ಪ್ರೊ ಓ ಎಲ್ ನಾಗಭೂಷಣಸ್ವಾಮಿ ‘ಹಾಜಿ ಮುರಾದ್’ – ಶರಣಾಗತಿ…

ಪ್ರೊ ಓ. ಎಲ್.‌ ನಾಗಭೂಷಣ ಸ್ವಾಮಿಯವರು ಕನ್ನಡದ ಖ್ಯಾತ ವಿಮರ್ಶಕರು ಹಾಗೂ ಅನುವಾದಕರು. ಇಂಗ್ಲೀಷ್‌ ಅಧ್ಯಾಪಕರಾಗಿ ನಿವೃತ್ತಿ ಹೊಂದಿದ್ದಾರೆ. 

ಕುವೆಂಪು ಭಾಷಾ ಭಾರತಿ, ಕೇಂದ್ರ ಸಾಹಿತ್ಯ ಅಕಾಡಮಿ, ಜೆ. ಕೃಷ್ಣಮೂರ್ತಿ ಫೌಂಡೇಶನ್‌ ಹೀಗೆ ವಿವಿಧ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದಾರೆ.

60ಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿದ್ದಾರೆ. ವಿಮರ್ಶೆಯ ಪರಿಭಾಷೆ  ಇವರ ಬಹುಚರ್ಚಿತ ಕೃತಿಗಳಲ್ಲೊಂದು. ನಕ್ಷತ್ರಗಳು, ಏಕಾಂತ ಲೋಕಾಂತ, ನನ್ನ ಹಿಮಾಲಯ, ಇಂದಿನ ಹೆಜ್ಜೆ, ಪ್ರಜ್ಞಾ ಪ್ರವಾಹ ತಂತ್ರ, ನುಡಿಯೊಳಗಾಗಿ ಮುಂತಾದವು ಇವರ ಸ್ವತಂತ್ರ ಕೃತಿಗಳು. ಕನ್ನಡ ಶೈಲಿ ಕೈಪಿಡಿ, ನಮ್ಮ ಕನ್ನಡ ಕಾವ್ಯ, ವಚನ ಸಾವಿರ ಮೊದಲಾದವು ಸಂಪಾದಿತ ಕೃತಿಗಳು. ಜಿಡ್ಡು ಕೃಷ್ಣಮೂರ್ತಿಯವರ ಕೆಲವು ಕೃತಿಗಳು, ಸಿಂಗರ್‌ ಕತೆಗಳು, ಟಾಲ್ಸ್ಟಾಯ್‌ನ ಸಾವು ಮತ್ತು ಇತರ ಕತೆಗಳು, ರಿಲ್ಕ್‌ನ ಯುವಕವಿಗೆ ಬರೆದ ಪತ್ರಗಳು, ಕನ್ನಡಕ್ಕೆ ಬಂದ ಕವಿತೆ, ರುಲ್ಪೊ ಸಮಗ್ರ ಸಾಹಿತ್ಯ ಬೆಂಕಿ ಬಿದ್ದ ಬಯಲು, ಪ್ಲಾಬೊ ನೆರೂಡನ ಆತ್ಮಕತೆ ನೆನಪುಗಳು, ಯುದ್ಧ ಮತ್ತು ಶಾಂತಿ ಹೀಗೆ ಹಲವು ಕೃತಿಗಳನ್ನು ಅನುವಾದಿಸಿದ್ದಾರೆ.

ಚಂದ್ರಶೇಖರ ಕಂಬಾರ, ಜಿ.ಎಸ್‌. ಶಿವರುದ್ರಪ್ಪ ಹೀಗೆ ಕೆಲವರ ಕೃತಿಗಳನ್ನು ಇಂಗ್ಲೀಷಿಗೆ ಅನುವಾದಿಸಿದ್ದಾರೆ.

ವಿಮರ್ಶೆಯ ಪರಿಭಾಷೆಗಾಗಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ತೀನಂಶ್ರೀ ಬಹುಮಾನ, ಸ ಸ ಮಾಳವಾಡ ಪ್ರಶಸ್ತಿಯನ್ನು ಪಡೆದಿದ್ದಾರೆ. ಕೇಂದ್ರ ಸಾಹಿತ್ಯ ಅಕಾಡೆಮಿಯ ಭಾಷಾಂತರ ಬಹುಮಾನವು ಸೇರಿದಂತೆ ಹಲವು ಪ್ರಶಸ್ತಿಗಳನ್ನು ಪಡೆದಿದ್ದಾರೆ.

ಪ್ರತಿ ಶುಕ್ರವಾರ ಅವಧಿಯಲ್ಲಿ ಪ್ರೊ. ನಾಗಭೂಷಣ ಸ್ವಾಮಿ ಅವರು ಅನುವಾದಿಸಿರುವ ಟಾಲ್‌ಸ್ಟಾಯ್‌ನ ಕೊನೆಯ ಕಾದಂಬರಿ ಹಾಜಿ ಮುರಾದ್‌ ಪ್ರಕಟವಾಗಲಿದೆ.

5

ಬೆಳಗ್ಗೆ ಅಷ್ಟು ಹೊತ್ತಿಗೇ, ಇನ್ನು ಕತ್ತಲು ಕತ್ತಲು ಇರುವಾಗಲೇ ಪೋಲ್ತರಾತ್ಸ್‌ಕಿಯ ಮುಖಂಡತ್ವದಲ್ಲಿ ಎರಡು ಕಂಪನಿಯಷ್ಟು, ಅಂದರೆ ನೂರ ಅರುವತ್ತು ಸೈನಿಕರು ಕೊಡಲಿ ಹೊತ್ತು ಶಾಗಿರಿನ್ಸ್‌ಕ್ ಗೇಟನ್ನು ದಾಟಿ ಆರು ಮೈಲು ದೂರದ ನಡಿಗೆ ಆರಂಭಿಸಿದ್ದರು. ಆರು ಮೈಲು ನಡೆದು, ಉತ್ತಮ ಗುರಿಗಾರರನನ್ನು ಸಾಲಾಗಿ ಕಾವಲಿಗೆ ನಿಲ್ಲಿಸಿ, ಬೆಳಕು ಹರಿಯುವ ಹೊತ್ತಿಗೆ ಮರ ಕಡಿಯುವ ಕೆಲಸ ಶುರು ಮಾಡಿದ್ದರು. ಎಂಟು ಗಂಟೆಯ ಹೊತ್ತಿಗೆ ರಾತ್ರಿಯ ಹೊಗೆಯ ಲೇಪವನ್ನು ಹೊತ್ತು ಕ್ಯಾಂಪ್ ಫೈರಿನ ಮೇಲೆ ಸಣ್ಣಗೆ ಸದ್ದು ಮಾಡುತ್ತ ಚಟಪಟಿಸುತಿದ್ದ ವದ್ದೆಯಾದ ಹಸಿರು ಟೊಂಗೆಗಳನ್ನು ಕವಿದಿದ್ದ ಕಾವಳ ನಿಧಾನವಾಗಿ ಕರಗಿತು. ಇದುವರೆಗೂ ಐದು ಹೆಜ್ಜೆ ಮುಂದೆ ಇರುವುದನ್ನೂ ಕಾಣಲಾಗದಿದ್ದ ಮರಕಡಿಯುವವರು ಈಗ ತಾವು ಅಲ್ಲಲ್ಲಿ ಹಾಕಿಕೊಂಡಿದ್ದ ಬೆಂಕಿಯನ್ನೂ ಕಾಡಿನ ಹಾದಿಗೆ ಅಡ್ಡ ಬಿದ್ದ ಮರಗಳನ್ನೂ ನೋಡಲು ಸಾಧ್ಯವಾಗಿತ್ತು. ಕಾವಳದಲ್ಲಿ ಬೆಳಕಿನ ಚುಕ್ಕೆಯಾಗಿ ಕಾಣುತಿದ್ದ ಸೂರ್ಯ ಮತ್ತೆ ಮರೆಯಾಗಿದ್ದ. 

ರಸ್ತೆಯಿಂದ ಸಾಕಷ್ಟು ದೂರದಲ್ಲಿದ್ದ ಆ ಬೆಣದಲ್ಲಿ ಪೋಲ್ತರಾತ್ಸ್‌ಕಿ ಮತ್ತವನ ಕೈಕೆಳಗಿನ ಅಧಿಕಾರಿ ತಿಖಾನೋವ್, ೩ನೆಯ ಕಂಪನಿಯ ಇಬ್ಬರು ಕಿರಿಯ ಅಧಿಕಾರಿಗಳು, ಕ್ಯಾಡೆಟ್ ಕಾಲೇಜಿನಲಿ ಪೋಲ್ರರಾತ್ಸ್‌ಕಿಯ ಸಹಪಾಠಿಯಾಗಿದ್ದು, ದ್ವಂದ್ವಯುದ್ಧದಲ್ಲಿ ಪಾಲ್ಗೊಂಡಿದ್ದ ಕಾರಣಕ್ಕೆ ಹಿಂಬಡ್ತಿ ಪಡೆದು ಈಗ ಪೇದೆಯಾಗಿದ್ದ ಗಾರ್ಡ್ಸ್ ವಿಭಾಗದ ಮಾಜಿ ಅಧಿಕಾರಿ ಬ್ಯಾರನ್ ಫ್ರೀಝ್ ಇವರೆಲ್ಲರೂ ನಗಾರಿಗಳ ಮೇಲೆ ಕೂತಿದ್ದರು. ಅವರ ಸುತ್ತಲೂ ಆಹಾರದ ತುಣುಕು ಮೆತಿದ್ದ ಪೇಪರ್ ತುಂಡು, ಸೇದಿ ಬಿಸಾಕಿದ ಸಿಗರೇಟು ತುಂಡು, ಖಾಲಿ ಬಾಟಲಿ ಚೆದುರಿ ಬಿದ್ದಿದ್ದವು.  ಆಫೀಸರುಗಳು ಒಂದಷ್ಟು ವೋಡ್ಕಾ ಕುಡಿದಿದ್ದರು, ಈಗ ತಿಂಡಿ ತಿನ್ನುತ್ತ ಬಾರ್ಲಿಯಲ್ಲಿ ಮಾಡಿದ ಪೋರ್ಟ್ ಕುಡಿಯುತಿದ್ದರು. ನಗಾರಿಯವನು ಅವರಿಗಾಗಿ ಮೂರನೆಯ ಬಾಟಲಿಯ ಮುಚ್ಚಳ ತೆರೆಯುತಿದ್ದ. ರಾತ್ರಿಯ ನಿದ್ರೆ ಕಡಮೆಯಾಗಿದ್ದರೂ ಪೋಲ್ರರಾತ್ಸ್‌ಕಿ ಉತ್ಸಾದಲ್ಲಿದ್ದ, ಅವನೊಳಗೆ ಒಳ್ಳೆಯತನವೂ ಬೇಜವಾಬ್ದಾರಿಯ ಖುಷಿಯೂ ತಲೆ ಎತಿದ್ದವು. ಅಪಾಯ ಸಂಭವಿಸಬಹುದು ಅನ್ನುವಂಥ ಸ್ಥಿತಿಯಲ್ಲಿ ತನ್ನ ಸೈನಿಕರು ಮತ್ತು ಗೆಳೆಯರೊಡನೆ ಇರುವಾಗಲೆಲ್ಲ ಅವನ ಮನಸ್ಸು ಹೀಗಿರುತಿತ್ತು. 

ಆಫಿಸರುಗಳು ಇತ್ತೀಚಿನ ಸುದ್ದಿಯ ಬಗ್ಗೆ ಉತ್ಸಾಹಪಡುತ್ತ ಜೋರು ಜೋರಾಗಿ ಮಾತಾಡುತಿದ್ದರು. ಅದು ಜನರಲ್ ಸ್ಲೆಪ್‌ಸ್ತೋವ್‌ನ ಸಾವಿನ ಸುದ್ದಿ. ಆ ಸೈನಿಕರು ಸಾವನ್ನು ಬದುಕಿನ ಬಹುಮುಖ್ಯ ಗಳಿಗೆ, ಬದುಕನ್ನು ಮುಗಿಸಿ ಬದುಕಿನ ಮೂಲಸ್ರೋತಕ್ಕೆ ಹಿಂದಿರುಗುವ ಗಳಿಗೆಯಾಗಿ ಕಾಣುತಿರಲಿಲ್ಲ. ಬದಲಾಗಿ ಕೈಯಲ್ಲಿ ಕತ್ತಿ ಹಿಡಿದು ಬೆಟ್ಟಗಾಡು ಜನರ ನಡುವೆ ನುಗ್ಗಿ ಸಾಹಸ ಮೆರೆದು ಅವರನ್ನು ತರಿದಿಕ್ಕಿದ ಶೌರ್ಯದ ಉದಾಹರಣೆಯಾಗಿಯಷ್ಟೇ ಸಾವು ಅವರಿಗೆ ಕಾಣುತಿತ್ತು. 

ಮುಖಾಮುಖಿಯಾಗಿ ನಡೆಯುವ ಕಾದಾಟ ಅದನ್ನು ಆಮೇಲೆ ವರ್ಣಿಸುವ ರೀತಿಯಲ್ಲಿ ಇರುವುದೇ ಇಲ್ಲ ಅನ್ನುವುದು ಕಾಕಸಸ್ ಪ್ರದೇಶದ ಯುದ್ಧಗಳಲ್ಲಿ ಪಾಲ್ಗೊಂಡಿದ್ದವರಿಗೆ ಗೊತ್ತಿತ್ತು. ಕಲ್ಪನೆ ಮಾಡಿಕೊಂಡು ಹೇಳಿದ ಹಾಗೆ ನಡೆದಿರುವುದೇ ಇಲ್ಲ, ಹೇಳಿದ ಕಥೆಯಲ್ಲಿ ಓಡಿ ಹೋಗುತ್ತಿರುವ ಸೈನಿಕರಷ್ಟೇ ಕತ್ತಿಯಲ್ಲೋ ಬಯೊನೆಟ್ಟಿನಲ್ಲೋ ತಿವಿಸಿಕೊಂಡು ಸತ್ತಿರುತ್ತಾರೆ ಅನ್ನುವುದು ಗೊತ್ತಿತ್ತು. ಅಧಿಕಾರಿಗಳು ಈಗ ಮಾತ್ರ ನಗಾರಿಗಳ ಮೇಲೆ ಅಸ್ತವ್ಯಸ್ತವಾಗಿ, ಕೆಲವರು ಗಂಭೀರವಾಗಿ ಕೂತು, ಶತ್ರುಗಳ ಜೊತೆಯಲ್ಲಿ ಕೈ ಕೈ ಮಿಲಾಯಿಸಿದ ಕಾಲ್ಪನಿಕ ಕಥೆಗಳನ್ನು ಒಂದಷ್ಟು ಹೆಮ್ಮೆ, ಒಂದಷ್ಟು ತಮಾಷೆ ಬೆರೆತ ಕಥೆಯಾಗಿ, ಸಾವಿನ ಬಗ್ಗೆ ತಲೆಕೆಡಿಸಿಕೊಳ್ಳದೆ ತಣ್ಣಗೆ ಕುಡಿಯುತ್ತ, ತಿನ್ನುತ್ತ, ಹೇಳುತಿದ್ದರು. ಸ್ಲೆಪ್‌ಸ್ತೋವ್‌ ತೀರಿಕೊಂಡ ಹಾಗೆ ತಾವೂ ಯಾವುದೇ ಕ್ಷಣದಲ್ಲಿ ಸಾಯಬಹುದು ಅನ್ನುವುದು ಅವರ ಮನಸಿಗೆ ಬಂದಿರಲಿಲ್ಲ. ಅವರ ನಿರೀಕ್ಷೆಯನ್ನು ನಿಜಗೊಳಿಸುವ ಹಾಗೆ, ಖುಷಿಗೊಳಿಸಿ ಪ್ರಚೋದಿಸುವ ಹಾಗೆ ರಸ್ತೆಯ ಎಡ ಬದಿಯಲ್ಲಿ ರೈಫಲಿನಿಂದ ಹಾರಿದ ಗುಂಡಿನ ಸದ್ದು ಕೇಳಿಸಿತು. ಕಾವಳ ತುಂಬಿದ ಗಾಳಿಯಲ್ಲಿ ಖುಷಿಯಾಗಿ ಸಿಳ್ಳೆ ಹಾಕುತ್ತ ಹಾರಿ ಬಂದ ಬುಲೆಟ್ಟು ಅವರ ತಲೆಯ ಮೇಲೆ ಹಾದು ಹೋಗಿ ಮರಕ್ಕೆ ಬಡಿಯಿತು. ಶತ್ರುಗಳ ಗುಂಡಿಗೆ ಪ್ರತಿಯಾಗಿ ಸೈನಿಕರು ಹಾರಿಸಿದ ಗುಂಡಿನ ಹಲವು ಸದ್ದೂ ಕೇಳಿದವು. 

ಪೋಲ್ತರಾತ್ಸ್‌ಕಿ ಸಡಗರದ ದನಿಯಲ್ಲಿ, ’ಹಲೋ! ನಮ್ಮ ಸೈನಿಕರ ಮೇಲೆ ಗುಂಡು ಹಾರಿಸುತಾ ಇದಾರೆ! ಅಗೋ ಅಲ್ಲಿ ಕೋಸ್ತ್ಯಾ!’ ಅನ್ನುತ್ತ ಫ್ರೀಝ್‌ನತ್ತ ತಿರುಗಿದ. ’ಈಗ ನಿನ್ನ ಚಾನ್ಸು. ನಿನ್ನ ಕಂಪನಿಗೆ ಹೋಗಿ ಸೇರಿಕೋ. ನಾನು ನಮ್ಮ ತುಕಡಿಯನ್ನು ಕರೆದುಕೊಂಡು ಕಾವಲಿನವರ ಸಹಾಯಕ್ಕೆ ಹೋಗುತೇನೆ. ಯುದ್ಧ ಮಜವಾಗಿರತ್ತೆ. ಆಮೇಲೆ ಒಳ್ಳೆಯ ವರದಿ ಬರೆಯೋಣ. ನಮಗೆ ಪದಕ ಸಿಗಬಹುದು!’ ಅಂದ.

ಫ್ರೀಝ್ ತಟ್ಟನೆ ಹಾರಿ ನಿಂತು, ತನ್ನ ತುಕಡಿಯವರು ಇದ್ದ, ಈಗ ಹೊಗೆ ಕವಿದಿದ್ದ ಜಾಗಕ್ಕೆ ಚುರುಕಾಗಿ ಹೆಜ್ಜೆ ಹಾಕಿದ.

ಪೋಲ್ತರಾತ್ಸ್‌ಕಿಯ ಕರ್ಬಡ ಕುದುರೆಯನ್ನು ಕರೆತಂದ ಸೇವಕ. ಪೋಲ್ತರಾತ್ಸ್‌ಕಿ ಕುದುರೆಯನ್ನೇರಿ ತನ್ನ ತುಕಡಿ ಇದ್ದಲ್ಲಿಗೆ ಹೋದ. ಗುಂಡಿನ ಸದ್ದು ಕೇಳುತಿದ್ದ ದಿಕ್ಕಿಗೆ ತುಕಡಿಯನ್ನು ನಡೆಸಿದ. ಔಟ್ ಪೋಸ್ಟುಗಳು ಕಾಡಿನ ಅಂಚಿನಲ್ಲಿದ್ದವು. ಔಟ್ ಪೋಸ್ಟುಗಳ ಎದುರಿಗೆ ಕಂದರಕ್ಕೆ ಸಾಗುವ ಇಳಿಜಾರು ಬಯಲಿತ್ತು. ಕಾಡಿನ ದಿಕ್ಕಿಗೆ ಗಾಳಿ ಬೀಸುತಿತ್ತು. ಇಳಿಜಾರಾಗಿದ್ದ ಇಡೀ ಬಯಲು ಮಾತ್ರವಲ್ಲ ಕಂದಕದಾಚಿನ ಪ್ರದೇಶವೂ ನೇರವಾಗಿ ಕಣ್ಣಿಗೆ ಬೀಳುತಿದ್ದವು. ಪೋಲ್ತರಾತ್ಸ್‌ಕಿ ಮುಂದಿನ ಸಾಲಿನ ಸೈನಿಕರ ಹತ್ತಿರಕ್ಕೆ ಹೋಗುವ ಹೊತ್ತಿಗೆ ಸೂರ್ಯ ಮಂಜು ಮುಸಕನ್ನು ದಾಟಿ ಹೊರ ಬಂದಿದ್ದ. ಕಂದರದ ಆ ಬದಿಯಲ್ಲಿ, ಸುಮಾರು ಕಾಲು ಮೈಲು ದೂರದಲ್ಲಿ, ಕಾಡಿನ ಅಂಚಿನಲ್ಲಿ ಕೆಲವರು ಕುದುರೆ ಸವಾರರು ಕಂಡರು. ಅವರೆಲ್ಲ ಚೆಚೆನ್ಯಾದ ಜನ, ಹಾಜಿ ಮುರಾದ್‌ನನ್ನು ಅಟ್ಟಿಸಿಕೊಂಡು ಬಂದವರು. ಅವನು ರಶಿಯನ್ನರನ್ನು ಭೇಟಿಮಾಡುವುದನ್ನು ಕಾಣಲು ಅವರೆಲ್ಲ ಬಂದಿದ್ದರು. ಅವರಲ್ಲೊಬ್ಬಾತ ಸೈನಿಕರ ಸಾಲಿನತ್ತ ಗುಂಡು ಹಾರಿಸಿದ. ಸೈನಿಕರೂ ಪ್ರತಿಯಾಗಿ ಗುಂಡು ಹಾರಿಸಿದರು. ಚೆಚೆನ್ಯಾದವರು ಹಿಂದೆ ಸರಿದರು, ಗುಂಡು ಹಾರುವುದು ನಿಂತಿತು. 

ಅಲ್ಲಿಗೆ ಬಂದ ಪೋಲ್ತರಾತ್ಸ್‌ಕಿ ಗುಂಡು ಹಾರಿಸುವಂತೆ ಆಜ್ಞೆಮಾಡಿದ. ಆ ಮಾತು ಕಿವಿಗೆ ಬೀಳುತಿದ್ದ ಹಾಗೆ ಇಡೀ ಗುರಿಕಾರರ ಸಾಲು ಖುಷಿಯಾಗಿ ಒಂದೇ ಸಮ ಗುಂಡು ಹಾರಿಸುವುದಕ್ಕೆ ಶುರುಮಾಡಿತು. ಬಂದೂಕಿನ ಸದ್ದು, ಅಲ್ಲಲ್ಲಿ ಮೂಡಿ ಕರಗುತಿದ್ದ ಹೊಗೆಮೋಡಗಳು ಇವೆಲ್ಲ ಅವರಿಗೆ ಬೇಸರ ಕಳೆಯುವ ರಂಜನೆಯಾಗಿ ಒದಗಿ ಬಂದು ಮತ್ತೆ ಮತ್ತೆ ಬಂದೂಕು ಲೋಡು ಮಾಡುತ್ತ ಗುಂಡು ಹಾರಿಸುತ್ತಲೇ ಇದ್ದರು. ಈ ಯುದ್ಧೋತ್ಸಾಹ ಚೆಚೆನ್ಯಾದವರನ್ನೂ ಸೋಕಿತು. ಅವರೂ ನಮ್ಮ ಸೈನಿಕರ ಮೇಲೆ ಗುಂಡು ಹಾರಿಸಿದರು. ಅವುಗಳಲ್ಲೊಂದು ಯಾರೋ ಸೈನಿಕನಿಗೆ ಗಾಯ ಮಾಡಿತು. ಅವನು ಅದೇ ಅವ್ದೀವ್, ಹಿಂದಿನ ರಾತ್ರಿ ಅಡಗಿ ಹೊಂಚು ಹಾಕಲು ಹೋಗಿದ್ದವನು. 

ಅವನ ಗೆಳೆಯರು ಹತ್ತಿರ ಬಂದಾಗ ಅವನು ನೆಲದ ಮೇಲೆ ಬಿದ್ದು, ಹೊಟ್ಟೆಗೆ ಆಗಿದ್ದ ಗಾಯವನ್ನು ಎರಡೂ ಕೈಯಲ್ಲಿ ಒತ್ತಿ ಹಿಡಿದಿದ್ದ, ಅತ್ತಿತ್ತ ಹೊರಳಾಡುತ್ತ ಸಣ್ಣದನಿಯಲ್ಲಿ ಮುಲುಗುತಿದ್ದ. ಅವನು ಪೋಲ್ತರಾತ್ಸ್‌ಕಿಯ ತುಕಡಿಗೆ ಸೇರಿದವನು. ಗುಂಪುಗೂಡಿದ್ದ ಸೈನಿಕರನ್ನು ಕಂಡು ಅವರ ಹತ್ತಿರಕ್ಕೆ ಬಂದ ಪೋಲ್ತರಾತ್ಸ್‌ಕಿ.

’ಏನಾಯಿತು? ಏಟು ಬಿತ್ತಾ? ಎಲ್ಲಿಗೆ?’ ಅಂತ ಕೇಳಿದ.

ಅವ್ದೀವ್ ಮಾತಾಡಲಿಲ್ಲ. 

’ನಾನು ಲೋಡ್ ಮಾಡುತ್ತಿದ್ದೆ, ಯುವರ್ ಆನರ್, ಆಗ ಕ್ಲಿಕ್ ಅಂತ ಸದ್ದು ಕೇಳಿಸಿತು, ನೋಡಿದರೆ ಇವನು ಬಂದೂಕು ಬಿಸಾಕಿದ್ದ,’  ಅವ್ದೀವ್‌ನ ಜೊತೆಯಲ್ಲಿದ್ದ ಸೈನಿಕ ಹೇಳಿದ. 

’ತ್ಚ್ ತ್ಚ್,’ ಎಂದು ಲೊಚಗುಟ್ಟಿ ’ತುಂಬಾ ನೋಯುತ್ತಾ?’ ಪೋಲ್ತರಾತ್ಸ್‌ಕಿ ಕೇಳಿದ. 

’ಅಂಥಾ ನೋವಿಲ್ಲ, ನಡೆಯಕ್ಕಾಗಲ್ಲ. ಕುಡಿಯಕ್ಕೆ ಸ್ವಲ್ಪ ವೋಡ್ಕಾ ಕೊಡಿ, ಯುವರ್ ಆನರ್!’ ಅಂದ ಅವ್ದೀವ್. 

ತಗಡಿನ ಮುಚ್ಚಳದಲ್ಲಿ ಕಾಕಸಸ್‌ನಲ್ಲಿದ್ದ ಸೈನಿಕರು ಕುಡಿಯುತ್ತಿದ್ದಂಥ ವೋಡ್ಕಾ ಥರದ ಮದ್ಯ ಒಂದಷ್ಟು ತಂದು ಅವ್ದೀವ್‌ಗೆ ಕೊಟ್ಟರು. ಅವ್ದೀವ್ ಕುಡಿಯಲು ಪ್ರಯತ್ನಪಟ್ಟ, ಆಗಲಿಲ್ಲ.

’ಯಾಕೋ ಆಗುತ್ತಿಲ್ಲ, ನೀವೇ ಕುಡಿಯಿರಿ!’

ಪಾನೋವ್ ಮದ್ಯವನ್ನು ಕುಡಿದ.

ಅವ್ದೀವ್ ಎದ್ದು ಕೂತ, ತಟ್ಟನೆ ಕುಸಿದು ಮಲಗಿದ. ಸೈನಿಕರು ದೊಡ್ಡ ನಿಲುವಂಗಿಯನ್ನು ನೆಲದ ಮೇಲೆ ಹರಡಿ ಅವನನ್ನು ಅದರ ಮೇಲೆ ಮಲಗಿಸಿದರು. 

’ಯುವರ್ ಆನರ್, ಕರ್ನಲ್ ಬರುತ್ತಾ ಇದ್ದಾರೆ,’ ಎಂದು ಸಾರ್ಜೆಂಟ್ ಮೇಜರ್ ಪೋಲ್ತರಾತ್ಸ್‌ಕಿಗೆ ಹೇಳಿದ. 

’ಸರಿ, ಇವನನ್ನ ನೋಡಿಕೊಳ್ಳುತ್ತೀಯಾ?’ ಎಂದು ಕೇಳಿದ ಪೋಲ್ತರಾತ್ಸ್‌ಕಿ ಚಾವಟಿಯನ್ನು ಬೀಸಿ, ಕುದುರೆಯನ್ನು ಕುಕ್ಕುಲೋಟದಲ್ಲಿ ಓಡಿಸುತ್ತ ವರಾನ್ತಸೋವ್‌ನನ್ನು ಎದುರುಗೊಳ್ಳಲು ಹೋದ. 

ವರಾನ್ತಸೋವ್ ಇಂಗ್ಲೆಂಡಿನ ಚೆಸ್ಟ್‍ನಟ್ ಗಿಲ್ಡಿಂಗ್ (ಬೀಜ ಹೊಡೆದ ಕಂದು ಬಣ್ಣದ ಉತ್ತಮ ಜಾತಿಗೆ ಸೇರಿದ) ಕುದುರೆಯನ್ನೇರಿ ಬರುತಿದ್ದ. ಒಬ್ಬ ಅಡ್ಜುಟೆಂಟ್, ಒಬ್ಬ ಕೊಸಾಕ್ ಮತ್ತೊಬ್ಬ ಚೆಚೆನ್ ಭಾಷೆಯ ದುಬಾಷಿ ಅವನೊಡನೆ ಇದ್ದರು. 

’ಏನು ನಡೀತಿದೆ ಇಲ್ಲಿ?’ ವರಾನ್ತಸೋವ್ ಕೇಳಿದ.

’ನಮ್ಮ ಮುಂದಿನ ಸಾಲಿನ ಸೈನಿಕರ ಮೇಲೆ ದಾಳಿ ಮಾಡಿದರು,’ ಪೋಲ್ತರಾತ್ಸ್‌ಕಿ ಉತ್ತರ ಕೊಟ್ಟ.

’ದಾಳಿಗೂ ನೀನೇ ವ್ಯವಸ್ಥೆ ಮಾಡಿದ್ದೆಯೋ ಹೇಗೆ!’

’ಇಲ್ಲಾ ಪ್ರಿನ್ಸ್, ಇಲ್ಲ! ಅವರಾಗಿ ಅವರೇ ಮುಂದೆ ಬಂದು ದಾಳಿ ಮಾಡಿದರು,’ ಪೋಲ್ತರಾತ್ಸ್‌ಕಿ ನಗುತ್ತ ಹೇಳಿದ. 

’ನಮ್ಮ ಸೈನಿಕನಿಗೆ ಗಾಯವಾಯಿತಂತೆ?’

’ಹ್ಞೂಂ. ಪಾಪ. ಒಳ್ಳೆಯ ಸೈನಿಕ.’

’ಸೀರಿಯಸ್ಸಾ?’

ಸೀರಿಯಸ್ ಅನಿಸತ್ತೆ. ಹೊಟ್ಟೆಗೆ ಏಟಾಗಿದೆ.’

’ನಾನು ಎಲ್ಲಿಗೆ ಹೋಗತಾ ಇದೇನೆ, ಗೊತ್ತಾ ನಿನಗೆ?’ ವರಾನ್ತಸೋವ್ ಕೇಳಿದ.

’ಗೊತ್ತಿಲ್ಲ.’

’ಊಹೆ ಮಾಡಕ್ಕಾಗತ್ತಾ?’

’ಇಲ್ಲ.’

’ಹಾಜಿ ಮುರಾದ್ ಶರಣಾಗಿದ್ದಾನೆ. ನಾವು ಅವನನ್ನು ಭೇಟಿ ಮಾಡಲು ಹೋಗುತಿದ್ದೇವೆ.’

’ಹೌದಾ? ನಿಜವಾಗಲೂ? ಇಂಪಾಸಿಬಲ್!’

’ಅವನು ಕಳಿಸಿದ ದೂತ ಬಂದಿದ್ದ,’ ಖುಷಿಯ ನಗು ಅದುಮಿಟ್ಟುಕೊಳ್ಳುತ್ತ ವರಾನ್ತಸೋವ್ ಹೇಳಿದ, ’ಅವನು ಶಾಲಿನ್ ಬ್ಯಾಣದಲ್ಲಿ ನಮನ್ನ ಇನ್ನು ಸ್ವಲ್ಪ ಹೊತ್ತಿಗೆ ಭೇಟಿ ಮಾಡತಾನೆ. ಗುರಿ ಚೆನ್ನಾಗಿರುವವರನ್ನ ಬ್ಯಾಣದ ಅಂಚಿನಲ್ಲಿ ನಿಲ್ಲಿಸಿ ನನ್ನ ಜೊತೆ ಬಾ.’

’ತಿಳಿಯಿತು,’ ಅನ್ನುತ್ತ ಪೋಲ್ತರಾತ್ಸ್‌ಕಿ ಸೆಲ್ಯೂಟು ಮಾಡಿ ತನ್ನ ತುಕಡಿ ಇದ್ದಲ್ಲಿಗೆ ಹೋದ. ಬ್ಯಾಣದ ಬಲಬದಿಗೆ ಸ್ವತಃ ತಾನೇ ಗುರಿಕಾರರನ್ನ ಕರೆದುಕೊಂಡು ಹೊರಟ, ಎಡಗಡೆಗೆ ಒಂದಷ್ಟು ಜನರನ್ನು ಕರೆದುಕೊಂಡುಹೋಗುವಂತೆ ಸರ್ಜೆಂಟ್ ಮೇಜರ್‌ಗೆ ಹೇಳಿದ. ಇಷ್ಟು ಹೊತ್ತಿಗೆ ಮಿಕ್ಕ ಸೈನಿಕರು ಗಾಯಗೊಂಡಿದ್ದ ಅವ್ದೀವ್‌ನನ್ನು ಕೋಟೆಗೆ ವಾಪಸು ಕರೆದುಕೊಂಡು ಹೋಗಿದ್ದರು. 

ವರಾನ್ತಸೋವ್‌ನ ಬಳಿಗೆ ವಾಪಸಾಗುತ್ತಿರುವಾಗ ಪೋಲ್ರರಾತ್ಸ್ಕ್ಕಿಗೆ ತನ್ನ ಬೆನ್ನ ಹಿಂದೆ ಕೆಲವು ಕುದುರೆ ಸವಾರರು ಬರುತ್ತಿರುವುದು ತಿಳಿಯಿತು.  ತಿರುಗಿ ನೋಡಿದರೆ ಆ ಗುಂಪಿನ ಮುಂದಾಳಾಗಿ ಮನಸ್ಸು ತುಂಬುವಂಥ ಭವ್ಯಾಕೃತಿಯ ಮನುಷ್ಯನೊಬ್ಬ ಕುದುರೆಯ ಮೇಲಿದ್ದ. ಅವನ ತಲೆಗೆ ರುಮಾಲಿತ್ತು, ಚಿನ್ನದ ಕುಸುರಿಯ ಹಿಡಿಕೆಯಿದ್ದ ಆಯುಧಗಳಿದ್ದವು. ಅವನು ಹಾಜಿ ಮುರಾದ್. ಪೋಲ್ತರಾತ್ಸ್‌ಕಿಯ ಸಮೀಪಕ್ಕೆ ಬಂದು ತಾರ್ತರ್ ಭಾಷೆಯಲ್ಲಿ ಏನೋ ಹೇಳಿದ. ಪೋಲ್ತರಾತ್ಸ್‌ಕಿ ಹುಬ್ಬೇರಿಸಿ, ಏನೂ ಅರ್ಥವಾಗಲಿಲ್ಲ ಅನ್ನುವ ಹಾಗೆ ಕೈ ಚೆಲ್ಲಿ ನಕ್ಕ. ಆ ನಗುವಿಗೆ ಹಾಜಿ ಮುರಾದ್ ನಗುವಿನ ಪ್ರತ್ಯುತ್ತರ ನೀಡಿದ. ಎಳೆಯ ಮಗುವಿನ ನಗುವಿನಂಥ ಆ ನಗು ಪೋಲ್ತರಾತ್ಸ್‌ಕಿಯನ್ನು ಸೆಳೆಯಿತು. ಮಂಕು ಕವಿದ, ಬಿಗಿದ ಮುಖದ, ಬುಡಕಟ್ಟಿನ ನಾಯಕನನ್ನು ಪೋಲ್ತರಾತ್ಸ್‌ಕಿ ನಿರೀಕ್ಷೆ ಮಾಡಿದ್ದ; ಈಗ ಚೈತನ್ಯಪೂರ್ಣನಾದ ಮಗುವಿನಂಥ ನಗುವಿದ್ದ, ಹಳೆಯ ಗೆಳೆಯ ಅನಿಸುವಂಥ ಅಪರಿಚಿತ ಅವನ ಕಣ್ಣೆದುರಿಗಿದ್ದ. ಅವನ ವಿಶೇಷವೆಂದರೆ ಅವನ ಕಣ್ಣು. ವಿಶಾಲ ಮುಖದಲ್ಲಿ ಸ್ವಲ್ಪ ದೂರದೂರವಾಗಿ ಕೂರಿಸಿದಂತಿದ್ದವು, ದಟ್ಟ ಕಪ್ಪು ಹುಬ್ಬು ಇದ್ದವು. ಆ ಕಣ್ಣಿನಲ್ಲಿ ಎದುರಿಗಿರುವವರನ್ನು ಬಿಡಿಸಿ ಬಿಡಿಸಿ ನೋಡುವ ಹಾಗೆ ಗಮನಿಸುವ ನೋಟವಿತ್ತು. 

ಹಾಜಿ ಮುರಾದ್‌ನ ತಂಡದಲ್ಲಿ ಐದು ಜನರಿದ್ದರು. ಅವರಲ್ಲೊಬ್ಬ ಖಾನ್ ಮಹೋಮ-ಹಿಂದಿನ ರಾತ್ರಿ ಪ್ರಿನ್ಸ್ ವರಾನ್ತಸೋವ್‌ನನ್ನು ಕಾಣಲು ಬಂದಿದ್ದವನು, ಕೆಂಪನೆಯ ದುಂಡು ಮುಖದ, ಕಪ್ಪು ಕಣ್ಣಿನ, ಕಣ್ಣೆವೆ ಇಲ್ಲದ, ಬದುಕಿನ ಉಲ್ಲಾಸ ಚಿಮ್ಮುತಿದ್ದ ಮನುಷ್ಯ. ಆಮೇಲೆ, ಅವರ್ ಖಾನೇಫಿ ಇದ್ದ, ತಾವ್ಲಿನ್ ಬುಡಕಟ್ಟಿನ ದಷ್ಟಪುಟ್ಟ ಮೈಕಟ್ಟಿನ, ಮೈತುಂಬ ಕೂದಲಿದ್ದ, ಕೂಡು ಹುಬ್ಬಿನ ಮನುಷ್ಯ ಅವನು. ಹಾಜಿ ಮುರಾದ್‌ನ ಎಲ್ಲ ಆಸ್ತಿಯ ಉಸ್ತುವಾರಿ ಅವನದು. ಅವನು ಸರಂಜಾಮು ಚೀಲಗಳನ್ನು ಹೇರಿದ್ದ ಹೆಚ್ಚುವರಿ ಕುದುರೆಯನ್ನು ನಡೆಸಿಕೊಂಡು ಬರುತಿದ್ದ. ಆ ಗುಂಪಿನಲ್ಲಿ ಇಬ್ಬರು ವಿಶೇಷವಾಗಿ ಗಮನ ಸೆಳೆಯುತಿದ್ದರು. ಮೊದಲನೆಯವನು ಲೆಸ್ಘಿಯನ್ ಯುವಕ, ಅಗಲ ಭುಜದವನು, ಹೆಣ್ಣಿನ ಹಾಗೆ ಸಣ್ಣ ಸೊಂಟವಿದ್ದವನು, ಈಗ ತಾನೇ ಮುಖದ ಮೇಲೆ ಕಂದು ಗಡ್ಡ ಒಂದಿಷ್ಟು ಮೂಡುತಿದ್ದವನು. ಮುದ್ದಾದ ಮೇಕೆಯ ಕಣ್ಣಿನವನು. ಇವನು ಎಲ್ದಾರ್. ಇನ್ನೊಬ್ಬನು ಗಾಮ್ಝಾಲೊ. ಅವನು ಚೆಚೆನ್ ಬುಡಕಟ್ಟಿನವನು, ಪುಟ್ಟ ಕೆಂಪು ಗಡ್ಡ, ಮೂಗಿನ ಮೇಲೊಂದು ಗಾಯದ ಗುರುತು ಇದ್ದವು. ಅವನಿಗೆ ಒಂದೇ ಕಣ್ಣು. ಅದೇ ಆಗ ರಸ್ತೆಯ ಮೇಲೆ ಕಾಣಿಸಿದ ವರಾನ್ತಸೋವ್‌ನನ್ನು ಪೋಲ್ತರಾತ್ಸ್‌ಕಿ ಹಾಜಿ ಮುರಾದ್‌ಗೆ ತೋರಿಸಿದ. ಹಾಜಿ ಮುರಾದ್ ಕುದುರೆಯಮೇಲೆ ಕೂತೇ ಅವನ ಹತ್ತಿರಕ್ಕೆ ಹೋಗಿ, ಬಲಗೈಯನ್ನು ಎದೆಯ ಮೇಲಿರಿಸಿ ಟಾರ್ಟರ್ ಭಾಷೆಯಲ್ಲಿ ಏನೋ ಹೇಳಿದ. ದುಭಾಷಿ ಅದನ್ನು ತರ್ಜುಮೆ ಮಾಡಿ ಹೇಳಿದ: 

’ನಾನು ರಶ್ಯಾದ ಚಕ್ರವರ್ತಿಗಳಿಗೆ ಶರಣಾಗಲು ಬಂದಿದ್ದೇನೆ, ನಾನು ಚಕ್ರವರ್ತಿಗಳ ಸೇವೆಯನ್ನು ಮಾಡುತ್ತೇನೆ, ಬಹಳ ಹಿಂದೆಯೇ ಹೀಗೆ ಮಾಡಬೇಕು ಅನ್ನುವ ಮನಸಿತ್ತು. ಆದರೆ ಶಮೀಲ್ ನನ್ನನ್ನು ಬಿಡಲಿಲ್ಲ-ಎಂದು ಹೇಳುತಿದ್ದಾರೆ,’ ಅಂದ ದುಭಾಷಿ. 

ದುಭಾಷಿ ಹೇಳಿದ್ದನ್ನು ಕೇಳಿಸಿಕೊಂಡ ವರಾನ್ತಸೋವ್ ಮೆದು ಚರ್ಮದ ಗ್ಲೌಸ್ ತೊಟ್ಟಿದ್ದ ಕೈಯನ್ನು ಹಾಜಿ ಮುರಾದ್‌ನತ್ತ ಚಾಚಿದ. ಹಾಜಿ ಮುರಾದ್ ಆ ಕೈಯನ್ನು ನೋಡುತ್ತ ಒಂದು ಕ್ಷಣ ಹಿಂಜರಿದ. ಮೇಲೆ ಆ ಕೈಯನ್ನು ದೃಢವಾಗಿ ಒತ್ತಿ ಏನನ್ನೋ ಹೇಳಿ ಮೊದಲು ದುಭಾಷಿಯನ್ನು ಆಮೇಲೆ ವರಾನ್ತಸೋವ್‌ನನ್ನು ನೋಡಿದ.

’ನೀವಲ್ಲದೆ ಬೇರೆ ಯಾರಿಗೂ ಶರಣಾಗುವ ಮನಸಿರಲಿಲ್ಲ. ಯಾಕೆಂದರೆ ನೀವು ಒಬ್ಬ ಸರ್ದಾರನ ಮಗ, ನಿಮ್ಮ ಬಗ್ಗೆ ಬಹಳ ಗೌರವವಿದೆ-ಅನ್ನುತಿದ್ದಾರೆ,’ ಎಂದ ದುಭಾಷಿ.

ವರಾನ್ತಸೋವ್ ಕೃತಜ್ಞತೆಯನ್ನು ಸೂಚಿಸುವ ಹಾಗೆ ತಲೆದೂಗಿದ. ಹಾಜಿ ಮುರಾದ್ ಮತ್ತೇನೋ ಹೇಳುತ್ತ ತನ್ನ ಜೊತೆಗಾರರತ್ತ ಕೈ ತೋರಿಸಿದ.

’ನನ್ನ ನೆಚ್ಚಿನ ಬಂಟರೂ ರಶಿಯನ್ನರ ಸೇವೆ ಮಾಡುತಾರೆ- ಅನ್ನುತಿದ್ದಾರೆ ಎಂದ ದುಭಾಷಿ. 

ವರಾನ್ತಸೋವ್ ಅವರತ್ತಲೂ ತಿರುಗಿ ತಲೆದೂಗಿದ. 

ಖುಷಿ ತುಂಬಿದ ಕಪ್ಪು ಕಣ್ಣಿನ, ಕಣ್ಣೆವೆ ಇಲ್ಲದ ಖಾನ್ ಮಹೋಮ ಕೂಡ ತಲೆದೂಗಿ ಏನೋ ಹೇಳಿದ. ಅದನ್ನು ಕೇಳಿದ ಮೈಯೆಲ್ಲ ಕೂದಲಿದ್ದ ಅವರ್‌ನ ತುಟಿ ಹಿಗ್ಗಿ ಆನೆಯ ದಂತದಂಥ ಹಲ್ಲು ಕಾಣುವ ಹಾಗೆ ನಕ್ಕ. ಕೆಂಪು ಕೂದಲಿನ ಗಾಮ್ಝಾಲೊನ ಒಂದು ಕೆಂಪು ಕಣ್ಣು ವರಾನ್ತಸೋವ್‌ನನ್ನು ಸುಮ್ಮನೆ ನೋಡಿತು, ಇನ್ನೊಂದು ಕಣ್ಣು ಕುದುರೆಯ ಕಿವಿಯ ಮೇಲೇ ನೆಟ್ಟಿತ್ತು. 

ವರಾನ್ತಸೋವ್ ಮತ್ತು ಹಾಜಿ ಮುರಾದ್ ತಮ್ಮ ಅನುಚರರೊಂದಿಗೆ ಕೋಟೆಗೆ ಹಿಂದಿರುಗುವಾಗ ಇಷ್ಟು ಹೊತ್ತೂ ಸಾಲಾಗಿದ್ದ ಸೈನಿಕರು ಚದುರಿ ಅಲ್ಲಲ್ಲಿ ಗುಂಪುಗೂಡಿ ಮಾತಾಡುತ್ತಾ ತಮ್ಮದೇ ವ್ಯಾಖ್ಯಾನಗಳನ್ನು ಮಾಡುತ್ತ ನಡೆದರು. 

’ಎಷ್ಟು ಜನರ ಸರ್ವನಾಶ ಮಾಡಿದ ಈ ದುಷ್ಟ! ಈಗ ಇವನನ್ನ ಸರಿಯಾಗಿ ವಿಚಾರಿಸಿಕೊಳ್ಳತಾರೆ!’

’ಬಿಡತಾರಾ ಮತ್ತೆ! ಅವನು ಶಾಮಿಲ್‌ನ ಬಲಗೈಯಾಗಿದ್ದವನು. ಈಗ-’

’ಏನಂದರೂ ಫೈನ್ ಫೆಲೋ. ಚೆನ್ನಾಗಿ ಕುದುರೆ ಸವಾರಿ ಮಾಡತಾನೆ ಧ್ಸೀಜಿಟ್, ವೀರ ಯೋಧ!’

’ಆ ಕೆಂಚುತಲೆಯವನು? ನಮ್ಮನ್ನೇ ವಂಡರಗಣ್ಣಲ್ಲಿ ನೋಡತಾನೆ, ಪ್ರಾಣೀ ಥರಾ!’

’ಬೇಟೆ ನಾಯಿ ಥರಾ ಇದಾನೆ!’

ಅವರೆಲ್ಲರೂ ಕೆಂಚುತಲೆಯವನನ್ನು ವಿಶೇಷವಾಗಿ ಗಮನಿಸಿದ್ದರು. 

ಮರ ಕಡಿಯುತಿದ್ದ ಜಾಗಕ್ಕೆ ಬಂದಾಗ ಮುಖ್ಯ ರಸ್ತೆಗೆ ಹತ್ತಿರದಲ್ಲಿದ್ದ ಸೈನಿಕರು ಓಡಿ ಬಂದರು. ತುಕಡಿಯ ಅಧಿಕಾರಿ ಅವರನ್ನೆಲ್ಲ ಕೆಲಸಕ್ಕೆ ಹೋಗಿ ಎಂದು ಗದರಿಸಿದ. ವರಾನ್ತಸೋವ್ ಅವನನ್ನು ತಡೆದ. 

’ಅವರೂ ಹಳೆಯ ಸ್ನೇಹಿತನನ್ನು ನೋಡಲಿ ಬಿಡು,’ ಅಂದ.

’ಇವನು ಯಾರು ಗೊತ್ತಾ?’ ತನಗೆ ಸಮೀಪದಲ್ಲಿದ್ದ ಸೈನಿಕನತ್ತ ತಿರುಗಿ ವರಾನ್ತಸೋವ್ ಕೇಳಿದ. ಅವನ ದನಿಯಲ್ಲಿ ಇಂಗ್ಲಿಶ್ ಉಚ್ಚಾರಣೆಯ ನೆರಳಿತ್ತು. 

’ಗೊತ್ತಿಲ್ಲ, ಯುವರ್ ಎಕ್ಸಲೆನ್ಸಿ.’

’ಹಾಜಿ ಮುರಾದ್! ಕೇಳಿದ್ದೀಯಾ ಅವನ ಹೆಸರು?’

’ಕೇಳದೆ ಇರುತ್ತೇವಾ, ಯುವರ್ ಎಕ್ಸಲೆನ್ಸಿ! ಅವನನ್ನ ಎಷ್ಟು ಸಲ ಸೋಲಿಸಿಲ್ಲ ನಾವು!’

’ನಮಗೂ ಸರಿಯಾಗೇ ಕೊಟ್ಟಿದಾನೆ ಅವನು.’

’ನಿಜ, ಯುವರ್ ಎಕ್ಸಲೆನ್ಸಿ!’ ಎಂದ ಸೈನಿಕ ಖುಷಿಯಾದ. ಸೈನ್ಯಾಧಿಪತಿಯ ಜೊತೆ ಮಾತಾಡಿದ್ದೇ ಅವನಿಗೊಂದು ಸಂಭ್ರಮ. 

ಅವರೆಲ್ಲ ನನ್ನ ಬಗ್ಗೆಯೇ ಮಾತಾಡುತ್ತಿದ್ದಾರೆ ಅನ್ನುವುದು ಹಾಜಿ ಮುರಾದ್‌ಗೆ ಅರ್ಥವಾಯಿತು. ಖುಷಿಯ ನಗುವಿನಲ್ಲಿ ಅವನ ಕಣ್ಣು ಹೊಳೆದವು. 

ವರಾನ್ತಸೋವ್ ಅತ್ಯಂತ ಸಂತೋಷಚಿತ್ತನಾಗಿ ಕೋಟೆಗೆ ಹಿಂದಿರುಗಿದ.

ಅಧ್ಯಾಯ 5 ಅವಧಿ ಟಿಪ್ಪಣಿಗಳು

ಪೋಲ್ತರಾತ್ಸ್‌ಕಿ ಸೈನಿಕ ಕಂಪನಿಯ ಕ್ಯಾಪ್ಟನ್
ತಿಖಾನೋವ್, ಪೋಲ್ತರಾತ್ಸ್ಕಿಯ ಕೈಕೆಳಗಿನ ಅಧಿಕಾರಿ
ಸ್ಲೆಪ್‌ಸ್ತೋವ್‌-ಯುದ್ಧದಲ್ಲಿ ಸತ್ತ ಅಧಿಕಾರಿ, ಸೈನಿಕರ ಮಾತು ಇವನ ಬಗ್ಗೆ
ಕರ್ಬಡ ಕುದುರೆ ಚಿತ್ರ ನೋಡಿ
ಅವ್ದೀವ್-ಹಿಂದಿನ ಅಧ್ಯಾಯಗಳಲ್ಲಿ ಬಂದಿದ್ದ ಸೈನಿಕ
ಪಾನೋವ್-ಸೈನಿಕ
ಧ್ಸಿಜಿಟ್-ನುರಿತ ಕುದುರೆ ಸವಾರ, ಧೀರ

| ಮುಂದುರೆಯುವುದು |

‍ಲೇಖಕರು Admin

November 4, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: