ಪ್ರೊ ಓ ಎಲ್ ನಾಗಭೂಷಣಸ್ವಾಮಿ ‘ಹಾಜಿ ಮುರಾದ್’ – ಹಾಜಿ ಮುರಾದ್‍ನನ್ನು ಹಿಡಿದದ್ದು ನಾನೇ…

ಪ್ರೊ ಓ. ಎಲ್.‌ ನಾಗಭೂಷಣ ಸ್ವಾಮಿಯವರು ಕನ್ನಡದ ಖ್ಯಾತ ವಿಮರ್ಶಕರು ಹಾಗೂ ಅನುವಾದಕರು. ಇಂಗ್ಲೀಷ್‌ ಅಧ್ಯಾಪಕರಾಗಿ ನಿವೃತ್ತಿ ಹೊಂದಿದ್ದಾರೆ. 

ಕುವೆಂಪು ಭಾಷಾ ಭಾರತಿ, ಕೇಂದ್ರ ಸಾಹಿತ್ಯ ಅಕಾಡಮಿ, ಜೆ. ಕೃಷ್ಣಮೂರ್ತಿ ಫೌಂಡೇಶನ್‌ ಹೀಗೆ ವಿವಿಧ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದಾರೆ.

60ಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿದ್ದಾರೆ. ವಿಮರ್ಶೆಯ ಪರಿಭಾಷೆ  ಇವರ ಬಹುಚರ್ಚಿತ ಕೃತಿಗಳಲ್ಲೊಂದು. ನಕ್ಷತ್ರಗಳು, ಏಕಾಂತ ಲೋಕಾಂತ, ನನ್ನ ಹಿಮಾಲಯ, ಇಂದಿನ ಹೆಜ್ಜೆ, ಪ್ರಜ್ಞಾ ಪ್ರವಾಹ ತಂತ್ರ, ನುಡಿಯೊಳಗಾಗಿ ಮುಂತಾದವು ಇವರ ಸ್ವತಂತ್ರ ಕೃತಿಗಳು. ಕನ್ನಡ ಶೈಲಿ ಕೈಪಿಡಿ, ನಮ್ಮ ಕನ್ನಡ ಕಾವ್ಯ, ವಚನ ಸಾವಿರ ಮೊದಲಾದವು ಸಂಪಾದಿತ ಕೃತಿಗಳು. ಜಿಡ್ಡು ಕೃಷ್ಣಮೂರ್ತಿಯವರ ಕೆಲವು ಕೃತಿಗಳು, ಸಿಂಗರ್‌ ಕತೆಗಳು, ಟಾಲ್ಸ್ಟಾಯ್‌ನ ಸಾವು ಮತ್ತು ಇತರ ಕತೆಗಳು, ರಿಲ್ಕ್‌ನ ಯುವಕವಿಗೆ ಬರೆದ ಪತ್ರಗಳು, ಕನ್ನಡಕ್ಕೆ ಬಂದ ಕವಿತೆ, ರುಲ್ಪೊ ಸಮಗ್ರ ಸಾಹಿತ್ಯ ಬೆಂಕಿ ಬಿದ್ದ ಬಯಲು, ಪ್ಲಾಬೊ ನೆರೂಡನ ಆತ್ಮಕತೆ ನೆನಪುಗಳು, ಯುದ್ಧ ಮತ್ತು ಶಾಂತಿ ಹೀಗೆ ಹಲವು ಕೃತಿಗಳನ್ನು ಅನುವಾದಿಸಿದ್ದಾರೆ.

ಚಂದ್ರಶೇಖರ ಕಂಬಾರ, ಜಿ.ಎಸ್‌. ಶಿವರುದ್ರಪ್ಪ ಹೀಗೆ ಕೆಲವರ ಕೃತಿಗಳನ್ನು ಇಂಗ್ಲೀಷಿಗೆ ಅನುವಾದಿಸಿದ್ದಾರೆ.

ವಿಮರ್ಶೆಯ ಪರಿಭಾಷೆಗಾಗಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ತೀನಂಶ್ರೀ ಬಹುಮಾನ, ಸ ಸ ಮಾಳವಾಡ ಪ್ರಶಸ್ತಿಯನ್ನು ಪಡೆದಿದ್ದಾರೆ. ಕೇಂದ್ರ ಸಾಹಿತ್ಯ ಅಕಾಡೆಮಿಯ ಭಾಷಾಂತರ ಬಹುಮಾನವು ಸೇರಿದಂತೆ ಹಲವು ಪ್ರಶಸ್ತಿಗಳನ್ನು ಪಡೆದಿದ್ದಾರೆ.

ಪ್ರತಿ ಶುಕ್ರವಾರ ಅವಧಿಯಲ್ಲಿ ಪ್ರೊ. ನಾಗಭೂಷಣ ಸ್ವಾಮಿ ಅವರು ಅನುವಾದಿಸಿರುವ ಟಾಲ್‌ಸ್ಟಾಯ್‌ನ ಕೊನೆಯ ಕಾದಂಬರಿ ಹಾಜಿ ಮುರಾದ್‌ ಪ್ರಕಟವಾಗಲಿದೆ.

6

‘ಶಮೀಲ್‍ನನ್ನು ಬಿಟ್ಟರೆ ರಶಿಯಾದ ಎರಡನೆಯ ದೊಡ್ಡ ಶತ್ರುವಾದ ಹಾಜಿ ಮುರಾದ್‍ನ್ನು ನಾನು, ಬೇರೆ ಯಾರೂ ಅಲ್ಲ ಸ್ವತಃ ನಾನೇ, ಮರುಳು ಮಾಡಿ ಶರಣಾಗುವಂತೆ ಮಾಡಿದೆ!’ ಅಂದುಕೊಳ್ಳುತ್ತ ಯುವಕ ವರಾನ್ತಸೋವ್ ಬಹಳ ಸಂತುಷ್ಟನಾಗಿದ್ದ. ಈ ಸಂತೋಷದಲ್ಲಿ ಒಂದೇ ಒಂದು ಕಿರಿಕಿರಿಯ ಅಂಶವಿತ್ತು: ವೋಝ್‌ದ್ವಿಶೆನ್ಸ್‌ಕ್‌ನಲ್ಲಿದ್ದ ಸೈನ್ಯಕ್ಕೆ ಜನರಲ್ ಮೆಲ್ಲೆರ್ ಝಕೊಮೆಲ್ಸ್‌ಕಿ ದಂಡನಾಯಕ. ಶರಣಾಗತಿಯಂಥ ಕಾರ್ಯ ಅವನ ಮುಖಾಂತರವೇ ಆಗಬೇಕಾಗಿತ್ತು. ವರಾನ್ತಸೋವ್ ಎಲ್ಲ ಕೆಲಸವನ್ನೂ ತಾನೇ ಮಾಡಿ ಯಾವ ವರದಿಯನ್ನೂ ಸಲ್ಲಿಸಿರಲಿಲ್ಲವಾಗಿ ಕಿರಿಕಿರಿಯಾಗಬಹುದು ಅನ್ನಿಸಿ, ಅದು ಅವನ ಸಂತೋಷವನ್ನು ಸ್ವಲ್ಪ ಕೆಡಿಸಿತ್ತು. 

ವರಾನ್ತಸೋವ್ ಮನೆಗೆ ತಲುಪುತ್ತಿದ್ದ ಹಾಗೇ ಹಾಜಿ ಮುರಾದ್‌ನ ಅನುಚರರ ಜವಾಬ್ದಾರಿಯನ್ನು ರೆಜಿಮೆಂಟಿನ ಅಡ್ಜುಟೆಂಟನಿಗೆ ವಹಿಸಿದ. ಹಾಜಿ ಮುರಾದ್‌ನನ್ನು ತಾನೇ ಸ್ವತಃ ತನ್ನ ಮನೆಗೇ ಕರೆದುಕೊಂಡು ಹೋದ.

ಸುಸಂಸ್ಕೃತ ನಾಜೂಕಿನ ಉಡುಗೆ ತೊಟ್ಟಿದ್ದ ಪ್ರಿನ್ಸೆಸ್ ಮೇರಿ ವಾಸಿಲೇವ್ನಾ ನಗುನಗುತ್ತಾ ಹಾಜಿ ಮುರಾದ್‌ನನ್ನು ಡ್ರಾಯಿಂಗ್ ರೂಮಿನಲ್ಲಿ ಎದುರುಗೊಂಡಳು. ಅವಳ ಜೊತೆಗೆ ಗುಂಗುರು ಕೂದಲಿನ ಹುಡುಗ, ಆರು ವರ್ಷದ ಮುದ್ದಾದ ಮಗನಿದ್ದ. ಹಾಜಿ ಮುರಾದ್ ಎರಡೂ ಕೈ ಎದೆಯ ಮೇಲಿರಿಸಿಕೊಂಡು, ಬಹಳ ಗಂಭೀರವಾಗಿ, ’ನಾನು ಪ್ರಿನ್ಸ್ ಅವರ ಕುನಾಕ್, ಆಪ್ತ ಮಿತ್ರ, ಎಂದು ಭಾವಿಸುತ್ತೇನೆ. ಯಾಕೆಂದರೆ ಸ್ವತಃ ಪ್ರಿನ್ಸ್ ಅವರೇ ನನ್ನನ್ನು ತಮ್ಮ ಮನೆಯೊಳಕ್ಕೆ ಕರೆದುಕೊಂಡು ಬಂದಿದ್ದಾರೆ. ನನ್ನ ಕುನಾಕ್‌ನ ಕುಟುಂಬವೂ ನನಗೆ ಸ್ವತಃ ಕುನಾಕ್‌ನಷ್ಟೇ ಪವಿತ್ರವಾದದ್ದು,’ ಎಂಬ ಮಾತುಗಳನ್ನು ತನ್ನ ಜೊತೆಗೇ ಬಂದಿದ್ದ ದುಭಾಷಿಯ ಮೂಲಕ ಅವರಿಗೆ ತಲುಪಿಸಿದ. ಹಾಜಿ ಮುರಾದ್‌ನ ಆಕಾರ, ವರ್ತನೆ ಕಂಡು ಮೇರಿ ವಾಸಿಲೇವ್ನಾಗೆ ಸಂತೋಷವಾಗಿತ್ತು. ಆಕೆ ಕೈ ಕುಲುಕಲೆಂದು ತನ್ನ ಬಿಳಿಯ ಕೈಯನ್ನು ಮುಂಚೆ ಚಾಚಿದಾಗ ಅವನು ನಾಚಿ ಕೆಂಪಾದದ್ದನ್ನು ಕಂಡು ಅವನ ಪರವಾದ ಅಭಿಪ್ರಾಯ ಇನ್ನಷ್ಟು ದೃಢವಾಯಿತು. ಅವನನ್ನು ಕೂರಿಸಿ, ಕಾಫಿ ಆಗಬಹುದೇ ಎಂದು ಕೇಳಿ, ಕಾಫಿಗೆ ತರಲು ಹೇಳಿದಳು. ಆದರೂ ಕಾಫಿ ಬಂದಾಗ ಅವನು ಬೇಡವೆಂದ. ರಶ್ಯನ್ ಭಾಷೆ ಅವನಿಗೆ ಸ್ವಲ್ಪ ಅರ್ಥವಾಗುತಿತ್ತು, ಮಾತಾಡಲು ಬರುತ್ತಿರಲಿಲ್ಲ. ಅವನಿಗೆ ಅರ್ಥವಾಗದ ಮಾತು ಯಾರಾದರೂ ಆಡಿದಾಗ ತುಟಿ ಅರಳಿಸಿ ನಗುತಿದ್ದ. ಆ ನಗುವನ್ನು ಕಂಡು ಮೇರಿ ವಾಸಿಲೇವ್ನಾಗೆ ಸಂತೋಷವಾಯಿತು, ಪೋಲ್ಟರಾಟ್ಸ್‌ಕಿಗೂ ಸಂತೋಷವಾಯಿತು. ಅಮ್ಮನ ಪಕ್ಕದಲ್ಲಿ ನಿಂತಿದ್ದ ಗುಂಗುರು ಕೂದಲಿನ, ಚುರುಕು ಕಣ್ಣಿನ ಪುಟ್ಟ ಹುಡುಗ (ಅವನ ಅಮ್ಮ ಅವನನ್ನು ಬೂಲ್ಕಾ ಎಂದು ಕರೆಯುತಿದ್ದಳು) ಹಾಜಿ ಮುರಾದ್‌ನನ್ನು ನೋಡುತ್ತಿದ್ದ ದೃಷ್ಟಿಯನ್ನು ಅಲುಗಿಸಲೇ ಇಲ್ಲ. ಅವನೊಬ್ಬ ವೀರ ಯೋಧ ಅನ್ನುವ ಮಾತು ಕೇಳಿದ್ದ ಆ ಹುಡುಗ. 

ಹಾಜಿ ಮುರಾದ್‌ನನ್ನು ಹೆಂಡತಿಯ ಜೊತೆಯಲ್ಲಿ ಬಿಟ್ಟು ವರಾನ್ತಸೋವ್  ಕಛೇರಿಗೆ ಹೋದ. ಹಾಜಿ ಮುರಾದ್ ರಶಿಯನ್ನರ ಜೊತೆ ಸೇರ್ಪಡೆಗೊಂಡ ಬಗ್ಗೆ ವರದಿಯನ್ನು ತಯಾರು ಮಾಡಿ ಕಳಿಸಬೇಕಾಗಿತ್ತು. ಗ್ರೋಝ್ನಿಯಲ್ಲಿದ್ದ ಲೆಫ್ಟ್ ಫ್ಲಾಂಕಿನ ಜನರಲ್ ಕೋಝ್‌ಲೋವ್ಸ್‌ಕಿಗೆ ಕಳಿಸಬೇಕಾದ ವರದಿಯನ್ನು ಸಿದ್ಧಮಾಡಿ, ಹಾಗೇ ತನ್ನ ತಂದೆಗೆ ಪತ್ರವನ್ನು ಬರೆದು, ಆಮೇಲೆ ಆತುರಾತುರವಾಗಿ ಮನೆಗೆ ಬಂದ. ಅಗೌರವವನ್ನೂ ತೋರದೆ, ತೀರ ಮಿತ್ರತ್ವವನ್ನೂ ತೋರದೆ ನಡೆಸಿಕೊಳ್ಳಬೇಕಾದ ಭಯಂಕರ ಅಪರಿಚಿತನನ್ನು ಮನೆಯಲ್ಲಿ ಬಲವಂತವಾಗಿ ಕುಳ್ಳಿರಿಸಿ ಹೋದೆನೆಂದು ಹೆಂಡತಿಗೆ ಬೇಜಾರಾಗಿರಬಹುದು ಅನಿಸಿತ್ತು. ಅವನ ಆತಂಕ ಅನಗತ್ಯವಾಗಿತ್ತು. ಹಾಜಿ ಮುರಾದ್ ಪುಟ್ಟ ವರಾನ್ತಸೋವ್‌ನ ಮಲಮಗ ಬೂಲ್ಕಾನನ್ನು ತೊಡೆಯ ಮೇಲೆ ಕೂರಿಸಿಕೊಂಡು ಆರಾಮ ಕುರ್ಚಿಯ ಮೇಲೆ ಕುಳಿತಿದ್ದ. ದುಭಾಷಿಯತ್ತ ತಲೆ ಬಾಗಿಸಿ, ಅವನು ತರ್ಜುಮೆ ಮಾಡಿ ಹೇಳುತ್ತಿದ್ದ ಮೇರಿ ವಾಸಿಲೇವ್ನಾಳ ಮಾತನ್ನು ಗಮನವಿಟ್ಟು ಆಲಿಸುತಿದ್ದ. ಅವಳು ನಗುನಗುತ್ತ. ’ನೀನು ಮೆಚ್ಚಿದ ಪ್ರತಿಯೊಬ್ಬ ಕುನಾಕ್‌ಗೆ ಅವನಿಷ್ಟದ ವಸ್ತುವನ್ನು ಕೊಡುತ್ತ ಹೋದರೆ ಬಲು ಬೇಗನೆ ಆದಿ ಪುರುಷ ಆಡಂನ ಹಾಗೆ ಬತ್ತಲೆ ತಿರುಗುವ ಗತಿ ಬಂದೀತು!’ ಅನ್ನುತಿದ್ದಳು.  

ಪ್ರಿನ್ಸ್ ಕೋಣೆಯೊಳಕ್ಕೆ ಕಾಲಿಟ್ಟ ತಕ್ಷಣ ಮಗುವನ್ನು ತಟ್ಟನೆ ಕೆಳಕ್ಕಿಳಿಸಿದ. ಅದರಿಂದ ಆಘಾತಕ್ಕೂ ಆಶ್ಚರ್ಯಕ್ಕೂ ಗುರಿಯಾಗಿದ್ದ ಮಗು ಅವನನ್ನೇ ದಿಟ್ಟಿಸುತ್ತಿರುವ ಹಾಗೆ ಹಾಜಿ ಮುರಾದ್ ಮುಖದ ಮೇಲಿದ್ದ ಹುಡುಗಾಟದ ನೋಟವನ್ನು ಗಂಭೀರ, ನಿಷ್ಠುರ ಭಾವವಾಗಿ ತಟ್ಟನೆ ಬದಲಾಯಿಸಿಕೊಂಡು ನಿಂತಿದ್ದ. ವರಾನ್ತಸೋವ್ ಕುಳಿತ ಮೇಲಷ್ಟೇ ತಾನೂ ಕುಳಿತ. ಆಮೇಲೆ ತಾವಾಡುತ್ತಿದ್ದ ಮಾತಿನ ಎಳೆ ಮುಂದುವರೆಸಿ, ’ನಮ್ಮ ಜನದ ಪದ್ಧತಿ ಏನೆಂದರೆ ಕುನಾಕ್ ಏನನ್ನು ಮೆಚ್ಚಿಕೊಳ್ಳುತ್ತಾನೋ ಅದನ್ನು ಕೊಡಬೇಕು,’ ಎಂದು ಮೇರಿ ವಾಸ್ಲೇವ್ನಾಗೆ ಹೇಳಿದ. 

’ನಿಮ್ಮ ಮಗ ನನ್ನ ಕುನಾಕ್!’ ಮತ್ತೆ ತನ್ನ ತೊಡೆಯೇರಿದ್ದ ಮಗುವಿನ ಗುಂಗುರು ಕೂದಲು ನೇವರಿಸುತ್ತ ಹಾಜಿ ಮುರಾದ್ ರಶಿಯನ್ ಭಾಷೆಯಲ್ಲಿ ಹೇಳಿದ. 

’ನಿಮ್ಮ ಈ ದರೋಡೆಕೋರನನ್ನು ನೋಡಿದರೆ ಖುಷಿ ಆಗತ್ತೆ! ಅವನ ಕಠಾರಿಯನ್ನ ಬೂಲ್ಕಾ ಮೆಚ್ಚಿದ, ಅವನು ಅದನ್ನು ಕೊಟ್ಟೇಬಿಟ್ಟ!’ ಎಂದು ಮೇರಿ ವಾಸಿಲೇವ್ನಾ ತನ್ನ ಗಂಡನಿಗೆ ಫ್ರೆಂಚ್ ಭಾಷೆಯಲ್ಲಿ ಹೇಳಿದಳು. 

ಬೂಲ್ಕ ಅ ಕಠಾರಿಯನ್ನು ಅಪ್ಪನಿಗೆ ತೋರಿಸಿದ. 

’ಬಹಳ ಬೆಲೆ ಬಾಳತ್ತೆ. ನಾವೂ ಅವನಿಗೆ ಏನಾದರೂ ಕೊಡಬೇಕು,’ ಎಂದು ವರಾನ್ತಸೋವ್ ಫ್ರೆಂಚಿನಲ್ಲಿ ಹೇಳಿದ.

ಹಾಜಿ ಮುರಾದ್ ಕಣ್ಣು ತಗ್ಗಿಸಿ, ಮಗುವಿನ ಗುಂಗುರು ಕೂದಲು ನೇವರಿಸುತ್ತ ’ದ್ಝಿಗಿಟ್, ದ್ಝಿಗಿಟ್! ಧೀರ ಧೀರ!’ ಅನ್ನುತ್ತ ಕೂತಿದ್ದ. 

ವರಾನ್ತಸೋವ್ ಡಮಾಸ್ಕ್ ಉಕ್ಕಿನ ಕಠಾರಿಯನ್ನು ಒರೆಯಿಂದ ಅರ್ಧ ಆಚೆಗೆಳೆದು, ಅದರ ಮೊನಚು, ಕಠಾರಿಯ ಅಲಗಿನ ನಡುವೆ ಉದ್ದಕ್ಕೆ ಕೊರೆದಿದ್ದ ಗೆರೆಯನ್ನು ನೋಡುತ್ತ, ’ಬಹಳ ಚೆನ್ನಾಗಿದೆ! ಒಳ್ಳೆಯ ಕಠಾರಿ! ಥ್ಯಾಂಕ್ಸ್!’ ಅಂದ. 

’ಇದಕ್ಕೆ ಪ್ರತಿಯಾಗಿ ನಾನೇನು ಮಾಡಬೇಕು, ಕೇಳು,’ ಎಂದು ದುಭಾಷಿಗೆ ಹೇಳಿದ. 

ಹಾಜಿ ಮುರಾದ್ ತಟ್ಟನೆ ಹೇಳಿದ ಮಾತನ್ನು ದುಭಾಷಿ ತರ್ಜುಮೆ ಮಾಡುತ್ತ, ’ಏನೂ ಬೇಡವಂತೆ, ಪ್ರಾರ್ಥನೆ ಮಾಡುವುದಕ್ಕೆ ಸರಿಯಾದ ಜಾಗಕ್ಕೆ ಕರೆದುಕೊಂಡು ಹೋಗಬೇಕಂತೆ,’ ಅಂದ. 

ವರಾನ್ತಸೋವ್ ತನ್ನ ಸೇವಕನನ್ನು ಕರೆದು ಹಾಜಿ ಮುರಾದ್‌ನ ಕೋರಿಕೆಯನ್ನು ತಿಳಿಸಿದ. 

ಹಾಜಿ ಮುರಾದ್ ತನಗೆ ನೀಡಲಾದ ಕೋಣೆಯಲ್ಲಿ ಒಬ್ಬನೇ ಇರುವಾಗ ಅವನ ಮುಖದ ಭಾವ ಬದಲಾಯಿತು. ಮರುಕ, ಗಾಂಭೀರ್ಯ, ತೃಪ್ತಿ, ಸಂತೋಷಗಳ ಬದಲಾಗಿ ಕಳವಳ ತಾನೇ ತಾನಾಗಿ ಕಾಣುತಿತ್ತು. ಹಾಜಿ ಮುರಾದ್ ನಿರೀಕ್ಷಿಸಿದ್ದಕ್ಕಿಂತ ಹೆಚ್ಚು ಆದರ ಗೌರವಗಳೊಡನೆ ವರಾನ್ತಸೋವ್ ಅವನನ್ನು ಬರಮಾಡಿಕೊಂಡಿದ್ದ. ಸ್ವಾಗತ ಎಷ್ಟು ಉತ್ತಮವಾಗಿತ್ತೋ ಅಷ್ಟೇ ಮಟ್ಟಿಗೆ ವರಾನ್ತಸೋವ್ ಮತ್ತವನ ಅಧಿಕಾರಿಗಳ ಬಗ್ಗೆ ಹಾಜಿ ಮುರಾದ್‌ನಲ್ಲಿ ಅನುಮಾನ ಬೆಳೆದಿತ್ತು. ‘ನನ್ನನ್ನು ಹಿಡಿಯಬಹುದು, ಕೈಕಾಲಿಗೆ ಸರಪಳಿ ತೊಡಿಸಬಹುದು, ಸೈಬೀರಿಯಕ್ಕೆ ಕಳಿಸಬಹುದು, ಕೊಲ್ಲಬಹುದು, ’ಅನ್ನುವ ಭಯಗಳಿದ್ದವು. ಹಾಗಾಗಿ ಹುಷಾರಾಗಿದ್ದ. ಎಲ್ದಾರ್ ಕೋಣೆಗೆ ಬಂದಾಗ ನನ್ನ ಮುರೀದ್‌ಗಳಿಗೆ ಎಲ್ಲಿ ವಸತಿ ಮಾಡಿದ್ದಾರೆ, ಅವರ ಆಯುಧಗಳನ್ನು ಕಿತ್ತುಕೊಂಡರಾ, ಕುದುರೆಗಳು ಎಲ್ಲಿವೆ, ಎಂದು ಕೇಳಿದ. ನಮ್ಮ ಕುದುರೆಗಳೆಲ್ಲ ಪ್ರಿನ್ಸ್‌ನ ಲಾಯದಲ್ಲಿವೆ, ನಮ್ಮ ಜನರನ್ನು ಉಗ್ರಾಣಲ್ಲಿ ಮಲಗಿಸಿದ್ದಾರೆ, ಅವರವರ ಆಯುಧ ಅವರ ಹತ್ತಿರವೇ ಇವೆ, ದುಭಾಷಿ ಎಲ್ಲರಿಗೂ ಊಟ, ಚಹಾ ತಂದುಕೊಟ್ಟ ಎಂದು ಎಲ್ದಾರ್ ಹೇಳಿದ. 

ಹಾಜಿ ಮುರಾದ್ ಏನೂ ಅರ್ಥವಾಗದವನ ಹಾಗೆ ತಲೆ ಕೊಡವಿದ. ಉಡುಪು ತೆಗೆದು ಪ್ರಾರ್ಥನೆ ಮಾಡಿ, ಎಲ್ದಾರ್‌ನನ್ನು ಕರೆದು, ಬೆಳ್ಳಿಯ ಕಠಾರಿ ತೆಗೆದುಕೊಂಡು ಬಾ ಅಂದ. ಮತ್ತೆ ಉಡುಪು ತೊಟ್ಟು, ಸೊಂಟಕ್ಕೆ ಬೆಲ್ಟು ಬಿಗಿದು, ದಿವಾನ್‌ನ ಮೇಲೆ ಕಾಲಿಟ್ಟುಕೊಂಡು ಏನಾಗುತ್ತದೋ ಎಂದು ಕಾಯುತ್ತ ಕೂತ. 

ಮಧ್ಯಾಹ್ನ ನಾಲ್ಕು ಗಂಟೆಯ ಹೊತ್ತಿಗೆ ದುಭಾಷಿ ಬಂದು ಪ್ರಿನ್ಸ್‌ನೊಡನೆ ರಾತ್ರಿಯ ಊಟಕ್ಕೆ ಕರೆದ.  

ಊಟದ ಹೊತ್ತಿನಲ್ಲಿ ಹಾಜಿ ಮುರಾದ್ ಸ್ವಲ್ಪ ಪುಲಾವ್ ಬಿಟ್ಟರೆ ಮತ್ತೇನೂ ತಿನ್ನಲಿಲ್ಲ. ಪ್ರಿನ್ಸೆಸ್ ಪಾತ್ರೆಯ ಯಾವ ಭಾಗದಿಂದ ಪುಲಾವ್ ತೆಗೆದುಕೊಂಡಿದ್ದಳೋ ಅಲ್ಲಿಂದಲೇ ತಾನೂ ಪುಲಾವ್ ತೆಗೆದುಕೊಂಡ.

’ನಾವು ಅವನಿಗೆ ವಿಷ ಹಾಕಬಹುದು ಅನ್ನುವ ಭಯವಿದೆ, ನಾನು ಪುಲಾವ್ ಬಡಿಸಿಕೊಂಡಲ್ಲೇ ಅವನೂ ತೆಗೆದುಕೊಂಡ,’ ಎಂದು ಮೇರಿ ವಾಸಿಲೀವ್ನಾ ಗಂಡನಿಗೆ ಹೇಳಿದಳು. ತಕ್ಷಣ ಹಾಜಿ ಮುರಾದ್‌ನತ್ತ ತಿರುಗಿ ಮತ್ತೆ ಅವನು ಯಾವಾಗ ಪ್ರಾರ್ಥನೆ ಮಾಡುತ್ತಾನೆ ಎಂದು ದುಭಾಷಿಯ ಮೂಲಕ ಕೇಳಿದಳು. ಹಾಜಿ ಮುರಾದ್ ಐದು ಬೆರಳು ತೋರಿ, ಆಮೇಲೆ ಸೂರ್ಯನನ್ನು ತೋರಿಸಿದ. 

’ಹಾಗಾದರೆ ಸಮಯವಾಗುತ್ತ ಬಂತು,’ ವರಾನ್ತಸೋವ್ ತನ್ನ ಬ್ರೇಗೇ ಗಡಿಯಾರವನ್ನು ಜೇಬಿನಿಂದ ತೆಗೆದು ಒಂದು ಸ್ಪ್ರಿಂಗನ್ನು ಒತ್ತಿದ. ಅದು ನಾಲ್ಕು ಗಂಟೆಯ ಸದ್ದು ಮತ್ತೆ ಕಾಲು ಗಂಟೆಯನ್ನು ಸೂಚಿಸುವ ಇನ್ನೊಂದು ಸದ್ದನ್ನು ಹೊರಡಿಸಿತು. ಹಾಜಿ ಮುರಾದ್‌ಗೆ ಆಶ್ಚರ್ಯವಾಯಿತು. ಇನ್ನೊಮ್ಮೆ ಸದ್ದು ಹೊರಡಿಸುವಂತೆ ಕೇಳಿದ. ಗಡಿಯಾರವನ್ನು ನೋಡಿಕೊಡುತ್ತೇನೆ ಎಂದ. 

’ಇದೇ ಸರಿಯಾದ ಅವಕಾಶ. ಅವನಿಗೆ ಆ ಗಡಿಯಾರ ಉಡುಗೊರೆ ಕೊಡಿ!’ ಎಂದು ಪ್ರಿನ್ಸೆಸ್ ಫ್ರೆಂಚ್ ಭಾಷೆಯಲ್ಲಿ ಗಂಡನಿಗೆ ಹೇಳಿದಳು. 

ವರಾನ್ತಸೋವ್ ತಕ್ಷಣವೇ ಗಡಿಯಾರವನ್ನು ಹಾಜಿ ಮುರಾದ್‌ಗೆ ಕೊಟ್ಟ. 

ಹಾಜಿ ಮುರಾದ್ ಎದೆಯ ಮೇಲೆ ಕೈಯಿರಿಸಿ ಕೃತಜ್ಞತೆ ತೋರಿ, ಗಡಿಯಾರವನ್ನು ತೆಗೆದುಕೊಂಡು ಮತ್ತೆ ಮತ್ತೆ ಸ್ಪ್ರಿಂಗನ್ನು ಒತ್ತಿ ಮೆಚ್ಚಿದ. 

*

ಊಟವಾದ ಮೇಲೆ ಪ್ರಿನ್ಸ್‌ಗೆ ಸುದ್ದಿ ಬಂದಿತು. ಮೆಲ್ಲೆರ್ ಝಕೊಮೆಲ್ಸ್‌ಕಿಯ ಏಡ್-ಡಿ-ಕ್ಯಾಂಪ್ ಬಂದಿದ್ದ.

’ಹಾಜಿ ಮುರಾದ್ ಬಂದಿರುವ ಸಂಗತಿ ಜನರಲ್‌ಗೆ ತಿಳಿಯಿತು, ಅದನ್ನು ವರದಿ ಮಾಡಿಲ್ಲವೆಂದು ಜನರಲ್ ಬೇಸರಗೊಂಡಿದ್ದಾರೆ, ತಕ್ಷಣವೇ ಹಾಜಿ ಮುರಾದ್‌ನನ್ನು ಕರೆದುಕೊಂಡು ಬರಬೇಕು ಎಂದು ತಿಳಿಸಿದ್ದಾರೆ,’ ಎಂದು ಏಡ್ ಡಿ ಕ್ಯಾಂಪ್ ಪ್ರಿನ್ಸ್‌ಗೆ ತಿಳಿಸಿದ. 

‘ಜನರಲ್ ಅವರ ಆಜ್ಞೆ ನೆರವೇರುತ್ತದೆ,’ ಎಂದು ವರಾನ್ತಸೋವ್ ಉತ್ತರ ಕೊಟ್ಟ. ಏಡ್ ಡಿ ಕ್ಯಾಂಪ್ ಯಾಕೆ ಬಂದಿದ್ದಾನೆ, ಜನರಲ್‌ನ ಆಜ್ಞೆ ಏನು ಅನ್ನುವುದನ್ನೆಲ್ಲ ದುಭಾಷಿಯ ಮೂಲಕ ಹಾಜಿ ಮುರಾದ್‌ಗೆ ವಿವರವಾಗಿ ತಿಳಿಸಿ ತನ್ನೊಡನೆ ಮೆಲ್ಲರ್ ನನ್ನು ಕಾಣಲು ಬರಬೇಕೆಂದು ಹೇಳಿದ.  

ಏಡ್ ಡಿ ಕ್ಯಾಂಪ್ ಯಾವ ಕಾರಣಕ್ಕೆ ಬಂದಿದ್ದಾನೆ ಅನ್ನುವುದನ್ನು ತಿಳಿದು ತನ್ನ ಗಂಡನಿಗೂ ಜನರಲ್‌ಗೂ ಮನಸ್ತಾಪವಾಗುವುದು ಖಚಿತ ಎಂದು ಮೇರಿ ವಾಸಿಲೇವ್ನಾಗೆ ತಟ್ಟನೆ ಹೊಳೆಯಿತು. ಹಾಜಿ ಮುರಾದ್‌ನನ್ನು ಕರಕೊಂಡು ಹೋಗುವಾಗ ತಾನೂ ಜೊತೆಗೆ ಬರುವುದಾಗಿ ಹಟ ಹಿಡಿದಳು. ಗಂಡ ಎಷ್ಟು ಬೇಡವೆಂದರೂ ಅವಳು ಒಪ್ಪಲಿಲ್ಲ. 

’ಇದು ನನ್ನ ಕೆಲಸವೇ ಹೊರತು ನಿನ್ನದಲ್ಲ ಅಂತ ನೀನು ಹೇಳಬಹುದು. ಆದರೂ ನಾನು ಜನರಲ್‌ನ ಹೆಂಡತಿಯನ್ನು ನೋಡಲು ಹೋಗುವುದನ್ನು ತಡೆಯಲಾರೆ,’ ಎಂದು ಫ್ರೆಂಚಿನಲ್ಲಿ ಹೇಳಿದಳು. 

’ಜನರಲ್‌ನ ಹೆಂಡತಿಯನ್ನು ನೋಡುವುದಕ್ಕೆ ಬೇರೆ ಯಾವಾಗಲಾದರೂ ಹೋಗು, ಈಗ ಬೇಡ,’ ಎಂದು ಅವನು ಫ್ರೆಂಚಿನಲ್ಲಿ ಉತ್ತರ ಹೇಳಿದ.

’ಈಗಲೇ ಹೋಗಬೇಕು ಅಂತ ನನ್ನಾಸೆ!’

ಏನೂ ಮಾಡಲಾಗದೆ ವರಾನ್ತಸೋವ್ ಒಪ್ಪಿದ. ಅವರು ಮೂವರೂ ಹೊರಟರು. 

*

ಮೆಲರ್‌ನನ್ನು ಕಾಣಲು ಹೋದಾಗ ಅವನು ಉತ್ಸಾಹವಿರದ ಸೌಜನ್ಯ ತೋರುತ್ತ ಮೇರಿ ವಾಸಿಲೇವ್ನಾಳನ್ನು ತನ್ನ ಹೆಂಡತಿಯ ಬಳಿ ಕರೆದುಕೊಂಡು ಹೋಗಿ ಬಿಟ್ಟ. ಹಾಜಿ ಮುರಾದ್‌ನನ್ನು ಕಾಯುವ ಕೋಣೆಯಲ್ಲಿ ಕೂರಿಸು, ನಾನು ಹೇಳುವವರೆಗೆ ಅವನನ್ನು ಹೊರಗೆ ಬಿಡಬೇಡ ಎಂದು ಆಜ್ಞೆ ಮಾಡಿದ. 

’ಪ್ಲೀಸ್…’ ಅನ್ನುತ್ತ ಆಫೀಸು ರೂಮಿನ ಬಾಗಿಲು ತೆಗೆದು ವರಾನ್ತಸೋವ್‌ನನ್ನು ಮೊದಲು ಒಳಕ್ಕೆ ಹೋಗುವಂತೆ ಕೋರಿ ತಾನು ಆಮೇಲೆ ಒಳಕ್ಕೆ ಹೋದ. 

ಆಫೀಸು ರೂಮಿನೊಳಕ್ಕೆ ಹೋದ ತಕ್ಷಣ ಪ್ರಿನ್ಸ್‌ನನ್ನು ಕೂರಲೂ ಹೇಳದೆ ಅವನೆದುರು ನಿಂತು, ’ನಾನು ಇಲ್ಲಿನ ಮುಖ್ಯಾಧಿಕಾರಿ. ಹಾಗಾಗಿ ಶತ್ರುವಿನೊಡನೆ ನಡೆಯುವ ಎಲ್ಲ ಸಂಧಾನದ ಮಾತುಕಥೆಗಳೂ ನನ್ನ ಮುಖಾಂತರ ನಡೆಯಬೇಕು! ಹಾಜಿ ಮುರಾದ್ ನಮ್ಮ ಪಕ್ಷಕ್ಕೆ ಬರುವ ಸಂಗತಿಯನ್ನು ನೀವು ಯಾಕೆ ನನಗೆ ತಿಳಿಸಲಿಲ್ಲ?’ ಎಂದು ಕೇಳಿದ. 

’ದೂತನೊಬ್ಬ ಬಂದಿದ್ದ. ಹಾಜಿ ಮುರಾದ್ ನನ್ನೆದುರಿಗೆ ಮಾತ್ರ ಶರಣಾಗುತ್ತಾನೆ ಅನ್ನುವ ಸುದ್ದಿ ಹೇಳಿದ,’ ಎಂದು ಉತ್ತರಿಸಿದ ವರಾನ್ತಸೋವ್. ಅವನ ಉದ್ವೇಗ ಹೆಚ್ಚುತ್ತಿತ್ತು. ಕೋಪಗೊಂಡ ಜನರಲ್ ಒರಟಾಗಿ ಏನಾದರೂ ಹೇಳಿಯಾನು ಎಂದು ನಿರೀಕ್ಷೆ ಮಾಡುತ್ತಿದ್ದ. ಹಾಗೆಯೇ ಜನರಲ್‌ನ ಕೋಪ ಅವನಿಗೂ ಸಾಂಕ್ರಾಮಿಕವಾಗಿ ತಗುಲಿತ್ತು. 

’ನನಗೆ ಸುದ್ದಿ ಯಾಕೆ ತಿಳಿಸಲಿಲ್ಲ ಅಂತ ಕೇಳಿದೆ…’

’ತಿಳಿಸುವವನಿದ್ದೆ, ಬ್ಯಾರನ್, ಆದರೆ…’

’ನನ್ನನ್ನ ಬ್ಯಾರನ್ ಅಂತ ಮಾತಾಡಿಸಬಾರದು, ಯುವರ್ ಎಕ್ಸಲೆನ್ಸಿ ಅನ್ನಬೇಕು.’ ಬ್ಯಾರನ್ ಮನಸಿನಲ್ಲಿ ಅದುಮಿಟ್ಟುಕೊಂಡಿದ್ದ ಸಿಟ್ಟು ಸ್ಫೋಟಿಸಿತು. ಮನಸಿನಲ್ಲಿ ಕುದಿಯುತ್ತಿದ್ದುದನ್ನೆಲ್ಲ ಹೇಳಿಬಿಟ್ಟ. 

’ನಾನು ಇಪ್ಪತ್ತೇಳು ವರ್ಷ ಚಕ್ರವರ್ತಿಗಳ ಸೇವೆ ಸಲ್ಲಿಸಿದ್ದೇನೆ. ಕುಟುಂಬದ ಸಂಬಂಧ ಮನೆತನದ ಸಂಬಂಧ ಹೇಳಿಕೊಂಡು ನಿನ್ನೆ ಮೊನ್ನೆ ಕೆಲಸಕ್ಕೆ ಸೇರಿದವರು ನನ್ನ ಮೂಗಿನ ಕೆಳಗೇ ತಮಗೆ ಸಂಬಂಧಪಡದೆ ಇರುವ ವಿಚಾರಗಳಲ್ಲಿ ಆಜ್ಞೆಮಾಡುವುದನ್ನ ನೋಡಬೇಕಾಗಿದೆ!’ ಅಂದ. 

’ಯುವರ್ ಎಕ್ಸಲೆನ್ಸಿ, ದಯವಿಟ್ಟು ಸರಿಯಲ್ಲದ ಸಂಗತಿಗಳನ್ನು ಹೇಳಬಾರದೆಂದು ಕೋರುತ್ತೇನೆ!’ ಅನ್ನುತ್ತ ವರಾನ್ತಸೋವ್ ಅವನ ಮಾತು ತಡೆದ. 

’ಸರಿಯಾದದ್ದೇ ಹೇಳುತ್ತಿದ್ದೇನೆ. ನಾನು ಇದನ್ನ ಇಷ್ಟಕ್ಕೇ ಬಿಡಲ್ಲ…’ ಅನ್ನುತ್ತ ಜನರಲ್ ಇನ್ನೂ ರೇಗಿದ. 

ಆ ಕ್ಷಣದಲ್ಲಿ ಮೇರಿ ಮಾಸಿಲೇವ್ನಾ ಸ್ಕರ್ಟನ್ನು ಸರಬರ ಸದ್ದು ಮಾಡಿಕೊಂಡು, ತನ್ನ ಜೊತೆಯಲ್ಲಿ ಮೆಲ್ಲೆರ್ ಝಕೊಮೆಲ್ಸ್‌ಕಿಯ ಸಭ್ಯ ಪತ್ನಿಯನ್ನೂ ಕರೆದುಕೊಂಡು ಆ ಕೋಣೆಗೆ ಬಂದಳು. 

’ಬ್ಯಾರನ್, ಬ್ಯಾರನ್! ನಮ್ಮ ಸೈಮನ್ ನಿಮ್ಮ ಮನಸ್ಸು ಕೆಡಿಸುವುದಕ್ಕೆ ನೋಡಲಿಲ್ಲ…’ ಅನ್ನುತ್ತ ಮಾತು ಶುರು ಮಾಡಿದಳು.

’ನಾನು ಅದರ ಬಗ್ಗೆ ಹೇಳುತ್ತಿಲ್ಲ, ಪ್ರಿನ್ಸೆಸ್…’

’ನಿಮಗೇ ಗೊತ್ತಲ್ಲವಾ, ಇಲ್ಲಿಗೇ ಬಿಡೋಣ ಇದನ್ನ! ಒಳ್ಳೆಯ ಜಗಳಕ್ಕಿಂತ ಕೆಟ್ಟ ಶಾಂತಿ ವಾಸಿ, ಅನ್ನುತ್ತಾರಲ್ಲ! ಅಯ್ಯೋ ದೇವರೇ, ಇದೇನು ಹೇಳಿದೆ!’ ಅನ್ನುತ್ತ ನಕ್ಕಳು. 

ಸಿಟ್ಟುಗೊಂಡಿದ್ದ ಜನರಲ್ ಚೆಲುವೆಯ ಮರುಳುನಗೆಗೆ ಸೋತು ಹೋದ. ಅವನ ಮೀಸೆಯ ಅಡಿಯಲ್ಲಿ ಸಣ್ಣದೊಂದು ನಗು ಮೂಡಿತು.

’ಒಪ್ಪಿದೆ, ನಾನು ಮಾಡಿದ್ದು ತಪ್ಪು, ಆದರೆ…’ ಅನ್ನುತ್ತಿದ್ದ ವರಾನ್ತಸೋವ್‌ನನ್ನು ಜನರಲ್ ತಡೆದ.

’ನಾನೂ ಸ್ವಲ್ಪ ಅತಿಯಾಗಿ ಮಾತಾಡಿದೆ,’ ಅಂದ ಮಿಲರ್ ಪ್ರಿನ್ಸ್‌ನತ್ತ ತನ್ನ ಕೈ ಚಾಚಿದ.

ಶಾಂತಿ ಮರುಸ್ಥಾಪನೆಗೊಂಡಿತು. ಹಾಜಿ ಮುರಾದ್‌ನನ್ನು ಸದ್ಯಕ್ಕೆ ಮೆಲ್ಲೆರ್‌ನೊಡನೆ ಬಿಡಬೇಕೆಂದು, ಆನಂತರ ಲೆಫ್ಟ್ ಫ್ಲಾಂಕಿನ ಕಮಾಂಡರ್ ಬಳಿಗೆ ಕಳಿಸಬೇಕೆಂದು ತೀರ್ಮಾನವಾಯಿತು. 

ಪಕ್ಕದ ಕೋಣೆಯಲ್ಲಿದ್ದ ಹಾಜಿ ಮುರಾದ್‌ನಿಗೆ ಅವರ ಮಾತೆಲ್ಲವೂ ಅರ್ಥವಾಗದಿದ್ದರೂ ಅವನು ತಿಳಿಯಬೇಕಾದ ಸಂಗತಿಗಳೆಲ್ಲ ತಿಳಿದವು. ಅಂದರೆ-ಅವರು ನನ್ನ ಬಗ್ಗೆ ಜಗಳವಾಡುತ್ತಿದ್ದಾರೆ, ಅಂದರೆ ನಾನು ಶಮೀಲ್‌ನನ್ನು ತೊರೆದು ಬಂದದ್ದು ರಶಿಯದವರಿಗೆ ಬಹಳ ಮುಖ್ಯವಾದ ಸಂಗತಿ, ಹಾಗಾಗಿ ಅವರು ನನ್ನ ಕೊಲ್ಲುವುದಿಲ್ಲ, ಗಡೀಪಾರೂ ಮಾಡುವುದಿಲ್ಲ, ನಾನು ನನಗೆ ಬೇಕಾದ ಸಂಗತಿಗಳಿಗೆ ಹಕ್ಕೊತ್ತಾಯ ಮಂಡಿಸಬಹುದು ಎಂದು ತಿಳಿಯಿತು. ಹಾಗೆಯೇ ಮೆಲ್ಲೆರ್ ಝಕೊಮೆಲ್ಸ್‌ಕಿ ಉನ್ನತ ಅಧಿಕಾರಿಯಾಗಿದ್ದರೂ ಅವನಿಗೆ ತನ್ನ ಕೈಕೆಳಗಿನ ವರಾನ್ತಸೋವ್‌ಗೆ ಇರುವಷ್ಟು ಪ್ರಭಾವವಿಲ್ಲ, ವರಾನ್ತಸೋವ್ ಪ್ರಮುಖ ವ್ಯಕ್ತಿ, ಮೆಲ್ಲೆರ್ ಝಕೊಮೆಲ್ಸ್‌ಕಿ ಅಷ್ಟು ಪ್ರಮುಖನಲ್ಲ. ಹಾಗಾಗಿ ಅವನನ್ನು ಕರೆಸಿದಾಗ ಹಾಜಿ ಮುರಾದ್ ಹೆಮ್ಮೆಯಿಂದ ತಲೆ ಎತ್ತಿ ನಿಂತಿದ್ದ, ಬಿಳಿಯ ತ್ಸಾರ್ ಚಕ್ರವರ್ತಿಯ ಸೇವೆ ಮಾಡುವುದಕ್ಕಾಗಿ ಬೆಟ್ಟಗಳ ನಾಡಿನಿಂದ ಬಂದಿದ್ದೇನೆ, ವಿವರಗಳನ್ನು ನನ್ನ ಸರದಾರ, ಅಂದರೆ ಕಮಾಂಡರ್ ಇನ್ ಛೀಫ್ ಪ್ರಿನ್ಸ್ ವರಾನ್ತಸೋವ್‌ಗೆ ಮಾತ್ರ ಟಿಫ್ಲಿಸ್‌ನಲ್ಲಿ ಹೇಳುತ್ತೇನೆ ಎಂದು ಗಂಭೀರವಾಗಿ ಹೇಳಿದ.

| ಮುಂದುವರೆಯುವುದು |

ಟಿಪ್ಪಣಿ

ಪ್ರಿನ್ಸ್ ವರಾನ್ತಸೋವ್: ವೋಝ್‌ದ್ವಿಶೆನ್ಸ್‌ಕ್‌ ಕೋಟೆಯ ಮುಖ್ಯಸ್ಥ ಪ್ರಿನ್ಸೆಸ್ ಮೇರಿ ವಾಸಿಲೇವ್ನಾ: ವಾರಾನ್ತಸೋವ್‍ನ ಹೆಂಡತಿ

ಪ್ರಿನ್ಸೆಸ್ ಮೇರಿಯ ಮಗ, ಅವಳ ಮೊದಲ ಮದುವೆಯಿಂದ ಹುಟ್ಟಿದ್ದವನು. 

ಜನರಲ್ ಮೆಲ್ಲೆರ್ ಝಕೊಮೆಲ್ಸ್‌ಕಿ: ಸೈನ್ಯದ ದಂಡನಾಯಕ

ಕುನಾಕ್: ಆಪ್ತಮಿತ್ರ. ಜಿಗರಿದೋಸ್ತ್

ಪೋಲ್ಟರಾಟ್ಸ್‌ಕಿ: ವಾರಾನ್ತಸೋವ್‍ನ ಕೈಕೆಳಗಿನ ಅಧಿಕಾರಿ

ಬ್ಯಾರನ್: ರಶಿಯನ್ ಉನ್ನತವರ್ಗಗಳಲ್ಲಿ, ಪ್ರಿನ್ಸ್, ಕೌಂಟ್ ಮತ್ತು ಬ್ಯಾರನ್, ಕೊನೆಯ ಅಂತಸ್ತಿಗೆ ಸೇರಿದ ವ್ಯಕ್ತಿ. ಮೊದಲ ಗುಂಪು ಆನುವಂಶಿಕವಾಗಿ ಮೇಲ್ವರ್ಗ, ಮಿಕ್ಕ ಎರಡು ಪೂರಾ ಆನುವಂಶಿಕವಲ್ಲದೆ, ಪದವಿಯೆಂಬಂತೆ ತ್ಸಾರ್ ಚಕ್ರವರ್ತಿಯಿಂದ ಪ್ರದಾನವಾಗುವುದೂ ಇತ್ತು. 

ಚಿತ್ರಗಳು

ಬ್ರೆಗೇ ಗಡಿಯಾರ: ಫ್ರೆಂಚ್ ಕಲ್ಪನೆಯನ್ನು ಆಧರಿಸಿ 1795ರಿಂದ ಸ್ವಿಟ್ಸರ್ ಲ್ಯಾಂಡ್‍ನಲ್ಲಿ ತಯಾರಾಗುತ್ತಿರುವ ಅತಿ ದುಬಾರಿಯಾದ ಗಡಿಯಾರ. 

‍ಲೇಖಕರು Admin

November 11, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: