ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಫೋಟೋದೊಳಗಿನ ಅವನ ಬಣ್ಣಗಳು ತರಹೇವಾರಿ..

ರೇವಣಸಿದ್ದಪ್ಪ ಜಿ ಆರ್

**

ಹಳೆಯ ಕಾಲದ

ಕಪ್ಪು ಬಿಳಿ ಫೋಟೋ

ಅಚ್ಚುಕಟ್ಟಾದ ಕಟ್ಟಿನಲಿ

ಬಂಧಿ.

ಫೋಟೋದೊಳಗಿನ ಅವನ

ಬಣ್ಣಗಳು ತರಹೇವಾರಿ.

ಗೋಡೆಗೊರಗಿದ ಫೋಟೋದ ಸುತ್ತ

ಓಲಾಡುವ ಮುದಿಯಾದ ಹಾರ.

ಹುಣ್ಣಿಮೆ ಅಮಾವಾಸ್ಯೆಗೆ,

ಹಬ್ಬ ಹರಿದಿನಕ್ಕೆ,

ಅರಿಶಿನ ಕುಂಕುಮ ವಿಭೂತಿಯ ಸಿಂಗಾರ.

ಒಮ್ಮೆ ನಕ್ಕಂತೆ,

ಇನ್ನೊಮ್ಮೆ ಅತ್ತಂತೆ,

ಮತ್ತೊಮ್ಮೆ ನಿರ್ಲಿಪ್ತನಂತೆ

ತೋರುತ್ತಾನೆ ಚಮತ್ಕಾರ.

ಅವನಂತೆ ನಾನೋ

ನನ್ನಂತೆ ಅವನೋ

ಹೇಳಲಾಗದ ಮಾಯಕಾರ.

ಗತದಲ್ಲೊಮ್ಮೆ ಕಾಲನ ಪರವಶನಾಗಿ

ಕಾಲದ ಸಂಗಡ ಹೆಣಗುವವರ

ಎದುರಾಗುತ್ತಾನೆ

ಫೋಟೋದೊಳಗಿಂದ.

ಮುದುಡುವುದಿಲ್ಲ ಚಳಿಗೆ;

ಬಸವಳಿಯುವುದಿಲ್ಲ ಬಿಸಿಲಿಗೆ;

ಹಿಗ್ಗುವುದಿಲ್ಲ ಬೆಳಕಿಗೆ;

ಕುಗ್ಗುವುದಿಲ್ಲ ಕತ್ತಲಿಗೆ;

ಭೂತ ವರ್ತಮಾನ ಭವಿಷ್ಯದ

ಹಂಗಿಲ್ಲದ ಕಾಲಾತೀತ

ಕಟ್ಟು ಕಳಚಿ ಗಾಜು ಒಡೆದು

ಒದ್ದೆಯಾಗಿ ಮುದ್ದೆಯಾಗಿ

ಹುಡಿಯಲ್ಲಿ ಹುಡಿಯಾದರೂ

ಫರಕಿಲ್ಲ ಏನೂ;

ಏನಿದ್ದರೂ ಅದು 

ಭವದ ಕಣ್ಣು

ಮಣ್ಣು ಸೇರುವತನಕ.

‍ಲೇಖಕರು Admin MM

26 April, 2024

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading