ಪ ನಾ ಹಳ್ಳಿ ಹರೀಶ್ ಕುಮಾರ್ ಓದಿದ ‘ಹಿಮ ತಬ್ಬಿದ ನೇಪಾಳ’

ಪ ನಾ ಹಳ್ಳಿ ಹರೀಶ್ ಕುಮಾರ್

ಸರಳ ಸ್ವಭಾವದ ಸ್ನೇಹಜೀವಿಯಾಗಿ, ನಿಷ್ಕಪಟ ಮನದ, ಪ್ರಪಂಚವನ್ನು ಕುತೂಹಲ ದೃಷ್ಠಿಯಿಂದ ನೋಡುವ ಸ್ವಭಾವದವರಾದ ಡಾ.ಚಿಕ್ಕಣ್ಣ ಯಣ್ಣೆಕಟ್ಟೆಯವರಿಗೆ ಅಖಿಲ ಭಾರತ ವಿವಿ ಹಾಗೂ ಕಾಲೇಜು ಅಧ್ಯಾಪಕರ ಒಕ್ಕೂಟಗಳು ಪ್ರವಾಸದ ಯೋಗವನ್ನು ಒದಗಿಸಿದಾಗ ಚಿಕ್ಕಣ್ಣನವರಲ್ಲಿನ ಸಂಶೋಧಕ ಜಾಗೃತನಾಗಿ ಪ್ರವಾಸ ಕೈಗೊಂಡ ಸ್ಥಳದ ಮೇಲುಸೌಂದರ್ಯವನ್ನಷ್ಟೇ ಅಲ್ಲದೇ ಆಂತರಿಕ ಹಿನ್ನೆಲೆಯನ್ನೂ ಕೆದಕಿ ತೆಗೆದುಬಿಡುವಷ್ಟು ಚುರುಕಾಗಿರುವುದು ಮೇಲ್ನೋಟಕ್ಕೆ ಗೊತ್ತಾಗುತ್ತದೆ. ಅಂತಹ ಚಿಕ್ಕಣ್ಣನವರಿಗೆ ೨೦೧೩ರಲ್ಲಿ ಸುದೈವವೊಂದು ಒದಗಿ ಭಾರತದ ನೆರೆರಾಷ್ಟ್ರ ‘ನೇಪಾಳ’ಕ್ಕೆ ಪ್ರವಾಸ ಕೈಗೊಳ್ಳುವ ಅವಕಾಶ ಒದಗಿದಾಗ ಅವರಲ್ಲಿನ ಸಂಶೋಧಕ ಎಷ್ಟು ಸಂತೋಷಿಸಿರಬೇಡ..!

ತಾವು ಪ್ರವಾಸದುದ್ದಕ್ಕೂ ಕಂಡ ಜಗತ್ತಿನ ಏಕೈಕ ಹಾಗೂ ಅತಿದೊಡ್ಡ ಹಿಂದೂ ರಾಷ್ಟ್ರವೆಂಬ ಹಣೆಪಟ್ಟಿಯುಳ್ಳ ನೇಪಾಳದ ಭೌತಿಕ, ಬೌದ್ಧಿಕ, ನೈಸರ್ಗಿಕ, ಆರ್ಥಿಕ, ಸಾಮಾಜಿಕ ಹಾಗೂ ಆಂತರ್ಯದ ಒಳಹೊರಗುಗಳನ್ನು ಬುತ್ತಿಚೀಲದಂತೆ ದಾಖಲಿಸಿದ್ದಾರೆ. ಅದನ್ನೆಲ್ಲಾ ಕ್ರೂಢೀಕರಿಸಿ ‘ಗಡಿನಾಡ ಜಾನಪದ ಸಂಪರ್ಕಾಭಿವೃದ್ಧಿ ಕೇಂದ್ರ (ಪ್ರತಿಷ್ಠಾನ). ಕಾಳಿದಾಸನಗರ. ಸಿರಾ’ದ ವತಿಯಿಂದ ‘ಹಿಮ ತಬ್ಬಿದ ನೇಪಾಳ’ ಎಂಬ ಶೀರ್ಷಿಕೆಯಲ್ಲಿ ಪ್ರಕಟಿಸುವ ಮೂಲಕ ಓದುಗರಿಗೆ ನೈಜ ಅನುಭವವನ್ನು ಕಟ್ಟಿಕೊಟ್ಟಿದ್ದಾರೆ.

ಕೇವಲ ಹದಿನೈದು ದಿನಗಳ ಕಿರು ಪ್ರವಾಸವಾದರೂ ಚಿಕ್ಕಣ್ಣನವರು ನೇಪಾಳದ ೧೫೦೦ ವರ್ಷಗಳಷ್ಟು ಇತಿಹಾಸವನ್ನು ಕೆದಕಿ ಓದುಗರಿಗೆ ನೇಪಾಳದ ಸಂಪೂರ್ಣ ಇತಿಹಾಸವನ್ನೇ ಉಣಬಡಿಸಿರುವುದು ಅವರ ವೈಜ್ಞಾನಿಕತೆ ಇಂಬುನೀಡಿದೆ. ಮೇಲ್ನೋಟಕ್ಕೆ ಪ್ರವಾಸ ಕಥನವೆಂಬಂತೆ ಕಂಡರೂ ಓದತೊಡಗಿದಂತೆ ಓದುಗರಿಗೆ ತಾವೇ ಕಣಿವೆ ರಾಷ್ಟçಕ್ಕೆ ಭೇಟಿನೀಡಿ ತಂದಿರುವ ಬುತ್ತಿಯನ್ನು ಹಿಮಕಣಿವೆಗಳ ನಡುವೆ ಕುಳಿತು ತಿನ್ನುತ್ತಿರುವಂತಹ ನೈಜ ಅನುಭವವನ್ನು ಕೃತಿ ಕಟ್ಟಿಕೊಡುವುದರಲ್ಲಿ ಅನುಮಾನವಿಲ್ಲ.

ಇಪ್ಪತ್ತಕ್ಕೂ ಅಧಿಕ ಉಪಶೀರ್ಷಿಕೆಗಳಲ್ಲಿ ತಮ್ಮ ಪ್ರವಾಸಾನುಭವವನ್ನು ಬಿಚ್ಚಿಟ್ಟಿರುವ ಡಾ.ಚಿಕ್ಕಣ್ಣನವರು ಪ್ರತೀ ಅಧ್ಯಾಯವನ್ನೂ ಓದುಗರಿಗೆ ರುಚಿಕರವಾಗಿರುವಂತೆ ನೋಡಿಕೊಳ್ಳುವಲ್ಲಿ ಸಫಲವಾಗಿದ್ದಾರೆ. ಒಂದೊಂದೂ ಬಯಸಿದಾಗೆಲ್ಲಾ ಬಿಚ್ಚಿ ತಿನ್ನಬಹುದಾದ ಸಿಹಿತಿನಿಸುಗಳಂತಿವೆ. ಪ್ರಥಮ ಅಧ್ಯಾಯದಲ್ಲಿ ಲೇಖಕರು ನೇಪಾಳದ ಸಂಕ್ಷಿಪ್ತ ಚಿತ್ರಣವನ್ನು ಕಟ್ಟಿಕೊಟ್ಟಿದ್ದಾರೆ. ಅಲ್ಲಿನ ಜನ, ಜೀವನ ಶೈಲಿ, ವೇಷಭೂಷಣ, ನೂರಕ್ಕೂ ಅಧಿಕ ಮೌಖಿಕ ಭಾಷೆಗಳನ್ನಾಡಿದರೂ ಅಲ್ಲಿನವರಿಗೆ ತಮ್ಮ ರಾಷ್ಟ್ರೀಯ ದೇವನಾಗರಿ ಭಾಷೆಯ ಮೇಲಿರುವ ಅಭಿಮಾನ, ವ್ಯಾವಹಾರಿಕವಾಗಿ ಗಡೀ ಭಾಗದಲ್ಲಿ ಬಳಸುವ ಹಿಂದಿ ಮಾತನಾಡುವ ವ್ಯಾಪಾರಿಗಳು, ವ್ಯವಸಾಯ, ಉದ್ಯೋಗ, ಕರೆನ್ಸಿ, ತುಂಬಿ ಹರಿಯುವ ನದಿಗಳು, ಕಣಿವೆ, ಪರ್ವತಗಳ ಕುರಿತು ಹಾಗೂ ಸರಿಸುಮಾರು ೨.೫ಕೋಟಿ ಜನಸಂಖ್ಯೆಯುಳ್ಳ ರಾಷ್ಟçವಾದರೂ, ಶೇ೯೦ರಷ್ಟಿರುವ ಆರ್ಯ(ಹಿಂದೂ)ರು ಹಾಗೂ ಕೇವಲ ಶೇ೫ರಷ್ಟಿರುವ ಬೌದ್ಧರ ಧಾರ್ಮಿಕ ಬಾಂಧವ್ಯದ ವಿವರ ಶತಕೋಟಿ ಭಾರತೀಯರನ್ನು ನಾಚಿಸುವಂತಿದೆ.

ಮುಂದಿನ ಅಧ್ಯಾಯದಲ್ಲಿ ನೇಪಾಳದಲ್ಲಿ ಕಾಲಿರಿಸಿ ವಾಸ್ತವ್ಯ ಹೊಂದಿದ್ದನ್ನು ಮತ್ತು ಅಲ್ಲಿನ ಆತಿಥ್ಯವನ್ನೂ ಮನದುಂಬಿ ಪ್ರಶಂಸಿದ್ದಾರೆ. ಮೂರನೇ ಅಧ್ಯಾಯದಲ್ಲಿ ನಿರಾಕಾರ ಶಿವಲಿಂಗವನ್ನುಳ್ಳ ನೇಪಾಳಿಗರ ಆರಾಧ್ಯದೈವ ಪಶುಪತಿನಾಥನ ಧಾಮಕ್ಕೆ ಭೇಟಿ ನೀಡಿದ್ದು ಮತ್ತು ಅಲ್ಲಿನ ದೇವಾಲಯದ ಶ್ರೇಷ್ಠ ವಾಸ್ತು ಶಿಲ್ಪಕತೆಯನ್ನು ಮನಮುಟ್ಟುವಂತೆ ಓದುಗರಿಗೆ ತಲುಪಿಸಿದ್ದಾರೆ. ಪಶುಪತಿನಾಥನ ಹಿನ್ನೆಲೆಯನ್ನು ಸಂಕ್ಷಿಪ್ತವಾಗಿ ವಿವರಿಸಲಾಗಿದೆ. ಈ ಸ್ಥಳವು ನೇಪಾಳಿಗರ ಪುಣ್ಯಕ್ಷೇತ್ರವೆಂಬುದನ್ನು ಮರೆಯಬಾರದು.

ನಾಲ್ಕು, ಐದು ಮತ್ತು ಆರನೇ ಅಧ್ಯಾಯಗಳಲ್ಲಿ ಡಾ.ಚಿಕ್ಕಣ್ಣನವರು ಜೆಟ್ ವಿಮಾನದ ಮೂಲಕ ತಾವು ಸನಿಹದಿಂದ ಕಂಡ ರುದ್ರರಮಣೀಯ ಕಣಿವೆಗಳ ಸೌಂದರ್ಯವನ್ನು ಓದುಗರಿಗೂ ಪ್ರತ್ಯಕ್ಷತಃ ದರ್ಶನ ಮಾಡಿಸಲು ಶತಪ್ರಯತ್ನ ಮಾಡಿ ಯಶಸ್ಸನ್ನೂ ತಮ್ಮದಾಗಿಸಿಕೊಂಡಿದ್ದಾರೆ. ಕಣಿವೆಗಳ ರಾಣಿಯೆಂದೇ ವರ್ಣಿಸಲಾದ ಮನಕಾಮನ ಕಣಿವೆಯ ದಟ್ಟ ಗೊಂಡಾರಣ್ಯ, ತುಂಬಿ ಹರಿಯುವ ತ್ರಿಶೂಲಿ ನದಿ, ಚಾದರ ಹಾಸಿದಂತಹ ಹಿಮರಾಶಿಯನ್ನಲ್ಲದೇ ತಾವು ಅಲ್ಲಿ ಕೈಗೊಂಡ ಟ್ರೆಕ್ಕಿಂಗ್, ಪ್ಯಾರಾಗ್ಲಯ್ಡಿಂಗ್‌ಗಳ ಅನುಭವವನ್ನೂ ಕಟ್ಟಿಕೊಟ್ಟಿದ್ದಾರೆ. ಅಲ್ಲಿನ ದೇವಿ ದೇವಾಲಯ ಹಾಗೂ ಬಾಕೇಶ್ವರ ದೇಗುಲಗಳ ಐತಿಹ್ಯವನ್ನು ವಿವರಿಸಿದ್ದಾರೆ.

ಏಳು ಮತ್ತು ಎಂಟನೇ ಅಧ್ಯಾಯಗಳಲ್ಲಿ ರಾಜಧಾನಿ ಕಠ್ಮಂಡುವಿನಿಂದ ೨೦೦ಕಿಲೋಮೀಟರ್ ಅಂತರದಲ್ಲಿರುವ ಪೋಖ್ರಾ ನಗರದ ಕುರಿತು ವಿವರ ನೀಡಿದ್ದು ಅಲ್ಲಿನ ಗುಹಾಂತರ ದೇವಾಲಯ, ಡೇವಿಡ್‌ಫಾಲ್ಸ್ ಜೊತೆಗೆ ರಾತ್ರಿಯಾದೊಡನೆ ಆವರಿಸಿಕೊಳ್ಳುವ ವೈನ್‌ಶಾಪ್ ಹಾಗೂ ಅವುಗಳ ಮುಂದಿನ ಬಾಟಲಿಗಳ ಪ್ರದರ್ಶನವನ್ನೂ ರಂಜನೀಯವಾಗಿಸಿದ್ದಾರೆ. ಪೋಖ್ರಾದ ಸಮೀಪದಲ್ಲಿಯೇ ಇರುವ ಫೆವಾ ಸರೋವರದ ಸೌಂದರ್ಯವನ್ನೂ ಮತ್ತು ಅಲ್ಲಿನ ತೆಪ್ಪೋತ್ಸವವನ್ನೂ ಮನದುಂಬಿ ಪ್ರಶಂಸಿದ್ದಾರೆ.

ಮುಂದಿನ ಅಧ್ಯಾಯಗಳನ್ನು ಸಂಪೂರ್ಣವಾಗಿ ನೇಪಾಳದ ರಾಜಧಾನಿ ಕೇಂದ್ರವಾದ ಕಠ್ಮಂಡು ಹಾಗೂ ಸುತ್ತಲಿನ ಪ್ರಮುಖ ಪ್ರೇಕ್ಷಣೀಯ ಸ್ಥಳಗಳ ಮಾಹಿತಿಯನ್ನು ಒದಗಿಸಲೆಂದೇ ಮೀಸಲಿರಿಸಿದ್ದಾರೆ. ಕಾರ್ಖಾನೆಗಳಿಲ್ಲದ, ಗಗನಚುಂಬಿ ಕಟ್ಟಡಗಳೇ ಕಾಣದ, ಭಾಗವತಿ ಮತ್ತು ವಿಷ್ಣುಮತಿ ನದಿಗಳ ಸಮಾಗಮದಿಂದಾವೃತವಾದ ಸುಂದರ ಕಠ್ಮಂಡು ನಗರ ಮತ್ತು ಅದರ ಪ್ರಮುಖ ಆಕರ್ಷಣಾ ಕೇಂದ್ರವಾದ ನೇಪಾಳಿಗರ ಶ್ರೀಮಂತ ಕ್ಲಬ್ ಆಗಿರುವ ಕ್ಯಾಸಿನೋ ಜೂಜು ಕೇಂದ್ರವನ್ನು ಇಂಚಿಂಚು ಬಿಡದಂತೆ ವರ್ಣಿಸಲಾಗಿದೆ. ‘ನೇಪಾಳದ ಸಂಪತ್ತನ್ನೆಲ್ಲವನ್ನೂ ಈ ಜೂಜುಕೇಂದ್ರ ತನ್ನೊಳಗೆ ಗುಡ್ಡೆಹಾಕಿಕೊಂಡಂತಿದೆ’ ಎಂಬ ಲೇಖಕರ ಮಾತು ಓದುಗರಲ್ಲಿ ಅದನ್ನೊಮ್ಮೆ ನೋಡಬೇಕೆಂಬ ಆಸೆ ಹುಟ್ಟಿಸುವುದರಲ್ಲಿ ಅನುಮಾನವಿಲ್ಲ.

ಮುಂದಿನ ಮೂರು ಅಧ್ಯಾಯಗಳಲ್ಲಿ ಪಶುಪತಿಯಷ್ಟೇ ಶಕ್ತನೆಂದು ನಂಬಲಾದ ಬೌದ್ಧಧರ್ಮ ಸ್ಥಾಪಕ ಗೌತಮ ಬುದ್ಧನ ವಿವರಣೆಯನ್ನು ಒದಗಿಸಲಾಗಿದ್ದು. ಬುದ್ಧನ ಲುಂಬಿನಿವನ, ಗಯಾ, ನೂರಾರು ದೇವಾಲಯಗಳಿರುವ ಭಕ್ತಾಪುರ, ಸಾರನಾಥದ ಕುರಿತಾದ ಔನ್ನತ್ಯಗಳನ್ನು ವಿವರಿಸಲಾಗಿದೆ. ಮುಂದಿನ ಭಾಗಗಳಲ್ಲಿ ಲೇಖಕರು ತಾವು ಕಂಡ ನಗರಕೋಟ್ ಹಿಮಕಣಿವೆಗಳು ಮೋಡಗಳಿಗೇ ಮುತ್ತಿಕ್ಕುವಂತಿದ್ದ ಬಗೆ, ಸೀತೆಯ ಹುಟ್ಟುಸ್ಥಳವಾದ ಮಿಥಿಲೆ, ಅಲ್ಲಿನ ಜನಕರಾಜನ ಅರಮನೆ, ಸೀತಾ ಮಂದಿರಗಳನ್ನು ಕುರಿತಾಗಿ ವಿವರಿಸಿದ್ದಾರೆ.

ಕೊನೆಯ ಅಧ್ಯಾಯಗಳಲ್ಲಿ ಲೇಖಕರು ನೇಪಾಳ ವಾಸಿಗಳಾದ ಬುಡಕಟ್ಟು ಜನಾಂಗದ ಶೆರ್ಪಾಗಳು, ಅವರ ಜೀವನಶೈಲಿ, ಜನಾಂಗಿಕ ಲಕ್ಷಣಗಳು, ಅವರ ಧಾರ್ಮಿಕ ಜೀವನಗಳ ಕುರಿತು ಸಂಕ್ಷಿಪ್ತ ಮಾಹಿತಿ ಒದಗಿಸಿದ್ದಾರೆ. ಅಲ್ಲದೇ ನೇಪಾಳದಲ್ಲಿನ ಪ್ರಮುಖ ಉಧ್ಯೋಗವಾಗಿ ಮಾರ್ಪಟ್ಟಿರುವ ಅಲ್ಲಿನ ರುದ್ರಾಕ್ಷಿ ವ್ಯಾಪಾರ ಹಾಗೂ ಅಲ್ಲಿ ದೊರೆಯುವ ೧೦ರೂನಿಂದ ೧೦೦೦ರೂಗಳವರೆಗಿನ ರುದ್ರಾಕ್ಷಿ ಸರಗಳ ವರ್ಣನೆಯನ್ನು ಕಣ್ಣಿಗೆ ಕಟ್ಟುವಂತೆ ನೀಡಿದ್ದಾರೆ. ಅದಕ್ಕೆ ಕಾರಣವಾದ ಅಲ್ಲಿನ ಕಣಿವೆ, ಪರ್ವತ, ರಸ್ತೆಬದಿಗಳಲ್ಲಿ ಕಂಡುಬರುವ ರುದ್ರಾಕ್ಷಿ ಮರಗಳ ಬಗ್ಗೆಯೂ ಬೆಳಕು ಚೆಲ್ಲಿದ್ದಾರೆ. ಅಂತ್ಯದಲ್ಲಿ ನೇಪಾಳದ ಸಂಕ್ಷಿಪ್ತ ಚರಿತೆಯನ್ನು ಕಟ್ಟಿಕೊಡಲು ಪ್ರಯತ್ನಿಸಿದ್ದು ಸಾವಿರಾರು ವರ್ಷಗಳ ಇತಿಹಾಸವುಳ್ಳ ನೇಪಾಳದ ರಾಜಪ್ರಭುತ್ವವು ಇತ್ತೀಚೆಗಿನ ರಾಜವಂಶಸ್ಥ ದೀಪೇಂದ್ರನಿಂದಾಗಿ ರಾಜವಂಶದ ೧೧ ಜನರ ಕಗ್ಗೊಲೆಯಿಂದಾಗಿ ಕೊನೆಗೊಳ್ಳುವವರೆಗಿನ ಕತೆಯನ್ನು ಸಂಕ್ಷಿಪ್ತವಾಗಿ ಹೇಳಿದ್ದಾರೆ. ಮಾವೋವಾದಿಗಳು ರಾಜತ್ವವನ್ನು ಕೊನೆಗಾಣಿಸಿ ಈಗ ಅಲ್ಲಿ ಪ್ರಜಾಪ್ರಭುತ್ವ ನೆಲೆಸಿರುವ ಬಗೆಯನ್ನೂ ತಿಳಿಸುವುದನ್ನು ಮರೆತಿಲ್ಲ.

ತಮ್ಮ ಬರಹದ ಉದ್ದಕ್ಕೂ ಓದುಗರಿಗೆ ಬೇಸರವಾಗಬಾರದೆಂದು ಹಾಸ್ಯರೂಪದಲ್ಲಿ ಕೆಲವು ಸನ್ನಿವೇಶಗಳನ್ನು ಸಾದರಪಡಿಸಿರುವುದು ಡಾ.ಚಿಕ್ಕಣ್ಣನವರ ಹಾಸ್ಯಪ್ರಜ್ಞೆಗೆ ಸಾಕ್ಷಿಯಾಗಿದೆ. ತಾವು ತಂಗಿದ ಹೋಟೆಲ್ ರೂಮುಗಳಲ್ಲಿನ ಟೀವಿಯಲ್ಲಿ ಕನ್ನಡ ಚಾನೆಲ್‌ಗಳಿಗಾಗಿ ರಿಮೋಟ್ ಹಿಡಿದು ತಡಕಾಡಿದ್ದು, ಮೂಗೇ ಇಲ್ಲದ ಸುಂದರ ನೇಪಾಳಿ ಯುವತಿಯರನ್ನು ಕಂಡು ಸಹಪಾಠಿಗಳು ಕಿಚಾಯಿಸಿದ್ದು, ವಿಮಾನದಲ್ಲಿ ಗಗನಸಖಿಯ ಭಾಷೆ ತಿಳಿಯದೇ ಅಪಾರ್ಥ ಮಾಡಿಕೊಂಡದ್ದು, ವಿಮಾನದಲ್ಲಿ ಪ್ರಯಾಣಿಸುವಾಗ ನೇಪಾಳವು ಲೇಖಕರ ಕಣ್ಣಿಗೆ ಭಾರತ ಚೀನಾ ಗಡಿಯಲ್ಲಿ ಸೌತೆಕಾಯಿ ಜೋಡಿಸಿದಂತೆ ಕಂಡದ್ದರ ವಿವರಗಳು ಲೇಖಕರ ಹಾಸ್ಯಪ್ರಜ್ಞೆಯನ್ನು ಹೊರಸೂಸುವ ಕೆಲವು ಉದಾಹರಣೆಗಳಾಗಿವೆ.

ಕೇವಲ ತಾವು ಕಂಡ ನೆರೆರಾಷ್ಟçದ ವೈಭವೀಕತೆಗಷ್ಟೇ ತಮ್ಮ ಕೃತಿಯನ್ನು ಮೀಸಲಿರಿಸಲು ಇಚ್ಚಿಸದ ಲೇಖಕರು ತಮ್ಮ ಸೂಕ್ಷ್ಮ ಸಂವೇದನಾಶೀಲತೆಯನ್ನು ವಿಸ್ತರಿಸಿದ್ದು ಅಲ್ಲಿ ಪ್ರವಾಸದುದ್ದಕ್ಕೂ ತಾವು ಕಂಡು ಕೇಳಿದ ಅನೇಕ ಹುಳುಕುಗಳನ್ನೂ ಎತ್ತಿತೋರಿಸುವಲ್ಲಿ ಯಾವುದೇ ಅಳುಕನ್ನು ಹೊಂದಿಲ್ಲ. ಅವರು ಅಲ್ಲಿ ತಾವು ಕಂಡ ಶ್ರೀಮಂತಿಕೆಯನ್ನು ಅನುಭವಿಸುವ ಕ್ಯಾಸಿನೋ ಮೋಜು ತಾಣದ ಜನರೊಂದಿಗೆ ದಿನಪೂರ್ತಿ ರುದ್ರಾಕ್ಷಿ ಮಾರುತ್ತಾ ಉಳಿಸಿದ ಲಾಭದಿಂದಲೇ ಜೀವನ ನಡೆಸುತ್ತಿರುವ ಬಡವರ ಬಗೆಗೂ ಕಣ್ಣುಹಾಯಿಸಿದ್ದಾರೆ.

ಪಶುಪತಿನಾಥನ ಧಾಮದ ಬಳಿಯೇ ಇರುವ ಸ್ಮಶಾನದಲ್ಲಿ ಅರೆಬರೆಸುಟ್ಟ ಶವಗಳನ್ನು ಕಟ್ಟಿಗೆ ಸಮೇತ ನದಿಗೆ ತಳ್ಳುವುದನ್ನೂ ಮತ್ತು ಅದೇ ನದೀ ನೀರನ್ನು ಪವಿತ್ರ ಜಲದಂತೆ ಮೈಮೇಲೆ ಎರಚಿಕೊಳ್ಳುವುದನ್ನೂ, ಅರೆಬರೆ ಸುಟ್ಟ ಶವಗಳನ್ನು ತಿನ್ನುವ ಅಘೋರಿಗಳ ಘೋರತೆಯನ್ನು ಖಂಡಿಸಿದ್ದಾರೆ. ಅಲ್ಲದೇ ಮನಕಾಮನ ಕಣಿವೆಯ ಸೌಂದರ್ಯದೊಂದಿಗೇ ಥಳುಕುಹಾಕಿಕೊಂಡಿರುವ ವಧಾಸ್ಥಳದಲ್ಲಿ ಇವರೆದುರಿಗೇ ಕೋಣ, ಕುರಿಗಳನ್ನು ಬಲಿಪೀಠದಲ್ಲಿ ಬಲಿಕೊಡುತ್ತಿದ್ದ ದೃಶ್ಯಗಳನ್ನು ಯಾವುದೇ ಹಿಂಜರಿಕೆಯಿಲ್ಲದೇ ‘ಅಂದಂದೇ ಹುಟ್ಟಿತ್ತು ಅಂದಂದೆ ಸತ್ತಿತ್ತು ಕೊಂದವರುಳಿವರೇ?’ ಎಂದು ತೀಕ್ಷಣ ಪದಗಳಿಂದ ತಿವಿದಿದ್ದಾರೆ.

ಕೇವಲ ಹುಳುಕುಗಳನ್ನು ಎತ್ತಿತೋರಿಸಿ ಸಮಾಧಾನವಾಗದ ಲೇಖಕರು ಅಲ್ಲಿನ ಚೆಲುವೆಯರು ತಮ್ಮ ಅಂಗಸೌಷ್ಠವದಿಂದಲೇ ಕೆಲವರಿಂದ ಉಧ್ಯೋಗ, ಹಣದ ಆಸೆಗೆ ಬಲಿಯಾಗಿ ಅಪಹರಣಕ್ಕೊಳಗಾಗಿ ಬಾಳುಹಾಳುಮಾಡಿಕೊಂಡು ವಿದೇಶಗಳಲ್ಲಿ ವೇಶ್ಯಾವೃತ್ತಿಗೆೆ ಬಲಿಯಾಗುತ್ತಿರುವುದರ ಬಗ್ಗೆ ಖೇದ ಮತ್ತು ಕಾಳಜಿಯನ್ನೂ ವ್ಯಕ್ತಪಡಿಸುವ ಮುಖೇನ ತಮ್ಮಲ್ಲಿನ ಮಾನವೀಯತೆಯನ್ನೂ ಹೊರಚೆಲ್ಲಿದ್ದಾರೆ.

ಒಂದು ಪ್ರವಾಸ ಕಥನವಾಗಿ ಉಳಿಯಬಹುದಾಗಿದ್ದ ಕೃತಿಯನ್ನು ಅಲ್ಲಿನ ಸಂಸ್ಕೃತಿ, ಐತಿಹಾಸಿಕ ಹಿನ್ನೆಲೆ, ಜೀವನಶೈಲಿ, ಆಡಂಬರತೆ, ಬಡತನ, ಧಾರ್ಮಿಕ ಜೀವನ ಶೈಲಿಯನ್ನು ಒಳಗೊಂಡಂತಹ ಶ್ರೇಷ್ಠ ಸಾಂಸ್ಕೃತಿಕ ಪಠ್ಯವನ್ನಾಗಿಸುವ ಮೂಲಕ. ತಾವು ಹೋದಲ್ಲೆಲ್ಲಾ ನೇಪಾಳಿಗರೇ ಹೇಳುವಂತೆ ‘ಸೂರ್ಯ ಅಸ್ತ್ ಅಸ್ತ್, ನೇಪಾಳ್ ಮಸ್ತ್ ಮಸ್ತ್’ ಎಂಬುದನ್ನು ಓದುಗರೂ ಕನವರಿಸುವಂತೆ ಕಟ್ಟಿಕೊಟ್ಟಿದ್ದಾರೆ. ನೆರೆಯ ಊರಿಗೆ ಹೋಗಿಬರುವಷ್ಟೇ ಸಲೀಸಾಗಿ ಯಾವುದೇ ಜಂಜಾಟವಿಲ್ಲದೇ ನೇಪಾಳಕ್ಕೆ ಹೋಗಿಬರಬಹುದೆಂಬ ಲೇಖಕರ ಮಾತು ನಾವೂ ಒಮ್ಮೆ ನೇಪಾಳ ಪ್ರವಾಸ ಕೈಗೊಳ್ಳಬೇಕೆಂಬ ಆಸೆ ಹುಟ್ಟಿಸುವುದು ಸಹಜ.

‍ಲೇಖಕರು Admin

October 10, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: