ಸಂಪು ಕಾಲಂ : ಹೀಗೊಂದು ಆಟೋ ಕಥೆ!

ನಾವೂ ಮನುಷ್ಯರು ಸ್ವಾಮೀ – ಆಟೋ ಕಥೆ

ತುಂಬಾ ಹಿಂದಿನ ಮಾತು. ಸಾಧಾರಣವಾಗಿ ನಗರದ ಆಟೋ ಚಾಲಕರ ಮೇಲಿರುವ ಅಭಿಪ್ರಾಯದ ಫಲವೇನೋ ಎಂಬಂತೆ ಈ ನಿಜ ಘಟನೆ ನೆನಪಿನಿಂದ ಹೊರತಾಗಿತ್ತು, ಇತ್ತೀಚಿಗೆ ನಮ್ಮ ಪರಿಚಯದ ವ್ಯಕ್ತಿಯೊಬ್ಬರು ಒಬ್ಬ ಆಟೋ ಚಾಲಕನ ಗುಣವನ್ನು ಮೆಚ್ಚಿ ಕೊಂಡಾಡಿದಾಗ “ಅರೆ ಹೌದಲ್ಲವೇ, ಈ ರೀತಿ ಆಟೋ ಚಾಲಕನ ಸಭ್ಯತನ ನನ್ನ ಅನುಭವಕ್ಕೆ ಬಂದಿತ್ತಲ್ಲವೇ!” ಎಂದು ತಟ್ಟನೆ ನೆನಪಾಯಿತು. ಆ ಮನಮುಟ್ಟುವ ಕಥೆ ಹೇಳುವ ಮುನ್ನ, ಅದನ್ನು ನೆನಪಿನ ಪಟಲಕ್ಕೆ ಹರಿಬಿಟ್ಟ, ಈ ಕಿರು ಘಟನೆಯನ್ನು ಹೇಳಿಬಿಡುತ್ತೇನೆ.

ಆತ ಗಡಿಬಿಡಿಯಲ್ಲಿ ತನ್ನ ಪರ್ಸ್ ಮರೆತು ಮನೆಯಿಂದ ಹೊರಟೇ ಬಿಟ್ಟ. ಸಿಕ್ಕ ಆಟೋ ಹಿಡಿದು ಬಹು ದೂರ ಹೋಗಿ ಆಟೋ ನಿಂತ ಘಳಿಗೆಯಲ್ಲಿ ಮೀಟರ್ ನೋಡಿ “ಎಷ್ಟಪ್ಪ” ಎಂದು ತನ್ನ ಜೇಬಿಗೆ ಕೈ ಹಾಕಿದಾಗ ಮನವರಿಕೆಯಾದದ್ದು ತನ್ನ ಖಾಲೀ ಜೇಬು! ತನ್ನ ಆಬ್ಸೆಂಟ್ ಮೈಂಡ್ ಅನ್ನು ಶಪಿಸುತ್ತಾ, ಬೇಸರದ, ಕೊರಗಿನ ನೋಟದಲ್ಲಿ ಚಾಲಕನತ್ತ ನೋಡಿ, “ಸ್ವಾಮೀ, ಪರ್ಸ್ ಮರೆತು ಬಂದಿದ್ದೇನೆ, ದಯವಿಟ್ಟು ನನ್ನನ್ನು ಮತ್ತೆ ಅದೇ ಸ್ಥಳಕ್ಕೆ ಕರೆದು ಕೊಂಡು ಹೋಗಿ, ಹಣ ದೊರೆತಾಕ್ಷಣ ನಿಮ್ಮ ಶುಲ್ಕ ಕಟ್ಟುತ್ತೇನೆ” ಎಂದ. ಅದಕ್ಕೆ ಆ ಚಾಲಕ ಚೂರೂ ಉಪದ್ರವಕ್ಕೊಳಗಾಗದೆ “ಸಾರ್, ಇರಲಿ ಬಿಡಿ, ನಾನು ನಿಮ್ಮನ್ನು ಬನಶಂಕರಿಯಲ್ಲಿ ಸಾಕಷ್ಟು ಬಾರಿ ನೋಡಿದೀನಿ. ಮತ್ತೆ ಅಲ್ಲೇ ಸಿಕ್ಕಾಗ ನಿಮ್ಮಿಂದ ಚಾರ್ಜ್ ತೊಗೋತೀನಿ ಬಿಡಿ ಸಾರ್. ಮನುಷ್ಯ ಅಂದ ಮೇಲೆ ಅಷ್ಟೂ ಸಹಾಯ ಮಾಡಕ್ಕಾಗಲ್ವಾ” ಎಂದು ಹಲ್ಲು ಕಿರಿಯುತ್ತಾ, “ತೊಗೊಳಿ, ಈ ಐನೂರು, ಇಟ್ಕೋಳಿ ಈವತ್ತಿನ ಖರ್ಚಿಗೆ ಬೇಕಾಗತ್ತೆ” ಎನ್ನುತ್ತಾ ಐನೂರು ರೂ ನೋಟನ್ನು ಈತನ ಮುಂದೆ ಹಿಡಿದೇ ಬಿಟ್ಟ!

ಜೇಬಲ್ಲಿ ದುಡ್ಡಿಲ್ಲದೆ ಮನೆಯ ಹೊರಗಡೆ ಕಾಲಿಡುವ ಪ್ರಮೇಯವೇ ಇಲ್ಲದ ಇಂದಿನ ನಗರ ಜೀವನದಲ್ಲಿ, ಇಂತಹ ಒಬ್ಬ ವ್ಯಕ್ತಿ, ಅದರಲ್ಲೂ, ಎಲ್ಲರಿಂದ “ಮೋಸಗಾರರು, ಒರಟರು” ಎಂದು ತಿರಸ್ಕಾರಕ್ಕೆಪಾತ್ರರಾಗಿರುವ ಆಟೋ ಚಾಲಕ. ಈ ರೀತಿ ತನ್ನ ಸಹಾಯಕ್ಕೆ ಒಳಗಾಗಿದ್ದ ಕಂಡು ಆತ ವಿಸ್ಮಿತನಾಗಿದ್ದ! ಈ ಘಟನೆಯನ್ನು ನೆನೆಯುತ್ತಾ “ಆ ಕ್ಷಣದಲ್ಲಿ ನನ್ನ ಕಣ್ಣು ತೇವಗೊಂಡವು, ಆತನಿಗೆ ಎಷ್ಟು ಕೃತಜ್ಞತೆ ಸಲ್ಲಿಸಿದರೂ ಸಾಲದು” ಎಂದು ಹೇಳಿದ. ಆಗಲೇ ನೋಡಿ ನನಗೆ ಆ ಹಳೆಯ ಸ್ವಾರಸ್ಯವಾದ, ಅಷ್ಟೇ ಮನಕಲಕುವ ಘಟನೆ ಥಟ್ಟನೆ ನೆನಪಾದದ್ದು.

ಅದೊಂದು ರಾತ್ರಿ, ಸುಮಾರು ಎಂಟಾಗಿದ್ದಿರಬಹುದು. ನಮ್ಮ ವಠಾರದಂತಿದ್ದ ’ಡೆಡ್ ಎಂಡ್’ ರಸ್ತೆಗೆ ಒಂದು ಆಟೋ ನುಗ್ಗಿತ್ತು. ಮುಂದಕ್ಕೆ ರಸ್ತೆ ಇಲ್ಲ ಅಂದ ಮೇಲೆ ಕೇಳಬೇಕೆ! ಅದು ನಮ್ಮದೇ ರಾಜ್ಯವಾಗಿತ್ತು. ಹಿರಿಯರದೊಂದು ಕಡೆ ಸಮಾರಂಭ, ಕಿರಿಯರದು ಮತ್ತೊಂದು ಕಡೆ. ಆಟೋ ಬಂದ ಕೂಡಲೇ, ಯಾರ ಮನೆ ನೆಂಟರು ಬಂದರೋ ಎಂದು ಎಲ್ಲರೂ ಗಮನಿಸುತ್ತಿದ್ದರು.

ಇಷ್ಟರಲ್ಲಿ ಆ ಆಟೋದಲ್ಲಿ ಕಂಡದ್ದು ಇಬ್ಬರು ಹದಿವಯಸ್ಸಿನ ಹುಡುಗಿಯರು. ಆಟೋದಿಂದ ಇಳಿದ ಚಾಲಕ, ಅಲ್ಲೇ ಕೂತಿದ್ದ ಒಂದು ಗುಂಪಿನ ಬಳಿಗೆ ಬಂದ. ಕೈಯಲ್ಲೊಂದು ಚೀಟಿ, ಅದರಲ್ಲೊಂದು ಫೋನ್ ನಂಬರು! ಏನಾಗಿರಬಹುದೆಂದು ಇರುವ ಸಾಧ್ಯತೆಗಳನ್ನೆಲ್ಲಾ ಯೋಚಿಸುತ್ತಿದ್ದ ನಮ್ಮ ಗುಮಾನಿಯ ಊಹೆಗಳಿಗೆ ಬ್ರೇಕ್ ಹಾಕಿ, ಆತ, “ನೋಡಿ ಸಾರ್, ಈ ಇಬ್ಬರು ಹುಡುಗಿಯರು ಮೆಜಸ್ಟಿಕ್ ನಲ್ಲಿ ಆಟೋ ಅತ್ತುದ್ರು, ಈ ಏರಿಯಾ ಎಸ್ರು ಏಳಿದ್ರು, ಆದರೆ ಸರಿಯಾದ ಅಡ್ರಸ್ ಇಲ್ಲ! ಒಂದು ಫೋನ್ ನಂಬರ್ ಇದೆ ಅಷ್ಟೆ! ಈ ನಂಬರ್ ನಾಗ ಯಾರೂ ಮಾತಾಡ್ತಾನೂ ಇಲ್ಲ. ಊರು-ಕೇರಿ ಗೊತ್ತಿಲ್ಲ, ಬಾಸೆ ಗೊತ್ತಿಲ್ಲ, ಬಂದುಬುಟ್ಟವೆ! ಕತ್ತಲಾಗ್ತಿದೆ. ಏನ್ ಮಾಡಕ್ಕೂ ತೋಚದೆ ಈ ವಟಾರಕ್ಕೆ ಕರ್ಕೊಂಬಂದೆ. ಇವರನ್ನ ದಯವಿಟ್ಟು ಅವರ ಜಾಗಕ್ಕೆ ತಲುಪಿಸ್ತೀರ. ನೀವ್ ಆದ್ರೆ ಫ಼್ಯಾಮಿಲಿ ಜನ. ಬೇರೆ ಕಡೆ ಬಿಟ್ರೆ ಕಷ್ಟ!” ಎಂದ.

ಹೇಳಿ ಕೇಳಿ ನಗರ, ಅದ್ರಲ್ಲೂ ಮಿಡ್ಲ್ ಕ್ಲಾಸ್ ಜನ ನಾವು, ಅಷ್ಟು ರಿಸ್ಕ್ ತೊಗೊಳಕ್ಕೆ ಹಿಂದು ಮುಂದು! ಅಲ್ಲಿರುವ ಯಾರೋ ಮೊಬೈಲ್ ತಂದು ಆ ಚೀಟಿಯಲ್ಲಿನ ನಂಬರ್ ಗೆ ಫೋನ್ ಮಾಡಿದರು. “ಈ ದೂರವಾಣಿ ಸಂಖ್ಯೆಯು ವ್ಯಾಪ್ತಿ ಪ್ರದೇಶದ ಹೊರತಾಗಿದೆ. ದಯವಿಟ್ಟು ಸ್ವಲ್ಪ ಸಮಯದ ನಂತರ ಪರೀಕ್ಷಿಸಿ”. ಒಂದಷ್ಟು ಮಾತು ಕತೆ, ಅನುಮಾನ, ಹಾಗೂ ಕತ್ತಲಲ್ಲಿ ಈ ಮುಗ್ಧ ಹುಡುಗಿಯರಿಗೆ ಆದ ಪರಿಸ್ಥಿತಿಯ ಬಗ್ಗೆ ಯೋಚಿಸುತ್ತಾ, ಎಲ್ಲರ ಮುಖ ಪೇಚಾಗಿತ್ತು.

ಸಕಲವೂ ಸಂಭವಿಸುವ ಈ ಮಹಾ ನಗರದಲ್ಲಿ, ಕತ್ತಲ ಹೊತ್ತಲ್ಲಿ ನಡೆಯುತ್ತಿರುವ ಈ ಘಟನೆಯ ಬಗ್ಗೆ ಅರ್ಧ ಅನುಕಂಪ ಅರ್ಧ ಅನುಮಾನ! ಅಯ್ಯೋ ಪಾಪ ಎನ್ನುವುದ ಹೊರತು ಹೆಚ್ಚು ಉಪಾಯ ಹೊಳೆಯುತ್ತಿರಲಿಲ್ಲ.

ನಮ್ಮಲ್ಲೊಬ್ಬರು, “ಪೋಲೀಸ್ ಕಂಪ್ಲೈಂಟ್ ಕೊಡೋಣ” ಎಂದರು. ಇದಕ್ಕೆ ಆ ಚಾಲಕ “ಅಯ್ಯೊ ಹಂಗ್ ಮಾತ್ರ ಮಾಡಬೇಡಿ ಸಾರ್! ಇವರನ್ನು ಎಲ್ಲೋ ದಾರೀಲೇ ಬಿಟ್ಟು ಓಗೋದು ವಾಸಿ, ಆ ಪೋಲೀಸ್ ನನ್ ಮಕ್ಳು, ಇವರನ್ನ ಜೀವಂತ ಉಳಿಸಲ್ಲ! ಖಂಡಿತ ಬೇಡ” ಅಂದ. “ಪೋಲಿಸ್” ಅಂದರೆ “ಆರಕ್ಷಕ”, ರಕ್ಷಣೆ ಮಾಡಬೇಕಾದವ. ಇಂತಹವರ ಬಗ್ಗೆ ಆತನ ನಿಲುವು ಖಂಡಿತವಾಗಿಯೂ ಸತ್ಯ. “ಬೇಲಿಯೇ ಎದ್ದು ಹೊಲ ಮೇಯ್ದಂತೆ!” ಎಂಬಂತೆ, ಇದು ನಮ್ಮನ್ನು ಬೆಚ್ಚುಬೀಳಿಸುವ ಪ್ರಸ್ತುತ ಪರಿಸ್ಥಿತಿ! ಮತ್ತೆ ನಮ್ಮ ಕಡೆಯಿಂದ ಮೌನ. ಆ ಚಾಲಕ ಒಮ್ಮೆ ಎಲ್ಲರ ಮುಖವನ್ನೂ ಗಮನಿಸಿದ. ಇನ್ನೂ ಎಲ್ಲರಲ್ಲೂ ಆತನ ಬಗೆಗಿನ ಗುಮಾನಿಯ ಛಾಯೆ ಕಂಡ ಅವನು ನಿಟ್ಟುಸಿರು ಬಿಟ್ಟು “ಹೋಗ್ಲಿ ಬಿಡಿ ಕತ್ಲಾಗೋ ವರೆಗೂ ಇವರನ್ನ ಸುತ್ತುಸ್ತೀನಿ. ಗಲ್ಲಿ ಗಲ್ಲಿ ಉಡುಕ್ತೀನಿ. ಸಿಗಲಿಲ್ಲ ಅಂದ್ರೆ, ನಮ್ಮನೇಗೇ ಕರ್ಕೊಂಡೋಗಿ, ಒಂದು ತುತ್ತು ಅನ್ನ ಆಕಿ, ನಾಳೆ ಮತ್ತೆ ಉಡುಕಿ ಮನೆ ತಲುಪಿಸ್ತೀನಿ. ಪಾಪ ಹೆಣ್ಣು ಮಕ್ಕಳು” ಅಂದ ಆತನ ಕಣ್ಣುಗಳಲ್ಲಿ “ನಾವೂ ಮನುಷ್ಯರು ಸ್ವಾಮೀ, ನಮ್ಮನ್ನು ತಪ್ಪು ತಿಳಿಬೇಡಿ” ಎಂಬ ಖಿನ್ನತೆ ತೋರುತ್ತಿತ್ತು!

ಅವನ ಅಂತಃಕರಣಕ್ಕೆ ನಾವೆಲ್ಲರೂ ಮೂಕವಿಸ್ಮಿತರಾದೆವು. ನಾವೆಲ್ಲಾ ನಮ್ಮ ಸ್ವಾರ್ಥ ಆತಂಕಗಳಲ್ಲಿ ಮಾನವೀಯತೆಯನ್ನು ಮರೆಯುತ್ತಿದ್ದೇವೆ ಎನಿಸಿ ಖೇದವಾಯಿತು. ಇಷ್ಟರಲ್ಲಿ ನಮ್ಮಲ್ಲೊಬ್ಬರು ಆ ಹುಡುಗಿಯರನ್ನು ತಮ್ಮ ಸ್ವಸ್ಥಾನಕ್ಕೆ ತಲುಪಿಸುವ ಜವಾಬ್ದಾರಿಯನ್ನು ಹೊತ್ತರು. ಆಗ ಆ ಚಾಲಕ, ನೆಮ್ಮದಿಯಿಂದ “ಥ್ಯಾಂಕ್ಯ್ಸು ಸಾರ್” ಎನ್ನುತ್ತಾ, ಅವರಿಂದ ಆಟೋ ಶುಲ್ಕವನ್ನೂ ಪಡೆಯದೆ, ಹೊರಟುಹೋದ. ನಂತರ ಆ ಹುಡುಗಿಯರು ಅವರ ತಲುಪುದಾಣವನ್ನು ಸೇರಿದರು, ಅದು ಬೇರೆ ವಿಷಯ.

ಆದರೆ, ಇಷ್ಟು ವರ್ಷಗಳಾದರೂ ಈ ಘಟನೆಯನ್ನು ನೆನೆದರೆ ಆ ಆಟೋ ಚಾಲಕನ ಬಗ್ಗೆ ಒಂದು ಕೃತಜ್ಞತಾ ಭಾವ ಮೂಡುತ್ತದೆ. ಆತನ ಸಮಯಪ್ರಜ್ಞೆ ಮತ್ತು ಮಾನವೀಯತೆಯು ಆಟೋ ಚಾಲಕರ ಬಗ್ಗೆ ಇರುವ ಕೆಟ್ಟ ಭಾವನೆಗೆ ಒಂದು ಅಪವಾದವೇ ಸರಿ! “ಅಯ್ಯೋ ಈ ಆಟೋದವರು ನನ್ನ ಮಕ್ಳು ಸುಮ್ನೆ ಸುಲಿಗೆ ಮಾಡ್ತಾರೆ, ಅವರ ಹತ್ರ ಮಾತಾಡಕ್ಕೂ ಆಗಲ್ಲ, ಪುಂಡರು” ಎಂದು ಒಂದು ಮಾತಲ್ಲಿ ಸಮೀಕರಿಸುವ ಮೊದಲು ಯೋಚಿಸೋಣ. ಎಲ್ಲರೂ ಹಾಗೆ ಇರುವುದಿಲ್ಲ ಅಲ್ಲವೇ!

 

‍ಲೇಖಕರು G

October 12, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

7 ಪ್ರತಿಕ್ರಿಯೆಗಳು

  1. Badarinath Palavalli

    ಅಪರೂಪದಲ್ಲಿ ಅಪರೂಪದ ಘಟನೆ. ಯಾಕೆಂದರೆ ಸಾರ್ವಜನಿಕರ ದೃಷ್ಟಿಯಲ್ಲಿ ಆಟೋ ಎಂದರೆ ಅದು ದರ್ಪ ಲೋಕ ಅಲ್ಲವೇ ಸಂ.ಪು ಅವರೇ?

    ನಿಮ್ಮ ನಿರೂಪಣಾ ಶೈಲಿಯು, ಓದುಗನಲ್ಲಿ ಅರ್ಥೈಸಿಕೊಳ್ಳಲು ಸ್ವಾತಂತ್ರ್ಯವನ್ನು ಕೊಡುತ್ತದೆ.

    ಪ್ರತಿಕ್ರಿಯೆ
  2. praveen kulkarni

    ಸಂಪು ಅವರೇ, ಇಂತಹ ಘಟನೆಗಳ ಸಂಖ್ಯೆ ಎಷ್ಟು ಕಮ್ಮಿ ಅಂದರೆ, ಅವು ಮರೆತು, ನೆನಪಾಗಿರುತ್ತೆ. ನಿಮ್ಮ ‘ಎಲ್ಲರೂ ಕೆಟ್ಟವರಲ್ಲ, ಎಲ್ಲರೂ ಒಳ್ಳೆವ್ರಲ್ಲ’ ವಾದ ಒಪ್ಪತಕ್ಕದ್ದೆ.
    ಒಳ್ಳೆಯ ವಿಚಾರಕ್ಕೆ, ನೆನಪು ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು.

    ಪ್ರತಿಕ್ರಿಯೆ
  3. Gopaal Wajapeyi

    ವಾಹ್ -ವಾ ಸಂಯುಕ್ತಾ… ಸರಳ ಆದರೆ ಹಿತವಾದ ನಿರೂಪಣೆ. ನನಗೆ ನಿಮ್ಮ ಲೇಖನಗಳಲ್ಲಿ ಇಷ್ಟವಾಗುವ ಸಂಗತಿ ಎಂದರೆ ಹೊಸ ಹೊಸ ಪದಗಳನ್ನು ನೀವು ‘ಟಂಕಿಸು’ವ ರೀತಿ. ನಿಮ್ಮಿಂದ ನನಗೆ ಇವತ್ತೊಂದು ಹೊಸ ಪದ ಸಿಕ್ಕಿತು : ‘ತಲುಪುದಾಣ.’

    ಪ್ರತಿಕ್ರಿಯೆ
  4. Umesh

    ಒಳ್ಳೆಯ ವಿಚಾರ ನೆನಪು ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು.ಎಲ್ಲರೂ ಕೆಟ್ಟವರಲ್ಲ, ಎಲ್ಲರೂ ಒಳ್ಳೆವ್ರಲ್ಲ’

    ಪ್ರತಿಕ್ರಿಯೆ
  5. ಚಾಂದಿನಿ

    ಶ್ರೀ ಸಂಪುರವರೆ ನಿಮ್ಮ ಬರಹದಿಂದ ನನಗೆ ಖುಷಿಯಾಗಿದೆ ಈಗಿನ ಸಮಾಜದಲ್ಲಿ ಆಟೋಡ್ರೈವರ್ ಗಳ ಬಗ್ಗೆ ಕೆಟ್ಟ ಅಭಿಪ್ರಾಯವಿದೆ ಆದರೆ ಅವರಲ್ಲಿನ ಒಳ್ಳೆಯ ಗುಣಗಳನ್ನು ಮಾತ್ರ ಯಾರು ನೋಡುವುದಿಲ್ಲ ಆಟೋದವರಲ್ಲಿ ಒಳ್ಳೆಯವರು ಇದ್ದಾರೆ ಕೆಟ್ಟವರು ಇದ್ದಾರೆ ಪರಿಸ್ಥಿತಿಗೆ ಅನುಗುಣವಾಗಿ ನನಗೆ ತುಂಬಾ ಜನರ ಒಡೆನಾಟವಿದೆ ಒಂದು ವರ್ಷದ ಹಿಂದೆ ಅವರ ಬಗ್ಗೆ ನಾನು ಒಂದು ಸಮೀಕ್ಷೆಯನ್ನು ಮಾಡಿದಾಗ ನಾನು ಸಹ ಅವರ ಒಳ್ಳೆಯ ಕೆಲವು ಗುಣಗಳನ್ನು ಕಂಡುಕೊಂಡೆ ಉದಾ;ವಿಳಾಸ ತಿಳಿಯದವರಿಗೆ ಹೇಳುವುದು ರಸ್ತೆಯಲ್ಲಿ ಅಪಘಾತವಾದಾಗ ಮೊದನೆಯವರಾಗಿ ಅಲ್ಲಿ ನೋದುವುದು ಕೆಲವೊಮ್ಮೆ ಅವರನ್ನು ಕಾಪಾಡಿ ಆಸ್ಪತ್ರೆಯಲ್ಲಿ ಸೇರಿಸುವುದು ಹೀಗೆ ನಿಮ್ಮ ಬರಹ ದಿಂದ ಅವರ ಮೇಲಿನ ಕೆಲವು ವಿಷಯಗಳು ಸರಿಯಲಿ

    ಪ್ರತಿಕ್ರಿಯೆ
  6. Suhrudman Rathod

    ಆಟೋ ಚಾಲಕರಲ್ಲಿಯೂ ಒಳ್ಳೆಯವರಿರುವ ಬಗ್ಗೆ ಹೇಳುತ್ತಾ ಪೋಲಿಸ್ ನವರ ಬಗೆಗಿನ negative ಅಂಶಗಳನ್ನ ಪುಷ್ಟಿಕರಿಸಿ ಬಿಟ್ಟಿರಲ್ಲ. ಯಾಕೆ?

    “ನಮ್ಮಲ್ಲೊಬ್ಬರು, “ಪೋಲೀಸ್ ಕಂಪ್ಲೈಂಟ್ ಕೊಡೋಣ” ಎಂದರು. ಇದಕ್ಕೆ ಆ ಚಾಲಕ “ಅಯ್ಯೊ ಹಂಗ್ ಮಾತ್ರ ಮಾಡಬೇಡಿ ಸಾರ್! ಇವರನ್ನು ಎಲ್ಲೋ ದಾರೀಲೇ ಬಿಟ್ಟು ಓಗೋದು ವಾಸಿ, ಆ ಪೋಲೀಸ್ ನನ್ ಮಕ್ಳು, ಇವರನ್ನ ಜೀವಂತ ಉಳಿಸಲ್ಲ! ಖಂಡಿತ ಬೇಡ” ಅಂದ. “ಪೋಲಿಸ್” ಅಂದರೆ “ಆರಕ್ಷಕ”, ರಕ್ಷಣೆ ಮಾಡಬೇಕಾದವ. ಇಂತಹವರ ಬಗ್ಗೆ ಆತನ ನಿಲುವು ಖಂಡಿತವಾಗಿಯೂ ಸತ್ಯ. “ಬೇಲಿಯೇ ಎದ್ದು ಹೊಲ ಮೇಯ್ದಂತೆ!” ಎಂಬಂತೆ, ಇದು ನಮ್ಮನ್ನು ಬೆಚ್ಚುಬೀಳಿಸುವ ಪ್ರಸ್ತುತ ಪರಿಸ್ಥಿತಿ!”

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: