ಮೂರೂ ಬಿಡುವುದೆಂತೋ….

‘ಅವಧಿ’ಯಲ್ಲಿ ಬಂದ ಎರಡು ಫೋಟೊಗಳೇ ನಿಜಕ್ಕೂ ಹೇಳಬೇಕೆಂದರೆ ನಾನು ಬರೆದಿರುವ ಈ ಕವನಕ್ಕೆ ಕಾರಣ.

‘ಅವಧಿ’ಯಲ್ಲಿ ಜಯರಾಮಾಚಾರಿಯವರು ಬರೆದ “ಟೀ ಮತ್ತು ಸಿಗರೇಟು” ಕವನಕ್ಕೆ ಈ ಫೋಟೋಗಳನ್ನು ಏರಿಸಲಾಗಿತ್ತು. ನಾಲ್ಕು ಸಾಲು ಓದಿರಬಹುದು. ಆ ಫೋಟೋ ಮತ್ತು ಕವನದ ಶೀರ್ಷಿಕೆ ಕಿಕ್ ಕೊಟ್ಟಿತು.

ಆಗ ಮನದಲ್ಲಿ ಮೂಡಿದ್ದು ಕವನವಾಗಿ ಇಲ್ಲಿದೆ. ‘ಅವಧಿ’ಗೂ, ಕವನ ಬರೆದ ಜಯರಾಮಚಾರಿ ಅವರಿಗೂ ನನ್ನ ಧನ್ಯವಾದಗಳು.

ಗೀತಾ ಹೆಗ್ಡೆ, ಕಲ್ಮನೆ

ಅವನು ಸುರುಳಿ ಸುರುಳಿಯಾಗಿ
ಹೊಗೆ ಬಿಡುತ್ತಿದ್ದಾನೆ
ತುಟಿ ಊದಿಸಿ ಆಕಾರ ಕೊಡುತ್ತಿದ್ದಾನೆ
ಮೇಲೆ ಮೇಲೆ ಹೋಗುವ
ಹೋಗುತ್ತ ಹೋಗುತ್ತ
ಗಾಳಿಯಲ್ಲಿ ಅದೃಶ್ಯವಾಗುವ ಪರಿ ಕಂಡು
ಒಂದು ವಿಷಾದದ ನಗೆ ನಕ್ಕು.

ಮನಸಿನಾಳದಲಿ ನಿಂತ ನೀರಾಗಿ ಕುಳಿತ
ಆ ಒಂದು ಸವಿ ಸವಿ ಆಸೆಯ
ನೆನಪಿನ್ನೂ ಹಸಿರಾಗಿದೆ
ಆಗಾಗ ಮನಃಪಟಲಕ್ಕೊತ್ತಿ
ತಟಕ್ಕನೆ ನೆನಪಾಗಿ ಮಾಯವಾಗಿಬಿಡುತ್ತದೆ
ಕಂಡೂ ಕಾಣದಂತೆ ಥೇಟ್ ಗಾಳಿಯಲ್ಲಿ ಲೀನವಾದ
ತಾನೇ ಸೇದಿ ಬಿಟ್ಟ ಹೊಗೆಯಂತೆ.

ಅಂದುಕೊಳ್ಳುತ್ತಾನೆ
ಕೈಗೆ ಸಿಗರೇಟ್ ಟಿಕ್ಕಿಸಿ ಉರಿ ಹಚ್ಚುವ ಜೋಷ್
ರಜನಿಕಾಂತ್ ಸ್ಟೈಲ್ಗೆ ಫಿದಾ ಆಗಿ
ಧಮ್ಮೇರಿಸುವ ಈ ಹೊಗೆ ಬತ್ತಿ’
ಅಮ್ಮನಿಗೆ ದುಂಬಾಲು ಬಿದ್ದು
“ನಂಗೆ ಹಾಲು ಬ್ಯಾಡ್ದೆ, ದೊಡ್ಡಾಜಿ,  ಚಾ ಕೊಡು”
ಹಠ ಹೊತ್ತು ಅಂಟಿಸಿಕೊಂಡ ಚಾ ಚಟ,
ಗೆಳೆಯರೊಂದಿಗೆ ಸೇರಿ ಅಂಡಲೆಯುತ್ತ
ಕಲಿತ ಗುಂಡೂ ತುಂಡೂ…

“ತಮಾ ಗನಾ ಕೂಸಿನ ಜಾತಕಾ ಬಂಜು”
ಅಮ್ಮನ ಅಶರೀರವಾಣಿ ಕಿವಿಗೆ ಬಿದ್ದಾಗಲೆಲ್ಲ
ಸಂಭಾವಿತನೆಂದೆನಿಕೊಳ್ಳುವ ಆಸೆ ಚಿಗುರುತ್ತದೆ
ಬಿಟ್ಟು ಬಿಡಬೇಕು ಆ ನೆನಪೂ ಕೂಡಾ…..
ಮನಸಿಗೂ ಬುದ್ಧಿಗೂ ನಿತ್ಯ ಗುದ್ದಾಟ.

“ಕೆಲವೊಂದು ಪುಸ್ತಕದ ಬದನೆಕಾಯಿ
ನನ್ನಪ್ಪನಾಣೆ ಚಟ ಬಿಡೋದು ಕಷ್ಟ ಕಣ್ಲಾ
ಅನುಭವಿಸಬೇಕು, ರುಚಿ ನೋಡಬೇಕು”
ಹೀಂಗೆಲ್ಲಾ ಬಾಣ ಬಿಟ್ಟಂತೆ
ಕಿವಿಗಪ್ಪಳಿಸಿದ ಸಿನೇಮಾ ಡೈಲಾಗು
ಇದೂ ಹೌದಿರಬಹುದೆಂಬ ಮನಸಿನ ಗೊಂದಲ!

ಇರಲಿ ಇವತ್ತೊಂದಿನ
“ನನ್ನವ್ವನ ಮೇಲಾಣೆ ನಾಳೆಯಿಂದ ಕುಡಿಯೋದಿಲ್ಲ”
ಹೆಂಡ ಕುಡಿದವರ ಬಾಯಲ್ಲಿ ಬರುವ ಅಮೃತ ನುಡಿ!
ಕಾಲು ತಿರುಗುವುದು ಮತ್ತೆ ಗೂಡಂಗಡಿ ಕಡೆಗೆ.

ಬೆಳ್ಳಂಬೆಳಗ್ಗೆ ಹೀರುವ ಸುಡು ಸುಡು ಚಹಾ
ಹಾಯ್! ಮನಸಿಗೊಂದಿಷ್ಟು ಉಲ್ಲಾಸ
ಕಿಸಕ್ಕನೆ ಮೊಬೈಲ್ನಲ್ಲಡಗಿದ ಮಾಯಾಂಗನೆ
ನಗುತ್ತಾಳೆ –
“ಇಷ್ಟೇನಾ ನಿನ್ನ ಧಮ್ಮೂ………
ಸಂಜೆ ಯಾವ ಕಡೆಗೋ…….”

ಇವನು ನಗುವುದಿಲ್ಲ ದುರುಗುಟ್ಟುತ್ತಾನೆ
ಪ್ರೀತಿಯಿಂದಲೋ
ಯಾ ಅವಮಾನದಿಂದಲೋ
ಆ ಮುಖದೊಳಗಿನ ಮನಸಿಗಷ್ಟೇ ಗೊತ್ತು
“ಅನುಭವಿಸು ಕೆರಕೊಂಡ ತಪ್ಪಿಗೆ”
ಸೆಟೆದು ಕುಟುಕುತ್ತದೆ.

ಎಡವಟ್ಟು ಗೊತ್ತೇ ಆಗುವುದಿಲ್ಲವೋ
ಅಥವಾ ಗಮನ ಕೊಡುವುದಿಲ್ಲವೋ
ಒಟ್ಟಿನಲ್ಲಿ ಎಲ್ಲರಿಗೂ ಎಲ್ಲವೂ ಎಲ್ಲ ರಂಗದಲ್ಲೂ
ಹೊಸದರಲ್ಲಿ ಎಲ್ಲವೂ ಸಂಗಾತ ಸಂಪ್ರೀತಿ
ಕೊನೆಯ ಹಾದಿ
ಮನಸ್ಯಾಕೊ ಪದೇ ಪದೇ ಹಿಂತಿರುಗಿ
ಸರಿ ತಪ್ಪುಗಳ ತುಲನಾತ್ಮಕ ಮಾಡೋ ಗೀಳು
ಅದೇನೋ ಹೇಳ್ತಾರಲ್ಲಾ;
“ಕೊಳ್ಳೆ ಹೊಡೆದ ಮೇಲೆ ಕೋಟೆ ಬಾಗಿಲು ಬಂದ್ ಮಾಡಿದಂತೆ”
ಮೊದಲೇ ಎಲ್ಲೋಗುತ್ತೋ ಲದ್ದಿ ಬುದ್ಧಿ!

ಹಲವರಂತಾರೆ ಅವರವರಿಗನಿಸಿದಂತೆ
“ಶೋಕಿಗೊ ಆಸೆಗೊ
ಅಥವಾ ಇನ್ಯಾವುದಕ್ಕೋ
ಬರಿ ಬೇಜಾರು ಕಳೆಯಲಿಕಿರಲೂಬಹುದು
ಚಟ ಅಂಟಿಸಿಕೊಂಡುಬಿಡ್ತಾರೆ ಪಾಪ!”

ಒಟ್ಟಿನಲ್ಲಿ ತಲೆ ತುಂಬ ಗಜಿಬಿಜಿ ಗೊಂದಲ
ಹ..ಹ…ಮುಗುಳು ನಕ್ಕು
“ಮೂರು ಬಿಡುವುದೆಂತೋ….”
ದಿನವೂ ತನ್ನ ದುಸ್ಸಾಹಸವ ನೆನೆದು
ಸುಮ್ಮನಾಗುತ್ತಾನೆ.

ಬೆಳ್ಳಂಬೆಳಗ್ಗೆ ಜೊತೆಯಾಗೇ ಬರುವ

ಒಂಟಿತನಕ್ಕೊಂದು ಹೆಗಲಾಗುವ
ಆ ಆ ಅದೇ ಅದೇ
ಗೂಡಂಗಡಿಯ ಹಳೆಯ
ಕಟ್ಟೆಗೆ ಆತು ಅಂಟಿಸಿಕೊಂಡ
ಆ ಅವಳು
ನೆನಪಾದಾಗಲೆಲ್ಲ ಬಿಡುವ ಸುರುಳಿ
ವಾವ್!ತಾಜ್
ಚಮಕ್ ಚಮಕ್ ಘಮಲಿನಲಿ ಹೊಗೆಯಾಡುವ ಚಹಾ…
ನಿಲ್ದಾಣದಲ್ಲಿ ಇಳಿಯದೇ
ನನ್ನ ಪಯಣಕೆ
ಕಣ್ಣಾಗಿ ಕಿವಿಯಾಗಿ ನನ್ನ ದೇಕರೇಕೆ ನೋಡಿಕೊಳ್ಳುವ
ಮನಸ್ಸು ಖುಷಿ ಪಡಿಸುವ ಗುಂಡಾಕುವ ದಂಡು
ಇವರನ್ನೆಲ್ಲ ಹೇಗೆ ಬಿಡಲಿ
ಬರುವವಳು ಇವರನ್ನೆಲ್ಲ ಮೀರಿಸುವ
ಸಂಗಾತಿಯಾಗುವುದು ಯಾವ ಗ್ಯಾರಂಟಿ?
ಒಟ್ಟಿನಲ್ಲಿ ಅವನ ತಲೆ ಪೂರಾ ಚೊಂಬೋ ಚೊಂಬು…..

‍ಲೇಖಕರು Avadhi Admin

April 5, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

4 ಪ್ರತಿಕ್ರಿಯೆಗಳು

  1. NAGESH.G.G

    ಮನಮುಟ್ಟುವಂತೆ ತುಂಬಾ ಚೆನ್ನಾಗಿ ಬರೆದಿದ್ದಿರಿ✍

    ಪ್ರತಿಕ್ರಿಯೆ

Trackbacks/Pingbacks

  1. ಮೂರೂ ಬಿಡುವುದೆಂತೋ…. – ಅವಧಿ/Avadhi – Sandhyadeepa…. - […] https://avadhimag.in/?p=212865 […]

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: