪರ್ಸ್ ಮಾತ್ರ ಖಾಲಿಯಾಗ್ತಿತ್ತು.

ಈಟಿವಿಗೆ ಬಂದು ಸೇರಿದ ಕೊಂಚ ಸಮಯದಲ್ಲಿ ನನ್ನ ರೂಮ್ಮೇಟ್ ಆಗಿ ಸಿಕ್ಕಿದ್ದು ವೀಣಾ ಪೂಜಾರಿ. ಹುಬ್ಬಳ್ಳಿಯ ಹುಡುಗಿಯಿಂದ ಒಂದು ತರಬೇತಿ ಸಿಕ್ಕಿತು ನೋಡಿ, ಈ ಭಾಗ್ಯ ಯಾರಿಗುಂಟು ಯಾರಿಗಿಲ್ಲ. ಮತ್ತೆ ಮುಂದಿನ ಸ್ಟಾಪ್ ಗೆ ಹತ್ತುವ ವೇಳೆಗೆ ೧೦೦ ರೂಪಾಯಿಗಳ ವಸ್ತುವನ್ನು ೨೦ ರೂಪಾಯಿಗೆ ಚೌಕಾಶಿ ಮಾಡಿ ಮನೆಗೆ ತರುವಷ್ಟು ರೆಡಿಯಾಗಿದ್ದೆ.

ನನ್ನ ಚೌಕಾಶಿ ವ್ಯಾಪಾರವನ್ನು ನೋಡಿ ಪ್ರತಿ ಬಾರಿ ಗಾಬರಿಗೊಳ್ಳುತ್ತಿದ್ದ ನನ್ನ ಗಂಡ, ವ್ಯಾಪಾರಿಯಿಂದಲೇ ಹೊಡೆತ ಶತಸಿದ್ಧ ಎಂದು ಹೆದರಿಸುತ್ತಿದ್ದರು.

ಸಿಂಗಾಪುರದಲ್ಲಿ ಬಾರ್ಗೈನ್ ನಡಿಯೋದಿಲ್ಲ. ಕಳಪೆ ಗುಣಮಟ್ಟ ಆಗಿದ್ದರೂ ಹೇಳಿದಷ್ಟೇ ಹಣ ನೀಡಲೇಬೇಕು. ಕಡಿಮೆಗೆ ಕೊಡಿ ಎಂದು ರಾಗ ಎಳೆಯುವ ಮೊದಲೇ ಅಂಗಡಿ ವ್ಯಾಪಾರಿಗಳು“ no lah “ಹೇಳೋದು. ನಾವು ”Can lah” ಹೇಳೋದು {Singlish } ವಾಡಿಕೆಯಾಗಿತ್ತು.

ಹೈದರಾಬಾದಿನಲ್ಲಿ “ಕೋಟಿ”, ಬೆಂಗಳೂರಿನಲ್ಲಿ ಗಾಂಧಿ ಬಜಾರ್, ಇದೀಗ ಸಿಂಗಾಪುರದಲ್ಲೂ ಒಂದು ಶಾಪಿಂಗ್ ಸ್ಟ್ರೀಟ್ ನಮ್ಮ ನೆಚ್ಚಿನ ಶಾಪಿಂಗ್ ಪಾಯಿಂಟ್ ಆಗಿಬಿಟ್ಟಿದೆ.

ಬ್ರ್ಯಾಂಡೆಡ್ ವಸ್ತುಗಳು, ಸ್ಟ್ಯಾಂಡರ್ಡ್ ಲೈಫ್, ಡಾಲರ್ ಗಳಲ್ಲಿ ವ್ಯವಹಾರ ಮಾಡುವ ಇಲ್ಲಿನ ವ್ಯವಸ್ಥೆ ನಿಜಕ್ಕೂ ದುಬಾರಿ. ಎಲ್ಲೇ ಸುತ್ತಾಡಿ, ಅದೇ ಮಾಲ್ಗಳು, ಅದೇ ಬ್ರ್ಯಾಂಡ್ಗಳು. ಸಣ್ಣಪುಟ್ಟಅಂಗಡಿಗಳು, ಕಡಿಮೆ ಡಾಲರ್ ಗಳಲ್ಲಿ ಶಾಪಿಂಗ್ ಅಪರೂಪವೇ ಸರಿ.

ಅದಕ್ಕೆ ಏನಿದ್ರೂ ಊರ ಸಂತೆ ಬರಬೇಕು. ಯಾವುದಾದರೂ ಹಬ್ಬಗಳ ಸಂದರ್ಭಗಳಲ್ಲಿ, ಮಕ್ಕಳ ಶಾಲಾರಜೆಗಳಲ್ಲಿ, ಅಪರೂಪಕ್ಕೆ ಪೆಂಡಾಲ್ಹಾಕುವ ಕ್ರಮ ಇದೆ. ಅದಕ್ಕೆ ಪಾಸಾರ್ಮಲಾಮ್ ಎಂದು ಹೆಸರು. ಅಂದರೆ ನೈಟ್ ಮಾರ್ಕೆಟ್ ಎಂದು ಅರ್ಥ.

ಅದು ಬಿಟ್ಟರೆ. ಕೆಲವೊಂದು ಪ್ರದೇಶಗಳಲ್ಲಿ ಶಾಪಿಂಗ್ ಸ್ಟ್ರೀಟ್ ಗಳಿವೆ. ಅವುಗಳಲ್ಲಿ ತುಂಬಾ ಫೇಮಸ್ “ಬೂಗಿಸ್”. ಸಿಂಗಾಪುರದ ಅತಿದೊಡ್ಡ ಶಾಪಿಂಗ್ ಸ್ಟ್ರೀಟ್  ಎಂಬ ಕ್ರೆಡಿಟ್ ಇದಕ್ಕಿದೆ. ತಮ್ಮ ತಮ್ಮ ಬಜೆಟ್ ನಲ್ಲಿ ಅಗ್ಗದ ಬೆಲೆಗಳಲ್ಲಿ ಶಾಪಿಂಗ್ ಬ್ಯಾಗ್ ತುಂಬಿಸುವ  ಅವಕಾಶ ಇಲ್ಲಿದೆ.

ಬೂಗಿಸ್ ಎಂಬ ಹೆಸರು ಇಂಡೋನೇಷ್ಯಾದಲ್ಲಿ ಸಮುದ್ರಯಾನ ಮಾಡುವ ಜನರ ಜನಾಂಗೀಯ ಹೆಸರಿನ ಮೂಲಕ ಬಂದಿದೆ. 1819 ರಲ್ಲಿ ಬ್ರಿಟೀಷರು ವ್ಯಾಪಾರದ ಒಪ್ಪಂದವನ್ನುಈ ದ್ವೀಪದಲ್ಲಿ ಸ್ಥಾಪಿಸಿದ ನಂತರ ಸಿಂಗಾಪುರಕ್ಕೆ ಬಂದಿಳಿದ ಮೊದಲಗುಂಪು ಈ ಬೂಗಿಸ್ ಆಗಿದೆ.

ಎರಡನೇ ವಿಶ್ವ ಸಮರದ ಹಿಂದೆಯೇ ಇದು ಜಪಾನಿ ವೇಶ್ಯೆಯರ ಹಾರ್ಟ್ ಸ್ಪಾಟ್ ಆಗಿತ್ತು.  50 ರಿಂದ 80 ರ ದಶಕದ ವರೆಗೆ ಈ ಪ್ರದೇಶ, ಮಂಗಳಮುಖಿಯರು ರಾತ್ರಿಯ ವೇಳೆ ಒಟ್ಟುಗೂಡುವ ಸ್ಥಳವಾಗಿ ಪ್ರಸಿದ್ಧವಾಗಿತ್ತು. ಪ್ರಸ್ತುತ ಪ್ರವಾಸಿಗರಿಗೆ ಮತ್ತು ಸ್ಥಳೀಯರಿಗೆ ಪ್ರಮುಖ ಕೇಂದ್ರವಾಗಿರುವ ಬೂಗಿಸ್, ಇತಿಹಾಸ ಮತ್ತು ಶಾಪಿಂಗ್ ತಾಣವಾಗಿ ಜನಪ್ರಿಯವಾಗಿದೆ.

ಇದರ ಜೊತೆಗೆ ಇನ್ನೊಂದು ವಿಶಿಷ್ಟ ಹಾಗೂ ಅಗ್ಗದ ಬೆಲೆಯ ಶಾಪಿಂಗ್ ಜಾಗ ಮುಸ್ತಾಫ್ಹಾ ಸೆಂಟರ್. ಮನುಷ್ಯರನ್ನು ಬಿಟ್ಟು ಮತ್ತೆಲ್ಲವೂ ಇಲ್ಲಿ ಲಭ್ಯ. ಸ್ಥಳೀಯರು ಬಿಡಿ, ಪ್ರವಾಸಿಗರಿಗಂತೂ ಅರ್ಧ ಅಥವಾ ಒಂದು ದಿನದ ಪ್ರವಾಸ ಹಾಗೂ ಶಾಪಿಂಗ್ ಈ ಸೆಂಟರ್ ನಲ್ಲಿ ಫಿಕ್ಸ್ ಆಗಿ ಇರುತ್ತದೆ.

ಸತತ ೨೪ ಗಂಟೆಯೂ ನಿರಂತರ ಸೇವೆಯಲ್ಲಿರುವುದು ಇದರ ವೈಶಿಷ್ಟ್ಯ. ಮುಂಜಾನೆಯೂ ತೆರಳಿ, ರಾತ್ರಿಯು ಭೇಟಿ ನೀಡಿ ಯಾವತ್ತೂ ಜನಜಂಗುಳಿ. ಮುಸ್ತಫಾ ಸೆಂಟರ್  3,00,000 ಕ್ಕೂ ಹೆಚ್ಚು ವಸ್ತುಗಳನ್ನು ಮಾರಾಟ ಮಾಡುತ್ತದೆ. ಜೊತೆಗೆ ವಿದೇಶಿ ವಿನಿಮಯ ಮತ್ತು ಪ್ರಯಾಣ ವ್ಯವಸ್ಥೆಗಳಂತಹ ಸೇವೆಗಳು ಇಲ್ಲಿ ದೊರೆಯುತ್ತದೆ.

ಇನ್ನೊಂದು ಥೀವ್ಸ್ ಮಾರ್ಕೆಟ್. ಅಚ್ಚ ಕನ್ನಡದಲ್ಲಿ ಹೇಳುವುದಾದರೆ ಕಳ್ಳರ ಮಾರ್ಕೆಟ್. ಇಲ್ಲಿನ ಸಂಗೈರೋಡ್ನಲ್ಲಿ 1930  ರಲ್ಲಿ ಸ್ಥಾಪನೆಗೊಂಡ ಮಾರುಕಟ್ಟೆ. ಸಿಂಗಾಪುರದಲ್ಲಿ ಅತ್ಯಂತ ಹಳೆಯ ಹಾಗೂ ದೊಡ್ಡ ಮಾರುಕಟ್ಟೆ ಇದಾಗಿತ್ತು. ಥೀವ್ಸ್ ಮಾರ್ಕೆಟ್ ನ ವ್ಯಾಪಾರಿಗಳಿಗೆ ಬಾಡಿಗೆ ನೀಡುವ ಪ್ರಮೇಯವಿರಲಿಲ್ಲ. ಸುಮಾರು 400 ಕ್ಕೂ ಅಧಿಕ ಮಾರಾಟಗಾರರು ತಮ್ಮ ವ್ಯಾಪಾರ ನಡೆಸುತ್ತಿದ್ದರು. ಪ್ರವಾಸಿಗರು ಮತ್ತು ಸ್ಥಳೀಯರು ದುಬಾರಿ ದೇಶದಲ್ಲಿ ಅಗ್ಗದ ಬೆಲೆಯಲ್ಲಿ ದೊರೆಯುತ್ತಿದ್ದ ವಸ್ತುಗಳನ್ನು ಕೊಳ್ಳಲು ಇಲ್ಲಿಗೆ ಭೇಟಿ ನೀಡುತ್ತಿದ್ದರು.

ಇಲ್ಲಿನ ಬಹುತೇಕ ವಸ್ತುಗಳು ಎರಡನೇ ದರ್ಜೆಗೆ ಸೇರಿದ್ದವು. ಬಳಸಿದ ಕ್ಯಾಮೆರಾಗಳು, ಪೋನ್ ಗಳು, ಎಲೆಕ್ಟ್ರಾನಿಕ್ ವಸ್ತುಗಳು, ಉಡುಪುಗಳು, ಬೂಟುಗಳು, ಆಡಿಯೋ / ವೀಡಿಯೋ ಟೇಪ್ ಗಳು, ಪುಸ್ತಕಗಳು, ಹಳೆಯ ನಾಣ್ಯಗಳು,  ಪ್ರಾಚೀನ ವಸ್ತುಗಳು ಹೀಗೆ ತರಹೇವಾರಿ ಐಟಮ್ಸ್ ಗಳನ್ನುಈ ಮಾರುಕಟ್ಟೆಯಲ್ಲಿ ಕಾಣಬಹುದಾಗಿತ್ತು.೧ ಡಾಲರ್ ನ ವಸ್ತುಗಳಿಂದ ಹಿಡಿದು ನೂರಾರು ಡಾಲರ್ಗಳ ವ್ಯಾಪಾರ ಇಲ್ಲಿ ನಡೆಯುತಿತ್ತು.

ಯಾವುದಕ್ಕೂ ಬಾಳಿಕೆಯ ಗ್ಯಾರಂಟಿ ಅನ್ನೋದು ಇರುತ್ತಿರಲಿಲ್ಲ. ಅದರ ಹೆಸರೇ ಸೂಚಿಸುವಂತೆ, ಥೀವ್ಸ್ ಮಾರ್ಕೆಟ್, ಪ್ರಾರಂಭದ ದಿನಗಳಲ್ಲಿ ಕದ್ದುತಂದ, ಕಳ್ಳಸಾಗಣೆಯ, ಅಕ್ರಮ ವಸ್ತುಗಳು ಆಗಿದ್ದವು. ಯಾವುದಾದರೂ ವಸ್ತುಗಳು ನಮ್ಮಲ್ಲಿಂದ ಕಳ್ಳತನವಾದರೆ, ಈ ಮಾರುಕಟ್ಟೆಯಲ್ಲಿ ಕಂಡುಹಿಡಿಯಬಹುದೆಂದು ಎಂಬ ಮಾತು ಕೂಡ ಪ್ರಚಲಿತದಲ್ಲಿತ್ತು.

ಆದರೆ ವಸತಿ ಅಭಿವೃದ್ಧಿಗೆ ಈ ಪ್ರದೇಶವನ್ನು ಮರುಪರಿಶೀಲಿಸುವ ಸಲುವಾಗಿ ಈ ಮಾರುಕಟ್ಟೆಯನ್ನು ಸ್ಥಳಾಂತರಿಸಲಾಗಿದೆ. ಹೀಗಾಗಿ ದಿನ ನಿತ್ಯ ನಡೆಯುತ್ತಿದ್ದ ವ್ಯಾಪಾರ ಇದೀಗ ಬೇರೆ ಕಡೆ ಸ್ಥಳಾಂತರಗೊಂಡು, ಕೇವಲ ವಾರದ ಅಂತ್ಯಕ್ಕೆ ಮಾತ್ರ ಸೀಮಿತಗೊಂಡಿದೆ.

ಅಲ್ಲದೆ ಬಾಡಿಗೆ ಹಾಗೂ ನೋಂದವಾಣಿಗೂ ಹಣಪಾವತಿಸುವುದು ಕಡ್ಡಾಯವಾಗಿದೆ. ಹೀಗಾಗಿ ಹೆಚ್ಚಿನ ವ್ಯಾಪಾರಿಗಳು ಹೊಟ್ಟೆ ಪಾಡಿಗಾಗಿ ವಾರದ ದಿನಗಳಲ್ಲಿ ಇನ್ನಿತರ ಸ್ಥಳಗಳಲ್ಲಿ ವ್ಯಾಪಾರ ನಡೆಸುತ್ತಾ ದೇಶದಾದ್ಯಂತ ಚದುರಿ ಹೋಗಿದ್ದಾರೆ. ಥೀವ್ಸ್  ಮಾರ್ಕೆಟ್ ನಲ್ಲಿ ವ್ಯಾಪಾರ ಮಾಡಿದ್ದ ಅದೆಷ್ಟೋ ವ್ಯಾಪಾರಿಗಳು, ಆರ್ಥಿಕವಾಗಿ ಸಧೃಡಗೊಂಡು ತಮ್ಮದೇ ಅಂಗಡಿ ಮುಂಗಟ್ಟುಗಳನ್ನು ತೆರೆಯುವಲ್ಲಿ ಯಶಸ್ವಿಯಾಗಿದ್ದಾರೆ.

‍ಲೇಖಕರು Avadhi Admin

April 5, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: