ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬದುಕ ನಾಟಕಕೆ ತೆರೆ ಬಿದ್ದು…

ನಾ ಸತ್ತಿದ್ದೆ 

– ಪರೇಶ್ ಸರಾಫ಼್

ಚಳಿಯಿಲ್ಲದಿರೂ ಮೈ ಮೇಲೆ ಚಾದರ

ಮತ್ತೆ ಉಸಿರು ಬರದಿರಲೆಂದೇನೋ

ಮೂಗಿನ ಹೊಳ್ಳೆಗಳೆರೆಡರಲೂ ಹತ್ತಿಯುಂಡೆ

ಓಡಿ ಹೋಗುವೆನೆಂಬ ಭಯವಿರಬಹುದು

ಕಟ್ಟಿದ್ದರು ಹೆಬ್ಬೆರಳುಗಳೆರಡನೂ ಜೋಡಿಸಿ

ನನ್ನ ಸಮಯ ಮುಗಿದು ನಾ ಸತ್ತಿದ್ದೆ

ಅಮ್ಮ ಕಿರುಚಿತ್ತಿದ್ದಳು ಮತ್ತೆ ಬಾ ಮಗನೇ ಎಂದು

ಹಾತೊರೆದೆ, ಎದ್ದು ಗಟ್ಟಿಗೆ ಅಪ್ಪಿಕೊಳ್ಳಲವಳ

ಶಕ್ತಿಯೇ ಇರಲಿಲ್ಲ, ಕೈಕಾಲುಗಳಲ್ಲಿ

ಅಪ್ಪ ದಿಗ್ಭ್ರಾಂತ, ದೂರ ದೇಶಕೆ ಹೋಗಿ

ಚೂರು ಪಾರು ದುಡಿದು ಹೊತ್ತಿದ್ದ ಸಂಸಾರ ಭಾರ

ಅವನೊಡನೆ ಕೈ ಜೋಡಿಸಿ ವರ್ಷವಾಗಿತ್ತಷ್ಟೇ

ನನ್ನ ಸಮಯ ಮುಗಿದು ನಾ ಸತ್ತಿದ್ದೆ

ತಮ್ಮಂದಿರೀರ್ವರು, ಹೂವಾಗಿ ಅರಳುವ ಹೊತ್ತು

ನೀರೆರೆಯುತ್ತಿದ್ದೆ ಪ್ರೀತಿಯಿಂದ

ನನ್ನ ಮೊಗವನೇ ದಿಟ್ಟಿಸಿ ನೋಡುತಿಹರು

ಎಲ್ಲಾದರೂ ಒಂದುಸಿರು ಮಿಕ್ಕಿರಬಹುದೋ ಎಂದು

“ನಿಮಗೋಸ್ಕರ ಕೂಡಿಟ್ಟಿದ್ದೇನೆ ಕೊಂಚ ಹಣ

ಜೊತೆಗೆನ್ನ ಜೀವ ವಿಮೆ, ರಶೀದಿ ರೂಮಿನ

ಕಪಾಟಿನಲಿರುವ ಕಡತದಲ್ಲಿದೆ” ಎಂದು

ಹೇಳ ಹೊರಟರೆ ಬಾಯಿಂದ ಮಾತೇ ಬರುತ್ತಿಲ್ಲ

ನನ್ನ ಸಮಯ ಮುಗಿದು ನಾ ಸತ್ತಿದ್ದೆ

ಅಷ್ಟರಲೇ ಹಾಕಿದ್ದರು ಚಟ್ಟದ ಮೇಲೆ

ಬಟ್ಟೆಯೆಲ್ಲ ತೆಗೆದರು, ನಾನು ನಗ್ನ

ಭೂಮಿಗೆ ಭಾರವೆಂದು ಸುಟ್ಟು ಹಾಕುತಿಹರು

ಕೊಂಚ ಗಾಯವಾದರೆ ಕಂಗಾಲಾಗುವ ಅಪ್ಪ

ನಿಂತಿದ್ದ ಸ್ತಬ್ಧನಾಗಿ ನೋಡುತ್ತ

ಆಗ ತಿಳಿಯಿತು “ನಾನು” ಒಂದು ಪಾತ್ರವಷ್ಟೇ

ಈಗಿಲ್ಲ ನನ್ನದೆಂಬುದೇನೂ ಇಲ್ಲಿ

ಬದುಕ ನಾಟಕಕೆ ತೆರೆ ಬಿದ್ದು ನಾ ಸತ್ತಿದ್ದೆ

‍ಲೇಖಕರು G

13 October, 2012

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading