ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬಕ ಧ್ಯಾನಿಗಳು

ಬೆಂ ಶ್ರೀ ರವೀಂದ್ರ

ನಿಮಗಾಗಿ ಯಾರೂ ಅಳುವುದಿಲ್ಲ
ಅವರು ಅವರಿಗಾಗಿಯೇ ಅಳುತ್ತಾರೆ
ನಿಮಗಾಗಿ ಯಾರೂ ಆಡುವುದಿಲ್ಲ
ಅವರು ಅವರಿಗಾಗಿಯೇ ಆಡುತ್ತಾರೆ

ನಿಮಗಾಗಿ ಯಾರೂ ಬಾಯಾರುವುದಿಲ್ಲ
ಅವರು ಅವರಿಗಾಗಿಯೇ ಬಾಯಾರುತ್ತಾರೆ
ನಿಮಗಾಗಿ ಯಾರೂ ಕೃಷಿಕರಾಗುವುದಿಲ್ಲ
ಅವರು ಅವರಿಗಾಗಿಯೆ ಕೃಷಿಕರಾಗುತ್ತಾರೆ

ಕನಸು ಕಂಡ ಕಂಗಳು ನಿಮ್ಮದಾದರೆ
ಆಡುವ ನುಡಿ ಅವರದೇಕೆ
ಮೇವುಣಿಸುವ ಕೈಗಳು ನಿಮ್ಮದಾದರೆ
ಕೆಚ್ಚಲಿನ ಹಾಲು ಅವರದೇಕೆ

ಭುವಿಗೆ ಬೆರೆವ ಬೆವರು ನಿಮ್ಮದಾದರೆ
ತೂಗುವ ತೆನೆ ಅವರದೇಕೆ
ಒಡೆದ ಹಿಮ್ಮಡಿಯ ದೊರೆ ನೀವಾಗಿರಲು
ಅವರ ಹಂಗಿನ ದಮ್ಮಡಿಯೇಕೆ

ಬಿತ್ತುವರು ಮಾತಿನ ಬೀಜಗಳ ತೋರುತ್ತ
ಎಂದೋ ಆಗುವ ಕಣದ ರಾಶಿ
ತೋರುವರು ಬಾವುಟವ ಮುಗಿಲಿಗೇರಿಸಿ
ಬಾನಲ್ಲಿ ಚೆಲ್ಲಿರುವ ನಕ್ಷತ್ರರಾಶಿ

ಹಾಡುವರು ರಂಗಿನ ರಾಗ ಪಂಚಮದಲಿ
ಕೆತ್ತುತ್ತ ಮನದ ಭಾವರಾಶಿ
ಯಾರವರು ಅನ್ನುವಿರೇಕೆ ಯಾರಾದರೇನು
ಬಿಡಿಸಿ ಹೆಣೆದ ಕಗ್ಗಂಟುರಾಶಿ

ನಾಕ ತೋರುವ ಬಕಗಳ ದಿಟ್ಟಿಸಿ ನೋಡಿ
ಒಂಟಿ ಕಾಲಲಿ ನಿಂತು ನಿಮ್ಮನ್ನೆ ಧ್ಯಾನಿಸುತ
ಒಬ್ಬೊಬ್ಬರಾಗಿ ಕಬಳಿಸುವ ಮೋಡಿ
ನಿಂತಲ್ಲೆ ತುಂಬಿಸುವುದು ಹಸಿವಿನ ಜಾಡಿ

‍ಲೇಖಕರು Avadhi

22 March, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading