ಪ್ರೊ ಓ ಎಲ್ ನಾಗಭೂಷಣ ಸ್ವಾಮಿ ಹಾಜಿ ಮುರಾದ್ – ಧರ್ಮಪ್ರಭು ಇಮಾಮ್ ಶಮಿಲ್ ನ ಆಸ್ಥಾನ…


ಪ್ರೊ ಓ. ಎಲ್.‌ ನಾಗಭೂಷಣ ಸ್ವಾಮಿಯವರು ಕನ್ನಡದ ಖ್ಯಾತ ವಿಮರ್ಶಕರು ಹಾಗೂ ಅನುವಾದಕರು. ಇಂಗ್ಲೀಷ್‌ ಅಧ್ಯಾಪಕರಾಗಿ ನಿವೃತ್ತಿ ಹೊಂದಿದ್ದಾರೆ. 

ಕುವೆಂಪು ಭಾಷಾ ಭಾರತಿ, ಕೇಂದ್ರ ಸಾಹಿತ್ಯ ಅಕಾಡಮಿ, ಜೆ. ಕೃಷ್ಣಮೂರ್ತಿ ಫೌಂಡೇಶನ್‌ ಹೀಗೆ ವಿವಿಧ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದಾರೆ.

60ಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿದ್ದಾರೆ. ವಿಮರ್ಶೆಯ ಪರಿಭಾಷೆ  ಇವರ ಬಹುಚರ್ಚಿತ ಕೃತಿಗಳಲ್ಲೊಂದು. ನಕ್ಷತ್ರಗಳು, ಏಕಾಂತ ಲೋಕಾಂತ, ನನ್ನ ಹಿಮಾಲಯ, ಇಂದಿನ ಹೆಜ್ಜೆ, ಪ್ರಜ್ಞಾ ಪ್ರವಾಹ ತಂತ್ರ, ನುಡಿಯೊಳಗಾಗಿ ಮುಂತಾದವು ಇವರ ಸ್ವತಂತ್ರ ಕೃತಿಗಳು. ಕನ್ನಡ ಶೈಲಿ ಕೈಪಿಡಿ, ನಮ್ಮ ಕನ್ನಡ ಕಾವ್ಯ, ವಚನ ಸಾವಿರ ಮೊದಲಾದವು ಸಂಪಾದಿತ ಕೃತಿಗಳು. ಜಿಡ್ಡು ಕೃಷ್ಣಮೂರ್ತಿಯವರ ಕೆಲವು ಕೃತಿಗಳು, ಸಿಂಗರ್‌ ಕತೆಗಳು, ಟಾಲ್ಸ್ಟಾಯ್‌ನ ಸಾವು ಮತ್ತು ಇತರ ಕತೆಗಳು, ರಿಲ್ಕ್‌ನ ಯುವಕವಿಗೆ ಬರೆದ ಪತ್ರಗಳು, ಕನ್ನಡಕ್ಕೆ ಬಂದ ಕವಿತೆ, ರುಲ್ಪೊ ಸಮಗ್ರ ಸಾಹಿತ್ಯ ಬೆಂಕಿ ಬಿದ್ದ ಬಯಲು, ಪ್ಲಾಬೊ ನೆರೂಡನ ಆತ್ಮಕತೆ ನೆನಪುಗಳು, ಯುದ್ಧ ಮತ್ತು ಶಾಂತಿ ಹೀಗೆ ಹಲವು ಕೃತಿಗಳನ್ನು ಅನುವಾದಿಸಿದ್ದಾರೆ.

ಚಂದ್ರಶೇಖರ ಕಂಬಾರ, ಜಿ.ಎಸ್‌. ಶಿವರುದ್ರಪ್ಪ ಹೀಗೆ ಕೆಲವರ ಕೃತಿಗಳನ್ನು ಇಂಗ್ಲೀಷಿಗೆ ಅನುವಾದಿಸಿದ್ದಾರೆ.

ವಿಮರ್ಶೆಯ ಪರಿಭಾಷೆಗಾಗಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ತೀನಂಶ್ರೀ ಬಹುಮಾನ, ಸ ಸ ಮಾಳವಾಡ ಪ್ರಶಸ್ತಿಯನ್ನು ಪಡೆದಿದ್ದಾರೆ. ಕೇಂದ್ರ ಸಾಹಿತ್ಯ ಅಕಾಡೆಮಿಯ ಭಾಷಾಂತರ ಬಹುಮಾನವು ಸೇರಿದಂತೆ ಹಲವು ಪ್ರಶಸ್ತಿಗಳನ್ನು ಪಡೆದಿದ್ದಾರೆ.

ಪ್ರತಿ ಶುಕ್ರವಾರ ಅವಧಿಯಲ್ಲಿ ಪ್ರೊ. ನಾಗಭೂಷಣ ಸ್ವಾಮಿ ಅವರು ಅನುವಾದಿಸಿರುವ ಟಾಲ್‌ಸ್ಟಾಯ್‌ನ ಕೊನೆಯ ಕಾದಂಬರಿ ಹಾಜಿ ಮುರಾದ್‌ ಪ್ರಕಟವಾಗಲಿದೆ.

19

ಹಾಜಿ ಮುರಾದ್‍ ರಶಿಯನ್ನರ ಜೊತೆ ಸೇರಿದ ಮೇಲೆ ಅವನ ಮನೆಯವರನ್ನು ವೆದೆನೋಗೆ ಒಯ್ದು ಅಲ್ಲಿ ಕಾವಲಿನಿಲ್ಲಿ ಇರಿಸಿ, ಶಮೀಲ್‍ ಹೇಳುವ ತೀರ್ಮಾನಕ್ಕೆ ಕಾಯುತ್ತಿದ್ದರು. ಹಾಜಿ ಮುರಾದ್‍ನ ತಾಯಿ, ಮುದುಕಿ ಫತಿಮಾತ್ (ಫಾತಿಮಾ ಹೆಸರಿನ ಇನ್ನೊಂದು ರೂಪ), ಹಾಜಿ ಮುರಾದನ ಇಬ್ಬರು ಹೆಂಡಿರು, ಐವರು ಮಕ್ಕಳು ಎಲ್ಲರನ್ನೂ ಅಧಿಕಾರಿ ಇಬ್ರಾಹಿಂ ರಶೀದ್‍ನ ಸಕ್ಲ್ಯಾದಲ್ಲಿ ಇರಿಸಿ ಕಾವಲು ಹಾಕಿದ್ದರು. ಹಾಜಿ ಮುರಾದ್‍ನ ಮಗ, ಹದಿನೆಂಟು ವರ್ಷದ ಯೂಸುಫ್‍ನನ್ನು ಸೆರೆಮನೆಗೆ ದೂಡಿದ್ದರು. ಸೆರೆಮನೆ ಅಂದರೆ ಏಳು ಅಡಿಗಿಂತ ಆಳವಾದ ಒಂದು ಗುಂಡಿ. ಅದರಲ್ಲಿ ಯೂಸುಫ್ ಮಾತ್ರವಲ್ಲದೆ ಇನ್ನೂ ಏಳು ಜನ ಅಪರಾಧಿಗಳು ತೀರ್ಮಾನಕ್ಕಾಗಿ ಕಾಯುತ್ತಿದ್ದರು.

ತೀರ್ಮಾನ ತಡವಾಗಿದ್ದು ಯಾಕೆಂದರೆ ಶಮೀಲ್ ರಶಿಯನ್ನರ ಮೇಲೆ ದಾಳಿ ಮಾಡಲು ಹೋಗಿದ್ದ. ಅವನು 6 ಜನವರಿ 1852ರಂದು ವೆದೆನೋಗೆ ವಾಪಸು ಬಂದ. ದಾಳಿಯಲ್ಲಿ ಅವನನ್ನು ಹಿಮ್ಮೆಟ್ಟಿಸಿದೆವು, ಅವನು ಸೋತು ವೆದೆನೋಗೆ ಓಡಿ ಹೋದ ಎಂದು ರಶಿಯನ್ನುರು ಹೇಳುತ್ತಿದ್ದರು. ಶಮೀಲ್ ಮತ್ತು ಅವನ ಎಲ್ಲ ಮುರೀದ್‍ಗಳ ಪ್ರಕಾರ ಅವನೇ ಗೆಲುವು ಸಾಧಿಸಿದ್ದ, ರಶಿಯನ್ನರನ್ನು ಹಿಮ್ಮೆಟ್ಟಿಸಿದ್ದ. ಕದನದಲ್ಲಿ ಅವನು ಸ್ವತಃ ಬಂದೂಕು ಹಾರಿಸಿದ್ದ. ಸಾಮಾನ್ಯವಾಗಿ ಅವನೆಂದೂ ಹಾಗೆ ಮಾಡುವನಲ್ಲ. ಕತ್ತಿ ಹಿರಿದು ರಶಿಯನ್ನರ ಮೇಲೆ ಏರಿ ಹೋಗಿದ್ದ. ಆ ಹೊತ್ತಿಗೆ ಅವನ ಮುರೀದರು ಅವನನ್ನು ತಡೆದ ನಿಲ್ಲಿಸಿದ್ದರು. ಅವರಿಬ್ಬರೂ ಗುಂಡಿನೇಟಿಗೆ ಸ್ಥಳದಲ್ಲೇ ಸತ್ತು ಬಿದ್ದರು. ಮಧ್ಯಾಹ್ನದ ಹೊತ್ತಿಗೆ ಶಮೀಲ್‍ನನ್ನು ಮಧ್ಯದಲ್ಲಿರಿಸಿಕೊಂಡು ಒಂದಷ್ಟು ಜನ ಮುರೀದರು ಬಂದೂಕಿನಿಂದ, ಪಿಸ್ತೂಲಿನಿಂದ ಆಕಾಶಕ್ಕೆ ಗುಂಡು ಹಾರಿಸುತ್ತ ಲಾ ಇಲಾಹಿ ಇಲ್‍ ಅಲ್ಲಾ ಎಂದು ಕೂಗುತ್ತ ಅವನನ್ನು ಮನೆಗೆ ಕರೆತಂದರು.

ಔಲ್‍ನ ಜನರೆಲ್ಲ ಬೀದಿಯಲ್ಲಿ ನಿಂತು, ಮನೆಯ ಚಾವಣಿ ಏರಿ ನಿಂತು ತಮ್ಮನ್ನು ಆಳುವವನ್ನು ಸ್ವಾಗತಿಸಿ ತಾವೂ ಗೆಲುವಿನ ಸಂಕೇತವಾಗಿ ಗುಂಡು ಹಾರಿಸುತ್ತಿದ್ದರು. ಅವನು ಬಿಳಿಯ ಅರಬ್ಬೀ ಕುದುರೆಯ ಮೇಲಿದ್ದ. ಮನೆ ಹತ್ತಿರವಾಗುತ್ತಿದ್ದ ಹಾಗೆ ಆ ಕುದುರೆ ತನ್ನ ಕಡಿವಾಣ ಪಟ್ಟಿಯನ್ನು ಜಗಿಯುತ್ತಿತ್ತು. ಚಿನ್ನ ಅಥವ ಬೆಳ್ಳಿಯ ಆಭರಣಗಳೇನೂ ಇಲ್ಲದೆ ಕುದುರೆಯನ್ನು ತೀರ ಸರಳವಾಗಿ ಸಜ್ಜು ಮಾಡಿದ್ದರು, ಮಧ್ಯದಲ್ಲಿ ಗೆರೆಯಿದ್ದ ನಯವಾದ ಕೆಂಪು ಚರ್ಮದ ಲಗಾಮು, ಕಬ್ಬಿಣದ ರಿಕಾಪು, ಜೀನಿನ ಕೆಳಗೆ ಒಂದಿಷ್ಟೆ ಹೊರಗೆ ಇಣುಕುತ್ತಿದ್ದ ಕೆಂಪು ಬಟ್ಟೆ ಇಷ್ಟಿದ್ದವು, ಇಮಾಮ್ ಶಮೀಲ್ ಕಂದು ಬಣ್ಣದ ನಿಲುವಂಗಿ ತೊಟ್ಟಿದ್ದ. ನಿಲುವಂಗಿಯ ಕೊರಳು, ತೋಳುಗಳಿಗೆ ಕಪ್ಪು ಫರ್ ತುಪ್ಪುಳದ ಲೈನಿಂಗ್ ಇತ್ತು. ಸೊಂಟಕ್ಕೆ ಕಪ್ಪು ಪಟ್ಟಿಯನ್ನು ಬಿಗಿಯಾಗಿ ಸುತ್ತಿ ಕಠಾರಿ ಸಿಕ್ಕಿಸಿಕೊಂಡಿದ್ದ. ತಲೆಯ ಮೇಲೆ ಎತ್ತರವಾದ, ಚಪ್ಪಟೆಯಾದ ಪಪಾಖ ಇತ್ತು, ಅದಕ್ಕೆ ಒಂದು ಬದಿಯಲ್ಲಿ ಕಪ್ಪು ಎಳೆಗಳ ಕುಚ್ಚು ಕಟ್ಟಿತ್ತು, ಪಪಾಖದ ಮೇಲೆ ಬಿಳಿಯ ಪೇಟಾವನ್ನು ಅದರ ಒಂದು ತುದಿ ಕತ್ತಿನಿಂದ ಕೆಳಗೆ ಇಳಿಯುವ ಹಾಗೆ ಸುತ್ತಲಾಗಿತ್ತು. ಕಾಲಿಗೆ ಚರ್ಮದ ಹಸಿರು ಬಣ್ಣದ ಪಾದರಕ್ಷೆಗಳಿದ್ದವು, ಮೀನಖಂಡ ಮುಚ್ಚುವ ಹಾಗೆ ಕಪ್ಪು ಲೆಗಿಂಗ್ಸ್ ತೊಟ್ಟಿದ್ದ, ಅವಕ್ಕೆ ಸಾಮಾನ್ಯ ಕಸೂತಿ ಕೆಲಸ ಮಾಡಿದ್ದರು.


