ಮೂಲ: ಜೆರ್ರಿ ಪಿಂಟೋ
ಕನ್ನಡಕ್ಕೆ: ಪ್ರಸಾದ್ ನಾಯ್ಕ್
ಮೃದುಬೆಣ್ಣೆ, ಟೊಮ್ಯಾಟೋ, ಬೇಯಿಸಿದ ಮೊಟ್ಟೆ,
ತುಂಬಿದ ತಟ್ಟೆಯೊಂದನು ನಾನು ಕೆಳಗಿಟ್ಟೆ…
ಇರುವೆಯೊಂದು ಮೆಲ್ಲಗೆ ಬಂತು,
ಅದರ ಹಿಂದೆ ಒಂದು, ಇನ್ನೊಂದು, ಮತ್ತೊಂದು…
“ಶುಭದಿನ, ಶುಭದಿನ, ಆಹಾರ”, ಒಬ್ಬರಿಗೊಬ್ಬರು ಮಾತಾಡಿಕೊಂಡವು…
“ಆಹಾರದ ಗುಡ್ಡವೇ ಇದೆ”, ಪರಸ್ಪರ ಹೇಳಿಕೊಂಡವು…
“ಪ್ರೋಟೀನ್ ಗುಡ್ಡ, ಆಹಾರದ ಬೆಟ್ಟ”, ಸಾಲಿನಲ್ಲಿ ಸಂದೇಶಗಳು ರವಾನೆಯಾದವು…
ಥಟ್ಟನೆ ತಟ್ಟೆಯನ್ನು ತೆಗೆದಿಟ್ಟುಬಿಟ್ಟೆ.
ಇರುವೆಗಳಿಗೀಗ ಹಟಾತ್ ಗೊಂದಲ,
ಆಹಾರ? ಗುಡ್ಡದಷ್ಟಿದ್ದ ಆಹಾರ?
ಎಲ್ಲ ಎಲ್ಲಿ ಮಾಯವಾಯಿತು?
ನೀನೇನಾದರೂ ಹೇಳಿಲ್ಲವಲ್ಲ?
ನಮಗೇನಾದರೂ ಕೇಳಿಲ್ಲವಲ್ಲ?
ಹೀಗೆಲ್ಲ ಹೇಗಾಯಿತು?
ಒಂದರೆಕ್ಷಣ ಕಳೆಯಿತಷ್ಟೇ,
ಎಲ್ಲ ಇರುವೆಗಳೂ ಜೊತೆಯಾಗಿ,
ತಮ್ಮ ಪಾಡಿಗೆ ಹುಡುಕುತ್ತಲಿವೆ…
ಒಮ್ಮೆ, ಇನ್ನೊಮ್ಮೆ, ಮತ್ತೊಮ್ಮೆ…
ಇರುವೆ, ತಟ್ಟೆ, ಮೊಟ್ಟೆಗಳ ನೋಡುತ್ತಾ,
ನಾನು ಎಷ್ಟೆಲ್ಲ ಕಲಿತುಬಿಟ್ಟೆ…
0 ಪ್ರತಿಕ್ರಿಯೆಗಳು