ನೇರ, ದಿಟ್ಟ ಆಕಾರದ ಇಮಾಮ್‍ನ ಮೈಯ ಮೇಲೆ ಎಲ್ಲೂ ಹೊಳಪಿನ ಚಿನ್ನ ಅಥವ ಬೆಳ್ಳಿಯ ಆಭರಣವಿರಲಿಲ್ಲ. ಅವನ ಸುತ್ತಲೂ ಇದ್ದ ಮುರೀದ್‍ಗಳ ಉಡುಪು, ಆಯುಧಗಳ ಮೇಲೆ ಬೆಳ್ಳಿ, ಬಂಗಾರದ ಅಲಂಕಾರಗಳಿದ್ದವು. ಇದು ನೋಡುವವರಲ್ಲಿ ಇಮಾಮ್‍ನ ಬಗ್ಗೆ ಗಂಭೀರ ಗೌರವದ ಭಾವನ್ನು ಹುಟ್ಟಿಸುತ್ತಿತ್ತು. ಜನರಲ್ಲಿ ಭಾವನೆಯನ್ನು ಮೂಡಿಸುವುದು ಹೇಗೆ ಅನ್ನುವುದು ಅವನಿಗೆ ಗೊತ್ತಿತ್ತು. ಹೊಳಪಿರದ ಮುಖಕ್ಕೆ ಚಿಕ್ಕದಾಗಿ ಕತ್ತರಿಸಿದ ಕೆಂಪುಗಡ್ಡವಿತ್ತು, ಅವನು ಕಣ್ಣು ಕಿರಿದು ಮಾಡಿಕೊಂಡು, ಅವು ಕಲ್ಲಿನಲ್ಲಿ ಕೆತ್ತಿದ ಕಣ್ಣೋ ಅನ್ನುವ ಹಾಗೆ, ಒಂದಿಷ್ಟೂ ಅಲುಗಿಸದೆ ನೆಟ್ಟಗೆ ನೋಡುತ್ತ ಕುದುರೆಯ ಮೇಲ ಕೂತಿದ್ದ. ಔಲ್‍ನ ಬೀದಿಗಳಲ್ಲಿ ಸಾಗುವಾಗ ಸಾವಿರ ಕಣ್ಣು ತನ್ನನ್ನೇ ನೋಡುತ್ತಿವೆ ಅನ್ನುವುದು ಅವನಿಗೆ ಗೊತ್ತಿತ್ತು, ಅವನು ಮಾತ್ರ ಯಾರನ್ನೂ ನೋಡುತ್ತಿರಲಿಲ್ಲ. ಹಾಜಿ ಮುರಾದ್‍ನ ಹೆಂಡತಿಯರೂ ಮನೆಯ ಇತರರ ಜೊತೆಗೆ ಕೈಸಾಲೆಗೆ ಬಂದು ಇಮಾಮ್‍ನ ಮೆರವಣಿಗೆ ನೋಡುತ್ತಿದ್ದರು. ಹಾಜಿ ಮುರಾದ್‍ನ ಮುದಿ ತಾಯಿ ಫಾತಿಮಾ ಮಾತ್ರ ಹೊರಗೆ ಬರದೆ, ಬಿಳಿಯ ಕೂದಲು ಕೆದರಿಕೊಂಡು, ಬಡಕಲು ಮೊಳಕಾಲುಗಳನ್ನು ಮಡಿಸಿ, ಕಾಲಿನ ಸುತ್ತ ಕೈಗಳನ್ನು ಬಿಗಿಯಾಗಿ ಸುತ್ತಿ, ಉರಿಯುತ್ತಿದ್ದ ಕಪ್ಪು ಕಣ್ಣಿನಲ್ಲಿ ಒಲೆಯ ಕೆಂಡ ಆರುವುದನ್ನೇ ದಿಟ್ಟಿಸುತ್ತ ಕೂತಿದ್ದಳು. ಮಗನ ಹಾಗೇ ಅವಳೂ ಶಮೀಲ್‍ನನ್ನು ಸದಾ ದ್ವೇಷಮಾಡುತ್ತಿದ್ದಳು. ಆ ದ್ವೇಷ ಈಗ ಇನ್ನೂ ಹೆಚ್ಚಾಗಿತ್ತು. ಹಾಗಾಗಿ ಅವನನ್ನು ನೋಡುವುದಕ್ಕೆ ಹೋಗಿರಲಿಲ್ಲ.

ಹಾಜಿ ಮುರಾದ್‍ನ ಮಗ ಕೂಡ ಶಮೀಲ್‍ನ ಮೆರವಣಿಗೆಯನ್ನು ನೋಡಲಿಲ್ಲ. ಗುಂಡು ಹಾರಿಸುವ ಸದ್ದು, ಹಾಡಿನ ದನಿಗಳನ್ನು ಕೇಳುತ್ತ ದುರ್ವಾಸನೆಯ ಹಳ್ಳದಲ್ಲಿ ಕೂತು ಹಿಂಸೆ ಅನುಭವಿಸುತ್ತಿದ್ದ. ಸ್ವಾತಂತ್ರವನ್ನು ಕಳೆದುಕೊಂಡಿರುವ ಚೈತನ್ಯ ತುಂಬಿದ ಲವಲವಿಕೆಯ ಹುಡುಗನಿಗೆ ಮಾತ್ತ ಅವನಿಗೆ ಎಂಥ ಹಿಂಸೆಯಾಗಿರಬಹುದು ಅನ್ನುವುದು ತಿಳಿಯುತ್ತದೆ. ಅವನ ಕಣ್ಣಿಗೆ ಬಿದ್ದದ್ದು ದಣಿದ, ಕೊಳಕಾದ ಪರಸ್ಪರ ದ್ವೇಷಮಾಡುವ ಜೊತೆಗಾರ ಖೈದಿಗಳು, ತಾಜಾ ಗಾಳಿ ಉಸಿರಾಡುತ್ತ, ಬೆಳಕು, ಬಿಸಿಲು, ಸ್ವಾತಂತ್ರ್ಯ ಅನುಭವಿಸುತ್ತ, ಕೊಬ್ಬಿದ ಕುದುರೆಗಳ ಮೇಲೆ ಕೂತು ಗುಂಡು ಹಾರಿಸುತ್ತಾ ಲಾ ಇಲಾಹಿ ಇಲ್‍ಅಲ್ಲಾ ಹಾಡುತ್ತಿರುವವರ ಬಗ್ಗೆ ಅಸೂಯೆ ಪಟ್ಟ.

ಶಮೀಲ್ ಔಲ್‍ ದಾಟಿ ತನ್ನ ಮನೆಯ ಅಂತಃಪುರವಿದ್ದ ಒಳ ಮನೆಗೆ ಹೋಗುತ್ತ ದೊಡ್ಡ ಅಂಗಳವನ್ನು ದಾಟಿದ. ಇಬ್ಬರು ಲೆಜಿಯನ್ನರು ಬಂದು ಗೇಟು ತೆರೆದರು. ಈ ಹೊರ ಅಂಗಳದ ತುಂಬ ಜನ ಸೇರಿದ್ದರು. ಕೆಲವರು ಬಹಳ ದೂರದಿಂದ ಯಾವ ಯಾವುದೋ ಕೆಲಸಕ್ಕಾಗಿ ಬಂದಿದ್ದರು. ಇನ್ನು ಕೆಲವರು ಏನೇನೋ ಮನವಿ ಹೊತ್ತು ಬಂದಿದ್ದರು. ಇನ್ನು ಕೆಲವರನ್ನು ವಿಚಾರಣೆ ಮಾಡಿ ಶಿಕ್ಷೆ ವಿಧಿಸುವುದಕ್ಕೆ ಶಮೀಲ್‍ನೇ ಕರೆಸಿದ್ದ. ಇಮಾಮ್ ಶಮೀಲನು ಅಂಗಳಕ್ಕೆ ಬರುತ್ತಿದ್ದ ಹಾಗೇ ಎಲ್ಲರೂ ಎದೆಯ ಮೇಲೆ ಕೈ ಇಟ್ಟು ತಲೆ ಬಾಗಿ ಗೌರವ ತೋರಿದರು. ಇನ್ನು ಕೆಲವರು ಮೊಳಕಾಲೂರಿ ಕೂತವರು ಅವನು ಒಳ ಅಂಗಳಕ್ಕೆ, ಜನಾನಾಕ್ಕೆ ಹೋಗುವವರೆಗೂ ಹಾಗೇ ಕೂತಿದ್ದರು. ಅಂಗಳದಲ್ಲಿ ಸೇರಿದ್ದ ಜನರಲ್ಲಿ ತನಗೆ ಇಷ್ಟವಿರದ ಜನರ, ಗಮನ ಸೆಳೆಯಲು ಹೆಣಗುತ್ತಿದ್ದ ದಣಿದ ಅರ್ಜಿದಾರರ ಮುಖಗಳು ಕಂಡವು. ಅಚಲವಾದ ಕಲ್ಲಿನಂಥ ಮುಖವನ್ನು ಹೊತ್ತು ಶಮೀಲ್ ಅವರನ್ನೆಲ್ಲ ದಾಟಿ ಹೋಗಿ ಒಳ ಅಂಗಳದಲ್ಲಿ, ಗೇಟಿನ ಎಡಬದಿಯಲ್ಲಿ ಕುದುರೆಯಿಂದ ಇಳಿದ. ಅವನು ದಣಿದು ಹೋಗಿದ್ದ. ಆ ದಣಿವು ದೇಹಕ್ಕಿಂತ ಮನಸ್ಸಿಗೆ ಆಗಿದ್ದ ದಣಿವು. ನಾವೇ ಗೆದ್ದೆವೆಂದು ಅವನು ಸಾರ್ವಜನಿಕವಾಗಿ ಘೋಷಿಸಿದ್ದರೂ ದಾಳಿ ವಿಫಲವಾಯಿತು ಅನ್ನುವುದು ಅವನಿಗೆ ಗೊತ್ತಿತ್ತು. ಚೆಚೆನ್ಯಾದ ಬಹಳಷ್ಟು ಹಳ್ಳಿ ಬೆಂಕಿಗೆ ಸಿಕ್ಕಿ ನಾಶವಾಗಿದ್ದವು.

ದುರ್ಬಲವೂ ಹೌದು ಚಂಚಲವೂ ಹೌದು ಅನಿಸುವಂಥ ಮನಸಿನ ಚೆಚೆನ್ಯಾ ಜನ, ಅದರಲ್ಲೂ ಗಡಿಯ ಪ್ರದೇಶದಲ್ಲಿ ಇದ್ದವರು, ರಶಿಯದ ಪರವಾಗಿ ನಿಲ್ಲುವುದಕ್ಕೆ ತಯಾರಾಗಿದ್ದರು.

ಇದೆಲ್ಲ ಅವನ ಮನಸನ್ನು ಒತ್ತುತಿದ್ದವು. ಅವೆಲ್ಲ ಪರಿಹಾರವಾಗಬೇಕಾದರೆ ಕಠಿಣ ಕ್ರಮ ಬೇಕಾಗಿತ್ತು. ಆ ಕ್ಷಣದಲ್ಲಿ ಅದನ್ನೆಲ್ಲ ಯೋಚನೆ ಮಾಡುವುದಕ್ಕೆ ಶಮೀಲ್ ಸಿದ್ಧವಾಗಿರಲಿಲ್ಲ. ವಿಶ್ರಾಂತಿ, ಮನೆಯವರ ಜೊತೆಯಲ್ಲಿರುವ ಸಂತೋಷ, ಅವನ ಪ್ರೀತಿಯ ಪತ್ನಿ, ಹದಿನೆಂಟು ವರ್ಷದ, ಚುರುಕು ಬಾಲೆ, ಕಪ್ಪು ಕಣ್ಣಿನ ಕಿಸ್ತ್ ಹುಡುಗಿ ಅಮೀನಾಳ ಜೊತೆ ಇರಬೇಕು ಅನಿಸುತ್ತಿತ್ತು. ಅವಳೋ ಈ ಕ್ಷಣದಲ್ಲಿ ಅವನ ಕೈಗೆಟಕುವಷ್ಟು ದೂರದಲ್ಲಿ, ಹೆಣ್ಣು ಮಕ್ಕಳ ಜನಾನಾ ಹಾಗೂ ಹೊರಗಿನ ಅಂಗಳವನ್ನು ಬೇರ್ಪಡಿಸಿದ್ದ ಬೇಲಿಯಾಚೆಗೇ ಇದ್ದಳು. ಅವನ ಉಳಿದ ಹೆಂಡತಿಯರ ಜೊತೆ ಅವಳೂ ನಿಂತು ಅವನು ಕುದುರೆ ಇಳಿಯುವಾಗ ಬೇಲಿಯ ಸಂದಿನಿಂದ ನೋಡುತ್ತಿದ್ದಾಳೆ ಎಂದು ಶಮೀಲ್ ಕಲ್ಪನೆ ಮಾಡಿಕೊಂಡಿದ್ದ.

ಅವಳ ಹತ್ತಿರ ಹೋಗುವುದಿರಲಿ, ಗರಿ ತುಪ್ಪುಳದ ಹಾಸಿಗೆಯ ಮೇಲೆ ಮಲಗಿ ಸ್ವಲ್ಪ ವಿಶ್ರಾಂತಿ ಪಡೆಯುವುದೂ ಅಸಾಧ್ಯವಾಗಿತ್ತು. ಯಾಕೆಂದರೆ ಮಧ್ಯಾಹ್ನದ ನಮಾಜಿನ ಹೊತ್ತು ಬಂದಿತ್ತು. ಅವನಿಗಂತೂ ಆ ಕ್ಷಣದಲ್ಲಿ ಪ್ರಾರ್ಥನೆ ಮಾಡುವ ಮನಸ್ಸಿರಲಿಲ್ಲ. ಆದರೂ ಜನತೆಯ ಧಾರ್ಮಿಕ ಮುಖಂಡನಾಗಿದ್ದುಕೊಂಡು ಅವನು ಪ್ರಾರ್ಥನೆಯನ್ನು ತಪ್ಪಿಸುವ ಹಾಗಿರಲಿಲ್ಲ. ದಿನದ ಊಟದ ಹಾಗೆ ಪ್ರಾರ್ಥನೆಯೂ ಅವನಿಗೆ ಅಗತ್ಯವಾಗಿ ಬೇಕಾಗಿತ್ತು. ಕೈ ಕಾಲು ಮುಖ ತೊಳೆದು, ಪ್ರಾರ್ಥನೆ ಹೇಳಿ, ಕಾಯುತ್ತಿದ್ದವರನ್ನು ಬರಹೇಳಿದ.

ಮೊದಲು ಬಂದವನು ಜಮಾಲುದ್ದೀನ್ ಅವನು ಶಮೀಲ್‍ನ ಮಾವ, ಧರ್ಮಗುರು. ಚೆಲುವಾದ ಕೆಂಪು ಮುಖದ, ಹಿಮದಷ್ಟು ಬಿಳಿಯ ಗಡ್ಡದ, ಎತ್ತರ ನಿಲುವಿನ, ಬಿಳಿಗೂದಲ, ವೃದ್ಧ. ಪ್ರಾರ್ಥನೆ ಹೇಳಿ ಆಮೇಲೆ ದಾಳಿಯ ಬಗ್ಗೆ ಶಮೀಲ್‍ನನ್ನು ಪ್ರಶ್ನೆಮಾಡಿದ, ಅವನು ದಾಳಿಗೆ ಹೊಗಿದ್ದಾಗ ಬೆಟ್ಟಗಾಡುಗಳಲ್ಲಿ ಏನು ನಡೆಯಿತೆಂಬುದನ್ನು ಹೇಳಿದ. ವಂಶಗಳ ನಡುವೆ ತಲೆಮಾರಿನಿಂದ ಬಂದ ದ್ವೇಷದ ಕಾರಣಕ್ಕೆ ಆದ ಕೊಲೆ, ಹಸು, ದನಗಳ ಕಳವು, ತಂಬಾಕು, ಮದ್ಯಪಾನ ಸಲ್ಲದು ಎಂಬ ತರೀಕತ್‍ ಉಲ್ಲಂಘನೆ ಇಂಥ ಹಲವು ಘಟನೆಗಳನ್ನು ಹೇಳಿದ ಜಮಾಲ್‍ಉದ್ದೀನ್. ಹಾಜಿ ಮುರಾದ್‍ ತನ್ನ ಮನೆಯವರನ್ನೆಲ್ಲ ರಶಿಯದ ಪಾಳೆಯಕ್ಕೆ ಕರೆದುಕೊಂಡು ಬರಲು ಜನರನ್ನು ಕಳಿಸಿದ್ದು, ಅದು ಪತ್ತೆಯಾಗಿ ಮನೆಯವರನ್ನು ವೆದೆನೋಗೆ ಕರೆದುಕೊಂಡು ಬಂದು ಕಣ್ಗಾವಲಿನಲ್ಲಿ ಇರಿಸಿರುವುದನ್ನು ಹೇಳಿ ಅವರ ಬಗ್ಗೆ ತೀರ್ಮಾನಕ್ಕೆ ಕಾಯುತ್ತಿರುವುದಾಗಿ ತಿಳಿಸಿದ. ಪಕ್ಕದ ಕೋಣೆಯಲ್ಲಿ ಊರಿನ ಹಿರೀಕರು ಈ ವ್ಯವಹಾರ ಚರ್ಚೆ ಮಾಡುವುದಕ್ಕೆ ಬಂದು ಕಾಯುತ್ತಿದ್ದಾರೆ, ಇವತ್ತೇ ಅವರ ಜೊತೆ ಮಾತಾಡಿ ಕಳಿಸಿಬಿಡುವುದು ವಾಸಿ, ಅವರು ಮೂರು ದಿನದಿಂದ ಕಾಯುತ್ತಿದ್ದಾರೆ ಎಂದ.

ಶಮೀಲ್ ತನ್ನ ಕೋಣೆಯಲ್ಲಿ ಊಟ ಮಾಡಿದ. ಊಟ ಬಡಿಸಿದ್ದು ಅವನ ಹಿರಿಯ ಹೆಂಡತಿ ಝೈದಾ, ಚೂಪು ಮೂಗಿನ, ಕಂದು ಬಣ್ಣದ, ನೋಡಲು ಇಷ್ಟವಾಗದ ರೂಪಿನವಳು. ಅವಳ ಬಗ್ಗೆ ಅವನಿಗೆ ಪ್ರೀತಿ ಇರಲಿಲ್ಲವಾದರೂ ಆಕೆ ಜಮಾಲ್‍ಉದ್ದೀನ್‍ನ ಮಗಳು, ಶಮೀಲ್‍ನ ಹಿರಿಯ ಹೆಂಡತಿ. ಊಟ ಮುಗಿಸಿ ಶಮೀಲ್ ಅತಿಥಿಗಳ ಕೋಣೆಗೆ ಹೋದ. ಅಲ್ಲಿ ಆರು ಜನ ಹಿರಿಯರಿದ್ದರು—ಬಿಳಿಯ, ಬೂದುಬಣ್ಣದ, ಅಥವ ಕೆಂಪು ಗಡ್ಡದವರು, ಪಪಾಖಾ ಧರಿಸಿ. ಬೆಶ್‍ಮೆತ್ ತೊಟ್ಟು ಸರ್ಕೇಸಿಯನ್ ಕೋಟು ತೊಟ್ಟಿದ್ದರು. ಸೊಂಟಪಟ್ಟಿಗೆ ಕಠಾರಿ ಸಿಕ್ಕಿಸಿಕೊಂಡಿದ್ದರು. ಶಮೀಲ್ ಬಂದ ತಕ್ಷಣ ಎದ್ದು ನಿಂತರು. ಶಮೀಲ್ ಅವರೆಲ್ಲರಿಗಿಂತ ಎತ್ತರದ ಆಳು. ಅವನೂ, ಆ ಕೋಣೆಯಲ್ಲಿದ್ದ ಎಲ್ಲರೂ ಅಂಗೈಯಲ್ಲಿ ತಮ್ಮ ಕಣ್ಣು ಮುಚ್ಚಿ. ಪ್ರಾರ್ಥನೆ ಹೇಳಿ, ಮುಖವನ್ನು ನೇವರಿಸುತ್ತ, ಗಡ್ಡದ ತುದಿಯಲ್ಲಿ ಮತ್ತೆ ಕೈಗಳನ್ನು ಜೋಡಿಸಿ ಪ್ರಾರ್ಥನೆ ಮುಗಿಸಿ ಕುಳಿತರು. ಶಮೀಲ್ ಮಿಕ್ಕವರದ್ದಕ್ಕಿಂತ ಹೆಚ್ಚು ವಿಶಾಲವಾದ ಹಾಸಿನ ಮೇಲೆ ಕುಳಿತ. ನ್ಯಾಯ ತೀರ್ಮಾನ ಮಾಡಬೇಕಾದ ಹಲವು ಸಂಗತಿಗಳನ್ನು ಚರ್ಚಿಸಿದರು. ಅಪರಾಧಿಗಳಾಗಿದ್ದವರಿಗೆ ಶರಿಯತ್‍ನ ಪ್ರಕಾರ ದಂಡನೆ ವಿಧಿಸಿದರು. ಕಳ್ಳತನ ಮಾಡಿದ್ದ ಇಬ್ಬರ ಕೈ ಕತ್ತರಿಸಬೇಕು, ಕೊಲೆ ಮಾಡಿದ್ದವನ ತಲೆ ತೆಗೆಯಬೇಕು, ಇತರ ಮೂವರನ್ನು ಕ್ಷಮಿಸಬೇಕು. ಆನಂತರ ಮುಖ್ಯವಾದ ವಿಷಯಕ್ಕೆ ಬಂದರು. ಚೆಚೆನ್ಯಾದ ಜನ ರಶಿಯನ್ನರ ಪಕ್ಷಪಾತಿಗಳಾಗುವುದನ್ನು ತಡೆಯುವುದು ಹೇಗ ಎಂದು ಚರ್ಚೆ ಮಾಡಿದರು. ಜಮಾಲುದ್ದೀನ್ ಈ ಮುಂದಿನ ಘೋಷಣೆ ಸಿದ್ಧಮಾಡಿದ:

ನಿಮ್ಮನ್ನು ಬಾಯಿ ತುಂಬಾ ಹೊಗಳಿ ನೀವು ಶರಣಾಗಬೇಕೆಂದು ರಶಿಯನ್ನರು ಕರೆ ಕೊಟ್ಟಿದ್ದಾರೆಂದು ಕೇಳಿದ್ದೇನೆ. ರಶಿಯನ್ನರ ಮಾತನ್ನು ನಂಬಬೇಡಿ. ಶರಣಾಗಬೇಡಿ, ಸಹಿಸಿಕೊಳ್ಳಿ. ಇದರಿಂದ ಈ ಜನ್ಮದಲ್ಲಿ ಅಲ್ಲದಿದ್ದರೂ ಮುಂದಿನ ಜನ್ಮದಲ್ಲಿ ನಿಮಗೆ ಪ್ರತಿಫಲ ದೊರೆಯುತ್ತದೆ. ಹಿಂದೊಮ್ಮೆ ನಿಮ್ಮ ಆಯುಧಗಳನ್ನೆಲ್ಲ ರಶಿಯನ್ನರಿಗೆ ಒಪ್ಪಿಸಿದಾಗ ಏನಾಯಿತೆಂದು ನೆನಪು ಮಾಡಿಕೊಳ್ಳಿ! ದೇವರು ನಿಮಗೆ 1840ರಲ್ಲಿ ಬುದ್ಧಿ ಕೊಟ್ಟಿರದಿದ್ದರೆ ನೀವೆಲ್ಲರೂ ಈಗ ಸೈನಿಕರಾಗಿರುತ್ತಿದ್ದರಿ, ಕಠಾರಿಯ ಬದಲು ಬಂದೂಕು ಹಿಡಿದಿರುತ್ತಿದ್ದಿರಿ, ನಿಮ್ಮ ಮನೆಯ ಹೆಂಗಸರು ಮರ್ಯಾದೆ ಕಳೆದುಕೊಳ್ಳುತ್ತಿದ್ದರು.

ಭೂತ ಕಾಲದ ಆಧಾರದ ಮೇಲೆ ಭವಿಷ್ಯವನ್ನು ಕಲ್ಪನೆ ಮಾಡಿಕೊಳ್ಳಿ. ಅಲ್ಲಾನನ್ನು ನಂಬದ ರಶಿಯನ್ನರ ಜೊತೆ ಸ್ನೇಹದಿಂದ ಇರುವುದಕ್ಕಿಂತ ಅವರ ವಿರುದ್ಧ ದ್ವೇಷ ಸಾಧನೆ ಮಾಡುವುದೇ ಒಳ್ಳೆಯದು. ಕೆಲವು ದಿನ ಮಾತ್ರ ಸಹಿಸಿಕೊಳ್ಳಿ. ಕುರಾನ್ ಮತ್ತು ಕತ್ತಿ ಹಿದಿದು ನಾನು ಬರುತ್ತೇನೆ, ನಮ್ಮ ಶತ್ರುಗಳ ವಿರುದ್ಧ ನಿಮ್ಮ ನಾಯಕನಾಗಿ ನಿಮ್ಮನ್ನು ಮುನ್ನಡೆಸುತ್ತೇನೆ. ರಶಿಯನ್ನರಿಗೆ ಶರಣಾಗುವ ಇಚ್ಛೆಯನ್ನಲ್ಲ ಯೋಚನೆಯನ್ನೂ ಮಾಬಾರದೆಂದು ನಾನು ನಿಮಗೆ ಕಟ್ಟಾಜ್ಞೆ ಮಾಡುತ್ತಿದ್ದೇನೆ.

ಶಮೀಲ್ ಈ ಘೋಷಣೆಯನ್ನು ಒಪ್ಪ, ಸಹಿ ಮಾಡಿ, ಜನರಿಗೆ ತಲುಪಿಸಲು ಕಳಿಸಿಕೊಟ್ಟ. ಇದಾದ ಮೇಲೆ ಅವರು ಹಾಜಿ ಮುರಾದ್‍ನ ವಿಚಾರ ಮಾತಾಡಿದರು. ಅದು ಶಮೀಲ್‍ ಮಟ್ಟಿಗೆ ಬಹಳ ಮುಖ್ಯವಾದ ಸಂಗತಿಯಾಗಿತ್ತು. ಹಾಜಿ ಮುರಾದ್ ತನ್ನೊಡನೆ ಇದ್ದಿದ್ದರೆ ಅವನ ಚುರುಕುತನ, ಧೈರ್ಯ, ಸಾಹಸಗಳ ಕಾರಣದಿಂದ ಚೆಚೆನ್ಯಾದಲ್ಲಿ ಈಗ ಏನೇನು ನಡೆದಿದೆಯೋ ಅದು ಯಾವುದೂ ನಡೆಯುತ್ತಿರಲಿಲ್ಲ ಅನ್ನುವುದು ಶಮೀಲ್‍ಗೆ ಗೊತ್ತಿತ್ತಾದರೂ ಅವನು ಎಂದೂ ಅದನ್ನು ಒಪ್ಪುತ್ತಿರಲಿಲ್ಲ. ಹಾಜಿ ಮುರಾದ್‍ನೊಡನೆ ರಾಜಿ ಮಾಡಿಕೊಳ್ಳುವುದು ಒಳ್ಳೆಯದು, ಅವನನ್ನು ಬಳಸಿಕೊಂಡು ಅಧಿಕಾರ ಉಳಿಸಿಕೊಳ್ಳುವುದು ಒಳ್ಳೆಯದು. ಅದು ಸಾಧ್ಯವಿಲ್ಲವಾದ್ದರಿಂದ ಅವನು ರಶಿಯನ್ನರಿಗೆ ಸಹಾಯ ಮಾಡುವುದನ್ನು ತಪ್ಪಿಸಬೇಕು. ಅದಾಗಬೇಕಾದರೆ ಅವನನ್ನು ಮರುಳು ಮಾಡಿ ಇಲ್ಲಿಗೆ ಕರೆದುಕೊಂಡು ಬರಬೇಕು. ಯಾರನ್ನಾದರೂ ಟಿಫ್ಲಿಸ್‍ಗೆ ಕಳಿಸಿ ಅಲ್ಲೇ ಕೊಲೆಮಾಡಿಸಬೇಕು ಅಥವಾ ಅವನನ್ನು ಪುಸಲಾಯಿಸಿ ಇಲ್ಲಿಗೆ ಕರೆದುಕೊಂಡು ಬಂದು ಇಲ್ಲಿ ಅವನನ್ನು ಮಗಿಸಬೇಕು. ಅವನು ವೆದೆನೋ ಊರಿಗೆ ಬರುವಂತೆ ಮಾಡಲು ಅವನ ಕುಟುಂಬ, ಅದರಲ್ಲೂ ಮುಖ್ಯವಾಗಿ ಅವನ ಮಗನನ್ನು ಬಳಸಿಕೊಳ್ಳಬೇಕು (ಮಗನ ಮೇಲೆ ಹಾಜಿ ಮುರಾದ್‍ಗೆ ಬಹಳ ಪ್ರೀತಿ ಅನ್ನುವುದು ಶಮಿಲ್‍ಗೆ ಗೊತ್ತಿತ್ತು). ಅಂದರೆ ಮಗನ ಮೂಲಕ ಕಾರ್ಯ ಸಾಧನೆ ಮಾಡಬೇಕು. ಹೀಗೆ ಇದನ್ನೆಲ್ಲ ಹಿರೀಕರು ಚರ್ಚೆ ಮಾಡುತ್ತಿದ್ದಾಗ ಶಮೀಲ್ ಕಣ್ಣು ಮುಚ್ಚಿ ಸುಮ್ಮನೆ ಕುಳಿತಿದ್ದ. ಶಮೀಲ್ ಪ್ರವಾದಿಯವರ ಮಾತಿಗೆ ಕಿವಿಗೊಟ್ಟಿದ್ದಾನೆ, ಅವನು ಏನು ಮಾಡಬೇಕೆಂದು ಪ್ರವಾದಿಯವರೇ ಹೇಳುತ್ತಾರೆ ಅನ್ನುವುದು ಹಿರೀಕರಿಗೆ ಗೊತ್ತಿತ್ತು.

(3.ಗೌರವಾನ್ವಿತ ಸೂಫಿ ಗುರು, ಅವನು ಪವಿತ್ರ ಯುದ್ಧದ ಕಲ್ಪನೆಯನ್ನು ಒಪ್ಪುತಿರಲಿಲ್ಲ. ಶಮೀಲ್ ರಾಜಕೀಯ ಉದ್ದೇಶಕ್ಕಾಗಿ ಜಲಾಲುದ್ದೀನ್‍ನ ಮಗಳು ಝೈದಾಳನ್ನು ಮದುವೆಯಾಗಿದ್ದ.)
(4. 1840ರಲ್ಲಿ ಶರಣಾದ ಚೆಚೆನ್ಯಾ ಜನರ ಆಯುಧಗಳನ್ನು ವಶಪಡಿಸಿಕೊಂಡು ಅವರನ್ನೆಲ್ಲ ಬಲವಂತದ ಜೀತಗಾರರನ್ನಾಗಿ ಮಾಡಲಾಯಿತು ಎಂಬ ಸುದ್ದಿ ಹರಡಿತ್ತು.)

ಐದು ನಿಮಿಷಗಳ ನಂತರ ಶಮೀಲ್ ಕಣ್ಣು ತೆರೆದು, ಕಣ್ಣನ್ನು ಎಂದಿಗಿಂತ ಇನ್ನೂ ಕಿರಿದಾಗಿಸಿ, ‘ಹಾಜಿ ಮುರಾದ್‍ನ ಮಗನನ್ನು ಕರೆದುಕೊಂಡು ಬನ್ನಿ,’ ಎಂದ. ‘ಇಲ್ಲೇ ಇದ್ದಾನೆ,’ ಎಂದ ಜಮಾಲುದ್ದೀನ್. ಹಾಜಿ ಮುರಾದ್‍ನ ಮಗ ಯೂಸುಫ್, ಬಿಳಿಚಿದ ಮುಖದ, ತೆಳ್ಳನೆ ಮೈಯ, ಚಿಂದಿ ಬಟ್ಟೆ ತೊಟ್ಟ, ಕೆಟ್ಟ ನಾತ ಬೀರುತ್ತಿದ್ದ, ಆದರೂ ಚೆಲುವು ಮಾಸಿರದ, ಮುದ್ದು ಮುಖದ ಕಪ್ಪು ಕಣ್ಣಿನ ಯುವಕ ಹೊರ ಅಂಗಳದ ಗೇಟಿನ ಹತ್ತಿರ ಕಾಯುತ್ತಿದ್ದ. ಅವನ ಕಣ್ಣು ಅವನ ಅಜ್ಜಿ ಫಾತಿಮಳ ಕಣ್ಣಿನ ಹಾಗೇ ಉರಿಯುತ್ತಿದ್ದವು. ಶಮೀಲ್‍ ಬಗ್ಗೆ ಅಪ್ಪ ಹಾಜಿ ಮುರಾದ್‍ನಿಗೆ ಇದ್ದಂಥ ಭಾವನೆ ಮಗ ಯೂಸುಫ್‍ಗೆ ಇರಲಿಲ್ಲ. ಬಹಳ ಹಿಂದೆ ನಡೆದ ಘಟನೆಗಳೆಲ್ಲ ಅವನಿಗೆ ಗೊತ್ತಿರಲಿಲ್ಲ. ಅಕಸ್ಮಾತ್ ಗೊತ್ತಿದ್ದರೂ ಅವನು ಅದನ್ನೆಲ್ಲ ನೇರವಾಗಿ ಅನುಭವಿಸಿರಲಿಲ್ಲವಾಗಿ ತನ್ನಪ್ಪನಿಗೆ ಶಮೀಲ್‍ನ ಮೇಲೆ ಅಷ್ಟೊಂದು ದ್ವೇಷ ಯಾಕೆ ಅನ್ನುವುದು ತಿಳಿಯುತ್ತಿರಲಿಲ್ಲ. ನಾಯಿಬ್‍ನ ಮಗನಾಗಿ ಅವನು ಖುನ್ಜಾಕ್ನಲ್ಲಿ ಅನುಭೋಗಿಸುತ್ತಿದ್ದ ಸಡಿಲ ಸುಖದ ಬದುಕು ಮುಂದುವರೆಯುವುದಷ್ಟೇ ಅವನಿಗೆ ಬೇಕಾಗಿತ್ತು. ಶಮೀಲ್‍ನೊಂದಿಗೆ ವೈರತ್ವ ಇಟ್ಟುಕೊಳ್ಳುವ ಅಗತ್ಯವಿಲ್ಲ ಅನಿಸುತ್ತಿತ್ತು. ಅವನು ತನ್ನ ಅಪ್ಪನಿಗಿಂತ ಭಿನ್ನವಾಗಿ, ಅಷ್ಟೇ ಅಲ್ಲ ಅಪ್ಪನಿಗೆ ವಿರುದ್ಧವಾಗಿ ಶಮೀಲ್‍ನನ್ನು ಮೆಚ್ಚುತ್ತಿದ್ದ. ಬೆಟ್ಟಗಾಡುಗಳಲ್ಲಿ ಅವನ ಬಗ್ಗೆ ಇದ್ದ ಉನ್ಮತ್ತ ಆರಾಧನೆಯ ಭಾವವನ್ನು ಅವನೂ ಅನುಭವಿಸುತ್ತಿದ್ದ. ಇಮಾಮ್‍ನ ಬಗ್ಗೆ ಇದ್ದ ಅತೀವ ಭಯ, ಗೌರವಗಳ ಕಾರಣದಿಂದ ಒಳಗೊಳಗೇ ಕಂಪಿಸುತ್ತ ಯೂಸುಫ್ ಒಳಕ್ಕೆ ಬಂದಿದ್ದ. ಶಮೀಲ್‍ನ ಅರ್ಧ ಮುಚ್ಚಿದ್ದ ಕಣ್ಣುಗಳ ನೋಟ ಯೂಸುಫ್‍ನನ್ನು ಬಾಗಿಲಿನಲ್ಲೇ ತಡೆದು ನಿಲ್ಲಿಸಿತು. ಅರ್ಧ ಕ್ಷಣ ತಡೆದು ಶಮೀಲ್‍ನ ಬಳಿಗೆ ಹೋಗಿ, ಅವನ ಉದ್ದ ಬೆರಳುಗಳ ಮುಂಗೈಯಿಗೆ ಮುತ್ತಿಟ್ಟ.

‘ನೀನು ಹಾಜಿ ಮುರಾದ್‍ನ ಮಗನೋ?’
‘ಹೌದು, ಇಮಾಮ್.’
‘ಅವನೇನು ಮಾಡಿದ್ದಾನೆ, ಗೊತ್ತೋ?’
‘ಗೊತ್ತು, ಇಮಾಮ್. ನಮ್ಮಪ್ಪ ಹಾಗೆ ಮಾಡಬಾರದಾಗಿತ್ತು.’
‘ಬರೆಯುವುದಕ್ಕೆ ಬರುತ್ತಾ ನಿನಗೆ?’
‘ಮುಲ್ಲಾ ಆಗುವುದಕ್ಕೆ ತಯಾರಿ ತೆಗೆದುಕೊಳ್ಳುತ್ತಿದ್ದೆ.’
‘ನಿಮ್ಮಪ್ಪನಿಗೆ ಹೀಗೆ ಕಾಗದ ಬರೆಯಬೇಕು. ಬೈರಾಮ್ ಹಬ್ಬದ ಒಳಗಾಗಿ ಅವನು ನನ್ನ ಬಳಿಗೆ ವಾಪಸು ಬಂದರೆ ಅವನಿಗೆ ನಾನು ಕ್ಷಮಾದಾನ ಮಾಡುತ್ತೇನೆ, ಎಲ್ಲವೂ ಮೊದಲಿನ ಹಾಗೆ ಮಾಮೂಲಾಗಿರುತ್ತದೆ. ಒಂದು ವೇಳೆ ಅವನು ಬಾರದಿದ್ದರೆ, ರಶಿಯನ್ನರ ಜೊತೆಗೇ ಉಳಿದರೆ…’ ಶಮೀಲ್ ಹುಬ್ಬು ಗಂಟಿಕ್ಕಿ ನಿ಼ಷ್ಠುರವಾಗಿ ಯೂಸುಫ್‍ಗೆ ಹೇಳಿದ, ‘…ನಿಮ್ಮ ಅಜ್ಜಿ, ನಿಮ್ಮ ಅಮ್ಮ, ಮನೆಯ ಒಬ್ಬೊಬ್ಬರನ್ನೂ ಒಂದೊಂದು ಬೇರೆ ಔಲ್‍ಗೆ ಕಳಿಸುತ್ತೇನೆ, ಹಾಗೇ ನಿನ್ನ ತಲೆ ತೆಗೆಯುತ್ತೇನೆ.’

ಯೂಸುಫ್‍ನ ಮುಖದಲ್ಲಿ ಕಿಂಚಿತ್ತೂ ಬದಲಾವಣೆಯಾಗಲಿಲ್ಲ. ಶಮೀಲ್‍ನ ಮಾತು ಅರ್ಥವಾಯಿತು ಅನ್ನುವ ಹಾಗೆ ತೆಲೆ ಬಾಗಿಸಿದ.
‘ಇದನ್ನೆಲ್ಲ ಬರೆದು ನನ್ನ ದೂತನ ಕೈಗೆ ಕೊಡು.

ಶಮೀಲ್ ಮಾತು ನಿಲ್ಲಿಸಿ ಬಹಳ ಹೊತ್ತು ಯೂಸುಫ್‍ನನ್ನೇ ಮಾತಿಲ್ಲದೆ ದಿಟ್ಟಿಸಿದ.

‘ಇದನ್ನ ಬರಿ. ನಿನ್ನ ಮೇಲೆ ನನಗೆ ಕರುಣೆ ಹುಟ್ಟತ್ತೆ. ನಿನ್ನ ತಲೆ ತೆಗೆಯುವ ಬದಲು ದೇಶ ದ್ರೋಹಿಗಳಿಗೆ ಮಾಡುವ ಹಾಗೆ ಕಣ್ಣು ಮಾತ್ರ ಕೀಳಿಸುತ್ತೇನೆ! ನಡಿ, ಹೊರಡು!’

ಶಮೀಲ್‍ನ ಎದುರಿನಲ್ಲಿ ಯೂಸುಫ್ ಶಾಂತವಾಗಿರುವಂತೆ ಕಾಣುತ್ತಿದ್ದರೂ ಹೊರಗೆ ಬಂದ ತಕ್ಷಣ ಅವನು ತನ್ನ ಕಾವಲಿಗೆ ಬಂದಿದ್ದ ಸೇವಕನ ಮೇಲೆ ಏರಿ ಹೋಗಿ, ಅವನ ಕಠಾರಿಯನ್ನು ಕಿತ್ತುಕೊಂಡು ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಪಟ್ಟ. ಸೈನಿಕರು ಅವನನ್ನು ಹಿಡಿದು, ಕೈಗಳನ್ನು ಕಟ್ಟಿ, ಮತ್ತೆ ಗುಂಡಿಗೆ ಎಸೆದರು.

ಅವತ್ತು ಸಾಯಂಕಾಲದ ಪ್ರಾರ್ಥನೆ ಮುಗಿಸಿದ ಶಮೀಲ್ ಬಿಳಿಯ ಫ‌ರ್ ಕೋಟು ತೊಟ್ಟು ಬೇಲಿಯ ಇನ್ನೊಂದು ಬದಿಯಲ್ಲಿದ್ದ ಜನಾನಾಕ್ಕೆ ಹೋದ. ಸೀದಾ ಅಮೀನಾಳ ಕೋಣೆಗೆ ನಡೆದ. ಅವಳು ಅಲ್ಲಿರಲಿಲ್ಲ. ಶಮೀಲ್‍ನ ಹಿರಿಯ ಹೆಂಡಿರ ಹತ್ತಿರ ಹೋಗಿದ್ದಳು. ಯಾರ ಕಣ್ಣಿಗೂ ಕಾಣಬಾರದೆಂದು ಶಮೀಲ್ ಬಾಗಿಲ ಹಿಂದೆ ನಿಂತು ಅಮೀನಾ ಬರುತ್ತಾಳೆಂದು ಕಾದ. ಅಮೀನಾಗೆ ಅವನ ಮೇಲೆ ಸಿಟ್ಟು ಬಂದಿತ್ತು. ಅವನು ತಂದಿದ್ದ ರೇಶಿಮೆ ವಸ್ತ್ರಗಳನ್ನು ನನಗೆ ಕೊಡದೆ ಝೈದಾಗೆ ಕೊಟ್ಟನೆಂದು ಸಿಟ್ಟುಗೊಂಡಿದ್ದಳು. ಅವನು ಬರುವುದನ್ನು, ತನ್ನನ್ನು ಹುಡುಕುತ್ತ ಕೋಣೆಗೆ ಹೋದದ್ದನ್ನು ನೋಡಿದಳು. ಬೇಕೆಂದೇ ಅವಳು ಕೋಣೆಗೆ ಬರದೆ ತಡ ಮಾಡಿದಳು. ಝೈದಾಳ ಕೋಣೆಯ ಬಾಗಿಲಲ್ಲಿ ನಿಂತು ನೋಡುತ್ತಾ ಶಮೀಲ್‍ನ ಬಿಳಿಯ ಆಕೃತಿ ತನ್ನ ಕೋಣೆಯಿಂದ ಹೊರಬರುವುದನ್ನು ಕಂಡು ಸದ್ದಿಲ್ಲದೆ ನಕ್ಕಳು. ಅಮೀನಾಳಿಗಾಗಿ ವ್ಯರ್ಥವಾಗಿ ಕಾಯ್ದು, ಕೊನೆಗೆ ರಾತ್ರಿಯ ಪ್ರಾರ್ಥನೆಯ ವೇಳೆಯಾಯಿತೆಂದು ಶಮೀಲ್ ತನ್ನ ಕೋಣೆಗೆ ಹಿಂದಿರುಗಿದ.

| ಮುಂದುವರೆಯುವುದು |

‍ಲೇಖಕರು avadhi

February 17, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: